ಬಿ.ಟಿ. ಲಲಿತಾ ನಾಯಕ್  ಜನಿಸಿದ್ದು ೧೯೪೫ ಏಪ್ರಿಲ್‌ ೪ ರಂದು ಚಿಕ್ಕಮಗಳೂರಿನ ತಂಗಲಿ ತಾಂಡದಲ್ಲಿ. ಪತ್ರಿಕಾ ವರದಿಗಾರ್ತಿಯಾಗಿ ಅನುಭವ ಹೊಂದಿರುವ ಇವರು, ಸಕ್ರಿಯ ರಾಜಕಾರಣಿ, ಸಮಾಜಸೇವಕಿಯಾಗಿ ಜನರಿಗೆ ಪರಿಚಯವಾದವರು. ಕೆಲಕಾಲ ಕರ್ನಾಟಕ ಸರ್ಕಾರದಲ್ಲಿ ಮಂತ್ರಿಯಾಗಿ ಕಾರ್ಯನಿರ್ವಹಿಸಿರುವ ಇವರು ಕನ್ನಡಕ್ಕೆ ಸಾರಸತ್ವ ಲೋಕಕಕ್ಕೆ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಕವಿತೆ, ಕತೆ, ಕಾದಂಬರಿ ಹಾಗೂ ನಾಟಕ ಪ್ರಕಾರಗಳಲ್ಲಿ ಹಲವು ಕೃತಿಗಳನ್ನು ರಚಿಸಿರುತ್ತಾರೆ. ೧೯೮೧ ರಲ್ಲಿ ಲಂಕೇಶ್ ಪತ್ರಿಕೆಗೆ ವರದಿಗಾರ್ತಿಯಾಗಿ ೬ ವರ್ಷಗಳ ಕಾಲ ಕಾರ್ಯನಿರ್ವಹಿಸುತ್ತಾರೆ.  

ಕೃತಿಗಳು : ನೆಲೆ ಬೆಲೆ, ಗತಿ, ಕಾವ್ಯ: ನಂ ರೂಪ್ಲಿ, ಇದೇ ಕೂಗು ಮತ್ತೆ ಮತ್ತೆ, ಬಿದಿರು ಮಳೆ ಕಂಟಿಯಲ್ಲಿ (ಸಮಗ್ರ ಕವನ ಸಂಕಲನ), ಹಬ್ಬ ಮತ್ತು ಬಲಿ (ಕತೆ), ಚಂದ್ರ ಪರಾಭವ, ರೇಡಿಯೋ ನಾಟಕ ಸಂಕಲನ (ನಾಟಕ), ಭಟ್ಟನ ಕನಸುಗಳು (ಮಕ್ಕಳ ಸಾಹಿತ್ಯ), ದೇವದುರ್ಗ ತಾಲ್ಲೂಕು ದರ್ಶನ, ರಾಯಚೂರು ತಾಲ್ಲೂಕು ದರ್ಶನ, ಒಡಲ ಬೇಗೆ(ಕವನ ಸಂಕಲನ), ಸವಾಸೇರು (ಕವನ ಸಂಕಲನ), ಬಿ.ಟಿ. ಲಲಿತಾ ನಾಯಕ್ ಚುಟುಕುಗಳು, ಕೈ ಹಿಡಿದು ನಡೆಸೆನ್ನನು, ( ಸಂದರ್ಶನ ಆಧಾರಿತ ಕೃತಿ), ಆತ್ಮಕಥನ, ಪ್ರವಾಸ ಕಥನ : ದಿನಚರಿಯ ಪುಟಗಳಿಂದ (ಶಾಸಕೀಯ ಪ್ರವಾಸದ ಅನುಭವಗಳು), ಬಂಜಾರಾ ಹೆಜ್ಜೆಗುರುತುಗಳು(ಲೇಖ ಸಂಕಲನ), ಗ್ರಹಿಕೆ ಗೊಂಚಲು ( ಲೇಖನಗಳ ಸಂಕಲನ), ಬಿ.ಟಿ ಲಲಿತಾ ನಾಯಕ್ ಅವರ ಸಮಗ್ರ ಸಾಹಿತ್ಯ ಸಂಪುಟ.

***

ಬೆಳ್ಳಿ ಹಕ್ಕಿ

ಬೆಳ್ಳಿ ಹಕ್ಕಿ ಹಾರುವಾಗ ಬೆಟ್ಟವಾಯಿತು

ಗಗನ ಮಾರ್ಗದಲ್ಲಿ ಅದುವೆ ಚುಕ್ಕಿಯಾಯಿತು

ನೂರು ನೂರು ಜನರ ಭಾರ ಲೆಕ್ಕಕಿಲ್ಲ ಹಕ್ಕಿಗೆ

ಬಿಲ್ಲಿನಿಂದ ಚಿಮ್ಮಿ ಬಂದ ಅಂಬಿನಂತೆ ಹೊರಟಿದೆ.

ಅರಳೆಯಂತೆ ಹರಡಿಕೊಂಡ ಮೋಡದಲ್ಲಿ ತೂರಿದೆ

ಬೆಳಗುತಿರುವ ಸೂರ್ಯನೊಡನೆ ಸರಸವಾಡಿ ನಗುತಿದೆ.

ಬೆಟ್ಟ ಗುಡ್ಡ ಕಾನನದಿ ಕಾಡನೆಲ್ಲ ದಾಟಿದೆ

ಸಾವಿರಾರು ಸೀಮೆಗಳನು ಭರದಿ ಜಿಗಿದು ಹಾರಿದೆ

ತನ್ನ ರಭಸ ತೋರದಂತೆ ಸಂಯಮವ ಮೆರೆದಿದೆ

ಎಂಥ ರೆಕ್ಕೆ ಎಂಥ ಪುಕ್ಕ ಅಸಾಮಾನ್ಯದೀ ಹಕ್ಕಿಗೆ.

ಯೋಜನಾದಿ ದೂರವನ್ನು ನಿಮಿಷದಲ್ಲೇ ಕ್ರಮಿಸಿತು

“ಇದೋ ಬಂತು ನಿಮ್ಮ ನಾಡು ಶುಭಾಶಯವು”ಎಂದಿತು

ಮನುಜ ಕಲೆಯ ಯಂತ್ರದಕ್ಕಿ

ನೆಲವ ಮುಟ್ಟಿ ನಮಿಸಿತು.

(ಗಾನ ವಿಜ್ಞಾನ ಚೇತನ ಕೃತಿಯಿಂದ ಸಂಗ್ರಹಿತ)