ನನಗೆ ಮೊದಲು ಪಾಠ ಮಾಡಿದ ಗುರು ನನ್ನ ಅಮ್ಮ. ನಾನು ಒಂದನೇ ಕ್ಲಾಸಿನಲ್ಲಿದ್ದಾಗಲೇ ಮನೆಯಲ್ಲಿ ಮತ್ತೊಮ್ಮೆ ಕನ್ನಡ, ಕನ್ನಡ ವ್ಯಾಕರಣ, ಇಂಗ್ಲಿಷ್ ವ್ಯಾಕರಣ ಮತ್ತು ಸಂಸ್ಕೃತವನ್ನು ಕೂಡ ಕಲಿಸಿದವರು. ಕಲಿಯಬೇಕೆಂಬ ಮನಸ್ಸು ಅವರದ್ದು, ಆದರೆ ಹತ್ತನೆಯ ಕ್ಲಾಸಿಗೆ ಅವರ ವ್ಯಾಸಂಗ ಕೊನೆಗೊಂಡಿತ್ತು. ಓದುವುದನ್ನು ಅವರು ಬಿಡಲೇ ಇಲ್ಲ. ಸಂಸ್ಕೃತ ಕಲಿಯಲೆಂದು ಚಿತ್ರದುರ್ಗದಲ್ಲಿ ಪೇಟೆಯ ಬಳಿ ಇದ್ದ ಮುಕ್ತ ಮೇಡಂ ಎನ್ನುವವರ ಮನೆಗೆ ದಿನವೂ ನಡೆದು ಹೋಗಿ ಕಲಿಯುತ್ತಿದ್ದರು. ಮುಕ್ತ ಮೇಡಂ ಕೂಡ ಏನೂ ಶುಲ್ಕ ತೆಗೆದುಕೊಳ್ಳದೆ ವಿದ್ಯಾದಾನ ಮಾಡುತ್ತಿದ್ದರು. ಅಮ್ಮ ಈಗಲೂ ಓದುತ್ತಿರುತ್ತಾರೆ; ಈಗ ಕೂಡ ನಮ್ಮೊಂದಿಗೆ ಆಡುವ ಮಾತಿನಲ್ಲಿ ಹಲವು ವಿಷಯಗಳನ್ನು ಕಲಿಸುತ್ತಲೂ ಇರುತ್ತಾರೆ.

ಚಿತ್ರದುರ್ಗದಲ್ಲಿ ಓದುವಾಗ ನಮಗೆ ಕಲಿಸಿದ ಮೇಷ್ಟರುಗಳಲ್ಲಿ ನನಗೆ ನೆನಪಿನಲ್ಲಿ ಉಳಿದವರು ಶಾರದಾ ಮೇಡಂ. ಜ್ಞಾನಭಾರತಿ ನಮ್ಮ ಶಾಲೆ. ಅವರು ದೈನಂದಿನ ಕ್ಲಾಸಿನಲ್ಲಿ ಕೊಡುತ್ತಿದ್ದ ‘ಉಕ್ತಲೇಖನ’ಕ್ಕಾಗಿ ನಾವು ಕಾದುಕೊಂಡು ಇರುತ್ತಿದ್ದೆವು. ಕ್ಲಾಸಿನಲ್ಲಿ ಮಕ್ಕಳನ್ನು ಎಬ್ಬಿಸಿ ಅವರಿಂದ ಹಾಡು ಹೇಳಿಸುತ್ತಿದ್ದರು, ಕಥೆ ಹೇಳಿಸುತ್ತಿದ್ದರು! ಶಾಲೆಯ ಪ್ರಾಂಶುಪಾಲರಾಗಿದ್ದ ವೆಂಕಟರಾಮ್ ನಮಗೆ ಪಾಠ ಮಾಡಲಿಲ್ಲವಾದರೂ ಅವರ ‘ಕೋಟೆ ಕೂಗು’ ಪತ್ರಿಕೆ ನಮಗೆ ಸಣ್ಣ ವಯಸ್ಸಿನಲ್ಲಿದ್ದಾಗಲೇ ಪತ್ರಿಕೋದ್ಯಮ, ವರದಿ, ಕರೆಂಟ್ ಅಫೇರ್ಸ್ ಮುಂತಾದವುಗಳ ಬಗ್ಗೆ ಕುತೂಹಲ ಕೆರಳಿಸಿತ್ತು. ಪ್ರತಿದಿನ ಸಂಜೆ ತಪ್ಪದೆ ಆ ಪತ್ರಿಕೆಯನ್ನು ಓದುತ್ತಿದ್ದೆ. ಈಗ್ಗೆ ಕೆಲವು ವರ್ಷಗಳ ಹಿಂದೆ ಚಿತ್ರದುರ್ಗದಲ್ಲಿ ವೆಂಕಟರಾಮ್ ಅವರ ಮನೆಗೆ ಹೋದಾಗ ಅವರ ಆಲ್ಬಮ್ಮಿನಲ್ಲಿ ನಾನು, ಅಕ್ಕ ಹಾಗೂ ಅಣ್ಣನ ಜೊತೆಗಿದ್ದ ಫೋಟೋ ನೋಡಿ ಆಶ್ಚರ್ಯವಾಗಿತ್ತು.

ಮೈಸೂರಿನಲ್ಲಿ ಓದುವಾಗ ಕ್ಲಾಸಿನಲ್ಲಿ ನಿದ್ರೆ ತರಿಸುತ್ತಿದ್ದ ರಾಧಾ ಮೇಡಂ ಅವರ ಬೇಸ್ ಧ್ವನಿ ನಮ್ಮಲ್ಲಿ ಇತಿಹಾಸ ಓದುವ ಹುಚ್ಚನ್ನು ಹಿಡಿಸಿದ್ದು ಈಗ ನನಗೆ ಆಶ್ಚರ್ಯ ತರುತ್ತದೆ. ಶಾಲೆ - ಬಾಲೋದ್ಯಾನ. ಕುವೆಂಪು ನಗರ ಹಾಗೂ ಜಯನಗರದ ನಡುವಿನಲ್ಲಿ ಎಂಬಂತೆ ನಮ್ಮ ಶಾಲೆ. ಹಿಂದಿ ಪಾಠ ಅವರೇ ತೆಗೆದುಕೊಳ್ಳುತ್ತಿದ್ದರು. ಹೋಮರ್ ಬರೆದ ‘ದಿ ಒಡಿಸ್ಸಿ’ ಕಥೆಯ ಒಂದು ಭಾಗ ತೆಗೆದು ನಮ್ಮ ಪಠ್ಯಕ್ಕೆ ಸೇರಿಸಿದ್ದ ‘ಲಕಡಿ ಕಾ ಘೋಡಾ’ ಎಂಬ ಪಾಠ ಸುದೀರ್ಘವಾಗಿತ್ತು - ಅದನ್ನು ಓದುವಷ್ಟರಲ್ಲಿ ನಮಗೆ ಸಾಕೋ ಸಾಕಾಗಿ ಹೋಗಿತ್ತು! ಪರೀಕ್ಷೆಯಲ್ಲಿ ಅದರ ಕುರಿತು ಇದ್ದ ಪ್ರಶ್ನೆಗಳಿಗೆ ಉತ್ತರ ಬರೆಯುವಾಗ ಹಿಂದಿ ಬರೆದು ಅಭ್ಯಾಸವಿರದಿದ್ದ ನನಗೆ ಕೈ ವಿಪರೀತ ನೋವಾಗಿದ್ದು ಈಗಲೂ ನೆನಪಿದೆ. ಅವರು ನಮಗೆ ಭೂಗೋಳ ಕ್ಲಾಸು ಕೂಡ ತೆಗೆದುಕೊಳ್ಳುತ್ತಿದ್ದರು. ಒಮ್ಮೆ ಅವರು ನನ್ನನ್ನು ಕರೆದು ದಕ್ಷಿಣ ಅಮೆರಿಕದ ನಕ್ಷೆಯನ್ನು ತೋರಿಸಿ - ಇದನ್ನು ದೊಡ್ಡ ಡ್ರಾಯಿಂಗ್ ಶೀಟು ಒಂದರಲ್ಲಿ ಬರೆದುಕೊಂಡು ಬಾ ಎಂದು ಹೇಳಿದ್ದರು. ನಾನು ಛಲ ಬಿಡದ ತ್ರಿವಿಕ್ರಮನಂತೆ ಆ ಕೆಲಸದ ಹಿಂದೆ ಬಿದ್ದು ಸುಮಾರು ಒಂದು ತಿಂಗಳ ಕಾಲ ಬಿಡುವಿನ ಸಮಯದಲ್ಲೆಲ್ಲಾ ಅದನ್ನೇ ಮಾಡಿಕೊಂಡಿರುತ್ತಿದ್ದೆ. ಕೊನೆಗೆ ಮ್ಯಾಪ್ ಬಿಡಿಸುವುದನ್ನು ಮುಗಿಸಿ ತೋರಿಸಿದಾಗ “ಒಳ್ಳೆ ಪ್ರಿಂಟ್ ಕ್ವಾಲಿಟಿ ಬಂದಿದೆಯಲ್ಲೋ ಹುಡುಗ! ಚೆನ್ನಾಗಿ ಬರೆದಿದ್ದೀಯ” ಎಂದು ಹೇಳಿದ್ದರು. ನಮ್ಮ ಗಣಿತದ ಹೊರೆಯನ್ನು ಹಾಗೂ ಅದರ ಬಗ್ಗೆ ಇದ್ದ ಹೆದರಿಕೆಯನ್ನು ಕಡಿಮೆ ಮಾಡಿದ ‘ನಂದಿನಿ ಮಿಸ್’ ಯಾವಾಗಲೂ ನೆನಪಾಗುತ್ತಿರುತ್ತಾರೆ. ಅವರ ಮನೆಯ ಎದುರು ಇದ್ದ ಬಯಲಿನಲ್ಲಿಯೇ ನಾನು ಸೈಕಲ್ ಓಡಿಸುವುದನ್ನು ಕಲಿತುಕೊಂಡದ್ದು. ಎಷ್ಟೋ ವರ್ಷಗಳಾದರೂ ಸೈಕಲ್ ಓಡಿಸುವುದನ್ನು ಕಲಿಯಲು ಸಾಧ್ಯವಾಗದೆ ನನ್ನ ಮಿತ್ರ ವೃಂದದೊಳಗೆ ಅಪಹಾಸ್ಯಕ್ಕೆ ಒಳಗಾದ ನನಗೆ ಅವರ ಮನೆಯಲ್ಲಿದ್ದ ಮಧ್ಯಮ ಗಾತ್ರದ ಸೈಕಲ್ಲನ್ನು ಧಾರಾಳವಾಗಿ ಕೊಟ್ಟು ‘ಕಲಿ’ ಎನ್ನುತ್ತಿದ್ದರು. ಬೀಳುವ ಭಯವಿಲ್ಲದೆ ಬೇಗನೆ ಅದರಲ್ಲಿ ಸೈಕಲ್ ಓಡಿಸುವುದನ್ನು ಕಲಿತುಬಿಟ್ಟೆ!

ನಮಗೆ ಅದೇ ಶಾಲೆಯಲ್ಲಿ ಕಟ್ಟುನಿಟ್ಟಾಗಿ ಇಂಗ್ಲಿಷ್ ವ್ಯಾಕರಣವನ್ನು ಹೇಳಿಕೊಟ್ಟ ಗಾಯತ್ರಿ ಮೇಡಂ ಕೂಡ ನೆನಪಿಗೆ ಬರುತ್ತಿರುತ್ತಾರೆ. ತಮ್ಮ ಕೆಲಸ ತಮಗೆ ಎನ್ನುವಂತೆ ಬೇರಾವುದೇ ಉಸಾಬರಿಗೆ ಹೋಗದೆ ಎಷ್ಟು ಪ್ರೊಫೆಷನಲ್ ಆಗಿ ಪಾಠ ಮಾಡುತ್ತಿದ್ದರು ಅವರು! ಶಾಲೆಯ ಪ್ರಾಂಶುಪಾಲರಾಗಿದ್ದ ‘ಸೇತು’ (ಸೇತು ಶ್ರೀನಿವಾಸ್) ಮೇಡಂ ತಮಗಿದ್ದ ಪೋಲಿಯೋ ಲೆಕ್ಕಿಸದೆ ತಮ್ಮನ್ನು ಸುತ್ತುವರೆದ ಮಕ್ಕಳನ್ನು ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಗಣಪತಿ ಹಬ್ಬದಲ್ಲಿ ಅವರ ಮನೆಗೆ ಹೋಗಿ ನಮಸ್ಕಾರ ಮಾಡಿ ಬರುತ್ತಿದ್ದೆವು. ಮಕ್ಕಳನ್ನು ಕಂಡರೆ ಅವರಿಗೆ ಅಪಾರ ಪ್ರೀತಿ. ಇನ್ನು ‘ವನಿತಾ ಸದನ’ದ ಪಾಪು ಮೇಡಂ ನಡೆಸುತ್ತಿದ್ದ ಲೈಬ್ರರಿಗೆ ಲಗ್ಗೆ ಇಟ್ಟು ‘ಅಮರ ಚಿತ್ರ ಕಥೆ’, ‘ಇಂದ್ರಜಾಲ ಕಾಮಿಕ್ಸ್’ ಓದುತ್ತಿದ್ದಾಗ, ಹಲವು ಪ್ರಬುದ್ಧ ಪುಸ್ತಕಗಳನ್ನು ನಮಗೆ ತಂದುಕೊಟ್ಟು ‘ಓದಿ’ ಎಂದು ಹೇಳುತ್ತಿದ್ದರು. ಅವರು ನಮಗೆಲ್ಲ ಪರಿಚಯಿಸಿದ ವಿಷಯಗಳು ಬಹಳಷ್ಟು.

ಶಿವಮೊಗ್ಗದಲ್ಲಿ ಓದುವಾಗ ನಮ್ಮ ದೇಶೀಯ ವಿದ್ಯಾಶಾಲೆಯಲ್ಲಿ ಇದ್ದಷ್ಟು ಒಳ್ಳೆಯ ಟೀಚರುಗಳು ಬಹುಶಃ ಬೇರೆ ಯಾವುದೇ ಶಾಲೆಯಲ್ಲಿ ಇರಲಿಲ್ಲವೇನೋ. ಕೆ ಆರ್ ಆರ್, ಜಿ ಎಸ್ ವಿ, ಬಿ ಎಸ್ ಎ, ಹೆಚ್ ಎಂ ಪಿ, ಸಿ ಎಸ್ ಜಿ, ಹೆಚ್ ಎಸ್ ಎಸ್, ಪಿ ಎಲ್ - ಹೀಗೆಲ್ಲ ಸಂಕ್ಷಿಪ್ತ ಹೆಸರುಗಳಿಂದಲೇ ಗುರುತಿಸಿಕೊಳ್ಳುತ್ತಿದ್ದ ಮೇಷ್ಟರುಗಳು. ಒಬ್ಬೊಬ್ಬರೂ ಮನಸ್ಸಿಟ್ಟು ಪಾಠ ಮಾಡುತ್ತಿದ್ದರು. ಪಿ ಲಕ್ಷ್ಮಣ ಎಂಬ ಮೇಷ್ಟರು ನನ್ನಲ್ಲಿ ಅದೇನು ಕಂಡರೋ, ನನ್ನನ್ನು ‘ಇಂಟರಾಕ್ಟ್’ ಕ್ಲಬ್‌ನ ಅಧ್ಯಕ್ಷನನ್ನಾಗಿ ಮಾಡಿದ್ದರು. “ನಿನ್ನಲ್ಲಿ ನಾಯಕತ್ವದ ಗುಣಗಳಿವೆ” ಎಂದಿದ್ದರು - ನನಗೆ ಮಾತ್ರ ಅದು ಕಾಣುತ್ತಲೇ ಇರಲಿಲ್ಲ. ಆಶಾ ಮೇಡಂ ಎಂಬುವರು ನಮಗೆಲ್ಲ “ನೀವೆಲ್ಲ ಓದುತ್ತಿರುವ ಕನ್ನಡ ಸಾಲದು. ಕನ್ನಡ ಸಾಹಿತ್ಯ ಪರಿಷತ್ತಿನ ಪರೀಕ್ಷೆಗಳನ್ನು ತೆಗೆದುಕೊಳ್ಳಿ” ಎಂದು ಹೇಳಿ ಥರ್ಡ್ ಲ್ಯಾಂಗ್ವೇಜ್ ಕನ್ನಡ ತೆಗೆದುಕೊಂಡಿದ್ದ ನಮಗೆಲ್ಲ ಮತ್ತಷ್ಟು ಕನ್ನಡ ಓದುವಂತೆ ಮಾಡಿದ್ದರು. ಹೆಚ್ ಎಂ ಪಿ ಮಕ್ಕಳನ್ನಿಟ್ಟುಕೊಂಡು ಮಾಡಿಸುತ್ತಿದ್ದ ನಾಟಕಗಳು, ಕಲಾ ಚಟುವಟಿಕೆಗಳು ನಮ್ಮಲ್ಲಿ ರಂಗ ಚಟುವಟಿಕೆಗಳ ಬಗ್ಗೆ ಆಸಕ್ತಿ ಹುಟ್ಟಿಸಿದವು. ಮರಿಮಲ್ಲಪ್ಪ ಶಾಲೆಯಿಂದ ಟ್ರಾನ್ಸ್‌ಫರ್ ತೆಗೆದುಕೊಂಡವನಾದ್ದರಿಂದ “ಹೇ, ಮರಿಮಲ್ಲಪ್ಪ” ಎಂದೇ ನನ್ನನ್ನು ಕರೆಯಲು ಪ್ರಾರಂಭಿಸಿದ್ದ ಹೆಚ್ ಎಸ್ ಎಸ್ - ಸಂಸ್ಕೃತ ಮೇಷ್ಟರು ನಮಗೆಲ್ಲ ಬರಿಯ ಅಂಕಗಳಿಗಾಗಿ ಅಲ್ಲದೆ ನಿಜವಾಗಿ ಸಂಸ್ಕೃತ ಕಲಿಯುವಂತೆ ಮಾಡಿದವರು.

ಮುಂದೆ ಶಿವಮೊಗ್ಗದಲ್ಲಿಯೇ ಡಿ ವಿ ಎಸ್ ಇಂಡಿಪೆಂಡೆಂಟ್ (ಸ್ವತಂತ್ರ) ಕಾಲೇಜು ಸೇರಿದಾಗ ಅಲ್ಲಿ ನಮಗೆಲ್ಲ ಪಾಠ ಹೇಳಿದ ಪಾರ್ಥಸಾರಥಿ, ಆನಂದ್, ಕಲ್ಲಪ್ಪ, ಪಟ್ಟಾಭಿರಾಮ್ ಮುಂತಾದವರು ವಿವಿಧ ಕಾರಣಗಳಿಂದಾಗಿ ನೆನಪಾಗುತ್ತಾರೆ. ಇದೇ ಕಾಲೇಜಿನ ವಿದ್ಯಾರ್ಥಿಗಳಿಗೆ ಆತ್ಮೀಯರು, ಅಚ್ಚುಮೆಚ್ಚಿನವರಾಗಿದ್ದ ಲೆಕ್ಚರರ್ ‘ಕಿಟ್ಟಿ ಸರ್’. ಇವರು ಎಂದಿಗೂ ಯಾವ ವಿದ್ಯಾರ್ಥಿಗೂ ಹೊಡೆದದ್ದು ನನಗೆ ನೆನಪಿಲ್ಲ. ಇವರ ಬೈಗುಳಗಳು ಕೂಡ ತಮಾಷೆಯಾಗಿರುತ್ತಿದ್ದವು. ಇವರ ಸಂಸ್ಕೃತ ಪಾಠದ ವೈಖರಿಯನ್ನು ಯಾರೂ ಮರೆಯಲಾರರು. ಕಾಳಿದಾಸನ ಪದ್ಯಗಳನ್ನು ಇವರು ಬಿಡಿಸಿಟ್ಟ ರೀತಿ ಇವತ್ತಿಗೂ ಕಣ್ಣಿಗೆ ಕಟ್ಟಿದಂತೆ ನೆನಪಾಗುತ್ತದೆ! ಇವತ್ತಿಗೂ ಇವರೊಂದಿಗೆ ಸಂಪರ್ಕ ಹೊಂದಿರುವುದು ನನ್ನ ಅದೃಷ್ಟ.

ಇಂಜಿನಿಯರಿಂಗ್ ವ್ಯಾಸಂಗ ಮಾಡುವಾಗ ನನಗೆ ಹಲವು ರೀತಿಯಲ್ಲಿ ಮಾರ್ಗದರ್ಶನ ನೀಡಿದ, ನಮ್ಮ ಪಕ್ಕದ ಮನೆಯಲ್ಲಿರುತ್ತಿದ್ದ ರಾಮದಾಸ್ ಮೆನನ್ ತುಂಬಾ ನೆನಪಾಗುತ್ತಾರೆ. ಇವರು ಆಗ ಜಿ ಇ ಸಂಸ್ಥೆಯಲ್ಲಿ ಕೆಮಿಕಲ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ನಾನು ಓದಿದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪಾಠ ಮಾಡುತ್ತಿದ್ದ ಸುಸಿತ್ರ ಮೇಡಮ್ ಕೂಡ ತುಂಬಾ ನೆನಪಾಗುತ್ತಾರೆ. ಡಿ ಬಿ ಎಂ ಎಸ್ ವಿಷಯದಲ್ಲಿ ಒಳ್ಳೆಯ ಅಂಕ ಪಡೆದದ್ದಕ್ಕಾಗಿ ಅವರು ನನಗೊಂದು ಬೆಲೆಬಾಳುವ ಪುಸ್ತಕವನ್ನು ಕೊಟ್ಟಿದ್ದರು. ಅದು ಇಂದಿಗೂ ನನ್ನ ಬಳಿ ಇದೆ!

ತದನಂತರ ನನಗೆ ಸಾಕಷ್ಟು ವಿಷಯಗಳನ್ನು ಸಂವಾದಗಳ ಮೂಲಕವೇ ಕಲಿಸಿದ ಡಿ ಕೆ ಚೌಟ (ತುಳು ಸಾಹಿತ್ಯದ ಪ್ರಮುಖರು ಇವರು - ಬೆಂಗಳೂರಿನಲ್ಲಿ ಸಫಲ ಉದ್ಯಮಗಳನ್ನು ನಡೆಸಿದವರು) ತುಂಬ ನೆನಪಾಗುತ್ತಿರುತ್ತಾರೆ. ಕಷ್ಟದ ಸಮಯಗಳು ಬಂದಾಗ ಹೇಗೆ ಮುನ್ನಡೆಯುವುದು, ಉದ್ಯಮದಲ್ಲಿ ಸೂಕ್ಷ್ಮ ವಿಚಾರಗಳನ್ನು ಹೇಗೆ ಕಡೆಗಣಿಸಬಾರದು ಎಂಬುದರ ಕುರಿತಾದ ಅಮೂಲ್ಯವಾದ ಪಾಠಗಳನ್ನು ನನಗೆ ಹೇಳಿದವರು ಇವರು. ಇವರನ್ನು ನನಗೆ ಪರಿಚಯ ಮಾಡಿಕೊಟ್ಟ ಹೆಣ್ಣು ಕೊಟ್ಟ ಮಾವ - ಗೆಳೆಯರೂ ಆದ ಅಡ್ಡೂರು ಕೃಷ್ಣರಾಯರು ಕೂಡ ನನಗೆ ಹಲವು ವಿಷಯಗಳನ್ನು ಹೇಳಿಕೊಟ್ಟ ಗುರುಗಳು! ನನ್ನ ಕನ್ನಡ ಪುಸ್ತಕಗಳ ಪ್ರೀತಿ ಇವರ ಒಡನಾಟದಿಂದಾಗಿ ಮತ್ತಷ್ಟು ಪ್ರಬಲವಾಯಿತು. ಡೆವಾಪ್ಸ್ ಹಾಗೂ ಡೆವಲಪ್‌ಮೆಂಟ್ ಎಂಬ ಸದಾ ಒತ್ತಡದ ಕ್ಷೇತ್ರದಲ್ಲಿ ಆ ಒತ್ತಡವನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಕಲಿಸಿಕೊಟ್ಟ ನನ್ನ ಗೆಳೆಯ ಕ್ಯಾರಿ (Cary) ಕೂಡ ನನ್ನ ಪಾಲಿಗೆ ಗುರುವೇ.

ಒಮ್ಮೆ ತಮಿಳುನಾಡಿನ ಒಂದು ಪ್ರಮುಖ ಊರಿಗೆ ಹೋಗಿದ್ದೆ. ಅಲ್ಲಿ ಆ ದಿನ ನನ್ನದು ಉಪವಾಸ. ದೇವಸ್ಥಾನಕ್ಕೆ ಭೇಟಿ ಕೊಟ್ಟು ಆಗ ತಾನೇ ಪರಿಚಯವಾದ ಒಬ್ಬರ ಮನೆಗೆ ಹೋಗಿದ್ದೆ. ಎಷ್ಟೋ ಹೊತ್ತು ಅವರೊಂದಿಗೆ ಮಾತನಾಡಿದೆ. ಅದೇನನ್ನಿಸಿತೋ ಏನೋ, ಎಂದೂ ಯಾರ ಕಾಲಿಗೂ ಬಿದ್ದು ನಮಸ್ಕರಿಸದ ನಾನು ಅಂದು ಅವರಿಗೆ ನಮಸ್ಕರಿಸಿದೆ. ಆ ಕ್ಷಣ ಅವರ ಪ್ರಾಮಾಣಿಕತೆ ಹಾಗೂ ಮಾತು ಅವರನ್ನು ನನಗೆ ದಾರಿ ತೋರಿಸಿದ ಗುರುಗಳನ್ನಾಗಿ ಮಾಡಿತ್ತು.

ಹೀಗೆ ನಮ್ಮ ಜೀವನದಲ್ಲಿ ಎಷ್ಟು ಜನ ನಮಗೆ ಜ್ಞಾನವನ್ನು ಕೊಟ್ಟವರು, ಪಾಠ ಮಾಡಿದವರು! ಅಸಂಖ್ಯ ಗುರುಗಳು! ಹಾಗೆ ನೋಡಿದರೆ ನಾವೆಲ್ಲ ಅದೃಷ್ಟವಂತರು. ಎಲ್ಲರನ್ನೂ ಇಲ್ಲಿ ನೆನಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಆದರೆ ಗುರುಪೂರ್ಣಿಮೆಯ ದಿನದಂದು ನನ್ನನ್ನು ನೆನೆಸಿಕೊಂಡು ಕೆಲವರು ವೈಯಕ್ತಿಕವಾಗಿ ಗೌರವಪೂರ್ವಕ ಸಂದೇಶಗಳನ್ನು ಕಳುಹಿಸಿದಾಗ ನನ್ನ ನೆನಪಿನ ಅಂಗಳದಲ್ಲಿ ಇವೆಲ್ಲ ಮೂಡಿದವು. ಗುರುಪೂರ್ಣಿಮೆಯ ಶುಭಾಶಯಗಳು!