ಗೆಲುವಿನ ದಾರಿ

ಉದಯೋನ್ಮುಖ ಬರಹಗಾರ್ತಿ ಪ್ರಜ್ವಲಾ ಶೆಣೈ ಇವರು 'ಗೆಲುವಿನ ದಾರಿ' ಎನ್ನುವ ವ್ಯಕ್ತಿತ್ವ ವಿಕಸನದ ಲೇಖನಗಳ ಸಂಕಲನವನ್ನು ಹೊರತಂದಿದ್ದಾರೆ. ಈಗಿನ ಯುವ ಜನಾಂಗಕ್ಕೆ ಅತ್ಯವಶ್ಯಕವಾದ ಈ ಬರಹಗಳು ಓದಲು ಸುಲಭವಾಗುವಂತೆ ಪುಟ್ಟ ಪುಟ್ಟ ಕಥೆಗಳನ್ನು ಹೊಂದಿದೆ.

"ಗೆಲುವಿಗೆ ನೂರಾರು ದಾರಿಗಳು. ಅತ್ಯವಿಶ್ವಾಸ, ನಿರಂತರ ಪ್ರಯತ್ನ ಮತ್ತು ಸಾಧಿಸುವ ಛಲವೊಂದಿದ್ದರೆ ಒಂದು ದಾರಿ ಮುಚ್ಚಿದರೂ ಇನ್ನೊಂದು ದಾರಿ ಸಿಕ್ಕೇ ಸಿಗುವುದು. ನಾವು ಏನನ್ನು ಯೋಚಿಸುತ್ತೇವೋ ಅದನ್ನು ಸಾಧಿಸುವ ದಾರಿಯೂ ಬದುಕಿನಲ್ಲಿ ಖಂಡಿತ ತೆರೆದುಕೊಳ್ಳುತ್ತದೆ. ಬಯಸಿದ ಗುರಿ ಮುಟ್ಟುವುದಷ್ಟೇ ಗೆಲುವಲ್ಲ,ಗುರಿ ತಲುಪುವ ಹಾದಿಯಲ್ಲಿ ಸಮಸ್ಯೆ ಸವಾಲುಗಳು ಎದುರಾದರೂ ಧೃತಿಗೆಡದೆ, ಪ್ರತಿಯೊಂದು ಸವಾಲನ್ನು ಧೈರ್ಯದಿಂದ ಎದುರಿಸುವುದು, ಪ್ರತಿ ಸೋಲಿನಲ್ಲೂ ಪಾರವನ್ನು ಕಲಿಯುವುದು ಮತ್ತು ಪ್ರತಿಯೊಂದು ಅನುಭವವನ್ನು ಬೆಳವಣಿಗೆಯ ಮೆಟ್ಟಿಲಾಗಿಸಿಕೊಳ್ಳುವುದು ನಿಜವಾದ ಗೆಲುವು ಸಂಕಷ್ಟಗಳ ನಡುವೆಯೂ ಅವಕಾಶ ಹುಡುಕುವವನು ನಿಜವಾದ ಸಾಧಕ. ಸಮಸ್ಯೆಗಳು ಜೀವನದ ದಾರಿಯಲ್ಲಿ ಬರುವ ಅಡ್ಡಗಲ್ಲುಗಳಲ್ಲ, ಅದು ಯಶಸ್ಸಿನ ಹಾದಿಯಲ್ಲಿ ಸಿಗುವ ಏರುಗಲ್ಲುಗಳು ಎಂದು ಕೊಂಡರೆ ಯಶಸ್ಸು ತಾನಾಗಿಯೇ ಲಭಿಸುವುದು.

"ಪಂಚಮಂ ಕಾರ್ಯಸಿದ್ಧಿ ಎನ್ನುವಂತೆ ಲೇಖಕಿ ಪ್ರಜ್ವಲಾ ಶೆಣೈಯವರ ಐದನೇ ಕೃತಿ "ಗೆಲುವಿನ ದಾರಿ" ಸೋತ ಮನಸ್ಸಿಗೆ ಭರವಸೆಯ ಸೆಲೆಯಾಗಿ ಓದುಗರನ್ನು ಸಕಾರಾತ್ಮಕ ದಿಕ್ಕಿನತ್ತ ಕೊಂಡೊಯ್ಯುವ ಆಶಯವನ್ನು ಹೊಂದಿದೆ. ಈ ಕೃತಿಯ ಲೇಖಕಿ ಶ್ರೀಮತಿ ಪ್ರಜ್ವಲಾ ಶೆಣೈ ಅವರನ್ನು ನಾನು ಬಹಳ ಹತ್ತಿರದಿಂದ ಬಲ್ಲೆ, ನನ್ನ ಬದುಕು, ಸಮಾಜಮುಖಿ ಚಿಂತನೆ ಹಾಗೂ ಬಹುಮುಖಿ ಹೆಜ್ಜೆಗುರುತುಗಳನ್ನು ವಿವಿಧ ಆಯಾಮಗಳಲ್ಲಿ ದಾಖಲಿಸುವ "ಡಾ.ಪಿ.ದಯಾನಂದ ಪೈ ಸಾರ್ಥಕ ಬದುಕಿನ ಸಾಕ್ಷಾತ್ಕಾರ ಸಚಿತ್ರ ಸಂಚಿಕೆಯ ಸಂಪಾದಕಿಯಾಗಿ ಅವರು ವಹಿಸಿದ ಪಾತ್ರವನ್ನು ಈ ಸಂದರ್ಭದಲ್ಲಿ ನಾನು ವಿಶೇಷವಾಗಿ ಸ್ಮರಿಸುತ್ತೇನೆ. ಸಣ್ಣ ಸಣ್ಣ ಘಟನೆಗಳ ಮೂಲಕ ಬದುಕಿನ ದೊಡ್ಡ ಸತ್ಯಗಳನ್ನು ಅನಾವರಣಗೊಳಿಸುವ ಅವರ ಬರವಣಿಗೆಯ ಶೈಲಿ ಓದುಗರ ಮನಸ್ಸನ್ನು ಸುಲಭವಾಗಿ ತಲುಪುತ್ತದೆ. ಈ ಕೃತಿಯಲ್ಲಿರುವ ಲೇಖನಗಳು ಕೇವಲ ಪ್ರೇರಣೆಯ ಮಾತುಗಳಲ್ಲ, ಅದು ಬದುಕಿನ ಅನುಭವಗಳಿಂದ ಹುಟ್ಟಿಕೊಂಡಿರುವ ಚಿಂತನೆಗಳು, ಯಶಸ್ಸಿನ ಶಿಖರವನ್ನು ತಲುಪುವ ಕನಸು ಕಾಣುತ್ತಿರುವವರಿಗೆ ಜೀವನದಲ್ಲಿ ಹೊಸ ಉತ್ಸಾಹವನ್ನು ಅರಸುತ್ತಿರುವವರಿಗೆ ಹಾಗೂ ಸಕಾರಾತ್ಮಕ ಚಿಂತನೆಯನ್ನು ಅರಿಯ ಬಯಸುವ ಪ್ರತಿಯೊಬ್ಬರಿಗೂ ಈ ಕೃತಿ ಪ್ರೇರಣೆಯಾಗಲಿ ಎನ್ನುವ ಹಾರೈಕೆ ನನ್ನದು. ಅಕ್ಷರಯಾನದ ಈ ಐದನೇ ಹೆಜ್ಜೆ ಗೆಲುವಿನ ಪಥದಲ್ಲಿ ಮುನ್ನಡೆಯುತ್ತಾ ಯಶಸ್ವಿಯಾಗಲಿ ಎನ್ನುವ ಹಾರೈಕೆ" ಎಂದು ಬೆನ್ನುಡಿಯಲ್ಲಿ ಬರೆದಿದ್ದಾರೆ ಸೆಂಚುರಿ ರಿಯಲ್ ಎಸ್ಟೇಟ್, ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಡೆಟ್ ಅಧ್ಯಕ್ಷರಾದ ಡಾ. ಪಿ. ದಯಾನಂದ ಪೈ ಇವರು.