ಚಂದನವ ಕಡಿದು ತೇದೊಡೆ...

ಭರವಸೆಯ ಕಥೆಗಾರ, ಸಹಾಯಕ ಪ್ರಾಧ್ಯಾಪಕರಾಗಿರುವ ಹರೀಶ್ ಟಿ ಜಿ ಅವರ ನೂತನ ಕಥಾ ಸಂಕಲನ ‘ಚಂದನವ ಕಡಿದು ತೇದೊಡೆ…’ ಗೆ ಬೆನ್ನುಡಿ ಬರೆದಿದ್ದಾರೆ ದಿವ್ಯಾ ಶ್ರೀಧರ್ ರಾವ್, ಬೆಂಗಳೂರು. ಇವರು ತಮ್ಮ ಬೆನ್ನುಡಿಯಲ್ಲಿ ಬರೆದ ಕೆಲವು ಸಾಲುಗಳು…

“ನಿಸ್ವಾರ್ಥಿಯೂ, ಪ್ರಾಮಾಣಿಕನೂ, ಕುಟುಂಬ ವತ್ಸಲನೂ, ಸಮಾಜಮುಖಿ ಚಿಂತನೆಯ ವ್ಯಕ್ತಿ ತನ್ನ ಬದುಕನ್ನಿಡೀ ಕುಟುಂಬಕ್ಕೆ. ಸಮಾಜಕ್ಕೆ ಮೀಸಲಿಡುವಂತಹ ವ್ಯಕ್ತಿಯ ಬದುಕನ್ನು ಚಂದನಕ್ಕೆ ಹೋಲಿಸಲಾಗುತ್ತದೆ. ತನ್ನ ನೂರು ಕಷ್ಟಗಳನ್ನೂ ನುಂಗಿ ಪರರಿಗಾಗಿ ಮಿಡಿಯುವ ಕತೆಯಿಲ್ಲದೆ. ಮೂಲತಃ ತೀರ್ಥಹಳ್ಳಿಯವರಾದ ಹರೀಶ್ ಟಿ ಜಿ ಅವರ 'ಚಂದನವ ಕಡಿದು ತೇದೊಡೆ' ಸಂಕಲನದ ಕತೆಗಳು ಅದೆಷ್ಟು ಆಪ್ತವಾಗುತ್ತವೆಂದರೆ ಓದುಗರನಿಗೆ ತೀರ್ಥಹಳ್ಳಿ ಅಥವಾ ಮಲೆನಾಡಿನ ಜೀವನಶೈಲಿಯನ್ನು ಪರಿಚಯಿಸುತ್ತದೆ. ಸುಮಾರು ೮೦-೯೦ನೇ ಇಸವಿಗಳಲ್ಲಿ ಮಲೆನಾಡಿನ ಪ್ರತಿ ಮನೆಯವರಿಗೂ ಈ ಕತೆಗಳಲ್ಲಿ ಬರುವ ಅನೇಕ ಘಟನೆಗಳನ್ನು, ಅಲ್ಲಿಯ ಪರಿಸರ, ಭಾಷೆ, ಮತಗತು ವಸ್ತು ಆಗಿನ ಕಾಲದ ಜನರ ಸಂಧಿಗ್ಧತೆಯನ್ನು ಈಗ ಮತ್ತೊಮ್ಮೆ ಪರಿಚಯಿಸಿರುತ್ತದೆ ಮತ್ತದು ಬಹಳ ಆಪ್ತವೆನಿಸುತ್ತದೆ. ಅಡಿಕೆ ಸುಲಿತ. ಜೀವನಕ್ಕಾಗಿ ಅಡುಗೆ ವೃತ್ತಿ. ಪರ್ಮನೆಂಟ್ ಆಗದ ಶಿಕ್ಷಕನ ಒದ್ದಾಟ, ಹೆಣ್ಣಿನ ಮೋಹ, ಜಮೀನಿನ ಮೇಲಿನ ವ್ಯಾಮೋಹ, ಊರು ಬಿಟ್ಟು ಹೋಗುವ ಸನ್ನಿವೇಶ ಇತ್ಯಾದಿ ಸನ್ನಿವೇಶಗಳನ್ನು ಕಣ್ಣಿಗೆ ಕಟ್ಟುವಂತೆ ಈ ಕಥಾ ಸಂಕಲನದಲ್ಲಿ ಚಿತ್ರಿಸಿದ್ದಾರೆ. ಈ ಕತೆಗಳಲ್ಲಿ ಬರುವ ಅದೆಷ್ಟೋ ಜೀವಗಳು ಚಂದನದಂತೆ ತನ್ನ ಬದುಕನ್ನು ತಾನೇ ತೇಯ್ದುಕೊಂಡದ್ದಕ್ಕೆ ಜೀವಂತ ಸಾಕ್ಷಿಯಾಗಿವೆ ಹಾಗೂ ಅವೆಲ್ಲವೂ ನಮಗೆ ದಾರಿದೀಪವಾಗಲಿವೆ.”

ಈ ಕಥಾ ಸಂಕಲನದಲ್ಲಿ ೧೧ ಕಥೆಗಳಿವೆ. ಕಥೆಗಳ ಬಗ್ಗೆ ಮುನ್ನುಡಿಯಲ್ಲಿ ಪ್ರಸ್ತಾಪ ಮಾಡಿದ್ದಾರೆ ಕತೆಗಾರ್ತಿ ಅಲಕ ತೀರ್ಥಹಳ್ಳಿ. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಕೆಲವು ಭಾವನೆಗಳು ಹೀಗಿವೆ… “ಇದಕ್ಕೆ ಅಪವಾದ ಎನ್ನುವಂತೆ, ಇವೆಲ್ಲವೂ ಇದ್ದರೂ ಬದುಕಿನುದ್ದಕ್ಕೂ ಕಷ್ಟವನ್ನು ಅನುಭವಿಸುವ ವಿಧಿವಂಚಿತ ಕುಟುಂಬಗಳ ಎರಡು ಕಥೆಗಳು ಇಲ್ಲಿವೆ:

'ಚಂದನವ ಕಡಿದು ತೇದೊಡೆ' ಕಥೆಯಲ್ಲಿ, ತಂದೆ-ತಾಯಿಗಳು ತಮ್ಮ ಕಷ್ಟವನ್ನು ಮರೆತು, ಮಕ್ಕಳನ್ನು ಬೆಳಸಿ ಅವರು ತಮ್ಮ ಕಾಲಮೇಲೆ ನಿಲ್ಲುವಂತೆ ಮಾಡುವುದು ಲೋಕರೂಢಿ. ತಂದೆ-ತಾಯಿಗಳ ಕಾಲೇ ಗಟ್ಟಿ ಇಲ್ಲದಿದ್ದಾಗ ತಮ್ಮ ಭುಜದ ಮೇಲೆ ಮಕ್ಕಳನ್ನು ಕೂರಿಸಿಕೊಳ್ಳುವುದೆಂದರೆ? ತಂದೆಯ ಕಷ್ಟವನ್ನು ನೋಡಲಾಗದ ಹದಿವಯಸ್ಸಿನ ಮಗನು, ತನ್ನ ಓದಿಗೆ ತಿಲಾಂಜಲಿ ಕೊಟ್ಟು ದುಡಿಮೆಗೆ ಇಳಿಯುತ್ತಾನೆ. ಪ್ರಾಮಾಣಿಕತೆ ಮತ್ತು ಪರಿಶ್ರಮ ಅವನನ್ನು ಯಶಸ್ಸಿನ ಎತ್ತರಕ್ಕೆ ಏರಿಸುತ್ತದೆ. 'ದಿನ ಹೋದ ಹಾಗೆ, ಹಳೆಯ ಕಷ್ಟಗಳು ಬರಿಯ ನೆನಪಾಗುತ್ತದೆ, ಆ ಜಾಗದಲ್ಲಿ ಹೊಸ ಕಷ್ಟಗಳು ಬಂದು ಕೂರುತ್ತವೆ' ಎಂಬುದು ಅವನಿಗೆ ಮನವರಿಕೆಯಾಗುತ್ತದೆ. ಆದರೂ ಅವನು ಎದೆಗುಂದುವುದಿಲ್ಲ. ತನ್ನ ಕರ್ತವ್ಯವನ್ನು ಫಲಾಪೇಕ್ಷೆ ಇಲ್ಲದೇ ಮಾಡಿ ಮುಗಿಸಿದ ಸಾರ್ಥಕ ಭಾವದಲ್ಲಿ ಕಥೆ ಮುಗಿಯುತ್ತದೆ.

“ಭಾರತಮ್ಮ" ಕಥೆಯಲ್ಲೂ ಕಷ್ಟದಲ್ಲಿದ್ದ ಕುಟುಂಬವೊಂದನ್ನು ಇನ್ನಿಲ್ಲದ ಪರಿಶ್ರಮದಿಂದ ಮಗನು ಮೇಲಕ್ಕೆತ್ತಿದ್ದಾನೆ; ಕೊನೆಗಾಲದಲ್ಲಿ ಅವರು ನೆಮ್ಮದಿಯಲ್ಲಿ ಬದುಕುತ್ತಿರುವುದನ್ನು ನೋಡಿ ಸಾರ್ಥಕಭಾವ ಬರುತ್ತದೆ. ಆದರೆ, ಪರಮ ಸುಖವನ್ನು ಅನುಭವಿಸುತ್ತಲೇ ಇರಲು ಅವನೇನೂ ಚಿರಂಜೀವಿ ಅಲ್ಲವಲ್ಲ?!

ಮೇಲಿನ ಎರಡೂ ಕಥೆಗಳ ಅಂತ್ಯದಲ್ಲಿ ಸಾವಿನ ಛಾಯೆ ಇದ್ದರೂ ಅವರ ಪೂರ್ವದ ಸಾಫಲ್ಯದ ಬದುಕಿನ ಸುಖ-ಸಾರ್ಥಕತೆ ಓದುಗರ ನೆನಪಿನಲ್ಲಿ ಉಳಿಯುತ್ತದೆ. ಕಷ್ಟ-ಕಾರ್ಪಣ್ಯಗಳಿಗೆ ಕಾಲ ಮಿತಿ ಇರುವಂತೆ, ಸುಖ-ಸಂತೋಷಕ್ಕೂ ಮಿತಿ ಇದೆ ಎಂಬ ಎಚ್ಚರವನ್ನು ಈ ಎರಡು ಕಥೆಗಳು ಕೊಡುತ್ತವೆ.”

ಈ ಕಥಾ ಸಂಕಲನದ ಎಲ್ಲಾ ಕತೆಗಳು ಭಾವನಾತ್ಮಕ ಲೋಕಕ್ಕೆ ಓದುಗರನ್ನು ಕರೆದೊಯ್ಯುತ್ತದೆ. ಸುಮಾರು ೧೬೦ ಪುಟಗಳ ಈ ಕಥಾ ಸಂಕಲನವನ್ನು ಲೇಖಕರು “ಉನ್ನತ ವ್ಯಾಸಂಗ ಮತ್ತು ಉದ್ಯೋಗ ನಿಮಿತ್ತ ದೂರದ ಲಂಡನ್ ನಲ್ಲಿರುವ ಮನೆಯ ಮಕ್ಕಳಾದ ಮಗಳು ಇಳಾಗೌರಿ, ಕಾವ್ಯಾ ನಾಡಿಗ್, ಕೌಶಿಕ್ ನಾಡಿಗ್ ಇವರಿಗೆ ಅಕ್ಕರೆಯಿಂದ” ಅರ್ಪಣೆ ಮಾಡಿದ್ದಾರೆ.