ಶ್ರೀಕೃಷ್ಣನು ಒಬ್ಬ ಅವತಾರ ಪುರುಷ. ಅವನು ಮಹಾವಿಷ್ಣುವಿನ ಪೂರ್ಣಾವತಾರ ಎಂದು ನಮ್ಮ ಗ್ರಂಥಗಳು ಘೋಷಿಸುತ್ತವೆ. ಆತನ ಕಥೆಯನ್ನು ಓದುತ್ತಿದ್ದರೆ ಅವನೊಬ್ಬ ಪವಾಡಪುರುಷ, ಸ್ತ್ರೀಲೋಲ, ಚಾಣಾಕ್ಷ, ಧರ್ಮರಕ್ಷಕ, ದುಷ್ಟಶಿಕ್ಷಕ, ಶಿಷ್ಟಪರಿಪಾಲಕ, ಚಕ್ರಧಾರಿ, ಗೀತಾಚಾರ್ಯ, ಅಚ್ಯುತ, ಕೇಶವ, ಯದುಕುಲತಿಲಕ, ಪಾರ್ಥಸಾರಥಿ, ಯೋಗೇಶ್ವರ, ಬಹುಪತ್ನೀವಲ್ಲಭ, ಗೋಪೀಲೋಲ, ಗೋವರ್ಧನಗಿರಿಧಾರಿ, ಕಾಳಿಂಗಮರ್ದನ, ಭಕ್ತಹೃತ್ಕಮಲವಾಸಿ, ರಾಧಾಪ್ರಿಯಸಖ, ಸತ್ಯಭಾಮಾಪ್ರಿಯ, ನೀಲಮೇಘಶ್ಯಾಮ… ಹೀಗೆ ಇನ್ನೂ ಹತ್ತು ಹಲವು ಮುಖಗಳ ಪರಿಚಯವಾಗುತ್ತ ಹೋಗುತ್ತದೆ. ಕೇವಲ ಒಬ್ಬ ವ್ಯಕ್ತಿಗೆ ಇಷ್ಟು ಭಾಗ್ಯವೇ ಎನ್ನಿಸದಿರದು. ನಮ್ಮ ಎಲ್ಲ ಪೌರಾಣಿಕ ಪಾತ್ರಗಳ ಎಲ್ಲ ಭಾಗ್ಯಗಳನ್ನು ಕಲೆಹಾಕಿದರೂ ಒಬ್ಬ ಶ್ರೀಕೃಷ್ಣನ ಸೌಭಾಗ್ಯಕ್ಕೆ ಸರಿಸಾಟಿಯಾಗಲಾರದು ಎನ್ನಿಸಿದರೆ ಆಶ್ಚರ್ಯವೇನಿಲ್ಲ. ಇವೆಲ್ಲ ಒಂದು ಕಡೆ ಸರಿ ಅನ್ನಿಸಿದರೂ ಈ ಚಿತ್ತಚೋರನ ವೈಯಕ್ತಿಕ ಬದುಕನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ನಮಗೆ ಅವನು ತನ್ನ ವೈಯಕ್ತಿಕ ಬದುಕಿನಲ್ಲಿ ಯಾವ ರೀತಿಯ ಸುಖ, ಶಾಂತಿ ಹಾಗೂ ಸಂತೃಪ್ತಿಗಳನ್ನು ಪಡೆದ ಎನ್ನುವ ಬಗ್ಗೆ ಸಂದೇಹ ಮೂಡದಿರದು. ಅವನ ಸಂಸಾರ ಚಕ್ರದಲ್ಲಿ ʻಬಹುʼಗಳು ಇದ್ದರೂ ಅವನು ಸಾಮಾನ್ಯನಂತೆ ಬದುಕಿ ತೋರಿಸಿದ್ದಾನೆ. ಅವನ ನಿಜಜೀವನದಲ್ಲಿ ಅವನು ಒಬ್ಬ ದುರಂತನಾಯಕನಂತೆ ಕಂಡರೂ ಅಚ್ಚರಿಯೇನಲ್ಲ! ಇದೆಂತಹ ವಿಪರ್ಯಾಸ ಅನ್ನಿಸದೇ ಇರದು! ಹೌದು, ಅವನು ಒಬ್ಬ ಸಾಮಾನ್ಯ ಮನುಷ್ಯನಿಂದ ದೇವತಾಸ್ವರೂಪಿಯಾಗಿ ಬೆಳೆಯುತ್ತಾ ಹೋದರೂ ವೈಯಕ್ತಿಕವಾದ ಯಾವುದೇ ರೀತಿಯ ಸುಖ ಶಾಂತಿಯನ್ನು ಸರಿಯಾಗಿ ಅನುಭವಿಸಲೇ ಇಲ್ಲ. ಅನುಭವಿಸಿದ್ದರೂ ಅದು ಅಲ್ಲಿಷ್ಟು, ಇಲ್ಲಿಷ್ಟು ಎನ್ನುವಂತೆ ಕೇವಲ ಮುಷ್ಟಿಭೋಜನಕ್ಕೆ ಸಮನಾಗುತ್ತದೆಯೇ ಹೊರತು ಮೃಷ್ಟಾನ್ನ ಭೋಜನವನ್ನು ಆತ ಸವಿದವನೇ ಅಲ್ಲ! ಅವನು ತನಗಾಗಿ ಎಂದೂ ಬದುಕಲೇ ಇಲ್ಲ. ಅವನ ಕರ್ತವ್ಯ ನಿರ್ವಹಣೆಯೇ ಅವನ ಬದುಕಿನ ಸೂತ್ರವಾಗಿತ್ತು! ಈ ದುರಂತನಾಯಕನ ವೈಯಕ್ತಿಕ ಬದುಕಿನಲ್ಲಿ ಇಣುಕಿದರೆ ಅವನ ಬದುಕಿನ ವಾಸ್ತವಿಕತೆಯ ಅಷ್ಟೇನೂ ಗಮನಕೊಡದ ಇನ್ನೊಂದು ಮುಖದ ಪರಿಚಯವಾಗದೆ ಇರದು.
ಗೋಪಾಲನ ಬದುಕಿನ ಮೊದಲನೆಯ ದುರಂತ ಎಂದರೆ, ಅವನು ಹುಟ್ಟುವುದಕ್ಕೂ ಮುನ್ನವೇ, ಅವನು ಹುಟ್ಟಿದಾಕ್ಷಣ ಕೊಲ್ಲಲು ಸಜ್ಜಾಗಿ ಕಾಯುತ್ತ ಕುಳಿತಿದ್ದವನು ಬೇರೆ ಯಾರೂ ಅಲ್ಲ ಅವನ ಸ್ವಂತ ಸೋದರಮಾವ ಕಂಸ ಮಹಾರಾಜ! ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಹುಟ್ಟಿ, ಬೆಳೆದು ದೊಡ್ಡವನಾಗಿ ವ್ಯವಹಾರಕ್ಕೆ ಬಂದಾಗ ಅವನಿಗೆ ವೈರಿಗಳ ಕೋಪತಾಪಗಳ, ಕುಟಿಲ ಕಾರಸ್ಥಾನಗಳ ಪರಿಚಯವಾಗುತ್ತದೆ. ಆದರೆ ಇಲ್ಲಿ ಹಾಗಲ್ಲ, ದೇವಕೀಸುತನಿಗೆ ಅವನು ಹುಟ್ಟುವ ಮುನ್ನವೇ ಸಾವು ಬಯಸುವ ಬಲಶಾಲಿ ವೈರಿಯಿದ್ದ! ಆ ವೈರಿಗೆ ಜೊತೆಯಾಗುವ ದುಷ್ಟಕೂಟವೂ ಬಹಳ ದೊಡ್ಡದಿತ್ತು! ಬಾಲಕೃಷ್ಣನು ಹುಟ್ಟುವಷ್ಟರಲ್ಲೇ ಆ ದುಷ್ಟನು ಕೃಷ್ಣನ ಆರು ಜನ ಅಣ್ಣಂದಿರನ್ನು ಹುಟ್ಟಿದ ಕೂಡಲೇ ಕೊಂದಿದ್ದ! ಏಳನೆಯ ಅಣ್ಣನಾದ ಬಲರಾಮನು ದೈವಸಂಕಲ್ಪದಿಂದ ದೇವಕಿಯ ಗರ್ಭದಿಂದ ರೋಹಿಣಿಯ ಗರ್ಭಕ್ಕೆ ಸ್ಥಳಾಂತರ ಹೊಂದಿ ಸಾವಿನಿಂದ ಪಾರಾಗಿದ್ದ! ಸಾವು ಕಂಸನ ರೂಪದಲ್ಲಿ ವಾಸುದೇವನ ಹುಟ್ಟನ್ನೇ ಎದರು ನೋಡುತ್ತಿತ್ತು, ಮೂಷಿಕದ ಬಿಲದ ಹೊರಗೆ ಹೊಂಚುಹಾಕುತ್ತಿರುವ ಮಾರ್ಜಾಲದ ಹಾಗೆ!
ಇನ್ನು ಈ ಯದುಕುಲತಿಲಕನ ಜನನ ಎಲ್ಲಿ, ಹೇಗಾಯಿತು ಎಂದು ನೋಡುವುದಾದರೆ - ಅದು ಒಬ್ಬ ರಾಜಕುವರನ ಜನನ, ಹಂಸತೂಲಿಕಾತಲ್ಪದ ಮೇಲೆ ರಾಜವೈದ್ಯರ ಸಮಕ್ಷಮದಲ್ಲಿ, ನುರಿತ ಸೂಲಗಿತ್ತಿಯರ ಆರೈಕೆಯಲ್ಲಿ, ದಾಸದಾಸಿಯರ ಸೇವೆಯಲ್ಲಿ, ವೈಭವಪೂರಿತ ಸಕಲ ಸಂಭ್ರಮಾದರಗಳೊಂದಿಗೆ ಆಗಬೇಕಿತ್ತು. ಆದರೆ ಆತ ಹುಟ್ಟಿದ್ದು ಬೇಡಿಗಳಿಂದ ಬಂಧಿಸಲ್ಪಟ್ಟಿದ್ದ ತಾಯಿಯ ಹೊಟ್ಟೆಯಿಂದ, ಅಣ್ಣಂದಿರ ಸಾವಿನ ರಕ್ತವಂಟಿದ್ದ ಒರಟು ಗೋಡೆಗಳ ಕತ್ತಲು ಕಾರಾಗೃಹದ ಕೋಣೆಯ ಮೂಲೆಯೊಂದರ ನೆಲದ ಮೇಲೆ, ಯಾರ ಸಹಾಯವೂ ಇಲ್ಲದ ದೈನ್ಯಸ್ಥಿತಿಯಲ್ಲಿ ಎಂದು ತಿಳಿದಾಗ ಇದೆಂತಹ ದುರಂತ ಎನ್ನಿಸದೆ ಇರದು! ಆ ಸಮಯವೂ ಕೂಡ ಬೆಳಕಿಗಿಂತಲೂ ಹೆಚ್ಚು ಕತ್ತಲಿರುವ ಕೃಷ್ಣಪಕ್ಷದ ಅಷ್ಟಮಿಯ ನಡುರಾತ್ರಿ, ಹೊರಗೆ ಕ್ರೂರ ಕಾವಲು ಭಟರು ಮತ್ತು ಧೋ ಎನ್ನುವ ವರ್ಷಧಾರೆ. ಬಹುಶಃ ಆ ವಾತಾವರಣ ಅವನ ವೈಯಕ್ತಿಕ ಬದುಕನ್ನು ಪ್ರತಿಬಿಂಬಿಸುವ ಚಿತ್ರಣವೇನೋ ಅನ್ನಿಸುತ್ತದೆ. ಕೇವಲ ಅಷ್ಟೇ ಅಲ್ಲ, ಹುಟ್ಟಿದ ಕೂಡಲೇ ತಾಯಿಯ ಮಡಿಲಲ್ಲಿ ಸುಖವಾಗಿ ಮಲಗಿ ತಾಯಿಯ ಪ್ರೇಮಧಾರೆಯನ್ನು ಸವಿಯುವ ಅವಕಾಶದಿಂದಲೂ ವಂಚಿತನಾದವನು ದೇವಕೀನಂದನ! ಬಹುಶಃ ಇಡೀ ಭೂಮಂಡಲದಲ್ಲಿ, ಯಾವುದೇ ಪ್ರಾಣಿವರ್ಗವನ್ನು ನೋಡಿದರೂ ಹುಟ್ಟಿದ ಕೂಡಲೇ ತಾಯಿತಂದೆಯಿಂದ ಅಗಲುವ ದೌರ್ಭಾಗ್ಯ ಕೆಲವೇ ಕೆಲವರಿಗೆ ಮಾತ್ರ ದೊರೆಯುತ್ತದೆ, ಅವರಲ್ಲಿ ಬಾಲಕೃಷ್ಣನೂ ಒಬ್ಬ ಎನ್ನುವುದು ದುರದೃಷ್ಟದ ಸಂಗತಿ. ಸ್ವಂತ ತಂದೆಯೇ ಆತನನ್ನು ಗೌಪ್ಯವಾಗಿ ಬಿದಿರಿನ ಬುಟ್ಟಿಯೊಂದರಲ್ಲಿ ಮಲಗಿಸಿ ತಲೆಯ ಮೇಲಿಟ್ಟುಕೊಂಡು ನಡುಗಿಸುವ ವರ್ಷಧಾರೆಯಲ್ಲೇ ನಡೆದು ಹೋಗಿ ಗೋಕುಲದಲ್ಲಿ ಬಿಟ್ಟುಬರಬೇಕಾಯಿತು. ಒಟ್ಟಿನಲ್ಲಿ, ಹುಟ್ಟಿನಲ್ಲಿ ಶ್ರೀರಾಮನಷ್ಟು ಅದೃಷ್ಟವಂತನಲ್ಲ ಶ್ರೀಕೃಷ್ಣ! ಇಬ್ಬರ ಹುಟ್ಟಿನ ಪರಿಸ್ಥಿತಿಗಳಲ್ಲಿ ಅಜಗಜಾಂತರ ವ್ಯತ್ಯಾಸವಿದೆ.
ಬಾಲಕೃಷ್ಣನ ಬಾಲ್ಯವೂ ಕೂಡ ವಿಪತ್ತುಗಳ ಗೂಡಾಗಿತ್ತು. ಕಂಸನು ಹೊಸದಾಗಿ ಹುಟ್ಟಿದ್ದ ಮಕ್ಕಳನ್ನೆಲ್ಲ ಕೊಲ್ಲಿಸುತ್ತಿದ್ದಾನೆ ಎಂದು ತಿಳಿದಿದ್ದ ನಂದನು ಕೃಷ್ಣನ ನಾಮಕರಣವನ್ನು ಗೌಪ್ಯವಾಗಿ ಹಸುಗಳ ಕೊಟ್ಟಿಗೆಯಲ್ಲಿ ಯಾರನ್ನೂ ಆಮಂತ್ರಿಸದೆ ನೆರವೇರಿಸುತ್ತಾನೆ. ಹಸುಗೂಸಾಗಿರುವಾಗಿನಿಂದಲೇ ಅಪಾಯಗಳ ಸರಮಾಲೆಯನ್ನು ಎದುರಿಸಬೇಕಾಯಿತು ನಮ್ಮ ಮುದ್ದುಕೃಷ್ಣ! ಸೋದರಳಿಯನು ತನ್ನ ಕೈಯಿಂದ ತಪ್ಪಿಸಿಕೊಂಡಿದ್ದಾನೆ ಎಂದು ತಿಳಿದ ಸೋದರಮಾವ ಕಂಸನು ಸುಮ್ಮನೆ ಕೂಡಲಿಲ್ಲ. ತನ್ನ ದುಷ್ಟಕೂಟದ ಸದಸ್ಯರನ್ನು ಒಬ್ಬೊಬ್ಬರನ್ನಾಗಿ ನಂದನಂದನನ ಮೇಲೆ ಪ್ರಯೋಗಿಸತೊಡಗುತ್ತಾನೆ, ತನ್ನ ಬತ್ತಳಿಕೆಯ ತುಂಬ ತೀಕ್ಷ್ಣ ಬಾಣಗಳಿವೆ ಎನ್ನುವ ಹಮ್ಮು ಅವನಿಗೆ. ಕೊನೆಗೆ ಉಗುರಿನಲ್ಲಿ ಹೋಗುತ್ತದೆ ಎಂದುಕೊಂಡದ್ದಕ್ಕೆ ಅನೇಕ ಕೊಡಲಿಗಳನ್ನು ಪ್ರಯೋಗಿಸಿದರೂ ಸೋಲಬೇಕಾಯಿತು. ಈ ರಾಕ್ಷಸೀ ಶಕ್ತಿಗಳ ಏಕಮಾತ್ರ ಗುರಿ ಹಸುಗೂಸಾಗಿದ್ದ ಪುರುಷೋತ್ತಮನ ಸಾವು! ಅವರಲ್ಲಿ ಮೊದಲಿಗಳು ರಾಕ್ಷಸಿ ಪೂತನಿ. ಅಮೃತಮಯವಾದ ಸ್ತನ್ಯಪಾನವನ್ನೇ ತೊಟ್ಟಿಲಿನ ಕೂಸಾದ ಕೃಷ್ಣನನ್ನು ಕೊಲ್ಲುವ ಅಸ್ತ್ರವಾಗಿ ಪ್ರಯೋಗಿಸಿದ ನೀಚ ಹೆಂಗಸು ಆಕೆ. ಇಲ್ಲಿಂದ ಕೃಷ್ಣನ ಮೇಲೆ ದಾಳಿಗಳ ಪರಂಪರೆಯೇ ಪ್ರಾರಂಭವಾಯಿತು ಎಂದರೆ ತಪ್ಪೇನಿಲ್ಲ. ಅನಂತರ ಬಂಡಿಯ ರೂಪದಲ್ಲಿ ಶಕಟಾಸುರ, ಸುಂಟರಗಾಳಿಯ ರೂಪದಲ್ಲಿ ತೃಣಾವರ್ತ, ಕರುವಿನ ರೂಪದಲ್ಲಿ ವತ್ಸಾಸುರ, ಬಕಪಕ್ಷಿಯ ರೂಪದಲ್ಲಿ ಬಕಾಸುರ, ಹೆಬ್ಬಾವಿನ ರೂಪದಲ್ಲಿ ಅಘಾಸುರ, ಕತ್ತೆಯ ರೂಪದಲ್ಲಿ ಧೇನುಕಾಸುರ, ಗೋಪಬಾಲನ ರೂಪದಲ್ಲಿ ಪ್ರಲಂಬಾಸುರ ಹೀಗೆ ಹಲವಾರು ರಾಕ್ಷಸರು ನವನೀತಚೋರನ ಬಾಲ್ಯಕ್ಕೆ ತೊಂದರೆ ಒಡ್ಡುತ್ತಲೇ ಇದ್ದರು, ಬಾಲ್ಯವು ಸುಖಪ್ರದವಾಗಿ ಕಳೆಯಲು ಬಿಡಲೇ ಇಲ್ಲ. ಕಂಸನ ಪ್ರಯತ್ನಗಳೆಲ್ಲವೂ ಗೋರ್ಕಲ್ಲ ಮೇಲೆ ಮಳೆ ಸುರಿದಂತಾದರೂ ಆ ಭಯಂಕರ ಸಂಘಟನೆಗಳಿಗೆ ಹೆದರಿ ಗೋಕುಲವಾಸಿಗಳು ವೃಂದಾವನಕ್ಕೆ ಗುಳೆ ಹೋಗಬೇಕಾಯಿತು.
ರಾಜಭವನದ ವೈಭವದಲ್ಲಿ, ಸುಖದ ಸುಪ್ಪತ್ತಿಗೆಯಲ್ಲಿ, ರಾಜಪರಿವಾರದ ಕಣ್ಮಣಿಯಾಗಿ ಕಳೆಯಬೇಕಿದ್ದ ಬಾಲ್ಯವನ್ನು ಗೋಪಾಲನು ವೃಂದಾವನದ ಕಾಡಿನಲ್ಲಿ ದನಕರುಗಳನ್ನು ಮೇಯಿಸುತ್ತ ಕಳೆಯಬೇಕಾಯಿತು, ಕಲ್ಲುಗಳ ನಡುವೆ ಮಾಸಿದ ವಜ್ರದಂತೆ! ಅಲ್ಲಿ ಕೂಡ ಅವನಿಗೆ ರಾಕ್ಷಸರಿಂದ ತೊಂದರೆ ತಪ್ಪಲಿಲ್ಲ. ಕುದುರೆಯ ರೂಪದಲ್ಲಿ ಬಂದ ಕೇಶಿ ಮತ್ತು ಕುರಿಯ ರೂಪದಲ್ಲಿ ಬಂದ ವ್ಯೋಮಾಸುರನ ಜೊತೆ ಹೋರಾಡಿ ತನ್ನ ಜನರನ್ನು ರಕ್ಷಿಸಿಕೊಳ್ಳಬೇಕಾಯಿತು. ಇಂದ್ರನ ಕೋಪಕ್ಕೆ ಬಲಿಯಾಗಿ ಗೋವರ್ಧನಗಿರಿಯನ್ನೇ ತನ್ನ ಬೆರಳಿನಲ್ಲಿ ಎತ್ತಿಹಿಡಿಯಬೇಕಾಯಿತು. ಬಹುಶಃ ವೇಣುಗೋಪಾಲನಿಗೆ ಅಲ್ಪ ಸ್ವಲ್ಪ ನೆಮ್ಮದಿ ಕೊಡುತ್ತಿದ್ದ ಸಂದರ್ಭಗಳೆಂದರೆ ಒಂದು ತನ್ನ ಮುರಳಿಯನ್ನು ನುಡಿಸುವಾಗ ಮತ್ತು ಗೋಪ ಬಾಲಬಾಲಿಕೆಯರ ಒಡನಾಟಗಳು ಅದರಲ್ಲೂ ನೆಚ್ಚಿನ ಗೆಳತಿ ರಾಧೆಯ ಜೊತೆ ಕಳೆಯುತ್ತಿದ್ದ ಸಮಯ. ಮುಂಜಾನೆಯ ಮಂಜಿನಂತೆ, ಸ್ವಾತಿ ಮಳೆಯಂತೆ, ವಸಂತ ಮಾಸದ ಕೋಗಿಲೆಯ ಕೂಗಿನಂತೆ ಈ ಸಂಗತಿಗಳು ಕೂಡ ಅಲ್ಪಕಾಲದ್ದವಾಗಿದ್ದವು. ರಾಧೆಯ ಜೊತೆ ಹದಿಹರಯದ ಮಧುರ ಕ್ಷಣಗಳ ಆನಂದವನ್ನು ಅನುಭವಿಸುವಷ್ಟರಲ್ಲಿ ಕಂಸವಧೆಗೆ ಸಮಯಾಸನ್ನವಾಗಿ ಆತ ಸಾಕು ತಾಯಿತಂದೆಯರಾದ ನಂದ-ಯಶೋದೆಯರನ್ನು, ಬಾಲ್ಯದ ಗೆಳೆಯರನ್ನು, ಆಪ್ತಸಖಿ ರಾಧೆಯನ್ನು ಅಗಲಿ ಮಥುರೆಗೆ ಹೋಗಬೇಕಾಯಿತು. ತನ್ನ ಪ್ರಿಯಸಖಿ ರಾಧೆಯನ್ನೇ ಅಗಲಿದ ಮೇಲೆ ಪಿಳ್ಳಂಗೋವಿಯ ಚೆಲ್ವ ಕೃಷ್ಣನು ಇಬ್ಬರಿಗೂ ಅತ್ಯಂತ ಪ್ರಿಯವಾದ ಪಿಳ್ಳಂಗೋವಿಯನ್ನು ಮತ್ತೆ ಎಂದೂ ನುಡಿಸಲೇ ಇಲ್ಲ! ಆದರೆ ಜೀವಿಗಳೆಂಬ ಮೂಳೆ ಮಾಂಸದ ಕೊಳಲುಗಳಿಗೆ ಪ್ರಾಣವಾಯುವನ್ನು ಊದಿ ನುಡಿಸುತ್ತಲೇ ಇದ್ದಾನೆ ನಿರಂತರವಾಗಿ. ಹೀಗೆ ಕೃಷ್ಣನು ಹೆತ್ತವರನ್ನು ತೊರೆದು ಗೋಕುಲಕ್ಕೆ ಬಂದು, ಗೋಕುಲವನ್ನು ತೊರೆದು ವೃಂದಾವನಕ್ಕೆ ಬಂದು, ಮತ್ತೆ ತನ್ನ ಜೀವನದ ಒಡನಾಡಿಗಳೆಲ್ಲರನ್ನೂ ಹಿಂದೆ ಬಿಟ್ಟು ಜೀವನದ ಹೊಸ ಅಧ್ಯಾಯವನ್ನು ಪ್ರಾರಂಭಿಸಲು ಮಥುರೆಗೆ ಹೋಗಬೇಕಾಯಿತು. ಇಷ್ಟೆಲ್ಲಾ ನಡೆದದ್ದು ಆತ ಯೌವ್ವನಾವಸ್ಥೆಗೆ ಬರುವುದರ ಒಳಗೆ! ಹೀಗೆ ಅಲೆಮಾರಿಯಂತೆ ಒಂದು ಕಡೆ ಸರಿಯಾಗಿ ನೆಲೆನಿಲ್ಲದ ಕೃಷ್ಣ ಮತ್ತೆ ತನ್ನ ಹುಟ್ಟೂರಾದ ಮಥುರೆಯನ್ನೂ ತೊರೆದು ದ್ವಾರಕೆಗೆ ಹೋಗುವ ಪ್ರಸಂಗ ಅವನ ಜೀವನದಲ್ಲಿ ಮುಂದೆ ಎದುರಾಗುತ್ತದೆ.
ಮಥುರೆಯಲ್ಲಿ ಪ್ರಖ್ಯಾತ ಜಟ್ಟಿಯಾದ ಚಾಣೂರನನ್ನು ಸೋಲಿಸಿ, ಸೋದರಮಾವ ಕಂಸನ ವಧೆ ಮಾಡಿ ಮುಕುಂದನು ಜೀವನದಲ್ಲಿ ಮೊದಲ ಬಾರಿಗೆ ತನ್ನ ಹೆತ್ತ ತಾಯಿತಂದೆಯರನ್ನು ಕಾಣುವ ಭಾಗ್ಯ ದೊರಕುತ್ತದೆ. ತಾನೇ ರಾಜನಾಗಬಹುದಾಗಿದ್ದರೂ ರಾಜ್ಯಭಾರವನ್ನು ತನ್ನ ತಾತನಾದ ಉಗ್ರಸೇನನಿಗೆ ವಹಿಸುತ್ತಾನೆ. ಮುಂದೆಯೂ ಆತ ಎಂದಿಗೂ ಅಭಿಷಿಕ್ತ ರಾಜನಾಗುವುದೇ ಇಲ್ಲ. ಜನರ ಮನಸ್ಸಿನ ಅನಭಿಷಿಕ್ತ ಸಾಮ್ರಾಟನಾಗಿಯೇ ಉಳಿದುಬಿಟ್ಟ ಜನಾರ್ದನ! ತನ್ನ ಸಾಮರ್ಥ್ಯದಿಂದಲೇ ಎಲ್ಲವನ್ನು ಸಾಧಿಸಿದರೂ ಅಣ್ಣ ಬಲರಾಮನಿಗೆ ರಾಜಪದವಿಯನ್ನು ಬಿಟ್ಟುಕೊಡುತ್ತಾನೆ. ಒಬ್ಬ ಸಾಮಾನ್ಯ ಮನುಷ್ಯನಿಗೆ ಬೇಕಾದ ಅನ್ನ, ಬಟ್ಟೆ ಮತ್ತು ಆವಾಸಗಳು ಅವನಿಗೆ ಸಾಕಾಗಿದ್ದವು. ಇದಕ್ಕಿಂತ ಹೆಚ್ಚಿಗೆ ಅವನು ಏನನ್ನೂ ಬಯಸಲೇ ಇಲ್ಲ!
ಮುಂದೆ ರುಕ್ಮಿಣೀವಲ್ಲಭನ ಸಂಸಾರ ಚಕ್ರ ಉರುಳತೊಡಗುತ್ತದೆ. ಆದರೆ ಇಲ್ಲೂ ಯಾವುದೂ ಶಾಂತಿಯುತವಾಗಿ, ಮನಸ್ಸಿಗೆ ಆಹ್ಲಾದವನ್ನುಂಟುಮಾಡುವಂತೆ ನಡೆಯುವುದಿಲ್ಲ. ರುಕ್ಮಿಣಿಯನ್ನು ಅವಳ ಅಣ್ಣನ ಇಚ್ಛೆಗೆ ವಿರುದ್ಧವಾಗಿ ಅಪಹರಿಸಿ ಆತನನ್ನು ಯುದ್ಧದಲ್ಲಿ ಮಣಿಸಿ ಮದುವೆಯಾಗಬೇಕಾಗುತ್ತದೆ. ಈ ಸ್ತ್ರೀಲೋಲ ಎನ್ನಿಸಿಕೊಂಡವನಿಗೆ ಮುಖ್ಯವಾದ ಪತ್ನಿಯರು ಎಂದರೆ ಅವನ ಅಷ್ಟಮಹಿಷಿಯರು. ಆದರೆ ವಿಪರ್ಯಾಸವೇನೆಂದರೆ ಪ್ರತಿಯೊಬ್ಬರನ್ನು ಮದುವೆಯಾಗುವ ಮುನ್ನವೂ ಅವನು ಒಂದೊಂದು ಘೋರ ಯುದ್ಧವನ್ನೇ ಮಾಡಬೇಕಾಯಿತು. ನಾಯಕ ನಾಯಕಿಯನ್ನು ಪಡೆಯಲು ಮಾಡುವ ಹೋರಾಟದ ಇಂತಹ ಸಂದರ್ಭಗಳನ್ನೇ ನಾವು ನಮ್ಮ ಇಂದಿನ ಬಹುತೇಕ ಚಲನಚಿತ್ರಗಳಲ್ಲಿ ಕಾಣಬಹುದು! ಅದಲ್ಲದೆ ಪ್ರಿಯಪತ್ನಿ ಸತ್ಯಭಾಮೆಯ ಸವತಿಮತ್ಸರದ ಕಾರಣವಾಗಿ ಅವನಿಗೆ ಸಾಂಸಾರಿಕ ಜೀವನದಲ್ಲೂ ಸರಿಯಾದ ಸುಖ ಸಿಗಲಿಲ್ಲ. ಸತ್ಯಭಾಮೆಯು ತನ್ನ ಪತಿ ಎಂದೆಂದಿಗೂ ತನ್ನವನು ಮಾತ್ರವಾಗಿರಬೇಕು ಎನ್ನುವ ಹಟಕ್ಕೆ ಬಿದ್ದು ಪತಿಯನ್ನು ಪಗಡೆಯ ಕಾಯಿಯಂತೆ ನಡೆಸಿ ನಾರದರು ಸೂಚಿಸಿದ ತಂತ್ರಕ್ಕೆ ಬಲಿಯಾಗಿ ಪತಿಪುರುಷೋತ್ತಮನನ್ನೇ ನಾರದರಿಗೆ ದಾನವಾಗಿ ನೀಡುತ್ತಾಳೆ! ತನ್ನತನವನ್ನೇ ಕಳೆದುಕೊಳ್ಳುತ್ತಾನೆ ಸತ್ಯಭಾಮಾಪ್ರಿಯ! ಹೆಸರಿಗೆ ಹದಿನಾರು ಸಾವಿರಕ್ಕೂ ಹೆಚ್ಚು ಪತ್ನಿಯರಿದ್ದರೂ ಆತನ ಮನದ ಇಂಗಿತವನ್ನು ಅರಿತು ನಡೆದುಕೊಂಡವಳು ಬಹುಶಃ ರುಕ್ಮಿಣಿ ಮಾತ್ರವೇ ಇರಬಹುದು. ವಿಶಾಲವಾದ ಸಾಗರದ ಮಧ್ಯದಲ್ಲಿ ಕುಡಿಯಲು ಬೇಕಾದ ಬೊಗಸೆ ಸಿಹಿನೀರಿನಂತಿದ್ದಳು ಆ ಸಾಧ್ವಿ! ಅವನನ್ನು ಸ್ತ್ರೀಲೋಲ ಎಂದು ಜನ ಕರೆಯುತ್ತಿದ್ದರೆ ಅವನ ಮನಸ್ಸಿಗೆ ಎಷ್ಟು ಕಸಿವಿಸಿಯಾಗಿರಬಹುದು!
ಹುಟ್ಟಿದ ಕೂಡಲೇ ತನ್ನ ತಾಯಿತಂದೆಯರಿಂದ ದೂರವಾದ ಕೃಷ್ಣನಿಗೆ ತನ್ನ ಮಗ ಪ್ರದ್ಯುಮ್ನನು ಜನಿಸಿದಾಗ ಆತನೂ ತನ್ನ ಮಗನಿಂದ ದೂರವಾಗುವ ಪ್ರಸಂಗ ಎದುರಾಗುತ್ತದೆ. ಕಾಮದೇವನು ಶಿವನ ಮೂರನೆಯ ಕಣ್ಣಿನಿಂದ ಸುಟ್ಟು ಭಸ್ಮವಾದ ಮೇಲೆ ಆತ ಕೃಷ್ಣ ಮತ್ತು ರುಕ್ಮಿಣಿಯರ ಮಗ ಪ್ರದ್ಯುಮ್ನನಾಗಿ ಹುಟ್ಟಿದ. ಶಂಬರಾಸುರ ಎಂಬ ರಾಕ್ಷಸನಿಗೆ ತನ್ನ ಸಾವು ಮಧುಸೂದನನ ಮಗನಿಂದ ಎಂದು ತಿಳಿಯುತ್ತದೆ. ಆದಕಾರಣ ಆ ರಾಕ್ಷಸನು ಒಂದು ಹೆಣ್ಣಿನ ವೇಷ ಧರಿಸಿ ಇನ್ನೂ ಹತ್ತು ದಿನದ ಎಳೆಯ ಕಂದನನ್ನು ಪ್ರಸೂತಿ ಗೃಹದಿಂದಲೇ ಅಪಹರಿಸಿ ಸಮುದ್ರದಲ್ಲಿ ಎಸೆಯುತ್ತಾನೆ! ಎಲ್ಲರೂ ಪ್ರದ್ಯುಮ್ನನು ವಿಧಿವಶನಾದ ಎಂದು ಭಾವಿಸುತ್ತಾರೆ. ಹೀಗೆ ತನ್ನ ಒಡಲ ಕುಡಿಯಿಂದ ದೂರವಾಗುತ್ತಾನೆ ಕೇಶವ. ಆದರೆ ಅದೃಷ್ಟವಶಾತ್ ಮಗುವನ್ನು ಒಂದು ಮೀನು ನುಂಗಿ, ಆ ಮೀನು ಒಬ್ಬ ಬೆಸ್ತನಿಗೆ ಸಿಕ್ಕಿ, ಅದರಲ್ಲಿರುವ ಮಗುವನ್ನು ಆತ ಬದುಕಿಸುತ್ತಾನೆ. ಮುಂದೆ ಶಂಬರಾಸುರನ ರಾಜ್ಯದಲ್ಲೇ ಬೆಳೆದು ದೊಡ್ಡವನಾಗುವ ಪ್ರದ್ಯುಮ್ನ ಶಂಬರಾಸುರನನ್ನು ಕೊಂದು, ತನ್ನ ಜನ್ಮದಾತರ ಬಗ್ಗೆ ತಿಳಿದು ಆತ ತಾಯಿತಂದೆಯರನ್ನು ಸೇರುವ ಹೊತ್ತಿಗೆ ಅವನಿಗೆ ಆಗಲೇ ಮದುವೆಯಾಗಿರುತ್ತದೆ. ಅಷ್ಟು ದೀರ್ಘಕಾಲಿಕ ಅಗಲಿಕೆ ತಂದೆಮಕ್ಕಳಿಗೆ! ಹುಟ್ಟಿದಾಗ ತಾಯಿತಂದೆಯರ ಅಪ್ಪುಗೆ ಸಿಗಲಿಲ್ಲ, ತನ್ನ ಮಗನನ್ನು ಅಪ್ಪಿ ಮುದ್ದಾಡುವ ಭಾಗ್ಯವೂ ಅವನಿಗೆ ಇಲ್ಲದೆ ಹೋಯಿತು! ಲೋಕದ ಜನರು ಮನಃಶಾಂತಿಯನ್ನು ಪಡೆಯಲು ದಾರಿತೋರುವ ಗೀತೆಯನ್ನು ಬೋಧಿಸಿದ ಗೀತಾಚಾರ್ಯ ಯೋಗೇಶ್ವರನಿಗೆ ತನ್ನ ಜೀವನದಲ್ಲೇ ಹೃದಯ ಕಲಕುವ ಸನ್ನಿವೇಶಗಳು ಎದುರಾದದ್ದು ಎಂತಹ ದೊಡ್ಡ ವಿಪರ್ಯಾಸ ಅಲ್ಲವೇ?!
ಶ್ರೀಕೃಷ್ಣ ಒಬ್ಬ ದೈವಾಂಶ ಸಂಭೂತ, ಆತನಿಗೆ ಅಲೌಕಿಕ ಶಕ್ತಿಗಳಿದ್ದವು, ಆದ್ದರಿಂದ ತನ್ನ ಕಷ್ಟ ಹಾಗೂ ದುಃಖಗಳಿಂದ ಆತ ಸುಲಭವಾಗಿ ಪಾರಾಗಲು ಸಾಧ್ಯವಾಯಿತು ಎನ್ನುವುದು ಕೆಲವರ ವಾದವಿರಬಹುದು. ಆದರೆ ರಾಕ್ಷಸರನ್ನು ಕೊಲ್ಲುವ ಸಮಯದಲ್ಲಿ ಮಾತ್ರ ಅವನು ತನ್ನ ಅಲೌಕಿಕ ಶಕ್ತಿಗಳನ್ನು ಬಳಸಿದ್ದಾನೆ. ಏಕೆಂದರೆ ದುಷ್ಟನಿಗ್ರಹ ಅವನ ಅವತಾರದ ಮೂಲ ಕಾರಣಗಳಲ್ಲಿ ಒಂದು. ಆದ್ದರಿಂದ ಆ ಪ್ರಸಂಗಗಳಲ್ಲಿ ಅಲ್ಲದೆ ವೈಯಕ್ತಿಕ ಕಾರಣಗಳಿಗಾಗಿ ಮಧುಸೂದನನು ಎಂದೂ ತನ್ನ ಅಲೌಕಿಕ ಶಕ್ತಿಗಳನ್ನು ಬಳಸದೆ ಸಾಮಾನ್ಯ ಮಾನವನಂತೆ ಬದುಕಿ ತೋರಿಸಿದ್ದಾನೆ. ವಿಧಿಯ ವಿಲಾಸಗಳಿಗೆ ಸಾಮಾನ್ಯ ಮಾನವನಂತೆ ತಾನೂ ತಲೆಬಾಗಿ ನಡೆದಿದ್ದಾನೆ. ಭಾಗವತದ ಒಂದು ಪ್ರಸಂಗದಲ್ಲಿ ಕೃಷ್ಣನು ರುಕ್ಮಿಣಿಯ ಜೊತೆಯ ಸಂವಾದದಲ್ಲಿ ತನ್ನ ಬದುಕನ್ನು ತಾನೇ ವಿಶ್ಲೇಷಿಸಿ, ತನ್ನಂತಹವನನ್ನು ಏನು ನೋಡಿ ರುಕ್ಮಿಣಿ ಮೆಚ್ಚಿದಳು ಎಂದು ಆಶ್ಚರ್ಯಪಡುತ್ತಾನೆ. ಅವನು ಮದುವೆಯಾದ ಬುಹುಕಾಲದ ನಂತರ ರುಕ್ಮಿಣಿಗೆ ಹೇಳುವ ಮಾತುಗಳು ಇಂತಿವೆ “ನಿನ್ನನ್ನು ಮದುವೆಯಾಗಬೇಕಿದ್ದ ಶಿಶುಪಾಲನಂತೆ ನನಗೆ ಯಾವ ರಾಜ್ಯವೂ ಇರಲಿಲ್ಲ, ಈಗಲೂ ನನ್ನ ಬಳಿ ಯಾವ ರಾಜ್ಯವೂ ಇಲ್ಲ. ವೃಂದಾವನದಲ್ಲಿ ನನ್ನ ಪ್ರೀತಿಪಾತ್ರರಿಗೆ ಹಾಗೂ ರಾಧೆಗೆ ಬಹಳ ನೋವನ್ನುಂಟು ಮಾಡಿ ಅವರನ್ನು ತೊರೆದು ಬಂದೆ, ಜರಾಸಂಧನಿಗೆ ಹೆದರಿ ಮಥುರೆಯನ್ನು ತೊರೆದು ದ್ವಾರಕೆಗೆ ಓಡಿ ಬಂದೆ. ಹಲವಾರು ವಿವಾಹಗಳನ್ನು ಮಾಡಿಕೊಂಡೆನಾದರೂ ಯಾವ ಪತ್ನಿಗೂ ನಾನು ಅವರು ಬಯಸಿದಂತಹ ಪತಿಯಾಗಲು ಸಾಧ್ಯವಾಗಲಿಲ್ಲ. ಜೀವನದಲ್ಲಿ ಯಾವುದೇ ನಿರ್ದಿಷ್ಟವಾದ ಗುರಿ ಇಲ್ಲದಂತೆ ಬದುಕಿದ್ದೇನೆ. ನಾನು ಗೊಲ್ಲನೋ ಅಥಾವಾ ರಾಜಕುಮಾರನೋ ಎನ್ನುವ ಸಂದೇಹ ಇನ್ನೂ ಹಲವರಿಗಿದೆ. ಸಾಮಾಜಿಕ ಶಿಷ್ಟಾಚಾರಗಳಲ್ಲಿ ನಾನು ನಯವಂತನೇನೂ ಅಲ್ಲ, ನನ್ನ ಬಾಲ್ಯವೆಲ್ಲ ಹಳ್ಳಿಯಲ್ಲಿ ಕಳೆದದ್ದರಿಂದ ನನಗೆ ಪಟ್ಟಣದ ಶಿಷ್ಟಾಚಾರಗಳು ಅಷ್ಟಾಗಿ ತಿಳಿಯದು. ನನಗೆ ಯಾವುದರ ಒಡೆತನವೂ ಇಲ್ಲ, ಆಗಲೂ ಇರಲಿಲ್ಲ ಮತ್ತು ಈಗಲೂ ಇಲ್ಲ! ನೀನು ಜಾಣೆ ಎಂದು ನನಗೆ ತಿಳಿದಿದೆ, ಆದರೆ ನೀನು ನನ್ನಂತಹವನನ್ನು ಪತಿಯಾಗಿ ಸ್ವೀಕರಿಸಲು ಏಕೆ ನಿರ್ಧರಿಸಿದೆ? ಏಕೆ ಆಯ್ಕೆ ಮಾಡುವಲ್ಲಿ ತಪ್ಪಿದೆ? ಈಗಲೂ ಕಾಲ ಮಿಂಚಿಲ್ಲ, ನೀನು ನನ್ನನ್ನು ತೊರೆದು ಬೇರೆ ಯಾವುದಾದರೂ ರಾಜನನ್ನು ವಿವಾಹವಾಗಬಹುದು.” ಎಂದು ಹೇಳುತ್ತಾನೆ. ಇದು ಅವನು ಪತ್ನಿಯನ್ನು ರೇಗಿಸಲು ವಿನೋದಕ್ಕಾಗಿ ಆಡಿದ ಮಾತುಗಳಾಗಿದ್ದರೂ ಅವು ಜನಾರ್ದನನ ಸಾಮಾನ್ಯ ಮನುಷ್ಯನ ರೀತಿಯ ಜೀವನ ಶೈಲಿಯನ್ನು ಪ್ರತಿಬಿಂಬಿಸುವುದು ಸುಳ್ಳಲ್ಲ! ಹಾಗೆಯೇ ಅದು ಅವನ ನಿಜವಾದ ಪ್ರೀತಿಯನ್ನೂ, ಒಂದು ಸಂಬಂಧದಲ್ಲಿ ಯಾವ ರೀತಿಯ ಬಂಧನವೂ ಇರಕೂಡದು ಎನ್ನುವ ಆತನ ಆಲೋಚನೆಯನ್ನೂ ಬಿಂಬಿಸುತ್ತದೆ. “ಏಲ್ಲೇ ಇರು, ಹೇಗೇ ಇರು, ಎಂದೆಂದಿಗೂ ನೀ ಸುಖವಾಗಿರು” ಎನ್ನುವುದೇ ನಿಜವಾದ ಪ್ರೀತಿ ಅಲ್ಲವೇ?
ಹಾಗೆಯೇ ಭಾಗವತದ ಇನ್ನೊಂದು ಭಾಗದಲ್ಲಿ ಶ್ರೀಕೃಷ್ಣನ ಒಂದು ಸಾಮಾನ್ಯ ದಿನ ಹೇಗಿರುತ್ತಿತ್ತು ಎಂದು ವಿವರಿಸಲಾಗಿದೆ. ಅವನು ಒಬ್ಬ ಸಾಮಾನ್ಯ ಸಂಸಾರಿಯು ನಿರ್ವಹಿಸಬೇಕಾದ ಎಲ್ಲ ಕಾರ್ಯಗಳನ್ನು ತಪ್ಪದೆ ನಿರ್ವಹಿಸುತ್ತಿದ್ದ! ಬ್ರಾಹ್ಮೀ ಮುಹೂರ್ತದಲ್ಲಿ ಹಾಸಿಗೆಯಿಂದೆದ್ದು ಶೌಚಾದಿಗಳನ್ನು ಮುಗಿಸಿ, ಪರಬ್ರಹ್ಮನ ಧ್ಯಾನ ಮಾಡಿ, ಸಂಧ್ಯಾವಂದನೆ ಮತ್ತು ಅಗ್ನಿಹೋತ್ರಗಳನ್ನು ಪೂರೈಸಿ ಬ್ರಾಹ್ಮಣರಿಗೆ ದಾನಧರ್ಮಾದಿಗಳನ್ನು ಮಾಡುತ್ತಿದ್ದ. ಇವೆಲ್ಲ ಆದನಂತರ ತನ್ನ ಪತ್ನಿಯರಿಂದ ಬೀಳ್ಕೊಂಡು ಆತ ರಾಜ್ಯದ ಜನತೆಯ ಸಮಸ್ಯೆಗಳ ಕಡೆ ಗಮನ ಕೊಡುತ್ತಿದ್ದ. ಒಬ್ಬ ಪೂರ್ಣಾವತಾರಿ ಪರಮಾತ್ಮನು ಒಬ್ಬ ಸಾಮಾನ್ಯ ಸಂಸಾರಿಯಂತೆ ಪ್ರತಿನಿತ್ಯ ಏಕೆ ನಡೆದುಕೊಳ್ಳಬೇಕಿತ್ತು ಅನ್ನಿಸದಿರದು. ಈ ಪ್ರಶ್ನೆಗೆ ಭಗವಂತನು ಭಗವದ್ಗೀತೆಯಲ್ಲಿ ಉತ್ತರ ನೀಡಿದ್ದಾನೆ:
ನ ಮೇ ಪಾರ್ಥಾಸ್ತಿ ಕರ್ತವ್ಯಂ ತ್ರಿಷು ಲೋಕೇಷು ಕಿಂಚನ ।
ನಾನವಾಪ್ತಮವಾಪ್ತವ್ಯಂ ವರ್ತ ಏವ ಚ ಕರ್ಮಣಿ ॥ಅ. ೩, ಶ್ಲೋ.೨೨॥
ಯದಿ ಹ್ಯಹಂ ನ ವರ್ತೇಯಂ ಜಾತು ಕರ್ಮಣ್ಯತಂದ್ರಿತಃ ।
ಮಮ ವರ್ತ್ಮಾನುವವರ್ತಂತೇ ಮನುಷ್ಯಾಃ ಪಾರ್ಥ ಸರ್ವಶಃ ॥ಅ. ೩, ಶ್ಲೋ.೨೩॥
ಮೇಲಿನ ಶ್ಲೋಕಗಳ ಅರ್ಥ ಹೀಗಿದೆ:
ಪಾರ್ಥ, ಮೂರು ಲೋಕಗಳಲ್ಲೂ ನಾನು ಮಾಡಬೇಕಾದ್ದು ಏನೂ ಇಲ್ಲ. ಪಡೆಯದೇ ಇದ್ದು ಪಡೆಯಬೇಕಾದ್ದು ಇಲ್ಲ. ಆದರೂ ನಾನು ಕರ್ಮದಲ್ಲಿ ತೊಡಗಿದ್ದೇನೆ. ಏಕೆಂದರೆ, ನಾನು ಎಂದಾದರೂ ಕರ್ಮದಲ್ಲಿ ತೊಡಗದೆ ಹೋದರೆ, ಮನುಷ್ಯರು ಎಲ್ಲ ಬಗೆಯಿಂದಲೂ ನನ್ನ ಮಾರ್ಗವನ್ನೇ ಅನುಸರಿಸಿಬಿಡುತ್ತಾರೆ!
ಪಾಂಡವರ ಸಖ್ಯ ಪಾರ್ಥಸಾರಥಿಯ ಬದುಕಿನ ಮುಖ್ಯ ಭಾಗಗಳಲ್ಲಿ ಒಂದು. ಧರ್ಮ ಪಕ್ಷಪಾತಿಗಳಾದ ಪಾಂಡವರಿಗೆ ಸಹಾಯ ಮಾಡಿ ಯಾದವಪುಂಗವನು ತನ್ನ ವಂಶಕ್ಕೇ ಕೇಡನ್ನು ತಂದುಕೊಂಡ. ಮಹಾಭಾರತದ ಯುದ್ಧ ಮುಗಿದ ಮೇಲೆ ಚಕ್ರಧಾರಿಯು ಪಾಂಡವರ ಜೊತೆ ಧೃತರಾಷ್ಟ್ರ ಮತ್ತು ಗಾಂಧಾರಿಯನ್ನು ಸಂತೈಸಲು ಹೋಗುತ್ತಾನೆ. ಗಾಂಧಾರಿಯು ಕೃಷ್ಣನು ಮನಸ್ಸು ಮಾಡಿದ್ದರೆ ಮಹಾಭಾರತ ಯುದ್ಧವನ್ನು ತಪ್ಪಿಸಬಹುದಿತ್ತು. ಅವನು ಹಾಗೆ ಮಾಡದೆ ಇದ್ದುದರಿಂದ ತನ್ನ ನೂರು ಪುತ್ರರು ಸಾವನ್ನಪ್ಪಲು ಕೃಷ್ಣನೇ ಮೂಲ ಕಾರಣ ಎಂದು ನಿರ್ಧರಿಸಿ, ಪುತ್ರಶೋಕದಿಂದ ಅಂಧಳಾದ ಗಾಂಧಾರಿ ಯದುಕುಲತಿಲಕನಿಗೆ ಅವನ ಕಣ್ಣ ಮುಂದೆಯೇ ಯದುವಂಶ ನಿರ್ವಂಶವಾಗಲಿ ಎಂದು ಶಾಪ ನೀಡುತ್ತಾಳೆ. ಮುಂದೆ ಜಾಂಬವತಿಯ ಮಗ ಸಾಂಬನ ಹುಚ್ಚಾಟದ ಪರಿಣಾಮವಾಗಿ ಯಾದವರು ಒಬ್ಬರಿಗೊಬ್ಬರು ಹೊಡೆದಾಡಿ ನಾಶವಾದರು. ಒಂಟಿಯಾದ ಕೃಷ್ಣನೂ ಸಹ ವಾಲಿಯ ಮರುಜನ್ಮವಾದ ಜರನೆಂಬ ಬೇಡನು ಪ್ರಯೋಗಿಸಿದ ಬಾಣದಿಂದ ಇಹಲೋಕವನ್ನು ತ್ಯಜಿಸಿದ. ಅವನ ಪೂರ್ವಜನ್ಮದ ಕರ್ಮ ಅವನನ್ನು ಬೆಂಬತ್ತಿತ್ತು. ಶ್ರೀರಾಮನ ಅವತಾರದಲ್ಲಿ ಮೋಸದಿಂದ ವಾಲಿಯನ್ನು ಕೊಂದದ್ದರ ಪರಿಣಾಮ ಅದು. ಶ್ರೀಕೃಷ್ಣನು ವಿಧಿನಿಯಮಕ್ಕೆ ಅಡ್ಡಿ ಬಾರದೆ ಗಾಂಧಾರಿಯ ಶಾಪವನ್ನು ಸಾಮಾನ್ಯರಂತೆ ಸ್ವೀಕರಿಸಿದ. ತನ್ನ ಅಲೌಕಿಕ ಶಕ್ತಿಯನ್ನು ಉಪಯೋಗಿಸಿದ್ದಿದ್ದರೆ ಅಂತಹ ಶಾಪದಿಂದ ತನ್ನ ವಂಶವನ್ನು ಕಾಪಾಡಿಕೊಳ್ಳಬಹುದಿತ್ತು. ಆದರೆ ನಮ್ಮನಿಮ್ಮಂತೆ ವಿಧಿವಿಲಾಸಕ್ಕೆ ತಲೆಬಾಗಿದವನು ಪರಮಪುರುಷನ ಪೂರ್ಣಾವತಾರಿ ಶ್ರೀಕೃಷ್ಣ.
ಶ್ರೀಕೃಷ್ಣನು ಬೋಧಿಸಿದ ಭಗವದ್ಗೀತೆಯನ್ನು ಅರ್ಥಮಾಡಿಕೊಂಡಂತೆಲ್ಲ ನಮಗೆ ನಮ್ಮ ಜೀವನದಲ್ಲಿ ಎದುರಾಗುವ ಸಂಕಷ್ಟಗಳನ್ನು ಯಾವ ರೀತಿ ಎದುರಿಸಬೇಕು ಎಂದು ಅರ್ಥವಾಗುತ್ತ ಹೋಗುತ್ತದೆ. ಹಾಗೆಯೇ ಶ್ರೀಕೃಷ್ಣನ ನಿಜ ಜೀವನದ ಸಾಂಸಾರಿಕ ಚಿತ್ರಣವೂ ಸಹ ನಮಗೆ ಭಗವದ್ಗೀತೆಯು ನೀಡುವಂತಹ ಪಾಠವನ್ನೇ ಬೋಧಿಸುತ್ತದೆ ಎಂದರೆ ಅತಿಶಯೋಕ್ತಿಯೇನಲ್ಲ! ಎಲ್ಲದರ ನಡುವೆ ಬದುಕಿದರೂ ಯಾವುದನ್ನೂ ಎದೆಗೆ ಅಂಟಿಸಿಕೊಂಡವನಲ್ಲ ಅವನು, ನೀರಿನಲ್ಲಿನ ತಾವರೆಯ ಎಲೆಯ ಹಾಗೆ:
ಬ್ರಹ್ಮಣ್ಯಾಧಾಯ ಕರ್ಮಾಣಿ ಸಂಗಂ ತ್ಯಕ್ತ್ವಾ ಕರೋತಿ ಯಃ|
ಲಿಪ್ಯತೇ ನ ಸ ಪಾಪೇನ ಪದ್ಮಪತ್ರಮಿವಾಂಭಸಾ|| ಭಗವದ್ಗೀತೆ ಅ. ೫, ಶ್ಲೋ. ೧೦)
ತಾನು ಬೋಧಿಸಿದ್ದನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಶ್ರೀಕೃಷ್ಣನು ಅಗ್ರಸ್ಥಾನದಲ್ಲಿ ನಿಂತಿದ್ದಾನೆ. ತನ್ನ ಸಂಕಷ್ಟಗಳನ್ನು ಮನಸ್ಸಿಗೆ ತೆಗೆದುಕೊಳ್ಳದೆ ಇತರರ ಹೃದಯದ ನೋವನ್ನು ನಿವಾರಿಸಲು ಸಿದ್ಧನಾಗಿ ನಿಂತ ಶ್ರೀಕೃಷ್ಣನು ನಮ್ಮೆಲ್ಲರೆದುರು ದುರಂತ ನಾಯಕನಾದರೂ ದೇವರಾಗಿ ನಿಂತಿದ್ದಾನೆ!
ಕೃಷ್ಣಂ ವಂದೇ ಜಗದ್ಗುರುಂ!
(ಈ ವ್ಯಕ್ತಿಚಿತ್ರವನ್ನು ಎಸ್. ಕೃಷ್ಣಮೂರ್ತಿಯವರ (ಕೃಷ್ಣಕವಿ) ʼಪುರಾಣಪ್ರಸಿದ್ಧ ಪಾತ್ರಗಳುʼ ಎನ್ನುವ ಕೃತಿಯಿಂದ ಆಯ್ದುಕೊಳ್ಳಲಾಗಿದೆ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!