ಆ ಮಧ್ಯಾಹ್ನ, ಕೆಂಡದಂತಹ ಬಿಸಿಲಿನಲ್ಲಿ ಧೂಳೆಬ್ಬಿಸುತ್ತಾ ಬಂದ ಬಸ್ಸು ಆ ಊರಿನ ಬಸ್ ನಿಲ್ದಾಣದಲ್ಲಿ ನಿಂತಾಗ, ಹತ್ತು ವರ್ಷದ ಮಾಧವ್ ಮತ್ತು ಹನ್ನೊಂದು ವರ್ಷದ ಮೋಹನ್ ಕೆಳಗಿಳಿದರು. ಗಾಳಿಯಲ್ಲಿ ಒಣ ಮಣ್ಣಿನ ಮತ್ತು ನರುಗಂಪಿನ ಮಲ್ಲಿಗೆಯ ಸುವಾಸನೆ ಆವರಿಸಿತ್ತು. ಆ ಇಬ್ಬರು ಸಹೋದರರಿಗೆ ಆ ಬೇಸಿಗೆಯ ಬಿಸಿಲು ಕಷ್ಟವೆನಿಸಲೇ ಇಲ್ಲ; ಬದಲಿಗೆ ಅದು ಕೊನೆಯಿಲ್ಲದ, ಸ್ವಾತಂತ್ರ್ಯದ ಸುಂದರ ದಿನಗಳಂತೆ ಭಾಸವಾಯಿತು.

ಅಜ್ಜಿಯ ಮನೆ ಊರಿನ ತುದಿಯಲ್ಲಿತ್ತು. ಅಲ್ಲಿಯ ಹಳೆಯ ಗೋಡೆ ಗಡಿಯಾರಗಳು ಕೂಡ ಯಾವುದೇ ಧಾವಂತವಿಲ್ಲದೆ ಮೆಲ್ಲಗೆ ಓಡುತ್ತಿದ್ದವು. ಪ್ರತಿ ಬೆಳಿಗ್ಗೆ ಹಂಚಿನ ಮೇಲ್ಚಾವಣಿಯ ಮೇಲೆ ಸೂರ್ಯನ ಕಿರಣಗಳು ಬೀಳುವ ಮುನ್ನವೇ ಇಬ್ಬರ ದಿನಚರಿ ಶುರುವಾಗುತ್ತಿತ್ತು. ಕಣ್ಣುಜ್ಜುತ್ತಲೇ ಎದ್ದ ಇಬ್ಬರು ಸಹೋದರರು, ಮನೆಯ ಸಮೀಪದಲ್ಲಿದ್ದ ಹಳೆಯ ಭಾವಿಯತ್ತ ನಡೆಯುತ್ತಿದ್ದರು. ದಶಕಗಳಿಂದ ಹಗ್ಗದ ಉಜ್ಜುವಿಕೆಗೆ ಸಿಕ್ಕು ಆ ಬಾವಿಯ ಕಲ್ಲುಗಳು ನಯವಾಗಿದ್ದವು. ಮಾಧವ್ ಆ ಸಣಬಿನ ಹಗ್ಗವನ್ನು ಗಟ್ಟಿಯಾಗಿ ಹಿಡಿದು, ಹಿತ್ತಾಳೆ ಬಿಂದಿಗೆಯನ್ನು ಕತ್ತಲೆಯ ನೀರಿನ ಆಳಕ್ಕೆ ಇಳಿಸುತ್ತಿದ್ದ—'ಚಪಾಕ್' ಸದ್ದು ಮತ್ತು ರಾಟೆಯ 'ಕೀಚ್-ಕೀಚ್' ನಾದ ಪ್ರಾತಃಕಾಲದ ಗೀತೆಯಂತಿರುತ್ತಿತ್ತು.

"ಇನ್ನೊಂದು ಬಿಂದಿಗೆ ನೀರು ತನ್ನಿ ಮಕ್ಕಳಾ, ಅಡುಗೆಗೆ ಬೇಕು!" ಎಂದು ಅಜ್ಜಿ ಹೆಬ್ಬಾಗಿಲಲ್ಲಿ ನಿಂತು ಕೂಗಿ ಹೇಳಿದಾಗ, ಇಬ್ಬರೂ ಆ ತಣ್ಣನೆಯ ನೀರನ್ನು ತಂದು ಮನೆಯ ತಾಮ್ರದ ಹಂಡೆಗೆ ಸುರಿಯುತ್ತಿದ್ದರು.

ಸ್ನಾನ ಮುಗಿಸಿ, ಒಗಚು ಹೊಸ ಉಡುಪು ಧರಿಸಿ ಪ್ರತಿದಿನ ಬೆಳಿಗ್ಗೆ ಅವರು ಹೊರಡುತ್ತಿದ್ದುದು ರಾಘವೇಂದ್ರ ಸ್ವಾಮಿ ಮಠಕ್ಕೆ. ತಂಪಾದ ಆ ಕಲ್ಲಿನ ಮಂಟಪದಲ್ಲಿ ಅರ್ಚಕರು ಕರ್ಪೂರದ ಗಂಧವಿದ್ದ ತೀರ್ಥವನ್ನು ಕೈಗೆ ಸುರಿದು, ಮಂತ್ರಾಕ್ಷತೆಯನ್ನು ತಲೆಯ ಮೇಲೆ ಪ್ರೋಕ್ಷಿಸುತ್ತಿದ್ದರು. ಮಂಟಪದ ಕಂಬಗಳ ಮೇಲಿದ್ದ ಕೋತಿಗಳ ಸೈನ್ಯವನ್ನು ನೋಡುತ್ತಾ, ಕೈಯಲ್ಲಿ ಏನೂ ಇಟ್ಟುಕೊಳ್ಳದೆ ನೇರವಾಗಿ ಪ್ರದಕ್ಷಿಣೆ ಹಾಕಿ ಬರುವುದು ಅವರ ಅಭ್ಯಾಸವಾಗಿತ್ತು.

ಕೆಲವು ದಿನಗಳಲ್ಲಿ, ಮಠದ ದರ್ಶನ ಮುಗಿದ ತಕ್ಷಣ ಅವರ ಕಾಲುಗಳು "ಮಹಾಲಕ್ಷ್ಮಿ ಟಿಫಿನ್ಸ್" ಕಡೆಗೆ ನಡೆಯುತ್ತಿದ್ದವು. ಭಟ್ಟರು ಚುರುಕಾಗಿ ಬಂದು, ಮರದ ಬೆಂಚ್ ಮೇಲೆ ಹಸಿಯಾದ ಬಾಳೆ ಎಲೆ ಹಾಸುತ್ತಿದ್ದರು. "ಇಡ್ಲಿ ಬಿಸಿಯಾಗಿದೆ, ತರಲಾ?" ಎಂದು ಪ್ರೀತಿಯಿಂದ ಕೇಳಿ, ಹೂವಿನಂತಿದ್ದ ಬಿಸಿ ಇಡ್ಲಿಗಳನ್ನು ಇಟ್ಟು ಬಂಗಾರದ ಬಣ್ಣದ ತೆಂಗಿನಕಾಯಿ ಚಟ್ನಿಯನ್ನು ಧಾರಾಳವಾಗಿ ಎರೆಯುತ್ತಿದ್ದರು.

ಅಲ್ಲಿಂದ ಹೊರಬಿದ್ದು, ಗಲ್ಲಿಗಳ ಗೊಂದಲಮಯ ಜಾಲವನ್ನು ದಾಟಿ ಅವರು ಚಂದ್ರು ಮತ್ತು ನಾಗರಾಜ್ ಮನೆಗೆ ಜಾರುತ್ತಿದ್ದರು. ಪ್ರತಿದಿನ ಬೆಳಿಗ್ಗೆ ಅಲ್ಲಿ ಕ್ಯಾರಂ ಮಣೆಯ 'ಟಕ್-ಟಕ್' ಸದ್ದು ಮಾರ್ಮೊಳಗುತ್ತಿತ್ತು. ಆರು ಜನ ಹುಡುಗರು ಸೇರಿದರೂ ಮಣೆಯಲ್ಲಿ ಆಡಲು ನಾಲ್ಕೇ ಜನಕ್ಕೆ ಅವಕಾಶ! ಆನಂದ್ ಮತ್ತು ಸುರೇಶ್ ಕೆಂಪು ಆಕ್ಸೈಡ್ ನೆಲದ ಮೇಲೆ ಒರಗಿ, ಸರದಿಗಾಗಿ ಕಾಯುತ್ತಿದ್ದರು.

ಅಂತಹದ್ದೇ ಒಂದು ದಿನ, ಮೋಹನ್ ಕ್ಯಾರಂ ಸ್ಟ್ರೈಕರ್ ಹಿಡಿದು ಗಮನವಿಟ್ಟು ಗುರಿ ನೆಟ್ಟ.

"ನೇರವಾಗಿ ಹೊಡೆಯಬೇಡವೋ! ಬೋರ್ಡ್ ಅಂಚಿಗೆ ತಟಾಯಿಸಿ ಹೊಡಿ!" ಎಂದು ನಾಗರಾಜ್ ಪಕ್ಕದಲ್ಲೇ ನಿಂತು ತೀವ್ರವಾಗಿ ಎಚ್ಚರಿಸಿದ.

ಮೋಹನ್ ಬಲವಾಗಿ ಹೊಡೆದ. ಆದರೆ ಸ್ಟ್ರೈಕರ್ ಯಾವ ಕಾಯಿನ್‌ಗೂ ತಾಗದೆ ಖಾಲಿಯಾಗಿ ಜಾರಿತು.

ನಾಗರಾಜ್ ಎರಡು ಕೈಗಳಿಂದ ಮುಖ ಮುಚ್ಚಿಕೊಳ್ಳುತ್ತಾ, "ಅಯ್ಯೋ! ನಾನು ಎಷ್ಟು ಹೇಳಿದ್ರೂ ನಿನಗೆ ಅರ್ಥನೇ ಆಗಲ್ವಾ? ಅವನು ತಟ್ಟೆಯಲ್ಲಿಿಟ್ಟು ಅವಕಾಶ ಕೊಟ್ಟಿದ್ದ!" ಎಂದು ಚೀರಿದ.

ಹಿರಿಯಣ್ಣ ಚಂದ್ರು ಮೆಲ್ಲಗೆ ನಗುತ್ತಾ, "ಬಿಡೋ ನಾಗರಾಜ್, ನೆನ್ನೆಗಿಂತ ಇವತ್ತು ಚೆನ್ನಾಗಿಯೇ ಆಡ್ತಿದ್ದಾನೆ..." ಎಂದು ನಾಗರಾಜನನ್ನು ತಡೆದು, ಮಾಧವ್‌ನತ್ತ ನೋಡಿ ಮುಗುಳ್ನಕ್ಕ. ಮೋಹನ್ ನಗೆ ತಡೆದುಕೊಂಡು ಮುಂದಿನ ಹೊಡೆತಕ್ಕೆ ಸಿದ್ಧನಾದ. ಆಟ ಜೋರಾಗಿದ್ದಾಗಲೇ ಚಂದ್ರುನ ಅಮ್ಮ ಬಂದು, "ಮಧ್ಯಾಹ್ನವಾಯ್ತು, ಮನೆಗೆ ಹೋಗಿ ಎಲ್ಲರೂ" ಎಂದು ಕರೆಯನ್ನು ನೀಡಿದರು.

ಮನೆಗೆ ಬಂದಾಗ ಅಜ್ಜಿಯ ಪ್ರೀತಿಯ ಬಡಸುವಿಕೆ ಕಾಯುತ್ತಿತ್ತು. ಮೊದಲು ಕಡಲೆಬೇಳೆ, ಅಕ್ಕಿ ಮತ್ತು ಬೆಲ್ಲ ಹಾಕಿ ಮಾಡಿದ ಬಿಸಿಬಿಸಿ ಪಾಯಸ. "ಅಜ್ಜಿ, ಇನ್ನೊಂದು ಸೌಟು ಪಾಯಸ ಹಾಕು!" ಎಂದು ಮಾಧವ್ ಆಸೆಯಿಂದ ಕೇಳಿ ಪಡೆದು ಸವಿಯುತ್ತಿದ್ದ. ತದನಂತರ ಘಮಘಮಿಸುವ ಬಿಸಿ ಶೇಂಗಾ ಸಾಂಬಾರ್ ಅನ್ನ, ಕೊನೆಯಲ್ಲಿ ಒಗ್ಗರಣೆ ಹಾಕಿದ ತಂಪಾದ ಮೊಸರನ್ನ.

"ಸಾಕಜ್ಜಿ, ಇನ್ನು ಒಂದು ತುತ್ತೂ ಬೇಡ!" ಎಂದು ಮಾಧವ್ ಹೊಟ್ಟೆ ಸವರುತ್ತಿದ್ದರೂ, "ನೆನ್ನೆನೂ ಹೀಗೆಯೇ ಹೇಳಿದ್ದೆ," ಎಂದು ಅಜ್ಜಿ ನಗುತ್ತಾ ಮತ್ತೊಂದು ಸೌಟು ಮೊಸರನ್ನವನ್ನು ಎಲೆಗೆ ತಳ್ಳಿಬಟ್ಟಿದ್ದರು. ಅಜ್ಜಿಯ ಕೈಯ ಊಟವೇ ಅವರ ರಜೆಯ ಮತ್ತೊಂದು ಹಬ್ಬವಾಗಿತ್ತು.

ಊಟವಾದ ಮೇಲೆ, ತಂಪಾದ ಕೆಂಪು ನೆಲದ ಮೇಲೆ ಒರಗಿ ಸಣ್ಣದೊಂದು ಮಧ್ಯಾಹ್ನದ ನಿದ್ರೆ. ಹೊರಗೆ ಬಿಸಿಲು ಸುಡುತ್ತಿದ್ದರೂ, ಮನೆಯೊಳಗೆ ಮಾತ್ರ ಮಣ್ಣಿನ ಗೋಡೆಗಳು ತಂಪನ್ನು ಹಿಡಿದಿಟ್ಟುಕೊಂಡಿದ್ದವು.

ಹೆಚ್ಚಿನ ದಿನಗಳಲ್ಲಿ ನಿದ್ರೆಯಿಂದ ಎದ್ದ ತಕ್ಷಣ ಬಾಡಿಗೆ ಸೈಕಲ್ ಅಂಗಡಿಗೆ ಓಡುತ್ತಿದ್ದರು. "ಗಂಟೆಯೊಳಗೆ ವಾಪಸ್ ತರಬೇಕು, ನೆನಪಿರಲಿ!" ಎಂದು ಸೈಕಲ್ ಅಂಗಡಿಯವ ಗದರಿಸಿ ಎಚ್ಚರಿಸುತ್ತಿದ್ದ. ಇಬ್ಬರೂ ಸಣ್ಣ ಸೈಕಲ್‌ಗಳನ್ನೇರಿ ಊರಿನ ವಕ್ರವಾದ, ಕಿರಿದಾದ ಗಲ್ಲಿಗಳಲ್ಲಿ ಗಾಳಿಗೆ ಮುಖ ಒಡ್ಡಿ ಒಬ್ಬರಿಗೊಬ್ಬರು ಪೈಪೋಟಿ ನಡೆಸುತ್ತಾ ಉಲ್ಲಾಸದಿಂದ ಸವಾರಿ ಮಾಡುತ್ತಿದ್ದರು. ಸವಾರಿ ಮುಗಿಸಿ ಸೈಕಲ್ ಹಿಂತಿರುಗಿಸಲು ಬಂದಾಗ, ಪಕ್ಕದಲ್ಲಿದ್ದ ಕಿರಾಣಿ ಅಂಗಡಿಯ ಮುಂಭಾಗದಲ್ಲಿ ಗೋಣಿಚೀಲವೊಂದರಲ್ಲಿ ಬಣ್ಣ ಬಣ್ಣದ ಗೋಲಿಗಳನ್ನು ತುಂಬಿಟ್ಟಿರುವುದನ್ನು ಆಸೆಯಿಂದ ಗಮನಿಸುತ್ತಿದ್ದರು.

ಒಂದು ದಿನ, ಚಿತ್ರಮಂದಿರದ ಸಾಲಿನಲ್ಲಿ ನಿಂತು, ಸಣ್ಣ ಕಬ್ಬಿಣದ ಕಿಟಕಿಯಲ್ಲಿ ಪ್ರವೇಶ ಪತ್ರ ಪಡೆದು 'ಮಾಯಾಬಜಾರ್' ತೆಲುಗು ಸಿನಿಮಾಗೆಗೆ ಹೋದರು. ತೆಲುಗು ಭಾಷೆ ಪೂರ್ತಿ ಅರ್ಥವಾಗದಿದ್ದರೂ, ಪರದೆಯ ಮೇಲೆ ಮೂಡಿಬಂದ ಘಟೋತ್ಕಚನ ಮಾಯಾಜಾಲಗಳು ಮತ್ತು ತಿಂಡಿಗಳ ದೃಶ್ಯಕಾವ್ಯವನ್ನು ನೋಡಿ ಇಬ್ಬರೂ ಕಣ್ಣರಳಿಸಿ ಮೈಮರೆತರು.

ಸಿನಿಮಾ ಮುಗಿದು ಹೊರಬಂದಾಗ ಉರಿಬಿಸಿಲಿಗೆ ಗಂಟಲು ಒಣಗಿತ್ತು. "ಅಣ್ಣಾ, ಬಾಯಾರಿ ಆಗ್ತಿದೆ, ನಡಿ ಸೋಡಾ ಕುಡಿಯೋಣ!" ಎಂದು ಮಾಧವ್ ಮೋಹನ್‌ನ ಶರ್ಟ್ ಹಿಡಿದು ಎಳೆದ.

ಇಬ್ಬರೂ ರಸ್ತೆಬದಿಯ ಸಣ್ಣ ಸೋಡಾ ಬಂಡಿಯತ್ತ ಓಡಿದರು. ಬಾಟಲಿಯ ಕುತ್ತಿಗೆಯಲ್ಲಿ ಸಿಕ್ಕಿಕೊಂಡಿದ್ದ ಗಾಜಿನ ಗೋಲಿಯನ್ನು ಇಬ್ಬರೂ ಕುತೂಹಲದಿಂದ ನೋಡುತ್ತಿದ್ದರು. ಸೋಡಾದವನು ಮರದ ಓಪನರ್‌ನಿಂದ ಒತ್ತಿದ ತಕ್ಷಣ 'ಟಪ್' ಎಂದು ಅದು ಒಳಗೆ ಜಾರಿ ಬಿತ್ತು. ಉಸ್ಸೆಂದು ಚಿಮ್ಮಿದ ಗ್ಯಾಸ್‌ನೊಂದಿಗೆ ನಾಲಿಗೆಯ ಮೇಲೆ 'ಮಸಾಲಾ ಗೋಲಿ ಸೋಡಾ' ಬಿದ್ದ ಅನುಭವವೇ ಒಂದು ರೋಮಾಂಚನ.

ಅಂತಿಮವಾಗಿ ರಜೆಯ ಕೊನೆಯ ದಿನ ಬಂದೇ ಬಿಟ್ಟಿತು. ಇಡೀ ಬೇಸಿಗೆಯಲ್ಲಿ ಕಷ್ಟಪಟ್ಟು ಉಳಿಸಿದ ತಮ್ಮ ಚಿಲ್ಲರೆ ಕಾಸುಗಳನ್ನು ಹಿಡಿದು ಇಬ್ಬರೂ ಆ ಕಿರಾಣಿ ಅಂಗಡಿಗೆ ಓಡಿದರು. ಅಲ್ಲಿ ನೆಲದಲ್ಲಿದ್ದ ಗೋಣಿಚೀಲಕ್ಕೆ ಕೈಹಾಕಿ, ಪ್ರತಿಯೊಬ್ಬರಿಗೂ ಹತ್ತು ಸಣ್ಣ ಗೋಲಿಗಳು ಮತ್ತು ಒಂದು ದೊಡ್ಡ ಅಪರೂಪದ ಸುರುಳಿ ಗೋಲಿಯನ್ನು ಆಯ್ದುಕೊಂಡು ಹೆಮ್ಮೆಯಿಂದ ಜೇಬಿಗಿಳಿಸಿಕೊಂಡರು.

ಬಸ್ಸು ಧೂಳೆಬ್ಬಿಸುತ್ತಾ ಊರಿನಿಂದ ದೂರ ಸರಿಯಿತು. ಜೇಬಿನೊಳಗಿನ ಗೋಲಿಗಳು ‘ಖಣ-ಖಣ’ ಎಂದು ಒಂದಕ್ಕೊಂದು ತಾಗಿದವು. ಆ ಸದ್ದಿನೊಂದಿಗೆ ಒಣಮಣ್ಣಿನ, ಮಲ್ಲಿಗೆಯ ಸುವಾಸನೆಯೂ ಮನಸ್ಸಿನಲ್ಲಿ ಮತ್ತೆ ಅರಳಿತು. ನಾಗರಾಜನ ಗದರಿಕೆ, ಚಂದ್ರುನ ಮುಗುಳುನಗೆ, ಅಜ್ಜಿಯ ಪ್ರೀತಿ—ಎಲ್ಲವೂ ಆ ಗೋಲಿಗಳ ಜೊತೆಗೇ ಮನೆಗೆ ಹೊರಟಂತಾಯಿತು. ವರ್ಷಗಳು ಉರುಳಿದರೂ, ಆ ಗೋಲಿಗಳಂತೆ ಆ ರಜೆಗಳ ನೆನಪುಗಳು ಅವರ ಮನಸ್ಸಿನಲ್ಲಿ ಎಂದೆಂದಿಗೂ ಬಂಗಾರವಾಗಿಯೇ ಉಳಿದವು.