ಜಯಂತಿಪುರದ ಕತೆಗಳು

ಜಯಂತಿಪುರದಲ್ಲಿನ ಬದುಕಿನೊಂದಿಗೆ

ಪ್ರಸ್ತುತ ಕಾಲಘಟ್ಟದ ದಿನಗಳಲ್ಲಿ ಅನೂಹ್ಯವಾದ ವೈಜ್ಞಾನಿಕ ಸಂಶೋಧನೆಗಳು, ತಂತ್ರಜ್ಞಾನದ ಅವಿಷ್ಕಾರಗಳು ನಮ್ಮ ನೆಲದ ಪರಂಪರೆಯೊಂದಿಗೆ ಸಂಬಂಧವನ್ನು ಕಳೆದುಕೊಂಡ ಜನಾಂಗವೊಂದು ನಿರ್ಮಾಣಗೊಳ್ಳುವಂತೆ ಮಾಡಿದೆ. ಅಭಿವೃದ್ಧಿಶೀಲತೆಯ ನೆಪದಲ್ಲಿ ನಮಗೂ ನಮ್ಮ ಸುತ್ತಣ ಪರಿಸರಕ್ಕೂ ನಮಗೂ ಇದ್ದ ಕರುಳಬಳ್ಳಿಯ ಸಂಬಂಧ ಇದೀಗ ಕಳೆದುಹೋಗುತ್ತಿದೆ. ಬಹುಕಾಲದಿಂದಲೂ ನಾವು ಕಾಪಾಡಿಕೊಂಡು ಬಂದಿದ್ದ ಕೋಮುಸಾಮರಸ್ಯದ ಆಕೃತಿಗಳು ವಿಕಾರಗೊಳ್ಳುತ್ತಿವೆ. ಜಾತಿ, ಧರ್ಮ, ವರ್ಗ-ವರ್ಣ, ಲಿಂಗತಾರತಮ್ಯಗಳ ವಿಜೃಂಭಿಸುವಿಕೆ ಇನ್ನಿಲ್ಲದಂತೆ ತನ್ನ ಕಂಬಂಧಬಾಹುಗಳನ್ನು ಹೊಸ ಹಾದಿಗಳನ್ನರಿಸಿ ಚಾಚುತ್ತಲೇ ಇದೆ. ಇವೆಲ್ಲವುಗಳನ್ನು ಮೀರಿ ವಾಸ್ತವವನ್ನು ಮತ್ತು ತನ್ನ ಅಂತರಂಗವನ್ನು ನಿರಂತರವಾಗಿ ಪುಟಕ್ಕಿಕ್ಕಿ ʼಆನುಒಲಿದಂತೆ ಹಾಡʼಬೇಕಾದ ತುರ್ತು ಇಂದಿದೆ. ಕನ್ನಡ ಸಾಹಿತ್ಯ ಅದರಲ್ಲೂ ವಿಶೇಷವಾಗಿ ಕನ್ನಡ ಕಥಾಲೋಕ ಮತ್ತೆ ಮತ್ತೆ ಇಂತಹ ತೀರ ಅಗತ್ಯವಾದ, ಅನಿರ್ವಾವಾದ ಕಾರ್ಯವನ್ನು ಮಾಡುವಲ್ಲಿ ತನ್ನನ್ನು ನಿರಂತರವಾಗಿ ತೊಡಗಿಸಿಕೊಂಡು ಬಂದಿದೆ. ಮನುಷ್ಯ ಪ್ರಜ್ಞೆ ಮತ್ತು ಮಾನವೀಯ ಅಂತಃಕರುಣೆಯನ್ನು  ಸಹೃದಯರ ಎದೆಯಾಳದಲ್ಲಿ ಉದ್ದೀಪನಗೊಳಿಸಿ ಹೊಸ ದಿಕ್ಕುಗಳತ್ತ ಕೈ ಹಿಡಿದು ಮೆಲ್ಲನೆ ನಡೆಸುತ್ತ ಬಂದಿದೆ. ನಮ್ಮ ನಡುವಿನ ಸೃಜನಶೀಲ ಕಥೆಗಾರ, ಉತ್ಸಾಹಿ ತರುಣ ಶ್ರೀಧರ ಬನವಾಸಿ ತಮ್ಮ ಕಥಾ ಸಂಕಲನ ʼಜಯಂತಿಪುರದ ಕಥೆಗಳುʼ ಎಂಬ ಕಥಾಸಂಕಲನ ಪ್ರಕಟಿಸುವ ಮೂಲಕ ಜೀವದೊಲವಿನ ಬದುಕಿಗಾಗಿ ಮನಸ್ಸು ತೆರೆದುಕೊಳ್ಳುವಂತೆ ಮಾಡಿದ್ದಾರೆ. ನಮ್ಮ ಪರಂಪರೆಯ ಅಧಿಕೃತ ವಾರಸುದಾರಾಗಿ ನಿಂತಿರುವ ಗ್ರಾಮೀಣ ಪರಿಸರದ ಆಚಾರ-ವಿಚಾರಗಳನ್ನು, ಅಲ್ಲಿನ ಸಂಬಂಧಗಳನ್ನು ಅರ್ಥಪೂರ್ಣವಾಗಿ ಕಥೆಗಳ ಮೂಲಕ ಕಟ್ಟಿಕೊಡುವ ಮೂಲಕ ಜಯಂತಿಪುರದ ಜಗತ್ತನ್ನು ನಮ್ಮೆಲ್ಲರ ಊರಿನ ಲೋಕವನ್ನಾಗಿ ಕಟ್ಟಿಕೊಡುವ, ನಮ್ಮೆದುರು ತೆರೆದುಕೊಳ್ಳುವ ನಾಳಿನ ಬದುಕಿಗೆ ಉತ್ತಮವಾದ ನೆಲೆಯನ್ನೊದಗಿಸುವ  ಬಹುದೊಡ್ಡ ಪ್ರಯತ್ನ ಮಾಡಿದ್ದಾರೆ.

ಜಯಂತಿಪುರದ ಕತೆಗಳು ಕಥಾಸಂಕಲನದಲ್ಲಿರುವ ಹನ್ನೆರಡು ಕಥೆಗಳಲ್ಲಿ ಎರಡು ನಿಳ್ಗತೆಗಳು. ಇಲ್ಲಿನ ಕಥೆಗಳು ಮೇಲ್ನೋಟಕ್ಕೆ ಬಿಡಿ ಬಿಡಿಯಾಗಿ ತೋರಿದರೂ ಅವೆಲ್ಲವುಗಳು ಒಂದಕ್ಕೊಂದು ಪೂರಕವಾಗಿ ಬೆಸೆದುಕೊಂಡಿವೆ. ಒಂದಷ್ಟು ಕತೆಗಳು ವ್ಯಕ್ತಿನಿಷ್ಠತೆಯನ್ನು ಬಿಂಬಿಸಿದರೆ, ಇನ್ನು ಇನ್ನು ಕೆಲವುಗಳು ಸಮಷ್ಟಿ ಪ್ರಜ್ಞೆಯನ್ನು ತೆರೆದಿಡುತ್ತವೆ. ತಮ್ಮ ಬಾಲ್ಯದ ಅನುಭವಗಳಿಗೆ ಜೀವಂತಿಕೆಯನ್ನು ನೀಡುವಂತೆ ಜಯಂತಿಪುರದಲ್ಲಿ ನಿಂತು ಹತ್ತೂ ದಿಕ್ಕುಗಳಲ್ಲಿ ತಮ್ಮ ಕತೆಗಾರ ಶ್ರೀಧರ ಅಂತರ್ದೃಷಿಯನ್ನು ಹಾಯಿಸುತ್ತಾರೆ. ಪುರಾತನಕ್ಕೆ, ಇತಿಹಾಸಕ್ಕೆ ಬೆಸೆದುಕೊಂಡ ಪುಟ್ಟದೊಂದು ಊರಿನಲ್ಲಿಯ ವಿವಿಧ ಕೇರಿಗಳಲ್ಲಿ ಘಟಿಸುವ ಸಂಗತಿಗಳನ್ನೆಲ್ಲ ಮನೋಜ್ಞವಾಗಿ ಪಾತ್ರಗಳಲ್ಲಿ ಹಿಡಿದಿಡುತ್ತಾರೆ. ಅಂದಂದಿನ ಕಾಲಘಟ್ಟದ ಚಿತ್ರಣಗಳನ್ನು ಕಟ್ಟಿಕೊಡುತ್ತ ಇತಿಹಾಸ, ಪುರಾಣ, ಜಾನಪದ, ಬದುಕಿನ ನಂಬಿಕೆ ರೀತಿ-ರಿವಾಜು, ತವಕ-ತಲ್ಲಣಗಳನ್ನು, ಪ್ರೇಮ-ಕಾಮನೆಗಳು, ಸಲ್ಲದ ಮೂಢನಂಬಿಕೆಗಳಲ್ಲಿ ಸ್ಥಗಿತಗೊಂಡು ಪಾಚಿಗಟ್ಟಿರುವ ಸಂಕಟಮಯ ಸನ್ನಿವೇಶಗಳಲ್ಲಿ ಸಿಲುಕಿ ನಲುಗುವ ಅಸಹಾಯಕತೆ, ಉಳ್ಳವರ ಸ್ವಾರ್ಥಕೇಂದ್ರಿತ ದರ್ಪ, ಇಲ್ಲದವರ ಅಸಹಾಯಕತೆಗಳನ್ನು ಕತೆಯ ಮೂಲದ್ರವ್ಯಗಳನ್ನಾಗಿಸಿಕೊಳ್ಳುತ್ತಾರೆ.

ʼಎಲ್ಲಿಂದಲೋ ಬಂದವನುʼ ಕತೆಯಲ್ಲಿ ತೀರ ಅಪರಿಚಿತನಾಗಿದ್ದರೂ ಅವನಿಗೆ  ಆ ಕ್ಷಣಕ್ಕೆ ಆಶ್ರಯ ಕೊಟ್ಟು ಅವನನ್ನು ಆದರಿಸುವ ಕೃಷ್ಣಪ್ಪ ಅವನ ಕೈಕೊಳ ಬಿಡಿಸಿ, ಅನ್ನ ನೀಡಿ, ಪ್ರೀತ್ಯಾದರಗಳಿಂದ ಸಲಹುವ ಪರಿ ಮಾನವೀಯತೆಯ ಪ್ರತೀಕವಾಗಿ ನಿಲ್ಲುತ್ತದೆ. ಕಾನೂನಿನ ದೃಷ್ಟಿಯಲ್ಲಿ ಅಪರಾಧಿಯಾಗಿದ್ದ ವ್ಯಕ್ತಿಯೊಬ್ಬನಿಗೆ ಆಶ್ರಯ ನೀಡುವುದು ಅಕ್ಷ್ಯಮ್ಮ ಎನ್ನುವ ಸತ್ಯವಾದ ಸಂಗತಿಯಾಗಿದ್ದರೂ, ಅದಕ್ಕಿಂತ ಮಿಗಿಲು ಮಾನವೀಯತೆ. ಜೀವಪ್ರೀತಿಯ ಅಂತಃಕರುಣ ಕ್ರೂರಿಯೊಬ್ಬನ ಮನಸ್ಸನ್ನು ಪರಿವರ್ತಿಸಬಹುದು ಎಂಬ ನಿಲುವು ಊರಿನ ಗರಿಮೆಯಾಗಿ ನಿಲ್ಲುತ್ತದೆ. ʼಕಾಡುಪಾಲಾದ ಮಾರಿಬಲಿʼ ಕತೆಯು ಗ್ರಾಮೀಣ ಪರಿಸರದಲ್ಲಿ ಇಂದಿಗೂ ಜೀವಂತಿಕೆ ಪಡೆದಿರುವ ಅವೈಜ್ಞಾನಿಕ, ಅವೈಚಾರಿಕ ಸಂಗತಿಗಳ ಸುಳಿಯಲ್ಲಿ ಜನಸಾಮಾನ್ಯರ ಬದುಕು ಸಿಲುಕಿ ನಲುಗುತ್ತಿದ್ದರೂ, ಅದನ್ನು ಅತ್ಯಂತ ಸಹಜವಾಗಿ ಸ್ವೀಕರಿಸುವ ಪರಿಯನ್ನು ನಿಚ್ಚಳವಾಗಿ ತೆರೆದಿಟ್ಟು ಅಚ್ಚರಿಯನ್ನುಂಟು ಮಾಡುತ್ತದೆ. ಶೋಷಣೆಯ ಕರಾಳ ಮುಖಗಳನ್ನು ಗಟ್ಟಿಯಾಗಿ ಚಿತ್ರಿಸುತ್ತದೆ.  ಎಲ್ಲರ ಪ್ರಯತ್ನದ ನಡುವೆಯೂ ತಪ್ಪಿಸಿಕೊಳ್ಳುವ ಕೋಣ ಮನುಷ್ಯನ ಅಸಹಾಯಕತೆಯನ್ನು ತೋರ್ಪಡಿಸುವುದಲ್ಲದೇ ಪರೋಕ್ಷವಾಗಿ ಅಹಿಂಸೆಯ ನಿಲುವುಗಳು ಬದುಕಿಗೆ ಪೂರಕವೆನ್ನುವ ಅಂಶವನ್ನು ಸಾರುತ್ತದೆ. ʼಕುದುರೆ ಹೊಂಡʼದಲ್ಲಿ ಜನರ ಬದುಕಿಗೆ ಜೀವನಾಡಿಯಾಗಿದ್ದ ವರದಾ ನದಿಯೇ ಜೀವ ಕಸಿದುಕೊಳ್ಳುವ ಮಾರಿಯಾಗಿರುವುದು ದುರಂತವೇ ಸರಿ. ಇನ್ನುಳಿದ ಕತೆಗಳಲ್ಲಿನ ಮಾಲಿನಿ, ದೇವಿರಿ, ವತ್ಸಲ ಇತ್ಯಾದಿ ಮಹಿಳೆಯರನ್ನು ಯಾವ ದೈವ ನಂಬಿಕೆಗಳು ರಕ್ಷಿಸದೇ ಅಸಹಾಯಕತೆಯಿಂದ ಜೀವ ಕಳೆದುಕೊಳ್ಳುವುದು ಕೂಡ ಆಧುನಿಕತೆಯ ಕಾಲಘಟ್ಟದಲ್ಲಿಯೂ ಮಹಿಳೆಯರ ಮನಸ್ಸಿನ ದುರ್ಬಲತೆ, ಅದಕ್ಕೆ ಕಾರಣವಾದ ಪುರುಷ ಪ್ರಧಾನ ದೌರ್ಜನ್ಯಗಳಿಗೆ ಸಾಕ್ಷಿಯಾಗಿ ನಿಲ್ಲುತ್ತವೆ. ಇವೆಲ್ಲವುಗಳ ನಡುವೆಯೂ ಸೊನೆಗಾರ ಶೆಟ್ಟರ ಮಗಳು ಮಾಧವಿ ತನಗೆ ಒದಗಿಬಂದ ಸಂಕಟಗಳನ್ನು ಮೆಟ್ಟಿ ನಿಂತು ಬದುಕು ರೂಪಿಸಿಕೊಳ್ಳುವ ಗಟ್ಟಿತನ ಮೆಚ್ಚುಗೆ ಗಳಿಸುತ್ತದೆ.

ದೇಹವೆಂಬ ಮಡಿಕೆಯೊಳಗೆ, ಹುತ್ತದ ಅರಮನೆಯಲ್ಲಿ ವಿಷದ ಸುಂಟರಗಾಳಿಯಲ್ಲಿನ ಕತೆಯ ಪಾತ್ರಗಳು ಸೇರಿದಂತೆ  ಇತರ ಕೆಲವು ಪಾತ್ರಗಳು ಜಯಂತಿಪುರದಲ್ಲಿ ನಡೆಯುವ ನೈಜ ಘಟನೆಗಳಿಗೆ ದನಿಯಾಗುತ್ತವೆ. ಕರೋನಾ ಕಾಲಘಟ್ಟದ ಕಾಲದಲ್ಲಿ ಜಾತಿ ಜನಾಂಗಗಳ ಮಧ್ಯೆ ಸಾಮಾಜಿಕ ಸ್ತರಗಳಲ್ಲಿ ಹುಟ್ಟಿಕೊಂಡ ಕೆಲವು ವೈಪರೀತ್ಯಗಳನ್ನು, ಆಘಾತಗಳನ್ನು, ಬದುಕಿನ ವಿವಿಧ ಮಜಲುಗಳನ್ನು ನೆನಪಿಸುತ್ತವೆ.  ನಾನೆಲ್ಲವನ್ನೂ ಗೆದ್ದುಬಿಟ್ಟೆ ಎಂಬ ಮನುಷ್ಯನ ಅಹಂಮಿಕೆಗೆ ಕಡಿವಾಣವನ್ನು ಹಾಕಿ ಮನುಷ್ಯರನ್ನಷ್ಟೆ ಅಲ್ಲದೇ ದೇವರನ್ನೂ ಕೂಡ ಬಂಧಿಯಾಗಿಸಿದ ಮಹಾ ದುರಂತವನ್ನು ಕತೆ ವಿಶ್ಲೇಷಿಸುತ್ತದೆ. ಓದುಗರೊಂದಿಗೆ ಬದುಕಿನ ವಿವಿಧ ಆಯಾಮಗಳ ಕುರಿತು ಆಪ್ತವಾಗಿ ಮಾತನಾಡುತ್ತವೆ. ಕಷ್ಟಕರ ಸಂದರ್ಭಗಳಲ್ಲಿ ಮನುಷ್ಯ ಮನುಷ್ಯನ ನಡುವಿನ ಸಂಬಂಧಗಳನ್ನು ಮತ್ತೆ ಮತ್ತೆ ಒರೆಗಲ್ಲಿಗೆ ಹಚ್ಚಿ ಅವುಗಳ ವಾಸ್ತವಿಕತೆಯನ್ನು, ನೈಜತೆಯನ್ನು  ಪರೀಕ್ಷಿಸುತ್ತದೆ. ಮನುಷ್ಯ ತನ್ನ ಸಲ್ಲದ ಬಯಕೆಗಳಿಗೆ ಒಂದಷ್ಟು ಕಡಿವಾಣ ಹಾಕಿಕೊಳ್ಳುವುದರ ಮೂಲಕ ಬದುಕನ್ನು ಸಂತಸದ ಮೆರಗಿನಿಂದ ಸಿಂಗರಿಸಬಹುದಾಗಿದೆ ಎನ್ನುವುದನ್ನು ಒತ್ತಿ ಹೇಳುತ್ತವೆ. ಜಯಂತಿಪುರ ಅರೆಮಲೆನಾಡು ಪ್ರದೇಶವಾದ ಕಾರಣಕ್ಕೆ  ಮಳೆ ಸಂಭ್ರಮದ ಜೊತೆ ಅದರ ಅವಾಂತರಗಳನ್ನು, ಬರದ ಭೀಕರತೆಯನ್ನು ಎದುರಿಸಬೇಕಾದ ಅನಿವಾರ್ಯತೆ ಅಲ್ಲಿನ ಪ್ರದೇಶದದ್ದು. ಬರದ ಭೀಕರತೆ ಎದುರಾದಾಗ ಜನಸಾಮಾನ್ಯರು ಅನುಭವಿಸುವ ಸಂಕಟಗಳು, ಅತ್ಯಂತ ದಯನೀಯವಾಗಿರುತ್ತದೆ ಎಂಬುದು ಆಗಾಗ ಅನುಭವಕ್ಕೆ ಬರುವ ಸಂಗತಿ. ಇದಂತದೊಂದು ಸಂದಿಗ್ಧ ಸ್ಥಿತಿಯನ್ನು, ಕರಾಳಮುಖದ ಭೀಕರತೆಯನ್ನು  ʼಬರ ಮತ್ತು ಸತ್ತವರ ಸಮಾಧಿಗಳುʼ ಕತೆ ತೆರೆದಿಡುತ್ತದೆ. ಕತೆಯ ಕೆಲವು ಸನ್ನಿವೇಶಗಳು ಮೇಲ್ನೋಟಕ್ಕೆ ಅಂಧಾನುಕರಣೆ, ಅವೈಚಾರಿಕ  ಸಂಗತಿಗಳಂತೆ ತೋರಿದರೂ ಅಂದಿನ ಕಾಲಘಟ್ಟದ ಜನಜೀವನದ ರೀತಿ-ರೀವಾಜುಗಳನ್ನು ಪರಿಚಯಿಸುತ್ತವೆ. ಎಲ್ಲ ನಂಬಿಕೆಗಳು ಸಾರ್ವತ್ರೀಕವಲ್ಲ, ಅವುಗಳು ಕಾಲಕಾಲಕ್ಕೆ ತಮ್ಮ ಸ್ವರೂಪವನ್ನು ಬದಲಾಯಿಸಿಕೊಳ್ಳುತ್ತಲೇ ಇರುತ್ತವೆ ಎಂಬುದರ ಹಿನ್ನಲೆಯಲ್ಲಿ ನಾವು ಕತೆಯನ್ನು ನೋಡುವುದು ಉಚಿತವೆನಿಸುತ್ತದೆ.

ಇನ್ನುಳಿದ ಎಲ್ಲ ಕತೆಗಳು ಗ್ರಾಮೀಣ ಪರಿಸರದ ಎಲ್ಲ ತವಕ ತಲ್ಲಣಗಳಿಗೆ ದನಿಯಾಗಿ ನಿಲ್ಲುತ್ತವೆ. ದೇವಾಲಯದಲ್ಲಿನ ಕಳ್ಳತನ, ಕರೋನಾ ಸಂದರ್ಭದ ಕರುಣಾಜನಕ ಸ್ಥಿತಿ, ಮಾರಮ್ಮನ ಜಾತ್ರೆ, ಪರಿಸರದ ಸಮರ್ಥ ಚಿತ್ರಣ, ವಯಕ್ತಿಕ ಬದುಕಿನ ಕ್ರೂರತೆ, ಇವೆಲ್ಲವುಗಳನ್ನು ಕತೆಯ ಮೂಲದ್ರವ್ಯವನ್ನಾಗಿಸಿಕೊಂಡು ಅತ್ಯಂತ ಜಾಣ್ಮೆಯಿಂದ, ಕುಶಲತೆಯಿಂದ ಕತೆಗಳನ್ನು ಕಟ್ಟಿಕೊಟ್ಟಿದ್ದಾರೆ. ಕತೆಯ ಓದು ಜಯಂತಿಪುರ ಪರಿಸರದ ಸ್ವಾನುಭವ ಒದಗಿಸುತ್ತದೆ. ಕುತೂಹಲವನ್ನು ಕೆರಳಿಸುತ್ತವೆ. ಆಸಕ್ತಿಯನ್ನು ಉಳಿಸಿಕೊಂಡು ಹೋಗುತ್ತವೆ. ಮನುಷ್ಯನ ಬದುಕಿನಲ್ಲಿ ಹಾಸು ಹೊಕ್ಕಾಗಿರುವ ಅಧ್ಯಾತ್ಮಿ, ಧಾರ್ಮಿಕ, ಭೌಗೋಲಿಕ ಹಿನ್ನಲೆಯಲ್ಲಿ ಅಂದಿನ ಕಾಲಘಟ್ಟಕ್ಕೆ ಆಚರಣೆಗೆ ಬಂದ ಬದುಕಿನ ಎಲ್ಲ ಸ್ತರದ ನಡುವಳಿಕೆಗಳತ್ತ ಕೂಲಂಕುಷವಾದ  ನೋಟವನ್ನು ಬೀರುತ್ತವೆ. ಹಿಂದಣ ಹೆಜ್ಜೆ ಬೆಳಕಿನಲ್ಲಿ ವಾಸ್ತವವನ್ನು ಗ್ರಹಿಸುವ ಮಾತ್ರವಲ್ಲದೆ ಮುಂದಿನ ದಾರಿಯ ಪಯಣಕ್ಕೆ ಹೊಸ ಹೊಳಹು ಬೀರುತ್ತವೆ.  ನಮ್ಮ ನಂಬಿಕೆಗಳನ್ನು ನವೀಕರಿಸಿಕೊಳ್ಳಬೇಕಾದ ಅಗತ್ಯತೆಯನ್ನು ಒತ್ತಿ ಹೇಳುತ್ತವೆ. ಜೀವಪ್ರೀತಿ ಮತ್ತು ಮಾನವೀಯ ಅಂತಃಕುರಣದ ಸಂವೇದನೆಯ ಸ್ಪರ್ಶದಿಂದ ಹೃದಯಾಳಕ್ಕಿಳಿಯುತ್ತವೆ. ಆತ್ಮೀಯ ಸ್ನೇಹಿತ, ಸೃಜನಶೀಲ ಕಥೆಗಾರ ಶ್ರೀಧರ ಬನವಾಸಿ ಅವರ ಹೊಸ ರೀತಿಯ ಪ್ರಯೋಗ ನಿಜಕ್ಕೂ ಅಭಿನಂದನೀಯವೆನಿಸುತ್ತದೆ.