ಬದುಕಿನ ಹಾದಿಗೆ ಬೆಳಕು ಹಿಡಿವ ಹುಡುಗ..

ಕೊಪ್ಪಳದ ಭಾಗ್ಯನಗರದ ಹಿರಿಯ ಕವಿ ಅಕ್ಬರ್‌ ಕಾಲಿಮಿರ್ಚಿ ಸದಾ ಕಾಲ ಒಂದಿಲ್ಲೊಂದು ಸಾಹಿತ್ಯಿಕ ಕೃತಿಗಳನ್ನು ಪ್ರಟಿಸುವ ಮೂಲಕ ಓದುಗ ವಲಯವನ್ನು ತಮ್ಮತ್ತ ಸೆಳೆಯುವಂತೆ ಮಾಡುವಲ್ಲಿ ಸಫಲತೆ ಕಂಡವರು. ತಮ್ಮ ಬದುಕಿನ ನೂರೆಂಟು ತವಕ ತಲ್ಲಣಗಳ ನಡುವೆಯೂ ಸಾಹಿತ್ಯ ಚಟುವಟಿಕೆ, ಸಂಘಟನೆ, ಕನ್ನಡಪರ ಹೋರಾಟ ಇತ್ಯಾದಿಗಳಲ್ಲಿ ತಮ್ಮನ್ನು ಅನುದಿನವೂ ಸಂಗಡಿಸಿಕೊಂಡು ತಮ್ಮ  ಜೊತೆಗಿರುವವರನ್ನು ಕೂಡ ತಮ್ಮ ಜೊತೆಗೆ ಕೈ ಹಿಡಿದು ಕರೆದುಕೊಂಡು ಹೋಗುವ ಸ್ನೇಹಜೀವಿಯವರು. ಅವರ ಹೆಚ್ಚಿನ ಒಲವು ಯಾವಾಗಲೂ ಕಾವ್ಯದತ್ತ. ಅದನ್ನು ಸಾಕ್ಷೀರಿಸುವಂತೆ ಮತ್ತೊಂದು ಕವನ ಸಂಕಲನ ʼಬೆಳಕು ಹಿಡಿವ ಹುಡುಗʼ ಓದುಗರ ಕೈಗಿತ್ತಿದ್ದಾರೆ.

ನೈತಿಕ ಮೌಲ್ಯಗಳ ಅಧಃಪತನ, ನಾನು ನನ್ನದು ಎನ್ನುವ ಅಹಂ, ಐಷಾರಾಮಿ ಬದುಕಿನ   ಭ್ರಮೆಯಲ್ಲಿ ಇಂದಿನ ಬದುಕು ಬಂಧಿತವಾಗಿದೆ. ಅನ್ಯಾಯ, ಅನಾಚಾರ, ಅತ್ಯಾಚಾರ ಎಗ್ಗಿಲ್ಲದಂತೆ ತಮ್ಮ ವಿಕೃತ ರೂಪವನ್ನು ತೋರುತ್ತಿವೆ. ವಿಘಟನೆಯ ಆತಂಕದಲ್ಲಿ ತಲ್ಲಣಗೊಳ್ಳುತ್ತಿರುವ ನಮ್ಮ ಮುಂದೆ ಇಂದು ಅಸ್ವಸ್ಥ ಸನ್ನಿವೇಶ ನಿರ್ಮಾಣಗೊಂಡಿದೆ. ಪರಂಪರೆಯಿಂದ ಸಂವಾದವನ್ನು ತನ್ನೆದೆಯಲ್ಲಿ ಸತತವಾಗಿ ಕಾಪಿಟ್ಟುಕೊಳ್ಳುತ್ತ, ಹೊಸತನದತ್ತ ತನ್ನ ಬಾಹುಗಳನ್ನು ಚಾಚಬೇಕಾದ ಈ ಹೊತ್ತಿನಲ್ಲಿ ನಿಜವಾದ ಮನುಷ್ಯನ ತೀರ ಅಗತ್ಯವಿದೆ.  ಮಾನವೀಯ ಸಂವೇದಿ ಮೌಲ್ಯಗಳ ಅನ್ವೇಷಣೆಯಿಂದ ಮಾತ್ರವೇ ಬರಲಿರುವ ಭವಿತವ್ಯ ಹಾದಿಗೆ ಒಂದಷ್ಟು ಬೆಳಕು ತುಂಬುವ ಸಾಧ್ಯತೆ ಸಾಹಿತ್ಯ ನಿರಂತರವಾಗಿ ಮಾಡಿಕೊಂಡು ಬಂದಿದೆ. ಕಾವ್ಯ ಇನ್ನಷ್ಟು ಇಂತದೊಂದು ಬೆಳಕಿನ ಪ್ರಖರತೆಯನ್ನು ಹೆಚ್ಚಿಬಲ್ಲದು ಎಂಬುದು ಎಲ್ಲರೂ ಒಪ್ಪತಕ್ಕ ಮಾತು. ಅಕ್ಬರ್‌ ಕಾಲಿಮಿರ್ಚಿ ಅವರ ಬೆಳಕು ಹಿಡಿವ ಹುಡುಗ ಸದ್ಯದ ಸನ್ನೀವೇಶದಲ್ಲಿ ಗಮನ ಸೆಳೆಯುತ್ತದೆ.

ಪ್ರತಿದಿನವೂ

ನಾಳೆಗಾಗಿಯೇ ಇರುತ್ತದೆ

ಇಂದೇ ಎನ್ನುವುದು ಹಬ್ಬ

ನಾಳೆ ಎನ್ನುವುದು ಉತ್ಸಾಹ

ಅದಕಾಗಿ ಬೆಸೆದಿದೆ ಸಂಬಂಧ..

ಎನ್ನುವ ಅವರ ಮಾತು ʼನಿಂದ ಹೆಜ್ಜೆಯಲ್ಲಿʼ ಸಂಭ್ರಮಿಸುತ್ತ ಹೊಸತನಕ್ಕೆ ಹಂಬಲಿಸುವ ಇಚ್ಛೆಯನ್ನು ವ್ಯಕ್ತಪಡಿಸುತ್ತದೆ. ಅಕ್ಬರ್‌ ಅವರ ಕಾವ್ಯದ ಸೊಗಸನ್ನು ಅನಾರವಣಗೊಳಿಸುತ್ತದೆ. ಇಂದು ನಾಳೆಗಳ  ನಡುವಿನ ಇರಬೇಕಾದ ಕ್ಷೇಮತರ ಕಾಳಜಿಯನ್ನು ವ್ಯಕ್ತಪಡಿಸುತ್ತದೆ. ಬದುಕಿನ ಅಸ್ತಿತ್ವ ಶೋಧನೆಯತ್ತ ಇಣುಕಿ ನೋಡುತ್ತದೆ.

 ಕತ್ತಲಾದ ಜಗ ಕಂಡು ಬೆರಗಾದ ಹುಡುಗ

ಪುಟ್ಟ ಕೈ ಚಾಚಿ ಹಿಡಿಯ ಹೊರಟಿದ್ದಾನೆ ಬೆಳಕು

ಅವನಿಗೆ ಬೆಳಕು ಗೊತ್ತಿಲ್ಲ

ಆದರೂ ಬೇಕವನಿಗೆ..

ಬದುಕಿಗೆ ವಾಸ್ತವಿಕತೆಯ ಅರಿವು ಬಹುಮುಖ್ಯವೆನ್ನುವುದು ಸರಿಯಾದ ಸಂಗತಿಯಾಗಿದ್ದರೂ, ಕನಸು ಕಾಣುವಲ್ಲಿ, ಹೊಸದರ ಅನ್ವೇಷಣೆಯಲ್ಲಿ ಆಸಕ್ತಿ, ಎಲ್ಲವನ್ನು ಕೆಳದುಕೊಂಡ ಏಕಾಕಿತನದ ಭಯವನ್ನು ದೂರಕಟ್ಟಿ ನಮ್ಮ ನೆಲದೊಂದಿಗೆ ಸ್ಥಾಪಿತವಾಗಬೇಕಾದ ಸಂಬಂಧಗಳಲ್ಲಿ ನೆಮ್ಮದಿಯನ್ನು ಕಂಡುಕೊಳ್ಳುವುದು ಬಹುಮುಖ್ಯವಾಗಿ ಕವಿಗೆ ತೋರುತ್ತದೆ. ಅಂತೆಯೇ ಅವರು ಎಲ್ಲ ಸಂಕಟಗಳನ್ನು ಮೆಟ್ಟಿ ನಿಂತು ಬೆಳಕು ಹಿಡಿವ ಹುಡುಗನಾಗಿ  ಕಳೆದು ಹೋದ ಸಂಬಂಧಗಳನ್ನು ಹೊಸೆಯಲು ಹಂಬಲಿಸುತ್ತಾರೆ. ನೂರೆಂಟು ಕಷ್ಟಗಳ ನಡುವೆ ಕಂಗೆಟ್ಟ ದ್ರೌಪದಿ ಸೌಗಂಧಿಕಾ ಪುಷ್ಪದ ಕಂಪಿಗೆ ಮನಸೋತು, ಅದನ್ನು ಶೋಧಿಸಿ ತರಲು ಭೀಮನಿಗೆ ಒತ್ತಾಯಿಸುವಂತೆ, ಸಾವಿರಾರು ಸಂಕಟಗಳ ನಡುವೆಯೂ ಹೊಸ ಅರ್ಥವಂತಿಕೆಯನ್ನು ಅನ್ವೇಷಿಸುತ್ತಾರೆ. ಸಾಮಾಜಿಕ ಪ್ರಜ್ಞೆಯ ಹೆಸರಿನಲ್ಲಿ, ನಾಗರೀಕತೆಯ ನೆಪದಲ್ಲಿ ಅಭಿವ್ಯಕ್ತವಾಗುತ್ತಿರುವ ಇಂದಿನ ಪರದಾಟಗಳು, ಪ್ರತಿಕ್ರಿಯೆಗಳು, ಬಂಡವಾಳಷಾಹಿಗಳ ನಿಯಂತ್ರಣ, ಅಭಿರುಚಿಹೀನ ವಿಕಾರ ಸಂಸ್ಕೃತಿಗಳ ದಾಳಿಗಳಿಂದ  ಕಂಗೆಟ್ಟು ದಹಿಸುತ್ತಿರುವ ಇಂದಿನ ದಿನದ ಬದುಕಿಗೆ ಮತ್ತೆ ಮತ್ತೆ ಮಾನವೀಯತೆಯ ಮಳೆ ಸುರಿಯಬೇಕಿದೆ. ವೈಚಾರಿಕತೆಯ ನೆಲೆಯಲ್ಲಿ ಸ್ವತಂತ್ರವಾದ, ಸ್ವಾವಲಂಬಿಯಾದ, ಆತ್ಮಗೌರವವುಳ್ಳ ವ್ಯಕ್ತಿತ್ವದ ನಿರ್ಮಾಣಕ್ಕೆ ನಾಂದಿ ಹಾಡಬೇಕಾದ ತುರ್ತಿದೆ. ಸಾಹಿತ್ಯದ ಗಂಭೀರವಾದ ಅಧ್ಯಯನದಿಂದ ವಿಸ್ಮೃತಿಯಿಂದ ಹೊರಬರಬೇಕಿದೆ. ಅತ್ಯಂತ ವೈವಿಧ್ಯಮಯವಾದ ಪ್ರಾದೇಶಿಕತೆಯ ಸಮುಚ್ಛಯ ಭಾರತೀಯತೆಯ ಭಾವ ವಿಜೃಂಭಿಸಬೇಕಿದೆ. ಅಂತೆಯೇ ಕವಿ

 ದಹಿಸುವ ಅಗ್ನಿ ತಾಪಕೆ

ತೊಳಲಾಡುತಿದೆ ಜೀವ ಜಗತ್ತು

ಸುರಿಯಬಾರದೇ ಮೇಘರಾಜ

 ಎಂದು ಪ್ರಾರ್ಥಿಸುತ್ತಾರೆ. ತಾನೊಬ್ಬನೆ ಬಲಿಷ್ಟವಾಗಬೇಕು, ಬೆಳೆಯಬೇಕು, ಉಳಿಯಬೇಕು ಎಂಬ ಅಸಂಗತ ರಕ್ಕಸತ್ವದಲ್ಲಿ ಜಡ್ಡುಗಟ್ಟಿದ ಪಾಚಿ ಕಳೆದು ಹೋಗಿ ಬದುಕು ಜೀವದೊಲವಿನ ನಿರಾಳ ಬದುಕು ಚಲನಶೀಲಗೊಳ್ಳಬೇಕು. ಪಾವಿತ್ರ್ಯತೆಯನ್ನು ಪಡೆದುಕೊಳ್ಳಬೇಕು. ತಮಂಧದ ಕೇಡಿಗೆಳೆಸುವ ಧಾರ್ಷ್ಟ್ಯತನ ಕಳೆದುಹೋಗಿ ಬದುಕು ಘನವಾಗಬೇಕು ಎಂದು ಕವಿ ಹಂಬಲಿಸುವುದು ಸಮಂಜಸವೆನಿಸುತ್ತದೆ.

  ಇನ್ನುಳಿದ ಕೆಲವು ಕವಿತೆಗಳಲ್ಲಿ ಹಿಂಸಾಪ್ರವೃತ್ತಿಯನ್ನು ಪ್ರಚೋದಿಸುವ ಹುನ್ನಾರಗಳನ್ನು ಅಲ್ಲಗಳೆಯುವ, ತೀರ ಭ್ರಷ್ಟಗೊಂಡ ರಾಜಕೀಯ ಮುಖಗಳನ್ನು ವಿರೋಧಿಸುವ, ಗಂಡು ಹೆಣ್ಣಿನ ವಿಭಿನ್ನ ನೆಲೆಗಳನ್ನು ಸಂಯಮದಿಂದ ನೋಡುವ ಅವರ ನಿಲುವುಗಳು ತುಂಬ ಇಷ್ಟವೆನಿಸುತ್ತದೆ. ಬದುಕಿನ ನಶ್ವರದ ಬದುಕಿನ ವಾಸ್ತವಗಳನ್ನು ಅವುಗಳ ಜೊತೆಗೆ ಸಾಗುವ ಅನಿವಾರ್ಯತೆಯನ್ನು ಒಪ್ಪಿಕೊಳ್ಳುತ್ತ ಬೇರೆ ಬೇರೆ ಆಯಾಮಗಳನ್ನು ಒಳಗೊಳ್ಳುತ್ತಾ ಒಂದಷ್ಟು ವೈವಿಧ್ಯತೆಯೊಂದಿಗೆ ಶ್ರೇಯಸ್ಸಿಗೆ, ಸಮಾನತೆಯ ಕಾಳಜಿಗೆ ಹಂಬಲಿಸುತ್ತವೆ. ಬದುಕನ್ನು ಇರುವುದಕ್ಕಿಂತ ಇನ್ನಷ್ಟು ಸುಖಮಯವಾಗಿಸುವ, ಸುಂದರಗೊಳಿಸುವ ನೂರೆಂಟು ಸಂಗತಿಗಳನ್ನು ಅಪ್ಪಿಕೊಳ್ಳುವ ಹಾದಿಯಲ್ಲಿ ಬೆಳಕು ಹಿಡಿಯುವ ಹುಡುಗನ ಮೂಲಕ ಜಡಗೊಂಡ ಬದುಕಿನಲ್ಲಿ ಹೊಸ ವಸಂತ ಮೂಡಿಸುತ್ತಾರೆ.