ಕನ್ನಡ ಸಾಹಿತ್ಯ ತನ್ನ ಪರಂಪರೆಯ ಹಾದಿಯಲ್ಲಿ ಹತ್ತು ಹಲವು ಬಿಕ್ಕಟ್ಟುಗಳ ನಡುವೆ, ಸದಾ ನಿರ್ಜಾರ್ತೀಕರಣಕ್ಕೆ, ಶ್ರೇಣಿಕೃತ ಸಮಾಜದ ನೆಲೆಗಟ್ಟಿಗೆ ಒಂದಷ್ಟು ಪೆಟ್ಟು ನೀಡುತ್ತಲೇ, ಆರ್ಥಿಕ ಸಬಲತೆಯನ್ನು ಗಳಿಸುವ ಸಂಗತಿಗಳ ಸುತ್ತ ಸಂಘರ್ಷಿಸುತ್ತಲೇ ಮತ್ತೆ ಮತ್ತೆ ಮಾನವೀಯ ನೆಲೆಗಳನ್ನು ಹುಡುಕಾಡುವ ಮಹತ್ತರ ಕಾರ್ಯವನ್ನು ಮಾಡುತ್ತಲೇ ಬಂದಿದೆ. ಅನ್ಯ ಪರಂಪರೆಗಳನ್ನು ತನ್ನೊಳಗು ಮಾಡಿಕೊಳ್ಳುತ್ತ, ಅದರೊಂದಿಗೆ ಮುಖಾಮುಖಿಯಾಗುತ್ತ ವಿಶ್ವಾತ್ಮಕ ಅನುಭವಗಳಿಗೆ ಎದುರಾಗಿ ಮೇಲುಸ್ತರದ ಜನರು ತಮ್ಮ ಪರಂಪರೆಯ ಭದ್ರಕೋಟೆಯೊಳಗೆ, ಜಾತಿಯಿಂದ, ಶ್ರೀಮಂತಿಕೆಯಿಂದ, ಅಧಿಕಾರಗಳಿಂದ ತಮ್ಮನ್ನು ಎತ್ತರದಲ್ಲಿಯೇ ಇರಿಸಿಕೊಳ್ಳುವ ನೂರೆಂಟು ತಂತ್ರಗಳನ್ನು ಹೆಣೆಯುತ್ತಲಿದ್ದರೆ, ಕೆಳಸ್ತರದ ಜನರು ತಮ್ಮ ಪರಂಪರೆಯನ್ನು ಆಧುನಿಕ ಜಗತ್ತಿನ ವೈಚಾರಿಕತೆಗೆ ವಿಸ್ತರಿಸಿಕೊಂಡು ರೂಪಾಂತರಿಸುವ ಪ್ರಯತ್ನವನ್ನು ಮಾಡುತ್ತಲೇ ಇರುವುದು ಗಮನಾರ್ಹ ಸಂಗತಿಯಾಗಿದೆ. ಇವೆಲ್ಲ ಪ್ರಕ್ರಿಯೆಗಳು ಅಂಕುರಿಸಿದ್ದು ಇಂಗ್ಲೆಂಡಿನ ಮಾದರಿಯ ಆಧುನಿಕ ಶಿಕ್ಷಣ ಮೂಲಕ. ಇದು ಅಲ್ಲಿಯವರೆಗೂ ಏಕಮುಖವಾಗಿ ಪ್ರವಹಿಸುತ್ತಿದ್ದ ಪರಂಪರೆಯ ತೊರೆಗಳಿಗೆ ತಡೆಯೊಡ್ಡುವ ಮತ್ತು ಅದರ ದಿಕ್ಕನ್ನು ಒಂದಷ್ಟಾದರೂ ಬದಲಾಯಿಸುವ ಮಹತ್ತರ ಕಾರ್ಯವನ್ನು ಪ್ರಾರಂಭ ಮಾಡಿತು. ಪಾರತಂತ್ರದ ಅವಮಾನಕಾರಿಯಾದ ಅವ್ಯವಸ್ಥೆಯ ಅರಿವನ್ನು ಜಾಗೃತಗೊಳಿಸಿತು. ದೇಶಿ ಪರಂರಪರೆಯ ಬಗೆಗೆ ಹೊಸ ಎಚ್ಚರವನ್ನು ಹುಟ್ಟುಹಾಕಿತು. ಇದರಿಂದ ಕೇವಲ ಬ್ರಿಟೀಷರಿಂದ ಸ್ವಾತಂತ್ರ ಪಡೆಯುವುದು ಮಾತ್ರವಲ್ಲದೇ ಸಾಮಾಜಿಕ ಸುಧಾರಣೆಗಳಿಗೆ ನಾಂದಿಯಾಯಿತು. ಅದುವರೆಗೂ ವ್ಯಾಪಕವಾಗಿ ಜನಸಾಮಾನ್ಯರ ಬದುಕನ್ನು ಹಿಂಡಿ ಹಿಪ್ಪೆ ಮಾಡಿದ್ದ ಮೂಢನಂಬಿಕೆಗಳು, ಜಾತಿಯಾಧಾರಿತ ಶ್ರೇಣಿಕೃತ ಸಾಮಾಜಿಕ ವ್ಯವಸ್ಥೆ, ಲಿಂಗ ಮತ್ತು ವರ್ಣಾಧಾರಿತ ತಾರತಮ್ಯಗಳು, ಜಮೀನುದಾರಿ ಪದ್ಧತಿಯ ಕಬಂಧ ಬಾಹುಗಳ ಕರಾಳತೆ ಸೇರಿದಂತೆ ಹತ್ತು ಹಲವು ಸಂಕೀರ್ಣತೆಗಳಿಗೆ ಪರಿಹಾರೋಪಾಯಗಳನ್ನು ಕಂಡುಕೊಳ್ಳುವ ಹವಣಿಕೆ ಪ್ರಾರಂಭವಾಯಿತು. ಸಾಂಪ್ರದಾಯಿಕ ಊಳಿಗಮಾನ್ಯ ಪದ್ಧತಿಯಿಂದ ಸಾಮಾಜಿಕ ವ್ಯವಸ್ಥೆಯಲ್ಲಿ ತೀರ ತುಳಿತಕ್ಕೆ ಒಳಗಾಗಿದ್ದ ಕೆಳಸ್ತರದ ಜನತೆಗೆ ಹೊಸ ದಾರಿಯನ್ನು ಕಂಡುಕೊಳ್ಳುವ, ನರಕಸದೃಶ್ಯ ಬದುಕಿನಿಂದ ಪಾರಾಗಿ ಹೊರಬರುವುದಕ್ಕೆ ಆಧುನಿಕತೆಗೆ ನೆಲೆಗಟ್ಟು ಒದಗಿಸಿತು. ಇವೆಲ್ಲ ಹಿನ್ನೆಲೆಗಳಲ್ಲಿ ಮೇಲುವರ್ಗದ ಜನರ ಕೆಳವರ್ಗದ ಜನರನ್ನು ಆರ್ಥಿಕವಾಗಿ ಮಾತ್ರವಲ್ಲದೆ ಲೈಂಗಿಕವಾಗಿಯೂ ಶೋಷಿಸುವ, ಜಾತಿಯ ತರತಮಗಳನ್ನು ಪ್ರಬಲ ಅಸ್ತ್ರವನ್ನಾಗಿಸಿಕೊಂಡು ಹಿಂಸಿಸುವ, ಅವರ ಬದುಕನೆಲ್ಲ ಕಂಗೆಡಿಸುವ ನೂರೆಂಟು ಹುನ್ನಾರಗಳ ವಿಕಾರ ಮುಖಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸುವ, ಅವುಗಳನ್ನು ಬಯಲಿಗೆಳೆಯುವ, ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಹಾದಿ ಹುಡುಕುವ ಪ್ರಯತ್ನಗಳು ಕನ್ನಡ ಸಾಹಿತ್ಯ ಪರಪಂರೆಯಲ್ಲಿ ಪ್ರಾರಂಭವಾದವು. ಶಿವರಾಮ ಕಾರಂತರ ಚೋಮನ ದುಡಿ , ಕುವೆಂಪು ಅವರ ಕಾನೂರು ಹೆಗ್ಗಡತಿ, ಮಾಸ್ತಿ ಅವರ ಚಿಕವೀರ ರಾಜೇಂದ್ರ, ದೇವನೂರು ಮಹಾದೇವ ಅವರ ಕುಸುಮಬಾಲೆ, ಸೇರಿದಂತೆ ಹತ್ತು ಹಲವು ಕೃತಿಗಳು ಈ ಹಿನ್ನೆಲೆಯಲ್ಲಿ ಸ್ಮರಣೀಯವೆನಿಸುತ್ತವೆ. ಲೇಖಕರಾದ ಶಶಿಧರ ಹಾಲಾಡಿಯವರ ʼನದಿ ದಾಟಿ ಬಂದವರುʼ ಕಾದಂಬರಿ ಆಧುನಿಕತೆಯ ಆಗಮನದಿಂದ ಭಾರತದ ಗ್ರಾಮೀಣ ಪ್ರದೇಶದ ಸಾಮಾಜಿಕ ವ್ಯವಸ್ಥೆಯಲ್ಲಿನ ಆರ್ಥಿಕತೆಯ ಪರಂಪರೆಯ ಚಲನಶೀಲತೆಯ ಹಾದಿಯಲ್ಲಿ ಹೊಸದೊಂದು ಹೊಳಹು ತೋರುತ್ತದೆ.
ನಲವತ್ತನೆಯ ದಶಕದಿಂದ ಸುಮಾರು ಎಪ್ಪತ್ತನೆಯ ದಶಕದ ಕಾಲಘಟ್ಟದ ಮಲೆನಾಡಿನ ಮಡಿಲಿನಲ್ಲಿಯ ಬದುಕಿನ ಸಾಮಾಜಿಕ ಬದುಕಿನ ಸ್ಥಿತ್ಯಂತರಗಳನ್ನು ಮತ್ತು ಆರ್ಥಿಕ ಬದುಕಿನ ಏರುಪೇರುಗಳನ್ನು ತನ್ನ ಮೂಲದ್ರವ್ಯವಾಗಿರಿಸಿಕೊಂಡು ಕಾದಂಬರಿ ಬಹಳಷ್ಟು ವೈಶಿಷ್ಠ್ಯಪೂರ್ಣವಾಗಿ ಮೂಡಿಬಂದಿದೆ. ಮಲೆನಾಡಿನ ಕರ್ಜೆ ಎಂಬು ಗ್ರಾಮದ ಜಮೀನುದಾರ ನಾರಾಯಣ ಭಂಡಾರಿಯ ಬಿಗಿ ಹಿಡಿತದಿಂದ ತಪ್ಪಿಸಿಕೊಂಡು ಬಂದು ಕುಯೀರ ನಾಯಕ ರಾತ್ರಿಯೇ ಯಾರಿಗೂ ಏನನ್ನೂ ಹೇಳದೆ ಕೇಳದೆ ತಾನು ಅದುವರೆಗೂ ನೆಲೆಸಿದ್ದ ಊರು ಬಿಟ್ಟು ನದಿಯೊಂದನ್ನು ದಾಟಿ ನೆಲ್ಯಾಡಿ ಎಂಬ ಊರಿಗೆ ವಲಸೆ ಬರುತ್ತಾನೆ. ವೆಂಕಣ್ಣಯ್ಯ ಮತ್ತು ಸಾಕಮ್ಮನ ಕುಟುಂಬದ ಆಶ್ರಯ ಪಡೆದು ಹೊಸ ಬದುಕನ್ನು ಕಟ್ಟಿಕೊಳ್ಳುವುದರ ಮೂಲಕ ಕಥೆ ಪ್ರಾರಂಭವಾಗುತ್ತದೆ. ವೆಂಕಣ್ಣಯ್ಯ ಸರಳ ಸಾತ್ವಿಕ ಸ್ವಭಾವದ ಜಮೀನಾದರ. ಆಗಿನ ಸ್ವಾತಂತ್ರ ಹೋರಾಟದ ಕಾಲಘಟ್ಟದಲ್ಲಿ ಗಾಂಧಿಜೀಯ ಚಿಂತನೆಗಳಿಂದ ತುಂಬ ಪ್ರಭಾವಿತನಾದ ವ್ಯಕ್ತಿತ್ವ ಹೊಂದಿದ ಮನುಷ್ಯ. ಕುಯೀರು ನಾಯಕ ಬಡತನವನ್ನು ಹೊದ್ದುಕೊಂಡು ಹುಟ್ಟಿದ ಗೇಣಿದಾರರ ಕುಟುಂಬಗಳಿಗೆ ತನ್ನ ಬದುಕನ್ನು ಒತ್ತೆಇಟ್ಟು ಬದುಕು ಕಟ್ಟಿಕೊಂಡವ. ವೆಂಕಣ್ಣಯ್ಯನ ಆಶ್ರಯ ಸಿಕ್ಕ ನಂತರ ವೆಂಕಣ್ಣಯ್ಯನ ಕುಟುಂಬಗಳ ನಡುವಿನ ಬದುಕನ್ನು ಕಾಲಕ್ಕೆ ತಕ್ಕಂತೆ ವಿಭಿನ್ನ ಪಾತಳಿಗಳಲ್ಲಿ ಚಲಿಸುವ ಕ್ರಮಗಳನ್ನು ಮನೋಜ್ಞವಾಗಿ ಕಾದಂಬರಿ ಕಟ್ಟಿಕೊಡುತ್ತದೆ. ಸ್ವಾತಂತ್ರ ಪೂರ್ವದ ಮತ್ತು ಸ್ವಾತಂತ್ರೋತ್ತರ ಕಾಲಘಟ್ಟದ ಪಲ್ಲಟಗಳ ನೈಜ ಸ್ಥಿತಿಯನ್ನು ವಿಶೇಷವಾಗಿ ಮಲೆನಾಡಿಗೆ ಸಂಬಂಧಿಸಿದಂತೆ ಕಾದಂಬರಿ ಅತ್ಯಂತ ಆಪ್ತವಾಗಿ, ಹೃದಯಸ್ಪರ್ಶಿಯಾಗಿ ತೆರೆದುಕೊಳ್ಳುತ್ತಾ ಹೋಗುತ್ತದೆ. ಗ್ರಾಮೀಣ ಪ್ರದೇಶದ ಜನಜೀವನವನ್ನು, ಸಾಮಾಜಿಕ ಬದುಕಿನ ಮತ್ತು ಆರ್ಥಿಕ ಸ್ಥಿತಿ-ಗತಿಗಳ ನೈಜ ಚಿತ್ರಣವನ್ನು ಪರಿಣಾಮಕಾರಿಯಾಗಿ ಬಿಂಬಿಸುತ್ತದೆ. ಎರಡು ಕುಟುಂಬಗಳನ್ನು ಸಾಂಕೇತಿಕವಾಗಿ ಬಳಸಿಕೊಂಡು ಸಮಾಜದಲ್ಲಿ ಅಂದು ಇದ್ದ ಪ್ರೀತಿ-ವಿಶ್ವಾಸ, ಸಹಾನುಭೂತಿ ಎಲ್ಲಕ್ಕಿಂತ ಮಿಗಿಲಾಗಿ ನಿಯತ್ತು, ಬದ್ಧತೆಗಳ ಸುತ್ತ ಜನಸಾಮಾನ್ಯರ ಮಾತ್ರವಲ್ಲದೇ, ಉಳ್ಳವರ ದರ್ಪ, ಅಮಾನವೀಯ ನಡೆಗಳು, ಇತ್ಯಾದಿಗಳ ನೈಜತೆಯನ್ನು ಸಮರ್ಥವಾಗಿ ಬಿಂಬಿಸುತ್ತದೆ. ಬಹುಮುಖ್ಯವಾಗಿ ಕುಯೀರು ನಾಯಕನಂತ ಕೆಳಸ್ತರದ ಜನರ ಬದುಕಿನ ಅಸಹಾಯಕತೆ, ನಾರಾಯಣ ಭಂಡಾರಿಯಯಂತಹ ಉಳ್ಳವರ ದರ್ಪ, ಸ್ವಾರ್ಥದ ಮನೋಧೋರಣೆಗಳು, ಲೈಂಗಿಕ ಶೋಷಣೆಯ ಹುನ್ನಾರಗಳು, ಆದರ್ಶದ ಬದುಕನ್ನು ರೂಢಿಸಿಕೊಂಡ ವೆಂಕಣ್ಣಯ್ಯನಂತವರ ಮಾನವೀಯ ಮುಖಗಳು, ಇಂದಿಗೂ ಪ್ರಸ್ತುತವೆನಿಸುತ್ತವೆ. ಗೇಣಿದಾರರೆ ಭೂಮಾಲಿಕರಾಗುವ ಅವಸ್ಥಾಂತರವನ್ನು ವಸ್ತುನಿಷ್ಠವಾಗಿ ಚಿತ್ರಿಸುವಲ್ಲಿ ಕಾದಂಬರಿ ಯಶಸ್ಸು ಕಾಣುತ್ತದೆ.
ತಲೆತಲಾಂತರಿದಂದಲೂ ಅಧಿಕಾರವನ್ನು ಅನುಭವಿಸುತ್ತ, ಕೆಳಸ್ತರದ ಜನರನ್ನು ಶೋಷಿಸತ್ತ, ಅವರ ಪರಿಶ್ರಮ, ನಿಯತ್ತು, ದಣಿವರಿಯದ ದುಡಿಮೆಯನ್ನು ತಮ್ಮ ಮೆಟ್ಟಿಲಾಗಿಸಿಕೊಂಡು ಸ್ವರ್ಗದ ಬದುಕನ್ನು ಕಟ್ಟಿಕೊಂಡ ಮೇಲುಸ್ತರದ ಜನರಿಂದ ಅಧಿಕಾರ ಮತ್ತು ಹಕ್ಕು ಬದಲಾವಣೆಯ ಕಾನೂನು ಜಾರಿ ಮತ್ತು ಅದರ ನಂತರದ ಬದಲಾವಣೆಗಳ ಕುರಿತು ಲೇಖಕರು ಕಥಾವಸ್ತುವಿನ ಪ್ರಮುಖದ ಶಕ್ತಿಯಾಗಿಸಿಕೊಂಡಿರುವುದು ಕಾದಂಬರಿಯ ಮತ್ತೊಂದು ಪ್ರಮುಖ ಅಂಶವಾಗಿದೆ ಎಂಬುದು ಗಮನೀಯ ಸಂಗತಿಯಾಗಿದೆ. ನಮ್ಮ ನೆಲದಲ್ಲಿ ಬಹಳಷ್ಟು ಕಾಲದಿಂದಲೂ ನಡೆದುಕೊಂಡು ಬಂದಿದ್ದ ಇಂದಿಗೂ ಅಲ್ಲಲ್ಲಿ ಕಾಣಸಿಗುವ ಅನಿಷ್ಟ ಪದ್ಧತಿಗಳ ಗಡಿಗಳನ್ನು ದಾಟುವ ಮೂಲಕ ಸಾಮಾಜಿಕ ಪರಿವರ್ತನೆಗೆ ಸಾಕ್ಷಿಯಾಗಲಿ ನಿಲ್ಲುತ್ತವೆ. ಸ್ವಾತಂತ್ರ್ಯ ಪಡೆಯುವುದು ಎಂದರೆ ಕೇವಲ ರಾಜಕೀಯವಾದ ಸ್ವಾತಂತ್ರ್ಯವಲ್ಲ. ಅದು ಮನುಷ್ಯರ ನಡುವೆ ಜಾತಿ ಮತ ಪಂಥ ಗಡಿಗಳಾಚೆಗೂ ಮೀರಿದ ಸಮತೆಯ ಬದುಕನ್ನು ಕಟ್ಟಿಕೊಳ್ಳುವುದು ಎಂಬುದನ್ನು ಕಾದಂಬರಿ ಅರ್ಥಪೂರ್ಣವಾಗಿ ನಿರೂಪಿಸುತ್ತದೆ. ನಮ್ಮ ದೇಶದ ಸಾಮಾಜಿಕ ಮತ್ತು ರಾಜಕೀಯ ಇತಿಹಾಸಗಳ ಮಾತ್ರವಲ್ಲದೇ ಸಮಕಾಲೀನ ಬದುಕಿನ ರೀತಿ-ನೀತಿಗಳ ಮೇಲೆ ಬೆಳಕು ಚೆಲ್ಲುತ್ತದೆ.
ಲೇಖಕರು ಯಾವುದೇ ಬಗೆಯ ಸೀಮಿತಗಳಲ್ಲಿ ಕಟ್ಟಿಕೊಳ್ಳದೇ ಒಟ್ಟು ಬದುಕಿಗೆ ಸಹಜವಾಗಿ ಮುಖಾಮುಖಯಾಗುತ್ತ ಕಟ್ಟುವ ಕೌಶಲ್ಯ ನಿಜಕ್ಕೂ ಅಚ್ಚರಿಗೆ ಕಾರಣವಾಗುತ್ತದೆ. ʼನದಿ ದಾಟುವುದುʼ ಎಂದರೆ ಅದು ಭೌಗೋಳಿಕವಾಗಿ ಮಾತ್ರವಲ್ಲದೆ, ಒಂದು ಕಾಲಘಟ್ಟದಿಂದ ಇನ್ನೊಂದು ಕಾಲಘಟ್ಟದ ನಡುವಿನ ಚಲನೆಯಾಗಿ ತೋರುತ್ತದೆ. ಶೋಷಿತ, ಅಲಕ್ಷಿತ, ನಿರ್ಗತಿಕ ಕುಟುಂಬಗಳು ತಮ್ಮ ಪರಿಶ್ರಮದಿಂದ, ಪ್ರಬಲ ಇಚ್ಛಾಶಕ್ತಿಯಿಂದ, ಕಷ್ಟಸಹಿಸ್ಣುತೆಯಿಂದ, ವಿಶೇಷವಾಗಿ ಅಕ್ಷರಗಳ ಅರಿವಿನಿಂದ ಸ್ವಾಭಿಮಾನದ ದಡಸೇರುವ ರೂಪಕವಾಗಿ ಕಂಡು ಬರುತ್ತದೆ. ಕಾದಂಬರಿಯ ಭಾಷೆ, ನಿರೂಪಣಾ ಶೈಲಿ ಮಲೆನಾಡಿನ ರಮ್ಯ ಪರಿಸರದಲ್ಲಿನ ಗಿಡ, ಮರ, ಬಳ್ಳಿಗಳ ಅಪರೂಪದ ಸೌಂದರ್ಯವನ್ನು ಸವಿಯುವಂತೆ ಮಾಡುತ್ತದೆ. ಹಲಸಿನ ಹಪ್ಪಳ ತಿನ್ನುವುದು, ಉಪ್ಪಿನಕಾಯಿ ನೆಚ್ಚಿಕೊಳ್ಳುವುದು, ಗಂಜಿ ಕಾಯಿಸುವುದು, ಬೆಲ್ಲದ ನೀರು ನೀಡಿ ಉಪಚರಿಸುವುದು, ದೂರದಿಂದ ಬಂದ ವೆಂಕಣ್ಣಯ್ಯನವರಿಗೆ ತಮ್ಮ ಬಳಕೆಗೆ ಮಾತ್ರ ಉಳಿಸಿಕೊಂಡ ಬೆಲ್ಲದಲ್ಲಿಯೇ ಒಂದಷ್ಟನ್ನು ಗೋವಿಂದರಾಯರು ಕೊಡುವುದು ಇಂತಹ ಅನೇಕ ಸನ್ನಿವೇಶಗಳು ಕರಾವಳಿಯ ಒಳಭಾಗದಲ್ಲಿ ಬದುಕಿನ ನೈಜತೆಯನ್ನು ಅನಾರವಣಗೊಳಿಸುತ್ತವೆ, ಮಾತ್ರವಲ್ಲದೇ ಅಲ್ಲಿನ ಪರಿಸರದೊಂದಿಗೆ ಮುಖಾಮುಖಿಯಾಗಿಸುತ್ತವೆ ಎಲ್ಲಿಯೂ ಭಾರವೆನಿಸದೇ ಇರುವ ಅಧ್ಯಾಯಗಳಲ್ಲಿ ಗ್ರಹಣದ ವಿಷಯದ ಪ್ರಸ್ತಾಪ, ಸ್ವಾತಂತ್ರೋತ್ಸವದ ಆಚರಣೆಯ ಸನ್ನಿವೇಶಗಳು, ಮತದಾನ ಸನ್ನಿವೇಶಗಳು, ಸಿದ್ಧನಾಯಕ ಮತ್ತು ಕುಯೀರ ನಡತೆಗಳು ಓದುಗನ ಮನಸ್ಸನ್ನು ತನ್ನಲ್ಲಿರಿಸಿಕೊಂಡು ಸರಾಗ ಓದಿಗೆ ಇಂಬು ನೀಡುತ್ತವೆ. ಬಲ್ಲಾರಳ ನಾಯಕತ್ವ, ಸಾಕಮ್ಮನ ಭೂಮಿಯನ್ನು ತಮ್ಮ ಕುಟುಂಬಕ್ಕೆ ಉಳಿಸಿಕೊಳ್ಳುವ ಎಡೆಬಿಡದ ಪ್ರಯತ್ನ ಅಂದಿನ ಬದುಕಿನ ನೈಜತೆಯನ್ನು ಬಿಚ್ಚಿಡುತ್ತವೆ. ಪಾತ್ರಗಳ ನಿರ್ವಹಣೆಯ ವಿವೇಕಪೂರ್ಣ ಅನುಸಂಧಾನದಿಂದ ಹೊಸ ಸಮನ್ವಯದ ಸಾಧ್ಯತೆಗಳನ್ನು ಪರಿಚಯಿಸುತ್ತವೆ. ಹೊಸ ಜಗತ್ತಿನ ನಿರ್ಮಾಣದ ಹಾದಿಯಲ್ಲಿ ಆಶಾದಾಯಕ ಹೆಜ್ಜೆಗಳನ್ನಿರಿಸುವಂತೆ ಪ್ರೇರೆಪಿಸುತ್ತದೆ. ಹಮ್ಮು-ಬಿಮ್ಮುಗಳನ್ನು ಮುರಿದು ಮಾನವೀಯತೆ, ಪ್ರೀತಿ, ಸಮಾನತೆಗಳನ್ನು ವಿಕೃತಗೊಳ್ಳದ ಹಾಗೆ ನೋಡಿಕೊಳ್ಳುತ್ತದೆ.
ಇಂದಿನ ಕಾಲಘಟ್ಟದ ಜ್ವಲಂತ ಸಮಸ್ಯೆಗಳಾದ ನಗರೀಕರಣದ ತಲ್ಲಣಗಳು, ಪರಿಸರದ ಮೇಲಿನ ಅನಾಚಾರಗಳು, ರಾಜಕೀಯದ ಭ್ರಷ್ಟತೆ, ಹೊಸ ಹೊಸ ಮೂಢನಂಬಿಕೆಗಳಲ್ಲಿ ಜಡಗೊಳ್ಳುತ್ತಿರುವ ಬದುಕಿನ ದ್ವಂದ್ವ, ಯಾರದೋ ಸ್ವಾರ್ಥದ ಕಾರಣಕ್ಕಾಗಿ, ಯುದ್ಧದ ಉನ್ಮಾದಕ್ಕಾಗಿ ಜಗತ್ತಿನಲ್ಲಿನ ಮನುಷ್ಯರಿಗೆ ಒದಗಿದ ಸಂಕಟಮಯ ಸನ್ನಿವೇಶಗಳು, ಮಾನವೀಯತೆ ಸೋಲಿನ ಸನ್ನಿವೇಶಗಳಿಗೆ ಲೇಖಕ ಶಶಿಧರ ಹಾಲಾಡಿ ತಣ್ಣಗೆ ವಿರೋಧ ವ್ಯಕ್ತಪಡಿಸುತ್ತಾರೆ. ಜೀತ ಪದ್ಧತಿಯಿಂದ ಮಾಲಿಕತ್ವದ ಕಡೆಗೆ, ಅಸಮಾನತೆಯಿಂದ ಸಮಾನತೆಯ ಕಡೆಗೆ ಮೌನದಿಂದ ಮೆಲ್ಲನೆ ಪ್ರತಿಭಟನೆಯ ಕಡೆಗೆ ನೊಂದವರ ಬದುಕನ್ನು ಕೈಹಿಡಿದು ಕೊಂಡೊಯ್ಯುತ್ತಾರೆ. ನೂರೆಂಟು ಸಿದ್ಧಾಂತಗಳ ಮಂಡನೆಯ ಹವ್ಯಾಸಕ್ಕೆ ದೂರ ನಿಂತು ಸಹಜ ಬದುಕಿನ ಬದುಕಿಗೆ ಆಸರೆಯದವರ ಮಾತ್ರವಲ್ಲದೇ ಅವರ ನೆರಳಿನಲ್ಲಿ ಬದುಕುವವರ ನೂರೆಂಟು ತಲ್ಲಣ, ತವಕ, ಏರುಪೇರುಗಳನ್ನು . ಅಬ್ಬರವಿಲ್ಲದ, ಒಂದು ಹದದಲ್ಲಿ ರೂಪಗೊಂಡ ಪಾತ್ರಗಳು, ತೀರ ಸಹಜವೆನ್ನುವಂತೆ ಕಟ್ಟಿಕೊಡುವ, ಒಳನೋಟಗಳನ್ನು ಬೀರುವ ಅವರ ಕಥಾನಕ ಶೈಲಿ ತುಂಬ ಗಮನಸೆಳೆಯುತ್ತದೆ. ಶಶಿಧರ ಹಾಲಾಡಿ ಅವರ ಅಧ್ಯಯನಶೀಲತೆ, ವಿಮರ್ಶಾತ್ಮಕ ಒಳನೋಟಗಳು, ಹೃದಯ ಬಿಚ್ಚಿ ಮಾತನಾಡುವ ಪ್ರಾಮಾಣಿಕತೆ ಮೆಚ್ಚುಗೆ ಗಳಿಸುತ್ತದೆ. ಬದುಕನ್ನು ಪ್ರೀತಿ ಮತ್ತು ಗೌರವಾದರಗಳಿಂದ ಒಪ್ಪಿಕೊಳ್ಳುವ, ಅದಕ್ಕೊಂದಿಷ್ಟು ಘನತೆಯ ಗರಿಮೂಡಿಸುವ ಎಲ್ಲ ಪ್ರಜ್ಞಾವಂತರು ಮಾಡಬೇಕಿರುವ ಒಂದು ಮಹತ್ತರವಾದ ಕೆಲಸವನ್ನು ಶಶಿಧರ ಹಾಲಾಡಿಯಾವರು ನದಿ ದಾಟಿ ಬಂದವರು ಕಾದಂಬರಿಯನ್ನು ಕನ್ನಡ ಸಾರಸ್ವತ ಲೋಕಕ್ಕೆ ಕಟ್ಟಿಕೊಡುವ ಮೂಲಕ ಮಾಡಿರುವುದು ಅಭಿನಂದನಾರ್ಹವಾಗಿದೆ. ಸಹೃದಯಿ ಓದುಗನಾಗಿ ಅವರಿಗೆ ನಾನು ಶುಭ ಹಾರೈಸುತ್ತೇನೆ.
ಪ್ರತಿಕ್ರಿಯೆ (1)
ಧನ್ಯವಾದಗಳು