ಜಾನಪದ ಗೀತೆಗಳನ್ನು ಕೇಳಿದಷ್ಟು ಮತ್ತೆ ಕೇಳ ಬೇಕು ಎನ್ನುವ ಆಸೆ ಹೆಚ್ಚಾಗುತ್ತಾ ಹೋಗುತ್ತದೆ. ಅಂತಹ ಒಂದು ಗೀತೆ ಇಲ್ಲಿದೆ. ಓದಿ…

ಹೋಗಿ ಬಾ ತಂಗಿ 

ಹೋಗಿ ಬಾ ತಂಗಿ ಮನಿಯ ಸಿರಿಗಂಗಿ

ಇನ್ನು ಅವರ ಮನಿಯ ಪ್ರೀತಿ

ಕಡಲುಕ್ಕಿ ಮೊರೆಯುತದ ಸೊಕ್ಕಿ

ಹೋಗಿ ಅದಕ ಬೆರಿಯ

ಕರಿಯ ಬಂದಾನ ಕಿರಿಯ ಮೈದುನ

ಅರಿತು ಆರತಿ ಹವಣ

ಗಿರಿಯ ಮಲ್ಲಯ್ಯನ ತೇರ ಪರಿ

ಬಂಡಿ ಮರೆಸುತ ತಂದಾನ

ಗರಿಯ ರಸಕಬ್ಬು ಸಿಂಗರದ ಹಬ್ಬ

ಮರಕ ಕಟ್ಟಿದಾನ ಚಂಡು ಹೂಮಾಲಿ

ದಂಡಿ-ತೊಂಡಿಲು ಜೋಲು ಬಿಟ್ಟಿದಾನ

ಹಿರಿಯೇ ಹೊಳಿನಾಡು ಅರಸಾತೈತ

ನೋಡ ಕೊರಳಿನ ಗೆಜ್ಜೆ ಸರ

ಕಿರಿಯ ಗಂಟಿ, ಕಿಣಕಿಣಸತಾವ

ಅವು ಅಲುಗಿಸಿದಾಗ ಸರ

ಹರಳು ಕೂಡಿಸಿದ ಹಣೆಯ ಪಟ್ಟಿ

ಕೊಂಬಣಸು ಮಿರಗುತಾವ

ಜರದ ಕುಸುರ ಹೂಬಳ್ಳಿ 

ತಗೆದ ಮೈಜೂಲಿ ಮಿಂಚತಾವ

ಎತ್ತು ಹೂಂಕರಿಸಿ ನೀನು

ತಮ್ಮರಸಿ ಅಂತೆ ತಿಳಿಸತಾವ

ಮೂಕ ಜೀವಕ್ಕು - ಪ್ರೀತಿ

ಎದಿಹೊಕ್ಕು ನಿನ್ನ ನೋಡತಾವ

ಎತ್ತಿಗಳದೀಂಗ ಚಿತ್ತ ಇರುವಾಗ

ನೆನೆದಾಂಗೇನೆ ಹೊತ್ತು ಕಳಿಯೊದೆ

ಕುತ್ತು ಎನಿಸಿ ಮನಸ್ಸಿತ್ತ ಕಳಿವೇನ

ಇಂದ ಮದುಮಗಳು ಬಂದ್ಲು

ಅಂತ ಅತ್ತೆ - ಮಾವಾ ನೋಡುವ ದಾರಿ

ನೀ ಬರಸು ದಾರಿ

ನಿಂದು ಒಳ್ಳೆದೈವಾ

ಹೋಗು ನೀನೀಗ ಹತ್ತು ಬಂಡ್ಯಾಗ

ನಿನ್ನ ಮನೆಗೆ ಸಾಗ, ಪ್ರೀತಿ ನುಡಿ ಬಲ್ಲಿ

ನೀತಿ ನಡಿ ಬಲ್ಲಿ ಎಲ್ಲ ವಶವು ನಿನಗ

ತಂಗಿ ಭೀತಿ ಬಿಟ್ಟು ಹೋಗ

***

(ಜಾನಪದ ಗೀತೆಗಳು ಸಂಗ್ರಹಿತ)