ಜಾನಪದ ಗೀತೆಗಳು ಮಾಲಿಕೆಯಲ್ಲಿ ಈ ವಾರ ಎರಡು ಜನಪ್ರಿಯ ಗೀತೆಗಳನ್ನು ಪ್ರಕಟ ಮಾಡಲಿದ್ದೇವೆ.
ಕುಂತ್ರೆ ನಿಂತ್ರೆ ಅವನ್ದೆ ಧ್ಯಾನ
ಕುಂತ್ರೆ ನಿಂತ್ರೆ ಅವನ್ದೆ ಧ್ಯಾನ
ಜೀವಕ್ಕಿಲ್ರಿ ಸಮಾಧಾನ
ಅವ್ನಿಗೆ ಎಷ್ಟ್ರಿ ಬಿಗುಮಾನ
ಅವ್ನೆ ನನ್ನ ಗೆಣೆಕಾರ ॥
ಇಂದ್ರ ಲೋಕದಾಗಿಲ್ಲಕಣ್ರಿ
ಚಂದ್ರ ಲೋಕದಾಗಿಲ್ಲಕಣ್ರಿ
ಮೂರು ಲೋಕದಾಗಿಲ್ಲಕಣ್ರಿ
ಅವ್ನೆ ನನ್ನ ಗೆಣೆಕಾರ ॥
ನೋಟದಾಗ್ ಅವ್ನು ಸುಂದ್ರ ಕಣ್ರಿ
ಕೇರಿಗೆಲ್ಲಾ ಒಬ್ನೆ ಕಣ್ರಿ
ಜಾತ್ರೇಲ್ ಅವನ ಕಂಡೆ ಕಣ್ರಿ
ಛತ್ರಿ ಮುಚ್ಚಿನಿಂತ ಕಣ್ರಿ
ಪಕ್ಕಕ್ ಬಂದು ನಿಂತ ಕಣ್ರಿ
ಅವ್ನೆ ನನ್ನ ಗೆಣೆಕಾರ ॥
ಉಣ್ಣೋದ್ರಲ್ಲೂ ಕಡಿಮೆ ಇಲ್ರಿ
ಅವ್ನೆ ನನ್ನ ಗೆಣೆಕಾರ ॥
ಮಲ್ಲೆಹೂವ ತಂದ ಕಣ್ರಿ
ತುರುಬಿನಲ್ಲಿ ಇಟ್ಟ ಕಣ್ರಿ
ಮೈಯೆಲ್ಲ ಜುಂ ಜುಂ ಕಣ್ರಿ
ಅವ್ನೆ ನನ್ನ ಗೆಣೆಕಾರ ॥
ಚಾವಡೀಗ್ ಬಂದು ನಿಂತ ಕಣ್ರಿ
ತಾಳೀ ಚೈನ್ ತಂದ ಕಣ್ರಿ
ಅವ್ನಿಗೂ ನಂಗೂ ಮದ್ವ್ ಕಣ್ರಿ
ಅವ್ನೆ ನನ್ನ ಯಜಮಾನ ॥
***
ಚೆಲ್ಲಿದರು ಮಲ್ಲಿಗೆಯಾ
ಚೆಲ್ಲಿದರು ಮಲ್ಲಿಗೆಯ ಬಾಣಾಸೂರ್ಯೇರಿ ಮ್ಯಾಲೆ
ಅಂದಾದ ಚಂದಾದ ಮಾಯಕಾರ ಮಾದೇವ್ಗೆ
ಚೆಲ್ಲಿದರು ಮಲ್ಲಿಗೆಯ ॥
ಏಳು ಮಲೆಯಲ್ಲಿ ಏನಯ್ಯ ಕೆಂದೂಳು
ನವಿಲಾರಿ ನವುಲ ಮರ್ಯಾರಿ ಮಾದೇವ್ಗೆ ।
ಚೆಲ್ಲಿದರು ಮಲ್ಲಿಗೆಯ ॥
ನವಿಲಾರಿ ನವ್ವುಲ ಮರ್ಯಾರಿ ಮಾದೇವ್ಗೆ
ಔತ್ಣ ಮಾಡಿ ಗಿರೀಗೆ ಹೊರಟಾರು ಮಾದೇವ್ಗೆ ।
ಚೆಲ್ಲಿದರು ಮಲ್ಲಿಗೆಯ ।
ಮಲ್ಗೆ ಹೂವಿನ ಮಂಚ ಮುರುಗಾದ ಮೇಲ್ಹೊದಕೆ
ತಾವರೆ ಹೂವ ತಲೆದಿಂಬು ಮಾದೇವ್ಗೆ ।
ಚೆಲ್ಲಿದರು ಮಲ್ಲಿಗೆಯಾ ॥
ತಾವರೆಹೂವಿನ ತಲೆದಿಂಬು ಮಾದೇವ್ಗೆ
ಅಲ್ಲೊಂದು ಗಳಿಗೆ ಸುಖನಿದ್ರೆ ಮಾದೇವ್ಗೆ ।
ಚೆಲ್ಲಿದರು ಮಲ್ಲಿಗೆಯಾ ॥
(ಜಾನಪದ ಗೀತೆಗಳು ಸಂಗ್ರಹಿತ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!