ಈ ವಾರ ಬಹಳಷ್ಟು ಖ್ಯಾತಿ ಪಡೆದಿರುವ ಮತ್ತೊಂದು ಗೀತೆ ‘ಚನ್ನಪ್ಪ ಚನ್ನಗೌಡ’ ಆಯ್ದುಕೊಳ್ಳಲಾಗಿದೆ. 

ಚನ್ನಪ್ಪ ಚನ್ನಗೌಡ

ಚನ್ನಪ್ಪ ಚನ್ನಗೌಡ । ಕುಂಬಾರ ಮಾಡಿದ ಕೊಡನವ್ವಾ

ಚೆಂದಕ್ಕ ತಂದೇನಾ ತಂಗಿ ನೀರಿಗೆ ಬಂದೇನಾ ॥ಪ॥


ಆರು ಮೂರು ಒಂಬತ್ತು, ಒಂಬತ್ತು ತೂತಿನ ಕೊಡನವ್ವ

ಚಂದಕ ತಂದೇನೆ ತಂಗಿ ನೀರಿಗೆ ಬಂದೇನಾ ॥೧॥


ಬಾಳಿಯ ವನದಾಗ ನಾಹ್ಯಾಂಗ ಬಾಗಿ ಬರಲವ್ವ  

ಚೆಂದಕ್ಕ ತಂದೇನೆ ತಂಗಿ ನೀರಿಗೆ ಬಂದೇನಾ ॥೨॥

ನಿಂಬಿಯ ವನದಾಗ ನಾಹ್ಯಾಂಗ ಹಿಂಬಾಗಿ ಬರಲವ್ವ

ಚೆಂದಕ್ಕ ತಂದೇನೆ ತಂಗಿ ನೀರಿಗೆ ಬಂದೇನಾ ॥೩॥


ಹುಯಿಲಗೋಳ ಕೆರಿಯಾಗ ನೀರು ತುಂಬುವಾಗ

ಕಲ್ಲು ತಾಕಿತ್ತು ತಂಗಿ ಬಿಂದಿಗಿ ಒಡೆದಿತ್ತ ॥೪॥


ದ್ಯಾಮವ್ವನ ಗುಡಿ ಮುಂದ ಒಬ್ಬ ಮುದುಕಾ ಕುಂತಿದ್ದ

ಗಾಂಜಾ ಸೇದತ್ತಿದ್ದಾ ಒಳ್ಳೇ ಪಟಗಾ ಸುತ್ತಿದ್ದ ॥೫॥


ಯವ್ವಾ ಇವನಾರ ಮಂಚದ ಮ್ಯಾಲ ಮಲಗ್ಯಾನ 

ಗೊತ್ತಿಲ್ಲೇನವ್ವಾ ತಂಗಿ ಶಿಶುನಾಳ ಶರೀಪಜ್ಜ ॥೬॥

***

ಯಾರನ್ನ ನೆನೆಯಲಿ

ಬೆಳಗಾಗಿ ನಾನೆದ್ದು ಯಾರ್ಯಾರ್ನ ನೆನೆಯಲಿ

ಎಳ್ಳು ಜೀರಿಗೆ ಬೆಳೆಯೋಳ

ಎಳ್ಳು ಜೀರಿಗೆ ಬೆಳೆವಂಥ ಭೂಮಿತಾಯ್ನ

ಎದ್ದೊಂದು ಘಳಿಗೇ ನೆನೆದೇನಾ ।


ಎಳ್ಳು ಕೊಟ್ಟವನಿಗೆ ಎಲ್ಲ ಭಾಗ್ಯವು ಬರಲಿ

ಪಲ್ಲಕ್ಕಿ ಮೇಲೆ ಮಗಬರಲಿ । ಆ ಮನೆಗೆ

ಮಲ್ಲಿಗೆ ಮುಡಿಯೋ ಸೊಸೆ ಬರಲಿ


ಕಲ್ಲಮ್ಮ ಮಾತಾಯಿ ಮಲ್ಲಮ್ಮ ರಾಗಿಯ

ಜಲ್ಲ ಜಲ್ಲಾನೆ ಉದುರಮ್ಮ । ನಾನಿನಗೆ

ಬೆಲ್ಲದಾರತಿಯ ಬೆಳಗೇನು


ಬೆಳಗಾಗಿ ನಾನೆದು ಯಾರ್ಯಾರ್ನ ನೆನೆಯಲಿ

ಕಲ್ಲು ಕಾವೇರಿ ಕಪನಿಯ । ನೆನೆದಾರ

ಹೊತ್ತಿದ್ದ ಪಾಪ ಪರಿಹಾರ

(ಜಾನಪದ ಗೀತೆಗಳು ಸಂಗ್ರಹಿತ)