ಬಾಜ್ಯಾರ ಬಾಜ್ಯಾರ ತಿರಗ್ಯಾರ ಈ ಬೀದಿ ಬಸವ್ಯಾರ
ಭಂಡಾರ ಹಚ್ಚೂತ ನಡೆದಾರ ಕಂಡೋರ ಕೈ ಮಾಡುತ ಕರೆದಾರ
ಭಂಡ ಹೆಂಗಸರಿವರು ಕಂಡು ಕಂಡಾಂಗ ನಡೆದಾರ
ರಬಕವಿ ಪ್ಯಾಟಿ ಸೋಮವಾರ ಇಲ್ಲಿ ಎಲ್ಲಾ ಊರಿನ ಜೋಗತ್ಯಾರ
ಅಂಗಡಿ ಅಂಗಡಿ ತಿರುಗ್ಯಾರ ಇವರು ಖಬರ ತಗದ ನಿಂತಾರ
ಥೂ ಥೂ ಅಂತಾ ಉಗುಳಿದರು ತುಂತುನಿ ಬಾರಸ್ಯಾರ
ಹಗಲು ರಾತ್ರಿ ಅನ್ನಲಾರದ ಹಣದ ರಾಶಿ ಕೂಡಿಸ್ಯಾರ
ಮಾಲಿಂಗಪೂರ ಬಜಾರದಲ್ಲಿ ಸಂತಿ ನಡೆದಾಗ ಮಂಗಳವಾರ
ಗುರುತಿನ ಗಂಡಸರ ತರಬ್ಯಾರ ಗುದುಮುರಗಿ ಮಾತನಾಡ್ಯಾರ
ಎಲ್ಲಮ್ಮನ ಹೆಸರಿನ ಮ್ಯಾಕೆ ಕೆಲಸ ಎಲ್ಲ ಮುಗಿಸಿ
ಬಲ್ಲಂಗ ರೊಕ್ಕ ತುಂಬಿಕೊಂಡು ಖುಲ್ಲಾ ಮನಸಿಲೆ ಬಂದಾರ
ಬನಹಟ್ಟಿ ಊರ ಬಜಾರ ಇದು ಇಲ್ಲಾ ಹಳ್ಳಿಗೆ ಹತ್ತಿರ
ನೆಲ್ಲಿಕಾಯಿ ಪದಾ ಅಂದಾರ ಚೌಡಕಿ ಬಾರಿಸಿ ಚಾ ಕುಡುದಾರ
ಚರಚೆದ ಹೆಂಗಸರಿವರು ಪಕ್ಕಾ ಗಳಿಸುವವರಿವರು
ಸೋಗ ಹಾಕಿ ಮೆರಿತಾರ, ಕತಿ ಕೇಳುವ ಸೋಗಲಾಡೆರ
ಸುಂದರ ಸುಂದರ ಹುಡುಗ್ಯಾರ ಇವರು ಚಂದ ಪಾತರಗಿತ್ತ್ಯಾರ
ಸಿನಿಮಾಕ ಹೋಗಿ ಬರತಾರ ನಾಟಕದಾಗು ಇರತಾರ
ಊರಿಗೆ ಬಂದ ಮೆಟ್ಟ ಮಾಡಿ ಉತ್ತಮರಂಗ ಮೆರಿತಾರ
ಯಾಕಲಗೆ ಜೋಗವ್ವ ಅನುತ ಎಲ್ಲಮ್ಮ ತಾಯಿ ಹೆಸರ ಕೆಡಿಸ್ಯಾರ
ಸಿಮ್ಮಾಡಿ ಊರ ಚಲುವ್ಯಾರ ಇವರು ಚಿತ್ತರದಾಗಿನ ಗೊಂಬ್ಯಾರ
ನಾವಲಗಿ ಊರ ಹುಡುಗ್ಯಾರ ನೋಡು ನವಲಿನ ನಡಿಗಿ ಹೊಂಟಾರ
ಎಲ್ಲಾ ಊರಿನ ಬಾಲ್ಯಾರ ಎಲ್ಲಮ್ಮನ ಹರಕಿ ಹೊತ್ತಾರ
ಮುಂಬೆ ಪ್ಯಾಟಿ ಎಲ್ಲಾ ತಿರುಗಿ ಮೂಗ ಬಟ್ಟ ಕಳಕೊಂಡಾರ
ರಂಡ್ಯಾರ ಹುಣಿವಿ ಮಾಡ್ಯಾರ ಯಾಕೋ ಏನೋ
ಕೈಯಾ ಬಳೆ ಹೋದಾರ ಇವರು ಊರೆಲ್ಲ ಚಿಲ್ಲರ ಮಾಡ್ಯಾರ
ಮುತ್ತೈದಿ ಹುಣವಿ ದಿನಾ ಮುತ್ತಿನ ಬಳಿ ತೊಟ್ಟಾರ
ಮುತ್ತೈದಿ ಮಕ್ಕಳಾಗಿ ಗರತಿ ಗಂಗವ್ವನಂಗ
ರೇಣುಕಾದೇವಿಯ ಪದ ಹಾಡ್ಯಾರ ಅಲ್ಲಿ ಜಮದಗ್ನಿ ಶಾಪ ಕೊಟ್ಟಾರ
ಪತಿವೃತಿ ಕತಿ ಕೇಳಿದರೆ ಆಗತೈತಿ ಪಾಪ ಪರಿಹಾರ
ಎಲ್ಲಮ್ಮ ತಾಯಿ ನಿನ್ನ ಭಕ್ತರ ಹೊಲಸ ಚಾಳಿ
ಹರದಾಕಿದರು ಕೆಂಧೂಳಿಯವರು ಪದ ಹಾಡಿ ಕೈ ಮುಗಿದು ನಿಂತಾರ
(ಜಾನಪದ ಗೀತೆಗಳು ಸಂಗ್ರಹ)
ಚಿತ್ರ : ಎ ಐ ತಂತ್ರಜ್ಞಾನ ಬಳಕೆ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!