ಈ ವಾರ ಜಾನಪದ ಗೀತೆಗಳು ಮಾಲಿಕೆಯಲ್ಲಿ ‘ಕಲ್ಯಾಣ ಬಸವಣ್ಣ’ ಮತ್ತು ‘ಮೇಲು ಕೋಟೆ ಚೆಲುವ ನಾರಾಯಣ’ ಎನ್ನುವ ಎರಡು ಗೀತೆಗಳನ್ನು ಸಂಗ್ರಹಿಸಿ ಪ್ರಕಟಿಸಲಾಗಿದೆ.

ಕಲ್ಯಾಣ ಬಸವಣ್ಣ

ಕಲ್ಯಾಣ ಪಟ್ಟಣದಲ್ಲಿ ಶರಣರು ಇರುತ್ತಾರೆ

ನೋಡಾನ ಬನ್ನಿರೋ ಮಾವಯ್ಯ।

ಗಿರಿಯಾಗೆ ಗೆಳತೀರು ಕಂದನ

ಬೇಡುವರು ಗುಡಿ ಮುಂದೆ


ತೆಂಕಣ ಪರಸೇ ನೋಡುತ್ತ

ಗುಡಿ ಮೇಲೆ ಬಸವ ಕುಂತೌನೆ

ಅಂದ ಚಂದದಿಂದ ಮಾದಯ್ಯ ತೇರು

ಬರುವಾಗ ಪಂಜಿನ ಸೇವೆ ಹರಿದಾವು


ತೇರು ನೋಡಾನೆ ಬನ್ನಿರೋ ಮುದ್ದು

ಮಾದಯ್ಯ ತೇರ ನೋಡಾನೆ ಬನ್ನಿರೋ


ತೇರು ತೇರನ ನೋಡಿ, ತೇರಿನ ಚಂದಾವ ನೋಡಿ

ತೇರಿನೊಳಗೆ ಇರುವ ದೇವ ಮಾಯವಾಗೋ ತನಕ

ಮುದ್ದು ಮಾದಯ್ಯ ತೇರ ನೋಡಾನೆ ಬನ್ನಿರೋ ॥

***

ಮೇಲು ಕೋಟೆ ಚೆಲುವ ನಾರಾಯಣ

ಚಂದುಳ್ಳ ಚೆಲುವಯ್ಯ ಮೇಲುಕೋಟೆ

ಮೂರು ನಾಮದಯ್ಯ

ಕೋಲು ಕೋಲಣ್ಣ ಕೋಲೆ

ಎಲ್ಲಾ ರಾಜ್ಯಕ್ಕೆ ಒಪ್ಪುವ ಮೇಲುಕೋಟೆ

ನಮ್ಮಪ್ಪನ ತೇರು, ರಾಜಬೀದಿಲಿ ಬರುವಾಗ

ಸಿಕರಾದ ಕೆಲಸ ಜಲಿರೆಂಬೋ


ಅಪ್ಪನ ಗುಡಿಯಲಿ ಸುತ್ತ ರತ್ನದ ಕಂಬ

ಬಾಗಿಲಿಗೆ ಚಿನ್ನದ ಗಂಟಿಗೆ ಬೆಳ್ಳಿ ಸರಪಣಿ

ಪಟ್ಟೆ ನಾಮದಯ್ಯಂಗೆ ಹಿಪ್ಪೆಯ ತೋಪಲ್ಲಿ


ತಂಪು ತಳಿಗೆ ಮಾಡಿ ಆರತಿ ಬೆಳಗಾರು

ತೇರ ನೋಡಾನೆ ಬನ್ನಿರೋ

ಪಟ್ಟದ ನಾಮದಯ್ಯನ ಕಳಸ ನೋಡಾನೆ ಬನ್ನಿರೋ

ನಾವೆಲ್ಲರೂ ಕೂಡಿ ಕಳಸ ನೋಡಾನೆ ಬನ್ನಿರೋ

(‘ಜಾನಪದ ಗೀತೆಗಳು’ ಸಂಗ್ರಹಿತ)