ಜಾನಪದ ಗೀತೆಗಳು ಮಾಲಿಕೆಯ ಈ ವಾರದ ಆಯ್ದ ಕವನಗಳು ‘ಹೊಸ ತೇರು’ ಮತ್ತು ‘ಚೆಲ್ವಿ ಚೆಲ್ವಿ ಎಂದು’.
ಹೊಸ ತೇರು
ಕೋಲು ಕೋಲೆನ್ನ ಕೋಲೆ
ಸಿರಿಗಂಧವೀ ಕೋಲು ಕೋಲೆನ್ನ ಕೋಲೆ !
ಆರೂರು ಇದ್ದಲ್ಲಿ ಕೀಲ್ಯಾಕ ಜಡದಾರೋ
ಹೊಂದಿ ಹೊಂದಿಸಿ ಕೀಲ ಜಡಿದಾರೋ
ಹೊಂದಿ ಹೊಂದಿಸಿ ಕೀಲ ಜಡಿದಾರೋ
ಅಪ್ಪ ಹಂಪಯ್ಯ ಹೊಸ ತೇರೋ
ಅಪ್ಪ ಹಂಪಯ್ಯ ಹೊಸ ತೇರು ಎಳತೈತಂದು
ಸುತ್ತಲ ಪರಸ ಬರತೈತಿ
ಸುತ್ತಲ ಪರಸ ಬರತೈತಿ ಆನಿಗೊಂದಿ
ಗುಡಿಯಲ್ಲಿ ಕಾರಂಜಿ ತಿರುವ್ಯಾರೋ
ಆನೆಗಂದಿಯ ಉದ್ದಿ ಏನು ಹೇಳಲೆಣ್ಣ
ಹೂಡೇದ ಮ್ಯಾಲ ಹೂಬಾಣ
ಹೂಡೇದ ಮ್ಯಾಲ ಹೂಬಾಣ ಪಂಪರಾಯ್ನು
ಡೇರೇದ ಮ್ಯಾಲ ಕಳಸಾವು । ಕೋಲು…
ಡೇರೇದ ಮ್ಯಾಲ ಕಳಸಾವು ಹಂಪಮ್ಮ
ಗೋಪುರದ ಮ್ಯಾಲ ಕಳಸಾವು
ಹಂದರ ಹಾಕಿ ಗಂಧ ಸೆಳೆವು ಕೊಟ್ಟು
ಜತ್ತಿಲೆರಡ ತೇರ ನಿಲ್ಲಿಸಿ ಆನಿಗೊಂದಿ
ಚತ್ತೀಸ ಕುಲದವರು ಎಸ್ಯಾರ
***
ಚೆಲ್ವಿ ಚೆಲ್ವಿ ಎಂದು
ಚೆಲ್ವಿ ಚೆಲ್ವಿ ಎಂದು ಅತಿಯಾಸೆ ಪಡಬೇಡ
ಚೆಲ್ವು ಇದ್ದರೇನು ಗುಣವಿಲ್ಲ
ಹೊಳೆನೀರು ತಿಳಿ ಇದ್ದರೇನು ರುಚಿ ಇಲ್ಲಾ
ಕಪ್ಪು ಹೆಂಡತಿಯೆಂದು ಕಳವಳ ಪಡಬೇಡ
ನೇರಳೆ ಹಣ್ಣು ಬಲು ಕಪ್ಪು
ಇದ್ದರೂ ತಿಂದು ನೋಡಿದರೆ ರುಚಿ ಬಹಳ
ಕೆಂಪು ಹೆಂಡತಿಯೆಂದು ಸಂತೋಷ ಪಡಬೇಡ
ಹತ್ತಿಯ ಹಣ್ಣು ಬಲ ಕೆಂಪು
ಇದ್ದರೂ ಒಡೆದು ನೋಡಿದರೆ ಹುಳು ಬಹಳಾ
ಬಂಗಾರಾ ಬಳಿತೊಟ್ಟ ಬಡಿವಾರ ಮಾಡಬ್ಯಾಡ
ಬಂಗಾರ ನಿನಗೆ ಸ್ಥಿರವಲ್ಲ
ಮಧ್ಯಾಹ್ನ ಸಂಜೆಯಾಗುವುದು ತಡವಲ್ಲ
(‘ಜಾನಪದ ಗೀತೆಗಳು’ ಕೃತಿಯಿಂದ ಸಂಗ್ರಹಿತ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!