ಜಾನಪದ ಗೀತೆಗಳ ಸೊಗಸು ಬಹು ಅಂದ. ನಾವು ಈ ಹಿಂದೆ ಪ್ರಕಟಿಸಿದ ಜಾನಪದ ಗೀತೆಗಳು ಬಹಳಷ್ಟು ಓದುಗರ ಗಮನ ಸೆಳೆದಿದೆ. ಈ ವಾರ ನಾನು ಮತ್ತೊಂದು ಮಧುರ, ಸುಂದರ ಜಾನಪದ ಗೀತೆಯನ್ನು ಸಂಗ್ರಹಿಸಿ ಪ್ರಕಟ ಮಾಡಿದ್ದೇನೆ.

ಹೊಲಕ ಹೋಗೋಣ

ಹೊಲಕ ಹೋಗೋಣ ತಂಗಿ ಹೊಲಕ ಹೋಗೋಣ

ಹೊಲಕ ಹೋಗೋಣ ತಂಗಿ ಹೊಲಕ ಹೋಗೋಣ

ಹೊಲಗಳಿಗೆ ಹತ್ತಿದ ಕಸವನ್ನು ಹಿತ್ತು ಹಸನು ಮಾಡೋಣ ॥ಹೊಲಕ ಹೋಗೋಣ॥


ಹಟ್ಟಿಯ ಕಸವನ್ನು ಗುಡಿಸಮ್ಮ, ಬಸವಗೆ ಮೇವನ್ನು ಹಾಕಮ್ಮ

ಆಕಳಿಗೆ ಹೊಟ್ಟನ್ನು ತಿನಿಸುತ ನೀನು ಹಾಲು ಹಿಂಡಮ್ಮ

ತಾಯಿಯ ಕರುಳಿಗೆ ಎರಗುವ ಕರುವಿಗೆ ಹಾಲನ್ನು ಕುಡಿಸಮ್ಮ

ಬಾಗಿಲ ಸಾರಿಸಿ ಕುಂಕುಮ ಹಚ್ಚುವ ಕೆಲಸವ ಮಾಡಮ್ಮಾ ॥ಹೊಲಕ ಹೋಗೋಣ॥


ಚುಮು ಚುಮು ನಸುಕಲಿ ದೇವರ ನೆನೆಯುತ ಅಡಿಗೆಯ ಮಾಡಮ್ಮಾ

ದೇವರ ನೆನೆಯುತ ಅಡುಗೆಯು ಹುಲಸು ಆಗುವುದಮ್ಮ

ದೇವರ ಎಡೆಯನು ಮಾಡುತ ನೀನು ಬುತ್ತಿಯ ಕಟ್ಟಮ್ಮಾ

ಭೂಮಿಯ ತಾಯಿಯ ಸೇವೆಗೆ ನಾವು ದುಡಿಯಬೇಕಮ್ಮ ॥ ಹೊಲಕ ಹೋಗೋಣ॥


ನಗುತಲಿ ಮನೆಯಲಿ ನನ್ನ ಮನೆಯ ಚಂದಮ್ಮ

ನಮ್ಮ ಹಣೆಗೊಂದು ಕುಂಕುಮ ಬಟ್ಟ ಅದುವೆ ನಿನ್ನ ಲಕ್ಷ್ಮೀಯಮ್ಮಾ

ಕೈ ಹಚ್ಚಿ ದುಡಿಯುತ ಮೈಯಲ್ಲ ಸೊಬಗು ಬೇರೆ ನಿನಗೆಲ್ಲಿಯಮ್ಮಾ

ಎಷ್ಟೋ ಜನ್ಮದ ಪುಣ್ಯಕ ನೀನು ತಂಗಿಯಾದೆಯಮ್ಮಾ ॥ ಹೊಲಕ ಹೋಗೋಣ॥


ಭೂಮಿ ತಾಯಿಯ ಚೊಚ್ಚಲು ಮಕ್ಕಳು ನಾವು ಇರಬೇಕಮ್ಮ

ಹೊಟ್ಟೆಗೆ ಅನ್ನವ ನೀಡುವ ತಾಯಿಯ ಋಣವನ್ನು ತೀರಿಸಮ್ಮ

ಶರೀರವೆಂಬುವ ಹೊಸಲು ಹಬ್ಬಿದ ಮದಗಳ ಅಳಿಯಮ್ಮ

ಮೃತ್ಯುಂಜಯನ ಹಾಡನ್ನು ಕೇಳುತ ಭಕ್ತಿಯಲಿ ನುಡಿಯಮ್ಮ ॥ಹೊಲಕ ಹೋಗೋಣ॥

(‘ಜಾನಪದ ಗೀತೆಗಳು’ ಸಂಗ್ರಹಿತ)