ಸಂಜೆ ಊಟ ಮುಗಿಸಿ ಸಾಗರ ಮೊಬೈಲ್‌ನಲ್ಲಿ ಏನನ್ನೋ ಹುಡುಕುತ್ತ ಕುಳಿತಿದ್ದ. ಮುಖದಲ್ಲಿ ಏನೋ ಹೊಸದನ್ನು ಕಂಡುಕೊಂಡ ಖುಷಿ.

ಅದನ್ನು ಗಮನಿಸಿದ ಸೀಮಾ,

“ಏನೋ ಕೊಳ್ಳೋ ವಿಚಾರ ಇದ್ದಂತೆ ಇದೆ?” ಎಂದಳು.

“ಒಂದು ಟೆಲಿಸ್ಕೋಪ್ ನೋಡ್ತಾ ಇದ್ದೀನಿ.”

“ಟೆಲಿಸ್ಕೋಪಾ?”

“ಹೌದು. ತುಂಬಾ ಚೆನ್ನಾಗಿದೆ. ಮಕ್ಕಳಿಗೆ!”

ತಾನು ಚಿಕ್ಕಂದಿನಲ್ಲಿ ತಗೊಳ್ಳೋಕೆ ಆಗದ ವಸ್ತು ಮಕ್ಕಳ ಹೆಸರು ಹೇಳಿ ತಗೊಳ್ಳೋ ವಿಚಾರ ಅವನದು.

“ಮಕ್ಕಳಿಗೆ ಟೆಲಿಸ್ಕೋಪ್ ಯಾಕೆ ಈಗ?” ಸೀಮಾ ಕೇಳಿದಳು.

“ಯಾಕಂದ್ರೆ, ಅವರಿಗೆ ಆಕಾಶ ತೋರಿಸಬೇಕು. ಚಂದ್ರನನ್ನು ಹತ್ತಿರದಿಂದ ನೋಡಬಹುದು. ಗುರು ಮತ್ತದರ ಉಪಗ್ರಹಗಳು, ಶನಿಯ ಬಳೆಗಳು… ಎಲ್ಲಾ ನೋಡಬಹುದು. ಎಷ್ಟು ಚೆನ್ನಾಗಿರುತ್ತೆ ಗೊತ್ತಾ? ಮಕ್ಕಳಿಗೆ Astronomy ಮೇಲೆ interest ಬರುತ್ತೆ. ಪುಸ್ತಕದಲ್ಲಿ ಓದುವುದಕ್ಕಿಂತ ಕಣ್ಣಾರೆ ನೋಡಿದರೆ ಇನ್ನೂ ಚೆನ್ನಾಗಿ ಅರ್ಥವಾಗುತ್ತೆ.”

ಸಾಗರ ಒಂದೇ ಉಸಿರಿನಲ್ಲಿ ತನ್ನ ಯೋಜನೆಯ ಸಂಪೂರ್ಣ ಶೈಕ್ಷಣಿಕ ಪ್ರಯೋಜನಗಳನ್ನು ವಿವರಿಸಿದ.

ಸೀಮಾ ಮಾತ್ರ ಅವನ ಮಾತು ಕೇಳುತ್ತಾ ಮನೆಯ ಸುತ್ತಲೂ ಒಮ್ಮೆ ನೋಡಿದಳು.

ಹಾಲ್‌ನ ಒಂದು ಮೂಲೆಯಲ್ಲಿ ಈಗಾಗಲೇ ಬಳಕೆಯಾಗದೆ ಬಿದ್ದಿದ್ದ ಕೆಲವು ವಸ್ತುಗಳು. ಬಾಲ್ಕನಿಯಲ್ಲಿ ಸೈಕಲ್. ಸೋಪ್ ಮನೆಯಲ್ಲೇ ಮಾಡಲು ತರಿಸಿದ ಬೇಸ್ ಮತ್ತದರ ಅಚ್ಚು, ವ್ಯಾಯಾಮ ಮಾಡ್ತೀನಿ ಅಂತ ತಗೊಂಡ ಮುಗ್ದರ ಇನ್ನೂ ಏನೇನೋ!

“ಟೆಲಿಸ್ಕೋಪ್ ಎಲ್ಲಿಡ್ತೀರಾ?”

ಸಾಗರ ಕ್ಷಣಮಾತ್ರ ಯೋಚಿಸಿ,

“ಬಾಲ್ಕನಿಯಲ್ಲಿ.”

“ಬಾಲ್ಕನಿಯಲ್ಲಿ ಈಗಾಗಲೇ ಸೈಕಲ್ ಇದೆ.”

“ಸೈಕಲ್‌ನ್ನು ಸ್ವಲ್ಪ adjust ಮಾಡಬಹುದು.”

“Adjust ಮಾಡೋದು ಯಾರು?”

ಸಾಗರ ಸುಮ್ಮನಾದ.

ಸೀಮಾ ಮುಂದುವರಿಸಿದಳು.

“ಮತ್ತೆ ಟೆಲಿಸ್ಕೋಪ್ ತಂದು ಎರಡು ದಿನ ಮಕ್ಕಳು ನೋಡ್ತಾರೆ. ಮೂರನೇ ದಿನ ಒಂದು ಮೂಲೆಯಲ್ಲಿ ಬಿದ್ದಿರುತ್ತೆ."

“ಹಾಗಲ್ಲ ಸೀಮಾ. ಮಕ್ಕಳು ಉಪಯೋಗಿಸ್ತಾರೆ.”

“ಹೌದು. ಮೊದಲ ವಾರ ತುಂಬಾ ಉಪಯೋಗಿಸ್ತಾರೆ.”

ಸಾಗರ ನಕ್ಕ.

“ನೀನು ಯಾವ ವಿಷಯಕ್ಕೂ negative ಆಗಿ ಯೋಚಿಸ್ತೀಯಲ್ಲ!”

“Negative ಅಲ್ಲ. ಹದಿನಾಲ್ಕು ವರ್ಷ Experience.”

"ಹದಿನಾಲ್ಕು ವರುಷ ವನವಾಸದಿಂದ.."

ಸಾಗರ ರೇಗಿಸಿದ ಅವಳ ಮಾತಿನಲ್ಲಿ ಸತ್ಯವೂ ಕಾಣಿಸಿತು. ಮತ್ತೆ ಮೊಬೈಲ್‌ ಕಡೆ ನೋಡಿದ. ಸ್ವಲ್ಪ ಹೊತ್ತು ಮೌನ.

ಆದರೂ ಟೆಲಿಸ್ಕೋಪ್ ಮೇಲಿನ ಆಸೆ ಮಾತ್ರ ಹೋಗಲಿಲ್ಲ.

ಸ್ವಲ್ಪ ಹೊತ್ತು ಯೋಚಿಸಿ, ಅವನು ಗಂಭೀರವಾಗಿ ಹೇಳಿದ:

“ಸರಿ. ಈಗ ಬೇಡ.”

ಸೀಮಾ ಆಶ್ಚರ್ಯದಿಂದ ಅವನ ಕಡೆ ನೋಡಿದಳು.

“ನಿಜವಾಗ್ಲೂ?”

“ಹೌದು.”

ಸ್ವಲ್ಪ ವಿರಾಮ ತೆಗೆದುಕೊಂಡು ಸಾಗರ ಮುಂದುವರಿಸಿದ.

“ನಾವು ದೊಡ್ಡ ಮನೆಗೆ ಹೋದ ಮೇಲೆ ತೊಗೊಳ್ಳೋಣ.”

“ದೊಡ್ಡ ಮನೆಗೆ ಹೋದ ಮೇಲೆ? ಯಾರ ದೊಡ್ಡ ಮನೆ!”

“ನಮ್ಮದೇ! ಆಗ ಟೆಲಿಸ್ಕೋಪ್ ಇಡೋಕೆ ಸಾಕಷ್ಟು ಜಾಗ ಇರುತ್ತೆ. ಬಾಲ್ಕನಿಯಲ್ಲೂ space ಇರುತ್ತೆ. ಮಕ್ಕಳು ಆರಾಮಾಗಿ ನೋಡಬಹುದು. ಯಾರಿಗೂ ತೊಂದರೆ ಇಲ್ಲ.”

ಸೀಮಾ ಅವನನ್ನು ಕೆಲವು ಕ್ಷಣ ನೋಡಿ

“ದೊಡ್ಡ ಮನೆ ಯಾಕೆ ಬೇಕು!” ಉದ್ಗಾರ ತೆಗೆದಳು

“ಟೆಲಿಸ್ಕೋಪ್ ಇಡೋಕೆ.”

ಸೀಮಾ ನಗುವುದನ್ನು ತಡೆಯಲಾಗಲಿಲ್ಲ.

“ಸಣ್ಣ ಪುಟ್ಟ ಸಾಮಾನು ತಗೋತಿದ್ರಿ ಈಗ ಸೀದಾ ದೊಡ್ಡ ಮನೆ!"

ಸಾಗರ ಹೆಮ್ಮೆಯಿಂದ,

“ದೊಡ್ಡದಾಗಿ ಯೋಚಿಸಬೇಕು ಸೀಮಾ!”

“ನಿಮ್ಮ ಈ ‘ದೊಡ್ಡದಾಗಿ ಯೋಚಿಸುವ’ ಸ್ವಭಾವದಿಂದ ತೊಗೊಂಡ ಸಾಮಾನು ತುಂಬಿ ಈ ಮನೆ ಸಣ್ಣದಾಗಿದೆ!"

ಇಬ್ಬರೂ ನಕ್ಕರು.

ಸಾಗರ ಮತ್ತೆ ಮೊಬೈಲ್ ನೋಡುತ್ತಾ,

“ಆದರೂ ಆ ಟೆಲಿಸ್ಕೋಪ್ ಚೆನ್ನಾಗಿದೆ…”

ಸೀಮಾ ತಕ್ಷಣ,

“ಬಿಡಿ. ಮೊದಲು ದೊಡ್ಡ ಮನೆ ಹುಡುಕಿ.”

ಸಾಗರ ತಲೆಯೆತ್ತಿ,

“ಅದನ್ನೂ ನೋಡ್ತೀನಿ…”

ಸೀಮಾ ತಲೆ ಅಲ್ಲಾಡಿಸಿದಳು.

ಟೆಲಿಸ್ಕೋಪ್ ಇನ್ನೂ ಬಂದಿರಲಿಲ್ಲ. ಆದರೆ ಅದಕ್ಕಾಗಿ ದೊಡ್ಡ ಮನೆ ಹುಡುಕುವ ಕೆಲಸ ಮಾತ್ರ ಈಗಾಗಲೇ ಶುರುವಾಗಿತ್ತು.