ಆಗಸ್ಟ್ ಆರಂಭವಾಗುತ್ತಿದ್ದಂತೆ ಮೈಸೂರಿನ ಆ ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯದ ಸಂಭ್ರಮ ಗರಿಗೆದರಿತ್ತು. ತರಗತಿಗಳನ್ನು ಶೃಂಗರಿಸಿದ್ದ ತ್ರಿವರ್ಣ ಕಾಗದದ ಸರಪಳಿಗಳು, ಕಿಟಕಿಗಳಲ್ಲಿ ನಲಿದಾಡುವ ಪುಟ್ಟ ಧ್ವಜಗಳು ದೇಶಭಕ್ತಿಯ ರಂಗು ತುಂಬುತ್ತಿದ್ದವು.

ಪದ್ಮಾ ಈ ಶಾಲೆಗೆ ವರ್ಗಾವಣೆಯಾಗಿ ಬಂದು ಕೆಲವೇ ತಿಂಗಳುಗಳಾಗಿದ್ದವು. ಹೊಸ ವಾತಾವರಣದಲ್ಲಿ ಇನ್ನು ಸರಿಯಾಗಿ ಬೆರೆಯದಿದ್ದ ಅವಳಿಗೆ, ಬಾಕಿ ಉಳಿದಿದ್ದ ತರಗತಿಯ ಪಾಠಗಳನ್ನು ಮುಗಿಸುವುದೇ ದೊಡ್ಡ ಚಿಂತೆಯಾಗಿತ್ತು.

ಅಂತಹ ಒಂದು ಮಧ್ಯಾಹ್ನ, ಸೂಚನಾ ಫಲಕದ ಮೇಲೆ ಕ್ರೀಡಾ ಶಿಕ್ಷಕರು ಪ್ರಕಟಣೆ ಅಂಟಿಸಿದರು—'ಪಥಸಂಚಲನ ಆಯ್ಕೆ ಪ್ರಕ್ರಿಯೆ – ಮಧ್ಯಾಹ್ನ 2:00 ಗಂಟೆಗೆ'.

ತಕ್ಷಣವೇ ವಿಜ್ಞಾನ ಶಿಕ್ಷಕರೂ ಪಕ್ಕದಲ್ಲೇ ಇನ್ನೊಂದು ಪ್ರಕಟಣೆ ಸೇರಿಸಿದರು—"'ನಾಳೆಯ ಭಾರತ' ಪ್ರದರ್ಶನಕ್ಕಾಗಿ ಮಾದರಿ ತಯಾರಿಸಲು ಆಸಕ್ತಿಯಿರುವ ವಿದ್ಯಾರ್ಥಿಗಳು ಮಧ್ಯಾಹ್ನ ವಿಜ್ಞಾನ ಕೊಠಡಿಯಲ್ಲಿ ಸೇರಿ."

ಆಯ್ಕೆ ಪ್ರಕ್ರಿಯೆಯ ಕರೆ ಕೇಳಿ ಹಲವು ವಿದ್ಯಾರ್ಥಿಗಳು ಮೈದಾನ ಹಾಗೂ ವಿಜ್ಞಾನ ಕೊಠಡಿಯತ್ತ ಓಡಿದರು. ಪದ್ಮಾ ಒಂದು ಕ್ಷಣ ತಡೆದು ಯೋಚಿಸಿದಳು. "ಇನ್ನು ಹೊಸಬಳಾಗಿಯೇ ಇದ್ದೇನೆ, ಪ್ರದರ್ಶನ-ಪಥಸಂಚಲನಕ್ಕಿಂತ ತರಗತಿಯ ಪಾಠಗಳನ್ನು ಮುಗಿಸುವುದೇ ಮೇಲು," ಎಂದುಕೊಳ್ಳುತ್ತಾ ಆ ಸೂಚನಾ ಫಲಕಗಳ ಪಕ್ಕದಿಂದ ಮೌನವಾಗಿ ಹಾದುಹೋಗಿ, ಚೀಲವನ್ನು ಹೆಗಲಿಗೇರಿಸಿಕೊಂಡು ನಡೆದಳು.

ಶಾಲೆ ಮುಗಿಸಿ ಮನೆಗೆ ಹಿಂತಿರುಗುವಾಗ, ಕೆಆರ್ ವೃತ್ತದ ಬಳಿ ದಾರಿಯ ಬದಿಯಲ್ಲಿ ಕಾರ್ಮಿಕರು ಬೃಹತ್ ವಿದ್ಯುನ್ಮಾನ ಪ್ರಚಾರ ಫಲಕವೊಂದನ್ನು ಜೋಡಿಸುತ್ತಿದ್ದುದು ಅವಳ ಕಣ್ಣಿಗೆ ಬಿದ್ದಿತು. 'ಸ್ವಾತಂತ್ರ್ಯೋತ್ಸವದ ಶುಭಾಶಯಗಳು' ಎಂಬ ಶೀರ್ಷಿಕೆ ಅಲ್ಲಿದ್ದವು. ಪದ್ಮಾ ಆ ಅರ್ಧ ನಿರ್ಮಿತ ಫಲಕದ ಪಕ್ಕದಿಂದಲೂ ಒಂದು ನೋಟವನ್ನಷ್ಟೇ ಬೀರಿ ಹಾದುಹೋದಳು.

ರಾತ್ರಿ ಊಟದ ಸಮಯದಲ್ಲಿ ತಂದೆ ಕೇಳಿದರು, "ಪದ್ಮಾ, ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಭ್ಯಾಸ ಶುರುವಾಯಿತಂತೆ. ನೀನು ಈ ಬಾರಿ ಪಥಸಂಚಲನಕ್ಕಾಗಲಿ ಅಥವಾ ಪ್ರದರ್ಶನಕ್ಕಾಗಲಿ ಹೆಸರು ಕೊಟ್ಟಿದ್ದೀಯಾ?"

ಪದ್ಮಾ ಚಪಾತಿ ಹರಿಯುತ್ತಾ, "ಇಲ್ಲ ಅಪ್ಪ, ಈ ಸಲ ತರಗತಿಯ ಪಾಠ ತಪ್ಪಿಸಿಕೊಳ್ಳುವುದು ಬೇಡ ಅಂತ ಸೇರಲಿಲ್ಲ," ಎಂದಳು.

ತಂದೆ ಮುಗುಳ್ನಕ್ಕು, "ಅಯ್ಯೋ, ತೊಂದರೆಯಿಲ್ಲ ಮಗಳೇ... ಆದರೆ ನೀನು ಭಾಗವಹಿಸಿದ್ದರೆ ನಿನಗೊಂದು ಒಳ್ಳೆಯ ಅನುಭವ ಸಿಗುತ್ತಿತ್ತೇನೋ," ಎಂದು ಹಗುರವಾಗಿ ಹೇಳಿದರು. ಪದ್ಮಾ ಮೌನವಾಗಿ ಊಟ ಮುಗಿಸಿದಳು.

ಮರುದಿನದಿಂದ ಶಾಲೆಯ ಮೈದಾನದಲ್ಲಿ ಸೀಟಿಗಳ ಸದ್ದು, ಹೆಜ್ಜೆಗಳ ದನಿ ಜೀವಂತಗೊಂಡಿತು. ನೂರಾರು ವಿದ್ಯಾರ್ಥಿಗಳು ಸೂರ್ಯನ ಹೊಂಬಿಸಿಲಿನಲ್ಲಿ ಧೂಳೆಬ್ಬಿಸುತ್ತಾ ಪಥಸಂಚಲನದ ಅಭ್ಯಾಸ ಮಾಡತೊಡಗಿದರು. ಇನ್ನೊಂದೆಡೆ ಕೊಠಡಿಗಳಲ್ಲಿ ವಿದ್ಯಾರ್ಥಿಗಳು ತಂಡಗಳಾಗಿ ಕುಳಿತು ವಿಜ್ಞಾನ ಮತ್ತು ತಂತ್ರಜ್ಞಾನದ ಮಾದರಿಗಳನ್ನು ಸಿದ್ಧಪಡಿಸುತ್ತಿದ್ದರು. ಪದ್ಮಾ ಮರದ ನೆರಳಿನಲ್ಲಿ ತನಿಯಾಗಿ ಕುಳಿತು ಪುಸ್ತಕದ ಪುಟಗಳನ್ನು ತಿರುಗಿಸುತ್ತಿದ್ದಳು.

ಮೂರನೇ ದಿನ, ನಿನ್ನೆಯಷ್ಟೇ ಪದ್ಮಾಳ ಜೊತೆ ನೆರಳಿನಲ್ಲಿ ಕುಳಿತಿದ್ದ ಇಬ್ಬರು ಹುಡುಗಿಯರು ಎದ್ದು ಹೋಗಿ ಅಭ್ಯಾಸದ ಸಾಲಿನಲ್ಲಿ ನಿಂತುಕೊಂಡರು. ಖಾಲಿಯಾದ ಆ ಮರದ ನೆರಳಿನಲ್ಲಿ ಪದ್ಮಾ ಈಗ ಸಂಪೂರ್ಣವಾಗಿ ಒಬ್ಬಂಟಿಯಾಗಿದ್ದಳು. ಒಂದಾಗಿ ಬೆವರುತ್ತಾ ಶ್ರಮಿಸುತ್ತಿದ್ದ ಅವರನ್ನೇ ನೋಡುತ್ತಾ ಕುಳಿತಿದ್ದ ಅವಳಿಗೆ, ತಾನು ಅವರಿಂದ ದೂರ ಉಳಿದುಬಿಟ್ಟಿದ್ದೇನೆ ಎಂಬ ಸಣ್ಣ ಮುಜುಗರ ಶುರುವಾಯಿತು.

ಸ್ವಾತಂತ್ರ್ಯ ದಿನಾಚರಣೆಯ ದಿನ ಬಂದೇ ಬಿಟ್ಟಿತು. ಶಾಲೆಯ ಆವರಣವೆಲ್ಲವೂ ಹಬ್ಬದ ವಾತಾವರಣದಿಂದ ಕಂಗೊಳಿಸುತ್ತಿತ್ತು. ಮುಖ್ಯ ಅತಿಥಿಗಳು ರಾಷ್ಟ್ರಧ್ವಜವನ್ನು ಆರೋಹಣ ಮಾಡಿದರು. ಎಲ್ಲರೂ ಸಾಲಾಗಿ ನಿಂತು ಗಂಭೀರವಾಗಿ ರಾಷ್ಟ್ರಗೀತೆಯನ್ನು ಹಾಡಿದರು.

ಆ ನಂತರ, ಧ್ವಜಕ್ಕೆ ವಂದನೆ ಸಲ್ಲಿಸುತ್ತಾ ಪಥಸಂಚಲನ ಪ್ರಾರಂಭವಾಯಿತು. ತಮ್ಮ ಪಂಗಡಕ್ಕೆ ತಕ್ಕಂತೆ ಬಣ್ಣಬಣ್ಣದ ಟೋಪಿ ಮತ್ತು ಸಮವಸ್ತ್ರ ಧರಿಸಿದ್ದ ತಂಡಗಳು, ಬ್ಯಾಂಡ್ ಬಾರಿಸುವ ಮಧುರ ನಾದಕ್ಕೆ ಹೊಂದಿಕೊಂಡು ಒಂದೇ ತಾಳದಲ್ಲಿ ಧೀರವಾಗಿ ಹೆಜ್ಜೆ ಹಾಕುವುದು ಕಣ್ಣಿಗೆ ಮನಮೋಹಕವಾಗಿ ಕಾಣುತ್ತಿತ್ತು. ಪ್ರತಿಯೊಂದು ಹೆಜ್ಜೆಯ ದನಿಯೂ ತ್ರಿವರ್ಣ ಧ್ವಜಕ್ಕೆ ಸೆಲ್ಯೂಟ್ ಹೊಡೆಯುತ್ತಾ ಸಾಗುತ್ತಿದ್ದಾಗ ಇಡೀ ಮೈದಾನದಲ್ಲಿ ರೋಮಾಂಚನ ತುಂಬಿತ್ತು.

ಪದ್ಮಾ ಮಾತ್ರ ಮೈದಾನದ ವೀಕ್ಷಕರ ಸಾಲಿನಲ್ಲಿ ಯಾರೂ ಇಲ್ಲದ ಕಡೆ ತನಿಯಾಗಿ ನಿಂತು ಇದನ್ನೆಲ್ಲ ನೋಡುತ್ತಿದ್ದಳು.

ಪಥಸಂಚಲನ ಸ್ಪರ್ಧೆಯ ಪ್ರಥಮ ಬಹುಮಾನ 'ನೀಲಿ ಪಂಗಡ'ಕ್ಕೆ ಒಲಿದಾಗ ಇಡೀ ಮೈದಾನವೇ ಹರ್ಷಘೋಷದಿಂದ ನಡುಗಿತು. ಹುಡುಗಿಯರು ವಿಜಯದ ಪಾರಿತೋಷಕವನ್ನು ಎತ್ತಿ ಹಿಡಿದು, ಸಂಭ್ರಮದಿಂದ ಒಬ್ಬರನ್ನೊಬ್ಬರು ಅಪ್ಪಿಕೊಂಡರು.

ಅಷ್ಟರಲ್ಲಿ ಶಾಲೆಯ ಸಭಾಂಗಣದಲ್ಲಿ 'ನಾಳೆಯ ಭಾರತ' ಪ್ರದರ್ಶನವೂ ಸಾರ್ವಜನಿಕರಿಗೆ ತೆರೆದುಕೊಂಡಿತು. ದಿನಗಟ್ಟಲೆ ಶ್ರಮಪಟ್ಟು ಮಾದರಿಗಳನ್ನು ತಯಾರಿಸಿದ್ದ ವಿದ್ಯಾರ್ಥಿಗಳು ಪ್ರದರ್ಶನದ ಮೇಜುಗಳ ಬಳಿ ನಿಂತು ವೀಕ್ಷಕರಿಗೆ ಹೆಮ್ಮೆಯಿಂದ ವಿವರಣೆ ನೀಡುತ್ತಿದ್ದರು.

ಒಂದು ಮೇಜಿನ ಮೇಲೆ ಸೇತುವೆಯ ಮೇಲೆ ಚಲಿಸುತ್ತಿದ್ದ ವಂದೇ ಭಾರತ್ ರೈಲಿನ ಮಾದರಿ, ಮತ್ತೊಂದರಲ್ಲಿ ಹಸಿರು ಹೊಲಗಳ ಮೇಲೆ ಹಾರಾಡುತ್ತಿದ್ದ ಪುಟ್ಟ ಡ್ರೋನ್, ಇನ್ನೊಂದರಲ್ಲಿ ಆಕಾಶದತ್ತ ಮುಖ ಮಾಡಿದ್ದ ರಾಕೆಟ್ ಮತ್ತು ಉಪಗ್ರಹಗಳು. ಎದುರಿನ ಮೇಜಿನಲ್ಲಿ ಗಡಿಯಲ್ಲಿ ಜಾಗರೂಕರಾಗಿ ನಿಂತಿದ್ದ ಸೈನಿಕರ ಭೂದೃಶ್ಯ, ಪಕ್ಕದಲ್ಲೇ ಸ್ವಯಂಚಾಲಿತವಾಗಿ ಚಲಿಸುತ್ತಿದ್ದ ಸಣ್ಣ ಕಾರ್ಖಾನೆಯ ಯಂತ್ರಗಳು, ಮತ್ತೊಂದು ಮೂಲೆಯಲ್ಲಿ ವಿದ್ಯಾರ್ಥಿಗಳೇ ರೂಪಿಸಿದ್ದ ರೊಬೊಟಿಕ್ಸ್ ಮತ್ತು ಕೋಡಿಂಗ್ ಯೋಜನೆಗಳು…

ಅಲ್ಲಿ ಯಾವುದೇ ಸ್ಪರ್ಧೆಯಿರಲಿಲ್ಲ, ಬಹುಮಾನದ ಗಡಿಬಿಡಿಯಿರಲಿಲ್ಲ. ಆದರೆ ತಮ್ಮ ಹೊಸ ಸೃಷ್ಟಿಗಳನ್ನು ಜನರಿಗೆ ತೋರಿಸುತ್ತಾ, ಜೊತೆಯಾಗಿ ಆಚರಿಸುತ್ತಿದ್ದ ಆ ವಿದ್ಯಾರ್ಥಿಗಳ ಕಣ್ಣುಗಳಲ್ಲಿ ವರ್ಣಿಸಲಾಗದ ಖುಷಿ ಮತ್ತು ಹೆಮ್ಮೆ ಇತ್ತು.

ಪದ್ಮಾ ವೀಕ್ಷಕರ ಸಾಲಿನಿಂದ ಪ್ರತಿಯೊಂದು ಮೇಜಿನ ಪಕ್ಕದಿಂದಲೂ ಹಾದುಬಂದಳು. ಶಾಲೆಯ ಮೈದಾನದಲ್ಲಿದ್ದವರು, ಕೊಠಡಿಯಲ್ಲಿದ್ದವರು—ಎಲ್ಲರೂ ಒಂದೊಂದು ತಂಡದ ಭಾಗವಾಗಿ, ಹೊಸದೊಂದನ್ನು ನಿರ್ಮಿಸಿದ ಸಂಭ್ರಮವನ್ನು ಸ್ವಂತದ್ದು ಎಂಬಂತೆ ಆಚರಿಸುತ್ತಿದ್ದರು. ತಾನು ಮಾತ್ರ ಯಾವುದಕ್ಕೂ ಸೇರದೆ, ಹೊರಗಿನಿಂದ ನೋಡುವ ಬರೀ ವೀಕ್ಷಕಳಾಗಿಯೇ ಉಳಿದುಬಿಟ್ಟೆ ಎಂಬ ಕೈತಪ್ಪಿದ ಅವಕಾಶದ ಭಾರ ಅವಳ ಎದೆಯನ್ನು ಜೋರಾಗಿ ಹಿಂಡತೊಡಗಿತು.

ದಿನವೂ ಶಾಲೆ ಮುಗಿದ ಮೇಲೆ ಗೆಳತಿಯರ ಜೊತೆ ಹರಟೆ ಹೊಡೆಯುತ್ತಾ ಮನೆಗೆ ನಡೆಯುತ್ತಿದ್ದ ಪದ್ಮಾ, ಅಂದು ಪ್ರಥಮ ಬಾರಿಗೆ ಸಂಪೂರ್ಣ ಮೌನವಾಗಿ ಹೆಜ್ಜೆ ಹಾಕಿದಳು.

ಕೆಆರ್ ವೃತ್ತಕ್ಕೆ ಬಂದಾಗ, ಮೊದಲ ದಿನ ನಿರ್ಮಾಣವಾಗುತ್ತಿದ್ದ ಆ ಬೃಹತ್ ವಿದ್ಯುನ್ಮಾನ ಪರದೆ ಈಗ ದೀಪಗಳ ಬೆಳಕಿನಲ್ಲಿ ಕಂಗೊಳಿಸುತ್ತಿತ್ತು. ಪರದೆಯ ಮೇಲೆ ದೃಶ್ಯಗಳು ಒಂದರ ಹಿಂದೊಂದು ನಯವಾಗಿ ಹರಿದವು—ಮಿಂಚಿನ ವೇಗದಲ್ಲಿ ಧಾವಿಸುತ್ತಿದ್ದ ರೈಲು, ದೂರದೂರಕ್ಕೂ ಚಾಚಿಕೊಂಡಿದ್ದ ಹೆದ್ದಾರಿ, ಹಸಿರು ಹೊಲಗಳ ಮೇಲೆ ಸುತ್ತುತ್ತಿದ್ದ ಡ್ರೋನ್, ಆಗಸದತ್ತ ಚಿಮ್ಮುತ್ತಿದ್ದ ರಾಕೆಟ್, ಗಡಿಯಲ್ಲಿ ಎಚ್ಚರವಾಗಿ ನಿಂತಿದ್ದ ಯೋಧರು, ಯಂತ್ರಗಳ ನಾದದಿಂದ ಜೀವಂತವಾಗಿದ್ದ ಕಾರ್ಖಾನೆಗಳು, ಹೊಸ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳುತ್ತಿದ್ದ ಯುವ ವಿದ್ಯಾರ್ಥಿಗಳು…

ಈ ದೃಶ್ಯಗಳ ಸರಣಿಯ ಕೊನೆಯಲ್ಲಿ, ಪರದೆಯ ಮೇಲೆ ದಪ್ಪ ಅಕ್ಷರಗಳು ಮೂಡಿಬಂದವು: 'ವಿಕಸಿತ ಭಾರತ 2047 – ದೇಶ ಕಟ್ಟುವ ಪಯಣದಲ್ಲಿ ನೀವೂ ಹೆಜ್ಜೆ ಹಾಕಿ; ಬದಿಯಲ್ಲಿ ಕುಳಿತು ನೋಡಬೇಡಿ.'

ಪದ್ಮಾ ಅಲ್ಲಿಯೇ ನಿಂತು ಆ ಪರದೆಯನ್ನೇ ನೋಡುತ್ತಿದ್ದಳು. ಶಾಲೆಯ ಪ್ರದರ್ಶನ ಕೊಠಡಿಯಲ್ಲಿದ್ದ ತನ್ನ ಗೆಳೆಯರ ಪುಟ್ಟ ಮಾದರಿಗಳೂ, ಈ ಬೃಹತ್ ಪರದೆಯ ಮೇಲಿನ ವಿಕಸಿತ ಭಾರತದ ನೈಜ ದೃಶ್ಯಗಳೂ ಅವಳ ಮನಸ್ಸಿನಲ್ಲಿ ಒಂದಕ್ಕೊಂದು ಬೆರೆತುಹೋದವು. ಶಾಲೆಯ ಆ ಸಣ್ಣ ಮೇಜುಗಳ ಮೇಲೆ ರೂಪುಗೊಂಡಿದ್ದು ಬರೀ ಮಾದರಿಗಳಲ್ಲ, ದೇಶ ಕಟ್ಟುವ ಕನಸುಗಳ ಮೊದಲ ಹೆಜ್ಜೆಗಳು ಎಂಬುದು ಅವಳಿಗೆ ನಿಧಾನವಾಗಿ ಅರ್ಥವಾಗತೊಡಗಿತು. ಆ ಮೊದಲ ಹೆಜ್ಜೆಯಲ್ಲಿ ತನ್ನ ಹೆಜ್ಜೆಯನ್ನೂ ಸೇರಿಸಬಹುದಾಗಿತ್ತು ಎಂಬ ನೆನಪು ಅವಳ ಮನಸ್ಸನ್ನು ಮೌನವಾಗಿ ತಟ್ಟಿತು.

ಮನೆಗೆ ಬಂದ ಮೇಲೆಯೂ ಪದ್ಮಾ ಕಿಟಕಿಯ ಬಳಿ ಸುಮ್ಮನೆ ಕುಳಿತಿದ್ದಳು. ತಂದೆ ಬಂದು ಅವಳ ಬಳಿ ಕುಳಿತರು.

"ಏನಾಯಿತು ಪದ್ಮಾ?" ಎಂದು ಪ್ರೀತಿಯಿಂದ ಕೇಳಿದರು.

ತಂದೆಯನ್ನು ನೋಡುತ್ತಿದ್ದಂತೆ ಪದ್ಮಾಳ ಕಣ್ಣುಗಳು ತುಂಬಿಬಂದವು. ಕಣ್ಣೀರು ಕೆನ್ನೆಯ ಮೇಲೆ ಜಾರುತ್ತಿರಲು, "ಅಪ್ಪ... ನಾನು ಭಾಗವಹಿಸದೇ ದೊಡ್ಡ ತಪ್ಪು ಮಾಡಿದೆ. ನನಗೀಗ ತುಂಬಾ ಪಶ್ಚಾತ್ತಾಪವಾಗುತ್ತಿದೆ," ಎಂದು ಗಂಟಲು ಬಿಗಿಹಿಡಿದು ಅತ್ತಳು.

ತಂದೆ ಅವಳ ಕಣ್ಣೀರನ್ನು ಒರೆಸಿ, ಪ್ರೀತಿಯಿಂದ ಸಾಂತ್ವನ ಹೇಳುತ್ತಾ, "ಬೇಸರ ಮಾಡಿಕೊಡಬೇಡ ಮಗಳೇ... ಮುಂದೆಯೂ ನಿನಗೆ ಅನೇಕ ಅವಕಾಶಗಳು ಸಿಗುತ್ತವೆ. ಆವಾಗ ತಪ್ಪದೇ ಭಾಗವಹಿಸು, ಆಯ್ತಾ?" ಎಂದು ಮೃದುವಾಗಿ ಧೈರ್ಯ ತುಂಬಿದರು.

ತಂದೆಯ ಮಾತುಗಳಿಂದ ಸಮಾಧಾನಗೊಂಡ ಪದ್ಮಾ ಮಂಚದ ಮೇಲೆ ಒರಗಿದಳು. "ಮುಂದಿನ ಬಾರಿ ನಾನು ಹಾದುಹೋಗುವುದಿಲ್ಲ," ಎಂದು ಮನಸ್ಸಿನಲ್ಲೇ ದೃಢವಾಗಿ ಸಂಕಲ್ಪ ಮಾಡಿಕೊಂಡಳು.

ರಾತ್ರಿಯ ಮೃದುವಾದ ಗಾಳಿಗೆ ಕಿಟಕಿಯ ಬಳಿಯಿದ್ದ ಪುಟ್ಟ ತ್ರಿವರ್ಣ ಧ್ವಜವು ಶಾಂತವಾಗಿ ಹಾರಾಡುತ್ತಿತ್ತು. ಪದ್ಮಾ ಆ ಧ್ವಜವನ್ನೇ ನೋಡುತ್ತಾ, ಹೊಸ ಭರವಸೆಯೊಂದಿಗೆ ಕಣ್ಣು ಮುಚ್ಚಿದಳು.