ಸಾಮಾನ್ಯವಾಗಿ ನಾನು ಚಿತ್ರದುರ್ಗದ ಐಮಂಗಲದ ಬಳಿ ಇರುವ ನನ್ನ ಜಮೀನಿಗೆ ಹೋದಾಗ, ಮುಖ್ಯ ನಗರವಾದ ಚಿತ್ರದುರ್ಗಕ್ಕೆ ಹೋಗುವುದು ತೀರಾ ಕಡಿಮೆ. ನಮ್ಮ ಬಾಯಿ ಮಾತಿನಲ್ಲಿ ಚಿತ್ರದುರ್ಗ ಯಾವಾಗಲೂ ಬರೀ ‘ದುರ್ಗ’, ಅಷ್ಟೇ. ಆದರೆ ಕಳೆದ ವಾರಾಂತ್ಯ ಕೃಷಿ ಹಾಗೂ ಕೃಷಿ ಉದ್ಯಮದ ಬಗ್ಗೆ ಮಾತನಾಡಲು ನನ್ನನ್ನು ಚಿತ್ರದುರ್ಗಕ್ಕೆ ಕರೆದಿದ್ದರು. ಹಾಗೆ ಹೋದವನು ದುರ್ಗದ ಹಳೆಯ ಸರ್ಕಾರಿ ಶಾಲೆ, ಕೋಟೆಯ ಬಳಿ ಇರುವ ಉಚ್ಚಂಗಮ್ಮನ ದೇವಸ್ಥಾನ, ಲಕ್ಷ್ಮಿ ಟಿಫನ್ ರೂಮ್‌ ಮುಂತಾದ ಜಾಗಗಳಲ್ಲೆಲ್ಲ ಓಡಾಡುತ್ತಿರುವಾಗ ದುರ್ಗದ ಹಳೆಯ ನೆನಪುಗಳೆಲ್ಲ ಸಾರಾಸಗಟಾಗಿ ಕಣ್ಣ ಮುಂದೆ ಹರಿದುಬಂದವು.

‘ದುರ್ಗ’ ಅಥವಾ ‘ಚಿತ್ರದುರ್ಗ’ ನಮಗೆಲ್ಲ ಮನಸ್ಸಿಗೆ ತುಂಬಾ ಹತ್ತಿರವಾದ ಊರು. ಅದು ಯಾಕೆ ಹೀಗೆ ಅಂತ ಹೇಳುವುದು ಕಷ್ಟ. ನಾನು ನನ್ನ ಬಾಲ್ಯದ ಕೆಲವು ವರ್ಷಗಳನ್ನು ಅಲ್ಲಿ ಕಳೆದನಾದರೂ, ನಮ್ಮ ತಾಯಿಯ ತವರು ಹಿರಿಯೂರು ಆದ್ದರಿಂದ ಚಿತ್ರದುರ್ಗದ ನಂಟು ನನಗೆ ಮುಂಚಿನ ದಿನದಿಂದಲೂ ಹೆಚ್ಚು. ತಾತನವರು ತಾಳ್ಯದವರು, ಸಾಕಷ್ಟು ಕಾಲ ಚಳ್ಳಕೆರೆಯಲ್ಲೂ ಇದ್ದವರು. ಹಾಗಾಗಿ ಈಗಲೂ ದುರ್ಗದಲ್ಲಿ ನನ್ನ ಪರಿಚಿತರು, ಗೆಳೆಯರು ಹಾಗೂ ಸಂಬಂಧಿಕರ ಮನೆಗಳು ಬೇಕಾದಷ್ಟು ಇವೆ.

ಬೀದಿಯ ಆಟಗಳು ಮತ್ತು ಬಾಲ್ಯದ ಮುಗ್ಧತೆ

ನಾವು ಸಣ್ಣವರಿದ್ದಾಗ ದುರ್ಗದ ರಸ್ತೆಗಳು ತೀರಾ ಅಗಲ, ಅಲ್ಲಿನ ಜಾಗಗಳೇ ದೊಡ್ಡ ದೊಡ್ಡವು ಎಂದು ಅನಿಸುತ್ತಿತ್ತು. ಈಗ ಅಲ್ಲಿ ನಾನೇ ಡ್ರೈವ್ ಮಾಡಿಕೊಂಡು ಹೋಗುವಾಗ "ಇಷ್ಟು ಸಣ್ಣದಿತ್ತಾ ರಸ್ತೆ, ಇಷ್ಟು ಸಣ್ಣದಿತ್ತಾ ಮನೆ?" ಎಂದು ಅನಿಸತೊಡಗುತ್ತದೆ. ಆಗ ನಮ್ಮ ಮನೆ ಇದ್ದದ್ದು (ಆಗಿನಂತೆ) ಸ್ವಲ್ಪ ಹೊರವಲಯದಲ್ಲಿ. ಮಳೆಗಾಲದಲ್ಲಿ ಅಲ್ಲಲ್ಲಿ ಬೆಳೆಯುತ್ತಿದ್ದ ಮರಗಳಲ್ಲಿ ಸೀತಾಫಲ ಹಾಗೂ ಸೀಬೆಹಣ್ಣುಗಳನ್ನು ಹುಡುಕಿ ತಿನ್ನುವುದೇ ಒಂದು ಖುಷಿ. ಆಗಿನ್ನೂ ಬೈಪಾಸ್ ರಸ್ತೆ ಆಗಿರಲಿಲ್ಲ ಎಂದು ಕಾಣುತ್ತದೆ, ನಾವುಗಳು ಅಲ್ಲಿ ಜಾಗಿಂಗ್ ಮಾಡಲೆಂದು ಹೋಗುತ್ತಿದ್ದೆವು.

ಸಂಜೆ ಹೊತ್ತು ಮನೆಯ ಎದುರು ಗೆಳೆಯರೊಂದಿಗೆ ಗೋಲಿ ಆಟ ಆಡುತ್ತಿದ್ದೆವು. ಲಗೋರಿ ಆಡುತ್ತಿದ್ದೆವು.  ಕೆಲವೊಮ್ಮೆ ನೆಲದ ಮೇಲೆಯೇ ಚೌಕಾಬಾರದ ಮನೆಗಳನ್ನು ಗೀಚಿ ಆಟ ಆಡಿದ್ದು ನೆನಪಿದೆ. ಇನ್ನು ಕೆಲವು ಹುಡುಗರು ಚಿಟ್ಟೆಗಳನ್ನು ಹಿಡಿದು ಬಾಟಲಿನಲ್ಲಿ ಹಾಕಿ ಇಟ್ಟುಕೊಳ್ಳುತ್ತಿದ್ದರು; ಅದು ಮುಂದೆ ದೊಡ್ಡದಾಗುತ್ತದೆ ಎಂಬ ನಂಬಿಕೆ ಅವರದ್ದು. ಒಮ್ಮೆ ವಿಪಿ ಎಕ್ಸ್ಟೆಂಷನ್‌ನ ಪಾರ್ಕ್ ಒಂದರ ಮಧ್ಯದಲ್ಲಿದ್ದ ದೊಡ್ಡ ತೊಟ್ಟಿಯಲ್ಲಿ ಪುಳುಪುಳು ಎಂದು ಹರಿದಾಡುತ್ತಿದ್ದ ಕಪ್ಪಗಿನ ಜೀವಿಗಳನ್ನು ಮೀನೆಂದು ಭಾವಿಸಿ, ಬಾಟಲು ತುಂಬಾ ಹಿಡಿದು ತಂದು ಮನೆಯಲ್ಲಿಟ್ಟಿದ್ದೆವು. ಮೀನು ಸಾಕಬೇಕೆಂಬ ನಮಗೆ ಆಸಕ್ತಿ! ಆದರೆ ಕೆಲವೇ ದಿನಗಳಲ್ಲಿ ಆ ಬಾಟಲಿನಲ್ಲಿದ್ದ ಜೀವಿಗಳೆಲ್ಲ ಮಾಯವಾದವು. ಬೆಕ್ಕು ತಿಂದು ಹೋಯಿತಾ ಎಂದು ಯೋಚಿಸುತ್ತಿದ್ದಾಗ ಅಮ್ಮ ಬಂದು ನಕ್ಕು ಹೇಳಿದಳು, "ಅಯ್ಯೋ, ಅದೆಲ್ಲ ಮೀನಲ್ಲ, ಕಪ್ಪೆಯ ಮರಿಗಳು (ಗೊರಗಟ್ಟಿ)!"

ದುರ್ಗದಲ್ಲಿ ಬೇಸಿಗೆ ಬಂತೆಂದರೆ ವಿಪರೀತ ನೊಣಗಳ ಕಾಟ. ನಮ್ಮ ಮನೆಯ ಹಿಂಭಾಗದ ಕನ್ಸರ್ವೆನ್ಸಿ ರಸ್ತೆಯಲ್ಲಿ ಹಂದಿಗಳ ಓಡಾಟ ಇದ್ದುದರಿಂದ ಹಿಂದಿನ ಬಾಗಿಲನ್ನು ನಾವು ತೆರೆಯುತ್ತಲೇ ಇರಲಿಲ್ಲ. ನೊಣಗಳು ಶುರುವಾದವೆಂದರೆ ವಿಪರೀತ ಪಜೀತಿ. ನೊಣ ಹೊಡೆಯಲು ಈಗಿರುವ ಎಲೆಕ್ಟ್ರಿಕ್ ಬ್ಯಾಟ್‌ಗಳ ಬದಲಾಗಿ ಆಗ ಮರದ ಅಥವಾ ಪ್ಲಾಸ್ಟಿಕ್‌ನ ಬ್ಯಾಟ್‌ಗಳು ಬರುತ್ತಿದ್ದವು. ಕೆಲವು ಕಾಲ ನಾನು ನೊಣ ಹೊಡೆಯುವುದರಲ್ಲೇ ನಿಸ್ಸೀಮನಾಗಿ ಬಿಟ್ಟಿದ್ದೆ. ಇದನ್ನು ನೋಡಿದ ಅಪ್ಪ, "ಏನು ಕೆಲಸ ಇಲ್ಲ, ನೊಣ ಹೊಡಿತಾ ಕೂತ್ಕೋ! ಓದುವುದು ಬರೆಯುವುದು ಯಾವುದು... ಬೇಡ" ಎಂದು ಚೆನ್ನಾಗಿ ಬೈದಿದ್ದರು.

ಅದೇ ಸಮಯದಲ್ಲಿ ನನ್ನ ಅಮ್ಮನಿಗೆ ಪೇಟೆಯ ಬಳಿ ಇದ್ದ ಮುಕ್ತ ಮೇಡಂ ರವರ ಪರಿಚಯವಾಗಿತ್ತು. ಅವರು ಅಮ್ಮನಿಗೆ ಯಾವುದೇ ಶುಲ್ಕ ತೆಗೆದುಕೊಳ್ಳದೆ ಸಂಸ್ಕೃತ ಹೇಳಿಕೊಡುತ್ತಿದ್ದರು. ಫೀಸ್ ಕೊಡುತ್ತಿಲ್ಲ ಎಂಬ ಕಾರಣಕ್ಕೆ ಮನಸ್ಸು ತಡೆಯದೆ, ಅಮ್ಮ ಆಗಾಗ ಚಟ್ನಿ ಪುಡಿ, ಮೆಂತ್ಯದ ಪುಡಿಗಳನ್ನು ಮಾಡಿಕೊಂಡು ಹೋಗಿ ಅವರಿಗೆ ಕೊಡುತ್ತಿದ್ದುದು ನೆನಪಿದೆ. ಅಮ್ಮ ಹಾಗೆ ಕಲಿತ ಸಂಸ್ಕೃತವನ್ನು ನನಗೂ ಕಲಿಸಿದ್ದರು. ನಾನು ಪ್ರೈಮರಿ ಸ್ಕೂಲಿನಲ್ಲಿ ಇರುವಾಗಲೇ ಶೃಂಗೇರಿ ಮಠದ ಪ್ರಥಮ ಹಾಗೂ ದ್ವಿತೀಯ ಪರೀಕ್ಷೆಗಳನ್ನು ಮುಗಿಸಿಕೊಂಡು ಬಿಟ್ಟಿದ್ದೆ.

ಕಲ್ಲುಗಳ ರಾಶಿಯ ನಡುವಿನ ಶಾಲೆ ಮತ್ತು ಶಿಕ್ಷಣ

ನಮ್ಮ ಶಾಲೆ ಇದ್ದದ್ದು ಚಂದ್ರವಳ್ಳಿಯ ಗುಹೆಗಳ ಬಳಿಯೇ. ಶಾಲೆಯಲ್ಲಿ ಪ್ರಾರ್ಥನೆ ಮಾಡುವಾಗಲೇ ನಮಗೆ ಕೋಟೆಯ ಸುಂದರ ನೋಟ ಕಾಣುತ್ತಿತ್ತು; ಶಾಲೆಗೆ ಬಂದರೆ ಅದೊಂದು ರೆಸಾರ್ಟ್ ವ್ಯೂ ತರಹ ಇರುತ್ತಿತ್ತು. ಆದರೆ ಶಾಲೆ ಮಾತ್ರ ಚಿಕ್ಕದು, ಅಲ್ಲಿನ ರೂಮ್‌ಗಳು ಬಹಳ ಸಣ್ಣವು. ಆಗಿನ್ನೂ ಕಟ್ಟಡದ ಕೆಲಸ ಸಂಪೂರ್ಣವಾಗಿರಲಿಲ್ಲ. ರಸ್ತೆಯ ಎರಡು ಬದಿಗಳಲ್ಲಿ ದಪ್ಪಗಿನ ಹುಣಸೆ ಮರಗಳಿದ್ದವು ಎಂದು ಕಾಣುತ್ತದೆ. ಆಗ ನಮ್ಮ ಶಾಲೆಯ ಸುತ್ತ ಒಂದು ಮನೆಯೂ ಇರಲಿಲ್ಲ. ಎತ್ತ ನೋಡಿದರೂ ಪ್ರಕೃತಿಯೇ ಒಂದು ಚಿತ್ರ ಬಿಡಿಸಿದಂತೆ ಕಾಣುತ್ತಿತ್ತು—ಕಲ್ಲುಗಳ ರಾಶಿಯಲ್ಲಿ ಮೂಡಿದ ಚಿತ್ರದಂತೆ. ಅದಕ್ಕೇ ಅಲ್ಲವೇ ಇದಕ್ಕೆ ‘ಚಿತ್ರಕಲ್ ದುರ್ಗ’ ಎಂದು ಕರೆಯುತ್ತಿದ್ದುದು!

ಯಾವತ್ತಾದರೂ ನಾನು ಶಿವಮೊಗ್ಗಕ್ಕೆ ಹೋಗಲೆಂದು ಶಾಲೆಗೆ ರಜೆ ಹಾಕಿದಾಗ, ಅದೇ ದಾರಿಯಲ್ಲಿ ಶಾಲೆಯನ್ನು ನೋಡಿಕೊಂಡು ಹೋಗುತ್ತಿದ್ದೆವು. ಪ್ರಾರ್ಥನೆಯ ಸಮಯದಲ್ಲಿ ಅಲ್ಲಿಂದ ಹಾದು ಹೋದರೆ, ಕರ್ಕಶವಾದ ಸದ್ದು ಕೇಳುತ್ತಿತ್ತು. ಆಗ ನಾನು, "ನೋಡಿ, ನಾನು ಇಲ್ಲದ್ದಕ್ಕೆ ಹೀಗೆ ಪ್ರಾರ್ಥನೆ ಮಾಡುತ್ತಿದ್ದಾರೆ, ಇಲ್ಲದಿದ್ದರೆ ನಾನು ಅಲ್ಲಿ ಮುಂದೆ ನಿಂತು ಎಲ್ಲರಿಂದಲೂ ಸರಿಯಾಗಿ ಪ್ರಾರ್ಥನೆ ಹೇಳಿಸುತ್ತಿದ್ದೆ" ಎಂದು ಅಮ್ಮನಿಗೆ ಹೇಳಿ ಕೊಚ್ಚಿಕೊಳ್ಳುತ್ತಿದ್ದೆ. ಶಾಲೆಯ ಮೂಲ ಸೌಕರ್ಯಗಳು ಹೆಚ್ಚಾಗಿ ಇಲ್ಲದಿದ್ದರೂ, ನಮಗೆ ಅಲ್ಲಿಗೆ ಹೋಗುವುದು ಒಂದು ಸಂಭ್ರಮವಾಗಿತ್ತು. ಅಲ್ಲಿ ಕಳೆದ ಸಮಯ ಚಿರಕಾಲ ಮನಸ್ಸಿನಲ್ಲಿ ಉಳಿಯುವಂತದ್ದು.

ನಮ್ಮ ಶಾಲೆಯಲ್ಲಿ ‘ಕನ್ನಡ ಸಂಸ್ಕೃತಿ ಪರೀಕ್ಷೆ’ ಎಂಬ ಪುಸ್ತಕವನ್ನು ಕೊಟ್ಟು ವರ್ಷದ ಮಧ್ಯದಲ್ಲಿಯೂ ಅಥವಾ ಕೊನೆಯಲ್ಲಿಯೋ ಒಂದು ಪರೀಕ್ಷೆಯನ್ನು ಏರ್ಪಡಿಸುತ್ತಿದ್ದರು. ಆ ಪುಸ್ತಕವು ಬಹಳ ಚೆನ್ನಾಗಿತ್ತು; ಅದರಲ್ಲೇ ನಮಗೆ ನೃಪತುಂಗ, ಕವಿರಾಜಮಾರ್ಗ ಮತ್ತು ಹಲವು ಕವಿಗಳ ಪದ್ಯಗಳು ಪರಿಚಯವಾಗಿದ್ದು. ನಮಗೆ ಪಾಠ ಮಾಡುತ್ತಿದ್ದ ಕನ್ನಡ ಮತ್ತು ಇಂಗ್ಲಿಷ್ ಟೀಚರ್‌ಗಳೆಲ್ಲ ತುಂಬಾ ಚೆನ್ನಾಗಿ ಪಾಠ ಮಾಡುತ್ತಿದ್ದರು.

ಕೋಟೆ, ದೇವಸ್ಥಾನ ಮತ್ತು ಸಂತೆ ಹೊಂಡದ ನೆನಪು

IMG_1447.jpg

ಒಮ್ಮೆ ನನಗೆ ತೀರಾ ಹುಷಾರಿಲ್ಲದಂತೆ ಆದಾಗ ಅಮ್ಮ ಉಚ್ಚಂಗಮ್ಮನ ದೇವಸ್ಥಾನದಲ್ಲಿ ಏನೋ ಹರಕೆ ಒತ್ತಿಕೊಂಡಿದ್ದರಂತೆ. ಹೀಗಾಗಿ ನನ್ನನ್ನು ಆಗಾಗ ಅಲ್ಲಿಗೆ ಕರೆದುಕೊಂಡು ಬರುತ್ತಿದ್ದರು. ಈಗಲೂ ಆ ದೇವಸ್ಥಾನ ಯಾವುದೋ ಅಪೂರ್ವ ಹೆರಿಟೇಜ್ ತಾಣದಂತೆ ಕಾಣುತ್ತದೆ, ಆ ದೇವಸ್ಥಾನಕ್ಕೆ ತನ್ನದೇ ಆದ ಒಂದು ವಿಶೇಷತೆ ಇದೆ. ಅದೇ ಬೀದಿಯಲ್ಲಿ ನಡೆಯುತ್ತಾ ಬಂದರೆ ಒಂದು ದೀಪಸ್ತಂಭ ಇದೆ. ನಾವು ಸಣ್ಣವರಿದ್ದಾಗ ಇಡೀ ಬೀದಿಯಲ್ಲಿ ಹೆಂಚಿನ ಅಥವಾ ಮಣ್ಣಿನ ಸಣ್ಣ ಸಣ್ಣ ಮನೆಗಳಿದ್ದ ಕಾರಣ ಆ ದೀಪಸ್ತಂಭ ಎದ್ದು ಕಾಣುತ್ತಿತ್ತು ಅನಿಸುತ್ತದೆ. ಈಗ ಸುತ್ತಲೂ ಕಾಂಕ್ರೀಟ್ ಮನೆಗಳು ಬಂದ ಮೇಲೆ ಆ ದೀಪಸ್ತಂಭ ಹೆಚ್ಚಾಗಿ ಜನರ ಗಮನಕ್ಕೆ ಬರುವುದೇ ಇಲ್ಲ.

ಇನ್ನು ಕೋಟೆ ಹತ್ತಿ ಹೋಗುವಾಗ ಇರುತ್ತಿದ್ದ ಖುಷಿಯೇ ಬೇರೆ. ನಮಗೆಲ್ಲ ಒಳಗೆ ಗೋಪಾಲಸ್ವಾಮಿ ಹೊಂಡದವರೆಗೂ ಹೋಗುವುದೆಂದರೆ ಏನೋ ಸಡಗರ. ಅಲ್ಲಿ ಹೋಗಿ ಸ್ವಲ್ಪ ಹೊತ್ತು ಕುಳಿತುಕೊಳ್ಳುತ್ತಿದ್ದೆವು. ಗೋಪಾಲಸ್ವಾಮಿ ಹೊಂಡದ ನೀರು ಸದಾ ಕಾಲ ಸಮೃದ್ಧವಾಗಿರುತ್ತಿತ್ತು, ಎಂತಹ ಬೇಸಿಗೆಯಲ್ಲೂ ಅಲ್ಲಿ ನೀರಿರುತ್ತಿತ್ತು. ಅಲ್ಲಿಂದ ಇಳಿಯುವಾಗ ಸಂತೆ ಹೊಂಡಕ್ಕೆ ಹೋಗುವ ನೀರಿನ ಹಾದಿ, ತಣ್ಣೀರು ದೋಣಿ ಹಾಗೂ ಒನಕೆ ಓಬವ್ವನ ಕಿಂಡಿಯ ಬಳಿ ಸಾಗಿ ಹೋಗುತ್ತಿತ್ತು. ತಣ್ಣೀರು ದೋಣಿಗೆ ಹೋಗುವ ಮುನ್ನವೇ ಆ ತಣ್ಣಗಿರುವ ನೀರನ್ನು ಕೈಯಲ್ಲಿ ಹಿಡಿದು, ಆಟ ಆಡಿಕೊಂಡು, ಅಲ್ಲಿ ನೀರು ಕುಡಿಯುತ್ತಿದ್ದೆವು. ಅಷ್ಟು ಸ್ವಚ್ಛವಾಗಿರುತ್ತಿತ್ತು ನೀರು. ಆದರೆ ಈಗ ತಣ್ಣೀರು ದೋಣಿಯಲ್ಲಿ ಪ್ಲಾಸ್ಟಿಕ್ ಎಲ್ಲ ಹಾಕಿ ಗಲೀಜು ಮಾಡಿ ಇಟ್ಟುಕೊಂಡಿದ್ದಾರೆ.

ನಾವು ಸಣ್ಣವರಿದ್ದಾಗ ಒನಕೆ ಓಬವ್ವನ ಕಿಂಡಿಯ ಬಳಿ ಹೋಗಿ ನೋಡಬಹುದಾಗಿತ್ತು. "ಅಲ್ಲಿಂದ ತೂರಿಕೊಂಡು ಹೊರಗೆ ಬಂದರೆ ಸಂತೆ ಹೊಂಡದವರೆಗೂ ಹೋಗಬಹುದು" ಎಂದು ಎಲ್ಲರೂ ಹೇಳುತ್ತಿದ್ದರು. ಸಂತೆ ಹೊಂಡದಲ್ಲಿ ನೀರು ನೋಡಿದ್ದು ನನಗೆ ನೆನಪಿದೆ. ಅದೊಮ್ಮೆ ಅಲ್ಲಿ ಬಸ್ಸೊಂದು ಬಿದ್ದು ದೊಡ್ಡ ದುರಂತ ಸಂಭವಿಸಿ, ಸಾಕಷ್ಟು ಜನರು ಮೃತಪಟ್ಟಿದ್ದರಿಂದ ಆ ಸಂತೆ ಹೊಂಡವನ್ನೇ ಮುಚ್ಚಿಬಿಟ್ಟಿದ್ದರು. ಈಗ ಅದನ್ನು ಮತ್ತೆ ತೆರೆಯಲಾಗಿದೆ ಎಂದು ಓದಿದ್ದೆ.

ದುರ್ಗದ ರುಚಿ: ಮಂಡಕ್ಕಿ ಮತ್ತು ಖಾಲಿ ದೋಸೆ

ದುರ್ಗಕ್ಕೆ ಹೋದರೆ ಮಂಡಕ್ಕಿ ಮತ್ತು ಮೆಣಸಿನಕಾಯಿ ತಕ್ಷಣ ನೆನಪಿಗೆ ಬರುವ ವಿಷಯ. ಅಲ್ಲಿನ ಜೆಸಿಆರ್ ಎಕ್ಸ್ಟೆಂಷನ್ ಸರ್ಕಲ್ ಬಳಿ ಶೆಟ್ಟರು ಒಬ್ಬರು ಪ್ರತಿನಿತ್ಯ ಸಂಜೆ ಹೊತ್ತು ಮಂಡಕ್ಕಿ ಮಾಡಿಕೊಡುತ್ತಿದ್ದರು. ಅವರು ಮಂಡಕ್ಕಿಗೆ ಹಾಕುತ್ತಿದ್ದ, ಕಡಲೆ ಹಿಟ್ಟಿನಿಂದ ಮಾಡಿದ ಕರಿದ ತಿಂಡಿಯ ಒಂದು ವಿಶೇಷ ‘ಖಾರ’, ಆ ಮಂಡಕ್ಕಿಗೆ ಅದೇನೋ ಅಪೂರ್ವವಾದ ರುಚಿಯನ್ನು ಕೊಡುತ್ತಿತ್ತು. ನೀರುಳ್ಳಿ ಹಾಕುತ್ತಿದ್ದರೋ ಇಲ್ಲವೋ ನೆನಪಿಲ್ಲ, ಆದರೆ ಮಂಡಕ್ಕಿಯನ್ನು ಪೊಟ್ಟಣದಲ್ಲಿ ಹಾಕಿ, ಅದರ ಮೇಲೆ ಖಾರ ಉದುರಿಸಿ, ಕೈಯಲ್ಲಿ ಆ ಪೊಟ್ಟಣವನ್ನು ಹಿಡಿದು ಮೇಲಿಂದ ಕೆಳಕ್ಕೆ ಕುಲುಕಿ ಚೆನ್ನಾಗಿ ಮಿಕ್ಸ್ ಮಾಡಿ ಕೊಡುತ್ತಿದ್ದರು. ಅವರು ಹೀಗೆ ಮಿಕ್ಸ್ ಮಾಡುವಾಗ ನಮ್ಮ ಕೈಗೆ ಆ ಪೊಟ್ಟಣ ಸಿಗುವವರೆಗೂ ನಮಗೆ ತವಕವೋ ತವಕ! ಸಂಜೆ ಹೊತ್ತಿಗೆ ಅವರು ಮಾಡುತ್ತಿದ್ದ ಆ ಮಂಡಕ್ಕಿಯನ್ನು ತಿನ್ನಲು ಜನರ ದೊಡ್ಡ ಸಾಲೇ ನೆರೆದಿರುತ್ತಿತ್ತು. ಇನ್ನು ದುರ್ಗದಲ್ಲಿ ಅಲ್ಲಲ್ಲಿ ಮಾಡುತ್ತಿದ್ದ ‘ಮೆಣಸಿನಕಾಯಿ’ (ಮೆಣಸಿನಕಾಯಿ ಬೋಂಡ) ಕೂಡ ಬಹಳ ಜನಪ್ರಿಯವಾಗಿತ್ತು. ಆಗಷ್ಟೇ ಬೇಕರಿಗಳ ಸಾಮ್ರಾಜ್ಯ ಬೆಳೆಯುತ್ತಿದ್ದ ಕಾಲ, ಪೇಟೆಯ ಬಳಿ ಇದ್ದ ಒಂದು ಬೇಕರಿಗೆ ಅಪ್ಪ ಕರೆದುಕೊಂಡು ಹೋಗಿ ಕೆಲವು ಬೇಕರಿ ತಿನಿಸುಗಳನ್ನು ಕೊಡಿಸುತ್ತಿದ್ದದ್ದು ನೆನಪಿದೆ.

ಚಿತ್ರದುರ್ಗದ ಆನೆಬಾಗಿಲ ಬಳಿ ಇರುವ ‘ಲಕ್ಷ್ಮಿ ಟಿಫನ್ ರೂಮ್’ಗೆ ಆಗಾಗ ಅಪ್ಪ ಕರೆದುಕೊಂಡು ಹೋಗುತ್ತಿದ್ದರು. ಅಲ್ಲಿನ ಖಾಲಿ ದೋಸೆ ನಮಗೆ ಅಚ್ಚುಮೆಚ್ಚು. ಮುಂಚಿನಲ್ಲಿದ್ದಷ್ಟು ರುಚಿ ಈಗ ಇಲ್ಲದಿದ್ದರೂ, ಈಗಲೂ ಕೆಲವೊಮ್ಮೆ ಅಲ್ಲಿಗೆ ಹೋಗಿ ದೋಸೆ ತಿಂದುಕೊಂಡು ಬರುತ್ತೇವೆ.

ಹಿರಿಯೂರು ಮತ್ತು ಚಳ್ಳಕೆರೆಯ ನಂಟು

ದುರ್ಗದ ಮತ್ತೊಂದು ನೆನಪೆಂದರೆ, ಬಸ್ಸುಗಳಲ್ಲಿ ‘ಶಟಲ್’ ಹಾಗೂ ‘ಎಕ್ಸ್‌ಪ್ರೆಸ್’ ಎಂಬ ಎರಡು ವಿಧದ ಕೆಂಪು ಬಸ್ಸುಗಳಿರುತ್ತಿದ್ದವು. ಕೆಲವೊಮ್ಮೆ ಹಿರಿಯೂರಿಗೆಂದು ‘ಶಟಲ್’ ಬಸ್ ಹತ್ತಿದಾಗ, ಗಾಡಿ ಐಮಂಗಲದಲ್ಲಿ ನಿಂತರೆ ನಮಗೆ ಓಡಿಹೋಗಿ ಕಾರಾಮಂಡಕ್ಕಿ ಕಟ್ಟಿಸಿಕೊಳ್ಳುವಷ್ಟು ಸಮಯ ಸಿಗುತ್ತಿತ್ತು!

ದುರ್ಗದಿಂದ ಹಿರಿಯೂರು ಬಹಳ ಹತ್ತಿರ, ಆದರೂ ಆಗಿನ ಕಾಲಕ್ಕೆ ನಮಗೆ ಎಷ್ಟೋ ದೂರ ಪ್ರಯಾಣ ಮಾಡಿದಂತೆ ಭಾಸವಾಗುತ್ತಿತ್ತು; ಬಸ್ಸಿನಲ್ಲಿ ಸರಿಯಾಗಿ ಒಂದು ಗಂಟೆ ಹಿಡಿಯುತ್ತಿತ್ತು. ಹಿರಿಯೂರಿನ ತಾತನ ಮನೆ ಬಸ್ ಸ್ಟ್ಯಾಂಡ್‌ನಿಂದ ಸ್ವಲ್ಪವೇ ದೂರದಲ್ಲಿದ್ದರಿಂದ ನಾವು ಅಲ್ಲಿಂದ ನಡೆದೇ ಹೋಗುತ್ತಿದ್ದೆವು. ಹಾಗೆ ನಡೆದು ಹೋಗುವ ಮುನ್ನ ಹಿರಿಯೂರಿನ ಬಸ್ ಸ್ಟ್ಯಾಂಡಿನಲ್ಲಿ ಅದೇ ಕಾರಾಮಂಡಕ್ಕಿ ‘ಚೌಚೌ’ ಎಂಬ ಹೆಸರಲ್ಲಿ ಮಾರಾಟವಾಗುತ್ತಿತ್ತು. ನಾವು ಗಾಡಿಗಳಲ್ಲಿ ಸಿಗುತ್ತಿದ್ದ ‘ಚೌಚೌ’ ಕಟ್ಟಿಸಿಕೊಂಡು, ತಾತನ ಮನೆಯವರೆಗೂ ಕರಂ-ಕುರಂ ಮಂಡಕ್ಕಿಯನ್ನು ಸವಿಯುತ್ತಾ, ಮಾತನಾಡುತ್ತಾ ಹೋಗುತ್ತಿದ್ದೆವು. ಹಿರಿಯೂರಿಗೆ ಬಂದರೆ ಮಾರಿ ಕಣಿವೆ (ವಾಣಿ ವಿಲಾಸ ಸಾಗರ), ನೂರು ಕಣ್ಣಿನ ಸೇತುವೆಗಲ್ಲಾ ಹೋದದ್ದು ನೆನಪಿದೆ.

ನನಗೆ ಹುಷಾರಿಲ್ಲದಂತಾದಾಗೆಲ್ಲ ಅಮ್ಮ ನನ್ನನ್ನು ಚಿತ್ರದುರ್ಗದಿಂದ ಚಳ್ಳಕೆರೆಗೆ ಕರೆದುಕೊಂಡು ಹೋಗುತ್ತಿದ್ದರು. ಚಳ್ಳಕೆರೆಯಲ್ಲಿ ಗೋವಿಂದಾಸ್ ಡಾಕ್ಟರ್ ಅವರು ತಮ್ಮ ಆಯುರ್ವೇದದ ಔಷಧಿಯಿಂದ ಬಹಳ ಜನಪ್ರಿಯರಾಗಿದ್ದರು. ಅವರ ‘ದತ್ತ ಪೀಠ’ಕ್ಕೆ ಉತ್ತರ ಕರ್ನಾಟಕದಿಂದ ಕೂಡ ಜನರು ಬರುತ್ತಿದ್ದರು. ಡಾಕ್ಟರರು ಬಡ ರೋಗಿಗಳಿಂದ ದುಡ್ಡು ತೆಗೆದುಕೊಳ್ಳುತ್ತಿರಲಿಲ್ಲ. ಇದಲ್ಲದೆ ಕೆಲವೊಮ್ಮೆ ಊರಿಗೆ ವಾಪಸ್ ಹೋಗಲು ಕೂಡ ದುಡ್ಡಿಲ್ಲದಂತಿರುತ್ತಿದ್ದ ನಿರ್ಗತಿಕ ರೋಗಿಗಳ ಸ್ಥಿತಿ ನೋಡಿ, ಅವರೇ ಕೈಯಿಂದ ದುಡ್ಡು ಕೊಟ್ಟು ಕಳುಹಿಸುತ್ತಿದ್ದುದನ್ನು ಕಣ್ಣಾರೆ ನೋಡಿದ್ದು ಈಗಲೂ ನೆನಪಿದೆ!

ಇನ್ನು ದುರ್ಗದಿಂದ ಮಲ್ಲಾಡಿಹಳ್ಳಿ ಹತ್ತಿರವೇ ಇದ್ದರೂ, ಅಲ್ಲಿಗೆ ಹೋಗುವುದೆಂದರೆ ಸಾಕಷ್ಟು ಸಮಯ ಹಿಡಿಯುತ್ತಿತ್ತು, ಏಕೆಂದರೆ ಆಗ ರಸ್ತೆ ಸರಿಯಾಗಿರಲಿಲ್ಲ. ಮಲ್ಲಾಡಿಹಳ್ಳಿಯ ‘ರಾಘವೇಂದ್ರ ಸ್ವಾಮಿಗಳ’ (ತಿರುಕ)ರ ಬಗ್ಗೆ ನಾನು ನನ್ನ ಹಳೆಯ ಲೇಖನದಲ್ಲಿ ಬರೆದಿದ್ದೆ.

ಮೊನ್ನೆ ಶನಿವಾರದ ಭಾಷಣ...

ಕಳೆದ ವಾರಾಂತ್ಯ ನನ್ನನ್ನು “ಕೃಷಿ ಹಾಗೂ ಕೃಷಿಯಿಂದ ಉದ್ಯಮ” ಕುರಿತಾಗಿ ಮಾತನಾಡಲು ಚಿತ್ರದುರ್ಗಕ್ಕೆ ಆಮಂತ್ರಿಸಿದ್ದಾಗ ನನ್ನ ಜೊತೆಯಾಗಿ ಶಿವಮೊಗ್ಗದಲ್ಲಿ ಒಟ್ಟಿಗೆ ಓದಿದ ನನ್ನ ಗೆಳೆಯರು ಕೂಡ ಬಂದಿದ್ದರು. ಅಲ್ಲಿ ನನ್ನ ಭಾಷಣ ಮುಗಿದ ಕೂಡಲೇ, ನನ್ನ ಗೆಳೆಯರಿಗೆ ಲಕ್ಷ್ಮಿ ಟಿಫನ್ ರೂಮ್ ತಿಂಡಿಯ ರುಚಿ ತೋರಿಸಲೆಂದೇ ಎಲ್ಲರನ್ನೂ ಅಲ್ಲಿಗೆ ಕರೆದುಕೊಂಡು ಹೋಗಿದ್ದೆ. ಈಗ ಲಕ್ಷ್ಮಿ ಟಿಫನ್ ರೂಮ್ ಬಳಿಯೇ ಇರುವ ‘ಚಮುಂಡಾ ಸ್ವೀಟ್ಸ್’ ಎಂಬ ಸಿಹಿ ತಿನಿಸುಗಳ ಅಂಗಡಿ ದುರ್ಗದ ಜನರಲ್ಲಿ ಬಹಳ ಜನಪ್ರಿಯತೆ ಪಡೆದಿದೆ, ಮೊನ್ನೆ ಅಲ್ಲಿಗೆ ಕೂಡ ಹೋಗಿದ್ದೆವು.

ಚಿತ್ರದುರ್ಗದ ಆನೆಬಾಗಿಲು, ರಂಗಯ್ಯನ ಬಾಗಿಲು ಮುಂತಾದ ಜಾಗಗಳಲ್ಲಿ ಓಡಾಡುತ್ತಿರುವಾಗ ನನ್ನ ಬಾಲ್ಯದ ಈ ಎಲ್ಲಾ ನೆನಪುಗಳು ಮರುಕಳಿಸಿದವು. ಹೀಗೆ ದುರ್ಗದ ನೆನಪುಗಳು ನೂರಾರು, ಇವೆಲ್ಲವನ್ನೂ ಬರೆಯುತ್ತಾ ಕೂತರೆ ನಾನು ಅದರಲ್ಲೇ ಮುಳುಗಿಹೋಗಿಬಿಡುತ್ತೇನೆ.

ಮೊನ್ನೆ ದುರ್ಗದಲ್ಲಿ ನಾನು ಮಾಡಿದ ಭಾಷಣದ ವಿಡಿಯೋ ಇಲ್ಲೇ ಈ ಲೇಖನದ ಕೊನೆಯಲ್ಲಿದೆ. ನಿಮಗೆ ಅನುಕೂಲವಾದಾಗ ಕೇಳಿ ನೋಡಿ.

ವಿಡಿಯೋ: ಪ್ರದೀಪ್ ಕುಲಕರ್ಣಿ.