ಕರ್ಣನು ಒಬ್ಬ ಅಪ್ರತಿಮ ಪರಾಕ್ರಮಿ, ಸೂರ್ಯಪುತ್ರನೆಂದಮೇಲೆ ಅವನ ಪರಾಕ್ರಮಕ್ಕೆ ಎಣೆಯುಂಟೇ? ಅರ್ಜುನನನ್ನೇ ಮೀರಿಸುವಂತಹ ಬಿಲ್ಲುಗಾರ; ವೀರ ಪರಶುರಾಮನ ಶಿಷ್ಯ. ತನ್ನ ಬದುಕಿನಲ್ಲಿ ಸ್ನೇಹಕ್ಕೆ ಅತ್ಯಂತ ಮಹತ್ವದ ಸ್ಥಾನವನ್ನು ಕೊಟ್ಟವನು ಕರ್ಣ. ಅವನೊಬ್ಬ ಆದರ್ಶ ಸ್ನೇಹಿತ. ಅವನ ಸ್ನೇಹವು ಕೃತಜ್ಞತಾ ಭಾವದ ಪರಮಾವಧಿ ಎನ್ನಬಹುದು. ಅವನ ದಾನತತ್ಪರತೆಯ ಗುಣವು ಕೂಡ ಅವನನ್ನು ʻದಾನಶೂರ ಕರ್ಣʼ ಎಂದು ಜನ ಇಂದಿಗೂ ಅವನನ್ನು ನೆನೆಸಿಕೊಳ್ಳುವಂತೆ ಮಾಡಿದೆ. ಆದರೆ ಈ ಎಲ್ಲ ಧನಾತ್ಮಕ ಗುಣಗಳು ಅವನ ಬದುಕಿನ ದಾರಿಯ ಮುಳ್ಳುಗಳಾದುವೇ ಹೊರತು ಅವನ ಜೀವನವನ್ನು ಸಂತಸಮಯವಾಗಿಸಲಿಲ್ಲ ಎನ್ನುವುದೇ ಒಂದು ದೊಡ್ಡ ವಿಪರ್ಯಾಸ! ಏಕೆಂದರೆ ಅವನು ಹುಟ್ಟಿನಿಂದ ಸಾವಿನವರೆಗೂ ವಿಧಿಯ ಕೈಗೊಂಬೆಯಾಗಿಯೇ ಬದುಕಿದನು. ಸ್ವಂತ ತೀರ್ಮಾನಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯವಿದ್ದಾಗ ಕೂಡ ಅವನ ನಿರ್ಧಾರಗಳು ಅಧರ್ಮದ ಕಡೆಗೇ ಇದ್ದವು. ಅಥವಾ ತನಗೆ ತಾನೇ ನೋವು ತಂದುಕೊಳ್ಳುವಂತಹದ್ದಾಗಿದ್ದವು.
ಕರ್ಣನ ಬಗ್ಗೆ ಕುಂತಿಯು ಮೊದಲೇ ಎಲ್ಲರಿಗೂ ತಿಳಿಸಿದ್ದರೆ ಅವನೂ ಪಾಂಡವರಲ್ಲಿ ಒಬ್ಬನಾಗುತ್ತಿದ್ದ, ಆಗ ಷಷ್ಠ ಪಾಂಡವರಿರುತ್ತಿದ್ದರು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಇದು ಸರಿಯಲ್ಲ. ಕುಂತಿಯು ಪಾಂಡುರಾಜನನ್ನು ವಿವಾಹವಾಗುವ ಮೊದಲೇ ಇವನನ್ನು ಮಗನಾಗಿ ಪಡೆದಿದ್ದಳು. ಆದ್ದರಿಂದ ಕರ್ಣನು ಪಾಂಡವರಿಗೆ ಹಿರಿಯಣ್ಣನಾದರೂ ಆತ ಪಾಂಡವರಲ್ಲಿ ಒಬ್ಬನಾಗಲಾರ. ಅವನು ಪಾಂಡವನಲ್ಲ, ಕೇವಲ ಸೂರ್ಯಪುತ್ರ ಎನ್ನುವುದಷ್ಟೇ ಸರಿ!
ಕರ್ಣನದು ಶಾಪಗ್ರಸ್ತ ಜೀವನ! ಕರ್ಣನ ಜೀವನವು ದುರಂತದಿಂದಲೇ ಪ್ರಾರಂಭವಾಗಿ ದುರಂತದಲ್ಲೇ ಕೊನೆಯಾಗುತ್ತದೆ. ಕ್ಷತ್ರಿಯವರ್ಣದಲ್ಲಿ ಹುಟ್ಟಿದರೂ ಜೀವನಪೂರ್ತಿ ಶೂದ್ರವರ್ಣದ ಹಣೆಪಟ್ಟಿಯನ್ನೇ ಧರಿಸಿಕೊಂಡು ಬದುಕಬೇಕಾಯಿತು! ಅದರಿಂದ ಜೀವನಪೂರ್ತಿ ಸಾಕಷ್ಟು ಅವಮಾನಗಳಿಗೆ ಗುರಿಯಾಗಬೇಕಾಯಿತು. ಹುಟ್ಟಿದಾಗ ಹೆತ್ತಮ್ಮ ಕುಂತಿಯಿಂದಲೇ ಪರಿತ್ಯಜ್ಯಗೊಳ್ಳುತ್ತಾನೆ. ತಂದೆಯೆನಿಸಿಕೊಂಡ ಸೂರ್ಯದೇವನು ಯಾವುದೇ ರೀತಿಯ ಸಹಾಯವನ್ನು ಮಾಡುವುದಿಲ್ಲ. ಸಾಕಿದ ತಂದೆ ತಾಯಿಯರು ಅವನ ಹುಟ್ಟು ಪರಾಕ್ರಮವನ್ನು ರಹಸ್ಯವಾಗಿಡುವಂತೆ ಪ್ರಚೋದಿಸುತ್ತಾರೆ. ದ್ರೋಣರು ಹೆಚ್ಚಿನ ವಿದ್ಯೆಯನ್ನು ನೀಡಲು ನಿರಾಕರಿಸುತ್ತಾರೆ, ಗುರು ಪರಶುರಾಮರಿಂದ ಶಾಪಗ್ರಸ್ಥನಾಗುತ್ತಾನೆ. ವರಸೆಯಲ್ಲಿ ಚಿಕ್ಕಪ್ಪನಾದ ದೇವೇಂದ್ರನು ಹುಟ್ಟಿನ ಜೊತೆಗೆ ಬಂದಿದ್ದ ಕವಚ, ಕರ್ಣಕುಂಡಲಗಳನ್ನು ಮೋಸದಿಂದ ಕಿತ್ತುಕೊಳ್ಳುತ್ತಾನೆ. ಈತನೇ ತನ್ನ ಮಗ ಎಂದು ತಿಳಿದಿದ್ದರೂ ಅವನ ತಾಯಿಯು ಅನೇಕ ವರ್ಷಗಳವರೆಗೆ ಅವನಿಗೆ ತಿಳಿಸದೇ ಗುಪ್ತವಾಗಿಡುತ್ತಾಳೆ. ತಿಳಿಸಿದಾಗ ಅದರ ಬಗ್ಗೆ ಆನಂದ ಪಡುವ ಸಮಯವು ಮೀರಿಹೋಗಿರುತ್ತದೆ! ಕೊನೆಗೆ ತನ್ನ ಸಹೋದರನಾದ ಅರ್ಜುನನ ಕೈಯಿಂದಲೇ ಕೊಲ್ಲಲ್ಪಡುತ್ತಾನೆ. ಈ ಎಲ್ಲ ದುರಂತಗಳ ನಡುವೆ ಅವನ ಜೀವನದಲ್ಲಿ ತಂಗಾಳಿಯಂತೆ ಬಂದು ನೋವು ತುಂಬಿದ ಮನಸ್ಸಿಗೆ ಸ್ವಲ್ಪವಾದರೂ ಸಾಂತ್ವನವನ್ನು ಕೊಟ್ಟವನು ದಾಯಾದಿ ಹಾಗೂ ಪ್ರಿಯಮಿತ್ರ ದುರ್ಯೋಧನನು ಮಾತ್ರ. ಬಹುಶಃ ನಾವು ಕಂಡಿರುವ ಯಾವ ಪುರಾಣದ ಪಾತ್ರವೂ ಈ ರೀತಿಯ ದುರಂತಕ್ಕೆ ಒಳಗಾಗಿಲ್ಲ ಎನ್ನಬಹುದು. ಈ ಸೂರ್ಯಪುತ್ರನು ಸೂತಪುತ್ರನಂತೆ ಬದುಕಬೇಕಾಗಿ ಬಂದದ್ದು ಅವನ ದುರದೃಷ್ಟವೇ ಸರಿ!
ಅವನ ಶೂರತ್ವ, ದಾನಗುಣ ಮತ್ತು ಒಂದು ಅನುಕಂಪದ ಸೆಲೆಯ ಮೂಲಕ ಕರ್ಣನು ಜನರ ಮನದಲ್ಲಿ ಅಚ್ಚಳಿಯದೇ ನಿಂತಿದ್ದಾನೆ ಎನ್ನಬಹುದು. ಆದರೆ ಈ ಅನುಕಂಪವೇ ಆತನ ಸ್ವಯಂಕೃತ ಅಪರಾಧಗಳನ್ನು ಜನರು ಕಂಡೂ ಕಾಣದಂತೆ ಕಡೆಗಣಿಸಲು ಕಾರಣವೂ ಆಗಿರಬಹುದು. ಹೆಚ್ಚಿಗೆ ನೋವುಂಡವರು ಯಾವಾಗಲೂ ಮನಸ್ಸಿಗೆ ಬೇಗ ಹತ್ತಿರವಾಗುತ್ತಾರೆ ಮತ್ತು ಚಿರಕಾಲ ನೆನಪಿನಿಂದ ಮರೆಯಾಗದೇ ಉಳಿಯುತ್ತಾರೆ. ಜೀವನದ ಉದ್ದಕ್ಕೂ ಯಾವುದೋ ಒಂದು ಸಿದ್ಧಾಂತಕ್ಕೆ ಕಟ್ಟುಬಿದ್ದು ಬದುಕಿದ್ದಾನೆ ಕರ್ಣ. ಅದರಿಂದಲೂ ಆತನು ಒಬ್ಬ ನಾಯಕನಾಗಿ ಜನಮಾನಸದಲ್ಲಿ ಬದುಕುಳಿದಿದ್ದಾನೆ. ಆದರೆ ಆ ಸಿದ್ಧಾಂತದ ಬುನಾದಿಯು ಎಂತಹುದು ಎಂದು ಅವನು ತಲೆಕೆಡಿಸಿಕೊಳ್ಳುವ ಗೋಜಿಗೆ ಹೋಗುವುದೇ ಇಲ್ಲ, ಇಂದಿನ ಹೆಚ್ಚಿನ ಜನರೂ ಕೂಡ!
ಕರ್ಣನ ಜೀವನ ಪ್ರಾರಂಭವಾಗುವುದು ಅವನ ತಾಯಿ ಕುಂತಿಯು ಎಸಗಿದ ಒಂದು ತಪ್ಪಿನ ಕಾರಣಕ್ಕೆ! ಆಕೆಯ ಸೇವೆಗೆ ಸಂತುಷ್ಟರಾದ ದೂರ್ವಾಸರು ಆಕೆಗೆ ದಿವ್ಯಪುರುಷರ ಮೂಲಕ ದಿವ್ಯಪುತ್ರರನ್ನು ಪಡೆಯುವಂತಹ ಮಂತ್ರವರವನ್ನು ನೀಡಿದರು. ಆಗ ಆಕೆ ಇನ್ನೂ ಮದುವೆಯಾಗದ, ಜೀವನವೆಂದರೆ ಏನು ಎಂದು ಸರಿಯಾಗಿ ಅರ್ಥವಾಗಿರದ ತರಳೆ. ಆ ಮಂತ್ರಗಳು ನಿಜವಾಗಿಯೂ ಸಿದ್ಧಿಸುತ್ತವೆಯೇ ಎಂದು ಪರೀಕ್ಷಿಸುವ ವಯೋಸಹಜ ಕುತೂಹಲ ಆಕೆಗಿತ್ತು. ಹಿಂದೆ ಮುಂದೆ ಯೋಚಿಸದೆ ಸೂರ್ಯದೇವನನ್ನು ನೆನಸಿಕೊಂಡು ತಾನು ದೂರ್ವಾಸರಿಂದ ಪಡೆದ ಮಂತ್ರವನ್ನು ಪ್ರಯೋಗಿಸಿಯೇ ಬಿಟ್ಟಳು! ಇದರ ಫಲವೇ ಸೂರ್ಯಪುತ್ರ ಕರ್ಣನ ಜನನ. ಆಕೆ ಪಡೆದದ್ದು ಕರ್ಣಕುಂಡಲ ಕವಚಗಳ ಸಮೇತ ಜನಿಸಿದ ದಿವ್ಯರೂಪದ ಮಗು! ಕೂಸು ಕೈಗೆ ಬಂದಕೂಡಲೇ ದಿಗ್ಬ್ರಮೆಗೆ ಒಳಗಾದಳು ಕನ್ಯೆ ಕುಂತಿ. ಕೂಸಿನ ಲಕ್ಷಣಗಳನ್ನು ನೋಡಿ ಆನಂದಿಸುವ ಮನಸ್ಥಿತಿಯಲ್ಲಿ ಇರಲಿಲ್ಲ ಅವಳು. ಅವಿವಾಹಿತ ಕನ್ಯೆಯ ಕೈಯಲ್ಲಿ ತನ್ನದೇ ಹಸುಗೂಸು! ಎಂತಹ ವಿಪರ್ಯಾಸ! ತನ್ನನ್ನು ತನ್ನ ಪರಿವಾರ ಮತ್ತು ಸಮಾಜ ಯಾವ ದೃಷ್ಟಿಯಲ್ಲಿ ಕಾಣಬಹುದು ಎಂದು ಊಹಿಸಿಕೊಂಡು ನಡುಗಿದಳು. ಹೇಗಾದರೂ ಮಾಡಿ ಇಂತಹ ಪರಿಸ್ಥಿತಿಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಆ ಹಸುಗೂಸನ್ನು ಮಂಜೂಷದಲ್ಲಿಟ್ಟು ನದಿಯಲ್ಲಿ ತೇಲಿ ಬಿಟ್ಟಳು. ತನ್ನ ಕಂದನು ಬೇರೆಲ್ಲಿಯಾದಾರೂ ಯಾವುದೇ ಕಳಂಕವಿಲ್ಲದೆ ಸುಖವಾಗಿ ಬಾಳಲಿ ಎಂದು ಯೋಚಿಸಿ ಅಂತಹ ಕಾರ್ಯವೆಸಗುತ್ತಾಳೆ. ಆದರೆ ಅಂದು ಆಕೆಗೇನು ತಿಳಿದಿತ್ತು ಈ ಮಗು ಒಂದು ವ್ಯಾಕುಲಪೂರ್ಣ ಜೀವನಕ್ಕೆ ಒಳಗಾಗುತ್ತದೆ ಎಂದು. ಹಣೆಯ ಬರಹವನ್ನು ಬಲ್ಲವರಾರು?
ನದಿಯಲ್ಲಿ ತೇಲಿಬಂದ ಸೂರ್ಯಪುತ್ರನು ಯಾವುದಾದರೂ ಕ್ಷತ್ರಿಯ ಕುಟುಂಬಕ್ಕೆ ದೊರೆತು ಅವರ ಮಧ್ಯೆ ಬೆಳೆದಿದ್ದರೆ ಅವನ ಜೀವನವು ಸ್ವಲ್ಪಮಟ್ಟಿಗಾದರೂ ಸುಖಮಯವಾಗುತ್ತಿತ್ತೇನೋ. ಆದರೆ ಅವನು ದೊರೆತದ್ದು ಸೂತ ಕುಲದಲ್ಲಿ ಜನಿಸಿದ ಒಬ್ಬ ಸಾರಥಿಯಾದ ಅಧಿರಥ ಮತ್ತು ಆತನ ಪತ್ನಿ ರಾಧೆಗೆ. ಅಂದಿನಿಂದ ಕರ್ಣನು ರಾಧೇಯನೆನಿಸಿಕೊಂಡ, ಒಬ್ಬ ಸೂತನ ಮಗನಾಗಿ ಸೂತಪುತ್ರನೆನೆಸಿಕೊಂಡ. ಇವರು ತಮ್ಮ ಸಾಕುಮಗನಿಗೆ ಇಟ್ಟ ಹೆಸರು ವಸುಷೇಣ. ಆದರೆ ಅವನ ಚಿನ್ನದ ಕರ್ಣಕುಂಡಲಗಳ ಕಾರಣಕ್ಕಾಗಿ ಅವನು ಕರ್ಣ ಎನ್ನುವ ಹೆಸರಿನಿಂದಲೇ ಪ್ರಸಿದ್ಧನಾದನು. ಸಾಕುಮಗನಾದರೂ ರಾಧೆಯು ಕರ್ಣನಿಗೆ ವಾತ್ಸಲ್ಯದ ಧಾರೆಯನ್ನೇ ಎರೆದಳು, ತನ್ನ ಕರುಳಕುಡಿಗಳಿಗಿಂತಲೂ ಹೆಚ್ಚು ಪ್ರೀತಿಸಿದಳು. ಎಷ್ಟಾದರೂ ಅವನು ಅವಳಿಗೆ ದೊರೆತದ್ದು ಅವಳಿಗಿನ್ನೂ ಮಕ್ಕಳಾಗಿರದಾಗ. ಮೊದಲ ಮಗುವಿನ ಪ್ರೀತಿಯು ಅವನಿಗೇ ದೊರೆತಿತ್ತು. ಬೆಂಕಿಯ ಶಾಖವನ್ನೆಂದೂ ಮುಚ್ಚಿಡಲಾಗದು. ಬೆಂಕಿಯಿದ್ದರೆ ಅದರ ಶಾಖವು ಅನುಭವಕ್ಕೆ ಬಂದೇ ಬರುತ್ತದೆ. ಅಂತೆಯೇ ಕರ್ಣನ ಪ್ರತಿಭೆಯು ದಿನೇ ದಿನೇ ಎಲ್ಲರ ಅನುಭವಕ್ಕೆ ಬರಲಾರಂಭಿಸಿತು. ಸಾಕುತಂದೆಯ ಕುಲಕಸುಬಾದ ಸಾರಥ್ಯದಲ್ಲಿ ಅವನಿಗೆ ಯಾವ ಆಸಕ್ತಿಯೂ ಬೆಳೆಯಲಿಲ್ಲ. ಬಾಲಕನಾಗಿದ್ದ ಸಮಯದಿಂದಲೇ ಅವನ ಒಲವು ಬಿಲ್ಲು ಬಾಣಗಳ ಕಡೆಗೆ. ಮಗನ ಒಲವನ್ನು ಗಮನಿಸಿ ಅಧಿರಥನು ಧೈರ್ಯಮಾಡಿ ರಾಜಕುವರರಿಗೆ ಶಸ್ತ್ರಾಭ್ಯಾಸ ಮಾಡಿಸುತ್ತಿದ್ದ ದ್ರೋಣರ ಬಳಿ ತನ್ನ ಮಗನಿಗೂ ಬಿಲ್ಲುವಿದ್ಯೆಯನ್ನು ಕಲಿಸುವಂತೆ ವಿನಂತಿಸಿಕೊಂಡನು. ಕೆಲಕಾಲ ಸಣ್ಣಪುಟ್ಟ ತಂತ್ರಗಳನ್ನು ಕಲಿಸಿದ ದ್ರೋಣರು ಕರ್ಣನು ರಾಜಕುವರನಲ್ಲದ್ದರಿಂದ ಹೆಚ್ಚಿನ ವಿದ್ಯೆಯನ್ನು ಕಲಿಸಲು ನಿರಾಕರಿಸಿದರು. ಒಬ್ಬ ರಾಜಕುವರನಾಗಿದ್ದಾಗ್ಯೂ ಹೀಗೆ ಗುರುವಿನಿಂದ ಪರಿತ್ಯಜ್ಯಗೊಂಡಿದ್ದು ಅವನ ದುರಾದೃಷ್ಟವೇ ಸರಿ. ತಾನೊಬ್ಬ ಶ್ರೇಷ್ಠ ಬಿಲ್ಲುಗಾರನಾಗಬೇಕೆಂಬ ಹಸಿವು ಹಾಗೂ ಛಲವಿದ್ದ ಕರ್ಣನು ಹೆಚ್ಚಿನ ವಿದ್ಯೆಯನ್ನು ಕಲಿಯಲು ದ್ರೋಣರ ಗುರುಗಳಾದ ಪರಶುರಾಮರನ್ನು ಅರಸುತ್ತ ಹೊರಡುತ್ತಾನೆ. ಸಿಂಹದ ಮರಿಯು ಎಂದಿಗೂ ಕುರಿಯ ಮರಿಯಂತೆ ಬದುಕಲು ಇಷ್ಟಪಡುವುದಿಲ್ಲ!
ಪರಶುರಾಮರನ್ನು ಅರಸುತ್ತ ಹೊರಟ ಕರ್ಣನಿಗೆ ಅವರು ಕೇವಲ ಬ್ರಾಹ್ಮಣರಿಗೆ ಮಾತ್ರ ವಿದ್ಯಾದಾನ ಮಾಡುತ್ತಾರೆ ಎಂದು ತಿಳಿದು ನಿರಾಶೆಗೊಳಗಾದನು. ಆದರೆ ಕಲಿಯಬೇಕೆಂಬ ಛಲವು ಅವನನ್ನು ಸುಳ್ಳು ಹೇಳುವಂತೆ ಮಾಡುತ್ತದೆ. ತನ್ನ ಪೂರ್ವಾಪರಗಳನ್ನು ಮುಚ್ಚಿಟ್ಟು ಅವನು ಪರಶುರಾಮರಿಗೆ ತಾನೊಬ್ಬ ಬ್ರಾಹ್ಮಣ ಎಂದು ಹೇಳಿ ತನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸುವಂತೆ ಕೋರಿದನು. ಬಹುಶಃ ಇದು ಕರ್ಣನ ಮೊದಲನೆಯ ಸ್ವಯಂಕೃತ ಅಪರಾಧ ಎನ್ನಬಹುದು. ತನ್ನ ಗುರಿಯನ್ನು ಮುಟ್ಟುವ ಭರದಲ್ಲಿ ಆತ ತಾನು ನಡೆಯುವ ದಾರಿಗೆ ಹೆಚ್ಚಿನ ಮಹತ್ವ ಕೊಡಲಿಲ್ಲ. ಮುಂದೆ ಈ ಸುಳ್ಳೇ ಅವನಿಗೆ ಕಂಟಕಪ್ರಾಯವಾಗುತ್ತದೆ.
ಅವನ ವಿದ್ಯೆಯು ಪೂರ್ಣವಾಗುವ ದಿನವು ಹತ್ತಿರ ಬಂದಿರುತ್ತದೆ. ಒಂದು ದಿನ ದಣಿದಿದ್ದ ಪರಶುರಾಮರು ಶಿಷ್ಯನಾದ ಕರ್ಣನ ತೊಡೆಯ ಮೇಲೆ ತಲೆಯಿಟ್ಟುಕೊಂಡು ವಿಶ್ರಮಿಸುತ್ತಿರುತ್ತಾರೆ. ಕರ್ಣನಿಗೆ ಇದೊಂದು ಅಪೂರ್ವವಾದ ಸನ್ನಿವೇಶ. ತನ್ನ ಗುರುಗಳ ವಿಶ್ರಾಂತಿಗೆ ತನ್ನ ತೊಡೆಯು ಆಧಾರವಾಗಿರುವುದು ಒಂದು ವಿಶೇಷ ಅನುಭವ ಅವನಿಗೆ. ಆಗ ಒಂದು ದುಂಬಿಯು ಬಂದು ಕರ್ಣನ ಕಾಲನ್ನು ಕಚ್ಚುತ್ತದೆ. ಆ ದುಂಬಿಯನ್ನು ಓಡಿಸಲು ಅಲುಗಾಡಿದರೆ ತನ್ನ ಗುರುಗಳ ವಿಶ್ರಾಂತಿಗೆ ಭಂಗಬರುತ್ತದೆ ಎಂದು ಯೋಚಿಸಿದ ಕರ್ಣನು ಆ ನೋವನ್ನು ನುಂಗಿಕೊಂಡು ಅಲುಗಾಡದೆ ಕುಳಿತನು. ದುಂಬಿಯು ಅವನ ಕಾಲನ್ನು ಕೊರೆದ ಜಾಗದಿಂದ ಧಾರಾಕಾರವಾಗಿ ರಕ್ತವು ಒಸರಿತು. ಹೀಗೆ ಒಸರಿದ ರಕ್ತವು ಪರಶುರಾಮರಿಗೆ ತಾಗಿ ಅವರಿಗೆ ಎಚ್ಚರವಾಯಿತು. ಕರ್ಣನ ಸ್ಥಿತಿಯನ್ನು ನೋಡಿದ ಅವರು ಕರ್ಣನ ದೇಹದ ಯಾತನಾಧಾರಣ ಸಾಮರ್ಥ್ಯವನ್ನು ಕಂಡು ಅವನು ಬ್ರಾಹ್ಮಣನಲ್ಲ, ಖಂಡಿತ ಅವನೊಬ್ಬ ಕ್ಷತ್ರಿಯ ಎನ್ನುವ ನಿರ್ಧಾರಕ್ಕೆ ಬಂದರು. ಕರ್ಣನನ್ನು ಈ ಬಗ್ಗೆ ಪ್ರಶ್ನಿಸಿದಾಗ ಅವನು ತಾನು ಬ್ರಾಹ್ಮಣನಲ್ಲ ಎಂದು ಒಪ್ಪಿಕೊಂಡನು. ಆಗ ಕೋಪಗೊಂಡು ಸುಳ್ಳು ಹೇಳಿ ವಿದ್ಯೆ ಕಲಿತ ಅವನಿಗೆ, “ನಿನಗೆ ಅತ್ಯಂತ ಅಗತ್ಯವಿರುವ ಸಮಯದಲ್ಲಿ ನೀನು ಕಲಿತ ವಿದ್ಯೆ ನೆನಪಿಗೆ ಬಾರದೆ ಹೋಗಲಿ” ಎಂದು ಶಾಪವನ್ನು ಕೊಟ್ಟರು. ತಾನೊಂದು ಬಗೆದರೆ ದೈವವೊಂದು ಬಗೆಯುತ್ತದೆ ಎನ್ನುವುದು ಎಷ್ಟು ನಿಜ ಕರ್ಣನ ಜೀವನದಲ್ಲಿ!
ಕರ್ಣನ ಶಾಪದ ಕಥಾನಕ ಇಲ್ಲಿಗೇ ಮುಗಿಯಲಿಲ್ಲ. ಅವನು ಏನೂ ತಪ್ಪು ಮಾಡದಿದ್ದರೂ ಇನ್ನೂ ಎರಡು ಶಾಪಗಳಿಗೆ ಗುರಿಯಾದನು. ಇದನ್ನು ವಿಧಿಯೆನ್ನದೆ ಮತ್ತೇನೆನ್ನಬೇಕು? ಮೊದಲನೆಯದಾಗಿ, ಅವನು ಶಸ್ತ್ರಾಭ್ಯಾಸ ಮಾಡುತ್ತಿದ್ದಾಗ ಅಕಸ್ಮಾತ್ತಾಗಿ ಅವನ ಬಾಣವು ಒಂದು ಹಸುವಿಗೆ ತಾಕಿ ಆ ಹಸುವು ಅಸುನೀಗುತ್ತದೆ. ಇದನ್ನು ನೋಡಿದ ಹಸುವಿನ ಒಡೆಯನಾದ ಒಬ್ಬ ಬ್ರಾಹ್ಮಣನು ಕ್ರೋಧದಿಂದ ಕರ್ಣನನ್ನು “ಅಸಹಾಯಕ ಸ್ಥಿತಿಯಲ್ಲಿ ನನ್ನ ಹಸುವು ಪ್ರಾಣತೊರೆಯುವಂತೆ ಮಾಡಿದೆ, ನಿನಗೂ ಅಂತಹದೇ ಸ್ಥಿತಿಯಲ್ಲಿ ಮರಣ ಉಂಟಾಗಲಿ” ಎಂದು ಶಪಿಸಿದನು. ಎರಡನೆಯದಾಗಿ, ಒಮ್ಮೆ ಅವನು ರಸ್ತೆಯಲ್ಲಿ ಹೋಗುತ್ತಿದ್ದಾಗ ಒಂದು ಪುಟ್ಟ ಹುಡುಗಿಯು ಕೈಯಲ್ಲಿ ಒಂದು ತುಪ್ಪದ ಬಟ್ಟಲನ್ನು ಹಿಡಿದು ಬರುತ್ತಿರುತ್ತಾಳೆ. ಅಕಸ್ಮಾತ್ತಾಗಿ ಅವಳ ಕೈಯಲ್ಲಿದ್ದ ಬಟ್ಟಲು ಜಾರಿ ಕೆಳಗೆ ಬಿದ್ದು ಅದರಲ್ಲಿದ್ದ ತುಪ್ಪವೆಲ್ಲ ಭೂಮಿಯ ಪಾಲಾಯಿತು; ಆ ಬಾಲೆ ಅಳತೊಡಗುತ್ತಾಳೆ. ಕರ್ಣನು ಅವಳನ್ನು ಸಮಾಧಾನಪಡಿಸುತ್ತ ಆಕೆಗೆ ಬೇರೆಯ ತುಪ್ಪವನ್ನು ಕೊಡಿಸುವುದಾಗಿ ತಿಳಿಸಿದನು. ಆದರೆ ಆಕೆಯು ಅದಕ್ಕೊಪ್ಪದೆ ಆ ತುಪ್ಪ ದೇವರಿಗೆ ಅಭಿಷೇಕವಾದ ತುಪ್ಪ, ಅದನ್ನು ತನ್ನ ತಾಯಿಗೆ ತಲುಪಿಸಬೇಕಿತ್ತು ಹಾಗಾಗಿ ತನಗೆ ಅದೇ ತುಪ್ಪವು ಬೇಕೆಂದು ಹಟ ಹಿಡಿದಳು. ಗತ್ಯಂತರವಿಲ್ಲದೆ ಕರ್ಣನು ತುಪ್ಪವನ್ನು ಹೀರಿದ್ದ ಮಣ್ಣನ್ನು ಬೊಗಸೆಯಲ್ಲಿ ಹಿಂಡಿ ಹಿಂಡಿ ತುಪ್ಪವನ್ನು ಬಟ್ಟಲಿಗೆ ತುಂಬಿದನು. ಕರ್ಣನ ಈ ಕಾರ್ಯದಿಂದ ಕ್ರೋಧಗೊಂಡ ಭೂದೇವಿಯು “ನೀನು ನನ್ನನ್ನು ಹಿಂಡಿ ನೋವನ್ನುಂಟು ಮಾಡಿದ್ದೀಯ, ಆದ್ದರಿಂದ ನಿನ್ನ ಬದ್ಧವೈರಿಯೊಂದಿಗೆ ರಥದಲ್ಲಿ ಯುದ್ಧ ಮಾಡುತ್ತಿರುವಾಗ ನಿನ್ನ ರಥದ ಚಕ್ರಗಳು ಭೂಮಿಯಲ್ಲಿ ಹೂತುಹೋಗಲಿ” ಎಂದು ಶಾಪವನ್ನು ಕೊಟ್ಟಳು. ಹೀಗೆ ತಾನು ಉದ್ದೇಶಪೂರ್ವಕವಾಗಿ ಯಾವ ಅಪರಾಧಗಳನ್ನು ಮಾಡದಿದ್ದರೂ ತನ್ನ ಮಡಿಲಿಗೆ ಬಂದು ಬೀಳುತ್ತಿದ್ದ ಶಾಪಗಳಿಂದ ಕರ್ಣನು ಎಷ್ಟು ವಿಚಲಿತನಾಗಿರಬಹುದು? ಈ ಎಲ್ಲ ಶಾಪಗಳ ಫಲಗಳೂ ಅವನ ಮರಣದಲ್ಲಿ ಪರ್ಯಾವಸಾನಗೊಳ್ಳುತ್ತವೆ. ವಿಧಿಯು ಅವನ ಮರಣದ ಪರಿಸ್ಥಿತಿಯನ್ನು ಹೆಣೆದದ್ದು ಹೀಗೆ!
ಪರಶುರಾಮರಿಂದ ಶಾಪಗ್ರಸ್ಥನಾಗಿ ಹಿಂತಿರುಗುವಾಗ ಕರ್ಣನಿಗೆ ಪಾಂಡವರ ಮತ್ತು ಕೌರವರ ನಡುವೆ ಗುರು ದ್ರೋಣರು ಏರ್ಪಡಿಸಿದ್ದ ಸ್ನೇಹ ಸ್ಪರ್ಧಾಕೂಟದ ಬಗ್ಗೆ ತಿಳಿಯುತ್ತದೆ. ದ್ರೋಣರಿಗೆ ತನ್ನ ಪರಾಕ್ರಮವನ್ನು ತೋರಿಸಲು ಹಾಗೂ ಅರ್ಜುನನಿಗಿಂತ ತಾನೇ ಉತ್ತಮ ಬಿಲ್ಲುಗಾರನು ಎಂದು ನಿರೂಪಿಸಲು ಇದೇ ಸೂಕ್ತವಾದ ಸಮಯ ಎಂದು ಭಾವಿಸಿ ಅಲ್ಲಿಗೆ ಹೋಗಿ, ತನ್ನನ್ನು ಕೂಡ ಒಬ್ಬ ಸ್ಪರ್ಧಾಳುವನ್ನಾಗಿ ಪರಿಗಣಿಸಿ ಅರ್ಜುನನೊಡನೆ ಸ್ಪರ್ಧಿಸಲು ಅನುವು ಮಾಡಿಕೊಡುವಂತೆ ಮನವಿಮಾಡಿದನು. ಆದರೆ ದ್ರೋಣರು ಈ ಸ್ಪರ್ಧೆ ಕೇವಲ ರಾಜರಿಗೆ ಮತ್ತು ರಾಜಕುವರರಿಗೆ ಮಾತ್ರ ಎಂದು ತಿಳಿಸಿ ಅವನಿಗೆ ನಿರಾಶೆಯನ್ನು ಮೂಡಿಸಿದರು. ಕರ್ಣನ ಜೀವನದ ಒಂದು ದೊಡ್ಡ ತಿರುವು ಈಗ ಬರುತ್ತದೆ. ಅಲ್ಲೇ ಇದ್ದ ದುರ್ಯೋಧನನು ಕರ್ಣನ ಸ್ನೇಹದ ಲಾಭವನ್ನು ಪರಿಗಣಿಸಿ ಅರ್ಜುನನೊಡನೆ ಹೋರಾಡಬಲ್ಲ ಒಬ್ಬ ವೀರನು ತನ್ನ ಪಾಳೆಯದಲ್ಲಿದ್ದರೆ ಚೆನ್ನ ಎಂದು ಯೋಚಿಸಿ ಕೂಡಲೇ ತಾನು ಕರ್ಣನನ್ನು ಅಂಗರಾಜ್ಯಕ್ಕೆ ರಾಜನನ್ನಾಗಿ ಮಾಡುತ್ತೇನೆ ಎಂದು ಘೋಷಿಸಿದನು. ಮತ್ತು ಕರ್ಣನ ಪಟ್ಟಾಭಿಷೇಕವನ್ನು ಅಲ್ಲಿಯೇ ಗುರುಹಿರಿಯರ ಸಮ್ಮುಖದಲ್ಲಿ ನೆರವೇರಿಸಿದನು. ಇದು ಕರ್ಣನಿಗೆ ಬಯಸದೇ ಬಂದ ಭಾಗ್ಯದಂತೆ ತೋರುತ್ತದೆ. ಮುಂದೆ ಏನೇ ಬರಲಿ ತಾನು ದುರ್ಯೋಧನನ ಸ್ನೇಹಕ್ಕೆ ಸದಾ ನಿಷ್ಠನಾಗಿರುತ್ತೇನೆ ಎನ್ನುವ ನಿರ್ಧಾರಕ್ಕೆ ಬರುತ್ತಾನೆ. ಆದರೆ ಭಾವುಕ ಮನಸ್ಸಿನಲ್ಲಿ ಎಂದಿಗೂ ನಿರ್ಧಾರಗಳನ್ನು ಮಾಡಬಾರದು ಎನ್ನುವ ಮಾತನ್ನು ಮರೆಯುತ್ತಾನೆ. ಈ ನಿರ್ಧಾರವೇ ಅವನನ್ನು ದುರ್ಯೋಧನನ ಅಧರ್ಮದಲ್ಲಿ ಸಹಭಾಗಿಯಾಗುವಂತೆ ಮಾಡುತ್ತದೆ ಎನ್ನುವುದು ಆ ಕ್ಷಣದಲ್ಲಿ ಅವನಿಗೆ ತಿಳಿದಿರಲಿಲ್ಲ. ಅವನ ಕರ್ಮದ ಚೀಲಕ್ಕೆ ಒಂದು ಹೊಸ ಬುತ್ತಿ ಸೇರ್ಪಡೆಯಾಗುತ್ತದೆ!
ದುರ್ಯೋಧನನ ಸ್ನೇಹಕ್ಕೆ ಕಟ್ಟುಬಿದ್ದ ಕರ್ಣನಿಗೆ ಅನೇಕ ಸಂದರ್ಭಗಳಲ್ಲಿ ಧರ್ಮದ ಪರ ನಿಲ್ಲಬೇಕಿದ್ದರೆ ದುರ್ಯೋಧನನ ಸ್ನೇಹವನ್ನು ತೊರೆಯಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಆದರೆ ಕರ್ಣನು ನಿರ್ಧಾರ ಮಾಡುವಲ್ಲಿ ಎಡವಿದನು. ತನ್ನ ಮತ್ತು ದುರ್ಯೋಧನನ ನಡುವಿನ ಸ್ನೇಹವು ಈರ್ವರ ಸ್ವಾರ್ಥದ ಬುನಾದಿಯ ಮೇಲೆ ನಿಂತಿದೆ ಎಂದು ಅವನಿಗೆ ಅರಿವಾಗುವುದೇ ಇಲ್ಲ. ಸ್ವಾರ್ಥದ ಬುನಾದಿಯ ಮೇಲೆ ನಿಂತಿರುವ ಯಾವುದಾದರೂ ಧರ್ಮಪರವಾಗುವುದು ಹೇಗೆ ಸಾಧ್ಯ? ಧರ್ಮ ಸ್ವಾರ್ಥಕ್ಕೆ ಅತೀತವಾದದ್ದು. ಧರ್ಮದ ಪರ ನಿಲ್ಲುವವರು ಹಿಂದೆ ಮುಂದೆ ಯೋಚಿಸದೆ ಸ್ವಾರ್ಥದ ಬಲಿದಾನ ನೀಡಬೇಕಾಗುತ್ತದೆ. ಕರ್ಣನು ಅಧರ್ಮದ ಪರ ನಿಂತ ಒಂದು ಉದಾಹರಣೆಯೆಂದರೆ ದ್ರೌಪದಿಯ ವಸ್ತ್ರಾಪಹರಣದ ಸಂದರ್ಭ. ಅಲ್ಲಿ ಕರ್ಣನು ಒಬ್ಬರಿಗಿಂತ ಹೆಚ್ಚು ಪತಿಯರನ್ನು ಹೊಂದಿರುವ ದ್ರೌಪದಿಯು ಒಬ್ಬ ವೇಶ್ಯೆಗೆ ಸಮ ಎನ್ನುವುದಲ್ಲದೇ ಆಕೆಯನ್ನು ವಸ್ತ್ರಹೀನಳನ್ನಾಗಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಘೋಷಿಸಿದನು. ಆಕೆಯನ್ನು ಉದ್ದೇಶಿಸಿ “ತಮ್ಮ ಹೆಂಡತಿಯನ್ನು ಪಣಕ್ಕಿಡುವಂತಹ ಗಂಡಂದಿರನ್ನು ವರಿಸಿ ಹಾಳಾದೆ. ಈಗ ನೀನೊಬ್ಬ ದಾಸಿ, ಒಬ್ಬ ದಾಸಿ ಬೇರೆ ಪತಿಯನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯವನ್ನು ಹೊಂದಿರುತ್ತಾಳೆ. ಆದ್ದರಿಂದ ಈಗಲಾದರೂ ಒಳ್ಳೆಯ ಪತಿಯನ್ನು ಹುಡುಕಿ ವಿವಾಹವಾಗಬಹುದು” ಎಂದನು. ಇದೆಲ್ಲವನ್ನು ಅವನು ಹೇಳುವುದು ದುರ್ಯೋಧನನ ಮೇಲಿದ್ದ ಕುರುಡು ಸ್ನೇಹದ ಕಾರಣವೇ ಅಲ್ಲವೇ? ಒಂದು ವೇಳೆ ಅವನು ಪ್ರಿಯಮಿತ್ರನಿಗೆ ಅವನ ತಪ್ಪಿನ ಅರಿವು ಮಾಡಿಕೊಟ್ಟಿದ್ದರೆ ದ್ರೌಪದಿಯ ವಸ್ತ್ರಾಪಹರಣವು ತಪ್ಪುತಿತ್ತೇನೋ? ಮಹಾಭಾರತದ ಕಥೆಯು ಬೇರೆಯದೇ ದಾರಿ ಹಿಡಿಯುತ್ತಿತ್ತೇನೋ? ಆದರೆ ಅವನು ಧರ್ಮದ ಪರ ನಿಲ್ಲಲಿಲ್ಲ. ವಿಕರ್ಣನೊಬ್ಬನನ್ನು ಬಿಟ್ಟರೆ ಕೌರವರಾರೂ ದ್ರೌಪದಿಯ ಪರ ನಿಲ್ಲಲಿಲ್ಲ. ಆ ವಿಕರ್ಣನ ಬಾಯನ್ನೂ ಕರ್ಣನು ಮುಚ್ಚಿಸಿದನು! ಕರ್ಣನು ದ್ರೌಪದಿಯ ವಿಷಯದಲ್ಲಿ ಹೀಗೆ ನಡೆದುಕೊಳ್ಳಲು ಅವನ ಅಂತರಾಳದಲ್ಲಿ ಅಡಗಿದ್ದ ದ್ರೌಪದಿಯ ಮೇಲಿನ ಕೋಪವೂ ಇರಬಹುದು. ಆಕೆಯ ಸ್ವಯಂವರದ ಸಮಯದಲ್ಲಿ ಕರ್ಣನು ಭಾಗವಹಿಸಲು ನಿಂತಾಗ ಅವನು ಸೂತಪುತ್ರನೆಂಬ ಕಾರಣಕ್ಕೆ ದ್ರೌಪದಿಯು ಅವನು ಸ್ವಯಂವರದಲ್ಲಿ ಪಾಲ್ಗೊಳ್ಳಲು ಅರ್ಹನಲ್ಲ ಎಂದು ಹೇಳಿ ಅವನನ್ನು ಅವಮಾನಿಸಿರುತ್ತಾಳೆ. ಇದು ಅವನ ಮನಸ್ಸಿನ ಮೇಲೆ ಅಳಿಸಲಾಗದ ಬರೆಯನ್ನು ಎಳೆಯುತ್ತದೆ. ಆತ ಈ ಸ್ವಯಂವರದಲ್ಲಿ ಭಾಗವಹಿಸಿದ್ದು ಕೂಡ ತನಗಾಗಿ ವಧುವನ್ನು ಆರಿಸಲು ಅಲ್ಲ! ದ್ರೌಪದಿಯನ್ನು ಗೆದ್ದು ತನಗೆ ನೀಡುವಂತೆ ದುರ್ಯೋಧನನು ಅವನನ್ನು ಕೋರಿರುತ್ತಾನೆ. ಆ ಮಿತ್ರನ ಕೋರಿಕೆಗೆ ಇಲ್ಲವೆನ್ನಲಾಗದೆ ಕರ್ಣನು ಅಲ್ಲಿಗೆ ಹೋಗಿ ಅವಮಾನಗೊಂಡನು.
ಅವನು ಅಧರ್ಮಿಯಾದ ಇನ್ನೊಂದು ಪ್ರಸಂಗವೆಂದರೆ ಚಕ್ರವ್ಯೂಹದಲ್ಲಿ ಸಿಲುಕಿದ ವೀರ ಅಭಿಮನ್ಯುವನ್ನು ಕರ್ಣನೂ ಸೇರಿದಂತೆ ಆರು ಜನ ಕೌರವರು ಸುತ್ತುವರೆದು ಒಂದು ಕಾಡುಪ್ರಾಣಿಯನ್ನು ಬೇಟೆಯಾಡುವಂತೆ ಬೇಟೆಯಾಡಿ ಕೊಂದದ್ದು. ಇದು ಯಾವ ವೀರನಿಗೂ ಉಚಿತವಲ್ಲ, ಅದರಲ್ಲೂ ಕರ್ಣನಂತಹ ಮಹಾವೀರನಿಗೆ ತಕ್ಕ ನಡತೆ ಅಲ್ಲವೇ ಅಲ್ಲ! ಕರ್ಣನ ವಿಧಿ ಕ್ರೂರವಾಗಿತ್ತು ನಿಜ. ಒಬ್ಬ ಸೂರ್ಯಪುತ್ರನು ಸೂತಪುತ್ರನಂತೆ ಜೀವನ ಮಾಡುವಂತೆ ಮಾಡಿತ್ತು ಆ ವಿಧಿ. ಆದರೆ ಈ ದುರದೃಷ್ಟ ಅವನು ಅಧರ್ಮಿಯಾಗಿ ನಡೆದುಕೊಳ್ಳಲು ರಹದಾರಿಯನ್ನು ನೀಡುವುದಿಲ್ಲ. ಒಬ್ಬರಿಗೆ ಏನೇ ಅನ್ಯಾಯವಾಗಿದ್ದರೂ ಅಂತಹವರು ಇನ್ನೊಬ್ಬರಿಗೆ ಯಾವುದೇ ಅನ್ಯಾಯ ಮಾಡುವ ಹಕ್ಕನ್ನು ಪಡೆಯುವುದಿಲ್ಲ!
ಒಮ್ಮೆ ತಾಯಿಯಿಂದ ಅನ್ಯಾಯಕ್ಕೊಳಗಾಗಿದ್ದವನಿಗೆ ಮತ್ತೆ ಅದೇ ತಾಯಿಯಿಂದ ನಷ್ಟ ಅನುಭವಿಸಬೇಕಾಯಿತು. ಇಂತಹ ದುರದೃಷ್ಟ ಬೇರೆ ಯಾರನ್ನೂ ಕಾಡಲಿಲ್ಲ ಅನ್ನಿಸುತ್ತದೆ. ಕರ್ಣನು ತನ್ನ ಮಗನೇ ಎಂದು ಅರಿತಿದ್ದ ಕುಂತಿಯು, ತನ್ನ ಮಕ್ಕಳೇ ಯುದ್ಧದಲ್ಲಿ ಒಬ್ಬರೆದುರು ಒಬ್ಬರು ನಿಂತು ಹೋರಾಡುವುದನ್ನು ತಪ್ಪಿಸಬೇಕು ಎಂದು ಬಯಸಿದಳು. ಮೊದಲ ಬಾರಿಗೆ ತನ್ನ ಹಿರಿಯ ಪುತ್ರನ ಜೊತೆಗೆ ಸಂಭಾಷಣೆಗೆ ಇಳಿದು, ಪಾಂಡವರನ್ನು ಸೇರುವಂತೆ ಆಹ್ವಾನ ನೀಡಿದಳು. ಕರ್ಣನು ಸ್ನೇಹಬದ್ಧ, ಇಷ್ಟು ವರ್ಷಗಳ ಕಾಲ ಮಗನೆಂದು ತಿಳಿದಿದ್ದರೂ ದೂರವೇ ಇದ್ದ ಕುಂತಿಯ ಮಾತಿಗೆ ಕಟ್ಟುಬಿದ್ದು ಪ್ರಾಣಸ್ನೇಹಿತನನ್ನು ತೊರೆಯಲು ಅವನು ಒಪ್ಪುವನೇ? ತನ್ನ ಮಾತನ್ನು ನಿರಾಕರಿಸಿದ ಮಗನನ್ನು, ಪಾಂಡವರನ್ನು ಕೊಲ್ಲದಿರುವಂತೆ ವಚನವನ್ನು ನೀಡು ಎಂದು ಕೇಳುತ್ತಾಳೆ ತಾಯಿ. ಕರ್ಣನು ಈ ಕೋರಿಕೆಯನ್ನೂ ನಿರಾಕರಿಸಬಹುದಿತ್ತು. ಆದರೆ, ಬೇಡಿ ಬಂದವರಿಗೆ ಏನನ್ನಾದರೂ ನೀಡದೆಯೇ ಬರಿಗೈಯಲ್ಲಿ ಕಳಿಸುವವನಲ್ಲ ದಾನಶೂರ ಕರ್ಣ. ಅದರಲ್ಲೂ ಬೇಡಿ ಬಂದ ತಾಯಿಗೆ ಆ ರೀತಿ ಮಾಡಿಯಾನೆ? ಕೊನೆಗೆ, ಅರ್ಜುನನನ್ನು ಹೊರತುಪಡಿಸಿ ಇನ್ನಾವ ಪಾಂಡವನನ್ನೂ ಕೊಲ್ಲುವುದಿಲ್ಲ ಎಂದು ವಚನವನ್ನಿತ್ತನು ತನ್ನಮ್ಮನಿಗೆ. ಕರ್ಣನಿಗೆ ಯುದ್ಧದಲ್ಲಿ ತನ್ನ ಪೂರ್ಣಪ್ರಮಾಣದ ಶೌರ್ಯವನ್ನು ಪ್ರಯೋಗಿಸದಂತೆ ಮಾಡಿತು ಈ ವಚನ.
ಮಹಾಭಾರತ ಯುದ್ಧವು ಪ್ರಾರಂಭವಾಗುವ ಸಮಯದಲ್ಲಿ ದುರ್ಯೋಧನನಿಗೆ ಕರ್ಣನನ್ನೇ ಕೌರವರ ಸೇನಾಧಿಪತಿಯನ್ನಾಗಿ ಮಾಡುವ ಉದ್ದೇಶವಿರುತ್ತದೆ. ಕರ್ಣನಿಗೂ ಈ ಯುದ್ದದಲ್ಲಿ ಅರ್ಜುನನಿಗಿಂತ ಹೆಚ್ಚು ಪರಾಕ್ರಮವನ್ನು ಮೆರೆದು ತನ್ನ ಪ್ರಿಯಮಿತ್ರನಿಗೆ ಜಯವನ್ನು ತಂದುಕೊಡುವ ಕಾತುರವಿತ್ತು. ಆದರೆ ಅವನ ಆಸೆಗೆ ಭೀಷ್ಮರು ತಣ್ಣೀರು ಸುರಿದರು. ಕರ್ಣನಿಗೆ ಪರಶುರಾಮರು ನೀಡಿದ ಶಾಪದ ಬಗ್ಗೆ ಅವರಿಗೆ ತಿಳಿದಿರುತ್ತದೆ. ಅವರು ಇಂತಹ ಶಾಪವನ್ನು ಹೊಂದಿರುವವನು ಮಹಾರಥಿ ಎನ್ನಿಸಿಕೊಳ್ಳಲಾರ, ಕರ್ಣನು ಕೇವಲ ʻಅರ್ಧರಥಿʼ ಎಂದರು. ಕರ್ಣನಿಗೆ ಸೇನೆಯ ನಾಯಕತ್ವ ನೀಡಿದರೆ ತಾವು ಯುದ್ಧದಲ್ಲಿ ಭಾಗವಹಿಸುವುದಿಲ್ಲ ಎನ್ನುವ ಷರತ್ತನ್ನು ಹಾಕಿದರು. ಯುದ್ಧದಲ್ಲಿ ಭೀಷ್ಮರಂತಹ ಪರಾಕ್ರಮಿಯ ಅನುಪಸ್ಥಿತಿಯನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ ದುರ್ಯೋಧನ. ಹಾಗಾಗಿ ಅವರನ್ನೇ ಸೇನಾಧಿಪತಿಯನ್ನಾಗಿ ನೇಮಕ ಮಾಡಿದನು. ಹೀಗೆ ಕರ್ಣನು ಮತ್ತೊಮ್ಮೆ ದುರದೃಷ್ಟಕ್ಕೆ ಒಳಗಾದನು. ಭೀಷ್ಮರ ಸಾರಥ್ಯ ಇರುವವರೆಗೂ ತಾನು ಯುದ್ಧದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಅವನೂ ನಿರ್ಧರಿಸುತ್ತಾನೆ.
ಮಹಾಭಾರತ ಯುದ್ಧದಲ್ಲಿ ಭೀಷ್ಮದ್ರೋಣರ ಪರ್ವ ಮುಗಿದ ಮೇಲೆ, ಯುದ್ಧದ ಹದಿನಾರನೆಯ ದಿನ ಕರ್ಣನಿಗೆ ಕೌರವ ಸೇನೆಯ ಸೇನಾಧಿಪತಿಯನ್ನಾಗಿ ನಿಯೋಜಿಸಲಾಗುತ್ತದೆ. ಆಗ ಕರ್ಣನಿಗೆ ಎಲ್ಲಿಲ್ಲದ ಆನಂದ. ಕೊನೆಗೂ ತನ್ನ ಮಿತ್ರನು ಬಯಸಿದ್ದನ್ನು ಅವನಿಗೆ ನೀಡುವ, ಅವನ ಋಣಸಂದಾಯದ ಸುವರ್ಣಾವಕಾಶವು ದೊರೆಯಿತು ಎಂದು ಸಂತಸಪಟ್ಟನು. ಮೊದಲ ದಿನ ವೀರಾವೇಶದಿಂದ ಹೋರಾಡುತ್ತ ನಕುಲನಿಗೆ ಎದುರಾದನು. ಪರಾಕ್ರಮದಲ್ಲಿ ನಕುಲನು ಕರ್ಣನಿಗೆ ಸಾಟಿಯೇ? ಕರ್ಣನು ನಕುಲನನ್ನು ಸುಲಭವಾಗಿ ಸೋಲಿಸಿ, ಕುಂತಿಗೆ ನೀಡಿದ್ದ ವಚನದ ಕಾರಣದಿಂದ ಅವನಿಗೆ ಪ್ರಾಣಭಿಕ್ಷೆ ನೀಡಿ ಕಳಿಸಿದನು. ಮಾರನೆಯ ದಿನ ಹೇಗಾದರೂ ಮಾಡಿ ಅರ್ಜುನನನ್ನು ಕೊಲ್ಲಲೇ ಬೇಕು ಎಂದು ಸಂಕಲ್ಪಿಸಿ, ತನಗೊಬ್ಬ ಕೃಷ್ಣನಂತಹ ಚಮತ್ಕಾರಿ ಸಾರಥಿಯ ಅವಶ್ಯಕತೆಯನ್ನು ಮನಗೊಂಡು, ದುರ್ಯೋಧನನ ಮೂಲಕ ಶಲ್ಯನ ಮನವೊಲಿಸಿ ತನಗೆ ಸಾರಥಿಯಾಗಲು ಒಪ್ಪುವಂತೆ ಮಾಡಿದನು. ಮೊದಲಿಗೆ ಎದುರಾದ ಯುಧಿಷ್ಠಿರನೊಂದಿಗೆ ದ್ವಂದ್ವಯುದ್ಧ ಮಾಡಿ ಅವನನ್ನು ಗಾಯಗೊಳಿಸಿ, ಸೋಲಿಸಿ ಕೊಲ್ಲದೇ ಬೇರೆಡೆಗೆ ಹೋದನು. ಆದರೆ ಅಂದು ಅವನು ತನ್ನ ಇಬ್ಬರು ಮಕ್ಕಳ ಮೃತ್ಯುವನ್ನು ನೋಡಬೇಕಾಗುತ್ತದೆ. ಆ ನೋವನ್ನು ನುಂಗುತ್ತ ತನ್ನ ಬದ್ಧವೈರಿ ಎನಿಸಿದ ಅರ್ಜುನನನ್ನು ಹುಡುಕಿ ಅವನಿಗೆ ಎದುರಾಗುತ್ತಾನೆ. ಇಬ್ಬರೂ ವೀರಾವೇಶದಿಂದ ಹೋರಾಡುತ್ತಾರೆ.
ಅರ್ಜುನನನ್ನು ಕೊಲ್ಲಲೆಂದೇ ಕಾಪಾಡಿಕೊಂಡು ಬಂದಿದ್ದ ಸರ್ಪಾಸ್ತ್ರವನ್ನು ಪ್ರಯೋಗಿಸಲು ನಿರ್ಧರಿಸುತ್ತಾನೆ ಕರ್ಣ. ಕರ್ಣನ ಬಿಲ್ಲಿನಿಂದ ಹೊರಟು ಅರ್ಜುನನ ಶಿರವನ್ನು ಚೆಂಡಾಡಲು ಬರುತ್ತಿದ್ದ ಸರ್ಪಾಸ್ತ್ರವನ್ನು ನೋಡಿದ ಕೃಷ್ಣನು ತನ್ನ ಕಾಲಿನಿಂದ ರಥವನ್ನು ಅಮುಕಿದಾಗ ಕುದುರೆಗಳು ಭೂಮಿಯ ಮೇಲೆ ಮೊಳಕಾಲೂರಿ ರಥವು ಬಾಗಿತು. ಆಗ ಸರ್ಪಾಸ್ತ್ರವು ಅರ್ಜುನನ ಕುತ್ತಿಗೆಗೆ ತಾಕದೆ ಕೇವಲ ಕಿರೀಟವನ್ನು ಹಾರಿಸಿಕೊಂಡುಹೋಯಿತು. ಮತ್ತೆ ವೀರ ಕರ್ಣನಿಗೆ ವಿಧಿಯು ಕೈಕೊಡುತ್ತದೆ; ಅರ್ಜುನ ಬದುಕುಳಿಯುತ್ತಾನೆ. ಈಗ ಕೇವಲ ಕೋಪ ಮತ್ತು ನಿರಾಶೆಗಳಷ್ಟೇ ಕರ್ಣನ ಪಾಲಿಗುಳಿಯಿತು. ಆದರೂ ಮುಂದೆ ಸಾಗಿ ವೀರಾವೇಶದಿಂದ ಹೋರಾಡಲೆತ್ನಿಸಿದಾಗ ಅವನ ರಥದ ಚಕ್ರದ ಕೆಳಗಿನ ಭೂಮಿ ಮೃದುವಾಗಿ ರಥವು ಭೂಮಿಯಲ್ಲಿ ಸಿಕ್ಕಿಕೊಂಡಿತು. ಕರ್ಣನಿಗೆ ಆಗ ಭೂದೇವಿಯ ಶಾಪ ನೆನಪಿಗೆ ಬಂದು ತನ್ನ ಅಂತ್ಯವು ಸನ್ನಿಹಿತವಾಯಿತು ಎಂದುಕೊಳ್ಳುತ್ತಾನೆ. ಆದರೂ ಕೊನೆಯ ಪ್ರಯತ್ನದಂತೆ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಲು ಪ್ರಯತ್ನಿಸಿದಾಗ ಎಷ್ಟೇ ನೆನಪಿಸಿಕೊಂಡರೂ ಅಸ್ತ್ರದ ಮಂತ್ರವೇ ನೆನಪಾಗುವುದಿಲ್ಲ. ಗುರು ಪರಶುರಾಮರ ಶಾಪ ಕೆಲಸಮಾಡಿತ್ತು! ಕೊನೆಗೆ ಅರ್ಜುನನಿಗೆ ತಾನು ರಥದ ಚಕ್ರ ಎತ್ತುವವರೆಗೂ ಬಾಣಪ್ರಯೋಗ ಮಾಡದಂತೆ ವಿನಂತಿಸಿಕೊಂಡು ಕೆಳಗಿಳಿದು ರಥದ ಚಕ್ರವನ್ನು ಎತ್ತಲು ಪ್ರಯತ್ನಿಸಿದನು. ಅರ್ಜುನನು ಬಾಣಪ್ರಯೋಗ ಮಾಡುವುದನ್ನು ನಿಲ್ಲಿಸಿದನು. ಆದರೆ ಶ್ರೀಕೃಷ್ಣನು ಹಿಂದೆ ಕರ್ಣನು ಮಾಡಿದ ಅಧರ್ಮಗಳನ್ನು ಅದರಲ್ಲೂ ಮೋಸದಿಂದ ಅಭಿಮನ್ಯುವನ್ನು ಕೊಂದ ಪ್ರಸಂಗವನ್ನು ನೆನಪಿಸಿ ಕರ್ಣನನ್ನು ಕೊಲ್ಲಲು ಇದೇ ಸರಿಯಾದ ಸಮಯ, ಬಾಣವನ್ನು ಹೂಡು ಎಂದು ಅರ್ಜುನನಿಗೆ ಆಜ್ಞಾಪಿಸಿದನು. ಪುತ್ರನ ಸಾವನ್ನು ನೆನಪಿಸಿಕೊಂಡ ಅರ್ಜುನನು ರೋಷದಿಂದ ಒಂದು ದಿವ್ಯಾಸ್ತ್ರವನ್ನು ಪ್ರಯೋಗಿಸಿ ಕರ್ಣನನ್ನು ಕೊಂದೇಬಿಟ್ಟನು; ತನ್ನ ಮಗನ ಸಾವಿಗೆ ಪ್ರತೀಕಾರವನ್ನು ತೀರಿಸಿಕೊಂಡನು. ಬ್ರಾಹ್ಮಣನ ಶಾಪಕ್ಕೆ ಗುರಿಯಾಗಿದ್ದ ಕರ್ಣನು ಹೀಗೆ ಅಸಹಾಯಕ ಸ್ಥಿತಿಯಲ್ಲಿ ಮರಣಿಸಿದನು.
ಹೀಗೆ ಮುಗಿಯಿತು ದಾನಶೂರ ವೀರ ಕರ್ಣನ ಶಾಪಗ್ರಸ್ಥ ಜನ್ಮ! ವಿಧಿಯಾಟ ಮತ್ತು ಸ್ವಯಂಕೃತ ಅಪರಾಧಗಳ ಎಳೆಗಳು ಅವನ ಬದುಕನ್ನು ಗೋಜಲುಮಯವಾಗಿಸಿದ್ದವು. ಆ ಗೋಜಲು ಬದುಕಿನಲ್ಲಿ ಸಿಲುಕಿದ ಕರ್ಣನು ಅನುಭವಿಸಿದ ಮಾನಸಿಕ ಯಾತನೆಯು ಯಾರಿಗೂ ಬೇಡ! ಒತ್ತಡದಲ್ಲಿ ಸಿಲುಕಿದಾಗ ಮನೋಸ್ಥಿರತೆಯನ್ನು ಕಳೆದುಕೊಂಡು ತಪ್ಪುಗಳನ್ನು ಮಾಡಿದನು. ಜೊತೆಗೆ ಅವನು ಯಾವ ತಪ್ಪನ್ನೂ ಮಾಡದ ವಿಷಮ ಸಂದರ್ಭಗಳಲ್ಲಿ ದುರಾದೃಷ್ಟಕ್ಕೆ ಬಲಿಯಾದನು. ಆದರೆ ತನ್ನ ಕೆಲವು ಸದ್ಗುಣಗಳ ಕಾರಣದಿಂದ ಜನಮಾನಸದಲ್ಲಿ ಇಂದಿಗೂ ಒಬ್ಬ ಆದರ್ಶ ಪುರುಷನಾಗಿ ಮೆರೆಯುತ್ತಿದ್ದಾನೆ.
(ಈ ವ್ಯಕ್ತಿಚಿತ್ರವನ್ನು ಎಸ್. ಕೃಷ್ಣಮೂರ್ತಿಯವರ (ಕೃಷ್ಣಕವಿ) ʼಪುರಾಣಪ್ರಸಿದ್ಧ ಪಾತ್ರಗಳುʼ ಎನ್ನುವ ಕೃತಿಯಿಂದ ಆಯ್ದುಕೊಳ್ಳಲಾಗಿದೆ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!