ಮಹಾಭಾರತದಲ್ಲಿ ಧರ್ಮರಾಯನದು ಒಂದು ವಿಶಿಷ್ಟವಾದ ಪಾತ್ರ. ಯಮಧರ್ಮನ ಮಗನಾಗಿ ಹುಟ್ಟಿದವನು ಎಂದೂ ಧರ್ಮದ ಪಕ್ಷಪಾತಿ, ಎಂದೆಂದಿಗೂ ಸತ್ಯದ ಹಾದಿಯಲ್ಲೇ ನಡೆದವನು, ಅನೃತವನ್ನು ನುಡಿಯದವನು, ಪಾಂಡವರ ಹಿರಿಯ, ಸಹೋದರರ ಮಾರ್ಗದರ್ಶಕ ಎನ್ನುವ ಸಾಮಾನ್ಯ ನಂಬಿಕೆ ಎಲ್ಲರದು. ಈ ನಂಬಿಕೆಯು ಸರಿಯೇ? ಧರ್ಮರಾಯನದು ಅಕಳಂಕ ವ್ಯಕ್ತಿತ್ವವೇ? ಎಂದೂ ಧರ್ಮದ ಹಾದಿಯನ್ನು ಬಿಟ್ಟು ನಡೆದಿಲ್ಲವೇ? ಅವನ ಎದೆಯಲ್ಲಿ ಅಧರ್ಮಕ್ಕೆ ಸ್ಥಾನವಿರಲಿಲ್ಲವೇ? ಎನ್ನುವ ಪ್ರಶ್ನೆಗಳು ಮನಸ್ಸನ್ನು ಕಾಡದೇ ಬಿಡುವುದಿಲ್ಲ. ಆದ್ದರಿಂದಲೇ ಧರ್ಮರಾಯನ ವ್ಯಕ್ತಿತ್ವವನ್ನು ಹತ್ತಿರದಿಂದ ಸೂಕ್ಷ್ಮವಾಗಿ ಅವಲೋಕಿಸುವ ಉದ್ದೇಶ ಈ ಲೇಖನದ್ದು. ಧರ್ಮರಾಯನ ಕಾರಣದಿಂದ ಮಹಾಭಾರತದಲ್ಲಿ ಬಹು ದೊಡ್ಡ ತಿರುವುಗಳು ಬಂದಿರುವುದೂ ಉಂಟು. ಅಂತಹ ತಿರುವುಗಳ ಅವಲೋಕನವನ್ನೂ ಈ ಲೇಖನದಲ್ಲಿ ಮಾಡಲಾಗಿದೆ. ಈ ಮೂಲಕ ಧರ್ಮರಾಯನ ಸಮಗ್ರ ವ್ಯಕ್ತಿತ್ವದ ಅನಾವರಣವನ್ನು ಮಾಡುವ ಪ್ರಯತ್ನ ಇಲ್ಲಿದೆ.

       ಧರ್ಮರಾಯನನ್ನೂ ಸೇರಿಸಿ ಎಲ್ಲ ಪಾಂಡವರ ಹುಟ್ಟು ಕೂಡ ತಮ್ಮ ತಂದೆ ಮತ್ತು ದೊಡ್ಡಪ್ಪ ಧೃತರಾಷ್ಟ್ರನ ಹುಟ್ಟಿನಂತೆ ನಿಯೋಗ ಪದ್ಧತಿಯ ರೀತಿಯಲ್ಲೇ ಆದದ್ದು ಒಂದು ವಿಶೇಷ. ಸಾಮಾನ್ಯವಾಗಿ ಪತಿಯ ಮರಣದನಂತರ ವಿಧವೆ ಪತ್ನಿಯು ಬಯಸಿದರೆ ನಿಯೋಗ ಪದ್ಧತಿಯ ಮೂಲಕ ವಂಶೋದ್ಧಾರಕ್ಕಾಗಿ ಮಗನನ್ನು ಪಡೆಯುವುದು ಆಗಿನ ಕಾಲದಲ್ಲಿ ಪ್ರಚಲಿತವಿತ್ತು. ಆದರೆ ಕುಂತಿಯು ತನ್ನ ಪತಿಯು ಬದುಕಿದ್ದಾಗಲೇ ನಿಯೋಗ ಪದ್ಧತಿಗೆ ಶರಣಾಗಬೇಕಾಯಿತು. ಕಾರಣ, ಪಾಂಡುವಿಗೆ ಉಂಟಾದ ಶಾಪ. ಆತ ಪಡೆದ ಶಾಪದ ಪ್ರಕಾರ ಯಾವ ಹೆಣ್ಣಿನ ಜೊತೆಯಾದರೂ ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ಆತನಿಗೆ ಮರಣ ಪ್ರಾಪ್ತಿಯಾಗಬೇಕಿತ್ತು. ಆದ್ದರಿಂದ ಆತನಿಗೆ ತನ್ನ ಸ್ವಂತ ಸಂತಾನವನ್ನು ಪಡೆಯುವ ಯೋಗವೇ ಇರಲಿಲ್ಲ. ಪುತ್ರವಾಂಛಿತನಾದ ಪಾಂಡುವು ಯಾರಾದರೂ ಶ್ರೇಷ್ಠ ಬ್ರಾಹ್ಮಣನ ಮೂಲಕ ನಿಯೋಗ ಪದ್ಧತಿಯಲ್ಲಿ ಪುತ್ರನನ್ನು ಪಡೆಯುವಂತೆ ಕುಂತಿಗೆ ಆದೇಶಿಸಿದ. ಇಂತಹ ಸಮಯದಲ್ಲಿ ಕುಂತಿಗೆ ದೂರ್ವಾಸರು ನೀಡಿದ್ದ ವರಗಳು ನೆನಪಿಗೆ ಬರುತ್ತವೆ. ನಿಯೋಗಕ್ಕಾಗಿ ಭೂಲೋಕದ ಯಾವುದೇ ಪುರುಷನನ್ನು ಆಶ್ರಯಿಸಬೇಕಾಗಿರಲಿಲ್ಲ ಆಕೆ. ತಾನು ಪಡೆದ ವರಗಳ ಬಲದಿಂದ ಆಕೆ ಯಾವುದೇ ದೇವತೆಯನ್ನು ಆಹ್ವಾನಿಸಿ ಸಂತಾನವನ್ನು ಪಡೆಯಬಹುದಾಗಿತ್ತು. ಪತಿಗೆ ಈ ವಿಷಯವನ್ನು ತಿಳಿಸಿದಾಗ ಆತನು ಬಹಳ ಸಂತೋಷದಿಂದ ಮೊದಲಿಗೆ ಯಮಧರ್ಮನನ್ನು ಆಹ್ವಾನಿಸುವಂತೆ ಕುಂತಿಗೆ ಸೂಚಿಸಿದ. ಕಾರಣವೇನೆಂದರೆ, ಸಾಮಾನ್ಯವಾಗಿ ನಿಯೋಗ ಪದ್ಧತಿಯು ವಿಧವೆಯರ ಸಹಾಯಕ್ಕಾಗಿ ಮಾತ್ರವಿತ್ತು. ಆದರೆ ಇಲ್ಲಿ ಕುಂತಿಯ ಪತಿ ಇನ್ನೂ ಜೀವಂತವಾಗಿದ್ದಾನೆ. ಆದ್ದರಿಂದ ಪಾಂಡು ಹೇಳುತ್ತಾನೆ, “ಈ ಕಾರ್ಯವು ಅಧರ್ಮವಾಗಿದ್ದರೆ ಯಮಧರ್ಮನು ಇದರಲ್ಲಿ ಭಾಗಿಯಾಗುವುದಿಲ್ಲ, ಆತ ಭಾಗಿಯಾದರೆ ಈ ಕಾರ್ಯ ಅಧರ್ಮವಲ್ಲ”. ಜೊತೆಗೆ ಯಮಧರ್ಮನ ಮಗ ಧರ್ಮವನ್ನು ಪಾಲಿಸುವುದರಲ್ಲಿ ಎಂದೂ ಎಡವುವುದಿಲ್ಲ ಎನ್ನುವುದು ಆತನ ಆಲೋಚನೆಯಾಗಿತ್ತು.

       ಪತಿಯ ಅನುಜ್ಞೆಯನ್ನು ಪಡೆದು ಆತನಿಗೆ ನಮಸ್ಕರಿಸಿ, ಯಮಧರ್ಮನ ಪೂಜೆಯನ್ನು ಮಾಡಿ ತನಗೆ ದೊರೆತಿದ್ದ ಮಂತ್ರದ ಮೂಲಕ ಯಮಧರ್ಮನನ್ನು ಆಹ್ವಾನಿಸಿ ಮಗನನ್ನು ಪಡೆದಳು ಕುಂತಿ. ಶುಕ್ಲಪಕ್ಷದ ಅಷ್ಟಮಿ ತಿಥಿಯ ದಿನ ಶುಭ ಅಭಿಜಿತ್ ಮುಹೂರ್ತದಲ್ಲಿ ಆಕೆಗೆ ಧರ್ಮಜನ ಜನನವಾಗುತ್ತದೆ. ಆಗ ಅಶರೀರವಾಣಿಯೊಂದು ಹೀಗೆ ನುಡಿಯುತ್ತದೆ – “ಈ ಮಗುವು ಧರ್ಮಭೃತರಲ್ಲಿಯೇ ಶ್ರೇಷ್ಠನಾಗುತ್ತಾನೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಪಾಂಡುವಿನ ಪ್ರಥಮ ಸುತನು ಯುಧಿಷ್ಠಿರ ಎಂದು ವಿಖ್ಯಾತನಾಗುತ್ತಾನೆ. ಮೂರೂ ಲೋಕಗಳಲ್ಲಿ ವಿಶ್ರುತ ಯಶಸ್ಸು, ತೇಜಸ್ಸು ಮತ್ತು ಉತ್ತಮ ನಡವಳಿಕೆಗಳನ್ನು ಹೊಂದಿದ ರಾಜನೆಂದು ಪ್ರತಿಷ್ಠಿತನಾಗುತ್ತಾನೆ”. ಇದು ಧರ್ಮರಾಯನ ಜನ್ಮದ ಹಿಂದಿನ ವೃತ್ತಾಂತ.

       ಪಾಂಡವರನ್ನು ಕಾಪಾಡಲು ಧರ್ಮರಾಯನಿಗೆ ದೊರೆತ ಮೊದಲ ಅವಕಾಶ ಎಂದರೆ ಅದು ವಾರಣಾವತದ ಅರಗಿನ ಮನೆಯ ಪ್ರಸಂಗದಲ್ಲಿ. ದುರ್ಯೋಧನ ಮತ್ತು ಶಕುನಿಯರು ಒಂದು ಪಿತೂರಿಯನ್ನು ಮಾಡಿದರು. ಅದೇನೆಂದರೆ, ಧೃತರಾಷ್ಟ್ರನು ಕುಂತಿ ಮತ್ತು ಪಾಂಡವರಿಗೆ ವಾರಣಾವತದ ಉತ್ಸವದಲ್ಲಿ ಪಾಲ್ಗೊಂಡು ಅಲ್ಲಿಯೇ ಸ್ವಲ್ಪ ಕಾಲ ವಾಸವಿದ್ದು ಅನಂತರ ಹಸ್ತಿನಾಪುರಕ್ಕೆ ಹಿಂದಿರುಗಲು ಆದೇಶ ನೀಡುವಂತೆ ಮಾಡಿದರು. ಮತ್ತು ಪುರೋಚನನೆಂಬ ಶಿಲ್ಪಿಗೆ ವಾರಣಾವತದಲ್ಲಿ ಪಾಂಡವರಿಗಾಗಿ ಹೊಸ ಅರಗಿನ ಗೃಹವನ್ನು ನಿರ್ಮಿಸುವಂತೆ ಗುಪ್ತವಾಗಿ ಆದೇಶಿಸಿದರು. ಪಾಂಡವರು ವಾರಣಾವತಕ್ಕೆ ಹೊರಟುನಿಂತಾಗ ಅಲ್ಪಸ್ವಲ್ಪ ವಿಷಯವನ್ನು ತಿಳಿದಿದ್ದ ವಿದುರನು ಎಲ್ಲರಿಗೂ ಅರ್ಥವಾಗದ ಗುಪ್ತ ಭಾಷೆಯಲ್ಲಿ ಧರ್ಮರಾಯನಿಗೆ ಅಗ್ನಿಪ್ರಮಾದವಿದೆಯೆಂಬ ಎಚ್ಚರ ನೀಡಿದನು. ಈ ಸೂಚನೆಯ ಕಾರಣವೇ ಧರ್ಮರಾಯನು ವಾರಣಾವತದ ಹೊಸ ಮನೆಯನ್ನು ಪ್ರವೇಶಿಸಿದ ಕೂಡಲೇ ಆ ಮನೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಅದು ಅರಗಿನ ಮನೆಯೆಂದು ಅರಿತನು. ಇದರ ಬಗ್ಗೆ ಭೀಮನಲ್ಲಿ ಪ್ರಸ್ತಾಪಿಸಿ ಇದರಿಂದ ಪಾರಾಗುವುದು ಹೇಗೆಂದು ಚರ್ಚಿಸುತ್ತಿದ್ದಾಗ ವಿದುರನ ಸ್ನೇಹಿತನಾದ ಖನಕನು ಆಗಮಿಸಿ ತನ್ನಿಂದ ಏನಾದರೂ ಸಹಾಯ ಬೇಕಿದ್ದರೆ ತಿಳಿಸುವಂತೆ ಕೋರಿದನು. ಆಗ ಧರ್ಮಜನು ಆ ಮನೆಯಿಂದ ಕಾಡಿಗೆ ಹೋಗುವಂತಹ ಸುರಂಗವೊಂದನ್ನು ನಿರ್ಮಿಸಲು ತಿಳಿಸಿದನು. ಒಂದು ರಾತ್ರಿ, ಸೂಕ್ತ ಸಮಯದಲ್ಲಿ, ತಾವೇ ಮನಗೆ ಬೆಂಕಿಯಿಟ್ಟು ಸುರಂಗದ ಮೂಲಕ ತಪ್ಪಿಸಿಕೊಂಡು ಕಾಡನ್ನು ಸೇರಿದರು. ಹೀಗೆ ಯುಧಿಷ್ಠಿರನು ತನ್ನ ಸೂಕ್ಷ್ಮ ಬುದ್ಧಿ ಹಾಗೂ ನಾಯಕತ್ವದ ಗುಣಗಳಿಂದ ತನ್ನ ಕುಟುಂಬವನ್ನು ರಕ್ಷಿಸಿಕೊಳ್ಳಲು ಸಮರ್ಥನಾದನು.

       ಅರಗಿನ ಮನೆಯ ಪ್ರಕರಣದ ನಂತರ ಪಾಂಡವರು ದುರ್ಯೋಧನನ ಕಣ್ಣಿಗೆ ಬೀಳದಿರಲು ಬ್ರಾಹ್ಮಣರ ವೇಷದಲ್ಲಿ ಭಿಕ್ಷಾಟನೆ ಮಾಡಿ ಬದುಕುತ್ತಿದ್ದರು. ವ್ಯಾಸರ ಸಲಹೆಯ ಮೇರೆಗೆ ಪಾಂಡವರು ದ್ರೌಪದಿಯ ಸ್ವಯಂವರದಲ್ಲಿ ಭಾಗವಹಿಸಿ ಅರ್ಜುನನ ಪರಾಕ್ರಮದ ಶಕ್ತಿಯಿಂದ ಆಕೆಯನ್ನು ಗೆದ್ದು ತಂದರು. ದಿನವೂ ಭಿಕ್ಷಾಟನೆಯಿಂದ ತಂದುದನ್ನು ತಾಯಿಯು ತಿಳಿಸಿದಂತೆ ಹಂಚಿಕೊಳ್ಳುವ ಪರಿಪಾಠವಿತ್ತು. ಆ ದಿನ ದ್ರೌಪದಿಯನ್ನು ಕರೆತಂದ ಅರ್ಜುನನು “ಅಮ್ಮಾ, ನಾವು ಏನು ತಂದಿದ್ದೇವೆ ನೋಡು” ಎಂದನು. ಕುಂತಿಯು ತಿರುಗಿ ನೋಡದೆಯೇ, ಅವರು ತಂದಿರುವುದು ದ್ರೌಪದಿಯನ್ನು ಎಂದು ತಿಳಿಯದೆಯೇ “ನೀವು ತಂದಿರುವುದನ್ನು ಅಣ್ಣತಮ್ಮಂದಿರು ಸಮನಾಗಿ ಹಂಚಿಕೊಳ್ಳಿ” ಎಂದಳು. ಆಗಿನ ಕಾಲದಲ್ಲಿ ನುಡಿದ ಮಾತಿಗೆ ಎಷ್ಟು ಬೆಲೆಯಿತ್ತು! ಈಗ ತಾಯಿಯು ನುಡಿದ ಮಾತನ್ನು ನೆರವೇರಿಸುವುದು ಹೇಗೆ ಎಂದು ಪಾಂಡವರಲ್ಲಿ ಗೊಂದಲವುಂಟಾಗುತ್ತದೆ. ಈ ಗೊಂದಲವನ್ನು ಪರಿಹರಿಸು ಎಂದು ಕುಂತಿಯು ಯುಧಿಷ್ಠಿರನನ್ನು ಕೇಳುತ್ತಾಳೆ. ಮೊದಲಿಗೆ ಯುಧಿಷ್ಠಿರನು ಅರ್ಜುನನಿಗೆ ದ್ರೌಪದಿಯನ್ನು ವರಿಸುವಂತೆ ಸಲಹೆ ನೀಡಿದನು. ಆಗ ಅರ್ಜುನನು ನಿನ್ನ ಹಾಗೂ ಭೀಮನ ಮದುವೆ ಆಗದೆ ನಾನು ಮದುವೆಯಾಗುವುದಿಲ್ಲ ಎನ್ನುತ್ತಾನೆ. ಯುಧಿಷ್ಠಿರನು ಸೂಕ್ಷ್ಮವಾಗಿ ಎಲ್ಲ ತಮ್ಮಂದಿರ ಹಾವಭಾವಗಳನ್ನು ಗಮನಿಸುತ್ತಾನೆ. ಎಲ್ಲರೂ ಅಪೂರ್ವ ಲಾವಣ್ಯವತಿಯಾದ ದ್ರೌಪದಿಯ ಸೌಂದರ್ಯವನ್ನು ಕಳ್ಳಗಣ್ಣುಗಳಿಂದ ಆಸ್ವಾದಿಸುತ್ತಿರುವುದು ಅರಿವಿಗೆ ಬರುತ್ತದೆ. ಈಕೆಯ ಸೌಂದರ್ಯ ತನ್ನ ತಮ್ಮಂದಿರಲ್ಲಿ ಬಿರುಕನ್ನುಂಟುಮಾಡಬಹುದು ಎಂದು ಹೆದರಿದನು. ಈಗ ಅವನಿಗೆ ತನ್ನ ತಾಯಿ ಎಲ್ಲರೂ ತಂದಿರುವುದನ್ನು ಸಮನಾಗಿ ಹಂಚಿಕೊಳ್ಳಿ ಎಂದು ಹೇಳಿದ ಮಾತು ನೆನಪಾಗುತ್ತದೆ. ಈ ಸಮಸ್ಯೆಗೆ ತಾಯಿಯು ನುಡಿದ ಮಾತೇ ಪರಿಹಾರ ಎಂದು ನಿರ್ಧರಿಸಿದ ಅವನು, ಅವನು “ದ್ರೌಪದಿಯು ನಮ್ಮೆಲ್ಲರ ಭಾರ್ಯೆಯಾಗುತ್ತಾಳೆ” ಎಂದು ನಿರ್ಧಾರದ ದನಿಯಲ್ಲಿ ಹೇಳಿದನು. ಇದೊಂದು ಅಪರೂಪದ ನಿರ್ಧಾರವಾದರೂ ಅದು ಧರ್ಮಜನು ಆಲೋಚಿಸದೆ ತೆಗೆದುಕೊಂಡ ನಿರ್ಧಾರವಾಗಿರಲಿಲ್ಲ. ಎಲ್ಲವನ್ನೂ ಅಳೆದು ತೂಗಿ ಮಾಡಿದ ನಿರ್ಧಾರ ಅದು. ಏನೇ ಆಗಲಿ ಪಾಂಡವರಲ್ಲಿ ಯಾವ ರೀತಿಯ ಬಿರುಕೂ ಉಂಟಾಗಬಾರದು ಎನ್ನುವುದೇ ಅವನ ಮುಖ್ಯ ಧ್ಯೇಯವಾಗಿತ್ತು. ಹಾಗಿದ್ದರೆ ಧರ್ಮಪಕ್ಷಪಾತಿಯಾದ ಧರ್ಮನಂದನನು ನಿಷ್ಪಕ್ಷವಾದ ತೀರ್ಪನ್ನು ನೀಡಿದನೇ? ಒಂದು ಹೆಣ್ಣು ಐವರಿಗೆ ಪತ್ನಿಯಾಗುವುದು ಅವನಿಗೆ ಧರ್ಮಸಮ್ಮತ ಎನಿಸಿತ್ತೇ? ಈ ತೀರ್ಪು ದ್ರೌಪದಿಯ ಪಕ್ಷದಲ್ಲಿ ನ್ಯಾಯಸಮ್ಮತವಾಗಿತ್ತೇ ಎನ್ನುವುದು ಯೋಚಿಸಬೇಕಾದ ವಿಷಯ!

       ಮುಂದೆ ಪಾಂಡವರು ಇಂದ್ರಪ್ರಸ್ತವನ್ನು ರಾಜಧಾನಿಯಾಗಿಸಿಕೊಂಡು ಒಳ್ಳೆಯ ರೀತಿಯಲ್ಲಿ ರಾಜ್ಯಭಾರ ಮಾಡುತ್ತಿರುತ್ತಾರೆ. ಇದನ್ನು ಸಹಿಸದ ದುರ್ಯೋಧನ ಮತ್ತು ಶಕುನಿ ದ್ಯೂತದ ಮೂಲಕ ಪಾಂಡವರ ವಿನಾಶ ಮಾಡಬೇಕೆನ್ನುವ ಒಳಸಂಚು ಮಾಡುತ್ತಾರೆ. ಧೃತರಾಷ್ಟ್ರನ ರಾಯಭಾರಿಯಾಗಿ ವಿದುರನು ಇಂದ್ರಪ್ರಸ್ತಕ್ಕೆ ಹೋಗಿ ಧರ್ಮಜನಿಗೆ ದ್ಯೂತದ ಆಹ್ವಾನವನ್ನು ನೀಡಿದನು. ಜೊತೆಗೆ ಶಕುನಿಯಂತಹವರೊಂದಿಗೆ ದ್ಯೂತವು ವಿನಾಶಕಾರಿಯಾಗಬಹುದು, ಯೋಚಿಸಿ ನಿರ್ಧರಿಸು ಎಂದು ಸಲಹೆಯನ್ನು ಕೂಡ ಕೊಟ್ಟನು. ಮಹಾಭಾರತದ ಕಥೆಯನ್ನು ಬಲ್ಲವರಿಗೆ ವಿದುರನ ಈ ಸಲಹೆ ಎಷ್ಟು ಅಮೂಲ್ಯವಾದುದು ಮತ್ತು ಧರ್ಮಜನ ನಿರ್ಧಾರ ಯಾವ ರೀತಿ ಮಹಾಭಾರತದ ಕಥೆಗೆ ಎಂತಹ ತಿರುವನ್ನು ನೀಡಿತು ಎಂದು ಬಲ್ಲರು. ಧರ್ಮಜ ದ್ಯೂತಪ್ರಿಯ! ಅದರಲ್ಲಿ ಎಂತಹ ವಿನಾಶಕಾರಿ ಅಂಶವಿದ್ದರೂ ಅದನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. “ನಾನೆಂದೂ ದ್ಯೂತದ ಆಹ್ವಾನವನ್ನು ನಿರಾಕರಿಸುವುದಿಲ್ಲ, ಇದನ್ನು ನನ್ನ ತಂದೆಯ ಆಜ್ಞೆ ಎಂದು ಭಾವಿಸಿ ಇದರಲ್ಲಿ ಪಾಲ್ಗೊಳ್ಳುತ್ತೇನೆ” ಎನ್ನುವ ಉತ್ತರವನ್ನು ನೀಡಿದನು. ಕೊನೆಗೆ ತನ್ನ ಬದಲಿಗೆ ತನ್ನ ಮಾವ ಶಕುನಿ ಆಡುತ್ತಾನೆ ಎಂದು ದುರ್ಯೋಧನ ತಿಳಿಸಿದಾಗ, ಇಲ್ಲೇನೋ ಕುತಂತ್ರವಿದೆ ಎನ್ನುವುದನ್ನು ಗ್ರಹಿಸಿ, ತಾನು ಕೂಡ ತನ್ನ ಬದಲಿಗೆ ಶ್ರೀಕೃಷ್ಣನನ್ನು ಆಡಲು ಕರೆಸುತ್ತೇನೆ ಎಂದಿದ್ದರೆ ಶಕುನಿಯ ತಂತ್ರ ಫಲಿಸುತ್ತಿರಲಿಲ್ಲ. ಆದರೆ ವ್ಯಸನಿಗೆ ವ್ಯಸನದ ಮತ್ತು ಏರಿತ್ತು. ಆದ್ದರಿಂದ ಇವಾವುವೂ ಅವನ ಗಮನಕ್ಕೆ ಬರಲೇ ಇಲ್ಲ! ಯುಧಿಷ್ಠಿರನ ಈ ಒಂದು ವ್ಯಸನ ಪಾಂಡವರಿಗೆ ಎಂತಹ ದುರ್ಗತಿಯನ್ನು ತಂದು ಕೊಟ್ಟಿತು ಎಂದು ಹೇಳಬೇಕಿಲ್ಲ! ಆದ್ದರಿಂದ ಧರ್ಮರಾಯ ಈ ಸಂದರ್ಭದಲ್ಲಿ ಧರ್ಮದ ಸೋಗಿನಲ್ಲಿದ್ದ ವ್ಯಸನಿ ಎಂದರೆ ತಪ್ಪಾಗಲಾರದು.

       ದ್ಯೂತವು ಪ್ರಾರಂಭವಾಗುವ ಸಮಯದಲ್ಲಿ ಯುಧಿಷ್ಠಿರನು ಏನನ್ನೂ ಪಣಕ್ಕಿಡುವುದು ಬೇಡ, ಕೇವಲ ವಿನೋದಕ್ಕಾಗಿ ಆಡೋಣ ಎನ್ನುವ ಸಲಹೆಯನ್ನು ಶಕುನಿಗೆ ನೀಡಿದನು. ಶಕುನಿಯು ಪಣಕ್ಕೆ ಇಡದೆ ಆಡುವುದರಲ್ಲಿ ಯಾವ ಸ್ವಾರಸ್ಯವೂ ಇರುವುದಿಲ್ಲ, ಆದ್ದರಿಂದ ನಿನ್ನ ಬದಲು ಬೇರೆ ಯಾರಾದರೂ ಆಡಲಿ ಎಂದನು. ಈಗ ಧರ್ಮಜನಿಗೆ ಧರ್ಮಸಂಕಟ ಉಂಟಾಗುತ್ತದೆ. ತನ್ನ ಸಾತ್ವಿಕ ತತ್ತ್ವ ಒಂದು ಕಡೆ, ದ್ಯೂತವಾಡುವ ಆಸೆ ಇನ್ನೊಂದು ಕಡೆ. ಈ ತೊಳಲಾಟದಲ್ಲಿ ಆತನ ಸಾತ್ವಿಕತೆ ಸೋಲುತ್ತದೆ, ವ್ಯಸನವೇ ಗೆಲ್ಲುತ್ತದೆ! ಕೊನೆಗೆ ಪಣಕ್ಕಿಟ್ಟು ಆಡಲು ಒಪ್ಪುತ್ತಾನೆ. ಇದನ್ನು ಧರ್ಮರಾಯನ ಧರ್ಮದ ಪರ ಸೋಲು ಎನ್ನಬಹುದೇ? ಆಡುತ್ತ ಆಡುತ್ತ ಅವನು ಧನ, ಕನಕ, ರಾಜ್ಯ, ತಮ್ಮಂದಿರು ಮತ್ತು ಕೊನೆಗೆ ದ್ರೌಪದಿಯನ್ನು ಕೂಡ ಪಣಕ್ಕಿಟ್ಟು ಸೋತ ಎನ್ನುವುದು ಮಹಾಭಾರತದ ಓದುಗರಿಗೆಲ್ಲ ತಿಳಿದ ವಿಷಯ. ತಾನು ರಾಜನಾದ್ದರಿಂದ ತನ್ನ ಧನಕನಕ ಮತ್ತು ರಾಜ್ಯವನ್ನು ಪಣಕ್ಕಿಡುವ ಹಕ್ಕು ಅವನಿಗಿತ್ತು. ತನ್ನನ್ನು ಕೂಡ ಪಣಕ್ಕಿಟ್ಟುಕೊಳ್ಳುವ ಹಕ್ಕು ಅವನಿಗಿತ್ತು. ಆದರೆ, ಕೇವಲ ತನ್ನ ಮಾತನ್ನು ಮೀರುವುದಿಲ್ಲ ಎನ್ನುವ ಕಾರಣಕ್ಕಾಗಿ ತಮ್ಮಂದಿರನ್ನು ಹಾಗೂ ತಮ್ಮೈವರ ಪತ್ನಿಯನ್ನು ಪಣಕ್ಕಿಟ್ಟುದುದು ನ್ಯಾಯವೇ ಎನ್ನುವುದು ಯೋಚಿಸತಕ್ಕ ವಿಷಯ. ತನ್ನ ಮಾತನ್ನು ಎಂದಿಗೂ ಮೀರದ ತಮ್ಮಂದಿರಿದ್ದದ್ದು ಯುಧಿಷ್ಠಿರನ ಪುಣ್ಯವೇ ಸರಿ! ಆದರೆ ಅಂತಹ ತಮ್ಮಂದರಿಗೆ ಅವನು ತಕ್ಕ ಅಣ್ಣನಾಗಿದ್ದನೇ ಎನ್ನುವುದು ಯೋಚಿಸಬೇಕಾದ ಸಂಗತಿ. ದ್ರೌಪದಿಯು ಇದೇ ಪ್ರಶ್ನೆಯನ್ನು ಸಭೆಯಲ್ಲಿ ಕೇಳುತ್ತಾಳೆ, “ನನ್ನನ್ನು ನನ್ನ ಪತಿ ಪಣಕ್ಕಿಟ್ಟಿದ್ದು ಧರ್ಮವೇ?” ಎಂದು. ಅದಕ್ಕೆ ಉತ್ತರಿಸಿದ ಭೀಷ್ಮನು “ಇದು ಬಹಳ ಸೂಕ್ಷ್ಮವಾದ ವಿಷಯ. ತನ್ನನ್ನಲ್ಲದೆ ಇನ್ನೊಬ್ಬ ವ್ಯಕ್ತಿಯನ್ನು ಪಣಕ್ಕಿಡುವುದು ಸರಿಯಲ್ಲ. ಆದರೆ, ಪತ್ನಿಯು ಪತಿಯ ಸೊತ್ತು ಎನ್ನುವ ನಂಬಿಕೆ ಜನರಲ್ಲಿದೆ, ನಾನು ಈ ಗೊಂದಲವನ್ನು ಬಿಡಿಸಲಾರೆ” ಎನ್ನುತ್ತಾನೆ. ಇಲ್ಲಿ ದ್ರೌಪದಿಯು ಕೇವಲ ಧರ್ಮಜನ ಪತ್ನಿ ಮಾತ್ರವಲ್ಲ. ಆದ್ದರಿಂದ ಧರ್ಮನಂದನನು ಧರ್ಮವನ್ನು ಮೀರಿದ ಕಾರ್ಯವನ್ನು ಎಸಗಿದ್ದಾನೆ ಎಂದು ಭೀಷ್ಮನು ಕೂಡ ಅಭಿಪ್ರಾಯಪಟ್ಟಿದ್ದಾನೆ. ಜನಾಭಿಪ್ರಾಯವು ಧರ್ಮದ ಬುಡವನ್ನು ಅಲುಗಾಡಿಸಬಲ್ಲದು ಎಂದು ಕೂಡ ನಾವು ತಿಳಿಯಬಹುದು. ಕೌರವರಲ್ಲಿ ಒಬ್ಬನಾದ ವಿಕರ್ಣನು ಕೂಡ ತನ್ನ ಧರ್ಮಸಂದೇಹವನ್ನು ವ್ಯಕ್ತಪಡಿಸಿದನು. “ಮೊದಲನೆಯದಾಗಿ ದ್ಯೂತವು ವ್ಯಸನಗಳಲ್ಲೊಂದು. ವ್ಯಸನಕ್ಕೆ ಶರಣಾದವರು ಭಾವುಕರಾಗಿ ಧರ್ಮಪರರಾಗಿ ನಡೆದುಕೊಳ್ಳುವುದಿಲ್ಲ. ಎರಡನೆಯದಾಗಿ ಯುಧಿಷ್ಠಿರನು ದ್ರೌಪದಿಯನ್ನು ಪಣಕ್ಕಿಡುವ ಮೊದಲೇ ತನ್ನನ್ನು ತಾನು ಪಣಕ್ಕಿಟ್ಟು ಸೋತು ದ್ರೌಪದಿಯನ್ನು ಪಣಕ್ಕಿಡುವ ಹಕ್ಕನ್ನು ಕಳೆದುಕೊಂಡಿದ್ದರಿಂದ ದ್ಯೂತದಲ್ಲಿ ಇಟ್ಟ ಪಣವೇ ತಪ್ಪು, ಹಾಗಾಗಿ ದ್ರೌಪದಿಯನ್ನು ಯಾರೂ ಗೆದ್ದಿಲ್ಲ” ಎಂದು ತನ್ನ ವಾದವನ್ನು ಮಂಡಿಸಿದನು. ಆದರೆ ಕರ್ಣನು ಅವನಿಗೆ ನೀನಿನ್ನೂ ಚಿಕ್ಕವನು, ನಿನಗೆ ಧರ್ಮವು ಸರಿಯಾಗಿ ತಿಳಿದಿಲ್ಲ, ನಿನ್ನ ವಾದದಲ್ಲಿ ಹುರುಳಿಲ್ಲ ಎಂದು ಅವನ ಬಾಯಿ ಮುಚ್ಚಿಸಿದನು. ಒಟ್ಟಿನಲ್ಲಿ, ಧರ್ಮರಾಯನು ತಾನು ಮಾಡಿದ್ದು ಧರ್ಮ ಎಂದು ನಂಬಿದ್ದರಿಂದ, ಅವನು ವಾದಮಾಡದೇ ಸುಮ್ಮನಿದ್ದುದರಿಂದ ಕೌರವ ಸಭೆಯಲ್ಲಿ ವಿಕರ್ಣನ ವಾದಕ್ಕೆ ಪುಷ್ಟಿ ದೊರೆಯಲಿಲ್ಲ. ಪ್ರತಿಯೊಂದು ಧರ್ಮಸೂಕ್ಷ್ಮವನ್ನೂ ಅರಿತಿದ್ದ ಧರ್ಮರಾಯನು ತನ್ನ ಕುಟುಂಬದ ವಿಷಯದಲ್ಲಿ ಎಡವಿದ್ದು ಹೇಗೆ? ಭೀಷ್ಮ ಮತ್ತು ವಿಕರ್ಣರಿಗೆ ಅರಿವಿದ್ದ ಧರ್ಮಸೂಕ್ಷ್ಮಗಳು ಆತನಿಗೇಕೆ ಗೋಚರಿಸಲಿಲ್ಲ? ಈ ಪ್ರಶ್ನೆಗಳಿಗೆ ಉತ್ತರವಿದೆಯೇ?

       ಯುಧಿಷ್ಠಿರನ ತಮ್ಮಂದಿರು ಅಣ್ಣನಿಗೆ ಎಷ್ಟೇ ನಿಷ್ಠಾವಂತರಾಗಿದ್ದರೂ, ಅವನ ಮಾತಿಗೆ ಎಷ್ಟೇ ಗೌರವವನ್ನು ಕೊಡುತ್ತಿದ್ದರೂ, ಅವರು ಕೆಲವೊಮ್ಮೆ ತಮ್ಮ ಸಹನೆಯನ್ನು ಕಳೆದುಕೊಂಡು ಧರ್ಮಜನನ್ನು ನಿಂದಿಸಿದ ಪ್ರಸಂಗಗಳೂ ಇವೆ. ದ್ರೌಪದಿಯ ವಸ್ತ್ರಾಪಹರಣದ ಸಮಯದಲ್ಲಿ ಭೀಮನು ದ್ರೌಪದಿಗೆ ಆಗುತ್ತಿದ್ದ ಅವಮಾನವನ್ನು ನೋಡಲಾಗದೆ ಕೋಪದಿಂದ ಕುದಿಯುತ್ತಿರುತ್ತಾನೆ. ಅವನ ಕೋಪ ದ್ರೌಪದಿಯನ್ನು ಪಣಕ್ಕಿಟ್ಟು ಸೋತ ಧರ್ಮರಾಯನ ಕಡೆ ತಿರುಗುತ್ತದೆ. ಆ ಕೋಪದಲ್ಲಿ ಅವನು ಸಹದೇವನಿಗೆ, “ಸಹದೇವಾ, ಹೋಗಿ ಬೆಂಕಿಯನ್ನು ತೆಗೆದುಕೊಂಡು ಬಾ. ದ್ರೌಪದಿಯನ್ನು ಪಣಕ್ಕಿಟ್ಟು ದಾಳಗಳನ್ನುರುಳಿಸಿ ಅವಳನ್ನು ಸೋತ ಧರ್ಮರಾಯನ ಕೈಗಳನ್ನು ಸುಟ್ಟುಬಿಡುತ್ತೇನೆ” ಎಂದು ಘರ್ಜಿಸಿದನು! ಧರ್ಮರಾಯನು ಮೌನವಾಗಿ ಈ ಮಾತುಗಳನ್ನು ಸಹಿಸಿಕೊಳ್ಳಬೇಕಾಗುತ್ತದೆ.

ಅರ್ಜುನನು ಕೇವಲ ನಿಂದಿಸುವುದಷ್ಟೇ ಅಲ್ಲ ಅವನು ಧರ್ಮರಾಯನನ್ನು ಕೊಲ್ಲಲು ಮುಂದಾಗಿದ್ದ ಎನ್ನುವುದೂ ನಿಜ! ಮಹಾಭಾರತ ಯುದ್ಧದ ಸಮಯದಲ್ಲಿ ಒಮ್ಮೆ ಕರ್ಣ ಮತ್ತು ಯುಧಿಷ್ಠಿರರು ಪರಸ್ಪರ ಯುದ್ಧಮಾಡಬೇಕಾದ ಪ್ರಸಂಗ ಒದಗುತ್ತದೆ. ಈ ದ್ವಂದ್ವದಲ್ಲಿ ಕರ್ಣನ ಅಪ್ರತಿಮ ಪರಾಕ್ರಮ ಯುಧಿಷ್ಠಿರನನ್ನು ಹಣ್ಣುಗಾಯಿ ನೀರುಗಾಯಿ ಮಾಡಿಬಿಡುತ್ತದೆ. ಗಾಯಗೊಂಡ ಯುಧಿಷ್ಠಿರನು ಇನ್ನೂ ಯುದ್ಧವನ್ನು ಮುಂದುವರೆಸಿದರೆ ಕರ್ಣನ ಕೈಯಲ್ಲಿ ತಾನು ಹತನಾಗುವುದು ಖಂಡಿತ ಎಂದು ಹೆದರಿ ರಣರಂಗದಿಂದ ಪಲಾಯನ ಮಾಡಿ ಬಿಡಾರವನ್ನು ಸೇರಿದನು. ಯುಧಿಷ್ಠಿರನು ಗಾಯಗೊಂಡು ಬಿಡಾರ ಸೇರಿದ ವಿಷಯ ಅರ್ಜುನನಿಗೆ ತಿಳಿಯುತ್ತದೆ. ತನ್ನ ಅಣ್ಣನಿಗೆ ಏನಾಗಿದೆಯೋ ಎಂದು ಹೆದರಿ ಅಣ್ಣನನ್ನು ವಿಚಾರಿಸಲು ಅರ್ಜುನನು ಕೃಷ್ಣನನ್ನು ಕರದುಕೊಂಡು ರಣರಂಗವನ್ನು ಬಿಟ್ಟು ಬಿಡಾರಕ್ಕೆ ಬರುತ್ತಾನೆ. ಕೃಷ್ಣಾರ್ಜುನರಿಬ್ಬರೂ ದಿನದ ಯುದ್ಧ ಮುಗಿಯುವ ಮುನ್ನವೇ ಬಿಡಾರಕ್ಕೆ ಬಂದದ್ದರಿಂದ ಅರ್ಜುನನು ಕರ್ಣನನ್ನು ಕೊಲ್ಲುವ ಕಾರ್ಯವನ್ನು ಪೂರೈಸಿಯೇ ಬಂದಿದ್ದಾನೆ ಎಂದು ಅರ್ಥೈಸಿಕೊಳ್ಳುತ್ತಾನೆ ಧರ್ಮಜ. ಆ ಸಂತೋಷದಲ್ಲಿ ಅವನು ಕರ್ಣನನ್ನು ಕೊಂದ ಅರ್ಜುನನ್ನು ಹೊಗಳಿ ಅಭಿನಂದಿಸಿದನು. ಆಗ ಅರ್ಜುನನು “ಗಾಯಗೊಂಡ ನಿನ್ನನ್ನು ನೋಡಲು ಬಂದೆ ಈಗ ಹೋಗಿ ಕರ್ಣನೊಡನೆ ಯುದ್ಧಮಾಡಿ ಅವನನ್ನು ವಧೆ ಮಾಡುತ್ತೇನೆ” ಎಂದನು. ಭ್ರಮನಿರಸನಗೊಂಡ ಧರ್ಮಜನು, ಅದರ ಜೊತೆಗೆ ಕರ್ಣನಿಂದ ತನಗುಂಟಾದ ಪರಾಭವದ ಸಿಟ್ಟು ಎಲ್ಲವೂ ಸೇರಿ, ಅರ್ಜುನನನ್ನು ಮನಬಂದಂತೆ ಹೀಯಾಳಿಸಿದನು. ಅರ್ಜುನನೊಬ್ಬ ಹೇಡಿ, ಕರ್ಣನನ್ನು ಎದುರಿಸಲಾಗದೆ ಓಡಿ ಬಂದಿದ್ದಾನೆ, ಇಂತಹವನು ಕುಂತಿಯ ಹೊಟ್ಟೆಯಲ್ಲಿ ಹುಟ್ಟಿರಲು ಸಾಧ್ಯವೇ ಇಲ್ಲ, ಕರ್ಣನನ್ನು ಕೊಲ್ಲಲು ಭೀಮನನ್ನು ಕಳಿಸುತ್ತೇನೆ, ಅರ್ಜುನನ ಗಾಂಡೀವ ಯಾವ ಕೆಲಸಕ್ಕೂ ಬಾರದು ಎನ್ನುವ ಮೂದಲಿಕೆಯ ಮಾತುಗಳನ್ನಾಡಿದನು. ಅರ್ಜುನನು ಹಿಂದೆ ಮಾಡಿದ್ದ ಪ್ರತಿಜ್ಞೆಯ ಪ್ರಕಾರ ಯಾರೇ ಗಾಂಡೀವವನ್ನು ನಿಂದಿಸಲಿ ಅವರನ್ನು ಕೊಲ್ಲಬೇಕಿರುತ್ತದೆ. ತನ್ನ ಪ್ರತಿಜ್ಞೆಯನ್ನು ನೆನಪಿಸಿಕೊಂಡ ಅರ್ಜುನನು ತನ್ನ ಪ್ರತಿಜ್ಞೆಯನ್ನು ಉದ್ಘೋಷಿಸಿ ಗತ್ಯಂತರವಿಲ್ಲದೆ ಅಣ್ಣನ ಮೇಲೆ ಆಕ್ರಮಣಕ್ಕೆ ಸಜ್ಜಾಗುತ್ತಾನೆ. ಆಗ ಪರಿಸ್ಥಿತಿಯು ವಿಷಮಿಸುತ್ತಿರುವುದನ್ನು ಕಂಡ ಶ್ರೀಕೃಷ್ಣನು ಅರ್ಜುನನನ್ನು ತಡೆದು, “ಹಿರಿಯರನ್ನು ನಿಂದಿಸುವುದು ಅವರನ್ನು ಕೊಲ್ಲುವುದಕ್ಕೆ ಸಮ. ಆದ್ದರಿಂದ ನಿನ್ನ ಪ್ರತಿಜ್ಞೆಗೆ ಭಂಗ ತರದಿರಲು ನೀನು ನಿಮ್ಮ ಅಣ್ಣನನ್ನು ಮನಸೋ ಇಚ್ಛೆ ನಿಂದಿಸು” ಎಂದನು. ಆಗ ಅರ್ಜುನನು ಅಣ್ಣನನ್ನು ನಿಂದಿಸುತ್ತ ಪಾಂಡವರ ಎಲ್ಲ ಕಷ್ಟ, ವನವಾಸ, ಅಜ್ಞಾತವಾಸಗಳ ಬವಣೆಗಳಿಗೆ ಧರ್ಮರಾಯನ ನಿರ್ಧಾರಗಳೇ ಕಾರಣ, ಅವನೊಬ್ಬ ರಣಹೇಡಿ, ಕರ್ಣನೊಡನೆ ಯುದ್ಧ ಮಾಡಲಾಗದೆ ಓಡಿಬಂದಿರುವವ ಎಂದೆಲ್ಲಾ ಆವೇಶಪೂರ್ಣನಾಗಿ ನಿಂದಿಸಿದನು. ಈ ಸಂದರ್ಭದಲ್ಲಿ ಅವನಿಗೆ ತನ್ನ ಅಣ್ಣನ ಮೇಲಿದ್ದ ಕೋಪ ಮತ್ತು ಅಭಿಪ್ರಾಯಗಳು ಪೂರ್ಣವಾಗಿ ಅಭಿವ್ಯಕ್ತಿಗೊಳ್ಳುತ್ತವೆ. ಇದಾದ ಮೇಲೆ ಅರ್ಜುನನಿಗೆ ಅಣ್ಣನನ್ನು ನಿಂದಿಸಿದ್ದಕ್ಕಾಗಿ ತನ್ನ ಮೇಲೆಯೇ ಅಸಹ್ಯವಾಗುತ್ತದೆ. ಅವನು ಒರೆಯಿಂದ ಖಡ್ಗ ತೆಗೆದು ತನ್ನನ್ನು ತಾನೇ ಕೊಲ್ಲಲು ಮುಂದಾದನು. ಆಗ ಅವನನ್ನು ತಡೆದ ಕೃಷ್ಣನು ಅರ್ಜುನನಿಗೆ ಬುದ್ಧಿವಾದ ಹೇಳಿದನು. ಅರ್ಜುನನಿಂದ ಈ ಕುರುಕ್ಷೇತ್ರ ಯುದ್ಧ ಗೆದ್ದು ಧರ್ಮಸಂಸ್ಥಾಪನೆಯಾಗಬೇಕಿದೆ, ಮತ್ತು ಒಬ್ಬ ವೀರನಿಗೆ ಆತ್ಮಹತ್ಯೆ ಮಹಾಪಾಪ ಎಂದು ಬೋಧಿಸಿದನು. ಅನಂತರ, ಅರ್ಜುನನ್ನುದ್ದೇಶಿಸಿ “ನಿನ್ನನ್ನು ನೀನು ಅತಿಯಾಗಿ ಹೊಗಳಿಕೋ, ಅದು ಆತ್ಮಹತ್ಯೆಗೆ ಸಮಾನವಾದದ್ದು” ಎಂದು ಹೇಳಿದನು. ಅರ್ಜುನನು ಹಾಗೆಯೇ ಮಾಡಿದನು. ಇಲ್ಲಿ ನಾವು ಕೃಷ್ಣನಿಂದ ಕಲಿಯಬೇಕಾದ ಪಾಠಗಳು ಎರಡು – ೧. ಹಿರಿಯರನ್ನು ನಿಂದಿಸುವುದು ಅವರನ್ನು ಕೊಲ್ಲುವುದಕ್ಕೆ ಸಮ ಮತ್ತು ೨. ತನ್ನನ್ನು ತಾನು ಅತಿಯಾಗಿ ಹೊಗಳಿಕೊಳ್ಳುವುದು ಆತ್ಮಹತ್ಯೆಗೆ ಸಮ.

ಈ ಪ್ರಸಂಗಕ್ಕೂ ಮುನ್ನ ಯುದ್ಧದಲ್ಲಿ ದ್ರೋಣರು ಪ್ರಳಯರುದ್ರನಂತೆ ಹೋರಾಡುತ್ತ ಪಾಂಡವ ಸೇನೆಗೆ ಅತೀವ ನಷ್ಟವನ್ನುಂಟು ಮಾಡುತ್ತಾರೆ. ಇದನ್ನು ಗಮನಿಸಿದ ಶ್ರೀಕೃಷ್ಣನು, ದ್ರೋಣರನ್ನು ಹೀಗೆಯೇ ಬಿಟ್ಟರೆ ಪಾಂಡವರು ಯದ್ಧದಲ್ಲಿ ಸೋಲುವುದು ಖಂಡಿತ ಎಂದು ಅರಿಯುತ್ತಾನೆ.  ಯುಧಿಷ್ಠಿರ, ಭೀಮ ಮತ್ತು ಅರ್ಜುನರನ್ನು ಕರೆದು ಯಾರಾದರೂ ಅಶ್ವತ್ಥಾಮನು ಅಸುನೀಗಿದ ಎಂದು ದ್ರೋಣರಿಗೆ ಹೇಳದ ಹೊರತು ಅವರ ಈ ವೀರಾವೇಶವನ್ನು ಅಡಗಿಸುವುದು ಕಷ್ಟ ಎಂದು ಹೇಳಿದನು. ಈ ಮಾತು ಅರ್ಜುನನಿಗೆ ರುಚಿಸುವುದಿಲ್ಲ. ಆದರೆ ಕೂಡಲೇ ಭೀಮನು ತಮ್ಮದೇ ಸೇನೆಯಲ್ಲಿದ್ದ ಅಶ್ವತ್ಥಾಮ ಎಂಬ ಆನೆಯನ್ನು ಗದೆಯಿಂದ ಹೊಡೆದು ಕೊಂದು ದ್ರೋಣರ ಬಳಿ ಸಾರಿ ಅಶ್ವತ್ಥಾಮ ಮರಣ ಹೊಂದಿದ ಎಂದು ಕಿರುಚಿದನು. ದ್ರೋಣರು ಒಂದು ಕ್ಷಣ ಸ್ತಂಭಿತರಾದರೂ ತಮ್ಮ ಪುತ್ರ ಚಿರಂಜೀವಿಯಲ್ಲವೇ ಎಂದುಕೊಂಡು ಸಮಾಧಾನ ಮಾಡಿಕೊಂಡರು. ಆದರೆ ಭೀಮನು ಮತ್ತೆ ಅದೇ ರೀತಿ ಇನ್ನೊಮ್ಮೆ ಹೇಳಿ ಘರ್ಜಿಸಿದನು. ಆಗ ದ್ರೋಣರಿಗೆ ಸ್ವಲ್ಪ ಕಳವಳವುಂಟಾಗುತ್ತದೆ. ಅವರು ಈ ವಿಷಯವನ್ನು ಎಂದೂ ಸುಳ್ಳು ಹೇಳದ ಧರ್ಮರಾಯನ ಬಳಿಯೇ ಸತ್ಯವನ್ನು ತಿಳಿಯಬೇಕು ಎಂದು ಅವನ ಬಳಿಸಾರಿ ಭೀಮನು ಹೇಳುತ್ತಿರುವುದು ನಿಜವೇ ಎಂದು ಪ್ರಶ್ನಿಸಿದರು. ಆಗ ಶ್ರೀಕೃಷ್ಣನು ಧರ್ಮಜನ ಕಿವಿಯಲ್ಲಿ ಅಶ್ವತ್ಥಾಮನು ಸತ್ತ ಎಂದು ಹೇಳಿಬಿಡು, ನಮಗೆ ಬೇರೆ ದಾರಿಯಿಲ್ಲ ಎಂದು ಪುಸಲಾಯಿಸಿದನು. ಧರ್ಮಜನು ಧರ್ಮಸಂಕಟದಲ್ಲಿ ಬಿದ್ದನು. ಕೊನೆಗೆ ಕೃಷ್ಣನ ಮಾತು ಪಾಲಿಸುವುದೇ ಸರಿ ಎಂದು ಯೋಚಿಸಿ “ಅಶ್ವತ್ಥಾಮೋ ಹತಃ” ಎಂದು ಗಟ್ಟಿಯಾಗಿ ಹೇಳಿ “ಕುಂಜರಃ (ಆನೆ)” ಎಂದು ಮೆಲ್ಲಗೆ ಹೇಳಿದನು. ಕೊನೆಯ ಪದ ದ್ರೋಣರಿಗೆ ಕೇಳುವುದಿಲ್ಲ. ಧರ್ಮರಾಯನೇ ಹೇಳಿದ ಮೇಲೆ ದ್ರೋಣರಿಗೆ ನಂಬದೆ ಇರಲು ಆಗಲಿಲ್ಲ. ಅವರ ಬಾಹುಗಳ ಚೈತನ್ಯ ಉಡುಗಿಹೋಗುತ್ತದೆ, ಜೀವನದಲ್ಲಿ ನಿರಾಶೆ ಮೂಡುತ್ತದೆ. ಅವರ ಅಸಹಾಯಕತೆಯನ್ನು ನೋಡಿದ ಧೃಷ್ಟದ್ಯುಮ್ನನು ಅವರ ಮೇಲೆ ಆಕ್ರಮಣ ಮಾಡಿದನು. ಹಿಂದಿನ ಹುರುಪನ್ನು ಕಳೆದುಕೊಂಡ ದ್ರೋಣರಿಗೆ ಸರಿಯಾಗಿ ಪ್ರತ್ಯತ್ತರವನ್ನು ಕೊಡಲು ಆಗಲಿಲ್ಲ. ಕೊನೆಗೆ ಭೀಮನು ಅವರ ಬಳಿ ಬಂದು ಧರ್ಮಜನ ಮಾತಿನ ಮೇಲೂ ನಿಮಗೆ ಶಂಕೆಯೇ ಎಂದು ಮೂದಲಿಸಿದನು. ಈಗ ಅವರ ಶಕ್ತಿ ಪೂರ್ತಿ ಉಡುಗಿ ಇನ್ನು ಆಗುವುದಿಲ್ಲ ಎಂದು ತಿಳಿದು ಶಸ್ತ್ರಗಳನ್ನು ತ್ಯಜಿಸಿ ಪ್ರಾಣತ್ಯಾಗಕ್ಕೆ ಸಿದ್ಧರಾದರು. ಆಗ ಧೃಷ್ಟದ್ಯುಮ್ನನು ಅವರ ಶಿರಸ್ಸನ್ನು ತುಂಡರಿಸಿದನು. ಈ ಪ್ರಸಂಗದಲ್ಲಿ ಧರ್ಮರಾಯನು ತಿಳಿದೂ ತಪ್ಪನ್ನು ಮಾಡಿದ್ದಾನೆ, ತನಗೆ ವಿದ್ಯೆ ಕಲಿಸಿದ ಗುರುಗಳಿಗೆ ಸತ್ಯವನ್ನು ನುಡಿದರೂ ಅಸತ್ಯವೇ ಕೇಳುವಂತೆ ಮರುಳು ಮಾಡಿದ್ದಾನೆ. ಇದು ಸತ್ಯಕ್ಕಾಗಿ ಜೀವನವನ್ನು ಪಣಕ್ಕಿಟ್ಟವರು ಮಾಡುವಂತಹ ಕೆಲಸವೇ? ಸ್ವಂತ ಲಾಭಕ್ಕಾಗಿ ತನ್ನ ಜೀವನದ ಧ್ಯೇಯೋದ್ದೇಶಗಳಿಂದ ವಿಮುಖನಾಗಲಿಲ್ಲವೇ ಧರ್ಮಜ? ತನ್ನ ಗುರುಗಳಿಗೇ ಸುಳ್ಳನ್ನು ಹೇಳಿದನಲ್ಲವೇ ಅವನು?!

ಧರ್ಮಜನು ಇಂತಹ ಕೆಲ ತಪ್ಪುಗಳನ್ನು ಮಾಡಿದ್ದರೂ ಅವನ ಧರ್ಮನಿಷ್ಠೆ ಮತ್ತು ಧರ್ಮದಲ್ಲಿ ಅವನಿಗಿದ್ದ ಜ್ಞಾನ ಅಪೂರ್ವವಾದದ್ದು. ಈ ವಿಷಯದಲ್ಲಿ ಯಾವ ಮನುಷ್ಯನೂ ಅವನಿಗಿಂತ ಮೇಲಲ್ಲ! ಯಕ್ಷಪ್ರಶ್ನೆಯ ವೇಳೆಯಲ್ಲಿ ಯಕ್ಷನಿಗೆ ಉತ್ತರಿಸುತ್ತಿದ್ದಾಗ ಧರ್ಮರಾಯನ ಜ್ಞಾನ ಯಾವ ಮಟ್ಟದ್ದು ಎಂದು ನಮಗೆ ತಿಳಿಯುತ್ತದೆ. ತನ್ನ ಎಲ್ಲ ಸಹೋದರರನ್ನು ಬದುಕಿಸಿಕೊಳ್ಳಲು ಯಕ್ಷನ ವೇಷದಲ್ಲಿದ್ದ ತನ್ನ ತಂದೆ ಯಮಧರ್ಮರಾಯನ ಪ್ರಶ್ನೆಗಳಿಗೆ ಧರ್ಮಜನು ಸೂಕ್ತ ಉತ್ತರಗಳನ್ನು ನೀಡಿ ತಮ್ಮಂದಿರನ್ನು ಬದುಕಿಸಿಕೊಂಡಿದ್ದಾನೆ. ಆ ಪ್ರಶ್ನೋತ್ತರಗಳಲ್ಲಿ ಕೆಲವು ಈ ರೀತಿಯಾಗಿವೆ:

ಯಕ್ಷ: ಮಾನವನ ನಿಜವಾದ ಶತ್ರು ಯಾರು?

ಧರ್ಮಜ: ಕೋಪ.

ಯಕ್ಷ: ಮಾನವನ ಜೀವನದಲ್ಲಿ ಅತ್ಯುತ್ತಮ ಸುಖ ಯಾವುದು?

ಧರ್ಮಜ: ಸಂತೃಪ್ತಿ.

ಯಕ್ಷ: ಸ್ವರ್ಗ ಸಿಗುವುದು ಹೇಗೆ?

ಧರ್ಮಜ: ಸತ್ಯಮಾರ್ಗದಲ್ಲಿ ನಡೆಯುವುದರಿಂದ.

ಯಕ್ಷ: ಹುಲ್ಲಿಗಿಂತ ಹುಲುಸಾಗಿ ಬೆಳೆಯುವುದು ಏನು?

ಧರ್ಮಜ: ಚಿಂತೆ.

ಯಕ್ಷ: ಗೃಹಸ್ಥನ ಉತ್ತಮ ಗೆಳೆಯ ಯಾರು?

ಧರ್ಮಜ: ಆತನ ಪತ್ನಿ.

       ಜೀವನದ ಉದ್ದಕ್ಕೂ ಸತ್ಯ, ಧರ್ಮಗಳಿಗೆ ಕಟ್ಟುಬಿದ್ದ ಧರ್ಮಜ ಕೇವಲ ಒಂದೆರಡು ಸಂದರ್ಭಗಳಲ್ಲಿ ತಪ್ಪು ಹೆಜ್ಜೆ ಇಟ್ಟ ಕಾರಣ ಅವನು ಸ್ವರ್ಗ ಪ್ರವೇಶ ಮಾಡುವ ಮೊದಲು ನರಕದರ್ಶನದ ನೋವನ್ನು ಅನುಭವಿಸಬೇಕಾಗುತ್ತದೆ. ಧರ್ಮರಾಯನನ್ನು ಸ್ವರ್ಗಕ್ಕೆ ಕರೆದೊಯ್ಯುವ ಯಮಭಟರು ಮೊದಲು ಅವನನ್ನು ನರಕದೊಳಗೆ ಕರೆದೊಯ್ದರು. ಇದೇಕೆ ಎಂದು ಧರ್ಮಜನು ಯೋಚಿಸುತ್ತಿರುವಾಗ ಅವನ ಕಣ್ಣಿಗೆ ತನ್ನ ತಮ್ಮಂದಿರು ಮತ್ತು ಪತ್ನಿ ದ್ರೌಪದಿ ಆ ನರಕದಲ್ಲಿರುವುದು ಕಾಣುತ್ತದೆ. ಇವರೆಲ್ಲ ನರಕದಲ್ಲಿ ಏಕೆ ಇದ್ದಾರೆ. ಇವರೆಲ್ಲ ಇಲ್ಲಿರುವಾಗ ನಾನು ಸ್ವರ್ಗಕ್ಕೆ ಹೋಗುವುದು ಸರಿಯಲ್ಲ. ನಾನು ಕೂಡ ಇಲ್ಲಿಯೇ ಇರುತ್ತೇನೆ ಎಂದನು. ಇದು ಅವನಿಗೆ ತನ್ನ ಪತ್ನಿ ಮತ್ತು ತಮ್ಮಂದಿರ ಮೇಲಿದ್ದ ಅಕಳಂಕವಾದ ಪ್ರೀತಿಯನ್ನು ತೋರಿಸುತ್ತದೆ. ಆದರೆ ಆ ನರಕದ ವಾತಾವರಣ ಯಮಧರ್ಮನು ವಿನೋದಕ್ಕಾಗಿ ಸೃಷ್ಟಿಸಿದ ಮಾಯೆಯಾಗಿರುತ್ತದೆ. ಅನಂತರ ಯಮಧರ್ಮನು ಆ ಮಾಯಾಪೊರೆಯನ್ನು ಕಳಚಿದಾಗ ಎಲ್ಲರೂ ಸ್ವರ್ಗದಲ್ಲಿರುವುದನ್ನು ಕಾಣುತ್ತಾನೆ.

ಜೀವನಪೂರ್ತಿ ಧರ್ಮದ ದಾರಿಯಲ್ಲಿ ನಡೆದ ಧರ್ಮಾತ್ಮನಿಗೆ, ಒಂದರೆಡು ತಪ್ಪುಗಳ ಕಾರಣ ನರಕದರ್ಶನವಾಯಿತು ಎಂದಮೇಲೆ ನಮ್ಮ ನಿಮ್ಮಂತಹವರ ಪಾಡೇನು ಎನ್ನುವುದು ಯೋಚಿಸಬೇಕಾದ ವಿಷಯ! ಅಲ್ಲದೇ ಒಬ್ಬ ಧರ್ಮಾತ್ಮ ಮತ್ತು ಉತ್ತಮ ಜ್ಞಾನಿ ತನ್ನ ಒಂದು ವ್ಯಸನದ ಕಾರಣ ಇಡೀ ಕುಟುಂಬವನ್ನೇ ಸಂಕಷ್ಟಗಳ ಪಾಲುಮಾಡಿದನು ಎನ್ನುವುದು ಕೂಡ ನಮ್ಮಂತಹವರಿಗೆ ಒಂದು ಪಾಠವೇ ಸರಿ.

(ಈ ವ್ಯಕ್ತಿಚಿತ್ರವನ್ನು ಎಸ್.‌ ಕೃಷ್ಣಮೂರ್ತಿಯವರ (ಕೃಷ್ಣಕವಿ) ʼಪುರಾಣಪ್ರಸಿದ್ಧ ಪಾತ್ರಗಳುʼ ಎನ್ನುವ ಕೃತಿಯಿಂದ ಆಯ್ದುಕೊಳ್ಳಲಾಗಿದೆ)