ನನ್ನ ಗುರುವೇ ನನಗೆ ದೇವರು
ಕಲ್ಲಿನಲೂ ಕಲೆಯ ಅರಳಿಸುವರು
ಅಜ್ಞಾನ ನೀಗಿಸುವ ಜ್ಞಾನದಾತರು
ಮನದ ಮಂದಿರವ ಬೆಳಗುವರು
ಧರಣಿಯಲಿ ಸರಸ್ವತಿ ಸಂಜಾತರು
ನಿಷ್ಕಾಮ ಕರ್ಮಿ ಗುರುದೇವರು
ಮರದಡಿಯ ನೆರಳಂತೆ ತಂಪಿವರು
ಬಾಳಿಗೊಂದು ಕಂಪು ನೀಡುವರು
ಪರಿಪರಿಯ ಕನಸುಗಳಿಗೆ ದರ್ಶಕರು
ತಿಳುವಳಿಕೆಯ ಬೆಳಗು ಇವರು
ಜಾರಿ ಹೋಗುವ ಮನಸನು
ಹಾದಿ ತಪ್ಪದೇ ಮರಳಿಸುವರು
ಸುಗುಣ ಸಂಸ್ಕಾರದ ನಡೆಯನು
ತಿಳಿಸುತ ಸದ್ಭಾವನೆ ತುಂಬುವರು
ಮಸ್ತಕವೆಂಬ ಹಣತೆಯನು ತೊಳೆದು
ಜ್ಞಾನವೆಂಬ ತೈಲವನು ಸುರಿದು
ಬುದ್ಧಿಯೆಂಬ ಬತ್ತಿಯನು ಹೊಸದು ಮಾಡಿ
ಸದ್ಗುಣದ ಬೆಂಕಿಯನು ಹಚ್ಚಿ ಬೆಳಗುವರು
ಕಾ ವಿ ರಮೇಶ್ ಕುಮಾರ್
ಬೆಂಗಳೂರು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!