ವಿಷಯ : ಕವಿಗಳಾದ ನಾವು ಪ್ರಸ್ತುತ ಹಾಗೂ ಮುಂದಿನ ಸಮಾಜಕ್ಕೆ ಏನನ್ನು ಹೇಳಬೇಕಾಗಿದೆ.
ಪ್ರತಿದಿನದ ಜೀವನದ ಜಂಜಾಟಗಳಲ್ಲಿ ಬೇಸತ್ತು ಮನಸ್ಸಿನ ಸಂತೋಷಕ್ಕಾಗಿ ಪ್ರತಿಯೊಬ್ಬನೂ ಮನೋರಂಜನೆಯನ್ನು ಬಯಸುತ್ತಾನೆ. ಆ ರಂಜನೆಯ ಭಾಗವಾಗಿ ಕಥೆ, ಕಾವ್ಯ, ಲೇಖನಗಳನ್ನು ಓದುವ ಸಲುವಾಗಿ ಆಯ್ಕೆ ಮಾಡಿಕೊಳ್ಳುತ್ತಾನೆ. ತನ್ನ ಆ ದಿನದ ಸ್ವಲ್ಪ ಸಮಯವನ್ನುಓದಿನಲ್ಲಿ ತೊಡಗಿಸಿಕೊಳ್ಳುತ್ತಾನೆ. ಓದುಗನ ಈ ಸಮಯವು ಅತ್ಯಂತ ಅಮೂಲ್ಯವಾದುದು.
ಅನಂತ ಶಕ್ತಿಗಳ ಸಂಗಮವಾಗಿರುವ ವ್ಯಕ್ತಿಯ ವ್ಯಕ್ತಿತ್ವಕ್ಕೆ ನೀತಿಯುಕ್ತ ಸಂದೇಶವನ್ನು ಲೇಖನದ ಮೂಲಕ ನೀಡಬೇಕು. ಆಗ ಅವನ ವ್ಯಕ್ತಿತ್ವವು ಪರಿಮಳಯುಕ್ತ ಪುಷ್ಪದಂತೆ ಆಕರ್ಷಣೆಯಿಂದ ವಿಕಸನಗೊಳ್ಳುತ್ತದೆ. ತನ್ನೆಲ್ಲ ಒಳಿತು ಮತ್ತು ಕೆಡಕುಗಳನ್ನು ಸಮಾಲೋಚಿಸಿ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಅವನ ಜೀವನಕ್ಕೆ ಅವನೇ ಶಿಲ್ಪಿಯಾಗಿರುತ್ತಾನೆ. ಈ ಸಾಧನೆಗೆ ಪೂರಕವಾಗಿ ಚೇತೋಹಾರಿಯಾಗಿರುವ ಲೇಖಕನ ಧೀಮಂತಿಕೆಯ ಬರಹ ಸಹೃದಯರನ್ನು ಹುಟ್ಟಿಹಾಕುತ್ತದೆ.
ಮನುಷ್ಯ ಜನ್ಮದಲ್ಲಿ ಪ್ರತಿಯೊಬ್ಬನೂ ಮಾಡಲೇಬೇಕಾದ ಶ್ರೇಷ್ಠವಾದ ಆದ್ಯ ಕರ್ತವ್ಯ ಆತ್ಮ ಚಿಂತನೆ. ಅಂತಹ ಕಾರ್ಯ ಸಾಧನೆಗಳಿಗೆ ಮನಸ್ಸನ್ನು ಕೆರಳಿಸದೆ ಸದಾಕಾಲವೂ ಉತ್ಸಾಹವಾಗಿರುವಂತೆ ಸಕಾರಾತ್ಮಕವಾಗಿ ಅರಳಿಸಬೇಕು. ಕಾರ್ಯಸಾಧನೆಗಾಗಿ ಉತ್ಸುಕನಾಗಿರುವ ಕ್ರಿಯಾಶೀಲ ಸಾಧಕನಿಗೆ ಸಮೃದ್ಧಿ ಆಗಿರುವ ಲೇಖನವು ಆನಂದವನ್ನು ತರುತ್ತದೆ.
ಬದುಕುವುದಕ್ಕೆ ವೃತ್ತಿ ಎಷ್ಟು ಮುಖ್ಯವೋ ಅದಕ್ಕೆ ಸಮನಾಗಿ ಆತ್ಮ ಚಿಂತನೆಯೂ ಅಷ್ಟೇ ಪ್ರಾಮುಖ್ಯತೆಯನ್ನು ಪಡೆದಿರುತ್ತದೆ. ಆದುದರಿಂದ ಒಬ್ಬ ಲೇಖಕನ ದೃಷ್ಟಿ ಮುಂದಿನ ಉತ್ತಮ ಸಮಾಜದ ಅಭ್ಯುದಯದಲ್ಲಿ ಪ್ರಮುಖ ಪಾತ್ರ ವಹಿಸುವ ಯುವ ಜನತೆಯ ಮೇಲೆ ಕೇಂದ್ರೀಕೃತವಾಗಿರಬೇಕು. ಅತ್ಯಂತ ವೇಗವಾಗಿ ಓಡುತ್ತಿರುವ ಯಾಂತ್ರಿಕ ಯುಗದಲ್ಲಿ ಆ ವೇಗಕ್ಕೆ ಅನುಗುಣವಾಗಿ ಮಾರ್ಗದರ್ಶನ ನೀಡುವಂತೆ ಲೇಖನವು ದಾರಿ ದೀಪವಾಗಿರಬೇಕು.
ಆ ಲೇಖನವು, ಬುದ್ಧಿಯಿದ್ದರೆ ಸಾಲದು ಅದರ ಜೊತೆಗೆ ಆತ್ಮಜ್ಞಾನವನ್ನು ಬೆಳಸಿಕೊಳ್ಳಬೇಕು ಎಂಬುವ ಸತ್ಯವನ್ನು ಸಾರುವಂತಿರಬೇಕು. ಬುದ್ಧಿಯು ಗಲಿತವಾಗುವುದಕ್ಕಿಂತ ಮೊದಲು ವಿಶಾಲ ದೃಷ್ಟಿಯಿಂದ ವಿಚಾರ ಮಾಡಿದರೆ ತತ್ತ್ವಜ್ಞಾನದ ಅಭಿರುಚಿ ಅರ್ಥವಾಗುತ್ತದೆ. ಸ್ವನಿಯಂತ್ರಣದಿಂದ ಸುಸಂಸ್ಕೃತ ನೀತಿಯನ್ನು ಪಾಲಿಸಬೇಕು. ಮೌಲ್ಯಗಳಿಲ್ಲದ ಸ್ವಾರ್ಥದ ವಿಷಯಗಳಿಗೆ ಪರ್ಯಾಲೋಚನೆ ಮಾಡಿದರೆ ಪ್ರಯೋಜನವಾಗುವುದಿಲ್ಲ. ತೋರ್ಪಡಿಕೆಗಾಗಿ ಮಾಡುವ ಕಾರ್ಯಗಳು ವ್ಯರ್ಥವಾಗುತ್ತದೆ.
ಕವಿಗಳಾದ ನಾವು ಪ್ರಸ್ತುತ ಹಾಗೂ ಮುಂದಿನ ಸಮಾಜಕ್ಕೆ ಜ್ಞಾನೋದಯವಾಗುವ ರೀತಿಯಲ್ಲಿ ನಿಸ್ವಾರ್ಥದಿಂದ ಸನ್ಮಾರ್ಗದ ಪ್ರಾಪ್ತಿಗಾಗಿ ಅಂತಃಕರಣ ಶುದ್ಧಿಯಿಂದ ವಿಚಾರ ಮಾಡುವಂತಹ ಅನುಬೋಧೆ ನೀಡಬೇಕು. ಆಗ ಯುವಜನತೆಯಲ್ಲಿ ಅವರ ನಿರ್ಣಯಗಳನ್ನು ಪುಷ್ಟೀಕರಿಸಿಕೊಳ್ಳಲು ರಚನಾಂಶ ವಿಶ್ಲೇಷಣೆಯ ಅಂತರ್ಬೋಧೆ ಅನುಕೂಲಕರವಾಗುತ್ತದೆ.
ಕಾ ವಿ ರಮೇಶ್ ಕುಮಾರ್
ಬೆಂಗಳೂರು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!