ನಾವು ಇಂಜಿನಿಯರಿಂಗ್ ಮುಗಿಸಿದ ಕೆಲವೇ ವರ್ಷಗಳ ತರುವಾಯ, ಉತ್ತರ ಭಾರತದ ಒಂದು ರಾಜ್ಯದಲ್ಲಿ ಒಂದು ಘಟನೆ ಘಟಿಸಿತ್ತು. ನಮ್ಮ ವರ್ತುಲದಲ್ಲೇ ಇದ್ದ ಒಬ್ಬ ಹುಡುಗನನ್ನು ಗುಂಡಿಟ್ಟು ಕೊಂದರೆಂಬ ಸುದ್ದಿ ನಮಗೆಲ್ಲ ತಿಳಿದು ಆಘಾತ ತಂದಿತ್ತು. ಅವನು ಅಲ್ಲಿ ಆಫೀಸರ್ ಆಗಿ ಕೆಲಸಕ್ಕೆ ಸೇರಿದ್ದ. ನನಗೆ ಗೊತ್ತಿರುವ ಮಟ್ಟಿಗೆ, ಅವನು ಪ್ರಾಮಾಣಿಕತೆಯಿಂದ ನಡೆದುಕೊಂಡದ್ದಕ್ಕಾಗಿಯೇ ಜೀವ ತೆತ್ತದ್ದು.
ಈ ಸುದ್ದಿ ನನ್ನ ಮನಸ್ಸಿನಲ್ಲಿ ಬಹಳ ವರ್ಷಗಳ ಕಾಲ ಅನುರಣಿಸುತ್ತಲೇ ಬಂದಿದೆ. ಹಾಗೆ ಮನಸ್ಸಿಗೆ ತಿರುಗಿ ಬಂದಾಗಲೆಲ್ಲ, ನಾನು ಆ ಸ್ಥಿತಿಯಲ್ಲಿದ್ದರೆ ಏನು ಮಾಡುತ್ತಿದ್ದೆ ಎಂಬ ಆಲೋಚನೆಯೊಂದಿಗೇ ಬರುತ್ತದೆ.
ಇದಕ್ಕೆ ಪ್ರಾಮಾಣಿಕವಾದ ಉತ್ತರ ಏನಪ್ಪಾ ಅಂತಂದರೆ — ನನಗೆ ಅದನ್ನೆಲ್ಲಾ ನಿಭಾಯಿಸುವುದು ಬಹುಶಃ ಸಾಧ್ಯವಾಗುತ್ತಿರಲಿಲ್ಲ ಎಂಬುದು.
ಆದರೆ ಇದು ನನ್ನ ಕ್ಷಮತೆಗೆ ಹಿಡಿದ ಕನ್ನಡಿಯಲ್ಲ; ಬದಲಿಗೆ, ಈ ರೀತಿಯ ಪರಿಸ್ಥಿತಿಯೊಂದು ಉದ್ಭವಿಸಬಹುದು, ಅದಕ್ಕಾಗಿ ತಯಾರಿ ನಡೆಸಬೇಕು ಎಂಬುದನ್ನು ನನಗೆ ಯಾರೂ ತಿಳಿಸಿರಲಿಲ್ಲ ಎಂಬುದರ ಪರಿಣಾಮ.
ಈ ಗ್ಯಾಪ್ ಇದೆಯಲ್ಲ, ಅದೇ ನಮ್ಮ ಭಾರತದ ಶಿಕ್ಷಣದ ಕೇಂದ್ರದಲ್ಲಿ ಇರುವ ದೊಡ್ಡದಾದ ರಂಧ್ರ.
ಒಂದು ವ್ಯವಸ್ಥೆಯನ್ನು ನಡೆಸಲು ಮತ್ತೊಂದು
ನಮ್ಮ ಶಿಕ್ಷಣ ವ್ಯವಸ್ಥೆ ಇಂದು ಬ್ರಿಟಿಷರು ಸ್ಥಾಪಿಸಿದ ವ್ಯವಸ್ಥೆಯ ಮುಂದುವರಿದ ಭಾಗ. ಅವರಿಗೆ ತಮ್ಮ ವ್ಯವಸ್ಥೆಗಳನ್ನು ನಡೆಸಲು ಕೆಲಸಗಾರರ ಅಗತ್ಯವಿತ್ತು. ಹೀಗಾಗಿ ಅವರಿಗೆ ಏನು ಬೇಕೋ ಅದನ್ನು ತಯಾರು ಮಾಡಲು ಸ್ಥಾಪಿಸಿದ ವ್ಯವಸ್ಥೆ ಇದು. ಒಂದು ಸಮಾಜವನ್ನು ಒಟ್ಟಾಗಿ ಇರಿಸುವ, ಅದನ್ನು ಮೇಲೆತ್ತುವ ಕ್ಷಮತೆಯುಳ್ಳ ನಾಗರಿಕರನ್ನು ರೂಪಿಸುವ ವಿನ್ಯಾಸ ಇದರದ್ದಾಗಿರಲಿಲ್ಲ.
ಭಾರತವನ್ನು ಜಗತ್ತಿನ "ಬ್ಯಾಕ್ ಆಫೀಸ್" ಎಂದು ಕರೆಯುತ್ತಾರೆ — ಅದೂ ಸ್ವಲ್ಪ ಅವಹೇಳನಕಾರಿಯಾಗಿಯೇ. ಕಳೆದ ನೂರಾರು ವರ್ಷಗಳಲ್ಲಿ ನಾವು ಬೇರೆ ದೇಶಗಳ ವ್ಯವಸ್ಥೆಗಳನ್ನು ನಡೆಸುವ ಕ್ಷಮತೆಯುಳ್ಳ ಜನರನ್ನು ರಫ್ತು ಮಾಡಿದ್ದೇವೆ. ಈ ಅವಹೇಳನವನ್ನು ಸಹಿಸಿಕೊಳ್ಳುತ್ತಲೇ ಒಂದು ಉದ್ಯಮವನ್ನೇ ಸೃಷ್ಟಿಸಿಕೊಂಡಿದ್ದೇವೆ.
ಬ್ರಿಟಿಷರು ಬರುವುದಕ್ಕಿಂತ ಮುಂಚೆ ಭಾರತದಲ್ಲಿ ಇದ್ದದ್ದು ಬಹುತೇಕ ಪ್ರತ್ಯೇಕವಾದ ವ್ಯವಸ್ಥೆ. ಧರ್ಮಪಾಲರ The Beautiful Tree ಪುಸ್ತಕವನ್ನು ಓದಿದವರಿಗೆ ಅದು ಹೇಗಿತ್ತು ಎಂಬುದರ ಚಿತ್ರಣ ಸಿಗುತ್ತದೆ. ಸಮಾಜಕ್ಕೆ ಬೇಕಾದ ಬೇರೆ ಬೇರೆ ಕೌಶಲಗಳನ್ನು ಅದು ಕಲಿಸುತ್ತಿತ್ತು — ಒಂದಲ್ಲ, ಹಲವು; ವಿಸ್ತೃತವಾದವುಗಳು.
ನಾವು ಬೇರೊಬ್ಬರ ಅಗತ್ಯಗಳನ್ನು ಪೂರೈಸುವ ವ್ಯವಸ್ಥೆಯನ್ನು ನಮ್ಮದಾಗಿಸಿಕೊಂಡೆವು. ನಮ್ಮ ಉದ್ದೇಶಗಳನ್ನು ಸಲಹುವ ವ್ಯವಸ್ಥೆಯನ್ನು ರೂಪಿಸಿಕೊಳ್ಳಲೂ ಇಲ್ಲ, ಅದರ ಬಗ್ಗೆ ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಲೂ ಇಲ್ಲ.
ತಪ್ಪು ಶ್ರೇಣಿಗಳಲ್ಲಿ ಕೂಡಿಸುವ ವ್ಯವಸ್ಥೆ
ಬಹುತೇಕ ಶಾಲಾ ಕಾಲೇಜುಗಳಲ್ಲಿ ಒಂದೇ ರೀತಿಯ ವ್ಯವಸ್ಥೆ ಪ್ರಚುರವಾಗಿದೆ. ನಾವು ಮಕ್ಕಳಿಗೆ ಅಕ್ಷರಗಳನ್ನು ಕಲಿಸುತ್ತೇವೆ, ವಿಜ್ಞಾನವನ್ನು ಕಲಿಸುತ್ತೇವೆ, ಗಣಿತ, ಸಮಾಜ ವಿಜ್ಞಾನ ಮುಂತಾದವುಗಳನ್ನೂ ಕಲಿಸುತ್ತೇವೆ. ಇವೆಲ್ಲ ಉಪಯೋಗಕ್ಕೆ ಬರುತ್ತವೆ. ಆದರೆ ಮಕ್ಕಳನ್ನು ಶ್ರೇಣಿಗಳಲ್ಲಿ ವಿಂಗಡಿಸುವ ಹಿಂದಿರುವ ಮಾಪನ ಏನೆಂದರೆ — ಅವರು ಓದಿದ್ದನ್ನು ಎಷ್ಟರ ಮಟ್ಟಿಗೆ ನೆನಪಿಟ್ಟುಕೊಳ್ಳಬಲ್ಲರು ಎಂಬುದು. ಅವರ ಗ್ರಹಿಕೆ ಇಲ್ಲಿ ಮುಖ್ಯವಾಗುವುದಿಲ್ಲ. ಸರಿಯಾಗಿ ನೆನಪಿಟ್ಟುಕೊಂಡವರಿಗೆ ಅಂಕಗಳು. ಅಷ್ಟೇ.
ಇಲ್ಲಿ ಅತಿ ಬುದ್ಧಿವಂತನು ಎನ್ನಿಸಿಕೊಳ್ಳುವವನು ಓದಿದ್ದನ್ನು ಚಾಚೂ ತಪ್ಪದೆ ಹೇಗಿತ್ತೋ ಹಾಗೆ ಬರೆದವನು. ಇದೇ ಬುದ್ಧಿವಂತಿಕೆಯ ಲಕ್ಷಣ ಎಂದಾದರೆ, ಅದು ವಿಚಿತ್ರ ಹಾಗೂ ವಿಲಕ್ಷಣ ಎಂದು ಅನಿಸುವುದಿಲ್ಲವೇ? ಆದರೆ ನಮ್ಮ ಇಡೀ ಹಾದಿಯನ್ನೇ ನಾವು ಇದರ ಮೇಲೆ ಕಟ್ಟಿಕೊಂಡು ಓಡಾಡುತ್ತಿದ್ದೇವೆ.
(ಮುಂದುವರಿದ ಭಾಗ ಮತ್ತೊಂದು ಲೇಖನದಲ್ಲಿ...)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!