ಈ ಲೇಖನದ ಮೊದಲ ಭಾಗದಲ್ಲಿ, ಇಂಜಿನಿಯರಿಂಗ್ ಮುಗಿಸಿದ ಕೆಲವೇ ವರ್ಷಗಳಲ್ಲಿ, ಪ್ರಾಮಾಣಿಕತೆಯಿಂದ ನಡೆದುಕೊಂಡದ್ದಕ್ಕಾಗಿಯೇ ಉತ್ತರ ಭಾರತದಲ್ಲಿ ಜೀವ ತೆತ್ತ ನಮ್ಮ ಗೆಳೆಯನ ಬಗ್ಗೆ ಬರೆದಿದ್ದೆ. ನಮ್ಮ ಶಿಕ್ಷಣ ವ್ಯವಸ್ಥೆ ಬ್ರಿಟಿಷರ ಅಗತ್ಯಗಳಿಗೆ ರೂಪುಗೊಂಡದ್ದು, ಹಾಗೂ ಅದು ಮಕ್ಕಳನ್ನು ಅಳೆಯುವುದು ಅವರು ಎಷ್ಟು ನೆನಪಿಟ್ಟುಕೊಳ್ಳಬಲ್ಲರು ಎಂಬುದರ ಮೇಲೆ ಎಂಬುದನ್ನೂ ನೋಡಿದೆವು. ಈಗ ಮುಂದಕ್ಕೆ.

ಇದು ಸಿಲಬಸ್‌ನಲ್ಲಿ ಇಲ್ಲ

ನಾವು ಶಾಲೆಗೆ ಹೋಗುವ ೧೦ ವರ್ಷಗಳ ಕಾಲ, ಹಾಗೂ ೨ ವರ್ಷಗಳ ಪದವಿಪೂರ್ವ ಮತ್ತು ೪ ವರ್ಷಗಳ ಪದವಿ — ಇವೆಲ್ಲದರಲ್ಲಿ ಎಲ್ಲಿಯೂ ಹೊರಗಿನ ಜನರೊಂದಿಗೆ ವ್ಯವಹರಿಸುವುದು ಹೇಗೆ ಎನ್ನುವುದನ್ನು ನಮಗೆ ಕಲಿಸುವುದಿಲ್ಲ, ಅದರ ಬಗ್ಗೆ ತಿಳಿಸುವುದೂ ಇಲ್ಲ.

ನಮ್ಮೊಂದಿಗೆ ಸರಿಯಾಗಿ ನಡೆದುಕೊಳ್ಳದೆ ಇರುವ ಜನರೊಂದಿಗೆ ಹೇಗೆ ವ್ಯವಹರಿಸುವುದು? ಜಗಳವನ್ನು ತಡೆಯುವುದು ಹೇಗೆ, ಅಥವಾ ನಿಲ್ಲಿಸುವುದು ಹೇಗೆ? ಜೀವನದಲ್ಲಿ ಎಲ್ಲವೂ ಡೆಡ್ ಎಂಡ್‌ನಂತೆ ಕಾಣಲು ಶುರುವಾದರೆ, ಅದರಿಂದ ಹೊರಬರುವುದು ಹೇಗೆ? ನಿಮ್ಮ ಮೇಲೆ ಅತಿಯಾದ ನಿಯಂತ್ರಣ ಸಾಧಿಸಲು ಹೊರಟಿರುವವರಿಗೆ "ಇಲ್ಲ" ಎಂದು ಹೇಗೆ ಹೇಳುವುದು? ಯಾರಾದರೂ ನಿಮ್ಮನ್ನು ಪರೀಕ್ಷೆ ಮಾಡುತ್ತಿದ್ದಾಗ, ಅಥವಾ ನಿಮಗೆ ಧಮಕಿ ಹಾಕಿದಾಗ, ಏನು ಮಾಡುವುದು?

ಇವೆಲ್ಲದರ ಬಗ್ಗೆ ಯಾರೂ ಮಾತನಾಡುವುದಿಲ್ಲ, ಏನೂ ಹೇಳಿಕೊಡುವುದಿಲ್ಲ.

ಮಕ್ಕಳಲ್ಲಿ ಕೆಲವರು ಇದನ್ನೆಲ್ಲ ಕಲಿಯುತ್ತಾರೆ. ಆದರೆ ಎಲ್ಲಿ? ಮನೆಯಲ್ಲಿ. ಶಾಲೆಯಲ್ಲಿ ಅಲ್ಲ. ಉದಾಹರಣೆಗೆ, ವ್ಯಾಪಾರವನ್ನೇ ವೃತ್ತಿ ಮಾಡಿಕೊಂಡಿರುವ ಕುಟುಂಬಗಳಲ್ಲಿ ಮಕ್ಕಳು ತಮ್ಮ ಹಿರಿಯರೊಂದಿಗೆ ಕುಳಿತುಕೊಂಡು ಬಹಳಷ್ಟು ವಿಷಯಗಳನ್ನು ಕಲಿಯುತ್ತಾರೆ. ವ್ಯಾಪಾರ ಮಾಡುವುದು ಹೇಗೆ? ಚೌಕಾಸಿ ಮಾಡುವುದು ಹೇಗೆ? ಕೈತಪ್ಪಿ ಹೋಗುತ್ತಿರುವ ವ್ಯಾಪಾರವನ್ನು ಕುದುರಿಸುವುದು ಹೇಗೆ? ಕಿರಿಕಿರಿ ಉಂಟುಮಾಡುವ ಗ್ರಾಹಕನನ್ನು ನಿರ್ವಹಿಸುವುದು ಹೇಗೆ? ಕಷ್ಟದ ದಿನಗಳನ್ನು ಮೀರಿ ಬದುಕುವುದು ಹೇಗೆ? ಇದನ್ನೆಲ್ಲ ಕಲಿಯುತ್ತಾರೆ.

ಇದೇ ನಿಜವಾದ ಶಿಕ್ಷಣ. ವಿಪರ್ಯಾಸವೆಂದರೆ, ಇದನ್ನು ನಮ್ಮ ಶಾಲೆಗಳಲ್ಲಿ ಕಲಿಸುವುದಿಲ್ಲ; ಇದರ ಪ್ರಸರಣ ನಮ್ಮ ಶಿಕ್ಷಣ ವ್ಯವಸ್ಥೆಯ ಹೊರಗಡೆಯೇ ಆಗಬೇಕಾಗುತ್ತದೆ.

ಪ್ರತಿಯೊಬ್ಬರೂ ತಾವೇ ಇದನ್ನೆಲ್ಲ ಕಲಿಯಬೇಕು. ಎಷ್ಟೋ ಜನರಿಗೆ ೨೫ರ ಮೇಲೆ ಈ ವಿಷಯಗಳು ಒಂದೊಂದಾಗಿ ಅರಿವಿಗೆ ಬರಲು ಶುರುವಾಗುತ್ತದೆ. ಬಹುಪಾಲು ಕಷ್ಟಪಟ್ಟು, ಎಡವಿ ಬಿದ್ದ ಮೇಲೆ ಇದೆಲ್ಲದರ ಕಲಿಕೆ. ಕೆಲವೊಮ್ಮೆ ಎಡವಿ ಬಿದ್ದದ್ದು ತೀರಾ ಭಾರಿ ಹೊಡೆತ. ಕಲೆ ಉಳಿಯುತ್ತದೆ. ಎಷ್ಟೋ ಜನರು ಅದರಿಂದ ಚೇತರಿಸಿಕೊಳ್ಳುವುದೇ ಇಲ್ಲ.

ವ್ಯಕ್ತಿಯೊಬ್ಬನು ತೆರಬೇಕಾದ ದುಬಾರಿ ಬೆಲೆ

ಕ್ಲಿಷ್ಟಕರವಾದ ಗಣಿತದ ಸಮಸ್ಯೆಯೊಂದನ್ನು ನೀರು ಕುಡಿದಂತೆ ಬಗೆಹರಿಸಬಲ್ಲ ಮಗು, ಹೊರಗಿನವರು ಯಾರೋ ಒಬ್ಬರು ತನ್ನೊಂದಿಗೆ ಕೆಟ್ಟದಾಗಿ ನಡೆದುಕೊಂಡಾಗ ಏನು ಮಾಡಬೇಕೆಂದು ತಿಳಿಯದೆ ಹೋಗುತ್ತದೆ.

ಅಂತಹ ಮಕ್ಕಳು ಏನು ಮಾಡುತ್ತಾರೆ? ಸಾಧ್ಯವಾದಷ್ಟು ಹೊರಗಿನ ಜಗತ್ತಿಗೆ ತಮ್ಮನ್ನು ಒಡ್ಡಿಕೊಳ್ಳದೆ ಇರುತ್ತಾರೆ. ಸಾಧ್ಯವಾದಷ್ಟು ತಮಗೆ ಸಾಂತ್ವನ ನೀಡುವ ಆಪ್ತವಲಯದಲ್ಲಿ ಉಳಿಯಲು ಬಯಸುತ್ತಾರೆ. ಅಂಥವರು ಹೆಚ್ಚು ಹೊರಹೋಗಲು ಇಷ್ಟಪಡುವುದಿಲ್ಲ. ಅವರ ಆಪ್ತವಲಯ ಕೂಡ ತೀರಾ ಚಿಕ್ಕದಾಗಿರಬಹುದು, ಆದರೂ ಅದು ಹಾಗೆಯೇ ನಡೆಯುತ್ತಿರುತ್ತದೆ.

ಆದರೆ ಜೀವನದ ಚಕ್ರ ಒಮ್ಮೆ ನಡುವೆ ಬಂದೇ ಬರುತ್ತದೆ. ಈ ರೀತಿ ಬೆಳೆದು ಬಂದವರಿಗೆ ಯಾವುದೇ ರೀತಿಯ ತಯಾರಿ ಇರುವುದಿಲ್ಲವಾದ್ದರಿಂದ, ತೀರಾ ಚಿಕ್ಕ ಪ್ರಸಂಗಗಳು ಕೂಡ ಅತಿಯಾದ ಪ್ರಭಾವವನ್ನು ಬೀರಬಲ್ಲವು.

ಇವೆಲ್ಲ ಹೊಡೆತಗಳನ್ನು ಸಹಿಸಿಕೊಳ್ಳುವ ಶಕ್ತಿ, ಹಾಗೂ ಆ ಶಕ್ತಿಯನ್ನು ತರುವ — ಹಲವು ವರ್ಷಗಳ ಅನುಭವದ ನಂತರ ಬರುವ — ಭಾವನೆಗಳೊಂದಿಗಿನ ಜಾಣ್ಮೆ, ತೀರಾ ನಿಧಾನವಾಗಿ ಬರುತ್ತದೆ. ಕೆಲವೊಮ್ಮೆ ಬರುವುದೇ ಇಲ್ಲ. ಹಲವರು ಕಪ್ಪೆಚಿಪ್ಪಿನಿಂದ ಹೊರಬಂದಂತೆ ಬರುತ್ತಾರೆ, ಹಾಗೂ ಕಷ್ಟದ ದಿನಗಳನ್ನು ಎದುರಿಸುವಲ್ಲೂ ಶಕ್ತರಾಗುತ್ತಾರೆ. ಆದರೆ ಹಲವರಿಗೆ ಇದು ಸಾಧ್ಯವಾಗುವುದೇ ಇಲ್ಲ.

ಇದೇ ಕಾರಣಕ್ಕಾಗಿ, ಶಾಲೆಯಲ್ಲಿ ಅತಿ ಜಾಣನೆಂದು ಅನಿಸಿಕೊಂಡ ಹುಡುಗ ಜೀವನದಲ್ಲಿ ಗೆಲ್ಲುತ್ತಾನೆ ಎಂಬುದಿಲ್ಲ. ದಶಕಗಳ ಕಾಲ ಗಮನಿಸಿ ನೋಡಿದರೆ, ಲೋಕ ಯಶಸ್ಸು ಎಂದು ಕರೆಯುವ ಅಧಿಕಾರ, ವ್ಯವಹಾರ, ಶ್ರೀಮಂತಿಕೆ — ಇವುಗಳಲ್ಲಿ ಅವನಿಗಿಂತ ಕಡಿಮೆ ಜಾಣರೆನಿಸಿಕೊಂಡವರೇ ಮುಂದಿರುತ್ತಾರೆ. ಯಾರು ಬಹುಬೇಗನೆ ಜನರೊಂದಿಗೆ ವ್ಯವಹರಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳುತ್ತಾರೋ, ಅವರು ಇವರನ್ನು ಹಿಂದಕ್ಕೆ ಹಾಕಿ ಮುಂದೆ ಓಡುತ್ತಾರೆ. ಇದನ್ನು ಬಹಳಷ್ಟು ಜನ ಅವರವರ ಅದೃಷ್ಟ ಎಂದುಕೊಳ್ಳಲೂಬಹುದು.

ಜೀವನದಲ್ಲಿ ಆದರ್ಶಗಳು ಹಾಗೂ ನೀತಿಗಳಿಗೆ ಅನುಗುಣವಾಗಿ ನಡೆದುಕೊಳ್ಳಬಯಸುವ ಜನರಿಗೆ ಇದರ ಮತ್ತೊಂದು ಮೊನಚಾದ ಸಮಸ್ಯೆ ಬಂದು ತಗಲುತ್ತದೆ. ಇಂಥವರಿಗೆ, ತಾವು ಬೆಳೆದು ಬಂದ ರೀತಿಯಿಂದ ಬಂದ ಆದರ್ಶಗಳು ಬಹಳ ನೇರವಾಗಿರುತ್ತವೆ — ಇದನ್ನೆಲ್ಲ ಬಿಟ್ಟು ಬೇರೊಬ್ಬರಿಗೆ ಹಿಂಸೆ ಮಾಡಲು ಹೇಸದ ಜನರನ್ನು ಭೇಟಿಯಾಗುವ ತನಕ. ಬೇರೊಬ್ಬ ಮನುಷ್ಯನನ್ನು ಕಾಡುವುದು, ಪೀಡಿಸುವುದು, ತೊಂದರೆ ಕೊಡುವುದನ್ನು ಕಲಿತವರಿಗೆ ಯಾವುದೇ ಆದರ್ಶವೂ ತಡೆಯುವುದಿಲ್ಲ, ನೋಡಿ.

ಅಂಥವರನ್ನು ಹೇಗೆ ಎದುರಿಸುವುದು? ಆ ರೀತಿಯದ್ದಕ್ಕೆ ಬಾಗದೆ, ಗಟ್ಟಿಯಾಗಿ ಸೆಟೆದು ನಿಲ್ಲುವುದನ್ನು ಕಲಿಯುವುದು ಇದೆಯಲ್ಲ, ಅದು ಒಂದು ಕೌಶಲ. ಅದನ್ನು ಯಾರೂ ಹೇಳಿಕೊಡುವುದಿಲ್ಲ. ಕೆಲವರು ಅದನ್ನು ಹೇಗೋ ಕಲಿತು ಬಿಡುತ್ತಾರೆ, ಇನ್ನು ಕೆಲವರಿಗೆ ಅದು ಬರುವುದೇ ಇಲ್ಲ. ಎಷ್ಟೋ ಜನರಿಗೆ ತೀರಾ ವಯಸ್ಸಾಗುವವರೆಗೂ ಇದರ ಪರಿಚಯವೇ ಆಗುವುದಿಲ್ಲ.

ಒಳ್ಳೆತನವನ್ನು ನಿಮ್ಮ ದೌರ್ಬಲ್ಯ ಎಂದು ಕಾಣುವವರು ಯಾರೇ ಆಗಿರಲಿ, ಅವರೊಂದಿಗೆ ವ್ಯವಹರಿಸುವುದು ತೀರಾ ಯಾತನೆ ತರುವ ಕೆಲಸ. ನೀವು ಬೆಳೆದು ಬಂದ ದಾರಿ, ಅಲ್ಲಿಂದ ಬಂದ ನಿಮ್ಮ ಮೌಲ್ಯಗಳು ಹಾಗೂ ಆದರ್ಶಗಳು — ಬೇರೊಬ್ಬರಿಗೆ ಅವು ನಿಮ್ಮನ್ನು ಆಟ ಆಡಿಸುವ ಅಥವಾ ಕೆಟ್ಟದಾಗಿ ನಡೆಸಿಕೊಳ್ಳುವ ದಾರಿಯಾಗಿ ಪರಿಣಮಿಸಿಬಿಡುತ್ತವೆ.

ದೇಶವೇ ತೆರಬೇಕಾದ ಬೆಲೆ

ಒಬ್ಬ ವ್ಯಕ್ತಿಗೆ ಇದರಿಂದ ಎಷ್ಟು ತೊಂದರೆಯಾಗುತ್ತದೆ ಎನ್ನುವುದನ್ನು ನಾವು ಸುಲಭದಲ್ಲಿ ಕಾಣುತ್ತೇವೆ. ಆದರೆ ಇದಕ್ಕೆ ತೆರಬೇಕಾದ ಇನ್ನೂ ದೊಡ್ಡ ಬೆಲೆಯೊಂದಿದೆ; ಅದು ನನ್ನ ಮನಸ್ಸನ್ನು ಹೆಚ್ಚು ವಿಚಲಿತಗೊಳಿಸುತ್ತದೆ.

ಇಂದಿನ ಭಾರತದಲ್ಲಿ ಏನು ತಪ್ಪಾಗುತ್ತಿದೆ ಎಂದು ಕಾಣಬಲ್ಲ ಜನರ ಅಭಾವವಿಲ್ಲ. ಕಡಿಮೆಯಾಗಿರುವುದು ಏನು ಗೊತ್ತೇ? ಕಂಡದ್ದರ ಕುರಿತಾಗಿ ಏನಾದರೂ ಮಾಡಬೇಕೆಂಬ ಮನಸ್ಸಿರುವ ಜನರು.

ಇದರ ಕಾರಣ ನಿರಾಸಕ್ತಿ ಅಲ್ಲ ಎಂದು ನನಗೆ ಅನಿಸುತ್ತದೆ. ಕಾರಣ ಏನಿರಬಹುದು ಗೊತ್ತೇ? ತಪ್ಪು ನಡೆದದ್ದನ್ನು ಕಂಡೊಡನೆ ಅದರ ಕುರಿತಾಗಿ ಏನಾದರೂ ಮಾಡಲು ಹೋದರೆ ನಮಗೆ ಎದುರಾಗುವ ಕ್ಲಿಷ್ಟಕರವಾದ ಪರಿಸ್ಥಿತಿ, ಒತ್ತಡ, ಸೇಡು, ಹಾಗೂ ದುಷ್ಪರಿಣಾಮಗಳು — ಇವೆಲ್ಲವನ್ನೂ ಎದುರಿಸಲು ನಾವು ತಯಾರಿಲ್ಲದೆ ಇರುವುದು.

ತಾವು ಮಾಡಿದ್ದರಿಂದ ಏನಾಗಬಹುದು ಎಂಬುದನ್ನು ಅಳತೆಗೋಲು ಇಟ್ಟು ನೋಡಲಾಗದ್ದರಿಂದ, ಮನಸ್ಸಿಗೆ ಸರಿಯಾದ ಚಿತ್ರಣವೇ ಸಿಗುವುದಿಲ್ಲ. ಸಹಜವಾಗಿ, ಸುಲಭವಾದ ಹಾಗೂ ತೀರಾ ಅನುಕೂಲವಾದ ಆಯ್ಕೆ ಎಂದರೆ ಏನೂ ಮಾಡದೇ ಇರುವುದು.

ಹೀಗಾಗಿ ಇಡೀ ದೇಶ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವಂತಹ ಜನರಿಂದ ತುಂಬಿ ಹೋಗಿದ್ದರೂ, ಸಮಸ್ಯೆಗಳು ಹಾಗೆಯೇ ಉಳಿಯುತ್ತವೆ. ಆ ರೀತಿಯ ಜಡತನದ ಬೀಜ ಇರುವುದು ನಮ್ಮ ಶಾಲೆಗಳ ಕೊಠಡಿಗಳಲ್ಲಿ.

ಹಾಗಾದರೆ, ಏನು ಸಹಾಯ ಮಾಡುತ್ತದೆ?

ಮಹತ್ವಾಕಾಂಕ್ಷೆಯಿಂದ ನೋಡಬಹುದಾದರೆ, ಉತ್ತರ: ಸಂಪೂರ್ಣವಾಗಿ ಶಿಕ್ಷಣಕ್ಕೆ ಹೊಸ ರೂಪ ಕೊಡುವುದು. ಮಕ್ಕಳ ಕ್ಷಮತೆ ಹಾಗೂ ವಿವೇಚನೆಗೆ ಹೆಚ್ಚು ಬೆಲೆ ಕೊಟ್ಟು, ಉರುಹೊಡೆದು ಬರೆಯುವುದಕ್ಕೆ ಕೊಡುತ್ತಿರುವ ಪ್ರಾಶಸ್ತ್ಯವನ್ನು ಕಡಿಮೆ ಮಾಡುವುದು. ಭಾವನೆಗಳಿಂದ ಕೂಡಿದ ಜಾಣ್ಮೆಗೆ ಮೊದಲ ದರ್ಜೆಯ ಪ್ರಾಶಸ್ತ್ಯ ಕೊಡುವುದು — ಈ ಕೌಶಲ್ಯವನ್ನು ಮಕ್ಕಳು ಹುಟ್ಟುತ್ತಲೇ ಪಡೆಯುತ್ತಾರೆ ಎಂದು ಹೇಳುವುದನ್ನು ಬಿಟ್ಟು, ಅವರಿಗೆ ಇದನ್ನು ಕಲಿಸಬಹುದು ಎಂಬ ಧೋರಣೆ ತಳೆಯುವುದು.

ಈ ರೀತಿಯ ಕಲಿಕೆಯನ್ನು ಕೊಠಡಿಯೊಳಗಿನ ವಿಷಯವಾಗಿ ಕಲಿಸುವುದೋ, ಅಥವಾ ಪ್ರಾಕ್ಟಿಕಲ್ ಆಗಿ ಬೇರೊಂದು ರೀತಿಯಲ್ಲಿ ಕಲಿಸುವುದೋ, ನನಗೆ ಗೊತ್ತಿಲ್ಲ. ಈ ಕ್ಷೇತ್ರದಲ್ಲಿ ಪರಿಣಿತಿ ಹೊಂದಿದವರು ನನಗಿಂತ ಚೆನ್ನಾಗಿ ತಿಳಿದಿರುತ್ತಾರೆ; ಅವರು ಇದರ ಮೇಲೆ ಕೆಲಸ ಮಾಡಬೇಕು. ಆದರೆ ಈ ಕಲಿಕೆಗೆ ಆದ್ಯತೆ ಕೊಡಬೇಕು ಎಂಬುದರಲ್ಲಿ ಸಂಶಯವೇ ಇಲ್ಲ.

ಇದೆಲ್ಲ ದೊಡ್ಡ ಮಟ್ಟದ ಬದಲಾವಣೆಯ ಮಾತಾಯಿತು. ಆದರೆ ಸಣ್ಣದೊಂದು ದಾರಿಯೂ ಇದೆ, ಅದಕ್ಕೆ ಬಹುತೇಕ ಏನೂ ಖರ್ಚಿಲ್ಲ.

ನಾವು ವಿದ್ಯಾರ್ಥಿಗಳಿಗೆ ಇವೆಲ್ಲದರ ಕುರಿತಾಗಿ ಹೇಳಬೇಕು. ಅವರು ಒಳಹೊಕ್ಕುವ ಮುನ್ನವೇ, ಯಾವ ರೀತಿಯ ಜಗತ್ತಿನೊಳಗೆ ಕಾಲಿಡುತ್ತಿದ್ದಾರೆ ಎಂಬುದನ್ನು ತಿಳಿಸಬೇಕು.

ನಿಮ್ಮ ಜೀವನದಲ್ಲಿ ತಿಳಿಗೇಡಿ ಜನರನ್ನು ಎದುರಿಸಲೇಬೇಕಾಗಿ ಬರಬಹುದು — ಎಂಬ ವಿಷಯವನ್ನೂ ತಿಳಿಸಬೇಕು. ನಿಮ್ಮೊಂದಿಗೆ ಸರಿಯಾಗಿ ನಡೆದುಕೊಳ್ಳದೆ ಇರುವವರ ಜೊತೆಗೆ ನೀವು ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಮೊದಲಾಗಿ ತಿಳಿಸಿಕೊಡಬೇಕು. ಕೆಲವೊಮ್ಮೆ ನಮ್ಮೆದುರಿಗಿರುವ ಪ್ರಾಮಾಣಿಕವಾದ ಆಯ್ಕೆಯನ್ನು ಜಾಣ್ಮೆಯಿಂದಲ್ಲದೆ, ಒಳ್ಳೆಯತನದಿಂದಲೋ ಅಥವಾ ಹೃದಯವಂತಿಕೆಯಿಂದಲೋ ಸ್ವೀಕರಿಸಿದರೆ, ಅದು ಜೀವನಕ್ಕೆ ತೀರಾ ದುಬಾರಿ ಆಗಬಹುದು. ಅದೊಂದು ದಿನ ನಮ್ಮ ಸರಿಯಾದ ಆಯ್ಕೆ, ಜಗಳದಿಂದ ಹೊರಬಂದು ಮತ್ತೊಂದು ದಿನ ಕಾದಾಡುವ ಕ್ಷಮತೆಯನ್ನು ಉಳಿಸಿಕೊಳ್ಳುವುದಾಗಿರಬಹುದು. ಪ್ರತಿಯೊಂದು ದಾರಿಯೂ ಮುಚ್ಚಿದಂತೆ ಕಾಣುತ್ತಿರುವಾಗ ಮನಸ್ಸನ್ನು ಸ್ಥಿರವಾಗಿಸಿಕೊಂಡು ಕೂಲಂಕಷವಾಗಿ ಆಲೋಚನೆ ಮಾಡುವ ವಿಧಾನಗಳು ಇವೆ ಎಂಬುದನ್ನೂ ತಿಳಿಸಬೇಕು. ನಿಮ್ಮನ್ನು ಬೆದರಿಸುವ, ತೊಂದರೆ ಕೊಡುವ, ಅಪಹಾಸ್ಯ ಮಾಡುವ ಅಥವಾ ಸುಮ್ಮನೆ ಪೀಡಿಸುವವರನ್ನು ಹೇಗೆ ಎದುರಿಸುವುದು ಎಂಬುದನ್ನೂ ಕಲಿಸಬೇಕು.

ವಿದ್ಯಾರ್ಥಿಯೊಬ್ಬನಿಗೆ ಈ ರೀತಿಯದ್ದೊಂದನ್ನು ಎದುರಿಸಬೇಕಾಗುತ್ತದೆ ಎಂದು ತಿಳಿದಿದ್ದಲ್ಲಿ, ಅವನು ಮನಸ್ಸಿನಲ್ಲಿ ಸ್ವಲ್ಪವಾದರೂ ತಯಾರಿ ನಡೆಸಿರುತ್ತಾನೆ. ಅವನ ಮನಸ್ಸಿನಲ್ಲಿ ಪ್ರಶ್ನೆಗಳು ಮೂಡುತ್ತವೆ. "ನಾನು ಇದನ್ನು ಹೇಗೆ ಎದುರಿಸುವೆ?" ಎಂಬುದರ ಬಗ್ಗೆ ವರ್ಷಗಳ ಮುಂಚೆಯೇ ಅವನು ಆಲೋಚಿಸುತ್ತಾನೆ. ಯಾವಾಗ ಧೈರ್ಯದಿಂದ ಮುನ್ನುಗ್ಗಬೇಕು, ಯಾವ ಪ್ರಸಂಗಗಳಲ್ಲಿ ಸುಮ್ಮನಿರಬೇಕು — ಎಂಬುದು ಅವನ ವಿವೇಚನೆಗೆ ಬರುತ್ತದೆ.

ಆ ಮುಂದಡಿ ಇದೆಯಲ್ಲ, ಅದೇ ಶಾಕ್ ತಿನ್ನುವುದಕ್ಕೂ ತಯಾರಿಯಿಂದ ಎದುರಿಸುವುದಕ್ಕೂ ನಡುವೆ ಇರುವ ವ್ಯತ್ಯಾಸ.

ನಾವು ನಮ್ಮ ಗೆಳೆಯನಿಗೆ ಪದವಿಯನ್ನು ಕೊಟ್ಟು ಉತ್ತರಕ್ಕೆ ಕಳಿಸಿದೆವು — ಇದರಲ್ಲಿ ಯಾವುದನ್ನೂ ಕೊಡದೆ.

ಇವೆಲ್ಲ ಅವನನ್ನು ಉಳಿಸುತ್ತಿತ್ತೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ನನಗೆ ಒಂದು ವಿಷಯ ಖರೆಯಾಗಿ ಗೊತ್ತು: ಅವನು ಯಾವ ರೀತಿಯ ಜಗತ್ತಿಗೆ ಕಾಲಿಡುತ್ತಿದ್ದಾನೆ ಎಂಬುದನ್ನು ನಾವು ಅವನಿಗೆ ತಿಳಿಸಬಹುದಾಗಿತ್ತು. ಆದರೆ ನಾವು ತಿಳಿಸಲಿಲ್ಲ. ಈಗಲೂ ನಾವು ಮಕ್ಕಳಿಗೆ ಅದನ್ನು ತಿಳಿಸುವುದಿಲ್ಲ. ಪ್ರತಿ ವರ್ಷ, ಹೊರಬರುತ್ತಿರುವ ಪ್ರತಿಯೊಂದು ಬ್ಯಾಚಿಗೂ ಕೂಡ — ಈ ಆಯ್ಕೆ ನಮ್ಮೆಲ್ಲರದೇ.