ನಮ್ಮೂರ ಆಂಜನೇಯ ಸ್ವಾಮಿ ದೇವಸ್ಥಾನದ ಪಕ್ಕದಲ್ಲಿ ವಾಸವಾಗಿದ್ದ ಭರಮಣ್ಣನವರ ಮಗನಾದ ನಾಣಿ ತನ್ನ ಅಪ್ಪನಿಂದ ಯಾವುದೇ ಜಾಗವನ್ನು ಪಡೆಯಲಿಲ್ಲ. ಚಿಕ್ಕಂದಿನಿಂದಲೇ ಶಹರಿನಲ್ಲಿ ಓದಿದ ಅವನಿಗೆ ಕೃಷಿ ಬಗ್ಗೆ ಆಸಕ್ತಿ ಇದ್ದುದು ಕಡಿಮೆಯೇ. ಒಮ್ಮೆ ಭರಮಣ್ಣ ನಾಣಿಗೆ ಕೇಳಿದರಂತೆ, "ನೋಡೋ, ನನ್ನ ಹತ್ತಿರ ಇರುವ ಐದು ಎಕರೆ ಜಾಗ ನೀನು ನೋಡ್ಕೋತೀಯಾ ಅಂದ್ರೆ ಸರಿ, ಇಲ್ಲಾಂದ್ರೆ ಯಾರಿಗಾದರೂ ಬರೆದಿಟ್ಟು ಹೋಗಿಬಿಡ್ತೀನಿ," ಅಂತ. ನಾಣಿಗೆ ಆಗ ಇದರ ಬಗ್ಗೆ ಅವನ ಅಪ್ಪನೊಂದಿಗೆ ಮಾತನಾಡಲು ಕೂಡ ಸಮಯವಿರಲಿಲ್ಲ.

ವರ್ಷಗಳು ಉರುಳಿದವು. ಅಕ್ಕನ ಮದುವೆಗೆಂದು ದುಡ್ಡು ಜೋಡಿಸಲು ನಾಣಿ ಅಪ್ಪನಿಗೆ ಆ ಜಮೀನನ್ನು ಮಾರಿಬಿಡಿ ಎಂಬ ಸಲಹೆಯನ್ನು ಕೊಟ್ಟ. ಆಗ ಊರಿನವರು ಎಲ್ಲರೂ ಅದನ್ನೇ ಹೇಳಿದ್ದರು. ಬೀಳು ಬಿಟ್ಟುಕೊಂಡಿರುವ ಜಾಗ ಸುಮ್ಮನೆ ಹಾಗೆ ಬಿದ್ದಿರುವುದಕ್ಕಿಂತ ಯಾವುದಾದರೂ ಕೆಲಸಕ್ಕೆ ಆಯ್ತು ಬಿಡು ಎಂದು ಅವನಿಗೆ ಅನಿಸಿತ್ತು. ಅಕ್ಕನ ಮದುವೆ ಆಯ್ತು, ಮುಂದೆ ನಾಣಿಯ ಮದುವೆಯೂ ಆಯ್ತು. ಅವನ ಅಪ್ಪ ಒಂದಷ್ಟು ಕಾಲ ಹಳ್ಳಿಯ ಮನೆಯಲ್ಲಿ ಇದ್ದವರು, ಆಮೇಲೆ ಬೆಂಗಳೂರಿಗೆ ಬಂದು ನಾಣಿಯ ಜೊತೆಗೆ ಇದ್ದು, ಕೊನೆಗೆ ಅವರು ತೀರಿ ಹೋಗಿಬಿಟ್ಟರು. ನಾಣಿಗೆ ತನ್ನ ಊರಿನ ಸಂಪರ್ಕ ಅಲ್ಲಿಂದ ಸಂಪೂರ್ಣವಾಗಿ ಬಿಟ್ಟುಹೋಯ್ತು.

ಇನ್ನಷ್ಟು ವರ್ಷಗಳು ಕಳೆದವು. 15-20 ವರ್ಷಗಳ ಕಾಲ ಐಟಿ ಕಂಪನಿಗಳಲ್ಲಿ ಕೆಲಸ ಮಾಡಿದ ನಾಣಿಗೆ ಅದರ ಒತ್ತಡ, ಕಷ್ಟ-ಕಾರ್ಪಣ್ಯಗಳು ಸಾಕೇ ಸಾಕಾಗಿ ಹೋಗಿತ್ತು. ಕೃಷಿ ಮಾಡುತ್ತಿದ್ದ ತನ್ನ ಅಪ್ಪನ ಜೀವನ ಶೈಲಿ ಆಗಾಗ ತನ್ನ ಕಣ್ಣ ಮುಂದೆ ಹಾದುಹೋಗುತ್ತಿತ್ತು. ಹೆಚ್ಚಿನ ದುಡ್ಡು ಇಲ್ಲದಿದ್ದರೂ ಅಪ್ಪ ನೆಮ್ಮದಿಯಾಗಿ ಇದ್ದ ಎಂದು ಹಲವು ಬಾರಿ ನಾಣಿ ತನ್ನ ಹೆಂಡತಿಯ ಮುಂದೆ ಮಾತನಾಡಿದ್ದುಂಟು. ನಾಣಿಯ ಹೆಂಡತಿಗೋ ತನ್ನ ತವರಿನಲ್ಲಿ ಒಂದು ಕಾಲದಲ್ಲಿ ಇದ್ದ ಜಮೀನುದಾರಿಕೆ ಮತ್ತೆ ಸಿಗಬೇಕು ಎಂಬ ಆಸೆ ಇತ್ತು. ಆದರೆ ಮದುವೆಯಾಗುವ ಹೊತ್ತಿಗೆ ಅವಳ ತವರಿನಲ್ಲಿ ಇದ್ದ ಜಾಗ ಕೂಡ ಮಾರಾಟವಾಗಿಬಿಟ್ಟಿತ್ತು. ಪಾರಂಪರಿಕವಾಗಿ ಜಮೀನುದಾರರಾದರೂ ನಾಣಿಯ ಬಳಿಯೂ ಒಂದು ಇಂಚು ಜಾಗ ಉಳಿದಿರಲಿಲ್ಲ. ಬೆಂಗಳೂರಿನಲ್ಲಿ ಕೊಂಡದ್ದಾದರೂ ಒಂದು ಅಪಾರ್ಟ್‌ಮೆಂಟ್ ಮತ್ತು ಎಲ್ಲೋ ಅಲ್ಲೊಂದು ಇಲ್ಲೊಂದು ಸೈಟುಗಳು ಮಾತ್ರ. ಗಿಡಗಳು ಹಾಕಿಕೊಳ್ಳುವಂಥ ಜಾಗ ಅಷ್ಟಾಗಿ ಊರಿನಲ್ಲಿದ್ದ ಅಪ್ಪನ ಮನೆಯ ಮುಂದೆಯೇ ಇರಲಿಲ್ಲ. ಊರಿನಲ್ಲಿದ್ದ ಅಪ್ಪನ ಆ ಹಳೇ ಮನೆ ಪಾಳು ಬಿದ್ದಿತ್ತು. ಅದನ್ನು ನೋಡಿಕೊಳ್ಳುವ ಗೋಳು ಯಾರಿಗೆ? ಹೆಂಚು ಮುರಿಯುತ್ತದೆ, ಮತ್ತೇನೋ ಆಗುತ್ತದೆ, ಅದನ್ನೆಲ್ಲಾ ಪ್ರತಿ ಬಾರಿ ಊರಿಗೆ ಹೋಗಿ ಸರಿ ಮಾಡಿಸುವುದು ಯಾರು? ಎಂದು ಯೋಚಿಸಿ ನಾಣಿ ಅದನ್ನು ತನ್ನ ಚಿಕ್ಕಪ್ಪನಿಗೆ ಮಾರಿಬಿಟ್ಟಿದ್ದ, ಯಾಕೆಂದರೆ ಚಿಕ್ಕಪ್ಪ ಅಲ್ಲೇ ಇರುತ್ತಾರೆ - ನೋಡಿಕೊಳ್ಳುವುದು ಅವರಿಗೆ ಸುಲಭ. ನಾಣಿಗೆ ಹೆಚ್ಚಲ್ಲದಿದ್ದರೂ ಮಾರಿದ್ದಕ್ಕೆ ಒಂದಷ್ಟಾದರೂ ದುಡ್ಡು ಬಂದಿತ್ತಲ್ಲ?

ಆದರೆ ಈಗ ನಾಣಿಗೆ ಮತ್ತೊಮ್ಮೆ ಕೃಷಿ ಜಮೀನು ಬೇಕಿತ್ತು. ದಿನನಿತ್ಯ ಅವನ ಹೆಂಡತಿ "ಏನ್ರೀ, ಒಂದು ಗಿಡ ಹಾಕಿಕೊಳ್ಳೋಕೆ ಜಾಗ ಇಲ್ಲ" ಎಂದು ಹೇಳುತ್ತಿರುವುದು ಅವನ ಮನಸ್ಸಿನಲ್ಲಿ ಗೊಂದಲವನ್ನು ಸೃಷ್ಟಿ ಮಾಡುತ್ತಿತ್ತು. ನಾಣಿಗೂ ತನ್ನ ಬಾಲ್ಯದಲ್ಲಿ ಕಳೆದ ಕೆಲವು ದಿನಗಳ ನೆನಪಾಗುತ್ತಿತ್ತು. ಹೆಚ್ಚಿನಂತೆ ಬೆಂಗಳೂರಿನಲ್ಲಿಯೇ ತನ್ನ ಅತ್ತೆಯ ಮನೆಯಲ್ಲಿ ಬೆಳೆದ ನಾಣಿ, ಬೇಸಿಗೆಯ ರಜೆಗೆ ತನ್ನ ಹಳ್ಳಿ ಮನೆಗೆ ಹೋಗುತ್ತಲೇ ಇದ್ದ. ಆ ಬೇಸಿಗೆಯ ರಜೆಯಲ್ಲಿ ಕಳೆದ ದಿನಗಳಂತೂ ಆಪೂರ್ವವಾದವು; ನಿಜಕ್ಕೂ ಅವು 'ಗೋಲ್ಡನ್ ಡೇಸ್'.

ಸುತ್ತಲೂ ಇರುತ್ತಿದ್ದ ಸೊಪ್ಪು-ಸೊದೆಗಳನ್ನು ತಂದು ಅಮ್ಮ ಅಡುಗೆ ಮಾಡುತ್ತಿದ್ದಳು. ಗಾಣಿಕೆ ಸೊಪ್ಪು, ಗೋಣಿ ಸೊಪ್ಪು, ಕೀರೆ ಸೊಪ್ಪು, ಅಣ್ಣೆ ಸೊಪ್ಪು, ಅಟ್ಟಿಗೆ ಸೊಪ್ಪು—ಇವೆಲ್ಲವನ್ನೂ ಅಮ್ಮ ಬಳಸಿ ಅಡುಗೆ ಮಾಡುತ್ತಿದ್ದುದು ನಾಣಿಗೆ ಚೆನ್ನಾಗಿ ನೆನಪಿತ್ತು. ಬೆಂಗಳೂರಿನಲ್ಲಿ ಇದು ಯಾವುದೂ ಸಿಗದು, ಇಲ್ಲಿನ ಮಾರುಕಟ್ಟೆಯಲ್ಲಿ ಸಿಗುತ್ತಿದ್ದದ್ದು ಬರಿಯ ಪಾಲಕ್, ಕೊತ್ತಂಬರಿ ಮುಂತಾದವು ಮಾತ್ರ. ನಾಣಿಯ ಹೆಂಡತಿ ಕೂಡ ಮಲೆನಾಡಿನವರೇ ಆಗಿರುವುದರಿಂದ, ಅವರಿಗೂ ಗಿಡಗಳ ಪ್ರೇಮ ಹೆಚ್ಚು. "ಈಗ ಒಟ್ನಲ್ಲಿ ಒಂದು ಜಾಗ ತೆಗೆದುಕೊಳ್ಳಬೇಕು, ಅಷ್ಟೇ," ಎಂದು ನಾಣಿ ನಿರ್ಧರಿಸಿದ.

ದೂರ ದೂರದ ಊರುಗಳವರೆಗೂ ನಾಣಿ ಜಾಗ ಹುಡುಕಿ ಸೋತಿದ್ದ. ಬೆಂಗಳೂರು ಸುತ್ತಮುತ್ತಲಿನ ನೆಲವಂತೂ ಮುಟ್ಟಲಾಗದಷ್ಟು ತುಟ್ಟಿಯಾಗಿತ್ತು. ಕೊನೆಗೆ ಚಿತ್ರದುರ್ಗ, ಹಿರಿಯೂರು ಮುಂತಾದ ಕಡೆ ಹುಡುಕಿ, ಚಳ್ಳಕೆರೆಯಲ್ಲಿ ಒಂದು ಜಮೀನು ನೋಡಿ, ಅದನ್ನು ಕೊಂಡುಕೊಂಡ. ಆದರೆ ಚಳ್ಳಕೆರೆಯಲ್ಲೋ ನೀರಿನ ಅಭಾವ! ಆಗ ತಾನೇ ಅಲ್ಲಿ ಬರಗಾಲ ಕಳೆದು, ಒಂದು ವರ್ಷ ಒಳ್ಳೆಯ ಮಳೆಯಾಗಿತ್ತು. ಹೀಗಾಗಿ ಅಲ್ಲಿದ್ದ ಕೆಲವು ಬೋರ್ವೆಲ್‌ಗಳು ವಾಪಸ್ ನೀರು ಕಂಡಿದ್ದವು. ಅದೇ ಸಮಯದಲ್ಲಿ ಯಾರೋ ಈ ಜಾಗವನ್ನು ನಾಣಿಗೆ ಮಾರಿ, "ಇಲ್ಲಿ ನೀರು ಬರಪೂರ ಇದೆ" ಎಂಬ ಆಶ್ವಾಸನೆ ನೀಡಿ ಕೊಟ್ಟುಬಿಟ್ಟಿದ್ದರು.

ಜಾಗ ಕೊಂಡಿದ್ದೇ ತಡ, ನಾಣಿಗೆ ಬಾಲ್ಯದ ನೆನಪುಗಳೆಲ್ಲ ಒಮ್ಮೆಲೆ ಮರುಕಳಿಸಿ, ಏನೇನೋ ಮಾಡಬೇಕೆಂಬ ಆಸೆ-ಬಯಕೆಗಳು ಮುಂದಾದವು. ಸಾಕಷ್ಟು ದುಡ್ಡು ಖರ್ಚು ಮಾಡಿ ನಾಣಿ ಆ ಜಾಗಕ್ಕೆ ಒಂದು ಬೇಲಿ ಹಾಕಿಸಿದ. ಬೇಲಿ ಹಾಕುವಾಗ ಪಕ್ಕದ ಜಮೀನಿನವರೆಲ್ಲ ತಂಟೆ-ತಕ್ರಾರು ಮಾಡಿದರು. ಬೇಲಿ ಹಾಕಿಸುವುದಷ್ಟರಲ್ಲೇ ನಾಣಿಗೆ ರೋಸಿ ಹೋಯಿತು. ಇನ್ನು ಬೋರ್ವೆಲ್ ಕಥೆಯೋ... ಹಾಕಿಸುವ ಖರ್ಚು, ಬಳಸುವ ಮುನ್ನವೇ ಏನೇನೋ ಖರ್ಚುಗಳು, ಸಮಸ್ಯೆಗಳು ಬಂದು ನಾಣಿಯ ಕೈಯಲ್ಲಿದ್ದ ಹೆಚ್ಚಿನ ಹಣ ಅದಕ್ಕೇ ಖರ್ಚಾಗಿ ಹೋಯಿತು.

ನಾಣಿ ತೋಟಕ್ಕೆ ಹೋದಾಗಲೆಲ್ಲ ಗ್ರಾಮದವರು ಯಾರಾದರೂ ಒಬ್ಬರು ಸಿಕ್ಕು ಮಾತನಾಡಿಸುತ್ತಿದ್ದರು. ಬಂದವರು, "ಏನ್ ಸಾರ್, ಬೆಂಗಳೂರಿನವರು ನೀವು, ಕೆರೆ ಮಣ್ಣು ಹೊಡಿಸಿಬಿಡಿ, ಗಿಡಗಳು ಬ್ಯೂಟಿಫುಲ್ ಆಗಿ ಬರುತ್ತವೆ" ಎಂದು ಹೇಳತೊಡಗಿದರು. ಇನ್ನು ಕೆಲವರು, "ಅಡಿಕೆ ಹಾಕಿಸಬೇಕು ಸಾರ್, ಎಲ್ಲರೂ ಅಡಿಕೆ ಹಾಕಿಸುತ್ತಿದ್ದಾರೆ. ಈ ಸಾರಿ ಡ್ಯಾಮ್ ನೀರು ಬರುತ್ತದೆ - ಬೋರುಗಳು ಒಣಗುವುದಿಲ್ಲ” ಎಂದೆಲ್ಲ ಹೇಳಿ ನಾಣಿಯ ಮನ ಒಲಿಸಿ, ಕೊನೆಗೂ ಅಡಿಕೆಯನ್ನೇ ಹಾಕಿಸಿಬಿಟ್ಟರು. ತೋಟದ ತುಂಬಾ ಅಡಿಕೆಯ ಮರಗಳು! ನಡುನಡುವೆ ಸ್ವಲ್ಪ ಅಗಸೆ ಬಾಳೆ ಮುಂತಾದವನ್ನು ನಾಣಿ ಹಾಕಿಸಿದ. "ಅಗಸೆ ಬಾಳೆ ಅಡಿಕೆಗೆ ನೆರಳಾಗುತ್ತದೆ" ಎಂದು ಯಾರೋ ಹೇಳಿದರು. ನಾಣಿಗೆ ಏನು ಗೊತ್ತು? ಅಪ್ಪನ ಬಳಿ ತೋಟ ಇದ್ದರೂ ಅಲ್ಲಿ ಅವನು ಹೋದದ್ದು ಕಡಿಮೆ ತಾನೇ?

ಜಾಗ ಕೊಂಡ ಮೂರನೇ ವರ್ಷವೇ ಸರಿಯಾಗಿ ಬರಗಾಲ ಬಂತು. ಬೋರ್ವೆಲ್‌ನಲ್ಲಿ ನೀರು ಗ್ಯಾಪ್ ಹೊಡೆಯಲಿಕ್ಕೆ ಶುರುಮಾಡಿತು. "ನೀರಿಲ್ಲದಿದ್ದರೆ ಹೇಗೆ?" ಎಂದು ಯೋಚಿಸುತ್ತಾ ನಾಣಿ ಕಂಗಾಲಾದ. ಅಷ್ಟರೊಳಗೆ ಅವನು ಅಲ್ಲೊಂದು ಚಿಕ್ಕದಾದ ಶೆಡ್ ಒಂದನ್ನು ಕಟ್ಟಿಸಿದ್ದನು. ವಿಪರೀತ ಬಿಸಿಲಿರುವ ಪ್ರದೇಶವಾದ ಚಳ್ಳಕೆರೆಯಲ್ಲಿ ಎಷ್ಟು ನೀರು ಕೊಟ್ಟರೂ ಅಡಿಕೆ ಮರಗಳು ಹಳದಿ ಬಣ್ಣಕ್ಕೆ ತಿರುಗುತ್ತಿದ್ದವು. ನಾಣಿಗೆ ಏನು ಮಾಡುವುದು ಎಂದು ತಿಳಿಯದಾಯಿತು. ಆ ವರ್ಷ ನಾಣಿ ಮತ್ತೊಂದು ಬೋರ್ವೆಲ್ ತೋಡಿಸಿದ. ಖರ್ಚುಗಳು ಲಕ್ಷಗಟ್ಟಲೆ ಕೈಮೀರಿ ಹೋದವು. ಹೊಸ ಪಂಪು, ಹೊಸ ಪೈಪುಗಳು, ಇವಲ್ಲದೆ ಬೋರ್ವೆಲ್ ತೋಡಿಸಿದ ಖರ್ಚು ಬೇರೆ! ಅದಕ್ಕೆ ಬೇಕಾದ ವಿದ್ಯುತ್ ಶಕ್ತಿಯನ್ನು ಹೊಂದಿಸುವುದು, ಟ್ರಾನ್ಸ್ಫಾರ್ಮರ್ ಹಾಕಿಸುವುದು—ಇವೆಲ್ಲವೂ ಸೇರಿ ನಾಣಿಗೆ ವಿಪರೀತ ಆರ್ಥಿಕ ಹೊರೆ ಬಂದಿತು.

ಅದು ಹೇಗೋ ಆ ವರ್ಷ ನೀರಿನ ವ್ಯವಸ್ಥೆ ಆಗಿ ಹೋಯಿತು. ನಾಣಿಗೆ "ಇನ್ನು ಅಡಿಕೆ ದೊಡ್ಡದಾಗುತ್ತದೆ, ಅದರಿಂದ ಹಣ ಬಂದಾಗ ಇದೆಲ್ಲವನ್ನು ಮರೆಯಬಹುದು, ಖರ್ಚೆಲ್ಲ ಅಲ್ಲಿ ಸರಿದು ಹೋಗುತ್ತದೆ" ಎಂದು ಅನಿಸಿತು. ಮನೆಯಲ್ಲೂ ಅದನ್ನೇ ಹೇಳಿದ್ದ. ಅಡಿಕೆಯ ಬೆಲೆಯೂ ದಿನದಿಂದ ದಿನಕ್ಕೆ ಏರುತ್ತಲೇ ಇತ್ತು. ಮಂಡಿಗೆ ಅಡಿಕೆ ಹಾಕಿದವರು ಹಲವರು ಶ್ರೀಮಂತರಾಗುತ್ತಿದ್ದರು. ಹೀಗಾಗಿ "ಅಡಿಕೆ ಹಾಕಿದ್ದು ಬಹಳ ಒಳ್ಳೆಯ ಕೆಲಸ" ಎಂದು ನಾಣಿಗೆ ಅವನ ಸಂಬಂಧಿಕರೆಲ್ಲರೂ ಹೇಳಿ ಮೆಚ್ಚುಗೆ ಸೂಚಿಸಿದರು. ನಾಣಿಗೆ ತಾನು ಗೆದ್ದೆ ಎಂದು ಅನಿಸಿತು.

ಆದರೆ, ಅದಾದ ಒಂದು ವರ್ಷಕ್ಕೆ ಮರಗಳಿಗೆ ವಿಚಿತ್ರ ರೋಗ ಹಿಡಿಯಿತು. ರೋಗಕ್ಕೆ ಔಷಧಿಯನ್ನು ತಂದು, ಅದನ್ನು ಸಿಂಪಡಿಸಲು ಜನರನ್ನು ಇಟ್ಟು ನಾಣಿ ಸಾಕಷ್ಟು ದುಡ್ಡು ಖರ್ಚು ಮಾಡಿಕೊಂಡನು. ಆಗ ಅವನಿಗೆ ಔಷಧಿ ಸಪ್ಲೈ ಮಾಡಿದ ಅಂಗಡಿಯವರು ಹೇಳಿದರಂತೆ, “ಸಾರ್, ಅಡಿಕೆ ಗಿಡಕ್ಕೆ ಪೋಷಕಾಂಶಗಳು ಸಿಗದಿದ್ದರೆ ನೀವು ಹಾಕಿರುವ ಔಷಧಿ ಕೆಲಸ ಮಾಡಲ್ಲ" ಎಂದು. ಅವನು ಅದಕ್ಕೆ ಸೀಮೆಗೊಬ್ಬರ ತಂದು ಹಾಕಿದ. ನಾಣಿಯ ಅವಸ್ಥೆಗಳು ಒಂದಾ ಎರಡಾ? ಈಗ ಸೀಮೆಗೊಬ್ಬರದ ಖರ್ಚುಗಳೂ ಸೇರಿಕೊಂಡವು. ಔಷಧಿ ಹೊಡೆಯುವುದಾಗಲಿ, ಸೀಮೆಗೊಬ್ಬರ ಹಾಕುವುದಾಗಲಿ, ಕೆಲಸಗಾರರು ಸಿಗದೆ ಬಹಳ ಕಷ್ಟಪಟ್ಟು ಮಾಡಿಸಬೇಕಿತ್ತು. ಒಂದಕ್ಕೆ ಎರಡರಷ್ಟು ಖರ್ಚು ಮಾಡಬೇಕಾಯಿತು. ಏನು ಮಾಡಿದರೂ ಆ ವರ್ಷ ಎಷ್ಟೋ ಅಡಿಕೆ ಸಸಿಗಳು ಒಣಗಿ ಹೋದವು.

ಅಷ್ಟರಲ್ಲೇ ಯೂಟ್ಯೂಬ್‌ನಲ್ಲಿ “ಟ್ರೆಂಚ್ ಹೊಡೆಸಿದರೆ (Trenching) ಸಹಾಯವಾಗುತ್ತದೆ" ಎಂಬ ವಿಷಯವನ್ನು ತಿಳಿದುಕೊಂಡು, ಜೆಸಿಬಿ ತರಿಸಿ ಜಮೀನಿನಲ್ಲೆಲ್ಲಾ ಟ್ರೆಂಚ್ ಹೊಡಿಸಿಬಿಟ್ಟ. "ಈ ಬಾರಿ ಮಳೆ ಬಂದಾಗ ನೀರು ನಿಲ್ಲುತ್ತದೆ, ಟ್ರೆಂಚ್ ಹೊಡಿಸಿದರೆ ಉತ್ತಮ, ಇದನ್ನು ಮುಂಚೆಯೆ ಮಾಡಬೇಕಾಗಿತ್ತು" ಎಂದು ಅವನಿಗೆ ಅನ್ನಿಸಿತಂತೆ. ಆದರೆ ಆ ಟ್ರೆಂಚ್ ಹೊಡೆಯುವಾಗ ಅಡಿಕೆಯ ಬೇರಿಗೆ ಹೊಡೆತ ಬಿತ್ತೋ ಅಥವಾ ಆ ಕಂದಕಗಳಲ್ಲಿ ನೀರು ನಿಲ್ಲಲಿಲ್ಲವೋ ಏನೋ... ಅಡಿಕೆ ಸಸಿಗಳಂತೂ ಮತ್ತಷ್ಟು ಒಣಗಿ ಹೋಗಿಬಿಟ್ಟವು!

ಈ ಹೊತ್ತಿಗೆ ನಾಣಿಗೆ ಸಾಕೋ ಸಾಕಾಗಿ ಹೋಗಿತ್ತು. ಅಲ್ಲಿ ಬೆಂಗಳೂರಿನಲ್ಲಿ ಆಫೀಸ್ ಕೆಲಸದ ಒತ್ತಡ ಬಿಟ್ಟು ಇಷ್ಟು ದೂರ ಬರಲಾಗದು, ಇಲ್ಲಿ ಬಂದರೆ ಜಮೀನಿನ ಕೆಲಸಗಳು ಮುಗಿಯುವುದಿಲ್ಲ. ಖರ್ಚುಗಳಂತೂ ಒಂದಕ್ಕೊಂದು ಅಂಟಿಕೊಂಡಂತೆ ಎಂದಿಗೂ ಮುಗಿಯದ ಕಥೆಯಾಗಿತ್ತು. ಹೀಗಾಗಿ ನಾಣಿ ಒಂದು ಕಡಾಖಂಡಿತ ನಿರ್ಧಾರಕ್ಕೆ ಬಂದ—"ನಾನು ಈ ಜಾಗವನ್ನು ಮಾರಿಬಿಡುತ್ತೇನೆ" ಎಂದು ಹೇಳಲು ಪ್ರಾರಂಭಿಸಿದ. ನನಗೂ ಫೋನ್ ಮಾಡಿ ಕೇಳಿದ್ದ. ನಾನು, "ನೋಡು, ಇಷ್ಟು ಕಷ್ಟಪಟ್ಟು ಮಾಡಿದ ಜಾಗವನ್ನು ಮಾರಬೇಕೆ? ಅಥವಾ ಬೇರೆ ಏನಾದರೂ ಉಪಾಯವಿದೆಯೆ ಎಂದು ಆಲೋಚಿಸಿ ನೋಡು" ಎಂದು ಹೇಳಿದ್ದೆ. ಆದರೆ ಅವನ ಮನಸ್ಸು ದಿಟವಾಗಿತ್ತು, "ಇಲ್ಲ, ಮಾರುವುದೇ ಸೈ" ಎಂದುಬಿಟ್ಟ.

ಬೆಂಗಳೂರಿನಿಂದ ಗಿರಾಕಿಗಳ ದಂಡುಗಳೇ ಬಂದವು. ನಾಣಿಯ ಜಮೀನನ್ನು ನೋಡಲು ಬಂದವರೆಲ್ಲ ಅಲ್ಲಿನ ಅಡಿಕೆಯ ಬೆಳೆಯನ್ನು ನೋಡಿ ಬಹಳ ಖುಷಿ ಪಟ್ಟುಕೊಂಡರಂತೆ. ನಾಲ್ಕಾರು ತಿಂಗಳ ಕಾಲ ನಾಣಿಗೆ ವಾರಾಂತ್ಯ ಪುರುಸೊತ್ತಿಲ್ಲದಂತೆ ಜನ ಬಂದು ಹೋದರಂತೆ. ಅವರನ್ನು ಕರೆತಂದ ಬ್ರೋಕರ್‌ಗಳಂತೂ ನಾಣಿಯನ್ನು ಸಾರಾಸಗಟಾಗಿ ಹೊಗಳಲು ಆರಂಭಿಸಿದರಂತೆ. ತನ್ನ ಪ್ರಯತ್ನಗಳಲ್ಲಿ ಸೋತೆನೆಂದುಕೊಂಡಿದ್ದ ನಾಣಿಗೆ, ತಾನು ನಿಜವಾಗಲೂ ಸೋತೆನೋ ಅಥವಾ ಗೆದ್ದೆನೋ ತಿಳಿಯದೆ ಒಂದಷ್ಟು ದಿನ "ಮಾರಬೇಕೋ ಅಥವಾ ಇಟ್ಟುಕೊಳ್ಳಬೇಕೋ" ಎಂಬ ದ್ವಂದ್ವ ಕಾಡಿದ್ದೂ ಇತ್ತು! ಕೊನೆಗೊಂದು ದಿನ ಯಾರೋ ‘ಒಳ್ಳೆಯ ಪಾರ್ಟಿ’ ಬೆಂಗಳೂರಿನಿಂದ ಬಂದು, "ಅರ್ಧ ವೈಟ್, ಅರ್ಧ ಬ್ಲಾಕ್" ವ್ಯವಹಾರ ಎಂದಾಗ, ನಾಣಿ "ನಡೆಯುತ್ತದೆ" ಎಂದು ಒಪ್ಪಿಕೊಂಡೇ ಬಿಟ್ಟ. ಕೊನೆಗೆ ಜಾಗ ಮಾರಾಟ ಆಗಿಯೇ ಬಿಟ್ಟಿತು.

ನಾಣಿ ಆ ಜಮೀನಿಗಾಗಿ ಹಾಕಿದ ದುಡ್ಡಿಗೆ ಏನೂ ಮೋಸವಾಗಲಿಲ್ಲ; ಅವನು ಹಾಕಿದ್ದಕ್ಕಿಂತ ದುಪ್ಪಟ್ಟು ಹಣ ವಾಪಸ್ ಕೈ ಸೇರಿತು! ಮನೆಯಲ್ಲಿ ಎಲ್ಲರೂ ನಾಣಿಯ ಆರ್ಥಿಕ ಜಾಣ್ಮೆಯನ್ನು ಹೊಗಳಿದರು. ನಾಣಿಗೂ ಅನಿಸಿತು, "ಇಷ್ಟೆಲ್ಲಾ ತೊಂದರೆಯಾದರೂ ಸಹ ಕೊನೆಗೆ ದೊಡ್ಡ ಮೊತ್ತದ ದುಡ್ಡು ಕೈಗೆ ಬಂತಲ್ಲ, ಇಷ್ಟೊಂದು ದುಡ್ಡು ನನಗೆ ನನ್ನ ಮಾಮೂಲಿ ಕೆಲಸದಲ್ಲೇ ಸಿಗುತ್ತಿರಲಿಲ್ಲವಲ್ಲ" ಎಂದು. ದುಡ್ಡೇನೋ ಬಂತು... ಆದರೆ ಅಪ್ಪನ ರೀತಿಯ ನೆಮ್ಮದಿಯ ಜೀವನಶೈಲಿ ನಡೆಸಬೇಕೆಂಬ ಅವನ ಆಸೆಯ ಹಂಬಲ ಮಾತ್ರ ಕೊನೆಗೂ ಒಂದು ಕನಸಾಗಿಯೇ ಉಳಿಯಿತು.

ಇತ್ತೀಚೆಗೆ ನಾಣಿ ನಮ್ಮ ಮನೆಗೆ ಬಂದಿದ್ದ. ಎಷ್ಟೋ ದಿನಗಳ ನಂತರ ನಾವಿಬ್ಬರು ಮತ್ತೆ ಭೇಟಿಯಾಗಿದ್ದೆವು. ನನ್ನೊಂದಿಗೆ ಶಾಲೆಯಲ್ಲಿ ಓದಿದ್ದ ಹಲವು ಗೆಳೆಯರಂತೆ, ಇವನು ಈಗ ಇಷ್ಟು ವರ್ಷಗಳಾದ ಮೇಲೆ ಮತ್ತೆ ಮುಖತಃ ಭೇಟಿಯಾಗಿದ್ದು.

ಕುಳಿತು ಮಾತನಾಡುತ್ತಾ, "ಐಟಿ ಜೀವನ ಬಹಳ ಕಷ್ಟ ಮಾರಾಯಾ, ಕೆಲಸದ ವಿಷಯವಾಗಿ ಮನಸ್ಸು ಮತ್ತೆ ಗಿರಕಿ ಹೊಡೆಯುತ್ತಿದೆ. ಕೆಲಸ ಯಾವಾಗ ಹೋಗುತ್ತದೆ ಗೊತ್ತಿಲ್ಲ! ಹಿರಿಯೂರಿನ ಬಳಿ ಯಾವುದಾದರೂ ಜಾಗ ಇದೆಯಾ ನೋಡು, ನಾನು ಕೊಳ್ಳುತ್ತೇನೆ, ಮತ್ತೆ ಕೃಷಿ ಪ್ರಾರಂಭಿಸಬೇಕು," ಎಂದ.

ನಾನು, "ಇರು, ನನಗೊಬ್ಬ ಬ್ರೋಕರ್ ಗೊತ್ತು, ಫೋನ್ ಹಚ್ಚುತ್ತೇನೆ," ಎಂದು ತಕ್ಷಣ ನನ್ನ ಪರಿಚಯದ ಬ್ರೋಕರ್ ಒಬ್ಬರಿಗೆ ಫೋನ್ ಮಾಡಿದೆ.

ಸ್ಪೀಕರ್ ಆನ್ ಇತ್ತು. ಬ್ರೋಕರ್ ನರಸಿಂಹಮೂರ್ತಿ ಅಲ್ಲಿಂದಲೇ ಉತ್ಸಾಹದಿಂದ ಹೇಳಿದ, “ಸಾರ್, ಬ್ಯೂಟಿಫುಲ್ ಜಾಗ! ಖಾಲಿ ಲ್ಯಾಂಡ್, ಮೂರು ಇಂಚು ನೀರು ಬೀಳುತ್ತದೆ, ಒಬ್ಬರೇ ಓನರ್. ನಿಮ್ಮ ಸ್ನೇಹಿತರ ಊರಿನ ಪಕ್ಕವೇ. ಎಕರೆಗೆ ಬರೀ 45 ಲಕ್ಷ. ನೀವು ಬಂದರೆ ಈ ವಾರವೇ ಅಗ್ರಿಮೆಂಟ್ ಮಾಡಿಸಿಕೊಡುತ್ತೇನೆ, ಆದರೆ ಸ್ವಲ್ಪ ಅಡ್ವಾನ್ಸ್ ಕೊಡಬೇಕು ಅಷ್ಟೇ.”

ನಾಣಿ “45 ಲಕ್ಷ” ಎಂಬುದನ್ನು ಕೇಳಿ ಸುಸ್ತಾಗಿದ್ದ.

ಅವನಿಗೆ ನಾನು ಕೇಳಿದೆ, “ನೀನು ಮಾರಿದ್ದು ಎಷ್ಟಕ್ಕೆ?”

ಅವನು ಹೇಳಿದ, “8 ಲಕ್ಷ”.