ಪಾಂಚಾಲಿಯು ಐದು ಜನ ಪತಿಯರನ್ನು ಏಕಕಾಲದಲ್ಲಿ ವರಿಸಿದವಳು, ಕೊನೆಯವರೆಗೆ ಅವರೆಲ್ಲರಿಗೆ ಆದರ್ಶ ಪತ್ನಿಯಾಗಿ ಬದುಕಿದವಳು! ಇದು ನಮ್ಮ ಪುರಾಣದ ಪಾತ್ರಗಳಲ್ಲಿನ ಅತ್ಯಂತ ವಿಶಿಷ್ಟವಾದ ಹಾಗೂ ಸಂಕೀರ್ಣವಾದ ಪಾತ್ರಗಳಲ್ಲೊಂದು. ಒಂದು ಹೆಣ್ಣಿಗೆ ಒಂದೇ ಸಮಯದಲ್ಲಿ ಒಬ್ಬರಿಗಿಂತ ಹೆಚ್ಚು ಪತಿಯರನ್ನು ಊಹಿಸಿಕೊಳ್ಳುವುದೂ ಕಷ್ಟ ನಮ್ಮ ಸಮಾಜದಲ್ಲಿ. ಆದರೆ ಈಕೆ ಒಂದೇ ಸಮಯದಲ್ಲಿ ಐವರಿಂದ ತಾಳಿ ಕಟ್ಟಿಸಿಕೊಂಡು ಸಂಸಾರ ಸಾಗರದಲ್ಲಿ ಧುಮುಕಿದವಳು; ಈಸಿ ಗೆದ್ದವಳು! ಐವರೂ ಪತಿಯರಿಗೆ ಸಂತಾನಭಾಗ್ಯವನ್ನು ಕೊಟ್ಟವಳು! ಇಷ್ಟೆಲ್ಲಾ ಆದರೂ ಆಕೆ ಪಂಚಮಹಾಕನ್ಯೆಯರ ಪಟ್ಟಿಯಲ್ಲಿ ಸ್ಥಾನವನ್ನು ಪಡೆದಿರುವುದು ಆಕೆಯ ಪಾತ್ರಕ್ಕೆ ಸಂದ ವಿಶೇಷ ಗೌರವ ಎನ್ನಬಹುದು. ಇದು ಕೇವಲ ಪಡೆದ ಗೌರವವಲ್ಲ, ಇದು ಗಳಿಸಿದ ಗೌರವ. ಅವಳ ಪಾತ್ರದೊಳಗೆ ಹೊಕ್ಕು ನೋಡಿದರೆ ಈ ಗೌರವವು ಸೂಕ್ತವಾದದ್ದು ಎಂದು ಅನ್ನಿಸದಿರುವುದಿಲ್ಲ.

ಈಕೆಯ ಹುಟ್ಟೇ ಒಂದು ನಂಬಲಾಗದ ವಿಚಿತ್ರ ಕಥಾನಕ ಎಂದರೆ ತಪ್ಪಲ್ಲ. ಎಲ್ಲರಂತೆ ಈಕೆಯು ತಾಯಿಯ ಗರ್ಭದಿಂದ ಹುಟ್ಟಿ ಬೆಳೆದವಳಲ್ಲ. ಒಂದು ಯಜ್ಞದ ಫಲವಾಗಿ ಹುಟ್ಟಿದವಳು. ದ್ರುಪದನ ಮಗಳು ದ್ರೌಪದಿ ಎಂದು ಹೆಸರಾದಳು. ದ್ರುಪದನ ಇನ್ನೊಂದು ಹೆಸರು ಯಜ್ಞಸೇನ, ಆದ್ದರಿಂದ ಯಾಜ್ಞಸೇನಿ ಎನ್ನಿಸಿಕೊಂಡವಳು. ಈಕೆಯಂತೆ ಈಕೆಯ ಅಣ್ಣ ದೃಷ್ಟದ್ಯುಮ್ನನು ಕೂಡ ಅದೇ ಅಗ್ನಿಕುಂಡದಲ್ಲಿ ಜನಿಸಿದವನು. ಇನ್ನೂ ಒಂದು ವಿಚಿತ್ರವೆಂದರೆ ಅಗ್ನಿಕುಂಡದಲ್ಲಿ ಹುಟ್ಟಿದ್ದರೂ ಇವರು ಹಸುಗೂಸುಗಳಾಗಿ ಹುಟ್ಟಲಿಲ್ಲ, ಹದಿಹರೆಯದ ಕಿಶೋರ, ಕಿಶೋರಿಯರಾಗಿ ಹುಟ್ಟಿದವರು! ಯಾವ ಪುರಾಣ ಗ್ರಂಥಗಳಲ್ಲಿಯೂ ಇಂತಹ ಹುಟ್ಟಿನ ಪ್ರಸಂಗಗಳು ಬಂದಿರಲಿಕ್ಕಿಲ್ಲ. ಇದೊಂದು ಅಪರೂಪದಲ್ಲಿ ಅಪರೂಪವೆನಿಸಕೊಳ್ಳುವ ಜನ್ಮವೃತ್ತಾಂತ! ಇವರಿಬ್ಬರೂ ಕಾರಣಜನ್ಮರು ಕೂಡ. ತಮ್ಮ ತಂದೆಯಾದ ದ್ರುಪದನು ತನ್ನ ಆಶೋತ್ತರಗಳನ್ನು ಈಡೇರಿಸಿಕೊಳ್ಳಲು ಮಾಡಿದ ಪುತ್ರಕಾಮೇಷ್ಟಿ ಯಾಗದ ಫಲವಾಗಿ ಜನಿಸಿದವರು. ದ್ರೋಣರನ್ನು ಬಲಿ ತೆಗೆದುಕೊಳ್ಳಲು ಹುಟ್ಟಿದವನು ದೃಷ್ಟದ್ಯುಮ್ನನಾದರೆ, ಕುರುವಂಶದ ನಾಶಕ್ಕಾಗಿ ಹುಟ್ಟಿದವಳೇ ದ್ರೌಪದಿ. ಪಾಂಚಾಲರಾಜನ ಮಗಳಾಗಿ ಪಾಂಚಾಲಿ ಎನ್ನುವ ಹೆಸರನ್ನು ಕೂಡ ಪಡೆದಳು. ಯಜ್ಞಕುಂಡದಲ್ಲಿ ಜನಿಸಿದವಳಾಗಿ ಆಕೆಯ ಮೈಬಣ್ಣ ಕೃಷ್ಣವರ್ಣ, ಆದ್ದರಿಂದಲೇ ಆಕೆ ಕೃಷ್ಣೆ ಎನಿಸಿಕೊಂಡಳು. ಕೃಷ್ಣವರ್ಣದವಳಾದರೂ ಅಪ್ರತಿಮ ಚೆಲುವೆ ಆಕೆ; ಅಸಾಧಾರಣ ಸೌಂದರ್ಯವತಿ! ಆಕೆ ʻರೂಪೇಷು ಲಕ್ಷ್ಮಿʼ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ.

ಹೇಗೇ ಜನಿಸಿರಲಿ, ಆಕೆಯು ಪಟ್ಟಪಾಡು ಯಾರಿಗೂ ಬೇಡ ಎನ್ನಿಸಿಬಿಡುತ್ತದೆ ಒಮ್ಮೊಮ್ಮೆ. ಹೆಣ್ಣುಮಕ್ಕಳಿಗೆ ಮದುವೆ ಎನ್ನುವುದು ಬದುಕಿನ ಒಂದು ದೊಡ್ಡ ತಿರುವುಗಳಲ್ಲೊಂದು ಎನ್ನುವುದು ಸತ್ಯ. ಮದುವೆಯು ಆಕೆಯು ನಿಂತ ನೆಲವನ್ನೇ ಕಸಿಯಬಹುದು ಅಥವಾ ಗುಡಿಸಿಲಿನಿಂದ ಹೊತ್ತೊಯ್ದು ಅರಮನೆಯ ಸುಪ್ಪತ್ತಿಗೆಯಲ್ಲಿ ಕೂರಿಸಬಹುದು. ಅಷ್ಟು ದೊಡ್ಡ ಬದಲಾವಣೆಗಳನ್ನು ತರುವ ಶಕ್ತಿಯಿದೆ ಹೆಣ್ಣುಮಕ್ಕಳ ಮದುವೆಗೆ! ಅದಕ್ಕೇ ಇರಬಹುದು ಬಹುತೇಕ ಹೆಣ್ಣುಮಕ್ಕಳು ತನ್ನನ್ನು ಮಹಾರಾಣಿಯನ್ನಾಗಿಸಬಲ್ಲ ಯಾವುದೋ ಕನಸಿನ ರಾಜಕುಮಾರನಿಗಾಗಿ ಹಾತೊರೆಯುವುದು. ದ್ರೌಪದಿಯ ಮದುವೆಯು ಆಕೆಯನ್ನು ಅನೇಕ ಕಷ್ಟಗಳಿಗೆ, ಅಗ್ನಿಪರೀಕ್ಷೆಗಳಿಗೆ ಗುರಿಮಾಡಿತು. ಆಕೆಯ ಮದುವೆಯು ಕೂಡ ಒಂದು ಪರೀಕ್ಷೆಯ ಫಲಿತಾಂಶವೇ ಅಲ್ಲವೇ? ಅವಳ ಹುಟ್ಟಿಗೂ ಮತ್ತು ಮದುವೆಯ ಸಮಯಕ್ಕೂ ಮಧ್ಯೆ ಹೆಚ್ಚು ಕಾಲಾವಕಾಶವಿರಲಿಲ್ಲ. ವಿಧಿ ಅವಳನ್ನು ಶೀಘ್ರವೇ ಕಾರ್ಯಕ್ಷೇತ್ರಕ್ಕೆ ಇಳಿಸಿಬಿಟ್ಟಿತು. ಬಾಲ್ಯದ ಮಧುರ ಕ್ಷಣಗಳನ್ನು, ತಾಯಿಯ ಮಡಿಲಿನ ಮಮತೆಯನ್ನು ಅನುಭವಿಸಿದವಳೇ ಅಲ್ಲ ಪಾಪದ ಪಾಂಚಾಲಿ.

ಕೌರವರನ್ನು ಅಂತ್ಯಮಾಡುವಷ್ಟು ಪರಾಕ್ರಮಿಯಾಗಿರಬೇಕು ತನ್ನ ಅಳಿಯ ಎಂದು ನಿಶ್ಚಯಿಸಿದ ದ್ರುಪದನು ಅಂತಹ ವೀರನ ಶೋಧಕ್ಕಾಗಿ ಒಂದು ಕ್ಲಿಷ್ಟವಾದ ಪರೀಕ್ಷೆಯ ಮೂಲಕ ಅಳಿಯನನ್ನು ಆರಿಸಲು ನಿರ್ಧರಿಸಿದನು. ಅದೇನೆಂದರೆ, ಮೇಲೆ ಒಂದು ತಿರುಗಣೆಯ ಮೇಲೆ ಒಂದು ಮೀನನ್ನು ಕಟ್ಟಲಾಗಿರುತ್ತದೆ. ಕೆಳಗೆ ಒಂದು ಅಗಲವಾದ ಪಾತ್ರೆಯಲ್ಲಿ ಎಣ್ಣೆಯಿರುತ್ತದೆ. ಸ್ಪರ್ಧಿಸುವವರು ಕೆಳಗಿರುವ ಎಣ್ಣೆಯಲ್ಲಿ ಮೇಲೆ ತಿರುಗುತ್ತಿರುವ ಮೀನಿನ ಬಿಂಬವನ್ನು ನೋಡುತ್ತ ಬಾಣ ಪ್ರಯೋಗವನ್ನು ಮಾಡಿ ಆ ಮೀನಿಗೆ ಹೊಡೆಯಬೇಕು. ಹೀಗೆ ಮಾಡಿದವರು ದ್ರೌಪದಿಯನ್ನು ವರಿಸಬಹುದು. ಸೂತಪುತ್ರ ಕರ್ಣನು ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದನ್ನು ನಿರಾಕರಿಸಿದ ದ್ರೌಪದಿಯು, ಬ್ರಾಹ್ಮಣನ ವೇಷದಲ್ಲಿ ಬಂದಿದ್ದ ಅರ್ಜುನನು ಭಾಗವಹಿಸುವುದನ್ನು ತಡೆಯಲಿಲ್ಲ. ಕೆಳ ಕುಲದಲ್ಲಿ ಜನಿಸಿದ ರಾಜನಿಗಿಂತಲೂ ಕುಲೀನನಾದ ಬಡಬ್ರಾಹ್ಮಣನು ಮೇಲು ಎಂದು ನಿರ್ಧರಿಸಿದಂತಿದೆ ಆಕೆ. ಪೌರುಷಕ್ಕಿಂತಲೂ ಕುಲಕ್ಕೇ ಹೆಚ್ಚಿನ ಪ್ರಾಮುಖ್ಯತೆಯನ್ನು ಆಕೆಯು ನೀಡಿದ್ದೇಕೆ ಎನ್ನುವುದು ಚರ್ಚೆಯ ವಿಷಯ.

ಅರ್ಜುನನು ದ್ರುಪದ ಮಹಾರಾಜನು ಒಡ್ಡಿದ್ದ ಮತ್ಸ್ಯಯಂತ್ರದ ಸವಾಲನ್ನು ಭೇದಿಸಲು ಶಕ್ಯನಾದನು. ದ್ರೌಪದಿಯು ತಂದೆಯಿಂದ ಬೀಳ್ಕೊಂಡು ಪಾಂಡವರ ಜೊತೆ ಅವರ ಕುಟೀರಕ್ಕೆ ಹೊರಟಳು. ಈಗ ಅವಳು ಊಹಿಸಲಾರದಂತಹ ಘಟನೆಯೊಂದು ನಡೆದು ಆಕೆಯ ಜೀವನದ ದಿಕ್ಕನ್ನೇ ಬದಲಾಯಿಸುತ್ತದೆ. ದಿನವೂ ಭಿಕ್ಷಾಟನೆಯಿಂದ ತಂದುದನ್ನು ತಾಯಿಯು ತಿಳಿಸಿದಂತೆ ಹಂಚಿಕೊಳ್ಳುವ ಪರಿಪಾಠವಿರುತ್ತದೆ. ಆ ದಿನ ದ್ರೌಪದಿಯನ್ನು ಕರೆತಂದ ಅರ್ಜುನನು “ಅಮ್ಮಾ, ನಾವು ಏನು ತಂದಿದ್ದೇವೆ ನೋಡು” ಎಂದನು. ಕುಂತಿಯು ತಿರುಗಿ ನೋಡದೆಯೇ, ಅವರು ತಂದಿರುವುದು ದ್ರೌಪದಿಯನ್ನು ಎಂದು ತಿಳಿಯದೆಯೇ “ನೀವು ತಂದಿರುವುದನ್ನು ಅಣ್ಣತಮ್ಮಂದಿರು ಸಮನಾಗಿ ಹಂಚಿಕೊಳ್ಳಿ” ಎಂದಳು. ಆಗಿನ ಕಾಲದಲ್ಲಿ ನುಡಿದ ಮಾತಿಗೆ ಎಷ್ಟು ಬೆಲೆಯಿತ್ತು! ಈಗ ತಾಯಿಯು ನುಡಿದ ಮಾತನ್ನು ನೆರವೇರಿಸುವುದು ಹೇಗೆ ಎಂದು ಪಾಂಡವರಲ್ಲಿ ಗೊಂದಲವುಂಟಾಗುತ್ತದೆ. ಈ ಗೊಂದಲವನ್ನು ಪರಿಹರಿಸು ಎಂದು ಕುಂತಿಯು ಯುಧಿಷ್ಠಿರನನ್ನು ಕೇಳಿದಳು. ಈ ಸಮಸ್ಯೆಗೆ ತಾಯಿಯು ನುಡಿದ ಮಾತೇ ಪರಿಹಾರ ಎಂದು ಅವನು ನಿರ್ಧರಿಸಿದನು. ಅವನು “ದ್ರೌಪದಿಯು ನಮ್ಮೆಲ್ಲರ ಭಾರ್ಯೆಯಾಗುತ್ತಾಳೆ” ಎಂದು ನಿರ್ಧಾರದ ದನಿಯಲ್ಲಿ ಹೇಳಿದನು. ಯುಧಿಷ್ಠಿರನ ಮಾತನ್ನು ಕೇಳಿದ ದ್ರೌಪದಿಗೆ ದಿಗ್ಭ್ರಮೆಯಾಯಿತು. ತನ್ನ ಕಿವಿಯನ್ನು ತಾನೇ ನಂಬಲಾಗಲಿಲ್ಲ. ಈ ಪ್ರಪಂಚದಲ್ಲಿ ಹೀಗೂ ನಡೆಯಬಹುದೇ? ಅಥವಾ ತನ್ನ ಭಾವನು ಹಾಸ್ಯಕ್ಕೆ ಈ ರೀತಿ ಹೇಳಿರಬಹುದೇ ಎಂದು ಯೋಚಿಸತೊಡಗಿದಳು. ಕೆಲವು ಕ್ಷಣಗಳಾದಮೇಲೆ ಇದು ತಮಾಷೆಯ ಮಾತಲ್ಲ ಇದು ವಾಸ್ತವ ಎನ್ನುವ ಅರಿವಾಗುತ್ತದೆ. ಇದನ್ನು ಪ್ರತಿಭಟಿಸಬೇಕು ಎಂದುಕೊಂಡರೂ ಹಿರಿಯರು ಕಾರಣವಿಲ್ಲದೆ ಈ ರೀತಿಯ ನಿರ್ಧಾರವನ್ನು ಮಾಡುವುದಿಲ್ಲ. ಸ್ವಲ್ಪ ತಾಳ್ಮೆಯಿಂದಿದ್ದು ಮುಂದೆ ಈ ವಿಷಯವು ಯಾವರೀತಿಯ ಬೆಳವಣಿಗೆ ಹೊಂದಬಹುದು ಎಂದು ಕಾದು ನೋಡಲು ನಿಶ್ಚಯಿಸುತ್ತಾಳೆ. ಅನಂತರ ಇವರು ಸಾಮಾನ್ಯರಾದ ಬ್ರಾಹ್ಮಣರಲ್ಲ ವೀರಾಧಿವೀರರಾದ ಪಂಚಪಾಂಡವರು ಎನ್ನುವ ವಿಷಯವು ಅವಳಿಗೆ ತಿಳಿಯುತ್ತದೆ. ಆದರೂ ಐವರನ್ನು ವಿವಾಹವಾಗುವ ಯೋಚನೆಯನ್ನು ಆಕೆಗೆ ಅರಗಿಸಿಕೊಳ್ಳಲಾಗಲಿಲ್ಲ. ತನ್ನ ತಂದೆ ಮತ್ತು ಅಣ್ಣ ಇಬ್ಬರೂ ಈ ನಿರ್ಧಾರದ ಬಗ್ಗೆ ಹೇಗೆ ಪ್ರತಿಕ್ರಿಯಿಸಬಹುದು? ಇದಕ್ಕೆ ಅವರು ಸಮ್ಮತಿ ನೀಡುವರೇ? ಇದು ಆಗದು, ಕಾದು ನೋಡೋಣ ಎಂದು ನಿರ್ಧರಿಸುತ್ತಾಳೆ. ಆವಳು ಒಬ್ಬ ದೃಢಸಂಕಲ್ಪದ ಹೆಣ್ಣಾಗಿದ್ದರೂ, ಒಬ್ಬ ರಾಜಕುವರಿಯಾಗಿದ್ದರೂ, ಅವಳು ಹಿರಿಯರೆದುರು ಮಾತನಾಡದೆ ತನ್ನ ತಾಳ್ಮೆಯನ್ನು ಮೊರೆ ಹೋದಳು. “ತಾಳಿದವನು ಬಾಳಿಯಾನು” ಎನ್ನವುದು ಸುಳ್ಳಲ್ಲ.

ಈ ವಿಷಯದ ಬಗ್ಗೆ ಪಾಂಚಾಲ ರಾಜನಾದ ದ್ರುಪದನಿಗೂ ಪಾಂಡವ ಪ್ರಥಮನಾದ ಯುಧಿಷ್ಠಿರನಿಗೂ ಚರ್ಚೆಯಾಗುತ್ತದೆ. ಯುಧಿಷ್ಠಿರನು ತಮ್ಮ ತಾಯಿಯು ನುಡಿದ ವಾಕ್ಯವನ್ನು ನೆರವೇರಿಸಿದರೆ ಅದು ಅಧರ್ಮವಾಗುವುದಿಲ್ಲ, ಆದ್ದರಿಂದ ಆಕೆಯು ನುಡಿದುದನ್ನು ಪಾಲಿಸಲು ಪಂಚಪಾಂಡವರೂ ದ್ರೌಪದಿಯನ್ನು ವರಿಸುತ್ತೇವೆ ಎನ್ನುವ ಅಭಿಪ್ರಾಯವನ್ನು ಮುಂದಿಟ್ಟನು. ಆದರೆ ದ್ರುಪದನಿಗೆ ಈ ಮಾತು ರುಚಿಸಲಿಲ್ಲ. ಆತನು ಇದು ಅಧರ್ಮ, ಇದಕ್ಕೆ ಹೇಗೆ ಒಪ್ಪಲಿ ಎನ್ನುವ ಮಾತುಗಳನ್ನಾಡಿದನು. ಆಗ ಈ ಕಗ್ಗಂಟನ್ನು ಬಿಡಿಸಲು ವ್ಯಾಸರು ಅಲ್ಲಿಗೆ ಆಗಮಿಸಿದರು. ತಾವು ದ್ರುಪದನ ಬಳಿ ಪ್ರತ್ಯೇಕವಾಗಿ ಮಾತನಾಡಬೇಕು ಎಂದು ತಿಳಿಸಿ ರಾಜನನ್ನು ಬೇರೊಂದು ಕೋಣೆಗೆ ಕರೆದೊಯ್ದರು. ಅಲ್ಲಿ ವ್ಯಾಸರು ಅವರಿಗೆ ಹಿಂದೆ ಇಂದ್ರರಾಗಿದ್ದ ಐವರು ಮಹಾಪುರುಷರು ಮನುಷ್ಯ ಯೋನಿಯಲ್ಲಿ ಹುಟ್ಟುವ ಶಾಪವನ್ನು ಪಡೆದಿದ್ದರು. ಆ ಐವರು ಇಂದ್ರರೇ ಈ ಪಂಚಪಾಂಡವರು ಎಂದು ತಿಳಿಸಿ ರಾಜನಿಗೆ ದಿವ್ಯಚಕ್ಷುವನ್ನು ನೀಡಿದರು. ಆ ದಿವ್ಯಚಕ್ಷುಗಳ ಮೂಲಕ ದ್ರುಪದನು ಪಾಂಡವರ ಹಿಂದಿನ ಜನ್ಮದ ರೂಪಗಳನ್ನು ನೋಡಲು ಸಾಧ್ಯವಾಗುತ್ತದೆ. ಅನಂತರ ಅವರು ದ್ರೌಪದಿಯ ಬಗ್ಗೆ ತಿಳಿಸುತ್ತಾ, “ಹಿಂದಿನ ಜನ್ಮದಲ್ಲಿ ಆಕೆಯು ಒಬ್ಬ ಮಹಾತಪಸ್ವಿನಿಯಾಗಿದ್ದಳು. ತನ್ನ ತಪಸ್ಸಿನಿಂದ ಮಹಾದೇವನನ್ನು ಒಲಿಸಿಕೊಂಡಳು. ಶಿವನು ಪ್ರತ್ಯಕ್ಷನಾಗಿ ಏನು ವರ ಬೇಕೆಂದು ಕೇಳಿದಾಗ ಆಕೆಯು ಕೇಳುವ ಆತುರದಲ್ಲಿ “ನನಗೊಬ್ಬ ಗುಣೋಪೇತ ಪತಿಯು ಬೇಕು” ಎಂದು ಐದು ಬಾರಿ ಪುನಃ ಪುನಃ ಉಚ್ಚರಿಸುತ್ತಾಳೆ. ಆಗ ಶಿವನು “ನಿನ್ನ ಕೋರಿಕೆಯಂತೆ ಮುಂದಿನ ಜನ್ಮದಲ್ಲಿ ನಿನಗೆ ಐವರು ಪತಿಯರಿರುತ್ತಾರೆ” ಎಂದು ವರವನ್ನು ನೀಡುತ್ತಾನೆ. ಗಾಬರಿಗೊಂಡ ಆಕೆಯು ನಾನು ಕೇಳಿದ್ದು ಒಬ್ಬ ಗಂಡನನ್ನೇ ಎನ್ನುತ್ತಾಳೆ. ಆಗ ಶಿವನು ನೀನು ಐದು ಬಾರಿ ಕೇಳಿದ್ದರಿಂದ ನಿನಗೆ ಐವರು ಪತಿಯರಿರುತ್ತಾರೆ, ನನ್ನ ವರವು ಸುಳ್ಳಾಗದು ಎಂದು ಹೇಳಿ ಅಂತರ್ಧಾನನಾಗುತ್ತಾನೆ. “ರಾಜನೇ, ಆ ತಪಸ್ವಿನಿಯೇ ಈಗ ನಿನ್ನ ಮಗಳು ದ್ರೌಪದಿಯಾಗಿ ಜನಿಸಿದ್ದಾಳೆ. ಆದ್ದರಿಂದ ಐವರು ಪತಿಯರ ಈ ಮದುವೆಯು ಶಿವನ ವಾಕ್ಕಿನಂತೆ ನಡೆಯಬೇಕಿದೆ, ಇದಕ್ಕೆ ನಿನ್ನ ಒಪ್ಪಿಗೆಯನ್ನು ನೀಡು” ಎಂದು ಬುದ್ಧಿವಾದವನ್ನು ಹೇಳಿದರು. ಆಗ ದ್ರುಪದನು “ವಿಧಿಯ ಬರೆಹವು ಈ ರೀತಿ ಇದ್ದರೆ ಅದರ ವಿರುದ್ಧವಾಗಿ ನಾನೇನು ಮಾಡಬಲ್ಲೆ? ನಾನು ಇದಕ್ಕೆ ಒಪ್ಪಿದರೆ ನನಗೆ ಯಾವ ಪಾಪವೂ ತಟ್ಟುವುದಿಲ್ಲ ಎಂದು ಈಗ ತಿಳಿಯಿತು” ಎಂದು ಹೇಳಿ ಪಾಂಚಾಲಿಯು ಐದು ಜನ ಪತಿಯರ ಜೊತೆ ಪಾಣಿಗ್ರಹಣವನ್ನು ಮಾಡಲು ಒಪ್ಪಿಗೆಯನ್ನು ನೀಡಿದನು. ಈ ರೀತಿಯಾಗಿ ವ್ಯಾಸರು ದ್ರುಪದನ ಮನಸ್ಸನ್ನು ಬದಲಾಯಿಸಿ ನಡೆಯಬೇಕಿದ್ದ ಕಾರ್ಯಗಳಿಗೆ ಚಾಲನೆಯನ್ನು ನೀಡಿದರು. ತನ್ನ ಹಿಂದಿನ ಜನ್ಮದ ವೃತ್ತಾಂತವು ದ್ರೌಪದಿಗೆ ತಿಳಿಯದು. ಆದ್ದರಿಂದ ಈ ನಿರ್ಧಾರವು ದ್ರೌಪದಿಯ ಪಾಲಿಗೆ ನಂಬಲಾಗದ, ನುಂಗಲಾಗದ ತುತ್ತಾದರೂ ಗುರುಹಿರಿಯರ ನಿರ್ಧಾರಕ್ಕೆ ತಲೆಬಾಗಿದಳು, ಪಾಂಚಾಲಿ ಪಂಚವಲ್ಲಭೆಯಾದಳು. ತಾನೊಬ್ಬ ರಾಜಕುವರಿಯಾಗಿದ್ದರೂ ಗುರುಹಿರಿಯರ ಮಾತಿಗೆ ಒಲ್ಲೆಯೆನ್ನದೆ ವಿಧೇಯಳಾಗಿ ನಿಂತಳು.

ಮುಂದೆ ಪಾಂಡವರು ತಮಗೆ ದೊರೆತ ಭೂಮಿಯಲ್ಲಿ ಇಂದ್ರಪ್ರಸ್ಥವನ್ನು ರಾಜಧಾನಿಯಾಗಿಸಿಕೊಂಡು ರಾಜ್ಯಭಾರವನ್ನು ಮಾಡುತ್ತಾರೆ. ದ್ರೌಪದಿಯು ಕೇವಲ ಸೌಂದರ್ಯವತಿಯು ಮಾತ್ರವಲ್ಲ ಆಕೆ ಅತ್ಯಂತ ಚತುರೆಯೂ ಹೌದು. ಮುಂದೆ ಬರಬಹುದಾದ ಸಮಸ್ಯೆಗಳ ಬಗ್ಗೆ ಯೋಚಿಸಿ ಮೊದಲೇ ಅದಕ್ಕೆ ಪರಿಹಾರವನ್ನು ಹುಡುಕಿಕೊಂಡ ಜಾಣೆ. ಆಗಿನ ಕಾಲದಲ್ಲಿ ಇದ್ದ ಬಹುಪತ್ನಿತ್ವದ ಪರಿಪಾಠವನ್ನು ಅರಿತಿದ್ದ ಆಕೆಯು ತನ್ನ ಪತಿಯರಿಗೆ ತಾನು ಇಂದ್ರಪ್ರಸ್ಥದ ರಾಣಿಯಾಗುವ ಮುನ್ನ ಒಂದು ಷರತ್ತನ್ನು ಹಾಕಿದಳು. ಅದೇನೆಂದರೆ, ಎಂದಿಗೂ ತಾನೊಬ್ಬಳೇ ಇಂದ್ರಪ್ರಸ್ಥದ ರಾಣಿಯಾಗಿರಬೇಕು. ಒಂದು ವೇಳೆ ತನ್ನ ಪತಿಯರು ಮುಂದೆ ಯಾರನ್ನಾದರೂ ವಿವಾಹವಾದರೆ ಆ ಹೆಣ್ಣಿಗೆ ಇಂದ್ರಪ್ರಸ್ಥದ ಪ್ರವೇಶ ನಿಷಿದ್ಧವಾಗಿರಬೇಕು ಎಂದಳು. ಈ ಷರತ್ತಿಗೆ ಪತಿಯರು ಒಪ್ಪಿದಮೇಲೆ ಮಾತ್ರ ಇಂದ್ರಪ್ರಸ್ಥದ ಪಟ್ಟಮಹಿಷಿಯಾದಳು. ಇಂದ್ರಪ್ರಸ್ಥದಲ್ಲಿ ದೇವಶಿಲ್ಪಿ ಮಯನು ಪಾಂಡವರಿಗೋಸ್ಕರ ಅದ್ಭುತವಾದ ಒಂದು ಭವನವನ್ನು ನಿರ್ಮಿಸಿದನು. ಈ ಭವನದ ವೀಕ್ಷಣೆಗಾಗಿ ಬಂದ ದುರ್ಯೋಧನನು ಭವನದ ವಿಶೇಷ ಲಕ್ಷಣಗಳನ್ನು ಗಮನಿಸದೆ ಗೊಂದಲಕ್ಕೊಳಗಾಗಿ ನೀರಿನಲ್ಲಿ ಬಿದ್ದುಬಿಟ್ಟನು. ಇದನ್ನು ನೋಡಿದ ದ್ರೌಪದಿಯು ಕಿಸಕ್ಕನೆ ನಕ್ಕುಬಿಟ್ಟಳು. ಈ ನಗುವು ದ್ರೌಪದಿಯು ತನಗೆ ಮಾಡಿದ ಒಂದು ದೊಡ್ಡ ಅವಮಾನ ಎಂದು ದುರ್ಯೋಧನನು ಭಾವಿಸಿದನು. ಅದರ ಸೇಡನ್ನು ತೀರಿಸಿಕೊಳ್ಳಲು ತಾನೂ ಆಕೆಗೆ ಅವಮಾನವನ್ನು ಮಾಡಬೇಕು ಎನ್ನುವ ಯೋಚನೆ ಅವನ ಮನದಲ್ಲಿ ಅಂಕುರವಾಯಿತು. ಮುಂದೆ ಇದೇ ಯೋಚನೆ ದ್ರೌಪದಿಯ ವಸ್ತ್ರಾಪಹರಣಕ್ಕೆ ಕಾರಣವಾಗಿ ಅನಂತರ ಮಹಾಭಾರತದ ಯುದ್ಧಕ್ಕೂ ಕಾರಣವಾಗುತ್ತದೆ. ಒಂದು ಹೆಣ್ಣಿನ ನಗು ಎಂತಹ ದೊಡ್ಡ ಗಂಡಾಂತರಗಳನ್ನು ಸೃಷ್ಟಿಸಬಲ್ಲದು ಎನ್ನುವುದಕ್ಕೆ ಈ ಘಟನೆಯೇ ಒಂದು ಅದ್ಭುತ ಉದಾಹರಣೆ!

ತನಗೆ ಐವರು ಪತಿಯರಿದ್ದರೂ ಪತಿವ್ರತೆ ಎನ್ನಿಸಿಕೊಂಡ ಹೆಣ್ಣು ದ್ರೌಪದಿ. ತಮ್ಮ ಸಂಸಾರಕ್ಕೊಂದು ನಿಯಮವನ್ನು ಹಾಕಿಕೊಂಡಳು. ಆಕೆಯು ಸರದಿಯಂತೆ ಒಂದೊಂದು ವರ್ಷ ಒಬ್ಬೊಬ್ಬ ಪತಿಯ ಜೊತೆ ಇರುವುದು ಮತ್ತು ಆ ಸಮಯದಲ್ಲಿ ಆ ಪತಿಯಲ್ಲದೇ ಇತರ ನಾಲ್ವರು ಪತಿಯರು ಆಕೆಯ ಗೃಹವನ್ನು ಪ್ರವೇಶಿಸಬಾರದು ಎನ್ನುವ ಷರತ್ತನ್ನು ಹಾಕಿದಳು. ಒಂದು ವೇಳೆ ಯಾರಾದರೂ ಪ್ರವೇಶಿಸಿದವರೇ ಆದರೆ ಅಂತಹವರು ಐದು ವರ್ಷಗಳ ಕಾಲ ತೀರ್ಥಯಾತ್ರೆಗೆ ಹೋಗಬೇಕು ಎನ್ನುವ ನಿಯಮವನ್ನು ವಿಧಿಸಿದಳು. ಒಂದು ವರ್ಷ ಕಳೆದ ಮೇಲೆ ಇನ್ನೊಬ್ಬ ಪತಿಗೆ ಜೊತೆಯಾಗುವ ಮೊದಲು ಅಗ್ನಿಪ್ರವೇಶವನ್ನು ಮಾಡಿ ತನ್ನ ಕನ್ಯತ್ವವನ್ನು ಪ್ರತಿವರ್ಷ ಮರಳಿಪಡೆಯುತ್ತಿದ್ದಳು. ಎಷ್ಟಾದರೂ ಅಗ್ನಿಕುಂಡದಿಂದ ಜನಿಸಿದವಳಲ್ಲವೇ? ಅಗ್ನಿಯಿಂದ ತನ್ನ ಪವಿತ್ರತೆಯನ್ನು ಮರಳಿ ಪಡೆಯಲು ಈಕೆಗಲ್ಲದೆ ಇನ್ನಾರಿಗೆ ತಾನೆ ಸಾಧ್ಯ? ಹೀಗೆ ತನ್ನ ಪಾವಿತ್ರ‍್ಯವನ್ನು ಕಾಪಾಡಿಕೊಂಡು ತನ್ನ ಐವರು ಪತಿಯರೊಂದಿಗೆ ಸಹಧರ್ಮಿಣಿಯ ಕರ್ತವ್ಯಗಳನ್ನು ನಿಭಾಯಿಸಿದ್ದಾಳೆ!

ದುರ್ಯೋಧನನ ಸೇಡು ತೀರಿಸಿಕೊಳ್ಳುವ ಆಲೋಚನೆಯನ್ನು ಕಾರ್ಯರೂಪಕ್ಕೆ ತಂದದ್ದು ಮಾವ ಶಕುನಿಯ ಜೊತೆ ಸಂಚುಮಾಡಿ. ದ್ಯೂತದಲ್ಲಿ ಮೋಸದಿಂದ ಪಾಂಡವರನ್ನು ಸೋಲಿಸಿ, ಅವರ ಜೊತೆಗೆ ದ್ರೌಪದಿಯನ್ನೂ ತಮ್ಮಂತೆ ದಾಸ್ಯತ್ವದ ಗುಲಾಮಳನ್ನಾಗಿಸುತ್ತಾರೆ. ಈಗ ದ್ರೌಪದಿಯ ಮೇಲೆ ಸೇಡು ತೀರಿಸಿಕೊಳ್ಳುವ ಮಹದವಕಾಶ ದುರ್ಯೋಧನನಿಗೆ. ತಮ್ಮ ದುಶ್ಶಾಸನನಿಗೆ ದಾಸಿ ದ್ರೌಪದಿಯನ್ನು ದ್ಯೂತ ಸಭೆಗೆ ಎಳೆದು ತರುವಂತೆ ಆಜ್ಞಾಪಿಸುತ್ತಾನೆ. ದ್ರೌಪದಿಯು ಸುಲಭವಾಗಿ ಶರಣಾಗುವ ಹೆಣ್ಣಲ್ಲ; ವೀರ ವನಿತೆ, ಚತುರಮತಿ ಆಕೆ. ತನ್ನನ್ನು ತಾನು ರಕ್ಷಿಸಿಕೊಳ್ಳಲು ಮೊದಲಿಗೆ ದುಶ್ಶಾಸನನೊಂದಿಗೆ ಕೊಸರಾಡಿದಳು. ಆದರೆ ಅವನ ರಾಕ್ಷಸೀ ಶಕ್ತಿಯ ಎದುರು ದೈಹಿಕವಾಗಿ ಸೋತಳು. ಆದರೂ ಈ ಧೈರ್ಯಶಾಲಿ ಹೆಣ್ಣು ಧೃತಿಗೆಡದೆ ಯಾವ ರೀತಿ ಈ ಸಮಸ್ಯೆಯಿಂದ ಪಾರಾಗಬಹುದು ಎಂದು ಯೋಚಿಸತೊಡಗಿದಳು. ಸಭೆಗೆ ಎಳೆತಂದ ಅನಂತರ, ಮೊದಲಿಗೆ ತನ್ನ ಪತಿಯರನ್ನು ರೊಚ್ಚಿಗೆಬ್ಬಿಸಿ ಅವರು ತನ್ನ ಸಹಾಯಕ್ಕೆ ಬರುವಂತೆ ಚುಚ್ಚುಮಾತುಗಳನ್ನಾಡಿದಳು. ಭೀಮನೊಬ್ಬನು ಮಾತ್ರ ರೊಚ್ಚಿಗೆದ್ದು ದುಶ್ಶಾಸನನ ಎದೆಯನ್ನು ಬಗೆದು ರಕ್ತವನ್ನು ಹೀರುವ ಶಪಥ ಮಾಡಿದರೂ, ಅಣ್ಣನ ಅಪ್ಪಣೆಯನ್ನು ಧಿಕ್ಕರಿಸಿ ದ್ರೌಪದಿಯ ಸಹಾಯಕ್ಕೆ ಬರುವುದಿಲ್ಲ. ಇದನ್ನು ಗಮನಿಸಿದ ದ್ರೌಪದಿಯು ಸಭೆಯಲ್ಲಿದ್ದ ಹಿರಿಯರನ್ನು ಧರ್ಮಾಧರ್ಮಗಳ ಬಗ್ಗೆ ವಿವೇಚಿಸುವಂತೆ ಮಾಡಿ ಅವರು ಧರ್ಮವನ್ನು ಎತ್ತಿಹಿಡಿಯುವ ಸಲುವಾಗಿ ತನ್ನ ರಕ್ಷಣೆಗೆ ಬರಬಹುದು ಎಂದು ಯೋಚಿಸಿದಳು. ಇದರಲ್ಲಿಯೂ ಆಕೆಯು ಸೋತಳು. ಹಿರಿಯರಿಂದ ಆಕೆಗೆ ದೊರಕಿದ್ದು ಅನುಕಂಪವು ಮಾತ್ರ! ಅಷ್ಟರಲ್ಲಿ ದುಶ್ಶಾಸನನು ಆಕೆಯ ವಸ್ತ್ರವನ್ನು ಎಳೆಯಲು ಪ್ರಾರಂಭಿಸುತ್ತಾನೆ. ಈಗ ಗತ್ಯಂತರವಿಲ್ಲದೆ ಕೊನೆಯ ಪ್ರಯತ್ನವಾಗಿ ಆಕೆಯು ಶ್ರೀಕೃಷ್ಣನ ಮೊರೆ ಹೋಗುತ್ತಾಳೆ. ಶ್ರೀಕೃಷ್ಣನು ಅವಳಿಗೆ ವಸ್ತ್ರದಾನವನ್ನು ನೀಡಿ ಆಕೆಯ ಮಾನವನ್ನು ಕಾಪಾಡುತ್ತಾನೆ; ಆಕೆಗೆ ವಿವಸ್ತ್ರಳಾಗುವ ಅವಮಾನವು ತಪ್ಪುತ್ತದೆ. ಆಗ ಆಕೆಗೆ ಅನ್ನಿಸಿರಬಹುದು – ತನ್ನ ಪತಿಯರನ್ನು, ಗುರುಹಿರಿಯರನ್ನು ಬೇಡುವ ಮೊದಲೇ ಶ್ರೀಕೃಷ್ಣನ ಮೊರೆ ಹೋಗಿದ್ದರೆ ಆಕೆಯ ಅಸಹಾಯಕತೆಗೆ ಬೇಗನೆ ಪರಿಹಾರವು ದೊರಕುತ್ತಿತ್ತು ಎಂದು. ಆದರೆ ಶ್ರೀಕೃಷ್ಣನಿಗೊಬ್ಬನಿಗೆ ಮಾತ್ರ ಗೊತ್ತು ಸಹಾಯಕ್ಕೆ ಯಾವ ಕ್ಷಣದಲ್ಲಿ ಬರಬೇಕು ಎಂದು. ತನ್ನ ತಲೆಗೂದಲನ್ನು ಹಿಡಿದು ಎಳೆತಂದು ತನ್ನ ವಸ್ತ್ರಾಪಹರಣಕ್ಕೆ ಕೈಹಾಕಿದ ದುಶ್ಶಾಸನನ ಮೇಲೆ ಬೆಂಕಿಯಷ್ಟು ಕೋಪಗೊಂಡಿದ್ದ ಆಕೆಯು ದುಶ್ಶಾಸನನ ರಕ್ತವನ್ನು ತನ್ನ ಕೂದಲಿಗೆ ಹಚ್ಚಿಕೊಳ್ಳುವವರೆಗೂ ತನ್ನ ಕೂದಲನ್ನು ಬಾಚುವುದಿಲ್ಲ, ತುರುಬು ಕಟ್ಟುವುದಿಲ್ಲ ಎಂದು ಶಪಥವನ್ನು ಮಾಡುತ್ತಾಳೆ ವೀರ ನಾರಿ. ಇದರಿಂದ ಹೆದರಿದ, ತನ್ನ ಮಕ್ಕಳ ಅತಿಮಾನುಷ ವರ್ತನೆಯಿಂದ ನೊಂದ ಧೃತರಾಷ್ಟ್ರನು ಪರಿಸ್ಥಿತಿಯನ್ನು ತಿಳಿಯಾಗಿಸಲು ಏನು ಮಾಡಲಿ ಎಂದು ಯೋಚಿಸುತ್ತಿರುವಾಗ ಅವನಿಗೆ ಗಾಂಧಾರಿಯಿಂದಲೂ ಆಗುತ್ತಿರುವ ದೌರ್ಜನ್ಯವನ್ನು ತಡೆಯಬೇಕು ಎನ್ನುವ ಸಂದೇಶವು ಮುಟ್ಟುತ್ತದೆ. ಆಗ ಅವನು ದ್ರೌಪದಿಗೆ ಪರಿಹಾರಾರ್ಥವಾಗಿ ಒಂದು ವರವನ್ನು ಕೇಳುವಂತೆ ಹೇಳಿದನು. ಆಗ ಆಕೆಯು ತನ್ನ ಗಂಡಂದಿರನ್ನು ದಾಸ್ಯದಿಂದ ಬಿಡುಗಡೆ ಮಾಡುವಂತೆ ಕೇಳಿ ತನ್ನ ಗಂಡಂದಿರನ್ನು ದಾಸ್ಯದಿಂದ ವಿಮುಕ್ತಿಗೊಳಿಸಿದಳು. ಧರ್ಮರಾಯನು ತಪ್ಪು ಮಾಡಿದ್ದಾನೆ ಎಂದು ಆಕೆಗೆ ಗೊತ್ತು. ಆದರೂ ಅವನ ತಪ್ಪನ್ನು ಕ್ಷಮಿಸಿ ಅವನನ್ನು ದಾಸ್ಯದಿಂದ ವಿಮುಕ್ತಿಗೊಳಿಸಿದಳು. ಎಷ್ಟಾದರೂ ಹೆಣ್ಣಿಗೆ ಸಹಜವಾದ ʻಕ್ಷಮಯಾ ಧರಿತ್ರಿʼ ಗುಣವು ಅವಳಿಗಿತ್ತಲ್ಲವೇ?

        ಮುಂದೆ ವನವಾಸದ ಪಾಲಾದರು ಪಾಂಡವರು. ಅವರ ಸಹಧರ್ಮಿಣಿಯಾಗಿ ದ್ರೌಪದಿಯು ಅವರ ಜೊತೆ ವನವಾಸಕ್ಕೆ ತೆರಳಿ ತನ್ನ ಐವರೂ ಪತಿಯರ ಸೇವೆ ಮಾಡುತ್ತ ಅವರ ಊಟೋಪಚಾರಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಂಡಳು. ಈ ಕಾರ್ಯದಲ್ಲಿ ನೆರವಾಗಲು ಅವಳಿಗೆ ಧರ್ಮರಾಯನು ಸೂರ್ಯದೇವರನ್ನು ಪ್ರಾರ್ಥಿಸಿ ಅಕ್ಷಯಪಾತ್ರೆಯನ್ನು ಪಡೆದು ದ್ರೌಪದಿಗೆ ನೀಡಿದನು. ಈ ಪಾತ್ರೆಯು ದಿನಕ್ಕೆ ಒಂದು ಬಾರಿ ಬೇಡಿದಷ್ಟು ಆಹಾರವನ್ನು ನೀಡುವ ಕಾಮಧೇನು! ಇದರಿಂದ ಅವಳು ತನ್ನ ಕುಟುಂಬಕ್ಕೆ ಸರಿಯಾದ ರೀತಿಯಲ್ಲಿ ಊಟೋಪಚಾರಗಳನ್ನು ಮಾಡಲು ಸಾಧ್ಯವಾಗುತ್ತದೆ; ʻಭೋಜ್ಯೇಷು ಮಾತಾʼ ಎನ್ನುವಂತೆ ತನ್ನ ಗಂಡಂದಿರ ಪೋಷಣೆಯನ್ನು ಮಾಡಿದಳು. ವನವಾಸದಲ್ಲಿ ಕಾಲ ಕಳೆಯುತ್ತಿರುವಾಗ ಭೀಮನು ಕೌರವರು ತಮಗೆ ಮಾಡಿದ ಮೋಸದ ಬಗ್ಗೆ ಚಿಂತಿಸುತ್ತಿರುತ್ತಾನೆ. ದ್ವೇಷದ ಬೆಂಕಿ ಅವನೆದೆಯಲ್ಲಿ ಉರಿಯುತ್ತಿರುತ್ತದೆ. ಆದರೆ ಅಣ್ಣ ತಮ್ಮಂದಿರು ಅದರ ಯೋಚನೆಯಿಲ್ಲದೆ ನೆಮ್ಮದಿಯಿಂದ ಕಾಲ ಕಳೆಯುತ್ತಿರುವುದನ್ನು ನೋಡಿ ಅವನಿಗೆ ಸಿಟ್ಟು ಬರುತ್ತದೆ. ಈ ವಿಷಯವನ್ನು ಅಣ್ಣನಲ್ಲಿ ಪ್ರಸ್ತಾಪಮಾಡುವಷ್ಟು ಧೈರ್ಯ ಅವನಿಗಿರುವುದಿಲ್ಲ. ಯೋಚಿಸಿದಾಗ ಈ ಸಂಗತಿಯನ್ನು ಜಾಣ್ಮೆಯಿಂದ ಧರ್ಮರಾಯನಲ್ಲಿ ಪ್ರಸ್ತಾಪಮಾಡಲು ದ್ರೌಪದಿಯೇ ಸರಿಯಾದ ವ್ಯಕ್ತಿ ಎಂದು ಭಾವಿಸಿದನು. ಇದು ಭೀಮನಿಗೆ ದ್ರೌಪದಿಯ ಜಾಣ್ಮೆಯ ಬಗ್ಗೆ ಇದ್ದ ನಂಬಿಕೆ ಮಾತ್ರವಲ್ಲ, ಅದು ಸತ್ಯವು ಕೂಡ. ದ್ರೌಪದಿಗೆ ತನ್ನ ಮನದ ತುಮುಲವನ್ನು ತಿಳಿಸಿದನು. ದ್ರೌಪದಿಗೆ ಕೂಡ ಭೀಮನ ಆಲೋಚನೆಯು ಸರಿ ಅನ್ನಿಸಿತು. ಸಮಯವನ್ನು ನೋಡಿ ಧರ್ಮರಾಯನಲ್ಲಿ ನಮಗೆ ಇಷ್ಟೆಲ್ಲ ತೊಂದರೆಗಳನ್ನು ಕೊಟ್ಟ ದುರ್ಯೋಧನನಿಗೆ ಯಾವ ರೀತಿಯ ದಂಡನೆ ನೀಡಬೇಕೆಂದು ಆಲೋಚಿಸಿರುವೆಯಾ ಎಂದು ಕೇಳಿದಳು. ಸಾತ್ವಿಕತೆಗೆ ಒಗ್ಗಿಹೋಗಿದ್ದ ಯುಧಿಷ್ಠಿರನು ತಪ್ಪು ಮಾಡಿದವರನ್ನು ಕ್ಷಮಿಸುವುದೇ ದೊಡ್ಡಗುಣ, ಈಗ ದಂಡಿಸಿ ಲಾಭವೇನು ಎನ್ನುವ ರೀತಿಯಲ್ಲಿ ಉತ್ತರಿಸಿದನು. ಒಬ್ಬ ರಾಜನಾದ ತನ್ನ ಪತಿಯು ತಪ್ಪು ಮಾಡಿದವರನ್ನು ದಂಡಿಸದೆ ರಾಜಧರ್ಮವನ್ನು ಮರೆಯುತ್ತಿದ್ದಾನೆ ಎಂದು ಅವಳಿಗೆ ವೇದ್ಯವಾಯಿತು. ಗಂಡನು ತಪ್ಪು ಹೆಜ್ಜೆ ಇಟ್ಟಾಗ ತಿದ್ದುವುದು ಪತಿವ್ರತೆಯ ಪರಮಧರ್ಮ. ಅದಕ್ಕೇ ಅವಳನ್ನು ʻಕರಣೇಷು ಮಂತ್ರಿʼ ಎನ್ನುವುದು. ಆಗ ದ್ರೌಪದಿಯು ಅವನಿಗೆ ಈ ರೀತಿ ಬುದ್ಧಿ ಹೇಳಿದಳು – “ನೀನು ಒಬ್ಬ ರಾಜ ಎನ್ನುವುದನ್ನು ಮರೆಯಬೇಡ. ತಪ್ಪು ಮಾಡಿದವರಿಗೆ ಶಿಕ್ಷೆ ಕೊಡುವುದು ರಾಜಧರ್ಮ. ಪದೇ ಪದೇ ತಪ್ಪು ಮಾಡುವವರನ್ನು ಕ್ಷಮಿಸುತ್ತಾ ಹೋದರೆ ತಪ್ಪು ಮಾಡುವವರು ನಿರ್ಭಯವಾಗಿ ಹೆಚ್ಚು ಹೆಚ್ಚು ತಪ್ಪುಗಳನ್ನು ಮಾಡುತ್ತಾರೆ. ಇದರಿಂದ ಶಾಂತಿ, ಸುವ್ಯವಸ್ಥೆಗಳು ಹಾಳಾಗಿ ಪ್ರಜೆಗಳು ಸಂಕಟಕ್ಕೀಡಾಗುತ್ತಾರೆ. ಆದ್ದರಿಂದ ಒಬ್ಬ ರಾಜನ ರೀತಿ ಯೋಚಿಸು. ನೀನು ಹಾಗೆ ಮಾಡದಿದ್ದರೆ ದುರ್ಯೋಧನನ್ನು ಶಿಕ್ಷಿಸಲು ನನ್ನ ವೀರ ಅಣ್ಣನ ಸಹಾಯವನ್ನು ಪಡೆಯುತ್ತೇನೆ. ನನ್ನ ತಂದೆ ವೃದ್ಧನಾದರೂ ನನಗಾಗಿ ಕತ್ತಿ ಹಿಡಿಯಬಲ್ಲ” ಎಂದು ಘರ್ಜಿಸಿದಳು. ಆಗ ಯುಧಿಷ್ಠಿರನಿಗೆ ತನ್ನ ಆಲೋಚನೆ ತಪ್ಪು ಎಂದು ತಿಳಿಯುತ್ತದೆ. ಅವನು ವನವಾಸ ಮತ್ತು ಅಜ್ಞಾತವಾಸಗಳು ಮುಗಿದಮೇಲೆ ರಾಜ್ಯವನ್ನು ಪಡೆಯುವ ಬಗ್ಗೆ ಯೋಚಿಸತೊಡಗುತ್ತಾನೆ.

       ಹೀಗೆ ವನವಾಸದಲ್ಲಿರುವಾಗ ಒಮ್ಮೆ ಶ್ರೀಕೃಷ್ಣನು ಸತ್ಯಭಾಮೆಯೊಂದಿಗೆ ಪಾಂಡವರನ್ನು ನೋಡಿ ಹೋಗಲು ಬರುತ್ತಾನೆ. ಅವನು ಪಾಂಡವರೊಡನೆ ಮಾತಿನಲ್ಲಿದ್ದಾಗ ಸತ್ಯಭಾಮೆ ಮತ್ತು ದ್ರೌಪದಿಯರು ಎಲ್ಲ ಹೆಣ್ಣುಮಕ್ಕಳಂತೆ ತಮ್ಮ ತಮ್ಮ ಗಂಡಂದಿರ ಬಗ್ಗೆ ಮಾತನಾಡತೊಡಗುತ್ತಾರೆ. ಸತ್ಯಭಾಮೆಯು “ದ್ರೌಪದಿ, ನಾನು ಒಬ್ಬ ಗಂಡನನ್ನು ಮೆಚ್ಚಿಸುವುದಕ್ಕೇ ಹೆಣಗಾಡುತ್ತಿರುತ್ತೇನೆ. ಆದರೆ ನೀನು ಐದು ಜನ ಗಂಡಂದಿರನ್ನು ಯಾವ ಕೊರತೆಯೂ ಇಲ್ಲದೆ ಹೇಗೆ ನೋಡಿಕೊಳ್ಳುತ್ತಿದ್ದೀಯ? ಯಾವುದಾದರೂ ಮಂತ್ರ, ತಂತ್ರಗಳನ್ನು ಬಲ್ಲೆಯಾ?” ಎಂದು ವಿನೋದದಿಂದ ಕೇಳಿದಳು. ಆಗ ದ್ರೌಪದಿಯು “ಪತಿಯರನ್ನು ಕೇವಲ ನಮ್ಮ ಸೌಂದರ್ಯದಿಂದ ಅಥವಾ ನಮ್ಮ ಅಡುಗೆಯಿಂದ ತೃಪ್ತಿಪಡಿಸಲಾಗುವುದಿಲ್ಲ. ಅವೂ ಇರಬೇಕು, ಜೊತೆಗೆ ನಾವು ಅವರ ಮನಸ್ಸನ್ನು ಅರಿಯುವ ಪ್ರಯತ್ನವನ್ನು ಮಾಡಬೇಕು. ಅವರು ಯಾವ ಸಂದರ್ಭದಲ್ಲಿ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂದು ಅರ್ಥಮಾಡಿಕೊಳ್ಳಬೇಕು. ಅದಕ್ಕೆ ತಕ್ಕಂತೆ ನಡೆದುಕೊಂಡರೆ ಯಾವ ಘರ್ಷಣೆಯೂ ಇರುವುದಿಲ್ಲ. ಇದೇನೂ ಬಹಳ ಕಷ್ಟದ ವಿಚಾರವಲ್ಲ, ತಾಳ್ಮೆಯಿಂದ ನಡೆಯಬೇಕು ಅಷ್ಟೇ” ಎಂದು ಹೇಳಿ ತನ್ನ ಸುಖಸಂಸಾರದ ಗುಟ್ಟನ್ನು ಸತ್ಯಭಾಮೆಯ ಮುಂದೆ ಬಿಚ್ಚಿಟ್ಟಳು. ಇದರಿಂದ ನಾವು ದ್ರೌಪದಿಯು ಎಷ್ಟು ಸೂಕ್ಷ್ಮಮತಿ ಹಾಗೂ ತನ್ನ ಐವರು ಪತಿಯರೊಡನೆ ಸಮರಸದಿಂದ ಬಾಳುವ ಕಲೆಯನ್ನು ತನ್ನ ಜಾಣತನದಿಂದ ಹೇಗೆ ರೂಢಿಸಿಕೊಂಡಿದ್ದಳು ಎಂದು ತಿಳಿಯಬಹುದು.

       ಹನ್ನೆರಡು ವರ್ಷಗಳ ವನವಾಸವು ಮುಗಿದಮೇಲೆ ವಿರಾಟನಗರದಲ್ಲಿ ಅಜ್ಞಾತವಾಸದ ಸಮಯದಲ್ಲಿ ದ್ರೌಪದಿಯು ಸೈರಂಧ್ರಿಯಾದಳು; ರಾಣಿ ಸುದೇಷ್ಣೆಯ ಸಹಾಯಕಳಾದಳು. ಸೈರಂಧ್ರಿ ಎಂದರೆ ರಾಜಪರಿವಾರದ ಸೇವಕಿ ಎಂದರ್ಥ. ತನ್ನ ಪರಿವಾರಕ್ಕೋಸ್ಕರ ಒಬ್ಬ ಸೇವಕಿಯಾಗಿ ಬದಲಾಗುತ್ತಾಳೆ ದ್ರೌಪದಿ. ಅಲ್ಲಿ ಆಕೆಯ ಪೂರ್ವಾಪರಗಳ ಬಗ್ಗೆ ರಾಣಿಯು ವಿಚಾರಿಸಿದಾಗ ದ್ರೌಪದಿಯು ತನಗೆ ಐವರು ಗಂಧರ್ವ ಪತಿಯರಿರುವುದಾಗಿಯೂ, ಒಂದು ತಿಳಿಸಲಾಗದ ಕಾರಣದಿಂದ ಆಕೆಯ ಪತಿಯರಿಂದ ದೂರವಿರುವುದಾಗಿ ತಿಳಿಸಿ ನಂಬಿಸುತ್ತಾಳೆ. ಆದರೆ ವಿಧಿಯು ಅಲ್ಲಿಯೂ ಆಕೆಯನ್ನು ಒಂದು ಸಂದಿಗ್ಧಕ್ಕೆ ತಳ್ಳಿತು. ಅಪ್ರತಿಮ ಲಾವಣ್ಯಮಯಿಯಾಗಿದ್ದ ಈಕೆಯ ಮೇಲೆ ರಾಣಿ ಸುದೇಷ್ಣೆಯ ತಮ್ಮನಾದ ಕಾಮುಕ ಕೀಚಕನ ಕಣ್ಣು ಬಿದ್ದಿತು. ಅವನ ಕಾಟವು ಹೆಚ್ಚಾದಾಗ, ತನ್ನ ಗಂಧರ್ವ ಪತಿಯರ ಬಗ್ಗೆ ತಿಳಿಸಿ ಹೆದರಿಸಿದಳು. ಆದರೆ ಅದಕ್ಕೆ ಅವನು ಬಗ್ಗಲಿಲ್ಲ. ಕೊನೆಗೆ ಅವನು ತನ್ನ ಅಕ್ಕನನ್ನು ಪುಸಲಾಯಿಸಿ ಆಕೆಯಿಂದಲೇ ತನ್ನನ್ನು ಸ್ವೀಕರಿಸುವಂತೆ ದ್ರೌಪದಿಗೆ ಹೇಳಿಸಿದನು. ಈಗ ವಿಷಯವು ಮಿತಿಮೀರಿದೆ ಎಂದು ದ್ರೌಪದಿಗೆ ಅರಿವಾಯಿತು. ಈ ಮುಳ್ಳನ್ನು ಕೀಳದೆ ಬೇರೆ ದಾರಿಯಿಲ್ಲ ಎಂದು ನಿರ್ಧರಿಸಿ, ರಹಸ್ಯವಾಗಿ ಬಲಭೀಮನನ್ನು ಸಂಧಿಸಿ ಅವನಿಗೆ ವಿಷಯವನ್ನು ತಿಳಿಸಿದಳು. ಭೀಮನೇ ಈ ಸಮಸ್ಯೆಗೆ ತಕ್ಕ ಪರಿಹಾರವನ್ನು ಕೊಡಬಲ್ಲ ಎನ್ನುವುದನ್ನು ಅವಳ ತಾರ್ಕಿಕ ಬುದ್ಧಿಯು ಅವಳಿಗೆ ಹೇಳುತ್ತಿತ್ತು. ಅದರಂತೆ ಭೀಮನಿಂದ ಕೀಚಕನ ವಧೆಯಾಯಿತು. ರಾಣಿಗೆ ಇವಳ ಮೇಲೆ ಅನುಮಾನವುಂಟಾಗಿ ಕರೆದು ವಿಚಾರಿಸಿದಳು. ಆಗ ದ್ರೌಪದಿಯು ಕೀಚಕನು ತನ್ನ ಹಿಂದೆ ಬಿದ್ದಿರುವ ವಿಷಯ ತಿಳಿದ ತನ್ನ ಗಂಧರ್ವ ಪತಿಯರು ಆತನನ್ನು ಸಂಹರಿಸಿದ್ದಾರೆ ಎಂದು ಹೇಳಿ ನಂಬಿಸಿದಳು. ಹಾಗೆ ನಂಬಿಸದಿದ್ದಲ್ಲಿ ಪಾಂಡವರ ರಹಸ್ಯವು ಹೊರಗೆ ಬಂದು ಮತ್ತೆ ವನವಾಸ ಮತ್ತು ಅಜ್ಞಾತವಾಸಗಳ ಜಾಲಕ್ಕೆ ಬೀಳಬೇಕಿರುತ್ತದೆ. ಆದ್ದರಿಂದ ವಿಷಯವನ್ನು ನಾಜೂಕಾಗಿ, ಜಾಣತನದಿಂದ ನಿಭಾಯಿಸಿ ಗಂಡಂದಿರಿಗೆ ಬರಬಹುದಾದ ತೊಂದರೆಯನ್ನು ನಿವಾರಿಸಿದಳು. ಕೀಚಕನ ಸಾವಿಗೆ ಸೈರಂಧ್ರಿಯೇ ಕಾರಣ ಎಂದು ಅರಿತ ನೂರು ಜನ ಉಪಕೀಚಕರು ಆಕೆಯನ್ನು ಅಪಹರಿಸಿ ಒಯ್ಯುತ್ತಿರುತ್ತಾರೆ. ಇದನ್ನು ಅರಿತ ಭೀಮನು ಅವರನ್ನು ಅಡ್ಡಗಟ್ಟಿ ಆ ನೂರೂ ಜನರ ವಧೆ ಮಾಡುತ್ತಾನೆ. ಉಪಕೀಚಕರ ಸಾವಿನ ಸುದ್ದಿ ಎಲ್ಲರಿಗೂ ತಿಳಿದಾಗ, ಈ ಕೆಲಸವು ಮನುಷ್ಯ ಮಾತ್ರರಿಗೆ ಅಸಾಧ್ಯ, ಆದ್ದರಿಂದ ಸೈರಂಧ್ರಿಯ ಗಂಧರ್ವ ಪತಿಯರೇ ಈ ಕೆಲಸ ಮಾಡಿದ್ದಾರೆ ಎಂದು ಎಲ್ಲರೂ ನಂಬುವಂತಾಗುತ್ತದೆ.

       ಮುಂದೆ ಕುರುಕ್ಷೇತ್ರದ ಯುದ್ಧದಲ್ಲಿ ಭೀಮನು ದುಶ್ಶಾಸನನ ಎದೆಯನ್ನು ಬಗೆದು ಅವನೆದೆಯ ರಕ್ತವನ್ನು ತಂದು ದ್ರೌಪದಿಯ ತಲೆಗೆ ಹಚ್ಚುತ್ತಾನೆ. ಹೀಗೆ ಆಕೆಯ ಪ್ರತಿಜ್ಞೆಯು ಪೂರ್ತಿಯಾಗುತ್ತದೆ. ಆದರೆ ಈ ನೆಮ್ಮದಿ ಬಹಳ ಕಾಲ ಉಳಿಯುವುದಿಲ್ಲ. ಅಶ್ವತ್ಥಾಮನು ನಿದ್ರಿಸುತ್ತಿರುವ ಆಕೆಯ ಮಕ್ಕಳಾದ ಐವರು ಉಪಪಾಂಡವರನ್ನು ಕೊಂದುಬಿಡುತ್ತಾನೆ. ತನ್ನ ಕರುಳಿಗೆ ಬೆಂಕಿಯಿಟ್ಟಂತಾಗುತ್ತದೆ ದ್ರೌಪದಿಗೆ. ಒಂದೇ ಸಮಯದಲ್ಲಿ ಐದು ಜನ ಮಕ್ಕಳ ಸಾವನ್ನು ನೋಡಿದ ಕ್ಷೋಭೆಯು ಆಕೆಯದಾಗುತ್ತದೆ. ಮಕ್ಕಳ ಅಗಲಿಕೆಯ ಯಮಯಾತನೆಯಂತಹ ನೋವನ್ನು ಅನುಭವಿಸುತ್ತಾಳೆ. ಬಹಳ ವರ್ಷಗಳ ಕಾಲ ಈ ನೋವು ಆಕೆಯನ್ನು ಕಾಡುತ್ತಿರುತ್ತದೆ.

ತಂದೆಯ ಬಯಕೆಯಂತೆ ಕೌರವರ ನಾಶಕ್ಕೆ ಆಕೆಯು ಕಾರಣಳಾದರೂ ಆ ಬಯಕೆಯನ್ನು ತೀರಿಸುವ ಬದುಕಿನ ಪಯಣದಲ್ಲಿ ಆಕೆಯು ಅನುಭವಿಸಿದ ನೋವುಗಳು ಎಂತಹವರ ಹೃದಯವನ್ನೂ ಕಲುಕದೆ ಇರುವುದಿಲ್ಲ. ಆದರೆ ಪ್ರತಿಯೊಂದು ಕಠಿಣ ಪರಿಸ್ಥಿತಿಯಲ್ಲೂ ಆಕೆಯು ತನ್ನ ಧೈರ್ಯ, ಚಾಣಾಕ್ಷತನ, ಸಹನೆಗಳಿಂದ ಪರಿಸ್ಥಿತಿಗಳನ್ನು ಎದುರಿಸಿ ಗೆಲ್ಲುತ್ತಾಳೆ. ಜೀವನದಲ್ಲಿ ಎದುರಾಗುವ ಕಷ್ಟಕರ ಪರಿಸ್ಥಿತಿಗಳನ್ನು ಎದುರಿಸಿ ಗೆಲ್ಲಬೇಕೆಂಬ ಆಕೆಯ ಸಂಕಲ್ಪವು ಬಹಳ ದೃಢವಾದದ್ದು! ಮಹಾಭಾರತದ ಈ ನಾಯಕಿಯ ಪಾತ್ರವು ಅತ್ಯಂತ ವಿವಾದಾತ್ಮಕ ಮತ್ತು ಅತಿ ಹೆಚ್ಚು ಚರ್ಚೆಗೆ ಒಳಗಾದ ಪಾತ್ರ. ಐದು ಜನ ಪತಿಯರಿಲ್ಲದಿದ್ದರೂ ಈ ರೀತಿಯ ಕಷ್ಟಗಳಿಗೆ ಒಳಗಾಗಿ ಗೆದ್ದು ಬಂದಿರುವ ಅನೇಕ ಅನಾಮಿಕ ಮಹಿಳೆಯರಿದ್ದಾರೆ ಈ ಜಗದಲ್ಲಿ.  ಅಂತಹವರ ಹೋರಾಟದ ಮನೋಭಾವ ಮತ್ತು ಧೈರ್ಯಗಳಿಗೆ ನಾವು ಕೈಮುಗಿಯಲೇಬೇಕು.

(ಈ ವ್ಯಕ್ತಿಚಿತ್ರವನ್ನು ಎಸ್.‌ ಕೃಷ್ಣಮೂರ್ತಿಯವರ (ಕೃಷ್ಣಕವಿ) ʼಪುರಾಣಪ್ರಸಿದ್ಧ ಪಾತ್ರಗಳುʼ ಎನ್ನುವ ಕೃತಿಯಿಂದ ಆಯ್ದುಕೊಳ್ಳಲಾಗಿದೆ)