ದಕ್ಷಿಣ ಅಮೇರಿಕಾದ ಪೆರು ದೇಶದ ದಕ್ಷಿಣ ತೀರದ ಮರುಭೂಮಿಯ ಮೇಲೆ ವಿಮಾನದಲ್ಲಿ ಸಾಗುವಾಗ, ಹತ್ತಾರು ಬೃಹತ್ ರೇಖಾಚಿತ್ರಗಳು ಕಾಣಿಸುತ್ತವೆ. (ಫೋಟೋ 1 - ಕೋತಿಯ ರೇಖಾಚಿತ್ರ ನೋಡಿ.) ನೆಲದಲ್ಲಿ ನೂರಾರು ಅಡಿಗಳ ವ್ಯಾಪ್ತಿಯ ಈ ರೇಖಾಚಿತ್ರಗಳನ್ನು ರಚಿಸಿದ್ದು ಹೇಗೆ? ಎಂಬ ಪ್ರಶ್ನೆಯಿಂದಾಗಿ ಅವುಗಳ ಬಗ್ಗೆ ನಿಗೂಢತೆ ಕವಿದಿತ್ತು.

ಅಲ್ಲಿನ ಮೂಲನಿವಾಸಿಗಳಾದ ನಜ್ಕಾ ಜನರು ಇವನ್ನು ರಚಿಸಿದ್ದು ಸುಮಾರು 2,000 ವರುಷಗಳ ಮುಂಚೆ. ಝೇಂಕಾರ ಹಕ್ಕಿ, ಭಾರೀ ಗಾತ್ರದ ವೇಲ್, ಗಗನಯಾನಿ ಇತ್ಯಾದಿ ಚಿತ್ರಗಳು ಅಲ್ಲಿವೆ. ಅವರು ಇವನ್ನು ದೇವರಿಗೆ ಸಮರ್ಪಿಸಿರಬಹುದು ಎಂಬುದೊಂದು ಊಹೆ. ಆದರೆ, ಅವರು ಯಾವ ಕಾರಣಕ್ಕಾಗಿ ಇವನ್ನು ರಚಿಸಿದರು ಎಂಬುದು ಚರಿತ್ರಕಾರಿಗೆ ಬಿಡಿಸಲಾಗದ ಒಗಟಾಗಿ ಉಳಿದಿದೆ.

ಅದೇನಿದ್ದರೂ ಈ ರೇಖಾಚಿತ್ರಗಳನ್ನು ಹೇಗೆ ಬಿಡಿಸಿದರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಇದರಿಂದಾಗಿ, ಇವನ್ನು ಅನ್ಯ ಗ್ರಹಗಳ ಜೀವಿಗಳು ಚಿತ್ರಿಸಿದರು ಎಂಬಂತಹ ಊಹಾಪೂಹಗಳಿಗೆ ತೆರೆ ಬಿದ್ದಿದೆ. ಮೊದಲ ಹಂತದಲ್ಲಿ ಚಿತ್ರಕಾರರು ಈ ವಿನ್ಯಾಸಗಳನ್ನು ಕ್ಯಾನ್‌ವಾಸಿನಲ್ಲಿ ಪುಟ್ಟದಾಗಿ ಚಿತ್ರಿಸಿದರು. ಅನಂತರ, ಅವನ್ನೇ ಹೆಚ್ಚಿನ ಅನುಪಾತದಲ್ಲಿ ನೆಲದಲ್ಲಿ ಗುರುತಿಸಿದರು - ಈಗ ವಿನ್ಯಾಸಗಾರರು ನೀಲನಕ್ಷೆಗಳ ಆಧಾರದಿಂದ ಬೃಹತ್ ಕಟ್ಟಡಗಳನ್ನು ನಿರ್ಮಿಸುವಂತೆ. ನೆಲದಲ್ಲಿ ಉದ್ದುದ್ದ ಸರಳರೇಖೆಗಳನ್ನು ಗುರುತಿಸಲು ಅವರು ಕೋಲುಗಳು ಮತ್ತು ಹಗ್ಗಗಳನ್ನು ಬಳಸಿದರು.

ಎರಡನೆಯ ಹಂತದಲ್ಲಿ, ನೆಲದಲ್ಲಿ ಮೂಡಿಸಿದ ಗುರುತುಗಳ ಆಧಾರದಿಂದ ಅವರು ರೇಖಾಚಿತ್ರಗಳನ್ನು ನಿರ್ಮಿಸಿದರು. ಎರಡು ಗೂಟಗಳ ನಡುವೆ ಹಗ್ಗ ಕಟ್ಟಿ, ಅದಕ್ಕೆ ಸರಿಯಾಗಿ ನೆಲದಲ್ಲಿದ್ದ ಕಪ್ಪುಕಲ್ಲುಗಳನ್ನು ತೆಗೆದು, ಅದರ ಕೆಳಗಿದ್ದ ತೆಳುಬಣ್ಣದ ಮಣ್ಣು ಕಾಣುವಂತೆ ಮಾಡಿದರು. ಅವರು ಸುರುಳಿ ಆಕೃತಿ ರಚಿಸಿದ ವಿಧಾನ: ಕೇಂದ್ರದಲ್ಲಿ ಗೂಟ ಬಡಿದು, ಅದಕ್ಕೆ ಹಗ್ಗ ಕಟ್ಟಿ, ಗೂಟದ ಸುತ್ತಲೂ ನಡೆಯುವುದು.

ಅವರು ಇಷ್ಟೇ ಮಾಡಿದ್ದರೆ, ಆ ರೇಖಾಚಿತ್ರಗಳು ಸಾವಿರಾರು ವರುಷ ಉಳಿಯುತ್ತಿರಲಿಲ್ಲ. ಗಾಳಿ ಮತ್ತು ಮಳೆಯ ಹೊಡೆತದಿಂದಾಗಿ ಅವು ಅಳಿದು ಹೋಗಿ, ಮರುಭೂಮಿ ಪುನಃ ಕೆಂಗಂದು ಬಣ್ಣಕ್ಕೆ ತಿರುಗುತ್ತದೆಂದು ಅವರಿಗೂ ತಿಳಿದಿತ್ತು. ಆದ್ದರಿಂದ, ಅವರು ತಾವು ರಚಿಸಿದ ರೇಖೆಗಳ ಅಂಚಿನಲ್ಲಿ ಮಧ್ಯಮ ಗಾತ್ರದ ಕಲ್ಲುಗಳನ್ನು ಸಾಲಾಗಿ ಜೋಡಿಸಿದರು. ಭಾರವಾದ ಈ ಕಲ್ಲುಗಳು ಗಾಳಿಯ ಹೊಡೆತ ಮತ್ತು ಅಲ್ಲಿನ ಅಲ್ಪ ಮಳೆಯ ಹೊಡೆತವನ್ನು ಶತಮಾನಗಳ ಕಾಲ ತಾಳಿಕೊಂಡು, ನೆಲದಲ್ಲಿ ಮೂಡಿಸಿದ ರೇಖೆಗಳನ್ನು ಇಂದಿಗೂ ಉಳಿಸಿವೆ.

ಇಪ್ಪತ್ತನೆಯ ಶತಮಾನದ ಆರಂಭದಲ್ಲಿ, ಪೆರುವಿನ ಮರುಭೂಮಿಯ ಮೇಲೆ ವಿಮಾನದಲ್ಲಿ ಪ್ರಯಾಣಿಸುವವರ ಗಮನ ಸೆಳೆದವು ಈ ರೇಖಾಚಿತ್ರಗಳು. ಅವನ್ನು ರಚಿಸಿದ ವಿಧಾನವನ್ನು ಪರಿಣತರು ಈ ಮೇಲಿನಂತೆ ವಿವರಿಸಿದಾಗ ಅವುಗಳನ್ನು ಆವರಿಸಿದ್ದ ನಿಗೂಢತೆ ಮರೆಯಾಯಿತು. ಈ ಭೂಮಿಯಲ್ಲಿ ಇಂತಹ ನಿಗೂಢ ವಿದ್ಯಮಾನಗಳು ಇನ್ನು ಎಷ್ಟಿವೆಯೋ!