ಹಿಂದೂ ಸಂಪ್ರದಾಯದಲ್ಲಿ ಪತ್ನಿಯ ಪಾತಿವ್ರತ್ಯಕ್ಕೆ ಬಹಳ ಹೆಚ್ಚಿನ ಬೆಲೆ ನೀಡಲಾಗುತ್ತದೆ. ಪತಿಯ ಪರ ತನ್ನ ಪಾವತ್ರ‍್ಯತೆಯನ್ನು ಉಳಿಸಿಕೊಂಡು ಆತನ ಸೇವೆಯನ್ನು ಮಾಡುತ್ತ ಅವನ ಎಲ್ಲ ಕಷ್ಟಗಳಲ್ಲಿ ಭಾಗಿಯಾಗುತ್ತ, ಅರ್ಧಾಂಗಿ ಹಾಗೂ ಸಹಧರ್ಮಿಣಿ ಎನ್ನುವ ಪದಗಳಿಗೆ ತಕ್ಕಂತೆ ಬದುಕುವ ನಾರೀಮಣಿಯರಿಗೆ ವಿಶೇಷವಾದ ಗೌರವವಿದೆ. ಅಂತಹ ಐದು ಸತಿಯರಿಗೆ ಪಂಚಮಹಾಸತಿಯರೆಂಬ ಗೌರವವು ಪಾತ್ರವಾಗಿದೆ. ಈ ಪಂಚಮಹಾಸತಿಯರು ಯಾರೆಂದರೆ – ಪಾರ್ವತಿ, ಸೀತೆ, ಅನಸೂಯ, ಅರುಂಧತಿ ಮತ್ತು ಸಾವಿತ್ರಿ. ಇವರೆಲ್ಲರ ಕಥೆಗಳನ್ನು, ಅವರ ಸಾಧನೆಗಳ ಬಗ್ಗೆ ಓದುತ್ತಾ ಕೇಳುತ್ತಾ ದೃಶ್ಯಮಾಧ್ಯಮಗಳಲ್ಲಿ ನೋಡುತ್ತ ಬೆಳೆದಿದ್ದೇವೆ. ಇವರಷ್ಟೇ ಪ್ರಖ್ಯಾತರಾದವರು ಪಂಚಮಹಾಕನ್ಯೆಯರು. ʻಕನ್ಯೆʼ ಪದದ ಅರ್ಥದಲ್ಲಿ ಇವರು ಕನ್ಯೆಯರಲ್ಲ. ಇಲ್ಲಿ ʻಕನ್ಯೆʼ ಎನ್ನುವ ಪದಕ್ಕೆ ʻಸ್ತ್ರೀʼ ಎನ್ನುವ ಅರ್ಥವನ್ನು ಗ್ರಹಿಸಬೇಕಾಗುತ್ತದೆ.  ಇವರಲ್ಲಿ ಮಕ್ಕಳನ್ನು ಪಡೆದವರೂ ಇದ್ದಾರೆ, ತಮ್ಮ ಪತಿಯಲ್ಲದೆ ಪರಪುರುಷನೊಡನೆ ದೈಹಿಕ ಸಂಪರ್ಕ ಮಾಡಿದವರೂ ಇದ್ದಾರೆ! ಆದರೂ ಇವರು ಪಂಚಮಹಾಕನ್ಯೆಯರು ಎಂಬ ಗೌರವಕ್ಕೆ ಪಾತ್ರರಾದವರು; ಪೂಜಾರ್ಹರು! ಇದಕ್ಕೆ ಸೂಕ್ತ ಕಾರಣವಿಲ್ಲದೆ ನಮ್ಮ ಋಷಿಮುನಿಗಳು ಇವರಿಗೆ ಇಂತಹ ಪಟ್ಟವನ್ನು ಕೊಟ್ಟಿರುವುದಿಲ್ಲ. ರೂಪ, ಕರ್ತವ್ಯನಿಷ್ಠೆ, ಹೋರಾಟದ ಮನೋಭಾವ, ಕಷ್ಟಗಳನ್ನು ಎದುರಿಸುವ ಛಲ, ಸದಾ ಕುಟುಂಬದ ಏಳಿಗೆಯನ್ನು ಬಯಸುವವರು, ಇಂತಹ ಗುಣಗಳಿಂದ ಸಾಮಾನ್ಯರಿಗಿಂತ ಭಿನ್ನವಾಗಿ ಎದ್ದು ನಿಂತವರು ಎಂದರೆ ತಪ್ಪಾಗಲಾರದು. ಇವರು ತಮ್ಮ ಜೀವನದಲ್ಲಿ ಸಾಕಷ್ಟು ಸಂಘರ್ಷವನ್ನು ಅನುಭವಿಸಿ ಗೆದ್ದವರು. ಆದ್ದರಿಂದ ಇವರು ಮಹಾಸ್ತ್ರೀಯರು ಎಂದು ಗುರುತಿಸಲ್ಪಟ್ಟಿದ್ದಾರೆ. ಇವರ ಜೀವನದ ಸಂಘರ್ಷಗಳ ಮುಂದೆ ನಮ್ಮಂತಹ ಹುಲುಮಾನವರ ಜೀವನ ಸಂಘರ್ಷವು ಬಹಳ ಚಿಕ್ಕದು.

ನಮ್ಮ ಪುರಾಣಗಳ ಒಂದು ಶ್ಲೋಕ ಈ ಐವರನ್ನು ಗುರುತಿಸುತ್ತದೆ. ಇವರನ್ನು ನಿತ್ಯವೂ ಸ್ಮರಿಸಿದರೆ ಮಹಾಪಾತಕದ ನಿವಾರಣೆಯಾಗುತ್ತದೆ ಎನ್ನುತ್ತಿದೆ ಈ ಕೆಳಗಿನ ಶ್ಲೋಕ:

ಅಹಲ್ಯಾ, ದ್ರೌಪದಿ, ಕುಂತೀ, ತಾರಾ, ಮಂಡೋದರಿ ತಥಾ |

ಪಂಚಕನ್ಯಾ ಸ್ಮರೇನ್ ನಿತ್ಯಂ ಮಹಾ ಪಾತಕ ನಾಶನಮ್ ||

ಹೌದೇ?! ಅಂತಹದ್ದೇನು ಮಾಡಿದ್ದಾರೆ ಇವರು ಎನ್ನಿಸದಿರದು. ಈ ಪಂಚಮಹಾಕನ್ಯೆಯರ ಬಗ್ಗೆ ವಿವರವಾಗಿ ತಿಳಿದರೆ ಅವರನ್ನು ಈ ಮಹಿಮಾನ್ವಿತ ಪಟ್ಟಿಯಲ್ಲಿ ಏಕೆ ಸೇರಿಸಲಾಗಿದೆ ಎನ್ನುವ ವಿಷಯ ಗೋಚರವಾಗಬಹುದು.

1.    ಅಹಲ್ಯೆ

       ʻಅಹಲ್ಯʼ ಎಂದರೆ ಯಾವುದೇ ದೋಷವಿಲ್ಲದ್ದು, ಯಾವುದೇ ಕಪ್ಪುಚುಕ್ಕೆಯಿಲ್ಲದ್ದು ಎನ್ನುವ ಅರ್ಥವು ಬರುತ್ತದೆ. ದೋಷವಿಲ್ಲದ ಅಮೋಘ ಸೌಂದರ್ಯ ಅವಳದು. ಅಹಲ್ಯೆಯು ಅಪ್ರತಿಮ, ಅನುಪಮ ಸುಂದರಿ. ತ್ರಿಲೋಕಗಳಲ್ಲೂ ಅವಳಷ್ಟು ಲಾವಣ್ಯವತಿ ಯಾರೂ ಇರಲಿಲ್ಲ. ಬ್ರಹ್ಮನು ವಿಶೇಷವಾಗಿ ಸೃಷ್ಟಿಸಿದ ಹೆಣ್ಣು ಅವಳು. ದೇವಲೋಕದಲ್ಲಿ ಅಪ್ಸರೆಯಾದ ಊರ್ವಶಿಯು ಮೂಲೋಕಗಳಲ್ಲೂ ತನ್ನಂತಹ ಸುಂದರಿಯು ಇಲ್ಲ ಎಂದು ಬೀಗುತ್ತಿರುವಾಗ ಅವಳ ದುರಹಂಕಾರವನ್ನು ಮುರಿಯಲು ಅವಳಿಗಿಂತ ಹೆಚ್ಚು ಸೌಂದರ್ಯವತಿಯನ್ನು ಸೃಷ್ಟಿಸಲು ಯೋಚಿಸಿ ಕಾರ್ಯಪ್ರವೃತ್ತನಾದನು ಬ್ರಹ್ಮದೇವ. ಅದರ ಫಲವೇ ಅಹಲ್ಯೆ! ಆದ್ದರಿಂದ ಈಕೆಯದು ಅಯೋನಿ ಜನ್ಮ ಎನ್ನುತ್ತಾರೆ. ಅಂದರೆ ಯಾವುದೇ ತಾಯಿಯ ಗರ್ಭದಿಂದ ಹುಟ್ಟಿದವಳಲ್ಲ ಎಂದರ್ಥ. ಆದರೆ ಆಕೆಯ ಅಪರಿಮಿತ ಸೌಂದರ್ಯವೇ ಅವಳನ್ನು ಕಷ್ಟಗಳ ಪಾಲು ಮಾಡಿತು. ಇದು ಅನೇಕ ಸ್ತ್ರೀಯರ ಬಾಳಿನಲ್ಲಿ ನಡೆದಿದೆ. ಬ್ರಹ್ಮನಂತಹ ಸೃಜನಶೀಲರಿಗೆ ಹೊಸ ಹೊಸ ಸೃಷ್ಟಿಯಲ್ಲಿ ಇರುವ ಆಸಕ್ತಿ ಮತ್ತು ಅದನ್ನು ಪೂರೈಸಿದಾಗ ಆಗುವ ಆನಂದ ಅಷ್ಟಿಷ್ಟಲ್ಲ. ಆ ಸೃಷ್ಟಿಯ ಕ್ರಿಯಾಶೀಲತೆಯಲ್ಲಿ ಮಗ್ನರಾಗಿರುವ ಅವರಿಗೆ ತಮ್ಮ ಸೃಷ್ಟಿಯು ಮುಂದೆ ಎಂತಹ ಪರಿಣಾಮಗಳನ್ನು ಉಂಟುಮಾಡಬಹುದೆಂಬ ಯೋಚನೆಯೇ ಇರುವುದಿಲ್ಲ. ಹೊಸತು ಸೃಷ್ಟಿಯಾದಮೇಲೆ ಅದರ ಜೊತೆಜೊತೆಗೆ ಹೊಸ ಹೊಸ ಸಮಸ್ಯೆಗಳು ಕೂಡ ಹುಟ್ಟಿಕೊಳ್ಳುತ್ತವೆ. ಇತ್ತೀಚಿನ ಕೆಲವು ವಿಜ್ಞಾನಿಗಳು ಕೂಡ ಹೊಸ ಆವಿಷ್ಕಾರಗಳನ್ನು ತರುವ ಆತುರದಲ್ಲಿ ಅದು ಸಮಾಜದ ಮೇಲೆ ಎಂತಹ ಪರಿಣಾಮವನ್ನು ಬೀರಬಹುದು ಎಂದು ಯೋಚಿಸುವ ಗೋಜಿಗೆ ಹೋಗುವುದೇ ಇಲ್ಲ. ಹೊಸತನ್ನು ಸೃಷ್ಟಿಸುವ ಮತ್ತೇ ಅಂತಹುದು!

ಅಹಲ್ಯೆಯ ಬದುಕಿನಲ್ಲೂ ಸಮಸ್ಯೆಗಳು ಬಂದವು. ಅಹಲ್ಯೆಯನ್ನು ಸೃಷ್ಟಿಸಿದ ಬ್ರಹ್ಮನಿಗೆ ಆ ಸುಂದರ ಮಗುವನ್ನು ನೋಡಿ ತನ್ನ ಸೃಷ್ಟಿಯ ಬಗ್ಗೆ ಹೆಮ್ಮೆಯಾಯಿತು. ಕೂಡಲೇ ಅವನ ಮನಸ್ಸಿನಲ್ಲಿ ಒಂದು ಭಯವೂ ಮೂಡಿತು. ಇನ್ನು ಕೆಲವೇ ವರ್ಷಗಳಲ್ಲಿ ಈ ಮಗುವು ಅತ್ಯಂತ ರೂಪವತಿ ಹೆಣ್ಣಾಗುತ್ತಾಳೆ. ಆಗ ಇವಳನ್ನು ಇಂದ್ರನು ವಶಪಡಿಸಿಕೊಳ್ಳದೆ ಇರುವುದಿಲ್ಲ. ತಾನು ಹೀಗಾಗದಂತೆ ತಡೆಯಬೇಕು ಎನ್ನುವ ಸಂಕಲ್ಪವು ಮೂಡಿತು. ಅವನು ಗೌತಮ ಮುನಿಗಳನ್ನು ಕರೆದು ಆ ಮಗುವನ್ನು ಅವರಿಗೆ ಒಪ್ಪಿಸಿ ಆ ಮಗುವು ಪ್ರಾಪ್ತವಯಸ್ಕಳಾಗುವವರೆಗೆ ಅದರ ಪೋಷಣೆಯನ್ನು ಮಾಡಿ ಅನಂತರ ತನ್ನ ಬಳಿಗೆ ಕರೆತರಬೇಕು ಎಂದು ಆಜ್ಞಾಪಿಸಿದನು.

       ಗೌತಮರು ಬ್ರಹ್ಮನ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸುತ್ತಾರೆ. ಆ ಮಗುವಿನ ಲಾಲನೆ ಪೋಷಣೆಯನ್ನು ಮಾಡತೊಡಗುತ್ತಾರೆ. ಕಾಲಕ್ರಮೇಣ ಆ ಮಗುವು ಬೆಳೆದು ಪ್ರಾಪ್ತವಯಸ್ಕಳಾಗುತ್ತ ಅನುಪಮ ಸೌಂದರ್ಯವತಿಯಾಗಿ ಬೆಳೆದು ನಿಂತಳು. ಈಗ ಈಕೆಯನ್ನು ಬ್ರಹ್ಮನಿಗೊಪ್ಪಿಸುವ ಸಮಯವಾಯಿತು ಎಂದು ಯೋಚಿಸಿ ಗೌತಮರು ಆಕೆಯನ್ನು ಬ್ರಹ್ಮನ ಬಳಿಗೆ ಕರೆತಂದರು. ಗೌತಮರ ಕಾರ್ಯಸಾಧನೆಯು ಬ್ರಹ್ಮನಿಗೆ ಬಹಳ ಮೆಚ್ಚುಗೆಯಾಯಿತು. ಇಂತಹ ಸೌಂದರ್ಯದ ಖನಿಯು ಜೊತೆಯಲ್ಲಿದ್ದರೂ ಅವರು ಯಾವುದೇ ಕಾಮನೆಗೆ ಒಳಗಾಗದೆ ನಿರ್ಲಿಪ್ತರಾಗಿರುವುದನ್ನು ಗಮನಿಸಿದನು ಬ್ರಹ್ಮದೇವ. ಈಕೆಯನ್ನು ವರಿಸಲು ಅವರೇ ಸೂಕ್ತ ವ್ಯಕ್ತಿ ಎಂದು ಯೋಚಿಸಿ, ಇಂತಹ ಮಹಾತಪಸ್ವಿಯೇ ಈಕೆಯನ್ನು ಇಂದ್ರನಿಂದ ಕಾಪಾಡಲು ಯೋಗ್ಯ ಎಂದು ನಿರ್ಧರಿಸಿ ಅಹಲ್ಯೆಯನ್ನು ಗೌತಮರಿಗೆ ಕೊಟ್ಟು ವಿವಾಹ ಮಾಡಿದನು. ಅವನು ಯೋಚಿಸಿದ್ದೇ ಒಂದು ಆದದ್ದೇ ಇನ್ನೊಂದು. ಅಂದರೆ ಸೃಷ್ಟಿಕರ್ತ ಬ್ರಹ್ಮನಿಗೇ ತಿಳಿದಿರಲಿಲ್ಲವೆ ಅವಳ ಹಣೆಯ ಬರಹ? ಹಾಗಾದರೆ ಅವಳ ಹಣೆಯ ಬರಹವನ್ನು ನಿರ್ಧರಿಸಿದವರಾರು ಎನ್ನುವ ಪ್ರಶ್ನೆಯು ಮೂಡದಿರದು!

       ಗೌತಮರು ಪತ್ನಿ ಅಹಲ್ಯೆಯನ್ನು ತಮ್ಮ ಆಶ್ರಮಕ್ಕೆ ಕರೆತಂದರು. ಅಲ್ಲಿ ಈ ದಂಪತಿಗಳ ಹೊಸ ಜೀವನವು ಪ್ರಾರಂಭವಾಯಿತು. ಅಹಲ್ಯೆಯು ಒಬ್ಬ ಋಷಿಪತ್ನಿಗೆ ಯೋಗ್ಯವಾದ ಸಂಸ್ಕಾರವನ್ನು ಹೊಂದಿದವಳಾಗಿ ತನ್ನ ಪತಿಯ ಸೇವೆಯನ್ನು ಮಾಡುತ್ತ ಅವರೊಂದಿಗೆ ನೆಮ್ಮದಿಯಿಂದ ಸಂಸಾರವನ್ನು ಮಾಡುತ್ತಿದ್ದಳು. ಅವರಿಗೆ ಎಲ್ಲ ರೀತಿಯಲ್ಲೂ ಸಹಕಾರವನ್ನು ನೀಡುತ್ತ ಆದರ್ಶ ಪತ್ನಿಯಾಗಿದ್ದಳು. ಆದರೆ ಈ ನೆಮ್ಮದಿಯು ಬಹಳ ಕಾಲ ಉಳಿಯಲಿಲ್ಲ. ಬ್ರಹ್ಮನು ಒಬ್ಬ ಅಪೂರ್ವ ಮೋಹಕ ಹೆಣ್ಣಿನ ವಿವಾಹವನ್ನು ಒಬ್ಬ ಋಷಿಯೊಂದಿಗೆ ಮಾಡಿರುವ ವಿಚಾರವು ಇಂದ್ರನ ಕಿವಿಗೆ ಬಿದ್ದಿತು. ಇದುವೆರಗೂ ತನ್ನ ಕಣ್ಣಿಗೆ ಬೀಳದ ಈ ಸೌಂದರ್ಯವತಿ ಯಾರಿರಬಹುದು ಎನ್ನುವ ಕುತೂಹಲವು ಮೂಡಿತು. ಗೌಪ್ಯವಾಗಿ ಗೌತಮರ ಆಶ್ರಮದ ಬಳಿ ಬಂದು ಅಹಲ್ಯೆಯನ್ನು ಗಮನಿಸಿದನು ಸುರಪತಿ ಇಂದ್ರ. ಅವಳ ಅನುಪಮ ಸೌಂದರ್ಯವನ್ನು ನೋಡಿದಕೂಡಲೇ ಹೇಗಾದರೂ ಮಾಡಿ ಆಕೆಯನ್ನು ವಶಪಡಿಸಿಕೊಳ್ಳಬೇಕು ಎನ್ನುವ ಯೋಚನೆ ಮೂಡಿತು. ಇಂದ್ರಪದವಿಯ ಮತ್ತೇ ಅಂತಹುದು. ವಿಶ್ವದ ಶ್ರೇಷ್ಠತೆಯೆಲ್ಲವೂ ತನ್ನದೇ ಎನ್ನುವ ಅಹಂಕಾರ ತಂದುಕೊಡುತ್ತವೆ ಪದವಿ, ಸಂಪತ್ತು ಮತ್ತು ಶಕ್ತಿ. ಆದರೆ ಗೌತಮರ ತಪಃಶಕ್ತಿಯ ಅರಿವಿದ್ದ ಅವನಿಗೆ ಗೌತಮರನ್ನು ನೇರವಾಗಿ ಎದುರಿಸಿದರೆ ಅವರ ಶಾಪಕ್ಕೆ ಗುರಿಯಾಗಿ ಇಂದ್ರಪದವಿಯನ್ನೇ ಕಳೆದುಕೊಳ್ಳುವ ಆತಂಕವು ಮೂಡುತ್ತದೆ. ಬದಲಾಗಿ ಆಕೆಯನ್ನು ಒಮ್ಮೆಯಾದರೂ ಗೌತಮರಿಗೆ ಅರಿವಾಗದಂತೆ ರಹಸ್ಯವಾಗಿ ಅನುಭವಿಸಬೇಕು ಎನ್ನುವ ನಿರ್ಧಾರಕ್ಕೆ ಬಂದನು. ಒಬ್ಬ ಬೇಟೆಗಾರನು ತನ್ನ ಬೇಟೆಯನ್ನು ಸ್ವಾಧೀನಪಡಿಸಿಕೊಳ್ಳಲು ಹೊಸಹೊಸ ತಂತ್ರಗಳನ್ನು ಹೆಣೆಯುತ್ತಲೇ ಇರುತ್ತಾನೆ.

       ಗೌತಮರ ಚಲವಲನಗಳನ್ನು ಗಮನಿಸುತ್ತಿದ್ದ ಇಂದ್ರನು ಗೌತಮರು ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಸ್ನಾನಕ್ಕೆ ಹೋಗುವುದನ್ನು ಕಂಡುಕೊಂಡನು. ಒಂದು ದಿನ ಅವರ ಆಶ್ರಮದ ಮುಂದೆ ಬಂದು ಬ್ರಾಹ್ಮೀ ಮುಹೂರ್ತಕ್ಕೂ ಮುನ್ನವೇ ಹುಂಜದ ಧ್ವನಿಯಲ್ಲಿ ಕೂಗಿದನು. ಆಗಲೇ ಬೆಳಗಾಯಿತೆ ಎಂದು ಗಾಬರಿಯಿಂದ ಎದ್ದ ಗೌತಮರು ಲಗುಬಗೆಯಿಂದ ಸ್ನಾನಕ್ಕಾಗಿ ನದಿಯ ಕಡೆಗೆ ಹೊರಟರು. ಅವರು ಆ ಕಡೆ ಹೊರಟಕೂಡಲೇ ಇಂದ್ರನು ಗೌತಮರ ರೂಪ ಧರಿಸಿ ಆಶ್ರಮದೊಳಗೆ ಪ್ರವೇಶಿಸಿದನು. ಹಿಂದಿರುಗಿ ಬಂದ ಪತಿಯನ್ನು ಕಂಡ ಅಹಲ್ಯೆಯು ಆಶ್ಚರ್ಯಕ್ಕೊಳಗಾದಳು. ಆಗ ವೇಷಧಾರಿಯು ಇನ್ನೂ ಬೆಳಗಾಗಿಲ್ಲ ಅದಕ್ಕೇ ಹಿಂದಿರುಗಿದೆ ಎಂದು ತಿಳಿಸಿ ಆಕೆಯಲ್ಲಿ ಪ್ರಣಯಕ್ಕೆ ಮುಂದಾದನು. ಅಹಲ್ಯೆ ಪ್ರಣಯಕ್ಕೆ ಇದು ಸಮಯವಲ್ಲ ಎಂದು ಎಚ್ಚರಿಸುತ್ತಾಳೆ, ಆದರೆ ವೇಷಧಾರಿಯು ತನ್ನ ಪತಿಯೆಂದೇ ತಿಳಿದು ಕೊನೆಗೆ ಸಹಕರಿಸಿದಳು. ಇದೇ ಸಮಯದಲ್ಲಿ ಹೊರಗೆ ಹೋದ ಗೌತಮರಿಗೆ ಇನ್ನೂ ಬ್ರಾಹ್ಮೀ ಮುಹೂರ್ತವು ಕೂಡ ಬಂದಿಲ್ಲ ಎನ್ನುವ ಅರಿವಾಗಿ ಆಶ್ರಮಕ್ಕೆ ಹಿಂದಿರುಗಿದರು. ಅಲ್ಲಿ ತನ್ನ ರೂಪದಲ್ಲಿದ್ದ ಪರಪುರುಷನ ತೆಕ್ಕೆಯಲ್ಲಿದ್ದ ಅಹಲ್ಯೆಯನ್ನು ಕಂಡು ಕೋಪಾವಿಷ್ಟರಾದರು. ಆ ಕೋಪದಲ್ಲಿ ಇಬ್ಬರಿಗೂ ಶಾಪವನ್ನು ನೀಡಿದರು. ಅಹಲ್ಯೆಗೆ ತನ್ನ ಅಕಾರ್ಯಕ್ಕೆ ಪಶ್ಚಾತ್ತಾಪ ಪಡುತ್ತ ಕಲ್ಲಾಗುವಂತೆ ಮತ್ತು ವೇಷಧಾರಿ ಇಂದ್ರನಿಗೆ ಸಾವಿರ ಯೋನಿಗಳು ಅವನ ದೇಹಕ್ಕಂಟುವಂತೆ ಶಾಪ ನೀಡಿದರು. ಇದರಲ್ಲಿ ತನ್ನ ತಪ್ಪೇನೂ ಇಲ್ಲವೆಂದು ರೋದಿಸುತ್ತಿರುವ ಅಹಲ್ಯೆಯ ಮೇಲೆ ಕರುಣೆಯುಂಟಾಗಿ ಮುಂದೆ ರಘುಕುಲೋತ್ತಮ ಶ್ರೀರಾಮನ ಪಾದಸ್ಪರ್ಶದಿಂದ ಆಕೆಯು ತನ್ನ ಹಿಂದಿನ ರೂಪ ಪಡೆಯುವಂತಾಗಲಿ ಎಂದು ವರ ನೀಡಿದರು. ತನ್ನ ಪತ್ನಿಯನ್ನು ಶಿಶುವಿದ್ದಾಗಿನಿಂದಲೂ ನೋಡಿದ್ದ ಗೌತಮರಿಗೆ, ಅವಳು ಇಂತಹ ತಪ್ಪನ್ನು ಸ್ವಇಚ್ಚೆಯಿಂದ ಮಾಡಿರುವುದಿಲ್ಲ ಎಂದು ಅರ್ಥಮಾಡಿಕೊಳ್ಳಲು ಆಗಲೇ ಇಲ್ಲವೇ? ಕೋಪ ಮನುಷ್ಯನ ಬುದ್ಧಿಗೆ ತೆರೆ ಎಳೆಯುತ್ತದೆ ಎನ್ನುವುದು ಸತ್ಯ! ಇಂದ್ರನೂ ಕೂಡ ತನ್ನ ತಪ್ಪಿಗೆ ಕ್ಷಮೆಯಾಚಿಸಿ ಶಾಪಮುಕ್ತನನ್ನಾಗಿಸುವಂತೆ ಬೇಡಿದನು. ಆಗ ಗೌತಮರು ಯೋನಿಗಳ ಬದಲಾಗಿ ಸಾವಿರ ಕಣ್ಣುಗಳು ಅವನನ್ನು ಸುತ್ತುವರೆಯಲಿ ಎಂದು ಶಾಪದ ತೀವ್ರತೆಯನ್ನು ಕಡಿಮೆ ಮಾಡಿದರು. ಕಲ್ಲೆಂದರೆ ಆಕೆ ಒಂದು ಜಡವಸ್ತುವಾಗಿರಲಿಲ್ಲ. ಆಕೆಯ ಭೌತಿಕ ರೂಪ ಕಲ್ಲು. ಆದ್ದರಿಂದ ಆಕೆಗೆ ಹಸಿವೆ, ನಿದ್ದೆ, ಮುಂತಾದ ದೇಹಬಾಧೆಗಳಿರಲಿಲ್ಲ. ಆದರೆ ಆಕೆಯ ಅರಿವು ಸಂಪೂರ್ಣವಾಗಿ ಜಾಗೃತವಾಗಿತ್ತು. ಅವಳು ಧೈರ್ಯಗುಂದಲಿಲ್ಲ, ತನ್ನ ಸ್ಥಿತಿಗೆ ರೋದಿಸಲಿಲ್ಲ, ಪತಿಯನ್ನು ತೆಗಳಿ ಶಾಪ ಹಾಕಲಿಲ್ಲ. ತನ್ನ ತಪ್ಪೇ ಇಲ್ಲದಿದ್ದರೂ ತನಗೇಕೆ ಇಂತಹ ಶಿಕ್ಷೆ ಎಂದು ಹಲುಬಲಿಲ್ಲ. ಬದಲಾಗಿ ಆಕೆ ತನ್ನ ಧೈರ್ಯವನ್ನು ಒಗ್ಗೂಡಿಸಿಕೊಂಡು ತನ್ನ ಶಾಪದ ವಿಮೋಚನೆಯಾಗುವವರೆಗೂ ಸುಧೀರ್ಘವಾದ ತಪಸ್ಸಿನಲ್ಲಿ ಕಾಲ ಕಳೆದಳು! ತನಗಿದ್ದ ಸಮಯವನ್ನು ವೃಥಾ ಹಾಳುಮಾಡಲಿಲ್ಲ, ಸದುಪಯೋಗ ಮಾಡಿಕೊಂಡಳು!

       ನೂರಾರು ವರ್ಷಗಳನಂತರ ವಿಶ್ವಾಮಿತ್ರರ ಜೊತೆಯಲ್ಲಿ ಸೀತಾಸ್ವಯಂವರಕ್ಕಾಗಿ ಕಾಡಿನಲ್ಲಿ ನಡೆದು ಬರುತ್ತಿದ್ದ ರಾಮನಿಗೆ ವಿಶ್ವಾಮಿತ್ರರು ಅಹಲ್ಯೆಯ ಕಥೆಯನ್ನು ಹೇಳಿ ಅವನನ್ನು ಗೌತಮರ ಆಶ್ರಮಕ್ಕೆ ಕರೆತಂದರು. ರಾಮನ ಪಾದಧೂಳಿಯು ಕಲ್ಲಿನ ರೂಪದಲ್ಲಿದ್ದ ಅಹಲ್ಯೆಗೆ ತಾಗಿ ಆಕೆ ತನ್ನ ನಿಜರೂಪವನ್ನು ಪಡೆದಳು. ವಿಶ್ವಾಮಿತ್ರರಿಂದ ಆಕೆಯ ಕಥೆಯನ್ನು ತಿಳಿದಿದ್ದ ಶ್ರೀರಾಮನು ಆಕೆಯು ಶಾಪ ಪಡೆದ ಸಂದರ್ಭದಲ್ಲಿ ಆಕೆಯ ತಪ್ಪೇನೂ ಇಲ್ಲ ಎಂದು ಹೇಳಿ ಆಕೆಯ ಕಾಲಿಗೆ ನಮಸ್ಕರಿಸಿದನು. ಆಗ ದೇವತೆಗಳು ಇಬ್ಬರ ಮೇಲೂ ಪುಷ್ಟವೃಷ್ಟಿಯನ್ನು ಮಾಡಿದರು. ಇದರಿಂದ ಪರಪುರುಷನ ಜೊತೆ ದೈಹಿಕ ಸಂಪರ್ಕಹೊಂದಿದ ಪಾಪದಿಂದ ಆಕೆ ಮುಕ್ತಿ ಪಡೆಯುತ್ತಾಳೆ ಮತ್ತು ಶಿಲೆಯ ರೂಪದಲ್ಲಿ ನೂರಾರು ವರ್ಷಗಳ ಕಾಲ ತಪಸ್ಸು ಮಾಡುತ್ತಿದ್ದ ಆಕೆ ಮಹಿಮಾನ್ವಿತೆ ಎನ್ನಿಸಿಕೊಳ್ಳುತ್ತಾಳೆ. ಈ ವಿಷಯವನ್ನು ಕೇಳಿದ ಗೌತಮರು ಬಂದು ರಾಮನಿಂದ ಪಾವಿತ್ರ‍್ಯತೆಯನ್ನು ಪಡೆದ ಆಕೆಯನ್ನು ಮತ್ತೆ ಪತ್ನಿಯಾಗಿ ಸ್ವೀಕರಿಸಿದರು. ಇಂತಹ ದೊಡ್ಡ ಆಪತ್ತಿನಿಂದ ಅಳುಕದೆ, ಕುಂದದೆ ಯಶಸ್ವಿಯಾಗಿ ಹೊರಗೆ ಬಂದ ಆಕೆಯನ್ನು ಪಂಚಮಹಾಕನ್ಯೆಯರಲ್ಲಿ ಒಬ್ಬಳು ಎಂದು ಪರಿಗಣಿಸಲಾಗಿದೆ.

       ಹೀಗೆ ಪತಿಯ ಕೋಪಕ್ಕೆ ತುತ್ತಾಗಿ ಹೀಗೆ ಸಂಕಷ್ಟಕ್ಕೀಡಾದ ಅನೇಕ ಸ್ತ್ರೀಯರ ಕಥೆಗಳನ್ನು ನಮ್ಮ ಪುರಾಣದಲ್ಲಿ ಕಾಣಬಹುದು. ಅವುಗಳಲ್ಲಿ ಒಂದು ದೊಡ್ಡ ಉದಾಹರಣೆ ಎಂದರೆ ಜಮದಗ್ನಿ ಋಷಿಗಳ ಪತ್ನಿ ರೇಣುಕೆಯದು. ತನ್ನ ಪತ್ನಿಯ ಶೀಲವನ್ನು ಶಂಕಿಸಿ ತನ್ನ ಪುತ್ರನಿಂದಲೇ ಪತ್ನಿಯ ಶಿರಚ್ಛೇದನ ಮಾಡಿಸುತ್ತಾರೆ ಜಮದಗ್ನಿಗಳು. ಅನಾದಿಕಾಲದಿಂದಲೂ ಇಂದಿನವರೆಗೂ ಸ್ತ್ರೀಯರ ಮೇಲೆ ಪುರುಷರಿಂದ ಇಂತಹ ದೌರ್ಜನ್ಯ ಮತ್ತು ದಬ್ಬಾಳಿಕೆಗಳು ನಡೆಯುತ್ತಲೇ ಇವೆ. ಕಾಲ ಬದಲಾದರೂ ಪುರುಷರ ಕೋಪ ಬದಲಾಗಿಯೇ ಇಲ್ಲ! ಆದರೆ ಇತ್ತೀಚಿಗೆ ತಮ್ಮ ಪತಿಯರ ಪ್ರಾಣವನ್ನೇ ಹರಣ ಮಾಡುತ್ತಿರುವ ಪತ್ನಿಯರ ಸಂತತಿಯೂ ಬೆಳೆಯುತ್ತಿದೆ ಎನ್ನುವುದು ಕಲಿಯುಗಕ್ಕೆ ತಕ್ಕಂತೆ ಪ್ರಪಂಚವು ಬದಲಾಗುತ್ತಿದೆ ಎನ್ನುವುದರ ಸಂಕೇತ!

2.   ಮಂಡೋದರಿ

       ಮಂಡೋದರಿಯು ರಾಕ್ಷಸ ಶಿಲ್ಪಿಯಾದ ಮಯಾಸುರ ಹಾಗೂ ಅಪ್ಸರೆ ಹೇಮಾ ಇವರ ಮಗಳು. ತಮಗೆ ಮಾಯಾವಿ ಮತ್ತು ದುಂದುಭಿ ಎನ್ನುವ ಇಬ್ಬರು ಪುತ್ರರು ಜನಿಸಿದ ಮೇಲೆ ಸುಪುತ್ರಿಯು ಜನಿಸಲಿ ಎಂದು ಶಿವನ ಕುರಿತು ತಪ್ಪಸ್ಸಿನಲ್ಲಿ ತೊಡಗಿದರು. ಇನ್ನೊಂದು ಕಡೆ ಮಧುರಾ ಎನ್ನುವ ಪರಮ ಶಿವಭಕ್ತೆಯಾದ ಅಪ್ಸರೆಗೆ ಶಿವನ ಮೇಲೆ ಮನಸ್ಸಾಯಿತು. ಹೇಗಾದರೂ ಮಾಡಿ ಶಿವನನ್ನೇ ವರಿಸಬೇಕೆಂಬ ಸಂಕಲ್ಪವನ್ನು ಮಾಡಿದಳು. ಪಾರ್ವತಿಯು ಇಲ್ಲದಿರುವಾಗ ಆಕೆ ಕೈಲಾಸಕ್ಕೆ ಬಂದು ತಪೋನಿರತನಾದ ಶಿವನನ್ನು ಎಚ್ಚರಿಸಲು ಪ್ರಯತ್ನಿಸಿದಳು. ಆತನು ಏಳದಿರುವುದನ್ನು ಕಂಡು ಶಿವನ ಎದುರಿನಲ್ಲಿ ಕುಳಿತು ಧ್ಯಾನಿಸತೊಡಗಿದಳು. ಕಣ್ಣು ಬಿಟ್ಟ ಶಿವನಿಗೆ ಎದುರಿನಲ್ಲಿ ಕಂಡ ಅಪ್ರತಿಮ ಸುಂದರಿಯಲ್ಲಿ ಮೋಹವುಂಟಾಯಿತು. ಮಾಧುರಿಯು ಶಿವನ ಅಪ್ಪುಗೆಯನ್ನು ಪಡೆದಳು.  ಅಷ್ಟರಲ್ಲಿ ಅಲ್ಲಿಗೆ ಆಗಮಿಸಿದ ಪಾರ್ವತಿಯು ಶಿವನ ನಿಕಟದಲ್ಲಿದ್ದ ಹೆಣ್ಣನ್ನು ಕಂಡು ಅತಿಯಾದ ಕೋಪದಿಂದ ಅವಳಿಗೆ 12 ವರ್ಷಗಳ ಕಾಲ ಕಪ್ಪೆಯಾಗಿ ಒಂದು ಬಾವಿಯಲ್ಲಿ ವಾಸಿಸುವಂತೆ ಶಾಪವನ್ನು ನೀಡಿದಳು. ತನ್ನನ್ನು ಶಾಪದಿಂದ ವಿಮುಕ್ತಿಗೊಳಿಸುವಂತೆ ಶಿವನನ್ನು ಬೇಡಿದಳು ಮಧುರಾ. ಆಗ ಶಿವನು ನಿನ್ನನ್ನು ಶಾಪಮುಕ್ತಳಾಗಿ ಮಾಡುವ ಅಧಿಕಾರ ನನಗಿಲ್ಲ, ಆದರೆ ನೀನು 12 ವರ್ಷಗಳ ಕಾಲ ಕಪ್ಪೆಯಾಗಿ ಬದುಕಿದ ಮೇಲೆ ಒಂದು ಸುಂದರ ಶಿಶುವಾಗಿ ಮಾರ್ಪಾಡಾಗುವೆ. ನೀನು ಬೆಳೆದ ಮೇಲೆ ನನ್ನ ಪರಮಭಕ್ತನೊಬ್ಬ ನಿನ್ನನ್ನು ವಿವಾಹವಾಗುತ್ತಾನೆ ಎಂದು ಸಂತೈಸಿದನು. ಶಾಪದ ಫಲವಾಗಿ ಮಧುರಾ ಕಪ್ಪೆಯಾಗಿ ಒಂದು ಬಾವಿಯಲ್ಲಿ ಜೀವಿಸತೊಡಗಿದಳು. ಹನ್ನೆರಡು ವರ್ಷಗಳು ಕಳೆದ ಮೇಲೆ ಆಕೆ ಒಂದು ಶಿಶುವಿನ ರೂಪವನ್ನು ಪಡೆದಳು. ಅದೇ ಸಮಯದಲ್ಲಿ ಹಲವು ವರ್ಷ ಕಾಡಿನಲ್ಲಿ ತಪ್ಪಸ್ಸು ಮಾಡುತ್ತಿದ್ದ ಮಯಾಸುರ ಮತ್ತು ಹೇಮಾ ಇವರಿಗೆ ಒಂದು ಮಗುವು ಅಳುತ್ತಿರುವ ಸದ್ದು ಕೇಳಿ ಬಾವಿಯಲ್ಲಿ ಇಣುಕಿದರು. ಅಲ್ಲಿ ಕಂಡ ಹೆಣ್ಣು ಮಗುವು ಶಿವನೇ ತಮಗೆ ಪ್ರಸಾದಿಸಿದ ವರ ಎಂದು ಭಾವಿಸಿ ಆಕೆಯನ್ನು ಸಾಕತೊಡಗಿದರು. ಆಕೆಗೆ ಮಂಡೋದರಿ ಎಂದು ನಾಮಕರಣ ಮಾಡಿದರು. ಆಕೆ ಒಬ್ಬ ದಿವ್ಯ ಸುಂದರಿಯಾಗಿ ಬೆಳೆಯತೊಡಗಿದಳು. ಒಮ್ಮೆ ರಾವಣನು ಮಯಾಸುರನ ಭೇಟಿಗಾಗಿ ಬಂದಾಗ ಚೆಲುವೆ ಮಂಡೋದರಿಯನ್ನು ಕಂಡು ಮೋಹಿತನಾದನು. ಈ ವಿಷಯವನ್ನು ತಿಳಿದ ಮಯಾಸುರನು ಸಂತೋಷದಿಂದ ಇಬ್ಬರಿಗೂ ವಿವಾಹವನ್ನು ಮಾಡಿದನು.

       ನೇಪಾಳದ ಜನ ಮಂಡೋದರಿಯ ಬಗ್ಗೆ ಬೇರೆಯೇ ಕಥೆಯನ್ನು ಹೇಳುತ್ತಾರೆ. ಆದರೆ ಇಲ್ಲಿಯೂ ಮಂಡೋದರಿ ಮೊದಲು ಕಪ್ಪೆಯಾಗಿದ್ದು ಅನಂತರ ಮನುಷ್ಯಳಾಗುತ್ತಾಳೆ. ಆ ಕಥೆ ಹೀಗಿದೆ: ಒಮ್ಮೆ ರಾವಣನು ಕೈಲಾಸಕ್ಕೆ ಬಂದು ಶಿವನನ್ನು ಅನೇಕ ರೀತಿಯಲ್ಲಿ ಸ್ತುತಿಸಿ ಪೂಜಿಸಿದನು. ತನ್ನ ಪರಮಭಕ್ತನ ಭಕ್ತಿಗೆ ಮೆಚ್ಚಿದ ಶಿವನು ನಿನಗೇನು ವರ ಬೇಕೋ ಕೇಳಿಕೋ ಎಂದು ಹೇಳಿದನು. ನಾನು ವರವನ್ನು ಕೇಳಿದ ಮೇಲೆ ಆಗುವುದಿಲ್ಲ ಎನ್ನಕೂಡದು ಎನ್ನುವ ಷರತ್ತನ್ನು ರಾವಣನು ಹಾಕಿದನು. ಅವನ ಮನಸ್ಸಿನಲ್ಲಿ ಕುತಂತ್ರವೊಂದು ಮೂಡತೊಡಗಿರುತ್ತದೆ. ಶಿವನು ನೀನು ಏನೇ ಕೇಳಿದರೂ ಇಲ್ಲವೆನ್ನುವುದಿಲ್ಲ ಎನ್ನುವ ಆಶ್ವಾಸನೆಯನ್ನು ಕೊಟ್ಟನು. ಆಗ ರಾವಣನು ತನಗೆ ಪಾರ್ವತಿಯ ಮೇಲೆ ಮೋಹವಾಗಿದೆ, ಆಕೆಯನ್ನು ತನಗೆ ಕೊಡಬೇಕೆಂದು ಕೋರಿದನು. ಮುಗುಳ್ನಕ್ಕ ಶಿವನು, ಆಕೆಯನ್ನು ನೀನು ಕರೆದೊಯ್ಯಬಹುದು, ನಾನು ನಿನ್ನ ಕಾರ್ಯಕ್ಕೆ ಅಡ್ಡಿ ಬರುವುದಿಲ್ಲ ಎಂದನು. ಅವನಿಗೆ ಗೊತ್ತು ಲೋಕಮಾತೆಯಾದ ಪಾರ್ವತಿಯು ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಮರ್ಥಳು ಎಂದು. ರಾವಣನು ಪಾರ್ವತಿಗಾಗಿ ಕೈಲಾಸದ ಸುತ್ತಮುತ್ತಲೂ ಹುಡುಕತೊಡಗಿದನು. ಶಿವನು ಈ ರೀತಿಯ ವರವನ್ನು ರಾವಣನಿಗೆ ನೀಡಿರುವುದನ್ನು ಕೇಳಿಸಿಕೊಂಡ ಕೆಲವು ಗಣಗಳು ಓಡಿ ಹೋಗಿ ಮಾನಸ ಸರೋವರದಲ್ಲಿ ಸ್ನಾನಮಾಡುತ್ತಿದ್ದ ಪಾರ್ವತಿಗೆ ವಿಷಯವನ್ನು ಮುಟ್ಟಿಸಿದರು. ಆಕೆಯು ಸರೋವರದಲ್ಲಿನ ಒಂದು ಕಪ್ಪೆಯನ್ನು ಹಿಡಿದು ಆಕೆಯನ್ನು ಒಂದು ಸುಂದರ ಸ್ತ್ರೀಯಾಗಿ ಮಾರ್ಪಡಿಸಿ ಮಾನಸ ಸರೋವರದ ಪಕ್ಕದಲ್ಲೇ ಇರುವ ಇನ್ನೊಂದು ಸರೋವರದಲ್ಲಿ ಬಿಟ್ಟು ಅಲ್ಲಿಂದ ಹೊರಟುಬಿಡುತ್ತಾಳೆ. ಪಾರ್ವತಿಯು ಸರೋವರದಲ್ಲಿ ಸ್ನಾನ ಮಾಡುತ್ತಿರುವ ವಿಷಯವನ್ನು ತಿಳಿದ ರಾವಣನು ಅಲ್ಲಿಗೆ ಬರುತ್ತಾನೆ. ಮಾನಸ ಸರೋವರದಲ್ಲಿ ಯಾರೂ ಕಾಣುವುದಿಲ್ಲ. ಪಕ್ಕದ ಸರೋವರದಲ್ಲಿ ಸ್ನಾನ ಮಾಡುತ್ತಿದ್ದ ಸುಂದರಿಯನ್ನು ನೋಡಿ ಆಕೆಯೇ ಪಾರ್ವತಿಯೆಂದು ಭ್ರಮಿಸಿ ಆಕೆಯನ್ನು ಲಂಕೆಗೆ ಹೊತ್ತುಕೊಂಡು ಹೋಗಿ ವಿವಾಹವಾದನು. ನಂತರ ಅವನಿಗೆ ಸತ್ಯದ ಅರಿವಾಯಿತು. ಆದರೂ ಆ ಸೌಂದರ್ಯವತಿಯನ್ನು, ಸುಗುಣೆಯನ್ನು ತ್ಯಜಿಸುವ ಮನಸ್ಸಾಗುವುದಿಲ್ಲ. ಆಕೆಗೆ ಮಂಡೋದರಿ ಎನ್ನುವ ಹೆಸರನ್ನು ಕೊಟ್ಟನು. ಮಂಡೋದರಿಯು ಸ್ನಾನ ಮಾಡುತ್ತಿದ್ದ ಸರೋವರವು ರಾಕ್ಷಸನಾದ ರಾವಣನು ಕಾಲಿಟ್ಟದ್ದರಿಂದ ಅಪವಿತ್ರಗೊಳ್ಳುತ್ತದೆ. ಮುಂದೆ ಅಲ್ಲಿ ಯಾವ ಜೀವಿಯೂ ಹುಟ್ಟುವುದಿಲ್ಲ, ಜೀವಿಸುವುದಿಲ್ಲ. ಆ ಸರೋವರದ ನೀರು ವಿಷಪೂರಿತ, ಆ ನೀರನ್ನು ಕುಡಿದರೆ ಸಾವಾಗುತ್ತದೆ ಎನ್ನುವ ಪ್ರತೀತಿಯಿದೆ. (ಈಗ ಆ ಸರೋವರಕ್ಕೆ ʻರಾಕ್ಷಸ್ ತಾಲ್ʼ ಎನ್ನುವ ಹೆಸರು ಬಂದಿದೆ. ಪಕ್ಕದ ಮಾನಸ ಸರೋವರದಲ್ಲಿ ಜಲಚರಗಳನ್ನು, ಜಲಪಕ್ಷಿಗಳನ್ನು ಕಾಣಬಹುದು. ಆದರೆ ಈಗಲೂ ಕೂಡ ಅಲ್ಲಿಂದ ಒಂದು ಕಲ್ಲೆಸೆತದ ದೂರದಲ್ಲೇ ಇರುವ ಈ ʻರಾಕ್ಷಸ್ ತಾಲ್ʼ ಎಂದು ಕರೆಸಿಕೊಳ್ಳುವ ಸರೋವರದಲ್ಲಿ ಯಾವ ಜೀವಿಯೂ ಇಲ್ಲ. ನಮಗೂ ಆ ನೀರಿನಲ್ಲಿ ಇಳಿಯುವ ಧೈರ್ಯವಾಗಲಿಲ್ಲ! ಇದು ನಾವು ಕೈಲಾಸ ಮಾನಸ ಸರೋವರ ಯಾತ್ರೆಗೆ ಹೋದಾಗ ನಮ್ಮ ನೇಪಾಳಿ ಗೈಡ್ ನಮಗೆ ಹೇಳಿದ ಕಥೆ ಇದು).

       ಹುಟ್ಟು ಎಂತಹುದೇ ಆಗಿರಲಿ, ಮಂಡೋದರಿಯು ಒಬ್ಬ ಸರ್ವಗುಣ ಸಂಪನ್ನೆಯಾದ ಸುಂದರಿ ಹಾಗೂ ಪತಿ ರಾವಣನಲ್ಲಿ ಅಪಾರವಾದ ಪ್ರೇಮ ಮತ್ತು ಭಕ್ತಿಯನ್ನು ಹೊಂದಿದ್ದ ಸತೀಶಿರೋಮಣಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಯಾವಾಗಲೂ ಶಿವನ ಪೂಜೆಯಲ್ಲಿ ನಿರತಳಾಗಿರುತ್ತಿದ್ದ ಆಕೆಯು ಸದಾ ತನ್ನ ಪತಿಯ ಯೋಗಕ್ಷೇಮವನ್ನು ಕೋರಿ ಪೂಜೆಯನ್ನು ಮಾಡುತ್ತಿದ್ದಳು. ಇಬ್ಬರಿಗೂ ಮೇಘನಾದ, ಅತಿಕಾಯ ಮತ್ತು ಅಕ್ಷಕುಮಾರ ಎನ್ನುವ ಮೂವರು ಪುತ್ರರು ಜನಿಸಿದರು. ಆಕೆಗೆ ರಾವಣನ ಸ್ತ್ರೀ ವ್ಯಾಮೋಹದ ಬಗ್ಗೆ ಕಳಕಳಿಯಿತ್ತು. ಆಕೆಯು ತನ್ನ ಪತಿಗೆ ಬುದ್ಧಿವಾದವನ್ನು ಹೇಳಿ ಅವನನ್ನು ಪರಿವರ್ತಿಸಲು ಪ್ರಯತ್ನಿಸುತ್ತಿರುತ್ತಾಳೆ. ಇದರಿಂದ ಯಾವುದೇ ಪ್ರಯೋಜನ ಆಗದಿದ್ದರೂ ಆಕೆ ತನ್ನ ಪತಿಯ ಯೋಗಕ್ಷೇಮಕ್ಕಾಗಿ ಮಾಡುವ ಪೂಜೆಯನ್ನು ನಿಲ್ಲಿಸದೆ ಮುಂದುವರೆಸಿದಳು.

ರಾವಣನು ಸೀತೆಯನ್ನು ಅಪಹರಿಸಿ ತಂದಾಗಲೂ ಮಂಡೋದರಿ ಸೀತೆಯನ್ನು ಬಿಟ್ಟುಬಿಡುವಂತೆ ರಾವಣನನ್ನು ಕೋರಿದಳು. ಆದರೆ ಪತ್ನಿಯ ಮಾತಿಗೆ ರಾವಣನು ಕಿವಿಗೊಡುವುದಿಲ್ಲ. ಹನುಮಂತನು ಲಂಕೆಗೆ ಬಂದಾಗ ಅವನನ್ನು ಸೆರೆ ಹಿಡಿಯುವ ಪ್ರಯತ್ನದಲ್ಲಿ ಅತಿಕಾಯ ಮತ್ತು ಅಕ್ಷಕುಮಾರರು ಅಸುನೀಗಿದರು. ಕೊನೆಗೆ ಸೀತೆಯನ್ನು ರಕ್ಷಿಸಲು ರಾಮನು ಕಪಿಸೇನೆಯೊಡನೆ ಲಂಕೆಗೆ ಬಂದನು. ಆ ಯುದ್ಧದಲ್ಲಿ ಲಕ್ಷ್ಮಣನು ಮೇಘನಾದನನ್ನು ಸಂಹರಿಸಿದನು. ಆಗ ಮತ್ತೆ ಮಂಡೋದರಿಯು ಯುದ್ಧವನ್ನು ನಿಲ್ಲಿಸಿ ಸೀತೆಯನ್ನು ರಾಮನಿಗೊಪ್ಪಿಸುವಂತೆ ರಾವಣನನ್ನು ಕೇಳಿಕೊಳ್ಳುತ್ತಾಳೆ. ಆದರೆ ಅಹಂಕಾರಿಯಾದ ರಾವಣನು ಆಕೆಯ ಮಾತಿಗೆ ಬೆಲೆ ಕೊಡದೆ ರಾಮನಿಂದ ಹತನಾದನು. ರಾವಣನಿಗೆ ತನ್ನ ಪತ್ನಿ ಮಂಡೋದರಿಯ ಮೇಲೆ ಅಪಾರವಾದ ಪ್ರೀತಿ ಮತ್ತು ಗೌರವಗಳಿದ್ದವು. ತನ್ನ ಪತ್ನಿಯು ಒಬ್ಬ ವಿಧವೆಯ ರೂಪದಲ್ಲಿ ಬದುಕಕೂಡದು ಎಂದು ಯೋಚಿಸಿ ಪ್ರಾಣ ಬಿಡುವ ಮೊದಲು ರಾಮನನ್ನು ಕರೆದು ಮಂಡೋದರಿ ಮತ್ತು ವಿಭೀಷಣರ ವಿವಾಹವನ್ನು ಮಾಡುವಂತೆ ಕೋರಿ ಪ್ರಾಣಬಿಟ್ಟನು.

ರಾಮನು ಮಂಡೋದರಿಯ ಮತ್ತು ವಿಭೀಷಣನ ವಿವಾಹದ ಬಗ್ಗೆ ಪ್ರಸ್ತಾಪ ಮಾಡಿದಾಗ ಇಬ್ಬರೂ ಒಪ್ಪುವುದಿಲ್ಲ. ಆದರೆ ಅದು ರಾವಣನ ಕೊನೆಯ ಇಚ್ಛೆಯಾಗಿತ್ತು ಎಂದು ರಾಮನು ತಿಳಿಸಿದ ಮೇಲೆ ವಿಭೀಷಣನು ಒಪ್ಪಿದನು. ಮಂಡೋದರಿಯು ತನ್ನ ಷರತ್ತುಗಳಿಗೆ ವಿಭೀಷಣನು ಒಪ್ಪುವುದಾದರೆ ಮಾತ್ರ ವಿವಾಹವಾಗುವುದಾಗಿ ತಿಳಿಸಿದಳು. ಆ ಮೂರು ಷರತ್ತುಗಳೇನೆಂದರೆ – ೧) ನಾನು ನನ್ನ ದೇಹವನ್ನು ವಿಭೀಷಣನಿಗೆ ಎಂದೂ ಅರ್ಪಿಸುವುದಿಲ್ಲ, ೨) ವಿಭೀಷಣನು ಎಂದೂ ನನ್ನ ಅಂತಃಪುರವನ್ನು ಪ್ರವೇಶಿಸಕೂಡದು. ೩) ವಿಭೀಷಣನು ಕೇವಲ ತಮ್ಮ ರಾಜ್ಯದ ಏಳಿಗೆಯ ಬಗ್ಗೆ ಮಾತ್ರ ತನ್ನಲ್ಲಿ ಚರ್ಚಿಸಬಹುದು. ವಿಭೀಷಣನು ಈ ಷರತ್ತುಗಳಿಗೆ ಒಪ್ಪಿದ ಮೇಲೆ ಅವನನ್ನು ವಿವಾಹವಾದಳು.

ಹೀಗೆ ಒಬ್ಬ ರಾಕ್ಷಸನನ್ನು ಮದುವೆಯಾಗಿದ್ದರೂ ಸದಾ ಪತಿಯ ಏಳಿಗೆಯನ್ನು ಬಯಸುವ ಒಬ್ಬ ಪತಿವ್ರತೆಯಾಗಿ ಬಾಳಿ, ಬೇರೊಬ್ಬನನ್ನು ಮದುವೆಯಾದರೂ ತನ್ನ ಪಾತಿವ್ರತ್ಯವನ್ನು ಕಾಪಾಡಿಕೊಂಡ ಕಾರಣಕ್ಕಾಗಿ ಈಕೆಯನ್ನು ಪಂಚಮಹಾಕನ್ಯೆಯರಲ್ಲಿ ಒಬ್ಬಳು ಎಂದು ಭಾವಿಸಲಾಗಿದೆ.

3.   ತಾರಾ

       ತಾರಾ ವಾನರ ರಾಜ ವಾಲಿಯ ಪತ್ನಿ, ಶ್ರೀರಾಮನಿಂದ ವಿಧವೆಯಾದವಳು. ಕೆಲವು ಗ್ರಂಥಗಳು ಆಕೆಯು ವಾನರರಾಜ ಸುಷೇಣನ ಮಗಳು ಎಂದು ಉಲ್ಲೇಖಿಸಿದರೆ ಮತ್ತೆ ಕೆಲವು ಗ್ರಂಥಗಳು ಆಕೆಯು ಕ್ಷೀರಸಾಗರ ಮಂಥನದಲ್ಲಿ ಮೇಲೆದ್ದ ಅಪ್ಸರೆ ಎಂದು ಹೇಳಿವೆ. ಹುಟ್ಟು ಹೇಗೇ ಇರಲಿ ಆಕೆ ರೂಪಸಿ, ಅತ್ಯಂತ ಸೂಕ್ಷ್ಮಮತಿ, ರಾಜಕೀಯ ಮುತ್ಸದ್ದಿ, ತನ್ನ ಗಂಡನಾಗಿದ್ದವನಿಗೆ ನಿಜವಾದ ʻಕರಣೇಷು ಮಂತ್ರಿʼ ಆಗಿದ್ದಳು ಎಂದು ತಿಳಿದುಬರುತ್ತದೆ.

       ತಾರಾ ವಾಲಿಯನ್ನು ವರಿಸಿ ಕಿಷ್ಕಿಂಧೆಯ ರಾಣಿಯಾದಳು. ಪ್ರತಿ ಹೆಜ್ಜೆಯಲ್ಲೂ ಪತಿಗೆ ಸೂಕ್ತ ಸಲಹೆಗಳನ್ನು ನೀಡುತ್ತಿರುತ್ತಾಳೆ. ಒಮ್ಮೆ ರಾಕ್ಷಸನೊಬ್ಬನ ಜೊತೆ ಮುಚ್ಚಿದ್ದ ಗುಹೆಯೊಂದರಲ್ಲಿ ಯುದ್ಧ ಮಾಡುತ್ತಿರುತ್ತಾನೆ. ಹೊರಗಿನಿಂದ ಆ ಗುಹೆಯ ಬಾಗಿಲನ್ನು ತೆರೆಯಲು ಸಾಧ್ಯವಿರಲಿಲ್ಲ. ವಾಲಿಯ ತಮ್ಮನಾದ ಸುಗ್ರೀವ ಮತ್ತು ಇತರ ವಾನರ ವೀರರು ಆ ಗುಹೆಯ ಹೊರಗಡೆ ಆತಂಕದಿಂದ ಕಾಯುತ್ತಿದ್ದರು. ಆ ರಾಕ್ಷಸನದು ಬಿಳಿಯ ರಕ್ತ. ಗುಹೆಯ ಒಳಗಿನಿಂದ ಬಿಳಿಯ ರಕ್ತ ಹರಿದು ಬಂದರೆ ಆ ರಾಕ್ಷಸನು ಮರಣಹೊಂದಿರುವುದಾಗಿ ತಿಳಿಯಬಹುದು ಎಂದು ಎದುರು ನೋಡುತ್ತ ಕಾಯುತ್ತಿದ್ದರು. ಕೆಲವು ದಿನಗಳ ನಂತರ ಗುಹೆಯಿಂದ ಕೆಂಪು ರಕ್ತ ಹರಿದು ಬಂದಿತು. ವಾಲಿಯು ಹತನಾದನೆಂದು ಎಲ್ಲರೂ ಭಾವಿಸಿದರು. ಆಗ ವಾಲಿಯ ತಮ್ಮನಾದ ಸುಗ್ರೀವನು ಸಿಂಹಾಸನವನ್ನೇರಿದನು. ಆದರೆ ರಾಕ್ಷಸನನ್ನು ಕೊಂದ ವಾಲಿಯು ಹಿಂದಿರುಗಿ ಬಂದು ಸಿಂಹಾಸನವನ್ನೇರಿದ್ದ ತಮ್ಮ ಸುಗ್ರೀವನನ್ನು ಕೋಪದಿಂದ ಕೊಲ್ಲಲು ಹೋದಾಗ ಸುಗ್ರೀವನು ಋಷ್ಯಮೂಕ ಪರ್ವತದಲ್ಲಿ ಅಡಗಿಕೊಂಡನು. ಸೇಡಿನ ಬೆಂಕಿಯಲ್ಲಿ ಬೇಯುತ್ತಿದ್ದ ವಾಲಿಯು ಸುಗ್ರೀವನ ಪತ್ನಿ ರುಮೆಯನ್ನು ವಶಪಡಿಸಿಕೊಂಡನು. ಸುಗ್ರೀವನ ತಪ್ಪಿಲ್ಲದಿದ್ದರೂ ಅದನ್ನು ಅರ್ಥಮಾಡಿಕೊಳ್ಳುವ ಗೋಜಿಗೆ ಹೋಗುವುದಿಲ್ಲ ವಾಲಿ. ರುಮೆಯನ್ನು ಬಿಟ್ಟುಬಿಡಿ ಇದು ಅಕಾರ್ಯ ಎಂದು ತಾರಳು ಹೇಳಿದರೂ ವಾಲಿ ಅದನ್ನು ಕಿವಿಗೆ ಹಾಕಿಕೊಳ್ಳುವುದಿಲ್ಲ. ಪತ್ನಿಯನ್ನು ಕಳೆದುಕೊಂಡು ಅವಮಾನಗೊಂಡ ಸುಗ್ರೀವನಿಗೆ ವಾಲಿಯನ್ನು ಕೊಲ್ಲುವ ಛಲವು ಮೂಡಿತು. ಸ್ವಲ್ಪವೇ ಸಮಯದನಂತರ ಸುಗ್ರೀವನಿಗೆ ಶ್ರೀರಾಮನ ಪರಿಚಯವಾಗಿ ವಾಲಿಯನ್ನು ಕೊಲ್ಲಲು ರಾಮನ ಸಹಾಯವನ್ನು ಕೋರಿದನು. ರಾಮನು ಒಪ್ಪಿದ ಮೇಲೆ ಸುಗ್ರೀವನು ರಾಮನ ಸೂಚನೆಯಂತೆ ವಾಲಿಯನ್ನು ದ್ವಂದ್ವಕ್ಕೆ ಆಹ್ವನಿಸಿದನು. ಆಗ ತಾರಾ ಕೆಲವೇ ದಿನಗಳಲ್ಲಿ ಸುಗ್ರೀವನಿಗೆ ಇಷ್ಟು ಧೈರ್ಯ ಬರಲು ಹೇಗೆ ಸಾಧ್ಯ ಎಂದು ಯೋಚಿಸಿ ಅವನ ಬೆಂಗಾವಲಾಗಿ ರಾಮನಿರುವುದನ್ನು ಕಂಡುಕೊಂಡಳು. ರಾಮನ ಪರಾಕ್ರಮದ ಬಗ್ಗೆ ತಿಳಿದುಕೊಂಡ ಅವಳು ಪತಿ ವಾಲಿಯ ಬಳಿ ಹೋಗಿ ವಿಷಯವನ್ನು ತಿಳಿಸಿ, ಸುಗ್ರೀವನನ್ನು ಕ್ಷಮಿಸಿ ಅವನನ್ನೇ ರಾಜ್ಯದ ಉತ್ತರಾಧಿಕಾರಿಯನ್ನಾಗಿ ಘೋಷಿಸು ಮತ್ತು ಶ್ರೀರಾಮನ ಸ್ನೇಹ ಬೆಳೆಸು ಎಂದು ಸಲಹೆಯನ್ನು ನೀಡಿದಳು. ಆದರೆ ಕೋಪದಿಂದ ಬುಸುಗುಟ್ಟುತ್ತಿದ್ದ ವಾಲಿಗೆ ತಾರಾಳ ಸಲಹೆ ರುಚಿಸುವುದಿಲ್ಲ. ಆಕೆಯ ಮಾತನ್ನು ಕೇಳಿದ್ದರೆ ಆತ ರಾಮನಿಂದ ವಧೆಯಾಗುವುದು ತಪ್ಪುತ್ತಿತ್ತೇನೋ! ಚತುರಮತಿಯರಾದ ಪತ್ನಿಯರ ಮಾತನ್ನು ಕಡೆಗಣಿಸಿ ಅನೇಕರು ವಿನಾಶ ಹೊಂದಿದ್ದಾರೆ, ಅಂತಹವರಲ್ಲಿ ವಾಲಿಯೂ ಒಬ್ಬ. ವಾಲಿಯು ರಾಮನಿಂದ ಹತನಾದನು. ಸುಗ್ರೀವನು ಮತ್ತೆ ರಾಜನಾಗಿ ತಾರಾಳನ್ನು ವಶಪಡಿಸಿಕೊಂಡು ಆಕೆಯನ್ನು ಮದುವೆಯಾದನು. ತಾರಾಳು ತನ್ನ ಮಗ ಅಂಗದನ ಭವಿಷ್ಯಕ್ಕಾಗಿ ಈ ಮದುವೆಗೆ ಒಪ್ಪುತ್ತಾಳೆ.

       ಈ ಘಟನೆಯಾದಮೇಲೆ ಸುಗ್ರೀವನು ಅರಮನೆಯ ಆಮೋದ ಪ್ರಮೋದಗಳಲ್ಲಿ ತೊಡಗಿ ಆನಂದಿಸುತ್ತಾ ಸೀತೆಯನ್ನು ಹುಡುಕಲು ರಾಮನಿಗೆ ಸಹಾಯ ಮಾಡುವುದಾಗಿ ಕೊಟ್ಟ ವಚನವನ್ನು ಮರೆತನು. ಇದನ್ನು ಗಮನಿಸಿದ ಲಕ್ಷ್ಮಣನು ಕ್ರೋಧದಿಂದ ಸುಗ್ರೀವನ್ನು ಸಂಹರಿಸಲು ಅರಮನೆಗೆ ಬಂದನು. ಲಕ್ಷಣನ ಶಕ್ತಿಯನ್ನು ಅರಿತಿದ್ದ ತಾರಾಳು ಕೂಡಲೇ ಲಕ್ಷ್ಮಣನ ಎದುರಿಗೆ ಬಂದು ಅವನೊಡನೆ ಮಾತನಾಡಿ ಅವನಿಗೆ ಸುಗ್ರೀವನ ಮೇಲೆ ಇದ್ದ ಕ್ರೋಧವನ್ನು ಶಮನಗೊಳಿಸಿ, ಸುಗ್ರೀವನಿಗೆ ರಾಮನ ಕಾರ್ಯದಲ್ಲಿ ಭಾಗಿಯಾಗುವಂತೆ ಸಲಹೆಯನ್ನು ನೀಡಿದಳು. ತನ್ನ ಪತಿಯ ಸ್ಥಾನದಲ್ಲಿ ಇರುವವರ ಬಗ್ಗೆ ಸದಾ ಯೋಚಿಸುತ್ತ ಅವನ ಯೋಗಕ್ಷೇಮಕ್ಕಾಗಿ ಸದಾಕಾಲ ಎಚ್ಚರದಿಂದ ಇದ್ದವಳು ತಾರಾ. ತನ್ನ ಪತಿ, ತನ್ನ ರಾಜ್ಯ ಮತ್ತು ತನ್ನ ಪುತ್ರನ ಯೋಗಕ್ಷೇಮವೇ ಅವಳ ಜೀವನದ ಪರಮಗುರಿಯಾಗಿತ್ತು. ವೈಯಕ್ತಿಕವಾಗಿ ಅವಳು ಕ್ಷೋಭೆಗೆ ಸಿಲುಕಿದರೂ ತನ್ನ ಗುರಿಯಿಂದ ಎಂದೂ ಹಿಂದೆ ಸರಿಯಲಿಲ್ಲ. ಬಹುಶಃ ಅವಳ ಈ ಗುಣದಿಂದಲೇ ಅವಳು ಪಂಚಮಹಾಕನ್ಯೆಯರಲ್ಲಿ ಒಬ್ಬಳು ಎನ್ನುವ ಸ್ಥಾನವನ್ನು ಪಡೆದಿದ್ದಾಳೆ.

       ಕುಂತಿ ಮತ್ತು ದ್ರೌಪದಿಯರ ಬಗ್ಗೆ ಈ ಹೊತ್ತಿಗೆಯಲ್ಲೇ ವಿಶದವಾದ ಲೇಖನವಿರುವುದರಿಂದ, ಅವರ ಬಗ್ಗೆ ಮತ್ತೆ ಇಲ್ಲಿ ಬರೆಯುವ ಅಗತ್ಯವಿರುವುದಿಲ್ಲ. ಎಲ್ಲರೂ ಈ ಪಂಚಕನ್ಯೆಯರ ಜೀವನವನ್ನು ಅರ್ಥಮಾಡಿಕೊಂಡು ಅವರು ತಮ್ಮ ಬಾಳಿನಲ್ಲಿ ಬಂದ ಕಷ್ಟಕಾರ್ಪಣ್ಯಗಳನ್ನು ಹೇಗೆ ಎದುರಿಸಿದರು, ಹೇಗೆ ಪರಿಹರಿಸಿಕೊಂಡರು ಎಂದು ತಿಳಿದು ಅವರಿಂದ ಪ್ರೇರಿತರಾಗಿ ತಮಗೆ ಬರುವ ಕಷ್ಟಗಳನ್ನು ಎದುರಿಸುವ ಛಲವನ್ನು ಬೆಳಿಸಿಕೊಳ್ಳಬೇಕು. ಆಗ ಬಂದ ಕಷ್ಟಗಳು ಸುಲಭವಾಗಿ ಪರಿಹಾರವಾಗುತ್ತವೆ. ಆದ್ದರಿಂದಲೇ “ಈ ಪಂಚಕನ್ಯೆಯರನ್ನು ನಿತ್ಯ ಸ್ಮರಿಸಿದರೆ ಮಹಾ ಪಾತಕಗಳು ನಾಶವಾಗುವವು” ಎಂದು ಹೇಳಲಾಗಿದೆ.

(ಈಲೇಖನವನ್ನು ಎಸ್.‌ ಕೃಷ್ಣಮೂರ್ತಿಯವರ (ಕೃಷ್ಣಕವಿ) ʼಪುರಾಣಪ್ರಸಿದ್ಧ ಪಾತ್ರಗಳುʼ ಎನ್ನುವ ಕೃತಿಯಿಂದ ಆಯ್ದುಕೊಳ್ಳಲಾಗಿದೆ)