ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಭಾಗಿಯಾಗುವ ಆರೋಪಿಗಳಿಗೆ ೧೦ ವರ್ಷದವರೆಗೆ ಜೈಲು ಶಿಕ್ಷೆ ಹಾಗೂ ೧೦ ಕೋಟಿ ರು.ವರೆಗೆ ದಂಡ ವಿಧಿಸುವ ಮಹತ್ವದ 'ಸಾರ್ವಜನಿಕ ಪರೀಕ್ಷೆಗಳಲ್ಲಿ (ಅಕ್ರಮ ತಡೆ) (ತಿದ್ದುಪಡಿ) ಮಸೂದೆ- ೨೦೨೬' ಸಂಸತ್ತಿನ ಉಭಯ ಸದನಗಳಲ್ಲೂ ಅಂಗೀಕಾರವಾಗಿದೆ. ರಾಷ್ಟ್ರಪತಿಗಳ ಅಂಕಿತ ಪಡೆದರೆ ಇದು ಕಾಯ್ದೆಯ ರೂಪ ಪಡೆಯಲಿದೆ. ಪ್ರಶ್ನೆಪತ್ರಿಕೆ ಸೋರಿಕೆ ಎಂಬುದು ದೇಶದ ಉದ್ದಗಲಕ್ಕೂ ಇರುವ ಮಹಾ ಪಿಡುಗು. ಎಷ್ಟೇ ಕಟ್ಟುನಿಟ್ಟಾಗಿ ಪರೀಕ್ಷೆಗಳನ್ನು ನಡೆಸಿದರೂ ಎಲ್ಲೋ ಒಂದು ಕಡೆ ಸೋರಿಕೆಯಾಗುವ ಪ್ರಶ್ನೆಪತ್ರಿಕೆ ಈಗಿನ ಡಿಜಿಟಲ್ ಯುಗದಲ್ಲಿ ಕಾಡ್ಗಿಚ್ಚಿಗಿಂತ ವೇಗವಾಗಿ ಮೂಲೆಮೂಲೆಗಳನ್ನು ವ್ಯಾಪಿಸಿಬಿಡುತ್ತದೆ. ಇದರಿಂದ ಪ್ರಾಮಾಣಿಕ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿ, ಅಕ್ರಮ ಪ್ರಶ್ನೆಪತ್ರಿಕೆಯನ್ನು ಎಷ್ಟು ಕೊಟ್ಟಾದರೂ ಖರೀದಿಸುವ ಶಕ್ತಿ ಹೊಂದಿರುವ ಹಣವಂತರಿಗೆ ಲಾಭವಾಗುತ್ತದೆ ಎಂಬ ಅಭಿಪ್ರಾಯ ಮೊದಲಿನಿಂದಲೂ ಇದೆ. ಇಂತಹದ್ದಕ್ಕೆಲ್ಲಾ ಕಡಿವಾಣ ಹಾಕಲು ಕೇಂದ್ರ ಸರ್ಕಾರ ೨೦೨೪ರಲ್ಲೇ ಕಾಯ್ದೆ ತಂದಿತ್ತು. ಅದಾದ ಬಳಿಕವೂ ನಡೆದ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ, ಅದರ ವಿರುದ್ಧ ಜಿರಳೆ ಪಕದ ಹೋರಾಟ, ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಬೆನ್ನಲ್ಲೇ ಕಾಯ್ದೆಗೆ ಈಗ ಮತ್ತಷ್ಟು ಬಲ ತುಂಬಲಾಗಿದೆ.

ಸಂಬಂಧಿಸಿದಂತೆ ಸ್ಥಾಪಿಸಲಾಗಿದೆ. ಅವು 'ಶೀಘ್ರಗತಿ' ಕೋರ್ಟ್ ಗಳಾಗಿದ್ದರೂ, 2.45 ಲಕ್ಷ ಕೇಸ್ ಗಳು ಆ ನ್ಯಾಯಾಲಯದಲ್ಲೇ ಕೊಳೆಯುತ್ತಿವೆ. ಪ್ರಶ್ನೆಪತ್ರಿಕೆ ಸೋರಿಕೆ ವಿಷಯದಲ್ಲೂ ಅದೇ ರೀತಿ ಆದರೆ ಏನು ಪ್ರಯೋಜನ?

ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಭಾಗಿಯಾಗುವ ಆರೋಪಿಗಳ ವಿರುದ್ಧದ ತನಿಖೆಯನ್ನು ೨ ತಿಂಗಳಲ್ಲಿ ಮುಗಿಸಬೇಕು, ಮೂರು ತಿಂಗಳೊಳಗೆ ನ್ಯಾಯಾಲಯಗಳು ಶಿಕ್ಷೆ ಪ್ರಕಟಿಸಬೇಕು, ಇದಕ್ಕಾಗಿ ಶೀಘ್ರಗತಿ ನ್ಯಾಯಾಲಯಗಳನ್ನು ಸ್ಥಾಪಿಸಬೇಕು ಎಂಬುದು ಈ ವಿಧೇಯಕದಲ್ಲಿರುವ ಗಮನಾರ್ಹ ಅಂಶ. ಮಸೂದೆಯಲ್ಲಿರುವ ಕ್ರಮಗಳೇ ಜಾರಿಗೆ ಬಂದರೆ ಪರಿಣಾಮಗಳು ಆಗಬಹುದು. ಆದರೆ ಇಲ್ಲಿ ಸಮಸ್ಯೆ ಇದೆ. ಪ್ರಶ್ನೆಪತ್ರಿಕೆ ಸೋರಿಕೆಯಾದ ಬಳಿಕ ಶಿಕ್ಷಿಸುವ ಕಾಯ್ದೆ ಇದು. ಆದರೆ ಪ್ರಶ್ನೆಪತ್ರಿಕೆ ಸೋರಿಕೆಯೇ ಆಗದಂತೆ ಕೈಗೊಳ್ಳಬೇಕಾದ ಬಿಗಿ ಕ್ರಮಗಳ ಬಗ್ಗೆ ಇನ್ನೂ ಚರ್ಚೆಯಾದಂತೆ ಇಲ್ಲ. ಹಾಗೆಯೇ ಶೀಘ್ರಗತಿ ನ್ಯಾಯಾಲಯಗಳನ್ನು ಈಗಾಗಲೇ ಹಲವು ಅಪರಾಧಗಳಿಗೆ ಸಂಬಂಧಿಸಿದಂತೆ ಸ್ಥಾಪಿಸಲಾಗಿದೆ. ಅವು 'ಶೀಘ್ರಗತಿ' ಕೋರ್ಟ್‌ ಗಳಾಗಿದ್ದರೂ, ೨.೪೫ ಲಕ್ಷ ಕೇಸ್‌ಗಳು ಆ ನ್ಯಾಯಾಲಯದಲ್ಲೇ ಕೊಳೆಯುತ್ತಿವೆ. ಪ್ರಶ್ನೆಪತ್ರಿಕೆ ಸೋರಿಕೆ ವಿಷಯದಲ್ಲೂ ಅದೇ ರೀತಿ ಆದರೆ ಏನು ಪ್ರಯೋಜನ? ಹೀಗಾಗಿ ಕಾಯ್ದೆ ರೂಪಿಸುವುದರ ಜತೆ ಅದು ಪರಿಣಾಮಕಾರಿಯಾಗಿ ಅನುಷ್ಠಾನವಾಗುವಂತೆ ನೋಡಿಕೊಳ್ಳಬೇಕಾಗಿದೆ. ಈ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಯಪ್ರವೃತ್ತವಾಗಬೇಕಿದೆ. ಅದಾಗದೇ ಹೋದರೆ, ಈಗ ಇರುವ ಕಾಯ್ದೆಗಳಂತೆ ಇದು ಮತ್ತೊಂದು ಆಗುವುದು ನಿಶ್ಚಿತ.

ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೦೧-೦೮-೨೦೨೬

ಚಿತ್ರ ಕೃಪೆ: ಅಂತರ್ಜಾಲ ತಾಣ