ಬೆಳ ಬೆಳಕು ಹೀಗೆ ಬೆಳಕಾಗಿ ಬರಲಿ

ಬೆಳಗಲ್ಲಿ ಬೆಳಕ ತರಲಿ

ಬೆಳೆದಿರುವ ಪ್ರಕೃತಿ ಬೆಳಕಲ್ಲಿ ನಿಲಲಿ

ಬೆಳಗಿನಲಿ ತೊನೆದು ಬರಲಿ

ಸುಳಿ ಸುಳಿಯ ಗಾಳಿ ಸುಳಿಯುತಲೆ ಬರಲಿ

ಸುಳಿಯಲೆಗೆ ಸೊಕ್ಕಿ ನಿಲಲಿ

ಸುಳಿಯೆಂಬ ಸೊಳೆಯ ಬಿಡಿಸುತಲೆ ಇರಲಿ

ಸುಳಿಯೊಲವು ಸುತ್ತ ಗೆಲಲಿ

ಮಳೆ ಮಳೆಯ ತಂಪು ಸುತ್ತೆಲ್ಲ ಇರಲು

ಹೊಳೆಯಲ್ಲಿ ಜಲದ ಹೊನಲು

ಮಳೆ ಹನಿಯ ಜೊತೆಗೆ ಎಲೆ ಆಡುತಿರಲು

ಮಳೆರಾಯ ಮತ್ತೆ ನಗಲು

ಬಳು ಬಳುಕಿದಾಗ ನನ್ನೊಲವೆ ಬಂದೆ

ಬಳುಕುತಲೆ  ಸನಿಹ ನಿಂದೆ

ಬೆಳೆದಾಗ ಸವಿಯ ಹರಿಸುತಲೆ ಬಂದೆ

ಬಳಿ ಸೇರಿ ಪ್ರೀತಿ ತಂದೆ 

ಕಳೆ ಕಳೆಯಲೀಗ ರಾತ್ರಿಯಲಿ ಚಂದ

ಕಳೆಯಾಯ್ತು ಬೆಳಕಿನಂದ

ಕಳೆ ತುಂಬಿ ಜೀವ ಮನ ಸವಿಯ ಅಂದ

ಕಳೆಯೊಳಗೆ ಬದುಕಿನಂದ

-ಹಾ. ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ