ಮರೆತೆ ಏತಕೆ ಎನ್ನ,ಮನದರಸಿ ನನ್ನವಳೆ

ದೂರ ತೀರವ ಸೇರಿ,ಅಲ್ಲೆ ನೆಲೆಸಿ

ಸೆಡವದುವು ಇಲ್ಲದೆ,ಬಾಳು ಸಾಗುತಲಿಹುದು

ಕೊನೆಯ ಉಸಿರಿನ ಮೊದಲು, ಬಾರೆ ಸಹಿಸಿ


ಕಷ್ಟಗಳು ಎಷ್ಟಿಲ್ಲ,ಕಲ್ಲು ಮುಳ್ಳಿನ ಹಾದಿ 

ಮನದ ಒಳಗಡೆಯೆಲ್ಲ,ಬರಿದೆ ನೋವು 

ಹಾಗೆ ಎನುತಲಿ ನಡೆದೆ,ನೀನಂದು ಕಡೆಗಣಿಸಿ 

ಒಬ್ಬಂಟಿ ನಾನಾದೆ,ಸುತ್ತ ನೋವು


ಅಂದು ಕೈಹಿಡಿದಾಗ,ಬಿಡದೆ ಸಾಗುವ ಎಂದೆ 

ಇಂದೇಕೆ ಕೈಮುರಿದು,ಎತ್ತ ಹೋದೆ 

ಜಂತಿಮುಳ್ಳಲಿ ಇಣಚಿ, ಸಿಲುಕಿರುವ ರೀತಿಯಲಿ 

ಸಿಲುಕಿರುವೆ ಸುಖವಿಲ್ಲ,ನನ್ನ ಒಲವೆ


ಹೀಗೆ ಬದುಕದು ಬೇಕೆ,ಸನಿಹ ನೀನಿರದಿರಲು 

ನಾನೆ ಬರುವೆನು ನಿನ್ನ, ಸನಿಹಕಿಂದು

ಎಲ್ಲ ತೊರೆಯುತಲೀಗ, ಪಿಸುಮಾತ ಕೇಳಲು 

ಮುದದಿಂದ ಬರುತಿಹೆನು, ಸೇರಲೆಂದು 

-ಹಾ. ಮ ಸತೀಶ ಬೆಂಗಳೂರು