ಕಳೆದ ವಾರ ಕೀನ್ಯಾ ದೇಶದಲ್ಲಿ ಕೀಟನಾಶಕಗಳಿಂದಾಗಿ ಹದಿನೈದು ಆನೆಗಳು ಮೃತ್ಯುವಶವಾದ ಹೃದಯವಿದ್ರಾವಕ ವರದಿಯನ್ನು ಓದಿ ಮನಸ್ಸು ಭಾರವಾಯಿತು. ಪರಿಸರದ ಮೇಲೆ ಒಂದಿಷ್ಟಾದರೂ ಪ್ರೀತಿ ಇಟ್ಟುಕೊಂಡಿರುವ ಯಾರಿಗೇ ಆಗಲಿ, ಈ ಸುದ್ದಿ ಬೇಸರ ತರಿಸದೇ ಇರದು. ಸುತ್ತಲಿನ ಟೊಮ್ಯಾಟೊ ಹೊಲಗಳಿಗೆ ಸಿಂಪಡಿಸಿದ್ದ ಕೀಟನಾಶಕದಿಂದಾಗಿ ಇವು ಸತ್ತವು ಎಂದು ಮೊದಲಿಗೆ ವರದಿಯಾಯಿತು. ಪಾರ್ಶ್ವವಾಯು ಹೊಡೆದಂತೆ ಆನೆಗಳು ನೆಲಕ್ಕುರುಳಿ, ನಂತರ ಪ್ರಾಣ ಬಿಟ್ಟವು ಎಂದು ಮತ್ತಷ್ಟು ಬೇಸರ ತರಿಸುವ ಸುದ್ದಿ ಅಂತರರಾಷ್ಟ್ರೀಯ ಪತ್ರಿಕೆಗಳ ಮುಖಪುಟದಲ್ಲಿ ಇಂದು ಕಂಡುಬಂದಿತು.
ಕೀಟನಾಶಕಗಳಿಂದ ನಾವು ಕೀಟಗಳನ್ನು ಮಾತ್ರ ನಾಶ ಮಾಡುತ್ತಿಲ್ಲ, ಪ್ರಾಣಿಗಳನ್ನು ಕೂಡ ಕೊಲ್ಲುತ್ತಿರುವೆವು — ಅಲ್ಲದೆ, ನಮ್ಮದೇ ಬದುಕನ್ನೂ ವಿಷಮಯವಾಗಿಸಿಕೊಂಡಿರುವೆವು.
ಇದು ಕೀನ್ಯಾದ ಕಥೆ ಮಾತ್ರವಲ್ಲ. ಬೆಂಗಳೂರು ಗ್ರಾಮಾಂತರ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಅದೆಷ್ಟೋ ನವಿಲುಗಳು ದಿನನಿತ್ಯ ಅಳಿಯುತ್ತಿವೆ. ಮೊಲಗಳು ಸತ್ತು ಬಿದ್ದಿರುವುದು ಆಗಾಗ ಕಣ್ಣಿಗೆ ಬೀಳುತ್ತದೆ. ನಾವು ಪ್ರತಿನಿತ್ಯ ಬಳಸುವ ಸೊಪ್ಪುಗಳಿಗೇ — ಅತಿ ಹೆಚ್ಚು ಕೀಟನಾಶಕ ಸಿಂಪಡಿಸಲಾಗುತ್ತಿದೆ. ಒಂದೆಡೆ ಕೀಟನಾಶಕಗಳು, ಮತ್ತೊಂದೆಡೆ ಎಂಜೈಮ್ಗಳು — ನಮ್ಮ ಆಹಾರ ಹೆಜ್ಜೆಹೆಜ್ಜೆಗೂ ರಾಸಾಯನಿಕಗಳಿಂದ ತುಂಬಿಕೊಳ್ಳುತ್ತಿದೆ.
ಪ್ರತಿದಿನ ನಾವು ತಿನ್ನುವ ಅನ್ನ, ಸೊಪ್ಪು, ತರಕಾರಿ, ಹಣ್ಣುಗಳಲ್ಲಿ ವಿಷ ಬೆರೆಯುತ್ತಲೇ ಇದೆ. ಆದರೆ ಈ ಸಮಸ್ಯೆಯ ಹಂದರವನ್ನು ನಾವು ಇನ್ನೂ ಸರಿಯಾಗಿ ಅಳೆದು ನೋಡಿಲ್ಲ, ಆಗುತ್ತಿರುವ ತೊಂದರೆಯನ್ನು ಅರ್ಥಮಾಡಿಕೊಂಡಿಲ್ಲ.
'ಸೈಲೆಂಟ್ ಸ್ಪ್ರಿಂಗ್' - ಬಿಡಿಸಿಡುವ ಡಿಡಿಟಿ ಕಥೆ

ಈ ಸಮಸ್ಯೆ ಇಂದು ನೆನ್ನೆಯದಲ್ಲ. ೧೯೬೨ರಲ್ಲೇ ರೇಚಲ್ ಕಾರ್ಸನ್ (Rachel Carson) ಎಂಬ ಜೀವಶಾಸ್ತ್ರಜ್ಞೆ ಬರೆದ 'ಸೈಲೆಂಟ್ ಸ್ಪ್ರಿಂಗ್' ಎಂಬ ಪುಸ್ತಕ, ಡಿಡಿಟಿ (DDT) ಎಂಬ ಕೀಟನಾಶಕದಿಂದ ಏನೆಲ್ಲ ಹಾನಿ ಸಂಭವಿಸಿತು ಎಂಬುದನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿತ್ತು. ವಸಂತ ಬಂದರೂ ಹಕ್ಕಿಗಳ ಇಂಚರ ಕೇಳದ, ಮೂಕವಾದ ಒಂದು ಊರಿನ ಚಿತ್ರಣದಿಂದಲೇ ಪುಸ್ತಕ ಆರಂಭವಾಗುತ್ತದೆ. ವರ್ಣರಂಜಿತವಾಗಿ ಲವಲವಿಕೆಯಿಂದ ಇರಬೇಕಾದ ಪರಿಸರಕ್ಕೆ ಸ್ಮಶಾನ ಮೌನ ತಂದದ್ದು ರಾಸಾಯನಿಕ ವಿಷ.
ಆದರೆ ಅರವತ್ತು ವರ್ಷಗಳ ನಂತರವೂ ಕಾರ್ಸನ್ ಎತ್ತಿದ ಪ್ರಶ್ನೆಗಳು ನಮ್ಮನ್ನು ಕಾಡುತ್ತಲೇ ಇವೆ. ಈಗ ಸಮಸ್ಯೆಯ ತೀವ್ರತೆ ಹೆಚ್ಚಾಗಿದೆ!
ನಾನು ಸಣ್ಣವನಿದ್ದಾಗ, ಪಕ್ಕದ ಅಂಗಡಿಯಲ್ಲಿ ಇರುವೆಗಳಿಗೆಂದು ಡಿಡಿಟಿ ಹಾಕುತ್ತಿದ್ದುದನ್ನು ನೋಡಿದ್ದೆ. ಒಮ್ಮೆ ಹಾಕಿದ ಡಿಡಿಟಿ ಎಷ್ಟೋ ದಿನ ಅಲ್ಲಿಂದ ಕದಲುತ್ತಿರಲಿಲ್ಲ. ಆದರೆ ಕಾಲಕ್ರಮೇಣ ಇರುವೆಗಳೇ ಅದಕ್ಕೆ ಹೊಂದಿಕೊಂಡು ಸಾಯದಂತಾಗಿಬಿಟ್ಟವು! ಸಾಯದ ಇರುವೆಗೆ ಅಂಗಡಿಯ ಮಾಲೀಕರು ಇನ್ನೂ ಹೆಚ್ಚು ಡಿಡಿಟಿ ಹಾಕುತ್ತಿದ್ದರು!
ರೈತರು ತರಕಾರಿ, ಧಾನ್ಯಗಳನ್ನು ಬೆಳೆಯುತ್ತಿರುವ ಜಮೀನುಗಳ ಕಥೆಯೂ ಇದೇ. ಗಿಡಗಳಿಗೆ ಹುಳ ಹತ್ತಿದಾಗ ಮೊದಲ ಬಾರಿ ಹೊಡೆದ ಕೀಟನಾಶಕ ಎರಡನೆಯ ಬಾರಿಗೆ ಆಗಲೇ ಮೊದಲಿನಷ್ಟು ಪರಿಣಾಮ ಬೀರುವುದಿಲ್ಲ. ಹೀಗಾಗಿ ಮತ್ತೆ ಹೆಚ್ಚಿನ ಪ್ರಮಾಣದಲ್ಲಿ ಸಿಂಪಡಿಸಬೇಕಾಗುತ್ತದೆ. ಕೀಟನಾಶಕದ ಪ್ರಮಾಣ ಏರುತ್ತಿದ್ದಂತೆ, ಅದರಿಂದ ಆಗುವ ಹಾನಿಯೂ ಜಾಸ್ತಿಯಾಗುತ್ತಾ ಹೋಗುತ್ತದೆ. ಇದೊಂದು ಕೊನೆಯಿಲ್ಲದ ಜಾಡು.
ಕಾರ್ಸನ್ ಇದನ್ನೇ "ಪ್ರತಿರೋಧದ ಬೆಳವಣಿಗೆ" (development of resistance) ಎಂದು ವಿವರಿಸಿದ್ದಾರೆ. ಕೀಟನಾಶಕ ಬಳಸಿದಷ್ಟೂ ಕೀಟಗಳ ವಂಶವಾಹಿ (genetic) ರಚನೆಯೇ ಬದಲಾಗಿ, ಅವು ಹೆಚ್ಚು ಬಲಿಷ್ಠವಾಗುತ್ತವೆ. ಸಾಯುವುದು ದುರ್ಬಲ ಕೀಟಗಳಷ್ಟೇ; ಪ್ರಬಲವಾದವು ಉಳಿದು ಮತ್ತಷ್ಟು ಸಂತಾನ ಬೆಳೆಸುತ್ತವೆ. ಕೊನೆಗೆ ನಾವು ಕೀಟಗಳನ್ನು ಗೆಲ್ಲುವ ಬದಲು, ನಮ್ಮದೇ ಮಣ್ಣನ್ನೂ, ನೀರನ್ನೂ, ಆಹಾರವನ್ನೂ ವಿಷಪೂರಿತಗೊಳಿಸಿಕೊಳ್ಳುತ್ತೇವೆ. ಇದಲ್ಲದೆ ಕೆಲವು ಕೀಟಗಳು ಅಳಿದು ಮತ್ತು ಇನ್ನೂ ಕೆಲವು ಕೀಟಗಳು ಪ್ರಬಲವಾಗುವುದರಿಂದ ಪರಿಸರದಲ್ಲಿರುವ ಸಮತೋಲನ ಬಿಗಡಾಯಿಸುತ್ತದೆ - ಇದರಿಂದ ಸುಧಾರಿಸಿಕೊಳ್ಳುವುದು ಇನ್ನೂ ಕಷ್ಟ!
ಕ್ಯಾನ್ಸರ್ ಬರುತ್ತದೆಂದರೂ ನಾವು ಬಳಸುತ್ತಿರುತ್ತೇವೆ!
ಡಿಡಿಟಿಯಿಂದಾದ ಹಾನಿ ಒಂದೆರಡಲ್ಲ. ಆಗಿನ ಕಾಲದಲ್ಲೇ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಿದಾಗ ಇದು ಕ್ಯಾನ್ಸರ್ ತರುತ್ತದೆ ಎಂಬುದನ್ನು ಕಂಡುಕೊಂಡಿದ್ದರು. ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆಯ ಡಾ. ಡಬ್ಲ್ಯೂ. ಸಿ. ಹ್ಯೂಪರ್ರಂಥ ತಜ್ಞರು ಇದರ ಅಪಾಯದ ಬಗ್ಗೆ ಸ್ಪಷ್ಟವಾಗಿ ಎಚ್ಚರಿಸಿದ್ದರು ಎಂದು ಕಾರ್ಸನ್ ದಾಖಲಿಸುತ್ತಾರೆ.
ಅದಾಗಿಯೂ ರೇಷನ್ ಮಳಿಗೆಗಳಲ್ಲಿ; ಅಕ್ಕಿ, ಧಾನ್ಯ, ಬೇಳೆಗಳನ್ನು ಸಂಗ್ರಹಿಸುವ ಉಗ್ರಾಣಗಳಲ್ಲಿ — ಯಾವ ಅಡ್ಡಿಯೂ ಇಲ್ಲದೆ ಡಿಡಿಟಿ ಬಳಕೆಯಾಗುತ್ತಿತ್ತು. ಈಗಲೂ ಸಲೀಸಾಗಿ ಹಾಗೂ ಸರಾಗವಾಗಿ ಕಳೆ ನಾಶಕಗಳನ್ನು ನಾವು ಬಳಸುತ್ತಿದ್ದೇವೆ.
ಪರಿಸರದಲ್ಲಿ "ಯಾವುದೂ ಏಕಾಂಗಿಯಲ್ಲ"
ಕಾರ್ಸನ್ ಪುಸ್ತಕದ ಒಂದು ಮಾತು ಮನಸ್ಸಿನಲ್ಲಿ ಶಾಶ್ವತವಾಗಿ ಮನೆಮಾಡುತ್ತದೆ — ಪ್ರಕೃತಿಯಲ್ಲಿ ಯಾವುದೂ ಏಕಾಂತದಲ್ಲಿ ಬದುಕಲಾರದು. ಭೂಮಿಯ ಸಸ್ಯಸಂಪತ್ತು "ಜೀವಜಾಲ"ದ ಒಂದು ಭಾಗ; ಇಲ್ಲಿ ಗಿಡ-ಮಣ್ಣು, ಗಿಡ-ಗಿಡ, ಗಿಡ-ಪ್ರಾಣಿ — ಎಲ್ಲದರ ನಡುವೆಯೂ ಆಪ್ತ, ಅನಿವಾರ್ಯ ಸಂಬಂಧವಿದೆ ಎಂದು ಆಕೆ ಬರೆಯುತ್ತಾರೆ.
Chemicals sprayed on croplands or forests or gardens lie long in soil, entering into living organisms, passing from one to another in a chain of poisoning and death.
("ಹೊಲ, ಕಾಡು, ತೋಟಗಳಿಗೆ ಸಿಂಪಡಿಸಿದ ರಾಸಾಯನಿಕಗಳು ಬಹುಕಾಲ ಮಣ್ಣಿನಲ್ಲಿ ಉಳಿದು, ಜೀವಿಗಳ ಒಳಹೊಕ್ಕು, ಒಂದರಿಂದ ಇನ್ನೊಂದಕ್ಕೆ ವಿಷ-ಮೃತ್ಯುವಿನ ಸರಪಳಿಯಾಗಿ ಹರಿಯುತ್ತವೆ.")
ಟೊಮ್ಯಾಟೊ ಹೊಲಕ್ಕೆ ಹೊಡೆದ ವಿಷ ಆನೆಗಳ ಪ್ರಾಣ ತೆಗೆಯುತ್ತದೆ; ಸೊಪ್ಪಿಗೆ ಹೊಡೆದ ವಿಷ ನವಿಲುಗಳನ್ನೂ, ಕೊನೆಗೆ ನಮ್ಮನ್ನೂ ತಲುಪುತ್ತದೆ. ಒಂದೆಡೆ ಸಿಂಪಡಿಸಿದ್ದು ಇನ್ನೆಲ್ಲೋ ಪರಿಣಾಮ ಬೀರುತ್ತದೆ — ಇದೇ "ಏಕಾಂತವಿಲ್ಲದ" ಪ್ರಕೃತಿಯ ಕಹಿಯಾದ ಸತ್ಯ.
ದಿನನಿತ್ಯ ಹೆಚ್ಚಾಗುತ್ತಿರುವ ಕೀಟನಾಶಕಗಳ ಸೈನ್ಯ ಕೀಟಗಳನ್ನು ನಾಶ ಮಾಡುತ್ತಿವೆಯೋ, ಮನುಷ್ಯರನ್ನೇ ನಿರ್ನಾಮ ಮಾಡುತ್ತಿವೆಯೋ? - ಇದೊಂದು ನಾವೆಲ್ಲರೂ ಕೇಳಿಕೊಳ್ಳಬೇಕಾಗಿರುವ ಪ್ರಶ್ನೆಯಾಗಿದೆ.
ಚಿತ್ರ ಕೃಪೆ: nation.africa
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!