ಶಿವಮೊಗ್ಗವೆಂದ ಕೂಡಲೇ ನನಗೆ ನೆನಪಾಗುವುದು ಅಲ್ಲಿನ ನೀರು. ತುಂಗಾ ನದಿಯ ನೀರಿನಲ್ಲಿ ಇರುವ ಸಿಹಿ ಜಗತ್ತಿನ ಮತ್ಯಾವುದೂ ನದಿಯ ನೀರಿನಲ್ಲಿ ಇರಲಿಕ್ಕಿಲ್ಲ. ನಮ್ಮ ತಂದೆಯವರ ಊರು ಶಿವಮೊಗ್ಗದ ಹತ್ತಿರ ಇರುವ ಹೊಳೆಹೊನ್ನೂರು. ನಮ್ಮ ಅಜ್ಜನ ಮನೆಯಿಂದ ಸ್ವಲ್ಪವೇ ದೂರದಲ್ಲಿ ಕೂಡಲಿಯ ತುಂಗಭದ್ರ ಸಂಗಮ ಸ್ಥಾನವಿದೆ. ಅವರ ಮನೆಯಿಂದ ನಡೆದು ಹೋಗಬಹುದಿತ್ತಾದರೂ, ನಾವುಗಳು ಗಾಡಿಯೋ ಬಸ್ಸೋ ಹಿಡಿದು ಕೂಡಲಿಯವರೆಗೂ ಹೋಗುತ್ತಿದ್ದೆವು. ಕೂಡಲಿಯಲ್ಲಿ ಸುಂದರವಾದ ಸಂಗಮೇಶ್ವರ ದೇವಸ್ಥಾನವಿದೆ, ಶಂಕರ ಮಠ ಕೂಡ ಇದೆ.
ಹೊಳೆಹೊನ್ನೂರಿನಲ್ಲಿ ಇರುವುದು ಭದ್ರಾ ನದಿ. ಶಿವಮೊಗ್ಗಕ್ಕೆ ತೀರ್ಥಹಳ್ಳಿ ಆಗಿ ಬರುವುದು ತುಂಗಾ ನದಿ. ಶಿವಮೊಗ್ಗದಲ್ಲಿ ಮಳೆಗಾಲ ಬಂತೆಂದರೆ ಚಾನೆಲ್ ನೀರು ಉಕ್ಕಿ ಹರಿಯುವುದು, ಚಾನೆಲ್ ತುಂಬುವುದು. 8ನೇ ಕ್ಲಾಸಿನ ಪ್ರಾರಂಭದಲ್ಲಿ ಒಂದೆರಡು ತಿಂಗಳು ಕಳೆದು ನಾನು ಮೊದಲಿಗೆ ಶಿವಮೊಗ್ಗಕ್ಕೆ ಬಂದು ಸೇರಿದೆ. ಶಾಲೆಗೆ ಸೈಕಲ್ನಲ್ಲಿ ಹೋಗಬೇಕೆಂದು ಮೊದಲನೇ ದಿನ ಹೊರಟಾಗ ಭರ್ ಎಂದು ಮಳೆ ಸುರಿಯುತ್ತಿತ್ತು. ಆಗ ಶಿವಮೊಗ್ಗದಲ್ಲಿ ಸುರಿಯುತ್ತಿದ್ದ ಮಳೆ - ಮಳೆಯೋ ಮಳೆ ಅದು! ದಟ್ಟ ಮಲೆನಾಡಿನಲ್ಲಿ ಸುರಿದಂತೆ ಭರ್ ಎಂದು ಸುರಿಯುತ್ತಿತ್ತು. ಚಿಕ್ಕ ಚಿಕ್ಕ ಕಲ್ಲುಗಳು ನಿಮ್ಮ ಮುಖಕ್ಕೆ ಅಪ್ಪಳಿಸಿದಂತೆ ಹನಿಗಳು ಮುಖಕ್ಕೆ ಹೊಡೆಯುತ್ತಿದ್ದವು.
ನಾನು ಸೈಕಲಿನಲ್ಲಿ ಲಕ್ಷ್ಮಿ ಟಾಕೀಸ್ ಬಳಿ ಇರುವ ಚಾನೆಲ್ ದಾಟುವ ಹೊತ್ತಿಗೆ ಝರ್ ಎಂದು ಜಾರಿ ನೆಲಕ್ಕೆ ಅಪ್ಪಳಿಸಿ ಕೆಸರಿನಲ್ಲಿ ಬಿದ್ದುಬಿಟ್ಟೆ. ಪುಣ್ಯಕ್ಕೆ ರೈನ್ ಕೋಟ್ ಹಾಕಿಕೊಂಡಿದ್ದೆನು, ಬಿಳಿಯ ಬಟ್ಟೆ ಗಲಿಜಾಗಲಿಲ್ಲ! ಜೊತೆಗೆ ಬಂದಿದ್ದ ಗೆಳೆಯ ಏನೂ ಆಗಿಲ್ಲವೆನ್ನುವಂತೆ "ನಡಿ ಹೊರಡೋಣ" ಎಂದ. ಮೈಕೈ ನೋವು ಮಾಡಿಕೊಂಡವನು ನಾನು ಆಶ್ಚರ್ಯದಿಂದ ಅವನತ್ತ ನೋಡಿದ್ದೆ. ಅವನೇ ಏಕೆ, ಅಲ್ಲಿ ಸುತ್ತಮುತ್ತಲೂ ಇದ್ದ ಜನರೂ ಕೂಡ ಹಾಗೆಯೇ ರಿಯಾಕ್ಟ್ ಮಾಡಿದ್ದರು. ಬಹುಶಃ ಅವರಿಗೆ ಇದು ಎಲ್ಲ ಮಾಮೂಲು.
ಒಂದು ಕ್ಷಣ ತಿರುಗಿ ಹಿಂದೆ ಚಾನೆಲ್ ಕಡೆ ನೋಡಿದರೆ ಚಾನೆಲ್ ನೀರು ತುಂಬಿ ಹರಿಯುತ್ತಿತ್ತು. ಈಗಲೋ ಆಗಲೋ ಆ ನೀರು ರಸ್ತೆಗೂ ಬರುವಂತೆ ಕಾಣುತ್ತಿತ್ತು. 'ಮಲೆಗಳಲ್ಲಿ ಮದುಮಗಳು' ಕಾದಂಬರಿಯ ನಾಯಿಗುತ್ತಿ ಮಳೆಯನ್ನು ಲೆಕ್ಕಿಸದೆ ನಡೆದಂತೆ, ಶಿವಮೊಗ್ಗದ ಮಳೆಯಲ್ಲಿ ರೈನ್ ಕೋಟ್ ಹಾಕಿಕೊಂಡು ನಾವು "ಇದು ಸರ್ವೇ ಸಾಮಾನ್ಯ" ಎನ್ನುವಂತೆ ಹೋಗುತ್ತಿದ್ದೆವು.
ಆಗ ಸಾಗರದ ಕಡೆ ವಿನೋಭಾ ನಗರ ಹಾಗೂ ಗೋಪಾಳವೇ ಊರಿನ ಕೊನೆ. ಅಲ್ಲಿಂದ ಮುಂದೆ ಬರೀ ಮರಗಳು ಮತ್ತು ಕಾಡು ಎಂದು ನಮಗೆ ಅನಿಸುತ್ತಿತ್ತು. ರಸ್ತೆಯೂ ಸರಿ ಇಲ್ಲದುದರ ಕಾರಣ ಆ ಕಡೆ ನಾವು ಸೈಕಲ್ ಹಾಕಿಕೊಂಡು ಕೂಡ ಹೋಗುತ್ತಿರಲಿಲ್ಲ. ಆಗಷ್ಟೇ ವಿನೋಭಾ ನಗರ ಹಾಗೂ ಗೋಪಾಳದ ನಡುವೆ ಚೆಂದವಾದ, ವಿಶಾಲವಾದ ಒಂದು ರಸ್ತೆ ನಿರ್ಮಾಣಗೊಂಡಿತ್ತು. ಅಡಿಕೆ ಮಂಡಿಗಳ ಮೂಲಕ ಹಾಗೂ ಹಾಪ್ಕಾಮ್ಸ್ ಮಳಿಗೆಗಳ ಮೂಲಕ ಹಾದುಹೋಗುತ್ತಿದ್ದ ಈ ಆರ್ ಎಂ ಸಿ ಯಾರ್ಡ್ ರಸ್ತೆಯಲ್ಲಿ ಗಾಡಿ ಓಡಿಸುವುದೆಂದರೆ ಬಹಳ ಖುಷಿ ಕೊಡುತ್ತಿತ್ತು.
ವಿನೋಭಾ ನಗರದ ವಿಕಾಸ ಸ್ಕೂಲ್ ಬಳಿ ಗಂಡ-ಹೆಂಡತಿ ಇಬ್ಬರು ತುಂಬಾ ರುಚಿಯಾದ ಪಾನಿಪುರಿ ಮಾಡುತ್ತಿದ್ದರು. ಹೊರಗಡೆ ಹೆಚ್ಚಾಗಿ ತಿನ್ನದ ನಮ್ಮ ಅಮ್ಮ ಕೂಡ ಅಪರೂಪಕ್ಕೆ ಇವರ ಬಳಿ ನಮ್ಮನ್ನು ಕರೆದುಕೊಂಡು ಹೋಗುತ್ತಿದ್ದರು. ವಿಕಾಸ ಸ್ಕೂಲಿನಲ್ಲಿ ಚೆಸ್ ಆಡಲು ಶನಿವಾರದ ಹೊತ್ತು ಜನ ಸೇರುತ್ತಿದ್ದರು. ಗೆದ್ದವರಿಗೆ ಆ ದಿನ ಒಂದು ಬಿಸ್ಕೆಟ್ ಪ್ಯಾಕೆಟ್ ಸಿಗುತ್ತಿತ್ತು!
ಜನಪ್ರಿಯ ಹಿಂದಿ ಸಿನಿಮಾ ಬಂದರೆ ಅದು ಲಕ್ಷ್ಮಿ ಟಾಕೀಸ್ ಗೂ ಬರುತ್ತಿತ್ತು. ಅದನ್ನು ಬಿಟ್ಟರೆ ಹಿಂದಿ ಸಿನಿಮಾ ನೋಡಬಯಸುವವರು ವಂದನ ಟಾಕೀಸ್ ಗೆ ಹೋಗಬೇಕಾಗಿತ್ತು. ಇತ್ತೀಚೆಗೆ ಶಿವಮೊಗ್ಗಕ್ಕೆ ಹೋದಾಗ ಇಲ್ಲೆಲ್ಲ ಆಗಿರುವ ಬದಲಾವಣೆಯನ್ನು ನೋಡಿ ಆಶ್ಚರ್ಯವಾಯಿತು.
ಶಿವಮೊಗ್ಗದಲ್ಲಿ ಎಲ್ಲರಿಗೂ ಅತಿಯಾದ ಸಾಹಿತ್ಯಾಭಿಮಾನ. ಅದು ತುಂಗೆಯ ಸಿಹಿ ನೀರಿನ ಪ್ರಭಾವವೋ, ಅಥವಾ ಮಲೆನಾಡಿನ ಬಾಗಿಲಲ್ಲಿ ನಿಂತಿರುವುದರ ಪ್ರಭಾವವೋ—ಪರಿಸರ, ಗಿಡಗಳು, ಹಾಗೂ ಸಾಹಿತ್ಯ—ಈ ಮೂರು ಶಿವಮೊಗ್ಗದ ಬಹುತೇಕ ಜನರ ಮನಸ್ಸಿನಲ್ಲಿ ಬೇರೂರಿಬಿಟ್ಟಿರುತ್ತದೆ. ಮೈಸೂರಿನಲ್ಲಿದ್ದಾಗ ಎನ್ ಸಿ ಈ ಆರ್ ಟಿ (NCERT) ಶಾಲೆಯಲ್ಲಿ ಓದಿದ ಕಾರಣ ಶಾಲೆಯಲ್ಲಿ ನನಗೆ ಹೆಚ್ಚು ಕನ್ನಡ ಓದಲು ಸಾಧ್ಯವಾಗಿರಲಿಲ್ಲ. ಶಿವಮೊಗ್ಗಕ್ಕೆ ಬಂದಾಗ ಕೂಡ ಕನ್ನಡವನ್ನು ತೃತೀಯ ಭಾಷೆಯಾಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು. ಶಾಲೆಯಲ್ಲಿ ಸಂಸ್ಕೃತ ತೆಗೆದುಕೊಂಡವರು ಹೆಚ್ಚಿನ ಅಂಕ ತೆಗೆಯಬಹುದು ಎಂದು ಎಲ್ಲರೂ ಹೇಳಿ, ಸಂಸ್ಕೃತ ತೆಗೆದುಕೊಳ್ಳುವಂತೆ ಮಾಡಿದ್ದರು. ಇದರಿಂದಾಗಿ ಹಳೆಗನ್ನಡ ಮುಂತಾದವು ನಮ್ಮ ಕಲಿಕೆಯಲ್ಲಿ ಇರದೇ ಹೋಗಬಾರದೆಂದು ನಮ್ಮ ಕನ್ನಡದ ಟೀಚರ್ ಕನ್ನಡ ಸಾಹಿತ್ಯ ಪರಿಷತ್ತಿನ ಪರೀಕ್ಷೆಗಳನ್ನು ಕಟ್ಟಿಕೊಳ್ಳುವಂತೆ ಮಾಡಿದ್ದರು. ನನಗೆ ಈಗಲೂ ನೆನಪಿದೆ, ಬಸವಾರಾಧ್ಯರವರು ಒಟ್ಟುಗೂಡಿಸಿದ್ದ "ಕನ್ನಡ ಗದ್ಯಾವಲೋಕನ" ಎಂಬ ಪುಸ್ತಕ ನಮಗೆ ಪಠ್ಯವಾಗಿತ್ತು. ಅದರಲ್ಲಿ ಚಿತ್ರದುರ್ಗದ ಪಾಳೆಯಗಾರರ ಬಗ್ಗೆ ಇದ್ದ ಒಂದು ಕಥೆಯನ್ನು ಓದಿ ಪುಳಕಿತಗೊಂಡಿದ್ದೆ. ಇದಲ್ಲದೆ, ಕನ್ನಡವನ್ನು ಶಾಲೆಯಲ್ಲದೆ ಹೊರಗಿನಿಂದ ಮತ್ತಷ್ಟು ಆತ್ಮೀಯವಾಗಿಸಿದ ಹಲವು ಪುಸ್ತಕಗಳನ್ನು ಹಾಗೂ ಕಾವ್ಯಗಳನ್ನು ನಾವು ಆಗ ಓದಿಕೊಂಡೆವು.
ಶಿವಮೊಗ್ಗದಲ್ಲಿ ನಮ್ಮ ಶಾಲೆ ‘ದೇಶೀಯ ವಿದ್ಯಾಶಾಲೆ’; ಅಲ್ಲಿಂದ ಸ್ವಲ್ಪ ದೂರದಲ್ಲೇ ಕರ್ನಾಟಕ ಸಂಘವಿತ್ತು. ಶಾಲೆಯಿಂದ ಸ್ವಲ್ಪ ದೂರದಲ್ಲಿ ಮೀನಾಕ್ಷಿ ಭವನ ಇತ್ತು, ಅಲ್ಲಿಯ ಇಡ್ಲಿ-ದೋಸೆ ಎಂದರೆ ನಮ್ಮೆಲ್ಲರಿಗೂ ಪಂಚಪ್ರಾಣ. ಅಲ್ಲಿಂದ ಮುಂದೆ ಗಣೇಶ ಹೋಟೆಲ್ ಇತ್ತು; ಅಲ್ಲಿ ಕೂಡ ದೋಸೆ ಬಹಳ ಜನಪ್ರಿಯ.
ವಿನೋಬಾ ನಗರದಲ್ಲಿ ಪೊಲೀಸ್ ಚೌಕಿಯ ಬಳಿ ಒಂದು ಗ್ರಂಥಾಲಯವಿತ್ತು; ನಾನು ಆ ಗ್ರಂಥಾಲಯದಲ್ಲಿ ರೆಗ್ಯುಲರ್. ಶಾಲೆ ಬಿಟ್ಟಿತೆಂದರೆ ಅಲ್ಲಿ ಹೋಗಿ ಕುಳಿತುಕೊಳ್ಳುತ್ತಿದ್ದೆ. ಇನ್ನು ರಜಾ ದಿನಗಳನ್ನಂತೂ ಅಲ್ಲಿಯೇ ಕಳೆಯುತ್ತಿದ್ದೆ. ಗ್ರಂಥಾಲಯವನ್ನು ನೋಡಿಕೊಳ್ಳುತ್ತಿದ್ದವರು ಪಾಪ, ತಮ್ಮ ನಿಗದಿತ ಸಮಯಕ್ಕಿಂತ ಹೆಚ್ಚು ಹೊತ್ತು ನನಗಾಗಿ ಕಾದು, ಕೊನೆಗೆ ನನ್ನ ಬಳಿ ಬಂದು, "ಸಾಕಪ್ಪಾ, ನಾನು ಮನೆಗೆ ಹೋಗಬೇಕು, ನಾಳೆ ಬಂದು ಓದುವಿ ಅಂತೆ, ನಡಿ" ಎಂದು ಎಬ್ಬಿಸುತ್ತಿದ್ದರು.
ಹುಡ್ಕೋ ಕಾಲೋನಿಯ ಬಸ್ ಸ್ಟಾಪ್ ಬಳಿ ಹಿರಿಯರೊಬ್ಬರು ಮಸಾಲಾ ಮಂಡಕ್ಕಿ ಹಾಗೂ ಆಂಬಡೆ ತಯಾರಿಸುತ್ತಿದ್ದರು. ಎಂತಹ ಮಳೆಯಲ್ಲಿಯೂ ಅಲ್ಲಿ ಹೋಗಿ ಅದನ್ನು ತಿಂದುಕೊಂಡು ಬರುತ್ತಿದ್ದೆವು. ಅಲ್ಲಿಯೇ ಎದುರಿಗೆ ಒಂದು ಮಸಾಲೆ ದೋಸೆಗೆ ಜನಪ್ರಿಯವಾದ ಚಿಕ್ಕ ಹೋಟೆಲ್ ಕೂಡ ಇತ್ತು.
ಹೀಗೆ ಶಿವಮೊಗ್ಗದ ಹಲವು ನೆನಪುಗಳು ಆಗಾಗ ಬರುತ್ತಿರುತ್ತವೆ. ಕಳೆದ ಬಾರಿ ನಮ್ಮ ದೊಡ್ಡಪ್ಪನ ಮೊಮ್ಮಗಳ ಮದುವೆಗೆಂದು ಶಿವಮೊಗ್ಗಕ್ಕೆ ಹೋದಾಗ, ಕಾರಿನಿಂದಲೇ ಮಕ್ಕಳಿಗೆ ನಾವು ಹೋಗುತ್ತಿದ್ದ ಜಾಗಗಳನ್ನು ತೋರಿಸಿದೆ. ಅವರಿಗೆ ಶಿವಮೊಗ್ಗದ ವಿಚಾರವಾಗಿ ಆಗಾಗ ಹೇಳುತ್ತಿರುತ್ತೇನೆ, ಆಗ ಅವರು "ಅಪ್ಪಾ, ಇದನ್ನೂ ಒಮ್ಮೆ ಬರೆದಿಡಿ" ಎಂದು ಹೇಳುತ್ತಿರುತ್ತಾರೆ. ಅವರ ಆಸೆಯಂತೆ ಈಗ ಬರೆದಿಡುತ್ತಿದ್ದೇನೆ. ಮಕ್ಕಳಿಗೆ ಅಲ್ಲಿಯ ಕೆಲವು ತಮಾಷೆಯ ಪ್ರಸಂಗಗಳನ್ನು ಹೇಳುವಾಗ ತುಂಬ ನಗುತ್ತಿರುತ್ತಾರೆ. ಅವುಗಳನ್ನು ಬರಹದಲ್ಲಿ ಇಳಿಸುವುದು ಬಹಳ ಕಷ್ಟ - ಒಮ್ಮೆ ಪ್ರಯತ್ನ ಮಾಡಿ ನೋಡಬೇಕು.
ಪ್ರತಿಕ್ರಿಯೆ (1)
ನಾನು ಸಾಗರದವನೇ ಆಗಿರುವುದರಿಂದ, ಈ ಲೇಖನ ನನ್ನ ಬಾಲ್ಯದ ದಿನಗಳನ್ನು ಮತ್ತು ಮಲೆನಾಡಿನ ಸೊಗಡನ್ನು ಕಣ್ಣಿಗೆ ಕಟ್ಟುವಂತೆ ನೆನಪಿಸಿತು. ತುಂಗೆಯ ನೀರು, ಮಲೆನಾಡಿನ ಮಳೆ ಮತ್ತು ಅಲ್ಲಿನ ಹೋಟೆಲ್ಗಳ ವಿವರಣೆ ಓದಿ ತುಂಬಾ ಸಂತೋಷವಾಯಿತು. ಇಂತಹ ಸುಂದರ ನೆನಪುಗಳನ್ನು ಹಂಚಿಕೊಂಡಿದ್ದಕ್ಕೆ ಲೇಖಕರಿಗೆ ಧನ್ಯವಾದಗಳು!