"ಪೂಜಿಸಲೆಂದೇ ಹೂಗಳ ತಂದೆ..." — ಈ ಹಾಡು ಅದೆಷ್ಟೋ ಕನ್ನಡ ಹೃದಯಗಳಲ್ಲಿ ಹಾಗೂ ಮನಸ್ಸುಗಳಲ್ಲಿ ಅಚ್ಚೊತ್ತಿದೆ. ಅದೆಷ್ಟು ಬಾರಿ ನಾವು ಈ ಹಾಡನ್ನು ರೇಡಿಯೋದಲ್ಲಿ ಕೇಳಿರಬಹುದೋ — ಅದಕ್ಕೆ ಲೆಕ್ಕವೇ ಇಲ್ಲ. ಈ ಹಾಡನ್ನು ಕೇಳುತ್ತಾ ನಾವು ತನ್ಮಯರಾಗುತ್ತಿದ್ದೆವು. ಊಟಕ್ಕೆ ಕುಳಿತಾಗ ಅಥವಾ ಮುಂಜಾನೆಯ ವೇಳೆಯಲ್ಲಿ ಎಸ್. ಜಾನಕಿಯವರ ಧ್ವನಿ ಕೇಳದಿದ್ದರೆ ಅದು ದಿನವೇ ಅಲ್ಲ ಅನ್ನಿಸುತ್ತಿತ್ತು.

ಯುಗವೊಂದು ಅಂತ್ಯವಾದಂತೆ

ದಕ್ಷಿಣ ಭಾರತದ "ಗಾನಕೋಗಿಲೆ" ಎಂದೇ ಹೆಸರಾದ ಎಸ್. ಜಾನಕಿ (ಪೂರ್ಣ ಹೆಸರು: ಸಿಸ್ಟ್ಲಾ ಶ್ರೀರಾಮಮೂರ್ತಿ ಜಾನಕಿ) ಕನ್ನಡಿಗರಿಗೆ ಕೇವಲ ಒಬ್ಬ ಹಿನ್ನೆಲೆ ಗಾಯಕಿಯಾಗಿ ಉಳಿಯದೆ, ಮನೆಮನದ ದನಿಯಾಗಿದ್ದರು. ೨೦೨೬ರ ಜುಲೈ ೧೧ರಂದು ಅವರು ಮೈಸೂರಿನಲ್ಲಿ ನಿಧನರಾದರು ಎಂಬ ವಿಷಯ ಕೇಳಿ, ಎಲ್ಲೆಲ್ಲೂ ಅವರ ಕುರಿತಾದ ಶ್ರದ್ಧಾಂಜಲಿಯ ನುಡಿಗಳನ್ನು ನಾವು ನೋಡುತ್ತಿದ್ದೇವೆ, ಓದುತ್ತಿದ್ದೇವೆ.

೧೯೩೮ರ ಏಪ್ರಿಲ್ ೨೩ರಂದು ಆಂಧ್ರಪ್ರದೇಶದ ಗುಂಟೂರಿನಲ್ಲಿ ಜನಿಸಿದ ಜಾನಕಿ, ಆರು ದಶಕಗಳ ಕಾಲ ಭಾರತೀಯ ಚಿತ್ರಸಂಗೀತದ ಮೇರುದನಿಯಾಗಿದ್ದರು ಎಂದರೆ ತಪ್ಪಾಗಲಾರದು. ೧೭ಕ್ಕೂ ಹೆಚ್ಚು ಭಾಷೆಗಳಲ್ಲಿ, ಚಿತ್ರ-ಆಲ್ಬಂ-ಟಿವಿ-ಆಕಾಶವಾಣಿ ಸೇರಿ ಸುಮಾರು ೪೮,೦೦೦ ಹಾಡುಗಳನ್ನು ಹಾಡಿದ ಇವರು, ಎಲ್ಲಕ್ಕಿಂತ ಹೆಚ್ಚು ಹಾಡಿದ್ದು ಮಾತ್ರ ಕನ್ನಡದಲ್ಲೇ.

ಕನ್ನಡದ ಜೊತೆ ಬೆಸೆದ ಬಂಧ

ಜಾನಕಿಯವರ ಕನ್ನಡ ಪಯಣ ಆರಂಭವಾದದ್ದು ೧೯೫೭–೫೮ರಲ್ಲಿ ಎಂದು ಆನ್‌ಲೈನ್‌ನಲ್ಲಿ ಲಭ್ಯವಿರುವ ಮಾಹಿತಿಯಿಂದ ನಮಗೆ ತಿಳಿದುಬರುತ್ತದೆ. ೧೯೫೯ರ ಮಹಿಷಾಸುರ ಮರ್ದಿನಿ ಚಿತ್ರದ "ಗಗನದಲಿ ಮುಗಿಲಾನೇರಿ" (ಜಿ.ಕೆ. ವೆಂಕಟೇಶ್ ಸಂಗೀತ ನಿರ್ದೇಶನ) ಅವರ ಮೊದಲ ಕನ್ನಡ ಹಾಡು.

ಕನ್ನಡದ ಬಹುತೇಕ ಎಲ್ಲ ಮಹಾನ್ ಸಂಗೀತ ನಿರ್ದೇಶಕರಿಗೂ ಪ್ರಿಯವಾಗಿದ್ದ ಧ್ವನಿ ಇವರದ್ದು — ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ವಿಜಯಭಾಸ್ಕರ್, ಟಿ.ಜಿ. ಲಿಂಗಪ್ಪ, ಎಂ. ರಂಗರಾವ್, ಉಪೇಂದ್ರಕುಮಾರ್, ಇಳಯರಾಜಾ, ಮತ್ತು ಹಂಸಲೇಖ ಅವರೊಬ್ಬರದ್ದೇ ೪೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಇವರ ಸ್ವರ ಕೇಳಿಬಂದಿದೆ.

ಡಾ. ರಾಜ್‌ಕುಮಾರ್ ಅವರ ಸುಮಾರು ೧೫೦ ಚಿತ್ರಗಳಲ್ಲಿ ೩೦೦ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ ಜಾನಕಿಯವರು, ಕನ್ನಡದ ಬಂಗಾರದ ಯುಗವನ್ನೇ ತಮ್ಮ ದನಿಯಲ್ಲಿ ಕಟ್ಟಿಕೊಟ್ಟವರು. ಜಾನಕಿಯವರು ಹಾಡಿದ "ಪೂಜಿಸಲೆಂದೇ" ಹಾಡು ಸ್ವತಃ ರಾಜ್‌ಕುಮಾರ್ ಅವರಿಗೆ ಅತ್ಯಂತ ಪ್ರಿಯವಾದ ಹಾಡಾಗಿತ್ತಂತೆ.

ಸಂಖ್ಯೆಗಳಲ್ಲಿ…

  • ಒಟ್ಟು ಹಾಡುಗಳು (ಎಲ್ಲ ಭಾಷೆಗಳಲ್ಲಿ): ಸುಮಾರು ೪೮,೦೦೦!

  • ಭಾಷೆಗಳು: ೧೭+ (ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಇತ್ಯಾದಿ)

  • ಅತಿ ಹೆಚ್ಚು ಹಾಡಿದ ಭಾಷೆ: ಕನ್ನಡ (ನಂತರ ಮಲಯಾಳಂ) — ಸಾವಿರಾರು ಕನ್ನಡ ಗೀತೆಗಳು

  • ರಾಜ್‌ಕುಮಾರ್ ಚಿತ್ರಗಳು: ~೧೫೦ ಚಿತ್ರಗಳು, ೩೦೦+ ಹಾಡುಗಳು

  • ವೃತ್ತಿಜೀವನ: ೧೯೫೭–೨೦೧೯ (ಸುಮಾರು ೬೦ ವರ್ಷ)

  • ರಾಷ್ಟ್ರಪ್ರಶಸ್ತಿಗಳು: ೪ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು

ಗೌರವ-ಪ್ರಶಸ್ತಿಗಳು

  • ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (೨೦೧೪)

  • ಗೌರವ ಡಾಕ್ಟರೇಟ್ — ಮೈಸೂರು ವಿಶ್ವವಿದ್ಯಾಲಯ (೨೦೦೯)

  • ೪ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಹಾಗೂ ಹಲವು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು

  • ತಮಿಳುನಾಡು ಸರ್ಕಾರದ ಕಲೈಮಾಮಣಿ ಪ್ರಶಸ್ತಿ

  • ೨೦೧೩ರಲ್ಲಿ ಕೇಂದ್ರ ಸರ್ಕಾರ ನೀಡಲು ಮುಂದಾದ ಪದ್ಮಭೂಷಣ ಪ್ರಶಸ್ತಿಯನ್ನು, "ದಕ್ಷಿಣ ಭಾರತದ ಗಾಯಕರಿಗೆ ಸಲ್ಲಬೇಕಾದ ಗೌರವ ತಡವಾಗಿದೆ" ಎಂಬ ಕಾರಣಕ್ಕೆ ವಿನಮ್ರವಾಗಿ ನಿರಾಕರಿಸಿದ್ದು ಅವರ ಸ್ವಾಭಿಮಾನದ ಸಂಕೇತ.

ಎಸ್. ಜಾನಕಿಯವರ ನೆನಪಿನಲ್ಲುಳಿಯುವ ಕನ್ನಡ ಗೀತೆಗಳು — ನೀವು ಇದರಲ್ಲಿ ಯಾವುದನ್ನು ಇನ್ನೂ ಕೇಳಿಲ್ಲ?

  • ಪೂಜಿಸಲೆಂದೇ ಹೂಗಳ ತಂದೆ — (ರಾಜ್‌ಕುಮಾರ್ ಅವರ ನೆಚ್ಚಿನ ಹಾಡು ಕೂಡ)

  • ಆಡೋಣ ಬಾ ಬಾ ಗೋಪಾಲ

  • ನಂಬಿದೆ ನಿನ್ನ ನಾದದೇವತೆ

  • ಶಿವ ಶಿವ ಎನ್ನದ ನಾಲಿಗೆಯೇಕೆ — ಹೇಮಾವತಿ (೧೯೭೭); ಜಾನಕಿಯವರೇ "ನನ್ನ ವೃತ್ತಿಜೀವನದ ಅತ್ಯಂತ ಕಠಿಣ ಹಾಡು" ಎಂದ ಗೀತೆ

  • ತೋರೆಲೆ ನೀ ಪ್ರಿಯನಾ (ಕಠಾರಿ ವೀರ)

  • ಉಡುಗೊರೆಯೊಂದ ತಂದ

  • ಇಂದು ಎನಗೆ ಗೋವಿಂದ

  • ಕರೆದರೂ ಕೇಳದೆ

  • ಆಲಿಸು ಓ ಇನಿಯ

  • ಶರಣು ವಿರೂಪಾಕ್ಷ

  • ಕನಸಲ್ಲಿ ಬಂದವನಾರೆ

  • ಪ್ರೇಮಲೋಕದಿಂದ — ಪ್ರೇಮಲೋಕ (೧೯೮೭); ಹಂಸಲೇಖ

  • ಮದುವೆ ಮದುವೆ — ಬಂಗಾರದ ಹೂವು (೧೯೬೭); ರಾಜನ್–ನಾಗೇಂದ್ರ

  • ಚೆನ್ನರಸಿ ಚೆಲುವರಸಿ — (ಪಿ. ಲೀಲಾ ಅವರ ಜೊತೆ)

  • ನೀ ನಡಿವ ಹಾದಿಯಲ್ಲಿ — (ಪಿ. ಸುಶೀಲಾ ಅವರ ಜೊತೆ)

  • ಆಸೆ ಹೇಳುವಾಸೆ — (ಪಿ. ಸುಶೀಲಾ ಅವರ ಜೊತೆ)

  • ತೆರೆದಿದೆ ಮನೆ ಓ ಬಾ ಅತಿಥಿ — (ವಾಣಿ ಜಯರಾಂ ಅವರ ಜೊತೆ)

  • ಚಂದ್ರಮುಖಿ ಪ್ರಾಣಸಖಿ — (ಬೆಂಗಳೂರು ಲತಾ ಅವರ ಜೊತೆ)

  • ತಂ ನಂ ತಂ ನಂ — (ಪಿ.ಬಿ. ಶ್ರೀನಿವಾಸ್ ಅವರ ಜೊತೆ)

  • ಹಾಯಾಗಿದೆ ಈ ದಿನ — (ಪಿ.ಬಿ. ಶ್ರೀನಿವಾಸ್ ಅವರ ಜೊತೆ)

  • ಕಣ್ಣು ರೆಪ್ಪೆ ಒಂದನೊಂದು — (ಪಿ.ಬಿ. ಶ್ರೀನಿವಾಸ್ ಅವರ ಜೊತೆ)

  • ಒಂದೇ ಒಂದು ಹೊಸ ಹಾಡು — (ಪಿ.ಬಿ. ಶ್ರೀನಿವಾಸ್ ಅವರ ಜೊತೆ)

  • ಕಣ್ಣುಗಳು ಕಮಲಗಳು — (ಪಿ.ಬಿ. ಶ್ರೀನಿವಾಸ್ ಅವರ ಜೊತೆ)

  • ಗಗನದಲಿ ಮುಗಿಲಾನೇರಿ — ಮಹಿಷಾಸುರ ಮರ್ದಿನಿ (೧೯೫೯); ಜಿ.ಕೆ. ವೆಂಕಟೇಶ್ (ಕನ್ನಡದ ಮೊದಲ ಹೆಜ್ಜೆ)

ಜಾನಕಿಯವರ ದನಿ ಕೇವಲ ಧ್ವನಿಯಲ್ಲ; ಕನ್ನಡಿಗರಿಗೆ ಅದೊಂದು ಭಾವಸಾಗರ. ಅವರು ಹಾಡಿರುವ ಹಾಡುಗಳನ್ನು ಕೇಳುವಾಗ ಬದುಕಿನ ಪ್ರತಿಯೊಂದು ಭಾವಕ್ಕೂ ಅವರು ಸ್ವರ ಕೊಟ್ಟಿದ್ದಾರೆ ಎಂದು ಅನಿಸದೆ ಇರದು.

ಅವರ ದನಿ ಕನ್ನಡಿಗರಲ್ಲಿ ಎಂದೆಂದಿಗೂ ಅಳಿಯದು. ಜಾನಕಿಯವರು ಹಾಡಿದ ಪ್ರತಿಯೊಂದು ಗೀತೆ ಈ ನಾಡಿಗೆ ಅವರು ಬಿಟ್ಟುಹೋದ ಅಮರ ಕೊಡುಗೆ. ಅವರ ಚಿರಂತನ ಧ್ವನಿಗೆ ಕನ್ನಡ ನಾಡಿನ ಕೃತಜ್ಞತಾಪೂರ್ವಕ ಗೌರವ. ನಮ್ಮ ಕಣ್ಣಮುಂದಿದ್ದು ಈಗ ಮರೆಯಾದ ಆ ಸ್ವರ ಸರಸ್ವತಿಯ ರೂಪಕ್ಕೆ ಭಾವಪೂರ್ಣ ಶ್ರದ್ಧಾಂಜಲಿ.


ಚಿತ್ರ ಕೃಪೆ: ರಿಷಭ್ ತತಿರಾಜು (ವಿಕಿಮೀಡಿಯ ಕಾಮನ್ಸ್)

ಆಧಾರಗಳು: The Week, India TV News, Wikipedia (S. Janaki / List of Kannada songs recorded by S. Janaki), sjanaki.net