ದೇಶದ ಎಲ್ಲೆಡೆ ಆನ್ಲೈನ್ ಪಾವತಿ, ಆನ್ಲೈನ್ ಕೆಲಸಗಳು ತುಂಬಿ ಹೋಗಿದ್ದವು.  ಅದರಲ್ಲೂ ಬಹುತೇಕ ಖಾಸಗಿ ಕಂಪನಿ, ಕಛೇರಿಗಳಲ್ಲಿ ಆನ್ಲೈನ್ ಕೆಲಸಗಳೇ ಖಾಯಂ ಆಗಿದ್ದವು.  ಸಣ್ಣ ಸಣ್ಣ ದಿನಸಿ ಅಂಗಡಿಗಳು, ತರಕಾರಿ ಅಂಗಡಿಗಳೂ ಸಹ ಆನ್ಲೈನ್ ಮುಖಾಂತರ ತಮ್ಮ ತಮ್ಮ ಕಾರ್ಯ ನಿರ್ವಹಿಸುತ್ತಿದ್ದವು.

ಪ್ರಪಂಚವೇ ಮೊಲದ ನಡಿಗೆಯಲ್ಲಿ ಹೋಗುತ್ತಿದ್ದರೇ, ಸರ್ಕಾರಿ ಕಛೇರಿಗಳ ಕಾರ್ಯಗಳು ಮಾತ್ರ ಆಮೆ ನಡಿಗೆಯಲ್ಲೇ ಸಾಗುತ್ತಿದ್ದವು. 

ಆದರೂ ಇತ್ತೀಚಿನ ಕಾರ್ಯದರ್ಶಿಗಳು, ಯುವಜನ ಸಂಘಟನೆಗಳ ಒತ್ತಡದಿಂದ ಸರ್ಕಾರಿ ಕಛೇರಿಗಳಲ್ಲೂ ಸಾಫ್ಟ್ವೇರ್ ಅನ್ನೋ ಸಾಧಕ ತಾಂಡವಾಡುತ್ತಿತ್ತು.  ಅಂತಹ ಒಂದು ವ್ಯವಸ್ಥೆಗಳನ್ನು ತರಲು ಮಂತ್ರಿಗಳ ಆಪ್ತ ಕಾರ್ಯದರ್ಶಿ ವಿರಾಟನು ಬಹಳಷ್ಟು ಶ್ರಮ ವಹಿಸಿದ್ದನು.

ಹೀಗೇ ಕಾರ್ಯ ನಿರ್ವಹಿಸುತ್ತಿರುವಾಗ ಒಂದು ಪ್ರಮುಖ ಸಾಫ್ಟ್ವೇರ್ ಅಳವಡಿಸುವ ಕಾರ್ಯದ ಪ್ರಯುಕ್ತ ವಿರಾಟನು ಸಾಫ್ಟ್ವೇರ್ ಕಂಪನಿಯೊಂದಕ್ಕೆ ಭೇಟಿ ನೀಡಿದನು.  ಅಲ್ಲಿ ಚಂದ್ರು (ಚಂದ್ರಶೇಖರ್) ಕೆಲಸ ಮಾಡುತ್ತಿರುವುದನ್ನು ಕಂಡು ಚಕಿತನಾಗುವನು.  ಕೂಡಲೇ ಆಶ್ಚರ್ಯದಿಂದ.

"ಅರೇ ಚಂದ್ರು!!  ನೀನೇನೋ ಇಲ್ಲಿ??  ಬಹಳವೇ ಆಶ್ಚರ್ಯವೆನಿಸುತ್ತಿದೆಯಲ್ಲಾ!!  ಅಲ್ಲಾ ನೀನು.. ನೀನು.... ಹಿಂದಿ ಪ್ರವೀಣನಾಗಿ ಶಾಲೆಯಲ್ಲಿ ಅದ್ಯಾಪಕನಾಗಬೇಕು ಅಂತ ಇದ್ಯಲ್ಲಾ!!  ಈಗ ನೋಡಿದರೆ ಇಲ್ಲಿ... ಹೀಗೆ.."

"ಓಹ್ ವಿರಾಟ್!!!   ಇದೇನಾಶ್ಚರ್ಯ!!!  ವಿಷ್ಯ ಗೊತ್ತಾಯ್ತಪ್ಪಾ, ಈಗ ನೀನು ಮಂತ್ರಿಗಳ ಪಿಎ ಅಂತೇ?"

"ಹೌದು!"

"ನೀನು ಬಿಡಪ್ಪಾ ಮಂತ್ರಿಗಳ ಪಿ.ಎ. ಆಗಿದ್ದೇ ಆಗಿದ್ದು, ನಿನ್ನ ನೋಡಲು ಅಪಾಯಿಂಟ್ಮೆಂಟ್ ತಗೋಬೇಕು.  ಅಂತಾದ್ರಲ್ಲಿ ಈಗ ನೇರವಾಗಿ ನಿನ್ನನ್ನು ನೋಡುತ್ತಿದ್ದೇನೆ ಅಂದ್ರೆ ಇದು ನನ್ನ ಸೌಭಾಗ್ಯವೇ ಸರಿ..."

"ಏಯ್!! ಸಾಕ್ ನಿಲ್ಸೋ!!  ಈಗಲೂ ನಿಂದು ತಮಾಷೆನಾ??   ನಾನೇನು ಅಂತಹ ಬ್ಯುಸಿ ಮನುಷ್ಯನಲ್ಲಾ!!  ಸರಿ ನಡೆ ಮೊದಲು ಕಾಫಿ ಕುಡಿತಾ ಮಾತಾಡೋಣ.  ನನ್ನ ಕೆಲಸ ಆಗೋಕೂ ಸ್ವಲ್ಪ ಟೈಮ್ ಹಿಡಿಯುತ್ತೆ   ಅಲ್ಲಿಯವರೆಗೂ ಕಾಫಿ ಕುಡಿತಾ ಮಾತಾಡೋಣ."

ಇಬ್ಬರೂ ಅಲ್ಲೇ ಒಂದು ಕಡೆ ಆಫೀಸಿನ ಕ್ಯಾಂಟೀನ್ಗೆ ಹೋಗಿ ಕುಳಿತು ಕಾಫಿ ಆರ್ಡರ್ ಮಾಡಿ, ಮಾತನಾಡಲು ಪ್ರಾರಂಭಿಸುವರು.

ಚಂದ್ರು ಮತ್ತು ವಿರಾಟ್ ಡಿಪ್ಲೋಮ ಓದುವಾಗ ಸ್ನೇಹಿತರಾಗಿದ್ದರು.  ಚಂದ್ರಶೇಖರ್ ಬಹಳವೇ ತಮಾಷೆ ಮನುಷ್ಯ!!!  ಯಾವಾಗಲೂ ತಮಾಷೆ ಮಾಡುತ್ತಾ ಎಲ್ಲರನ್ನೂ ನಗಿಸುತ್ತಾ ಇರುತ್ತಿದ್ದನು.  ಕೆಲವೊಮ್ಮೆ ಈತನ ತಮಾಷೆಯಿಂದ ಇತರರಿಂದ ಬೈಸಿಕೊಂಡಿರುವುದೂ ಉಂಟು.  ಆದರೂ ಅದೆಲ್ಲವನ್ನೂ ಮನಸ್ಸಿಗೆ ಹಚ್ಚಿಕೊಳ್ಳದೇ ನಿರಾತಂಕವಾಗಿ ಇರುತ್ತಿದ್ದನು.

ಚಂದ್ರಶೇಖರನು ಒಂಬತ್ತನೇ ತರಗತಿಯಲ್ಲಿರುವಾಗಲೇ ಹಿಂದಿಯಲ್ಲಿ 'ಪ್ರವೀಣ' ಕೋರ್ಸನ್ನು ಮುಗಿಸಿದ್ದನು.  ಹಿಂದಿಯಲ್ಲಿ ಪ್ರವೀಣ್ ಮಾಡಿದರೆ ಅದು ಹಿಂದಿ ಬಿಎಗೆ ಸಮವಾಗಿತ್ತು.  ಅದನ್ನು ಚಂದ್ರುವು 9ನೇ ತರಗತಿಗೆ ಬರುವಷ್ಟರಲ್ಲಿ ಮುಗಿಸಿದ್ದನು.  ಮುಂದೆ ಬಿ.ಎಡ್. ಮಾಡಬೇಕೆಂದು ಯೋಚಿಸಿದನು.  ಆಗ ಆತನಿಗೆ ತಿಳಿದು ಬಂದಿದ್ದೇನೆಂದರೆ ಬಿಎಡ್ ಮಾಡಲು ಕನಿಷ್ಠ ಹದಿನೆಂಟು ವರ್ಷ ದಾಟಿರಬೇಕು ಎಂದು.  ಆ ಸಮಯದಲ್ಲಿ ಆತನಿಗೆ ಕೇವಲ 14 ವರ್ಷಗಳಾಗಿತ್ತು.  ಹಾಗಾಗಿ ಆತನು ಇನ್ನೂ ನಾಲ್ಕು ವರ್ಷ ಕಾಯಬೇಕೆಂದು ಈಗಿರುವ ಓದನ್ನು ಮುಂದುವರೆಸುತ್ತಿದ್ದನು.  ಕಡೇ ಪಕ್ಷ ಹತ್ತನೇಯ ತರಗತಿಯನ್ನದ್ರೂ ಮುಗಿಸು ಎಂದು ಚಂದ್ರುವಿನ ತಂದೆಯೂ ಒತ್ತಾಯ ಮಾಡಿದ್ದರು.  ಹಾಗಾಗಿ ಆತನು ಓದುತ್ತಿದ್ದನು.

ಹತ್ತನೇಯ ತರಗತಿಯ ನಂತರ ಡಿಪ್ಲೋಮಾಕ್ಕೆ ಸೇರಿಕೊಂಡನು.  ಅಲ್ಲಿ ಅವನಿಗೆ ವಿರಾಟನ ಪರಿಚಯವಾಗಿತ್ತು.  ಡಿಪ್ಲೋಮ ಕೂಡ ಪೂರ್ತಿ ಓದಲಿಲ್ಲ.  ಆಗ ಮಿಸ್ಸಾದ ಚಂದ್ರುವು ಈಗ ಮತ್ತೇ ಹಲವಾರು ವರ್ಷಗಳ ನಂತರ ವಿರಾಟನಿಗೆ ಸಿಕ್ಕಿದ್ದಾನೆ. 

ಚಂದ್ರುವನ್ನು ಕಂಡ ವಿರಾಟನು ಬಹಳವೇ ಆನಂದಿಸುವನು. ಇಬ್ಬರೂ ಕ್ಯಾಂಟೀನಿನಲ್ಲಿ ಕಾಫಿ ಕುಡಿಯುತ್ತಾ ಮಾತಾನಾಡುತ್ತಿರುವರು.

"ಅಲ್ವೋ ಚಂದ್ರು ನೀನೇನೋ ಇಲ್ಲಿ, ಅದೂ ಈ ಸಾಫ್ಟ್ವೇರ್ ಕಂಪನಿಯಲ್ಲಿ?? ಇಷ್ಟಕ್ಕೂ ನೀನು ಹಿಂದಿ ಟೀಚರ್ ಆಗಬೇಕು ಅಂತ ಅಲ್ಲಾ ಹೇಳ್ತಿದ್ದು."

"ಎಲ್ಲಾ ನಾವಂದುಕೊಂಡ ಹಾಗೇ ಆಗುತ್ತಾ ವಿರಾಟ್!!  ಈಗ ನೀನೇ ನೋಡು!! ಡಿಪ್ಲೋಮ ಇಂಜಿನಿಯರಿಂಗ್ ಮಾಡಿದವನು, ನೋಡಿದ್ರೇ ರಾಜಕೀಯ ಹಿಡಿದಿದ್ದೀಯ!!"

"ಏಯ್!!  ನಾನು ರಾಜಕಾರಣಿ ಅಲ್ವೋ!! ಅವರ ಪಿಎ ಅಷ್ಟೆ!!"

"ಎಂತದ್ದೋ ಒಂದು ಒಟ್ಟಿನಲ್ಲಿ ರಾಜಕೀಯದಲ್ಲೇ ಇದ್ದೀಯಲ್ಲಾ!!  ಹಾಗೇ ನಾನು ಏನೋ ಅಂದುಕೊಂಡೆ!! ಇನ್ನೇನೇನೋ ಆಯಿತು.  ಅದೇನೋ ಹೇಳ್ತಾರಲ್ಲಾ ಮ್ಯಾನ್ ಪ್ರೊಪೋಸಸ್ ಗಾಡ್ ಡಿಸ್ಪೋಸೆಸ್ (ತಾನೊಂದು ಬಗೆದರೆ ದೈವವೊಂದು ಬಗೆವುದು) ಎನ್ನುವ ಹಾಗೇ ನಾವಂದುಕೊಂಡಂತೆ ಆಗಬೇಕಲ್ವಾ?"

"ಪರವಾಗಿಲ್ವೋ!! ತಮಾಷೆ ಮನುಷ್ಯ ಈಗ ತತ್ವಜ್ಞಾನಿಯಾಗಿಯೂ ಮಾತಾಡ್ತೀದ್ದಿಯಾ??  ಬಹಳಾನೇ ಆಶ್ಚರ್ಯವೆನಿಸುತ್ತಿದೆ.  ನಾನು ನಿನ್ನ ಜೊತೆ ಕೇವಲ ಒಂದು ವರ್ಷ ಓದಿದಷ್ಟೇ, ಬಹಳವೇ ತಮಾಷೆಯನ್ನು ಕಂಡಿದ್ದೆ.  ಇನ್ನೂ ನಿನ್ನ ಜೊತೆ ಬಹಳ ವರ್ಷಗಳೇ ಕಳೆದಿದ್ದರೇ ಬಹುಷಃ ನಾನು ನಕ್ಕು ನಕ್ಕು ಹೊಟ್ಟೆ ಹುಣ್ಣಾಗಿಸಿಕೊಳ್ಳುತ್ತಿದ್ದೆ ಅಂತ ಅನಿಸುತ್ತೆ.  ಅಂದಹಾಗೆ ಮತ್ತೇನು ವಿಷಯ, ಮದುವೆ? ಮಕ್ಕಳು?"

"ಮದುವೆ!!  ಆಗಿದೆ.  ಆದ್ರೇ ಇನ್ನೂ ಮಕ್ಕಳಿಲ್ಲ.  ಸದ್ಯಕ್ಕೆ ಚಂದ್ರಿ ಜೊತೆ ಆಟ ಪಾಠ, ವಿನೋದ, ವಿಷಾದ, ಸರಸ, ವಿರಸ, ಪ್ರೀತಿ, ಜಗಳ, ಎಲ್ಲಾ ಚೌಚೌ ಆಗಿ ಅನುಭವಿಸುತ್ತಿದ್ದೇನೆ."

ಅಷ್ಟರಲ್ಲಿ ವಿರಾಟನಿಗೆ ಕಾಲ್ ಬರುತ್ತೆ.  ಫೋನಿನಲ್ಲಿ ಮಾತಾಡಿ ನಂತರ,

"ಸರಿ ಚಂದ್ರು!!  ನಾನೀಗ ಹೋಗಬೇಕು.  ನಿನ್ನ ಮಾತು, ತತ್ವಜ್ಞಾನ, ವಿನೋದ, ವಿಷಾದ ಎಲ್ಲವನ್ನೂ ಕೇಳಲು ಬಹಳವೇ ಕಾತರವೆನಿಸುತ್ತಿದೆ.  ಒಂದು ದಿನ ಪೂರ್ತಿ ನಿನ್ನ ಜೊತೆ ಕಳೆಯುತ್ತಾ ನಿನ್ನ ಎಲ್ಲಾ ವಿಚಾರ ತಿಳ್ಕೊಳ್ಳೋ ಕುತೂಹಲ ಮೂಡಿದೆ.  ಸಿಗ್ತಿಯಲ್ಲಾ!!"

"ಖಂಡಿತಾ ಸಿಗ್ತೀನಿ.  ಆದ್ರೇ ನೀನು ಅಷ್ಟೊಂದು ಫ್ರೀ ಇರ್ತೀಯ?"

"ಫ್ರೀ ಮಾಡ್ಕೊಂಡೆ ಸಿಗ್ತೀನಿ.  ಸರಿ ಬರ್ಲಾ!!"

ವಿರಾಟ್ ಹೊರಟುಬಿಡುವನು.  ಚಂದ್ರುವೂ ತನ್ನ ಕೆಲಸದ ಕಡೆಗೆ ಗಮನ ಹರಿಸುವನು.

        ***********************

ಚಂದ್ರು ಬಹಳವೇ ತಮಾಷೆ ಮನುಷ್ಯ!!   ಇದು ಅವನಿಗೆ ಹುಟ್ಟುಗುಣ.  ಆತನ ಬಗ್ಗೆ ಹೇಳಬೇಕೆಂದರೆ ಏನಾದ್ರೂ ಒಂದು ತಮಾಷೆ ಮಾಡಿಕೊಂಡು ಕಡೆಗೇ ಪಜೀತಿಗೆ ಸಿಕ್ಕಿಕೊಳ್ಳುತ್ತಿದ್ದನು.  ಅದರಲ್ಲೂ ಆತನು ಹೆಚ್ಚಿಗೆ ಪಜೀತಿಗೆ ಸಿಕ್ಕಿಕೊಳ್ಳುತ್ತಿದ್ದಿದ್ದೇ ಆತನ ಪತ್ನಿ ಚಂದ್ರಿಕಾಳ ಮುಂದೆ. 

ಚಂದ್ರಿಕಾ ಚಂದ್ರುವಿಗೆ ತಕ್ಕ ಹೆಂಡತಿ.  ಅವನು ಸೇರು ಅಂದರೆ ಅವಳು ಸವ್ವಾ ಸೇರು.  ಚಂದ್ರುವು ಎಣ್ಣೆ ಅಂದರೆ ಚಂದ್ರಿಕಾ ಸೀಗೇ ಕಾಯಿಯಾಗುತ್ತಿದ್ದಳು.  ಒಟ್ಟಿನಲ್ಲಿ ಚಂದ್ರುವು ಆಗಾಗ ಚಂದ್ರಿಕಾ ಕಡೆಯಿಂದ ಏನಾದರೊಂದು ಮುಖಭಂಗವನ್ನು ಅನುಭವಿಸುತ್ತಿದ್ದನು.

ಕೆಲಸ ಕಾರ್ಯಗಳ ವಿಷಯದಲ್ಲಿ ಮಾತ್ರ ತಮಾಷೆ ಮನುಷ್ಯನಾದರೂ ಚಂದ್ರುವಿನ ಕಾರ್ಯ ವೈಖರಿ ಮಾತ್ರ ಬಹಳ ಚೆನ್ನಾಗಿರುತ್ತಿತ್ತು.  ಹಾಗಾಗಿಯೇ ಆತನಿಗೆ ಕೆಲವು ಸಲ ಸ್ಪೆಷಲ್ ಇನ್ಸೆಂಟಿವ್ ಅಂತ ವಿಶೇಷವಾಗಿ ಹಣದ ಬಾಬತ್ತನ್ನು ನೀಡುತ್ತಿದ್ದರು.  ಇದನ್ನು ಆತನು ಸೂಕ್ತ ರೀತಿಯಲ್ಲಿ ತಾನೂ ಬಳಸಿಕೊಂಡು ಚಂದ್ರಿಕಾಳಿಗೂ ಉತ್ತಮ ಉಡುಗೊರೆಯನ್ನು ನೀಡುತ್ತಾ ಅವಳ ಮನಸ್ಸನ್ನು ಗೆಲ್ಲುತ್ತಿದ್ದನು.

ಪತಿಯ ಕೆಲವು ನಡವಳಿಕೆಗಳ ಬಗ್ಗೆ ಎಷ್ಟೇ ಸಿಟ್ಟು ಬೇಸರವಿದ್ದರೂ ಚಂದ್ರಿಕಾ ಚಂದ್ರುವನ್ನು ಬಹಳವೇ ಪ್ರೀತಿಸುತ್ತಿದ್ದಳು.  ಅವಳ ಅತಿಯಾದ ಪ್ರೀತಿಯೇ ಅವಳು ಆತನ ಮೇಲೆ ಸದಾ ರೇಗುವಂತೆ ಮಾಡುತ್ತಿತ್ತು.  ಚಂದ್ರುವೂ ಅದನ್ನೆಲ್ಲಾ ಅರಗಿಸಿಕೊಂಡು ಚಂದ್ರಿಯ ಜೊತೆಯಲ್ಲೇ ಸರಸ ವಿರಸದಲ್ಲಿ ಸಂತೋಷ ಕಾಣುತ್ತಿದ್ದನು.

        ****************************

ಆ ದಿನ ಚಂದ್ರಶೇಖರ ಆಫೀಸ್ ಕೆಲಸವೆಲ್ಲಾ ಮುಗಿದು ಇನ್ನೇನು ಹೊರಡಬೇಕು ಅನ್ನೋ ಸಮಯದಲ್ಲಿ, ಒಂದು ಭರ್ಜರಿ ಸುದ್ದಿ ಚಂದ್ರುಗೆ ಗೊತ್ತಾಗುತ್ತದೆ.  ಅದೇನಂದ್ರೆ ನಮ್ಮ ವಿಜ್ಞಾನಿಗಳು ಬಹಳಷ್ಟು ಸಂಶೋಧನೆ ನಡೆಸಿ, ಚಂದ್ರನ ಮೇಲೆ ಉಸಿರಾಡುವ ಗಾಳಿ ಬರೋ ಹಾಗೇ ಮಾಡಿದ್ದಾರೆ.  ಹಾಗಾಗಿ ಚಂದ್ರನ ಮೇಲೂ ಭೂಮಿ ಮೇಲಿದ್ದ ಹಾಗೇ ಉಸಿರಾಡಿಕೊಂಡು ಇರಬಹುದಾಗಿದೆ.  ಜೊತೆಗೆ ಬಂಪರ್ ಆಫರ್ ಅಂತ ಚಂದ್ರಲೋಕಕ್ಕೆ ಟ್ರಿಪ್ ಕೂಡ ಹೋಗೋ ಅವಕಾಶ ಕೂಡ ಸಿಕ್ಕಿದೆ.  ಬಹಳಷ್ಟು ಜನ ಈಗಾಗಲೇ ಹೋಗ್ತಾ ಇದ್ದಾರೆ.  ಈಗ ಈ ಅವಕಾಶ ಚಂದ್ರು ಆಫೀಸ್ ಟೀಮ್ಗೂ ಸಿಕ್ಕಿದೆ.  ಎರಡನೇ ಯೋಚನೆ ಮಾಡದೆ ಚಂದ್ರುವು ತನ್ನ ತಂಡದವರ ಜೊತೆ ಸೇರಿಕೊಂಡು ಮನೆಯಲ್ಲಿ ಒಂದು ಮಾತೂ ತಿಳಿಸದೇ ಚಂದ್ರಲೋಕಕ್ಕೆ ಹೊರಟೇಬಿಟ್ಟ.

ಅಂತೂ ಇಂತೂ ಚಂದ್ರು ಚಂದ್ರನ ಮೇಲೆ ಪಾದರ್ಪಣೇನೂ ಮಾಡಿ ಆಯ್ತು.  ಚಂದ್ರನ ಮೇಲೆ ಗುರುತ್ವಾಕರ್ಷಣೆ ಭೂಮಿಯ ಶೇಕಡಾ 17 ರಷ್ಟು ಇರುವುದರಿಂದ ಎಲ್ಲರಿಗೂ ಒಂದು ರೀತಿಯ ಮಜಾ ಇರುತ್ತದೆ.  ಏಕೆಂದರೆ ಇಲ್ಲಿ ನಡೆಯುತ್ತಿದ್ದರೇನೇ ಸಿನಿಮಾ ಹಾಡುಗಳಲ್ಲಿ ಹಾರಿಕೊಂಡು ನಿಧಾನವಾಗಿ (slow motion) ನಡೆಯುವಂತೆ ಇರುತ್ತದೆ.  ಹಾಗಾಗಿ ಎಲ್ಲಾರೂ ತೇಲಾಡಿಕೊಂಡು ನಡೆಯುತ್ತಿರುವರು.  ಚಂದ್ರುವೂ ಸಹ ಒಂದೆರಡು ಬಾರಿ ಜಿಗಿಯುವನು.  ಕಾಂಗರೂಗಿಂತ ಎತ್ತರೆತ್ತರಕ್ಕೆ ಹಾರಿಕೊಂಡು ಬಹಳ ದೂರದಲ್ಲಿ ನೆಲ ಮುಟ್ಟುವನು. ಅದನ್ನು ಕಂಡ ಚಂದ್ರುಗೆ ಬಹಳವೇ ಆನಂದವಾಗುತ್ತದೆ.  ಜೊತೆಗೆ ಬಹಳ ಜನ ನಡೆದಾಡುತ್ತಾ ಒಬ್ಬರಿಗೊಬ್ಬರು ದಿಕ್ಕಿಗಳನ್ನು ಹೊಡೆದುಕೊಳ್ಳುತ್ತಿರುವರು.  ಏಕೆಂದರೆ ನಡೆಯುವಾಗ ಮತ್ತು ಜಿಗಿಯುವಾಗ ದೇಹ ನಿಯಂತ್ರಣವಿರುವುದಿಲ್ಲ.  ಹಾಗಾಗಿ ಹಾರಿದಾಗ ಒಬ್ಬರಿಗೊಬ್ಬರು ದಿಕ್ಕಿಗಳನ್ನು ಹೊಡೆದುಕೊಳ್ಳುವರು. ಆದರೆ ಗುರುತ್ವಾಕರ್ಷಣೆ ಶಕ್ತಿ ಕಡಿಮೆ ಇರೋದ್ರಿಂದ ಯಾರಿಗೂ ಏಟು ಬೀಳುವುದಿಲ್ಲ.  ಕೇವಲ ಮುಟ್ಟಿದಂತಹ ಅನುಭವವಾಗುತ್ತದೆ.

ಚಂದ್ರು ಹಾಗೇ ಜಿಗಿತಾ ಜಿಗಿತಾ ಒಂದು ಕಡೆ ಬಂದರೆ  ಅಲ್ಲೊಂದು ಸುಂದರಿ ನಿಂತಿರುವಳು.  ಅವಳನ್ನು ಕಂಡ ಚಂದ್ರು

"ಆಹಾ!  ಆಹಾ!  ಎಂತಹ ಚೆಲುವೆ, ನಿಜಕ್ಕೂ ಚಂದಿರ ಸುಂದರಿ, ಅತಿಲೋಕ ಸುಂದರಿ, ಅಲ್ಲಲ್ಲಾ!  ತ್ರಿಪುರಾ ಸುಂದರಿ!!  ಸುತ್ತಾ ಯಾರೂ ಇಲ್ಲಾ.  ಆಹಾ!!  ಒಂದು ಸಲ ಅವಳ ಕಡೆ ಜಿಗಿದು  ಹಾಗೇ ಅವಳ ಬಳಿ ಹೋಗಿ ಆ ಸುಕೋಮಲ ಕೆನ್ನೆಯನ್ನೊಮ್ಮೆ ಸವರಿಬಿಡೋಣ.  ಹೇಗೂ ಇಲ್ಲಿ ಡಿಕ್ಕಿ ಹೊಡೀತಿರೋದು ಸಹಜವೇ ಅಲ್ವಾ, ಈ ಅವಕಾಶವನ್ನೇ ಉಪಯೋಗಿಸಿಕೊಳ್ಳೋಣ."

ಹೀಗೇ ಚಂದ್ರು ಹೇಳಿಕೊಳ್ಳುತ್ತಾ ಆ ಚಂದಿರ ಸುಂದರಿಯ ಕಡೆಗೆ ಜಿಗಿದೇ ಬಿಡುವನು.  ಇನ್ನೇನು ಆ ಸುಂದರಿಯ ಹತ್ತಿರ ಹೋಗಿ ಕೆನ್ನೆ ಮುಟ್ಟಬೇಕು ಅನ್ನೋವಷ್ಟರಲ್ಲಿ, ಫುಟ್ಬಾಲ್ ಗೋಲ್ ಹೊಡೆಯೋವಾಗ ಗೋಲ್ ಕಿಪರ್ ಅಡ್ಡ ಬಂದಂತೆ ಗಾಳಿಯಲ್ಲೇ ಚಂದ್ರಿಕಾ ಅಡ್ಡ ಬರುವಳು.

ಚಂದ್ರು ಚಂದ್ರಿಕಾಗೆ ಡಿಕ್ಕಿ ಹೊಡೆದು ನೆಲಕ್ಕೆ ಇಳಿಯುವನು.  ಇದೇನು ಹೀಗಾಯ್ತು ಅಂತ ನೋಡಿದ್ರೇ ಎದುರಿನಲ್ಲಿ ಚಂದ್ರಿಕಾ.

"ಅರೇ ಚಂದ್ರಿ ನೀನೇನು ಇಲ್ಲಿ?"

"ಅದಿರ್ಲಿ ನೀವೇನ್ ಇಲ್ಲಿ?"

"ಅದು..  ನಮ್ಮ ಆಫೀಸಿನಿಂದ ಬಂಪರ್ ಆಫರ್ ಇತ್ತು, ಅದಕ್ಕೆ ಆ ಆಫರ್ನಲ್ಲಿ ಇಲ್ಲಿಗೆ ಬಂದೆ,  ಅದು ಸರಿ, ನಿನ್ ಹೇಗೆ ಇಲ್ಲಿಗೆ ಬಂದೆ?"

"ನಮಗೂ ಸ್ತ್ರೀ ಶಕ್ತಿ ಸಂಘದಲ್ಲಿ ಬಂಪರ್ ಆಫರ್ ಇತ್ತು.  ನಿಮ್ಮ ಕಂತ್ರಿ ಬುದ್ಧಿ ನನಗೆ ಗೊತ್ತಲ್ವಾ, ಅದಕ್ಕೆ ನಾನೂ ಅದೇ ಆಫರ್ನಲ್ಲಿ ಇಲ್ಲಿಗೆ ಬಂದೆ."

"ಹೇ.. ಹೇ.   ಏ  ಏ.. ಏ ನ್ ಹಾಗ್ ಹೇಳ್ತೀಯಾ?  ನನ್ನದು ಕಂತ್ರಿ ಬುದ್ಧಿನಾ?   ಅದ್ಯಾಕೆ ಚಂದ್ರಿ ಹಾಗ್ ಹೇಳ್ತಿದ್ದೀಯಾ?  ನಾನೇನು ಅಂತಾದ್ದು ಮಾಡಿದೆ?"

"ಹ್ಞಾ,  ಹ್ಞಾ!!  ಜಾಸ್ತಿ ಪುಂಗಬೇಡಿ!!!   ನಾನೂ ಇಲ್ಲಿಗ್ ಬಂದಾಗಿನಿಂದ ನಿಮ್ಮನ್ ಫಾಲೋ ಮಾಡ್ಕೊಂಡೇ ಬರ್ತಿದ್ದೀನಿ.  ಅದೇನದು!!!   ಅದೇನ್ ಹೇಳ್ತಿದ್ದಿದ್ದು!!"

"ನಾನೇನ್ ಹೇಳಿದೆ ಚಂದ್ರಿ!!"

"ಹ್ಞಾ!!!  ಏನ್ ಹೇಳ್ತಿದ್ರಾ!!  ಅಬ್ಬಬ್ಬಾಬ್ಬಾ!!   ಎಷ್ಟು ನಾಟಕ ಆಡ್ತೀರ್ರಿ!!  ಏನಂದ್ರಿ? ಹ್ಞಾ!!!  ಚಂದಿರ ಸುಂದರಿ!!!  ನಿಮಗೆ ಚಂದಿರ ಸುಂದರಿ ಬೇಕಾ?"

"ಹೇ.. ಹೇ..  ಇ.. ಲ್ಲಾ."

"ಅತಿಲೋಕ ಸುಂದರಿ ಬೇಕಾ?"

"ಛೇ ಛೇ!!   ಹೇ... ಹಾಗೇನೂ ಇಲ್ಲಾ.  ಚಂದ್ರಿ!!"

"ಅಲ್ಲಲ್ಲಾ,  ಅದೇನದು..  ಹ್ಞಾ ತ್ರಿಪುರಾ ಸುಂದರಿ ಬೇಕಾ?"

"ಹಿ ಹ್ಹಿ ಹ್ಹಿ, ಹಾಗೇ ಸುಮ್ಮನೇ!!  ತಮಾಷೆಗೆ.  ಎಲ್ಲಾದ್ರೂ ಉಂಟಾ ಚಂದ್ರಿ!!"

"ಹ್ಹ ಹ್ಹ!!! ಹಾಗೇನು? ನಿಮಗೆ ಹಾಗಾದ್ರೆ ನಿಮಗೆ ಚಂದಿರ ಸುಂದರಿ ಬೇಡ್ವಾ?"

"  ಛೇ!!  ಛೇ!!  ಇಲ್ಲಾದ್ರೂ ಉಂಟಾ ಚಂದ್ರಿ!!   ನೀನು ತಪ್ಪು ತಿಳಿದಿದ್ದೀಯ!!   ನನ್ನ ಪಾಲಿಗೆ ನೀನೇ ನನ್ನ ಚಂದಿರ ಸುಂದರಿ, ನೀನೇ ನನ್ನ ಅತಿಲೋಕ ಸುಂದರಿ, ತ್ರಿಪುರಾ ಸುಂದರಿ.  ಮತ್ತೇ ಎಂದೆಂದಿಗೂ ನಾನೇ ನಿನಗೆ ಪ್ರೀತಿಯ ಚಂದ್ರು.  ಆಲ್ವಾ ಚಂದ್ರಿ?"

"ಹೌದೌದು!!   ನೀವೇ ನನ್ನ ಫುಟ್ಬಾಲ್ ಚಂದ್ರ, ನನ್ನ ವಾಲಿಬಾಲ್ ಚಂದ್ರ, ಹಾಗೇ ಥ್ರೋ ಬಾಲ್ ಚಂದ್ರ,"

ಆ ಮಾತಿಗೆ ಚಂದ್ರು ತಬ್ಬಿಬ್ಬಾಗುತ್ತಾನೆ.  'ಏನಪ್ಪಾ ಇದು!!  ನಾನು ಈಕೆಯ ಸೌಂದರ್ಯದ ಬಗ್ಗೆ ಹೊಗಳುತ್ತಿದ್ದರೆ, ಇವಳು ನನ್ನನ್ನು ಫುಟ್ಬಾಲ್, ವಾಲಿಬಾಲ್ ಅಂತ ಚೆಂಡಿಗೆ ಹೋಲಿಸುತ್ತಿದ್ದಾಳಲ್ಲಾ!!  ಅಯ್ಯೋ ಏನು ನನ್ನ ಚೆಂಡಿನ ತರ ಎಸೆಯುತ್ತಾಳಾ??  ಇಲ್ಲಾ ಒದೀತ್ತಾಳಾ?'

"ಹೌದ್ರಿ!!!  ಅದರಲ್ಲಿ ಅನುಮಾನವೇ ಇಲ್ಲಾ!! ನಿಮ್ಮ ಮನಸ್ಸಿನಲ್ಲಿ ಏನು ಯೋಚನೆ ಮಾಡುತ್ತಿದ್ದೀರೋ ಹಾಗೆಯೇ ನಾನು ಮಾಡೋದು.  ಅದ್ಯಾವಾಗಲೋ ಶಾಲೆಯಲ್ಲಿ ಥ್ರೋ ಬಾಲ್ ಆಡಿದ್ದು, ಈಗ ಒಂದು ಸಲ ಆಡೋಣ ಅಂತಿದ್ದೀನಿ.  ಏನಂತೀರಾ?"

ಎಂದು ಅವನುತ್ತರಕ್ಕೂ ಕಾಯದೆ ಥ್ರೋ ಬಾಲನ್ನು ಎತ್ತಿ ಎಸೆಯುವಂತೆ ಚಂದ್ರಿಕಾ ಚಂದ್ರುವನ್ನು ಎತ್ತಿ ಮೇಲಕ್ಕೆ ಎಸೆಯುವಳು.  ಚಂದ್ರು  ಹಾಗೇ ಮೇಲೆ ತೆಲುತ್ತಾ, 'ಅಯ್ಯೋ! ಚಂದಿರ ಸುಂದರಿ!  ಅತಿಲೋಕ ಸುಂದರಿ!  ತ್ರಿಪುರಾ ಸುಂದರಿ!!  ಎಲ್ಲಾ ಹೋಯ್ತಲ್ಲಾ!!' ಎಂದು ಕಿರಿಚುವನು.  ಆತನ ತಲೆಗೆ ಜೋರಾಗಿ ಒಂದು ಪೆಟ್ಟು ಬೀಳುವುದು.

(ಮುಂದುವರೆಯುವುದು)

====================================

ಹಾಸ್ಯ ಮಿಶ್ರಿತ, ಮನರಂಜನಾ ವಿಚಾರವನ್ನು ಮನಸ್ಸಿನಲ್ಲಿಟ್ಟುಕೊಂಡು ವಿಭಿನ್ನವಾಗಿ ಕಥೆಯನ್ನು ಬರೆಯುವ ಪ್ರಯತ್ನ ಮಾಡಿದ್ದೇನೆ.  ಇಲ್ಲಿ ಬರುವ ಪ್ರತಿಯೊಂದು ಕಥಾ ಹಂದರದ ಭಾಗಗಳು, ಸಂಧರ್ಭಗಳು, ಸನ್ನಿವೇಶಗಳೆಲ್ಲವೂ  ಕಾಲ್ಪನಿಕವಾದುದು.

ದಯವಿಟ್ಟು ಓದುಗರು ತಮ್ಮ ಆಸಕ್ತಿಯನ್ನು ನೀಡಿ, ಓದಿ ತಮ್ಮ ಅಮೂಲ್ಯ ಅಭಿಪ್ರಾಯವನ್ನು, ಪ್ರತಿಕ್ರಿಯೆಯನ್ನು ನೀಡಿ ಪ್ರೋತ್ಸಾಹಿಸಬೇಕೆಂದು ಕೇಳಿಕೊಳ್ಳುತ್ತಿದ್ದೇನೆ. 🙏🙏🙏

ಹಿಂದಿ ಪ್ರವೀಣ:  ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ, ಚೆನೈ. ಇವರು ಹಿಂದಿಯಲ್ಲಿ ಪ್ರವೀಣ ವರೆಗಿನ ವಿದ್ಯಾಭ್ಯಾಸವನ್ನು ಕೊಡುತ್ತಿದ್ದಾರೆ.  ಇದು ಹಿಂದಿ ಪ್ರಥಮ /ಪ್ರಾಥಮಿಕದಿಂದ ಶುರುಗೊಂಡು ನಂತರ, ಮಧ್ಯಮ, ರಾಷ್ಟ್ರ ಭಾಷಾ, ಪ್ರವೇಶಿಕ, ವಿಶಾರದ ಮತ್ತು ಪ್ರವೀಣ್ ಎಂಬ ವಿವಿಧ ಘಟ್ಟಗಳನ್ನು ಹೊಂದಿರುತ್ತದೆ.  ಇದನ್ನು ಓದಿ ಮುಗಿಸಿಕೊಳ್ಳಲು ಯಾವುದೇ ವಯೋಮಿತಿಯಿಲ್ಲ.  ಹಿಂದಿ ಪ್ರವೀಣ ಮಾಡಿ ಮುಗಿಸಿದವರು ಹಿಂದಿಯಲ್ಲಿ ಬಿ.ಎ. ಪದವಿ ಮಾಡಿದಕ್ಕೆ ಸಮ ಎಂದು ಚೆನೈ ವಿಶ್ವವಿದ್ಯಾಲಯದವರು ಘೋಷಿಸಿದ್ದಾರೆ.