"ನಾವೆಲ್ಲರೂ ಬಂದು, ಬಿಸಿಲಲ್ಲಿ ನಾಲ್ಕಾರು ಗಂಟೆ ನಿಂತು ಮಕ್ಕಳ ಜೊತೆ ಸೇರಿ ಇಲ್ಲಿ ಎಷ್ಟೋ ದಿನಗಳ ಕಾಲ ಗಿಡ ಹಾಕಿದ್ದೆವು ಸರ್. ಬೆಳಿಗ್ಗೆ ನಾನು ಇಲ್ಲಿಗೆ ಹೊರಡುವಾಗ ನನ್ನ ಮಗ, 'ಅಮ್ಮ, ನಾನು ಹಾಕಿದ್ದ ಗಿಡ ಉಳಿದಿದೆಯಾ ನೋಡ್ಕೊಂಡು ಬಾ' ಎಂದಿದ್ದ. ಆದರೆ ಇಲ್ಲಿಗೆ ಬಂದು ನೋಡಿದ ಮೇಲೆ ನನಗೆ ತುಂಬಾ ಬೇಸರವಾಯಿತು, ಸರ್. ತುಂಬಾ ಕಷ್ಟ ಪಟ್ಟು ಗಿಡಗಳನ್ನು ನೆಟ್ಟು ಅದನ್ನು ನೋಡಿಕೊಂಡಿದ್ದೆವು“ ಎಂದು ಸಾಫ್ಟ್‌ವೇರ್ ಇಂಜಿನಿಯರ್ ವೀಣಾ ಹೇಳುವಾಗ ಅವರ ಕಣ್ಣುಗಳು ತೇವವಾಗಿದ್ದವು.

ಸಾಮಾನ್ಯವಾಗಿ ಎಷ್ಟೋ ಸಾಫ್ಟ್‌ವೇರ್ ಇಂಜಿನಿಯರ್‌ಗಳು ವಾರಾಂತ್ಯದ ಬೇಸರ ಕಳೆಯಲು ಬೇರೆ ಬೇರೆ ಜಾಗಗಳಿಗೆ ಹೋಗಿ ಗಿಡ ನೆಟ್ಟು ಬರುತ್ತಾರೆ. ಅದಾದಮೇಲೆ ಆ ಗಿಡಗಳು ಏನಾದವು ಎಂದು ತಿರುಗಿ ನೋಡುವುದು ಕಡಿಮೆ. ಆದರೆ ಇಲ್ಲಿ ಹತ್ತಾರು ಜನ ಇಂಜಿನಿಯರ್‌ಗಳು ತಾವು ನೆಟ್ಟ ಗಿಡಗಳನ್ನು ಇಷ್ಟು ವರ್ಷಗಳ ಕಾಲ ಪ್ರೀತಿಯಿಂದ ಕಾಪಾಡಿಕೊಂಡು ಬಂದು, ಈಗಲೂ ಅದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರುವುದನ್ನು ನೋಡಿ ನನಗೂ ಆಶ್ಚರ್ಯವಾಯಿತು. "ಭಾನುವಾರ ನಾವೆಲ್ಲರೂ ಇಲ್ಲಿ ‘ಗಿಡಗಳನ್ನು ಉಳಿಸಲು ಏನು ಮಾಡಬಹುದು?’ ಎಂಬುದರ ಕುರಿತು ಚರ್ಚೆ ಮಾಡಲು ಸೇರುತ್ತಿದ್ದೇವೆ, ನೀವು ಕೂಡ ಬಂದು ನಮಗೆ ಸಲಹೆ ನೀಡಬೇಕು” ಎಂದು ನನ್ನನ್ನು ಅಲ್ಲಿಗೆ ಆಮಂತ್ರಿಸಿದ್ದರು.

ವೀಣಾ ಅವರ ಮಗ "ನಾವು ನೆಟ್ಟಿರುವ ಗಿಡವನ್ನು ಅವರು ಹೀಗೆ ಕಡಿಯುವುದಾದರೆ, ನಾವು ಯಾಕೆ ಗಿಡ ನೆಡಬೇಕು ಅಮ್ಮ?" ಎಂದು ಈ ದಿನ ಅವರು ಇಲ್ಲಿಗೆ ಹೊರಟಾಗ ಕೇಳಿದನಂತೆ. ಅದನ್ನು ಕೇಳಿ ನನಗೆ ನಿಜಕ್ಕೂ ಬೇಸರವಾಯಿತು. ಮುಂದಿನ ಪೀಳಿಗೆಗೆ ನಾವು ಬಿಟ್ಟು ಹೋಗುತ್ತಿರುವುದಾದರೂ ಏನು?

ಅವರ ಮಕ್ಕಳು ತಾವು ನೆಟ್ಟ ಗಿಡಗಳನ್ನು ನೋಡಲೆಂದೇ ಆಗಾಗ ಇಲ್ಲಿಗೆ ಬರುತ್ತಿದ್ದರಂತೆ. ಅಲ್ಲದೆ ಸ್ಥಳೀಯ ಶಾಲೆಯ ಮಕ್ಕಳು ನೂರಾರು ಗಿಡಗಳನ್ನು ಅಲ್ಲಿ ನೆಟ್ಟು ಅದಕ್ಕೆ ನೀರೆರೆದು ನೋಡಿಕೊಳ್ಳುತ್ತಿದ್ದರಂತೆ. ಅವರ ಮಕ್ಕಳಿಗೂ ಬಂದಾಗಲೆಲ್ಲ ನೀರು ಹಾಕಿ, ಗಿಡಗಳನ್ನೆಲ್ಲ ಒಮ್ಮೆ ಪ್ರೀತಿಯಿಂದ ನೋಡಿ ಹೋಗುವುದು ಅವರಿಗೆ ಅಭ್ಯಾಸವಾಗಿತ್ತು ಎಂದು ನನಗೆ ಆ ಇಂಜಿನಿಯರುಗಳು ತಿಳಿಸಿದರು. ಆದರೆ ಈಗ ಆ ಗಿಡಗಳನ್ನು ನೆಟ್ಟಿದ್ದ ಜಾಗದಲ್ಲಿ 80 ಅಡಿಯ ರಸ್ತೆಯೊಂದು ದಿಡೀರನೆ ತಲೆಯೆತ್ತಿದ್ದು, ಇಡೀ ಗುಡ್ಡದ ಚಿತ್ರಣವನ್ನೇ ಬದಲಿಸಿಬಿಟ್ಟಿದೆ. ಸಾವಿರಾರು ವರ್ಷಗಳಿಂದ ಗಟ್ಟಿಯಾಗಿ ನಿಂತಿದ್ದ ಕಲ್ಲುಗುಡ್ಡ ಈಗ ಕಾಂಕ್ರೀಟ್ ಕಾಡಾಗುವತ್ತ ಹೊರಟಂತೆ ಕಾಣುತ್ತಿದೆ. ಕಲ್ಲುಬಂಡೆಗಳನ್ನೆಲ್ಲ ಜೆಸಿಬಿಗಳಿಂದ ಜರುಗಿಸಿಬಿಟ್ಟಿದ್ದಾರೆ.

IMG_1196.jpg

ಇತಿಹಾಸ ಪ್ರಸಿದ್ಧ ಮಹಿಮಾಪುರ ಬೆಟ್ಟ

ಜಾಗ - ಮಹಿಮಾಪುರ. ಮಹಿಮಾಪುರ ಬೆಟ್ಟಕ್ಕೆ ತನ್ನದೇ ಆದ ಇತಿಹಾಸವಿದೆ. ಪ್ರಾಚೀನವಾದ ಈ ಬೆಟ್ಟದಲ್ಲಿ ಗರುಡನ ನೆಲೆ ಇದೆ ಎಂದು ಹೇಳಲಾಗುತ್ತದೆ. ಆದರೆ ಕಾಡೇ ಇಲ್ಲದ ಮೇಲೆ ಗರುಡ ಎಲ್ಲಿಂದ ಇರುತ್ತಾನೆ?  ಅಲ್ಲಿರುವ ಕೆಲವರು ಸ್ಥಳೀಯರಿಗೆ ಇದಾವುದೂ ಮನಸ್ಸಿಗೆ ಬಂದಂತೆ ಕಾಣುತ್ತಿಲ್ಲ. ಸ್ವತಃ ದೇವಸ್ಥಾನದ ಮೇಲ್ವಿಚಾರಕರೇ ಮತ್ತೊಂದು ರಸ್ತೆ ನಮಗೆ ಬೇಕು ಎನ್ನುವಂತೆ ಇದಕ್ಕೆ ಗ್ರೀನ್ ಸಿಗ್ನಲ್ ತೋರಿಸಿದ್ದಾರೆ ಎಂದು ನನ್ನಲ್ಲಿ ಸ್ಥಳೀಯರು ಸಂಕಟವನ್ನು ಹಂಚಿಕೊಂಡರು.

IMG_7960.jpg

ಈಗಾಗಲೇ ದೇವಸ್ಥಾನಕ್ಕೆ ಹೋಗಲು ಒಂದು ರಸ್ತೆಯಿತ್ತು. ಆದರೆ ಆ ರಸ್ತೆಯ ಇಳಿಜಾರು ಹೆಚ್ಚಾಗಿತ್ತು ಎಂಬ ಕಾರಣಕ್ಕೆ ಹೊಸ ರಸ್ತೆ ಬೇಕು ಎಂಬ ಮಾತು ಶುರುವಾಯಿತಂತೆ. "ಇದು ಪಿಡಬ್ಲ್ಯೂಡಿಯವರು (PWD) ಶುರು ಮಾಡಿರುವ ಕೆಲಸ" ಎಂದು ಒಬ್ಬರು ಹೇಳಿದರೆ, "ಎಂಎಲ್ಎ ಕಡೆಯಿಂದ ದುಡ್ಡು ಬಂದಿದೆ” ಎಂದು ಇನ್ನೊಬ್ಬರು ಹೇಳುತ್ತಾರೆ. ಯಾರ ಬಳಿಯೂ ಸರಿಯಾದ ಮಾಹಿತಿ ಇಲ್ಲ. ಸಾಮಾನ್ಯವಾಗಿ ಎಲ್ಲೇ ಸರ್ಕಾರಿ ಕೆಲಸ ನಡೆಯಬೇಕಾದರೂ ಯೋಜನೆಯ ಸವಿಸ್ತಾರ ಮಾಹಿತಿಯ ಫಲಕವನ್ನು ಹಾಕಿ ಕೆಲಸ ಪ್ರಾರಂಭಿಸುವ ನಿಯಮವಿದೆ. ಆದರೆ ಇಲ್ಲಿ ಆ ರೀತಿ ಯಾವುದನ್ನೂ ಹಾಕದೆ ಕೆಲಸ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರಲ್ಲಿ ಹಿರಿಯರು ಬೇಸರದಿಂದ ತಿಳಿಸಿದರು. ಕೇವಲ ನಾಲ್ಕೈದು ದಿನಗಳಲ್ಲಿ ನೂರಾರು ಗಿಡಗಳನ್ನು, ಕೆಲವು ದೊಡ್ಡದಾದ ಮರಗಳನ್ನು ನೆಲಕ್ಕೆ ಉರುಳಿಸಿರುವುದು ಅಲ್ಲಿ ಎದ್ದು ಕಾಣುತ್ತಿತ್ತು. "ಬೆಟ್ಟದ ಮಣ್ಣನ್ನು ತೆಗೆದುಕೊಳ್ಳಬೇಡಿ" ಎಂದು ಗ್ರಾಮಸ್ಥರು ಕೆಲವರು ಪ್ರತಿಭಟಿಸಿದ ಕಾರಣ, ಈಗ ಕೆರೆಯಿಂದ ದೊಡ್ಡ ದೊಡ್ಡ ಟಿಪ್ಪರ್ ಗಾಡಿಗಳಲ್ಲಿ ಮಣ್ಣನ್ನು ತಂದು ಅಲ್ಲಿ ಒಟ್ಟು ಹಾಕಲಾಗುತ್ತಿದೆ.

ನಮ್ಮ ಸಂಪ್ರದಾಯಗಳಲ್ಲಿ ಪರಿಸರವೇ ವಿಷ್ಣು. ಸುತ್ತಲ ಇರುವ ಗಿಡಗಳಲ್ಲೇ ರಂಗನು ನೆಲೆಸಿರುವನು. ರಂಗನಾಥನ ಸಮ್ಮುಖದಲ್ಲಿ ಸ್ವತಃ ವಿಷ್ಣುವಿನ ನೆಲೆಯೇ ಆದ ಮರಗಳನ್ನು ಕಳೆದುಕೊಂಡು ಗ್ರಾಮಸ್ಥರಾಗಲಿ, ಇಲ್ಲಿಗೆ ಬರುವ ಪ್ರವಾಸಿಗರಾಗಲಿ, ರಂಗನಾಥನನ್ನು ನೋಡಲು ಬೆಟ್ಟದ ಮೇಲೆ ಹೋಗುವುದಾಗುತ್ತದೆ. ಕಮರ್ಷಿಯಲೈಸೇಶನ್ ಸುಳಿಯಲ್ಲಿ ಮತ್ತೊಂದು ಪ್ರಾಚೀನ ದೇವಸ್ಥಾನ ಸಿಕ್ಕಿಕೊಂಡಿದೆ.

ನೆನಪಿನಲ್ಲಷ್ಟೇ ಉಳಿಯುವ ಮಲೆನಾಡಿನಂತಹ ವಾತಾವರಣ

ಹತ್ತು ವರ್ಷಗಳ ಹಿಂದೆ ಇದೇ ಬೆಟ್ಟಕ್ಕೆ ನಾನು ಹೋದಾಗ, ಅಲ್ಲಿ ಮಲೆನಾಡಿನಲ್ಲಿ ಕಾಣಸಿಗುವಂತಹ ದಟ್ಟ ಕಾಡು ಕಂಡಿದ್ದು ನನಗಿನ್ನೂ ನೆನಪಿದೆ. ಅಂದು ಅಲ್ಲಿ ಬೀಸುತ್ತಿದ್ದ ತಣ್ಣನೆಯ ಗಾಳಿಯನ್ನು ಸವಿಯುತ್ತಾ, "ಇಲ್ಲಿಗೆ ಬಂದು ನಾನು ತಪ್ಪು ಮಾಡಲಿಲ್ಲ; ಈ ದೇವಸ್ಥಾನದಿಂದ ಕೆಲವೇ ಮೈಲಿ ದೂರದಲ್ಲಿ ನಮ್ಮ ಮನೆ ಇರುವುದು ನನ್ನ ಭಾಗ್ಯ" ಎಂದುಕೊಂಡಿದ್ದೆ. ದೇವಸ್ಥಾನದ ಸುತ್ತ ಇದ್ದ ಈ ಕಾಡು ನೂರಾರು ಕೋತಿಗಳಿಗೆ ಆವಾಸಸ್ಥಾನವಾಗಿತ್ತು. ಇಲ್ಲಿ ಬೆಳೆಯುತ್ತಿದ್ದ ನೇರಳೆ, ಬೇಲದ ಹಣ್ಣು, ಕಾರೆ ಹಣ್ಣು ಮುಂತಾದ ಕಾಡುಹಣ್ಣುಗಳನ್ನು ತಿಂದು ಅವು ಬದುಕುತ್ತಿದ್ದವು.

ಆದರೆ ದೇವಸ್ಥಾನ ದೊಡ್ಡದಾದಂತೆ ಹಲವಾರು ಸಿಮೆಂಟಿನ ಕಟ್ಟಡಗಳು ಬಂದವು; ಜೊತೆಗೆ ಪಕ್ಕದಲ್ಲೇ ಒಂದು ದೊಡ್ಡ ರಸ್ತೆಯೂ ಆಯಿತು. ಇದೆಲ್ಲದರ ನಡುವೆ ಸುತ್ತಲೂ ಇದ್ದ ಮರಗಳು ಕ್ಷೀಣವಾಗುತ್ತಾ ಹೋದವು. ಕೆಲವೆಡೆ ಮಣ್ಣು-ಕಲ್ಲು ಜರುಗಿತು. ಕಾಡು ನಾಶವಾದಂತೆ ಹಣ್ಣುಗಳು ಕಡಿಮೆಯಾಗಿ, ಕೋತಿಗಳು ಆಹಾರಕ್ಕಾಗಿ ಸುತ್ತಮುತ್ತಲ ಗ್ರಾಮಸ್ಥರ ತೋಟಗಳಿಗೆ ಲಗ್ಗೆ ಇಡಲು ಶುರುಮಾಡಿದವು.

ಮಹಿಮಾಪುರ ಜಾಗವಂತೂ ಅಕ್ಷರಶಃ ಒಂದು ಪುಟ್ಟ ಸ್ವರ್ಗವಾಗಿತ್ತು. ಬೆಟ್ಟದ ಮೆಟ್ಟಿಲುಗಳನ್ನು ಹತ್ತಿ ದೇವಸ್ಥಾನಕ್ಕೆ ನಡೆಯುವಾಗ, ಇದಾವುದೋ ಸ್ವರ್ಗದ ದಾರಿಯಲ್ಲಿ ಹೋಗುತ್ತಿದ್ದೇವೆ ಎಂದೇ ಭಾಸವಾಗುತ್ತಿತ್ತು. ಬೆಟ್ಟವೇನೋ ಬಹಳ ಸಣ್ಣದು, ಮೊದಲು ದೇವಸ್ಥಾನವು ಪುಟ್ಟದಾಗಿಯೇ ಇತ್ತು. ಆದರೆ ಸುತ್ತಲೂ ಇದ್ದ ಪರಿಸರ ಮಾತ್ರ ನಮ್ಮನ್ನು ಯಾವುದೋ ಹೊಸ ಪ್ರಪಂಚಕ್ಕೆ ಕರೆದೊಯ್ದಂತೆ ಅನಿಸುತ್ತಿತ್ತು. ಈಗ ಹಾಗಿಲ್ಲ. ಮರಗಳು ಕ್ಷೀಣವಾಗಿ, ಸುತ್ತಲೂ ಇದ್ದ ಜೀವವೈವಿಧ್ಯ ತೀರಾ ಕಡಿಮೆಯಾಗಿದೆ. ಹಸಿರಿನ ಜಾಗದಲ್ಲಿ ಈಗ ಪ್ಲಾಸ್ಟಿಕ್ ಬಾಟಲಿಗಳು, ಕವರ್‌ಗಳು ಎಲ್ಲೆಂದರಲ್ಲಿ ನೋಡಲು ಸಿಗುತ್ತವೆ.

ಇದೆಲ್ಲದರ ನಡುವೆ ಇತ್ತೀಚೆಗೆ ನಡೆದ ಒಂದು ಘಟನೆ ಇಡೀ ಗುಡ್ಡದ ನಾಶಕ್ಕೆ ಕೊನೆಯ ಅಧ್ಯಾಯ ಬರೆಯುವಂತೆ ಮಾಡಿದೆ. ದೇವಸ್ಥಾನಕ್ಕೆ ಈಗಾಗಲೇ ಒಂದು ವಿಪರೀತ ಕಡಿದಾದ ರಸ್ತೆಯೊಂದು ಮೆಟ್ಟಲುಗಳ ಪಕ್ಕದಲ್ಲಿಯೇ ಇದೆ. ಹುಡುಗನೊಬ್ಬ ಆ ಇಳಿಜಾರಿನ ರಸ್ತೆಯಲ್ಲಿ ಬೈಕಿನಲ್ಲಿ ಇಳಿಯುವಾಗ ಜಾರಿ ಬಿದ್ದನಂತೆ. ಅವನ ಹೆಲ್ಮೆಟ್‌ಗೆ ಪೆಟ್ಟು ಬಿದ್ದಿತ್ತಂತೆ. ಅದಾದ ನಂತರ ಗ್ರಾಮಸ್ಥರೆಲ್ಲ ಈ ಬಗ್ಗೆ ಮಾತನಾಡಲು ಶುರುಹಚ್ಚಿಕೊಂಡರಂತೆ. ಆ ಮಾತು ಎಲ್ಲಿಂದ ಎಲ್ಲಿಗೋ ಹೋಗಿ ಕೊನೆಗೆ "ಹೊಸ ರಸ್ತೆ" ಮಾಡುವಲ್ಲಿಗೆ ಬಂದು ನಿಂತಿತು. ರಸ್ತೆ ಮಾಡುವವರಿಗೆ ಹಣ ಕೂಡ ಸ್ಯಾಂಕ್ಷನ್ ಆಗಿಬಿಟ್ಟಿತು! ಯಾರು ಸ್ಯಾಂಕ್ಷನ್ ಮಾಡಿದರು? ಈ ವಿಷಯ ಗ್ರಾಮಸ್ಥರಿಗೂ ತಿಳಿದಿರುವಂತೆ ಕಾಣದು. ಆದರೆ ಕೆಲಸ ಮಾತ್ರ ಕ್ಷಿಪ್ರ ಗತಿಯಲ್ಲಿ ಶುರುವಾಗಿಬಿಟ್ಟಿದೆ. ನಾಲ್ಕು ನಾಲ್ಕು ದೊಡ್ಡ ಟಿಪ್ಪರ್ ಗಾಡಿಗಳಲ್ಲಿ ಮಣ್ಣು ತಂದು ಹಾಕುತ್ತಿದ್ದಾರೆ. ಧೂಳು ಆಗಸಕ್ಕೆ ಏರಿ ಎಲ್ಲರನ್ನೂ ಸುತ್ತುವರೆದಿದೆ. ಈಗಾಗಲೇ ಹೆಚ್ಚಿನ ಜನ ಈಗ ಕಾರನ್ನು ಸೀದಾ ದೇವಸ್ಥಾನದ ಹತ್ತಿರ ಮೊದಲಿದ್ದ ಇಳಿಜಾರಿನ ರಸ್ತೆಯಲ್ಲೇ ತೆಗೆದುಕೊಂಡು ಹೋಗುತ್ತಿದ್ದಾರೆ. ಮೆಟ್ಟಿಲು ಹತ್ತುವವರೇ ಯಾರೂ ಇಲ್ಲ.

ಈ ಕಥೆ ಇದೊಂದೇ ದೇವಸ್ಥಾನದ್ದಲ್ಲ; ನಮ್ಮ ಸುತ್ತಮುತ್ತಲಿರುವ ಎಷ್ಟೋ ಪ್ರಾಚೀನ ಕಾಲದ ದೇವಸ್ಥಾನಗಳದ್ದು. ಆ ಹಳೆಯ ದೇವಸ್ಥಾನಗಳ ಸುತ್ತ ಇರುತ್ತಿದ್ದ ದಿವ್ಯತೆ (Charm) ಮತ್ತು ಪ್ರಶಾಂತತೆ ಈಗ ಇಲ್ಲವಾಗುತ್ತಿದೆ. ಮನಬಂದಂತೆ ಬಣ್ಣ ಹೊಡೆದು, ಮೆಟ್ಟಿಲುಗಳನ್ನು ಕಡೆಗಣಿಸಿ, ಪೆಟ್ರೋಲ್-ಡೀಸೆಲ್ ಗಾಡಿಗಳಲ್ಲಿ 'ಬೊರ್ರ್' ಎಂದು ದೇವಸ್ಥಾನದ ಗರ್ಭಗುಡಿಯವರೆಗೂ ಹೋಗುವ ಈಗಿನ ಕಾಲದ ಜನರ ಹುಚ್ಚು ಹುಮ್ಮಸ್ಸು ನೋಡಿದರೆ ಬೇಸರವಾಗುತ್ತದೆ. ಪ್ರಾಚೀನ ದೇವಸ್ಥಾನಗಳ ಆ ಪವಿತ್ರವಾದ 'ವೈಬ್' ಇವುಗಳ ನಡುವೆ ಕಳೆದೇ ಹೋಗಿದೆ.

ಸ್ವಾರ್ಥದ ಮುಂದೆ ಸೋಲುತ್ತಿರುವ ಪರಿಸರ ಕಾಳಜಿ

ಗ್ರಾಮಸ್ಥರಲ್ಲಿದ್ದ ಕೆಲವರು ಹಿರಿಯರು ಮತ್ತು ಅರಿತ ಚೇತನಗಳು ಈ ರಸ್ತೆಯಿಂದಾಗುವ ದುಷ್ಪರಿಣಾಮಗಳು ಹಾಗೂ ಗುಡ್ಡಕ್ಕೆ ಕಾಯ್ದಿರುವ ಕಂಟಕಗಳ ಬಗ್ಗೆ ತೀವ್ರ ಚಿಂತೆಗೊಳಗಾಗಿ ಇಂದು ಒಟ್ಟುಗೂಡಿದ್ದರು. ಅವರೊಂದಿಗೆ ಗಿಡ ನೆಟ್ಟ ಸಾಫ್ಟ್‌ವೇರ್ ಇಂಜಿನಿಯರ್‌ಗಳು ಮತ್ತು ಅವರ ಪರಿವಾರದವರೂ ಜೊತೆಯಾಗಿದ್ದರು.

ಮಹಿಮಾ ರಂಗನಾಥ ಸ್ವಾಮಿ ಬೆಟ್ಟ ಅತ್ಯಂತ ಪ್ರಾಚೀನವಾದದ್ದು. ಸಾವಿರಾರು ವರ್ಷಗಳಿಂದ ಅದಕ್ಕೆ ಯಾವುದೇ ರೀತಿಯ ಧಕ್ಕೆಯಾಗಿರಲಿಲ್ಲ, ಸುತ್ತಲೂ ದಟ್ಟ ಕಾಡಿತ್ತು. ಇಲ್ಲಿ ಬಿ.ವಿ. ಕಾರಂತರು ತಮ್ಮ ಪ್ರಸಿದ್ಧ "ತಬ್ಬಲಿಯು ನೀನಾದೆ ಮಗನೇ" ಚಿತ್ರವನ್ನು ಶೂಟ್ ಮಾಡಿದ್ದರು. ಆ ಸಿನಿಮಾದಲ್ಲಿನ ದೃಶ್ಯಗಳನ್ನು ನೋಡಿದರೆ, ಇದನ್ನು ಯಾವುದೋ ಸ್ವರ್ಗದಂತಹ ಹಳ್ಳಿಯಲ್ಲೇ ಚಿತ್ರೀಕರಿಸಿರಬೇಕು ಅನಿಸುತ್ತದೆ.

ಏನೂ ತಿಳಿಯದ ಮುಗ್ಧ ಗ್ರಾಮಸ್ಥರ ನಡುವೆ, ಪರಿಸರದ ಬಗ್ಗೆ ಚಿಂತೆಗೊಳಗಾಗಿದ್ದ ಆ ಹಿರಿಯ ಚೇತನಗಳನ್ನು ನೋಡಿ ನನಗೂ ಮನಸ್ಸು ಭಾರವಾಯಿತು. ಆದರೆ ಅವರೆಲ್ಲರ ಜೊತೆ ಮಾತನಾಡಿ ದೇವಸ್ಥಾನದ ಬುಡಕ್ಕೆ ಹೋದಾಗ ನನಗೆ ಬೇರೆಯದೇ ರೀತಿಯ ಆಘಾತ ಕಾದಿತ್ತು! ಅಲ್ಲಿದ್ದ ಅಂಗಡಿಗಳ ವ್ಯಾಪಾರಿಗಳು ಟಿವಿ ಚಾನೆಲ್‌ನವರ ಮುಂದೆ, "ಇವರೆಲ್ಲ ಡೋಂಗಿಗಳು, ಇವರ ಮಾತು ಕೇಳಬೇಡಿ. ಎಲ್ಲಿಂದಲೋ ಬರುತ್ತಾರೆ. ಬರಿ ಉಪಯೋಗಕ್ಕೆ ಬಾರದ ಗಿಡಗಳನ್ನು ಮಾತ್ರ ಕಿತ್ತಿದ್ದಾರೆ, ನಮಗೆ ರಸ್ತೆ ಬೇಕು" ಎಂದು ಕೂಗಾಡಲು ಶುರು ಮಾಡಿದರು. ಅದನ್ನು ಕೇಳಿ ನನಗೆ ಸಣ್ಣ ಹಳ್ಳಿಗಳಲ್ಲಿರುವ ಜನರ ಸ್ವಾರ್ಥ ಮತ್ತು ಬದಲಾಗಿರುವ ಮನಸ್ಥಿತಿಯನ್ನು ನೋಡಿ ಬೆರಗಾಗುವಂತಾಯಿತು.

ಜೀವನವೇ ಎಷ್ಟೋ ರೀತಿಯಲ್ಲಿ ಕಷ್ಟವಿರುವಂತಹ ಸಣ್ಣ ಊರುಗಳಲ್ಲಿ, ತಮ್ಮ ವೈಯಕ್ತಿಕ ಲಾಭಕ್ಕಾಗಿ ಕೆಲವರು ಸತ್ಯವನ್ನು ಹೇಗೆ ಬೇಕಾದರೂ ತಿರುಚಬಲ್ಲರು ಎಂಬುದಕ್ಕೆ ಇದು ಸಾಕ್ಷಿ. ಇಲ್ಲಿರುವ ನೂರಾರು ವೈವಿಧ್ಯಮಯ ಸಸ್ಯಗಳು ಮತ್ತು ಮರಗಳನ್ನು ಉಳಿಸಲು ದೂರದ ಊರುಗಳಿಂದ ಬಂದಿದ್ದ ನಿಸ್ವಾರ್ಥ ಜನರನ್ನು ಅವರು ಹಾಗೆ ಜನರಲೈಸ್ ಮಾಡಿ ಮಾತನಾಡಿದ್ದು ನೋಡಿದರೆ ಪರಿಸರವನ್ನು ಉಳಿಸುವ ಕೆಲಸ ಎಷ್ಟು ಕಷ್ಟ ಎಂಬುದು ಅರ್ಥವಾಗುತ್ತದೆ.

ಕೊನೆಯದಾಗಿ...

ನಿಜ ಹೇಳಬೇಕೆಂದರೆ ಪರಿಸರವನ್ನು ನಾವೇನೂ ಬಲವಂತವಾಗಿ ಉಳಿಸಬೇಕಾಗಿಲ್ಲ, ಪ್ರಕೃತಿ ತನ್ನಷ್ಟಕ್ಕೆ ತಾನು ಉಳಿದುಕೊಳ್ಳುವ ಶಕ್ತಿ ಹೊಂದಿದೆ. ಆದರೆ ನಮಗಾಗಿ ಹಾಗೂ ನಮ್ಮ ಮಕ್ಕಳಿಗಾಗಿ ಈಗಿರುವ ಪರಿಸರವನ್ನು ನಾವು ಉಳಿಸಿಕೊಳ್ಳಬೇಕಾಗಿದೆ, ಅಷ್ಟೇ. ಏಕೆಂದರೆ ಅವರ ಮುಂದಿನ ಜೀವನದಲ್ಲಿ ಒಳ್ಳೆಯ ಗಾಳಿ, ಹಸಿರಾದ ಗಿಡಗಳ ನಡುವೆ ಬೆಳೆಯುವ ಅವಕಾಶ ಹಾಗೂ ವಿಷಮುಕ್ತ ಆಹಾರ ಸಿಗುವುದು ತೀರಾ ಕಷ್ಟವಾಗಲಿದೆ. ಎಷ್ಟೇ ದುಡ್ಡು ಕೊಟ್ಟರೂ ಇವುಗಳನ್ನು ಕೊಳ್ಳಲು ಸಾಧ್ಯವಿಲ್ಲ. ನಾವೆಲ್ಲರೂ ಎಷ್ಟೇ ದುಡ್ಡು ದುಡಿದರೂ, ಮಕ್ಕಳಿಗೆ ಒಂದು ಉತ್ತಮ ಪರಿಸರ ಕೊಡಲಾಗದೆ ಈ ಜಗತ್ತಿನಿಂದ ಕಳೆದು ಹೋಗುತ್ತೇವೆ.

ಎಲ್ಲರಿಗೂ ಈ ವಿಷಯ ತಿಳಿದಿದ್ದರೂ ಪ್ರತಿಯೊಬ್ಬರಿಗೂ ದುಡ್ಡಿನ ವ್ಯಾಮೋಹವೇ ಹೆಚ್ಚಾಗಿದೆ. ಪರಿಸರ ಉಳಿಸುವ ನಿಜವಾದ ಕಾಳಜಿ ಯಾರಿಗೂ ಇದ್ದಂತೆ ಕಾಣುತ್ತಿಲ್ಲ. ಅಲ್ಲಿನ ಕೆಲವು ಗ್ರಾಮಸ್ಥರೇ ಇದರ ಕುರಿತು ಹೆಚ್ಚಿನದಾಗಿ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಮುಂದೊಂದು ದಿನ ಇಡೀ ಗುಡ್ಡ ಸಡಿಲಗೊಂಡು, ಕಲ್ಲುಬಂಡೆಗಳೆಲ್ಲ ಪಕ್ಕಕ್ಕೆ ಸರಿದು, ದಾರಿಯುದ್ದಕ್ಕೂ ಅಂಗಡಿಗಳ ಮಹಾಪೂರವೇ ಬಂದು, ಸುತ್ತಲೂ ಪ್ಲಾಸ್ಟಿಕ್ ಕಸದ ರಾಶಿ ಸುರಿದ ಮೇಲಾದರೂ ಅವರಿಗೆ ಬುದ್ಧಿ ಬರುತ್ತದೋ ಅಥವಾ ಆಗಲೂ ಅವರಿಗೆ ಇದೆಲ್ಲ ಕಾಣಿಸದೇ ಹೋಗುತ್ತದೋ ಯಾರಿಗೂ ತಿಳಿಯದು. ಸಮಯ ಒಂದೇ ಇದಕ್ಕೆ ಉತ್ತರ ನೀಡಬೇಕು.

ಸದ್ಯಕ್ಕಂತೂ ಸ್ವರ್ಗದಂತಿದ್ದ ಬೆಟ್ಟ ಕಾಂಕ್ರೀಟ್ ರಸ್ತೆಯಾಗಿ ಹೋಗುವುದರಲ್ಲಿ ಹೆಚ್ಚು ಸಮಯವಿಲ್ಲ. ಇನ್ನು ಮುಂದೆ ಭೂಮಿಯ ಮೇಲಿದ್ದ ಈ ಪುಟ್ಟ ಸ್ವರ್ಗ ನಮ್ಮ ನೆನಪುಗಳಲ್ಲಿ ಮಾತ್ರ ಉಳಿಯುವುದು ಅಷ್ಟೇ.