ಉಪರಾಜ್ಯಪಾಲರು- ಕೇಂದ್ರ ಸರ್ಕಾರದ ಜತೆ ನಿರಂತರ ಸಂಘರ್ಷ, ದೆಹಲಿ ಮುಖ್ಯಮಂತ್ರಿಯಾಗಿದ್ದಾಗಲೇ ಪಕ್ಷದ ಅಧಿನಾಯಕ ಅರವಿಂದ ಕೇಜ್ರವಾಲ್ ಜೈಲುವಾಸ, ಪಕ್ಷದ ಭದ್ರಕೋಟೆಯಾಗಿದ್ದ ದೆಹಲಿ ವಿಧಾನಸಭೆ ಚುನಾವಣೆಯ ಸೋಲಿನಿಂದ ಜರ್ಜರಿತವಾಗಿರುವ ಆಮ್ ಆಡ್ಮಿ ಪಕ್ಷ (ಆಪ್)ಕ್ಕೆ ಬಹುದೊಡ್ಡ ಆಘಾತವನ್ನು ಆ ಪಕ್ಷದಿಂದಲೇ ಉದಯಿಸಿದ ನಾಯಕ ರಾಘವ್ ಚಡ್ಡಾ ಕೊಟ್ಟಿದ್ದಾರೆ. ಕಳೆದ ೨ ವರ್ಷಗಳಿಂದ ಪಕ್ಷ ಹಾಗೂ ಅದರ ನಾಯಕರಿಂದ ಅನುಮಾನಾಸ್ಪದ ಅಂತರ ಕಾಯ್ದುಕೊಂಡಿದ್ದ ರಾಘವ್ ಅವರನ್ನು ಕೆಲ ದಿನಗಳ ಹಿಂದಷ್ಟೇ ರಾಜ್ಯಸಭೆ ಉಪನಾಯಕನ ಸ್ಥಾನದಿಂದ ವಜಾಗೊಳಿಸಲಾಗಿತ್ತು. ಆ ನಿರ್ಧಾರದಿಂದ ಅಚ್ಚರಿ ಏನೂ ಆಗಿರಲಿಲ್ಲ. ಆದರೆ, ಇತರೆ ಆರು ಸಂಸದರ ಜತೆಗೂಡಿ ಬಿಜೆಪಿ ಸೇರುವ ನಿರ್ಧಾರವನ್ನು ರಾಘವ್ ಚಡ್ಡಾ ಪ್ರಕಟಿಸಿರುವುದು ಆಪ್‌ಗೆ ದುಬಾರಿಯಾಗಿ ಪರಿಣಮಿಸಿದೆ.

ರಾಘವ್ ಚಡ್ಡಾಗಿಂತ ಮೊದಲೇ ರಾಜ್ಯಸಭೆ ಸದಸ್ಯೆ ಸ್ವಾತಿ ಮಲಿವಾಲ್ ಅವರು ಪಕ್ಷದ ವಿರುದ್ಧ ಬಂಡೆದಿದ್ದರು. ಈಗ ಅವರಿಬ್ಬರ ಜತೆಗೆ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಸೇರಿ ೭ ಮಂದಿ ಬಿಜೆಪಿ ಸೇರಲು ಮುಂದಾಗಿದ್ದಾರೆ. ರಾಜ್ಯ ಸಭೆಯಲ್ಲಿ ಆಪ್ ೧೦ ಸದಸ್ಯರನ್ನು ಹೊಂದಿದೆ. ಮೂರನೇ ಎರಡರಷ್ಟು ಸದಸ್ಯರು ಪಕ್ಷ ತೊರೆಯುತ್ತಿರುವ ಕಾರಣ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗುವುದಿಲ್ಲ. ಅಣ್ಣಾ ಹಜಾರೆ ಅವರನ್ನು ಮುಂದಿಟ್ಟುಕೊಂಡು ಭ್ರಷ್ಟಾಚಾರ ವಿರುದ್ಧ ಹಾಗೂ ಲೋಕಪಾಲ ಜಾರಿಗಾಗಿ ಕೇಜ್ರಿವಾಲ್ ಅವರು ಹೋರಾಟ ಸಂಘಟಿಸಿ, ಅದರಲ್ಲಿ ಯಶಸ್ವಿಯಾದ ಬಳಿಕ ಆಪ್ ಹುಟ್ಟು ಹಾಕಿದರು. ಆ ಪಕ್ಷ ಜನಿಸಿದಾಗಿನಿಂದಲೂ ರಾಘವ್ ಚಡ್ಡಾ ಅವರು ಕೇಜಿಗೆ ನಂಬಿಕಸ್ಥ ಬಂಟನಂತಿದ್ದರು. ಅದೇ ಕಾರಣಕ್ಕೆ ಕೇಬ್ರಿವಾಲ್ ಅವರು ಚಡ್ಡಾ ಅವರನ್ನು ರಾಜ್ಯ ಸಭೆಗೂ ಕಳುಹಿಸಿದ್ದರು. ಅದಾದ ಬಳಿಕ ಇಬ್ಬರ ನಡುವೆ ಸಂಬಂಧ ಹಳಸಿತ್ತು. ಕೇಜಿವಾಲ್ ಬಂಧನವಾದಾಗಲೂ ಚಡ್ಡಾ ಮಾತನಾಡಿರಲಿಲ್ಲ. ಚಿಕಿತ್ಸೆಯ ನೆಪದಲ್ಲಿ ಲಂಡನ್‌ ಹಾರಿದ್ದರು. ಅದಾದ ತರುವಾಯ ಕೇಜಿವಾಲ್ ಅವರನ್ನು ಭೇಟಿಯಾಗಿದ್ದರಾದರೂ ಸಂಬಂಧ ಸುಧಾರಣೆಯಾಗಿರಲಿಲ್ಲ. ಕೇಜಿವಾಲ್ ಅವರು ಅಬಕಾರಿ ಹಗರಣದಲ್ಲಿ ಖುಲಾಸೆಯಾದ ಬಳಿಕವೂ ಸಂಭ್ರಮಾಚರಣೆಯಲ್ಲಿ ಚಡ್ಡಾ ಇರಲಿಲ್ಲ. ಆಗಲೇ ಇವರಿಬ್ಬರ ನಡುವೆ ಏನೋ ನಡೆಯುತ್ತಿದೆ ಎಂಬ ವಾಸನೆ ಇತ್ತು. ಅದು ಈಗ ಸ್ಪೋಟಗೊಂಡಿದೆ. ಪಂಜಾಬ್ ಹೊರತುಪಡಿಸಿ ಆಪ್ ಬೇರೆಲ್ಲೂ ಅಧಿಕಾರದಲ್ಲಿಲ್ಲ. ಇಂತಹ ಹೊತ್ತಿನಲ್ಲೇ ಆ ಪಕ್ಷದಿಂದ ನಾಯಕರು, ಸಂಸದರು ಹೊರನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಹೀಗಾಗಿ ಆಪ್ ನಾಯಕರು ಆತ್ಮಾವಲೋಕನ ಮಾಡಿಕೊಳಬೇಕಿದೆ.

ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೨೫-೦೪-೨೦೨೬

 ಚಿತ್ರ ಕೃಪೆ: ಅಂತರ್ಜಾಲ ತಾಣ