ರಾಧಾ ಕುಮುದ್ ಮುಖರ್ಜಿ ಅವರ "Ancient Indian Education" ಪುಸ್ತಕದ ಪರಿಚಯ.
ಶಾಲೆ ಎಂದರೆ ಏನು? ಇಂದು ನಮಗೆ ಅದು ಗೋಡೆಗಳ ಕಟ್ಟಡ, ಬೆಂಚು, ಬೋರ್ಡು, ಪರೀಕ್ಷೆ, ಅಂಕಪಟ್ಟಿ. ಆದರೆ ಸುಮಾರು ಮೂರು ಸಾವಿರ ವರ್ಷಗಳ ಹಿಂದೆ, ಭಾರತದಲ್ಲಿ ಶಾಲೆ ಎಂದರೆ ಗುರುವಿನ ಮನೆ ಆಗಿತ್ತು — ಅದೂ ಊರಿನ ಗದ್ದಲದಿಂದ ದೂರ, ಕಾಡಿನ ನಡುವೆ, ನದಿಯ ದಡದಲ್ಲಿ ಇರುತ್ತಿದ್ದ ಒಂದು ಆಶ್ರಮ — ಶಾಲೆ.
ಇತ್ತೀಚೆಗೆ ಮನೆಗೆ ಬಂದ ಹಿರಿಯರೊಬ್ಬರು, ನನಗೆ "ಪ್ರಾಚೀನ ಭಾರತದ ಶಿಕ್ಷಣ" ಎಂಬ ಪುಸ್ತಕವನ್ನು ಓದಲು ಕೊಟ್ಟರು. ರಾಧಾ ಕುಮುದ್ ಮುಖರ್ಜಿ ಅವರು ಬರೆದಿರುವ "Ancient Indian Education" ಎಂಬ ಪುಸ್ತಕದ ಕನ್ನಡ ಅನುವಾದವಿದು. ಅನುವಾದಕರು ಐ ಎಸ್ ಬಿದರಿ.
ಇತಿಹಾಸಕಾರ ರಾಧಾ ಕುಮುದ್ ಮುಖರ್ಜಿ ಅವರು 1947ರಲ್ಲಿ ಪ್ರಕಟಿಸಿದ ಈ ಬೃಹತ್ ಗ್ರಂಥ, ಮರೆತುಹೋದ ಪ್ರಪಂಚವೊಂದನ್ನು ನಮ್ಮ ಕಣ್ಣಮುಂದೆ ಮತ್ತೆ ಜೀವಂತಗೊಳಿಸುತ್ತದೆ. ವೇದ, ಉಪನಿಷತ್ತು, ಬೌದ್ಧ ಗ್ರಂಥಗಳು ಮತ್ತು ಭಾರತಕ್ಕೆ ಬಂದ ಚೀನೀ ಯಾತ್ರಿಕರ ಬರಹಗಳನ್ನು ಆಧಾರವಾಗಿಟ್ಟುಕೊಂಡು, ಅವರು ನಮಗೊಂದು ಚಿತ್ರ ಬಿಡಿಸಿಕೊಡುತ್ತಾರೆ: ಪ್ರಾಚೀನ ಭಾರತದಲ್ಲಿ ಮಕ್ಕಳು ಹೇಗೆ ಕಲಿಯುತ್ತಿದ್ದರು?
ಕಾಡೇ ನಾಗರಿಕತೆಯ ಮೂಲ
ಮುಖರ್ಜಿ ಅವರು ರವೀಂದ್ರನಾಥ ಟ್ಯಾಗೋರ್ ಅವರ ಮಾತನ್ನು ಉಲ್ಲೇಖಿಸುತ್ತಾರೆ:
ಭಾರತದಲ್ಲಿ ಅತ್ಯಂತ ಅದ್ಭುತ ಸಂಗತಿ ಎಂದರೆ — ಇಲ್ಲಿ ನಾಗರಿಕತೆಯ ಮೂಲ ಊರಲ್ಲ, ಕಾಡು. ವೈದಿಕ ಋಷಿಗಳಂತೆ ಬುದ್ಧನೂ ಕಾಡುಗಳ ನಡುವೆಯೇ ತನ್ನ ಬೋಧನೆಯನ್ನು ಹರಡಿದ. ಕಾಡಿನಿಂದ ಹರಿದ ನಾಗರಿಕತೆಯ ನದಿ ಇಡೀ ಭಾರತವನ್ನು ತೋಯಿಸಿತು.
ಊರಿನ ಗದ್ದಲದಿಂದ ದೂರ, ಮರ–ಗಿಡ–ನದಿ–ಪ್ರಾಣಿಗಳ ನಡುವೆ ಬದುಕಿದ ವಿದ್ಯಾರ್ಥಿಗೆ ಪ್ರಕೃತಿಯೊಂದಿಗೆ ಆಳವಾದ ನಂಟು ಬೆಳೆಯುತ್ತಿತ್ತು. ಒಂಟಿತನ ಮತ್ತು ಮೌನ ಅವನ ಒಳಮನಸ್ಸನ್ನು ಬೆಳೆಸುತ್ತಿತ್ತು.
ಶಿಕ್ಷಣ — ಕೆಲಸ ಗಿಟ್ಟಿಸಲು ಅಲ್ಲ, ಬದುಕಿನ ಅರಿವಿಗಾಗಿ
ಇಂದು ನಾವು ಓದುವುದು/ವ್ಯಾಸಂಗ ಮಾಡುವುದು ಒಳ್ಳೆಯ ಕೆಲಸ ಸಿಗಲಿ ಎಂದು. ಆದರೆ ಮುಖರ್ಜಿ ಹೇಳುತ್ತಾರೆ — ಆ ಕಾಲದಲ್ಲಿ ವಿದ್ಯೆಯ ಗುರಿ ಸಂಪೂರ್ಣ ಬೇರೆಯೇ ಆಗಿತ್ತು. ವಿದ್ಯೆ ಎಂದರೆ ಬರೀ ಮಾಹಿತಿ ತುಂಬಿಕೊಳ್ಳುವುದಲ್ಲ; ಅದು ತನ್ನನ್ನು ತಾನು ಅರಿಯುವ ದಾರಿ, ಬದುಕಿನ ಕೊನೆಯ ಗುರಿಯಾದ ಮೋಕ್ಷದ ಕಡೆಗಿನ ಪಯಣ.
ಅವರ ಮಾತಿನಲ್ಲಿ ಹೇಳುವುದಾದರೆ, ಭಾರತೀಯ ಮನಸ್ಸಿಗೆ ಮುಖ್ಯ ವಿಷಯ ಹೊರಗಿನ ಪ್ರಪಂಚವಲ್ಲ, ಒಳಗಿನ ಮನಸ್ಸು. ಆದ್ದರಿಂದ ಶಿಕ್ಷಣದ ಗುರಿ "ಮನಸ್ಸನ್ನು ಮಾಹಿತಿಯಿಂದ ತುಂಬಿಕೊಳ್ಳುವುದಲ್ಲ, ಮನಸ್ಸನ್ನೇ ಪಳಗಿಸುವುದು." ಒಂದು ಸುಂದರ ಉಪಮೆ ಪುಸ್ತಕದ ಆರಂಭದಲ್ಲೇ ಬರುತ್ತದೆ — ಕಠೋಪನಿಷತ್ತಿನ ಮಾತು:
"ಬುದ್ಧಿವಂತನಾದವನು ತನ್ನ ಇಂದ್ರಿಯಗಳನ್ನು ಹತೋಟಿಯಲ್ಲಿಡಬೇಕು — ಒಬ್ಬ ಒಳ್ಳೆಯ ಸಾರಥಿ ಚುರುಕಾದ ಕುದುರೆಗಳನ್ನು ಹತೋಟಿಯಲ್ಲಿಡುವಂತೆ."
ಕಲಿಕೆ ಎಂದರೆ ಆ ಸಾರಥ್ಯವನ್ನು ಕಲಿಯುವುದು.
ಗುರುಕುಲ — ಗುರುವೇ ಶಾಲೆ, ಗುರುವೇ ಗ್ರಂಥಾಲಯ
ಆ ದಿನಗಳಲ್ಲಿ ಪುಸ್ತಕಗಳಿರಲಿಲ್ಲ, ಕಾಗದವಿರಲಿಲ್ಲ. ಎಲ್ಲ ಜ್ಞಾನವೂ ಗುರುವಿನ ನೆನಪಿನಲ್ಲಿ, ಗುರುವಿನ ಬಾಯಿಯಲ್ಲಿ ಇರುತ್ತಿತ್ತು. ಮುಖರ್ಜಿ ಸೊಗಸಾಗಿ ಹೇಳುತ್ತಾರೆ — ಆಗ ಗುರುವೇ "ನಡೆದಾಡುವ ಗ್ರಂಥಾಲಯ" ಆಗಿದ್ದರು. ಜ್ಞಾನವನ್ನು ಬರೆದಿಡುವುದು ಒಳ್ಳೆಯ ಕೆಲಸವಲ್ಲ ಎಂದು ಭಾವಿಸಲಾಗುತ್ತಿತ್ತು; ಏಕೆಂದರೆ ಜ್ಞಾನ ಎಂಬುದು ಬರೀ ಓದುವ ವಸ್ತುವಲ್ಲ, ಅದು ರಕ್ತದಲ್ಲಿ ಬೆರೆಯಬೇಕಾದದ್ದು, ಬದುಕಿನ ಭಾಗವಾಗಬೇಕಾದದ್ದು.
ಆದ್ದರಿಂದಲೇ ಕಲಿಕೆಯ ಮೂರು ಮೆಟ್ಟಿಲುಗಳಿದ್ದವು:
ಶ್ರವಣ — ಗುರು ಹೇಳಿದ್ದನ್ನು ಕೇಳುವುದು,
ಮನನ — ಕೇಳಿದ್ದನ್ನು ಮನಸ್ಸಿನಲ್ಲಿ ಮೆಲುಕು ಹಾಕುವುದು,
ನಿದಿಧ್ಯಾಸನ — ಅದನ್ನು ಧ್ಯಾನದ ಮೂಲಕ ಸ್ವಂತ ಅನುಭವವಾಗಿಸಿಕೊಳ್ಳುವುದು.
ಇದು ಪರೀಕ್ಷೆಯಲ್ಲಿ ಬರೆಯಲು ಬಾಯಿಪಾಠ ಮಾಡುವುದಲ್ಲ — ಜ್ಞಾನವನ್ನು ಜೀವಿಸುವುದು.
ವಿದ್ಯಾರ್ಥಿಯ ಒಂದು ದಿನ — ಸೌದೆ, ಹಸು, ಮತ್ತು ಭಿಕ್ಷೆ
ಇಲ್ಲಿ ಪುಸ್ತಕ ತುಂಬಾ ಆಸಕ್ತಿಕರವಾಗುತ್ತದೆ. ಗುರುಕುಲದ ವಿದ್ಯಾರ್ಥಿ ಪಾಠ ಕಲಿತು ಸುಮ್ಮನೆ ಕೂರುತ್ತಿರಲಿಲ್ಲ. ಅವನ ದಿನಚರಿ ಹೀಗಿತ್ತು:
ಬೆಳಗ್ಗೆ ಕಾಡಿಗೆ ಹೋಗಿ ಸೌದೆ ತರುವುದು — ಯಜ್ಞದ ಪವಿತ್ರ ಅಗ್ನಿಯನ್ನು ಕಾಪಾಡಲು. ಸೌದೆ ತರುವುದು ಬರೀ ಕೆಲಸವಲ್ಲ; "ಮನಸ್ಸಿಗೆ ಪವಿತ್ರ ತೇಜಸ್ಸಿನ ಬೆಂಕಿ ಹಚ್ಚುವ" ಸಂಕೇತ.
ಗುರುವಿನ ಹಸುಗಳನ್ನು ಮೇಯಿಸುವುದು — ಹೈನುಗಾರಿಕೆಯೇ ಭಾರತದ ಪ್ರಮುಖ ಉದ್ಯೋಗವಾಗಿತ್ತು. ಇದು ಶ್ರಮದ ಗೌರವವನ್ನು ಕಲಿಸುತ್ತಿತ್ತು, ಜೊತೆಗೆ ಮುಕ್ತ ವಾತಾವರಣದಲ್ಲಿ ಆರೋಗ್ಯಕರ ವ್ಯಾಯಾಮವೂ ಆಗುತ್ತಿತ್ತು. ಮುಖರ್ಜಿ ತಮಾಷೆಯಾಗಿ ಹೇಳುತ್ತಾರೆ — “ಇದು ಇಂದಿನ 'ಬರಡು' ಫುಟ್ಬಾಲ್–ಹಾಕಿ ಆಟಗಳಿಗಿಂತ ಎಷ್ಟೋ ಫಲಪ್ರದ!”
ಭಿಕ್ಷೆ ಬೇಡುವುದು — ತನಗಾಗಿ ಅಲ್ಲ, ಶಾಲೆಯ ಆಶ್ರಮಕ್ಕಾಗಿ. ಇದು ವಿನಯವನ್ನೂ, ಅಹಂಕಾರವನ್ನು ಕರಗಿಸುವುದನ್ನೂ ಕಲಿಸುತ್ತಿತ್ತು.
ಒಂದು ಸುಂದರ ಕಥೆ ಪುಸ್ತಕದಲ್ಲಿ ಬರುತ್ತದೆ — ಸತ್ಯಕಾಮ ಜಾಬಾಲ ಎಂಬ ಹುಡುಗ ತನ್ನ ಗುರುವಿನ ನಾಲ್ಕು ನೂರು ಹಸುಗಳನ್ನು ಕಾಯಲು ಹೋಗುತ್ತಾನೆ; ಅವು ಒಂದು ಸಾವಿರ ಆಗಿ ಬೆಳೆದ ನಂತರವೇ ಹಿಂದಿರುಗುತ್ತಾನೆ. ಆ ಹಸುಗಳ ಆರೈಕೆಯೇ ಅವನ ಮಹಾ ಜ್ಞಾನದ ಅಡಿಪಾಯವಾಯಿತು. ವಿದ್ಯೆ ಬರೀ ಪುಸ್ತಕದ್ದಲ್ಲ, ಪ್ರಾಕ್ಟಿಕಲ್ ಆಗಿ ಕೈ ಹಿಡಿದು ಕೆಲಸ ಮಾಡುವುದು ಆಗಿತ್ತು ಎಂಬುದಕ್ಕೆ ಇದು ಸಾಕ್ಷಿ.
ಮಹಿಳೆಯರೂ, ಬಗೆಬಗೆಯ ಜ್ಞಾನವೂ
ಆ ಕಾಲದಲ್ಲಿ ಮಹಿಳೆಯರೂ ವಿದ್ಯೆ ಕಲಿಯುತ್ತಿದ್ದರು — ಗಾರ್ಗಿ, ಮೈತ್ರೇಯಿಯಂತಹ ವಿದುಷಿಯರು ಋಷಿಗಳ ಜೊತೆ ತತ್ತ್ವ ಚರ್ಚೆ ನಡೆಸುತ್ತಿದ್ದರು. ಕೆಲವು ಮಹಿಳೆಯರನ್ನು "ಋಷಿಕೆಯರು" ಎಂದೇ ಪರಿಗಣಿಸಲಾಗುತ್ತಿತ್ತು.
ಮತ್ತು ಶಿಕ್ಷಣ ಬರೀ ವೇದ–ತತ್ತ್ವಶಾಸ್ತ್ರಕ್ಕೆ ಸೀಮಿತವಾಗಿರಲಿಲ್ಲ. ಪುಸ್ತಕದ ಒಂದು ಇಡೀ ಭಾಗ ಕೈಗಾರಿಕಾ ಮತ್ತು ವೃತ್ತಿ ಶಿಕ್ಷಣದ ಬಗ್ಗೆಯೇ ಇದೆ — ಆಯುರ್ವೇದ (ವೈದ್ಯಕೀಯ), 64 ಕಲೆಗಳು, ಬಡಗಿತನ, ಕಮ್ಮಾರಿಕೆ, ಸಂಗೀತ, ಬಿಲ್ವಿದ್ಯೆ ಇತ್ಯಾದಿ. ವೈದ್ಯ ಶಿಷ್ಯ ತನ್ನ ಗುರುವಿನ ಜೊತೆಯೇ ಇದ್ದು, ರೋಗಿಗಳನ್ನು ನೋಡುತ್ತ ಪ್ರಾಯೋಗಿಕವಾಗಿ ಕಲಿಯುತ್ತಿದ್ದ. ಋಗ್ವೇದದ ಋಷಿಯೊಬ್ಬರು ತನ್ನ ಮನೆಯನ್ನೇ ಹೀಗೆ ವರ್ಣಿಸುತ್ತಾರೆ: "ನಾನು ಕವಿ, ನನ್ನ ತಂದೆ ವೈದ್ಯ, ನನ್ನ ತಾಯಿ ಕಾಳು ಬೀಸುವವಳು." ಅತ್ಯುನ್ನತ ತತ್ತ್ವಜ್ಞಾನ ಮತ್ತು ಸಾಮಾನ್ಯ ಕೈಕೆಲಸ — ಎರಡೂ ಒಂದೇ ಮನೆಯಲ್ಲಿ ಜೊತೆಯಾಗಿ ಬಾಳುತ್ತಿದ್ದವು.
ಬೌದ್ಧ ಶಿಕ್ಷಣ ಮತ್ತು ಮಹಾ ವಿಶ್ವವಿದ್ಯಾಲಯಗಳು
ಪುಸ್ತಕದ ಇನ್ನರ್ಧ ಭಾಗ ಬೌದ್ಧ ಶಿಕ್ಷಣದ ಕಡೆಗೆ ತಿರುಗುತ್ತದೆ. ಇಲ್ಲಿ ಶಾಲೆ ಎಂದರೆ ವಿಹಾರ (ಬೌದ್ಧ ಮಠ). ಒಬ್ಬ ಗುರುವಿನ ಮನೆ ಈಗ ದೊಡ್ಡ ಸಂಸ್ಥೆಯಾಗಿ ಬೆಳೆಯಿತು. ಇಲ್ಲಿಂದಲೇ ಜಗತ್ತಿನ ಮೊಟ್ಟಮೊದಲ ವಿಶ್ವವಿದ್ಯಾಲಯಗಳು ಹುಟ್ಟಿದವು.
ತಕ್ಷಶಿಲಾ (ಟ್ಯಾಕ್ಸಿಲಾ) — ದೂರದೂರದಿಂದ ವಿದ್ಯಾರ್ಥಿಗಳು ಬಂದು ವೇದ, ವೈದ್ಯಕೀಯ, ಬಿಲ್ವಿದ್ಯೆ, ಕಾನೂನು ಕಲಿಯುತ್ತಿದ್ದ ಪ್ರಸಿದ್ಧ ಕೇಂದ್ರ.
ನಲಂದಾ — ಪುಸ್ತಕದ ಕಿರೀಟರತ್ನ. ಚೀನಾದಿಂದ ಭಾರತಕ್ಕೆ ನಡೆದುಬಂದ ಯಾತ್ರಿಕರಾದ ಫಾ-ಹಿಯಾನ್, ಹ್ಯುಯೆನ್ ತ್ಸಾಂಗ್ ಮತ್ತು ಇ-ತ್ಸಿಂಗ್ ಅವರ ಕಣ್ಣಾರೆ ಕಂಡ ವಿವರಗಳಿಂದ ಮುಖರ್ಜಿ ಈ ಮಹಾ ವಿದ್ಯಾಲಯವನ್ನು ಕಣ್ಮುಂದೆ ತರುತ್ತಾರೆ:
8,500 ವಿದ್ಯಾರ್ಥಿಗಳಿಗೆ 1,500 ಶಿಕ್ಷಕರು!
ಪ್ರತಿದಿನ 100 ಉಪನ್ಯಾಸಗಳು ನಡೆಯುತ್ತಿದ್ದವು.
ಶಿಕ್ಷಣ, ಊಟ, ವಸತಿ — ಎಲ್ಲವೂ ಉಚಿತ.
ಒಳಗೆ ಸೇರಲು ಕಠಿಣ ಪ್ರವೇಶ ಪರೀಕ್ಷೆ; ದ್ವಾರದಲ್ಲೇ ವಿದ್ವಾಂಸರು ಪ್ರಶ್ನೆ ಕೇಳಿ ಪರೀಕ್ಷಿಸುತ್ತಿದ್ದರು. ಹೆಚ್ಚಿನವರು ಒಳಗೆ ಬರಲಾಗದೆ ಹಿಂದಿರುಗುತ್ತಿದ್ದರಂತೆ!
ದೊಡ್ಡ ಗ್ರಂಥಾಲಯ, ಹಾಸ್ಟೆಲ್ ಕೊಠಡಿಗಳು, ಸಮಯಪಟ್ಟಿ, ಪ್ರಜಾಸತ್ತಾತ್ಮಕ ಆಡಳಿತ — ಒಂದು ಆಧುನಿಕ ವಿಶ್ವವಿದ್ಯಾಲಯಕ್ಕೆ ಬೇಕಾದ ಎಲ್ಲವೂ ಸಾವಿರ ವರ್ಷಗಳ ಹಿಂದೆಯೇ ಇದ್ದವು.
ನಲಂದಾದ ಜೊತೆಗೆ ವಿಕ್ರಮಶಿಲಾ, ವಲಭಿ, ಮಿಥಿಲಾ, ನದಿಯಾ — ಇಂತಹ ಕೇಂದ್ರಗಳೂ ಬೆಳೆದವು. ಭಾರತದ ವಿದ್ವಾಂಸರು ಟಿಬೆಟ್, ಚೀನಾಗಳಿಗೆ ಹೋಗಿ ಸಾವಿರ ವರ್ಷಗಳ ಕಾಲ ಜ್ಞಾನ ಹಂಚಿದರು ಎಂಬ ಮಾತಿನೊಂದಿಗೆ ಪುಸ್ತಕ ಮುಗಿಯುತ್ತದೆ.
ಈ ಪುಸ್ತಕವನ್ನು ಏಕೆ ಓದಬೇಕು?
ಇದು ಬರೀ ಇತಿಹಾಸದ ದಾಖಲೆಯಲ್ಲ. ಇದು ನಮ್ಮ ಇಂದಿನ ಶಿಕ್ಷಣ ಪದ್ಧತಿಗೆ ಕನ್ನಡಿ ಹಿಡಿಯುತ್ತದೆ. ಇಂದಿನ ಶಿಕ್ಷಣ ಅಂಕ, ರ್ಯಾಂಕ್, ಪ್ಯಾಕೇಜ್ಗಳ ಓಟವಾಗಿರುವಾಗ — ಮುಖರ್ಜಿ ನಮ್ಮನ್ನು ಕೇಳುತ್ತಾರೆ: "ವಿದ್ಯೆ ಎಂದರೆ ನಿಜಕ್ಕೂ ಏನು? ಮೆದುಳನ್ನು ಮಾಹಿತಿಯಿಂದ ತುಂಬುವುದೋ, ಅಥವಾ ವ್ಯಕ್ತಿತ್ವವನ್ನು ಅರಳಿಸುವುದೋ?"
ಭಾಷೆ ಸ್ವಲ್ಪ ಹಳೆಯ ಶೈಲಿಯದ್ದು, ಸಂಸ್ಕೃತ ಪದಗಳು ಹೆಚ್ಚು. ಆದರೆ ಒಳಗಿನ ಕಥೆಗಳು — ಹಸು ಕಾಯುತ್ತ ಜ್ಞಾನಿಯಾದ ಹುಡುಗ, ಕಾಡಿನ ನೆರಳಲ್ಲಿ ಪಾಠ ಹೇಳುತ್ತಿದ್ದ ಋಷಿ, ಚೀನಾದಿಂದ ನಡೆದು ಬಂದ ಯಾತ್ರಿಕ ಕಂಡ ಮಹಾ ವಿಶ್ವವಿದ್ಯಾಲಯ — ಇವು ಮಾತ್ರ ಇಂದಿಗೂ ಮನಸ್ಸಿಗೆ ತಟ್ಟುತ್ತವೆ.
ಪ್ರಾಚೀನ ಭಾರತ ಜಗತ್ತಿಗೆ ನೀಡಿದ ದೊಡ್ಡ ಕೊಡುಗೆಗಳಲ್ಲಿ ಶಿಕ್ಷಣವೂ ಒಂದು — ಆ ಗತಕಾಲದ ಹೆಮ್ಮೆಯನ್ನು ಮತ್ತೆ ನೆನಪಿಸುವ ಪುಸ್ತಕ ಇದು.
ಪ್ರತಿಕ್ರಿಯೆ (4)
ಪರಿಸರದ ಒಡನಾಟದಲ್ಲಿ ಅರಳಿದ ವಿದ್ಯೆ ಎಂಬ ಲೇಖನದಲ್ಲಿ ಉಲ್ಲೇಖಿಸಿರುವಂತೆ, ಅಂದಿನ ಕಾಲದ ಗುರುಕುಲಗಳಲ್ಲಿ ಭಿಕ್ಷೆ ಬೇಡುವುದು, ಹಸು ಕಾಯುವುದು, ಕಾಡಿನಿಂದ ಸೌದೆ ತರುವುದು ಕೇವಲ ಕೆಲಸಗಳಾಗಿರಲಿಲ್ಲ; ಅವು ವಿದ್ಯಾರ್ಥಿಗಳಲ್ಲಿ ಅಹಂಕಾರವನ್ನು ಕರಗಿಸಿ, ವಿನಯ ಮತ್ತು ಶ್ರಮದ ಗೌರವವನ್ನು ಮೂಡಿಸುವ ದಾರಿಗಳಾಗಿದ್ದವು.
ಇಂದಿನ ತಲೆಮಾರಿಗೆ ಬೇಕಾಗಿರುವುದು ಕೇವಲ 'ಲಿಟರಸಿ' (ಅಕ್ಷರ ಜ್ಞಾನ) ಅಲ್ಲ, ಬದಲಿಗೆ 'ಎಜುಕೇಶನ್' (ಸಂಸ್ಕಾರಯುತ ಶಿಕ್ಷಣ). ಈ ನಿಟ್ಟಿನಲ್ಲಿ ಇಂದಿನ ಪೋಷಕರು ಮತ್ತು ಸಮಾಜ ಕೂಡ ಯೋಚಿಸಬೇಕಾದ ಅನಿವಾರ್ಯತೆ ಇದೆ.
ಈ ಕೃತಿಯನ್ನು ಮೂಲದಲ್ಲಿ ಓದಿ ಪ್ರಭಾವಿತನಾಗಿದ್ದೆ. ಆದರೆ ಕನ್ನಡಕ್ಕೆ ಬಂದದ್ದು ಗೊತ್ತಿರಲಿಲ್ಲ! ಇಂತಹ ಅಮೂಲ್ಯ ಮಾಹಿತಿ ಹಂಚಿಕೊಂಡದ್ದಕ್ಕೆ ಧನ್ಯವಾದಗಳು.
ಇದರ ಲಭ್ಯತೆಯ ಬಗ್ಗೆಯೂ ಸ್ವಲ್ಪ ಹೇಳಬಹುದೇ? ಯಾವುದಾದರೂ ಲೈಬ್ರರಿಯಾದರೂ ಪರವಾಗಿಲ್ಲ.
ಪುಸ್ತಕ ಎಲ್ಲಿ ದೊರೆಯತ್ತದೆಯೆಂದು ಹೇಳಿದರೆ ನಮ್ಮಂಥ ಆಸಕ್ತರಿಗೆ ಉಪಯೋಗವಾದೀತು.
ಪುಸ್ತಕ ಎಲ್ಲಿ ದೊರಕುವುದು ಎಂಬುದರ ಬಗ್ಗೆ ಸರಿಯಾದ ಮಾಹಿತಿ ನನ್ನ ಬಳಿ ಕೂಡ ಇಲ್ಲ. hpnadig AT gmail DOT com ಗೆ ಈ-ಮೇಲ್ ಮೂಲಕ ಫೋನ್ ನಂಬರ್ ನನಗೆ ಮೆಸೇಜ್ ಮಾಡಿ. ಪುಸ್ತಕ ಸಿಗದಿದ್ದಲ್ಲಿ xerox ಆದರೂ ನಿಮಗೆ ತಲುಪಿಸುವ ಪ್ರಯತ್ನ ಮಾಡಬಲ್ಲೆ.
ಚೆನ್ನಾಗಿದೆ ವಿಚಾರ ಧಾರೆ