ಸ್ವಯಂವೈದ್ಯ — ಮಲ್ಲಾಡಿಹಳ್ಳಿ "ತಿರುಕ"ರ ಮನೆಮದ್ದಿನ ಮಹಾಕೋಶ

image.jpeg

"ತಿರುಕ" ಎಂಬ ಕಾವ್ಯನಾಮದಿಂದ ಕನ್ನಡಿಗರಿಗೆ ಪರಿಚಿತರಾದ ಮಲ್ಲಾಡಿಹಳ್ಳಿಯ ಶ್ರೀ ಶ್ರೀ ರಾಘವೇಂದ್ರ ಸ್ವಾಮೀಜಿಯವರು ಬರೆದ ಬೃಹತ್ ಗ್ರಂಥವಿದು. ಚಿತ್ರದುರ್ಗ ಜಿಲ್ಲೆಯ ಮಲ್ಲಾಡಿಹಳ್ಳಿಯ ಅನಾಥಸೇವಾಶ್ರಮ ಟ್ರಸ್ಟ್‌ನ ಸಂಸ್ಥಾಪಕ-ಅಧ್ಯಕ್ಷರಾದ ಸ್ವಾಮೀಜಿ ಯೋಗಶಿಕ್ಷಣಕ್ಕೆ ಹೆಸರಾದವರು; ಜೊತೆಗೆ ದಶಕಗಳ ಕಾಲ ಲಕ್ಷಾಂತರ ರೋಗಿಗಳಿಗೆ ಆಯುರ್ವೇದ ಚಿಕಿತ್ಸೆ ನೀಡಿದ ಅನುಭವಿ ವೈದ್ಯರೂ ಹೌದು. ಆ ಅನುಭವದ ಸಾರ-ಸಂಗ್ರಹವೇ ಈ "ಸ್ವಯಂವೈದ್ಯ". ಸ್ವತಃ ೧೦೬ (ಒಂದು ನೂರಾ ಆರು) ವರ್ಷಗಳ ಕಾಲ ಬದುಕಿದ್ದ ‘ತಿರುಕ’ರು ಒಟ್ಟುಗೂಡಿಸಿರುವ ಮಹತ್ವದ ಸಾಂಪ್ರದಾಯಿಕ ಜ್ಞಾನ ಈ ಪುಸ್ತಕ.

21-1434882146-raghavendra-swami3-e1660641606476.jpg

ದುಃಖದಿಂದ ದಾಟಿಸುವುದೇ 'ತರು':

‘ತಿರುಕ’ರು ಔಷಧೀಯ ಸಸ್ಯಗಳ ಬಗ್ಗೆ ಹೀಗೆ ಹೇಳುತ್ತಾರೆ:

“ಮರ ಗಿಡ ಬಳ್ಳಿಗಳ ಅನೇಕ ಹೆಸರುಗಳಲ್ಲಿ "ತರು" ಎಂಬುದು ಒಂದು. ತರು ಎಂದರೆ ದಾಟಿಸುವುದು ಎಂದು. ಯಾವುದರಿಂದ ದಾಟಿಸುವುದು? ದುಃಖದಿಂದ ದಾಟಿಸುವುದು ಎಂಬರ್ಥ (ತರತಿ ದುಃಖಂ ಅನೇನ ಇತಿ ತರುಃ). ಆಪತ್ತುಗಳಿಂದ ಮುಕ್ತಗೊಳಿಸುವುದು ಎಂಬರ್ಥ. ಮರ ಗಿಡ ಬಳ್ಳಿಗಳೂ, ವೃಕ್ಷಗಳೂ ತಮ್ಮ ಗುಣ, ವೀರ್ಯ, ಪ್ರಭಾವಗಳಿಂದ ಮಾನವನ ದುಃಖವನ್ನು ಪರಿಹರಿಸುತ್ತವೆ. ತಾರಣ ಮಾಡುತ್ತವೆ. ಆದುದರಿಂದ ಅದಕ್ಕೆ "ತರು”. ಪರಿಹಾರಕ್ಕೆ ಉಪಯೋಗವಾಗುವುದರಿಂದಲೂ ಅವುಗಳಿಗೆಲ್ಲ ‘ವನೌಷಧಿಗಳು’ ಎಂದು ಹೆಸರು. ಅಮೃತವೆಂಬುದು ವನೌಷಧಿಗಳ ಇನ್ನೊಂದು ಹೆಸರು” ಎಂದು ಬರೆಯುತ್ತಾರೆ. ಇದಲ್ಲದೆ ವನೌಷಧಿಯಲ್ಲಿ ವನಸ್ಪತಿ, ವೃಕ್ಷ, ವೀರುದ—ಅಂದರೆ ಲತೆ, ಅಥವಾ ಬಳ್ಳಿ—ಮತ್ತು ಔಷಧಗಳೆಂಬ ನಾಲ್ಕು ಭೇದಗಳಿವೆ ಎಂದು ಬರೆಯುತ್ತಾರೆ.

ವೈದ್ಯನಲ್ಲ; ಸ್ವಾಮಿಯಲ್ಲ; ಸನ್ಯಾಸಿಯಲ್ಲ

swami-malladihili.jpg

ಸ್ವತಃ ‘ಸದ್ಗುರು’ ಜಗ್ಗಿ ವಾಸುದೇವ್ ಮುಂತಾದವರಿಗೆ ಯೋಗ ಕಲಿಸಿದ ಮಲ್ಲಾಡಿಹಳ್ಳಿಯ ‘ತಿರುಕ’ರು 1933ರಲ್ಲಿ  ತಮ್ಮ ಗುರುಗಳಿಗೆ, “ನಾನು ವೈದ್ಯನಲ್ಲ; ಸ್ವಾಮಿಯಲ್ಲ; ಸನ್ಯಾಸಿಯಲ್ಲ — ರಾಷ್ಟ್ರಮಾತೆಯ ನಮ್ರ ಪೂಜಾರಿ” ಎಂಬ ವಚನ ನೀಡಿ ಅದರಂತೆ ನಡೆದುಕೊಳ್ಳುವ ಪ್ರತಿಜ್ಞೆ ಮಾಡಿದ್ದರಂತೆ. ಅವರಲ್ಲಿ ಭರವಸೆ ಇಟ್ಟ ಗುರು-ಹಿರಿಯರಾದ ಶ್ರೀ ಸ್ವಾಮಿ ನಿತ್ಯಾನಂದಜೀ (ವಜ್ರೇಶ್ವರಿ-ಬೊಂಬಾಯಿ), ಶ್ರೀ ಪಳನಿಸ್ವಾಮೀಜಿ (ಮೂಲತಃ ಮಧುರೆ), ಶ್ರೀ ಶಿವಾನಂದಜೀ (ವರೂಡ-ಮಧ್ಯಪ್ರಾಂತ), ಬಾಲಬ್ರಹ್ಮಚಾರಿ ರಾಜರತ್ನ ಪ್ರೊ. ಮಾಣಿಕ್‌ರಾವ್ (ಬರೋಡಾ) ಇವರನ್ನೆಲ್ಲ ನೆನೆಯುತ್ತ ‘ಸ್ವಯಂವೈದ್ಯ’ ಪುಸ್ತಕವನ್ನು ಗೌರವಪೂರ್ವಕವಾಗಿ ಸಾಮಾನ್ಯ ಜನರಿಗಾಗಿ ಪ್ರಸ್ತುತಪಡಿಸುತ್ತಾರೆ. ಈ ಪುಸ್ತಕದ ಮೊದಲ ಮುದ್ರಣ ಹೊರಬಂದದ್ದು 1978ರಲ್ಲಿ! “ರೋಗಿಗಳಲ್ಲಿ ದೇವರನ್ನು ಕಾಣುವ ಪೂಜಾರಿ ನೀನಾಗಬೇಕು” ಎಂಬ ಅವರ ಗುರುಗಳ ಭಾವಪೂರ್ವಕವಾದ ಆಶಯವನ್ನು ಅವರು ತಮ್ಮ ಜೀವನದುದ್ದಕ್ಕೂ ನಡೆಸಿಕೊಂಡು ಬಂದವರು.

ಗ್ರಂಥದ ಸಾವಿರಾರು ಮದ್ದುಗಳಲ್ಲಿ ಬಹುಪಾಲು ಬಳಸುವ ವಸ್ತುಗಳು ರೈತನ ಮನೆ-ಹೊಲಗಳಲ್ಲೇ ಇರುವಂಥವು: ಶುಂಠಿ, ಅರಿಸಿನ, ಎಳ್ಳು, ಬೆಲ್ಲ, ಜೇನು, ಮಜ್ಜಿಗೆ, ತುಪ್ಪ, ಮೆಣಸು, ನೆಲ್ಲಿ, ಬಿಲ್ವ, ತೊಂಡೆ, ಅವರೆ, ಹೆಸರುಕಾಳು, ದಾಸವಾಳ, ನೇರಳೆ. ಉದಾಹರಣೆಗೆ ಬಹುಮೂತ್ರ/ಮಧುಮೇಹ ಪ್ರಕರಣದ ಒಂದು ಮದ್ದು: "ಕರಿಯ ಎಳ್ಳನ್ನು ಹುರಿದು ಬೆಲ್ಲದ ಪಾಕದಲ್ಲಿ ಉಂಡೆ ಮಾಡಿಟ್ಟುಕೊಂಡು ನಿತ್ಯ ಬೆಳಿಗ್ಗೆ ಒಂದು, ರಾತ್ರಿ ಒಂದು ಉಂಡೆ ತಿನ್ನುವುದು; 1–2 ವಾರ." ಇಂತಹ ಸರಳ, ಖರ್ಚಿಲ್ಲದ ಪ್ರಯೋಗಗಳೇ ಗ್ರಂಥದ ಜೀವಾಳ.

ಆಹಾರದ ಬಗ್ಗೆ ತಿರುಕರ ಸೂತ್ರ: "ಹಿತಭುಕ್, ಮಿತಭುಕ್, ಋತಭುಕ್" — ಹಿತವಾದದ್ದನ್ನು, ಮಿತವಾಗಿ, ಪ್ರಾಮಾಣಿಕ ದುಡಿಮೆಯಿಂದ ಗಳಿಸಿದ್ದನ್ನು ಉಣ್ಣಬೇಕು. "ಜೀವಿಸುವುದಕ್ಕಾಗಿ ತಿನ್ನಬೇಕೇ ಹೊರತು ತಿನ್ನುವುದಕ್ಕಾಗಿ ಜೀವಿಸಬಾರದು" ಎಂಬುದು ಅವರ ಗಟ್ಟಿ ಮಾತು. ಉಣ್ಣುವ ಮೊದಲು ಒಂದು ಪಾಲನ್ನು ಭಿಕ್ಷುಕರಿಗೋ, ಮನೆಯ ಹಸು-ನಾಯಿಗೋ, ಹಕ್ಕಿಗಳಿಗೋ ತೆಗೆದಿಡಬೇಕೆಂಬ ಹಳ್ಳಿಯ ಸಂಸ್ಕೃತಿಯನ್ನೂ ಅವರು ಆರೋಗ್ಯಸೂತ್ರವಾಗಿಯೇ ಹೇಳುತ್ತಾರೆ.

"ಆರೋಗ್ಯವು ನನ್ನ ಸ್ವಭಾವ; ರೋಗವು ಆಗಂತುಕ — ಅದನ್ನು ನಾನು ಓಡಿಸುತ್ತೇನೆ; ಅದು ಖಂಡಿತವಾಗಿಯೂ ತೊಲಗಿ ಹೋಗುತ್ತದೆ." - ಎಂಬ ಅವರ ಸ್ವಯಂಸೂಚನೆಯ ಮಾತು ಪ್ರಬಲವಾದದ್ದು. ಮನೋವಿಜ್ಞಾನಕ್ಕೆ ಹತ್ತಿರವಾದದ್ದು ಕೂಡ.

ಮತ್ತೊಂದು ಪ್ರಮುಖ ವಿಷಯ:

ತಿರುಕರ ಅನುಭವದಲ್ಲಿ ಹೆಚ್ಚಿನ ಸಂದರ್ಭಗಳಲ್ಲಿ ರೋಗಿಗಳು ಜ್ವರ ಮುಂತಾದವುಗಳಿಗೆ ಚಿಕಿತ್ಸೆ ಕೇಳಲು ಬರುತ್ತಿದ್ದರಂತೆ. ಅವರಿಗೆ ರಾಘವೇಂದ್ರ ಸ್ವಾಮೀಜಿಯವರಾದ ತಿರುಕರು ಉಪವಾಸ ಮಾಡಿ, ಹಣೆಗೆ ತಣ್ಣೀರು ಬಟ್ಟೆ ಇಟ್ಟುಕೊಳ್ಳಿ, ಸ್ವೇದನ ಕ್ರಿಯೆ ನಡೆಸಿ, ಹೀಗೆ “ಆಗ ತಾನೇ ಆರಂಭವಾದ ಜ್ವರದಲ್ಲಿ ಔಷಧ ಪ್ರಯೋಗ ಒಳ್ಳೆಯದಲ್ಲ ಅಲ್ಲದೆ ಅನಾವಶ್ಯಕ” ಎಂದು ಸಲಹೆ ನೀಡುತ್ತಿದ್ದರಂತೆ. ಅದಕ್ಕೆ “ನಾವು ಬಡವರೆಂದು ಈ ಸ್ವಾಮಿಗಳು ಔಷಧ ಕೊಡದೆ ಉದಾಸೀನ ಮಾಡುತ್ತಿದ್ದಾರೆ” ಎಂದು ಹಲವರು ಗೊಣಗಿದರೆ, ವಿದ್ಯಾವಂತರು ಅನುಕೂಲಸ್ಥರು ಕೂಡ ಹಲವೊಮ್ಮೆ ಹೀಗೆಯೇ ಆಲೋಚಿಸುತ್ತಿದ್ದರಂತೆ. ತಮಗೆ ಹೀಗೆ ಎಷ್ಟೋ ಸಂದರ್ಭಗಳಲ್ಲಿ ಮನಸ್ಸಾಕ್ಷಿಗೆ ವಿರುದ್ಧವಾಗಿ ಆಶ್ರಮದ ಹಿತದೃಷ್ಟಿಯಿಂದ ಔಷಧ ಕೊಟ್ಟು ಕಳುಹಿಸಬೇಕಾಗಿ ಬರುತ್ತಿದ್ದುದರಿಂದ, ಇನ್ನು ಹಣ ಸಂಪಾದನೆಗೆ ನಿಂತ ಡಾಕ್ಟರರ ಸ್ಥಿತಿ ಏನು, ಉಗ್ರವೋ? ಸೌಮ್ಯವೋ? ಭೀಕರವೋ? ಸಾಮಾನ್ಯವೋ? ರೋಗಿ ಬಂದ, ಚುಚ್ಚಿದೆ — ಹೀಗೆ ವಿವೇಚನೆ ಇಲ್ಲದೆ ಎಲ್ಲಾ ಕಡೆಗಳಲ್ಲಿ ಇಂಜೆಕ್ಷನ್ ಕೊಟ್ಟು ಹಣ ಸಂಪಾದನೆ ಮಾಡುವ ಕಾರ್ಯ ನಡೆಸಬೇಕಾಗಬಹುದಾದ ಪರಿಸ್ಥಿತಿಯ ಬಗ್ಗೆ ಅವರು ಚಿಂತಿಸಿದ್ದಾರೆ. ಅಕಸ್ಮಾತ್ ಡಾಕ್ಟರರು ಇದಕ್ಕೆ ಇಂಜೆಕ್ಷನ್ ಬೇಡಪ್ಪಾ, ರೋಗಿ 2 ದಿನಗಳ ಉಪವಾಸ ಮಾಡಲಿ ಎಂದು ಡಾಕ್ಟರರು ಏನಾದರೂ ಹೇಳಿದರೆ, ಆ ಡಾಕ್ಟರ್ ಬಳಿ ಯಾರೂ ಹೋಗುವುದಿಲ್ಲ ಎಂಬ ವಿಡಂಬನೆಯನ್ನು ಕೂಡ ಬರೆದಿದ್ದಾರೆ.

ಇನ್ನು ಪುಸ್ತಕದ ಮುನ್ನುಡಿಯಲ್ಲಿ ಸ್ವಾಮೀಜಿಯವರ ಜೀವನದ ರೋಚಕ ಪ್ರಸಂಗವೊಂದಿದೆ: 1933ರಲ್ಲಿ ಲಾಹೋರಿನಲ್ಲಿ ಬಾಬಾ ಲಕ್ಷ್ಮಣದಾಸ ಸಾಧುಗಳ ಬಳಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾಗ, ಗುರುಗಳು ಅವರನ್ನು ಪಾಶ್ಚಿಮಾತ್ಯ ಮಿಷನರಿಗಳು ನಡೆಸುತ್ತಿದ್ದ ಕುಷ್ಠರೋಗಿಗಳ ಆಸ್ಪತ್ರೆಗೆ ಕಳುಹಿಸಿ, ಅಲ್ಲಿನ ಶುಚಿತ್ವ ಮತ್ತು ಸೇವಾಮನೋಭಾವವನ್ನು ಕಣ್ಣಾರೆ ಕಂಡು ಕಲಿಯುವಂತೆ ಮಾಡುತ್ತಾರೆ. ಸೇವೆಯೇ ವೈದ್ಯಕೀಯದ ಬುನಾದಿ ಎಂಬುದು ಅವರು ಅಲ್ಲಿ ಕಲಿತ ಪಾಠ. ಕ್ರಿಶ್ಚಿಯನ್ ಮಿಷನರಿ ಒಂದರಲ್ಲಿ ನಡೆಯುತ್ತಿದ್ದ ಸೇವೆ ನೋಡಿದ ‘ತಿರುಕ’ರಿಗೆ ಆಸ್ಪತ್ರೆಯೇ ‘ದೇವಮಂದಿರ’ವೆನಿಸುತ್ತದೆ. ಅವರಿಗೆ “ನಮ್ಮಲ್ಲಿ ಕೂಡ ಈ ಸೇವಾ ಮನೋಭಾವ ಯಾಕೆ ಬರಬಾರದು?” ಎಂದು ಅನಿಸತೊಡಗುತ್ತದೆ.

ಚರಕ ಸಂಹಿತೆಯಲ್ಲಿ ಇರುವ ಈ ಶ್ಲೋಕ ಈ ಗ್ರಂಥದ ಅಡಿಪಾಯ:

"ಧರ್ಮಾರ್ಥ ಕಾಮಮೋಕ್ಷಾಣಾಂ ಆರೋಗ್ಯಂ ಮೂಲಮುತ್ತಮಂ" — ಧರ್ಮ, ಅರ್ಥ, ಕಾಮ, ಮೋಕ್ಷ ಈ ನಾಲ್ಕು ಪುರುಷಾರ್ಥಗಳನ್ನು ಗಳಿಸಲು ಆರೋಗ್ಯವೇ ಉತ್ತಮ ಮೂಲ.

ವಾಗ್ಭಟರ "ರೋಗಸ್ತು ದೋಷವೈಷಮ್ಯಂ, ದೋಷಸಾಮ್ಯಂ ಅರೋಗತಾ" (ವಾತ-ಪಿತ್ತ-ಕಫಗಳ ಏರುಪೇರೇ ರೋಗ; ಅವುಗಳ ಸಮತೋಲನವೇ ಆರೋಗ್ಯ) ಎಂಬ ಸೂತ್ರದ ಮೇಲೆ ಇಡೀ ಗ್ರಂಥ ನಿಂತಿದೆ. ಮನುಷ್ಯನೂ ಗಿಡಮರಗಳೂ ಒಂದೇ ಪಂಚಭೂತಗಳಿಂದ ಆದವರು; ಆದ್ದರಿಂದ ಶರೀರದಲ್ಲಿ ಕೊರತೆಯಾದ ತತ್ವವನ್ನು ವನೌಷಧಿಗಳು ತುಂಬಿಕೊಡಬಲ್ಲವು — ಎಂಬುದು ತಿರುಕರ ವಾದ.

ಇನ್ನೊಂದು ಮುಖ್ಯ ಸಂಗತಿ: ಪುಸ್ತಕದ ಹೆಸರು "ಸ್ವಯಂವೈದ್ಯ"ವಾದರೂ, ಸಂಶಯ ಬಂದಾಗ ಆಶ್ರಮದ ಧನ್ವಂತರೀ ವೈದ್ಯಕೀಯ ವಿಭಾಗವನ್ನೋ ಸ್ಥಳೀಯ ಆಯುರ್ವೇದ ವೈದ್ಯರನ್ನೋ ಸಂಪರ್ಕಿಸಬೇಕೆಂದು ಗ್ರಂಥವೇ ಎಚ್ಚರಿಸುತ್ತದೆ. ಇದು ಬೇಜವಾಬ್ದಾರಿ ಸ್ವ-ಚಿಕಿತ್ಸೆಯ ಪುಸ್ತಕವಲ್ಲ; ಜವಾಬ್ದಾರಿಯುತ ಮನೆಮದ್ದಿನ ಕೈಪಿಡಿ.

ಗ್ರಂಥದಲ್ಲಿ ಸ್ಥೂಲವಾಗಿ ಮೂರು ಭಾಗಗಳಿವೆ:

ಮೊದಲ ಭಾಗ:

  • ಭೂಮಿಕೆ; ದಿನಚರ್ಯೆ, ಋತುಚರ್ಯೆ ಮತ್ತು ಸದ್ವೃತ್ತ; ಶರೀರ ವಿಜ್ಞಾನ; ರೋಗನಿಶ್ಚಯ (ರೋಗನಿದಾನ)

  • ದ್ರವ್ಯಶುದ್ಧಿ, ಔಷಧರಚನೆಯ ಪರಿಭಾಷೆ, ಪ್ರತಿನಿಧಿ ದ್ರವ್ಯಗಳು, ಅನುಪಾನ, ರೋಗಿಗಳ ಶುಶ್ರೂಷೆಯ ನಿಯಮಗಳು

  • ಅಳತೆ-ತೂಕಗಳ ಕೋಷ್ಟಕ ಮತ್ತು ಔಷಧಕ್ಕೆ ಬೇಕಾಗುವ ಗಿಡಮೂಲಿಕೆಗಳ ಶಬ್ದಕೋಶ (ಕನ್ನಡ-ಸಂಸ್ಕೃತ ಹೆಸರುಗಳ ಜೋಡಣೆ)

ಎರಡನೆಯ ಭಾಗ — ರೋಗವಾರು ಚಿಕಿತ್ಸೆ: ಜ್ವರದಿಂದ ಆರಂಭಿಸಿ ಸುಮಾರು 45 ರೋಗ-ಪ್ರಕರಣಗಳು — ಅತಿಸಾರ-ಕಾಲರಾ, ಮೂಲವ್ಯಾಧಿ, ಅಜೀರ್ಣ, ನೆಗಡಿ-ಕೆಮ್ಮು-ದಮ್ಮು, ಕ್ರಿಮಿರೋಗ, ಪಾಂಡು-ಕಾಮಾಲೆ, ಕ್ಷಯ, ಹೃದಯರೋಗ, ವಾತರೋಗ, ಮೂತ್ರರೋಗ, ಪ್ರಮೇಹ-ಮಧುಮೇಹ, ಕುಷ್ಠ, ಚರ್ಮರೋಗಗಳು, ಶಿರೋರೋಗ, ಕಿವಿ-ಕಣ್ಣು-ಮೂಗು-ಹಲ್ಲಿನ ರೋಗಗಳು, ಹಾವು-ಚೇಳಿನ ವಿಷ (ಜಂಗಮವಿಷ), ಸ್ತ್ರೀರೋಗ, ಗರ್ಭಿಣಿ-ಬಾಣಂತಿಯರ ಆರೈಕೆ, ಶಿಶುಸಂಗೋಪನೆ, ಮಲಬದ್ಧತೆ, ಅನಿದ್ರೆ, ರಕ್ತದೊತ್ತಡ ಇತ್ಯಾದಿ.

ಮೂರನೆಯ ಭಾಗ — ಯೋಗ ಚಿಕಿತ್ಸೆ: "ಯೋಗದಿಂದ ರೋಗ ನಿವಾರಣೆ" ಮತ್ತು ರೋಗ-ರೋಗಕ್ಕೆ ಸೂಕ್ತ ಯೋಗಾಭ್ಯಾಸಗಳ ಪಟ್ಟಿ. ಯೋಗಶಿಕ್ಷಕರಾಗಿ ಅರ್ಧ ಶತಮಾನ ದುಡಿದ ತಿರುಕರ ವಿಶೇಷ ಕೊಡುಗೆ ಇದು.

ಕೊನೆಯ ಮಾತು

ಆಸ್ಪತ್ರೆ-ಔಷಧಿ ಅಂಗಡಿಗಳ ಮೇಲಿನ ಅವಲಂಬನೆ ದಿನದಿನಕ್ಕೆ ಹೆಚ್ಚುತ್ತಿರುವ ಇಂದಿನ ಕಾಲದಲ್ಲಿ, ಹಿತ್ತಲ ಗಿಡ-ಅಡುಗೆಮನೆಯ ಸಾಮಾನುಗಳಿಂದಲೇ ದೈನಂದಿನ ಆರೋಗ್ಯ ಕಾಪಾಡಿಕೊಳ್ಳಬಹುದೆಂಬ ಆತ್ಮವಿಶ್ವಾಸವನ್ನು ಈ ಗ್ರಂಥ ಕೊಡುತ್ತದೆ. ಆರು ದಶಕಗಳ ಸೇವಾನುಭವದಿಂದ ಒಬ್ಬ ಸಂತ ಕನ್ನಡದ ಜನಸಾಮಾನ್ಯರಿಗಾಗಿ ಬರೆದಿಟ್ಟ ಈ ಜ್ಞಾನಭಂಡಾರ, ಮನೆಯಲ್ಲೊಂದು ಇಟ್ಟುಕೊಳ್ಳಬೇಕಾದ ಆಪದ್ಧನ. ಜೊತೆಗೆ ಕನ್ನಡದ ಗಿಡಮೂಲಿಕೆ ಜ್ಞಾನ, ಹಳ್ಳಿಯ ಆರೈಕೆ ಪದ್ಧತಿಗಳು ಮತ್ತು ಯೋಗ ಚಿಕಿತ್ಸೆಯ ಪರಂಪರೆಯ ಅಮೂಲ್ಯ ದಾಖಲೆಯೂ ಹೌದು. ಮಲ್ಲಾಡಿಹಳ್ಳಿಯ "ತಿರುಕ"ರ ಮಾತಿನಲ್ಲೇ ಹೇಳುವುದಾದರೆ — ಧನ್ವಂತರಿ ದೇವನ ಸೇವೆ ಎಂದರೆ ಜನತಾ ಜನಾರ್ದನನ ಸೇವೆ; ಆ ಸೇವೆಯ ಫಲವೇ ಈ ಗ್ರಂಥ.

ಗ್ರಂಥ ವಿವರ:

  • ಗ್ರಂಥದ ಹೆಸರು: ಸ್ವಯಂವೈದ್ಯ

  • ಲೇಖಕರು: "ತಿರುಕ" — ಶ್ರೀ ಶ್ರೀ ರಾಘವೇಂದ್ರ ಸ್ವಾಮೀಜಿ, ಮಲ್ಲಾಡಿಹಳ್ಳಿ

  • ಪ್ರಕಾಶಕರು: ಅನಾಥಸೇವಾಶ್ರಮ ಟ್ರಸ್ಟ್, ಮಲ್ಲಾಡಿಹಳ್ಳಿ – 577531 (ಬಾಳಬೆಳಕು ಸಾಹಿತ್ಯ ಮಾಲೆ – 65)

  • ಮೊದಲ ಮುದ್ರಣ: 1978 | ಎಂಟನೆಯ ಮುದ್ರಣ: 2012

  • ಪುಟಗಳು: xviii + 622 = 640 | ಬೆಲೆ: ₹350