ಪ್ರವಾಸೋದ್ಯಮಕ್ಕಾಗಿ ಅಲ್ಲಲ್ಲಿ ರಿಸಾರ್ಟ್ಗಳು ತಲೆ ಎತ್ತುತ್ತಿವೆ. ಇದಕ್ಕಾಗಿ ಕೋಟಿಗಟ್ಟಲೆ ರೂಪಾಯಿಗಳ ಹಣದ ಹೊಳೆಯೇ ಹರಿಯುತ್ತಿದೆ. ಇದರಲ್ಲಿ ಒಂದಷ್ಟು ಕಾಣದ ಕೈಗಳಿಗೆ ಹೋಗುತ್ತಿವೆ. ಏನಿದ್ದರೂ ಇವೆಲ್ಲಾ ಕೃತಕ.
ಪ್ರವಾಸಿ ಧಾಮಗಳು ಒತ್ತಡದ ಜೀವನಕ್ಕೆ ಒಂದು ಟಾನಿಕ್. ಆದರೆ ಕೃತಕ ರಿಸಾರ್ಟ್ಗಳಿಗೆ ಹೋಗಿ ಇರುವುದು ಜನಸಾಮಾನ್ಯನಿಗೆ ದುಬಾರಿಯಾಗುತ್ತದೆ. ದೂರದೂರಿಗೆ ಹೋಗಿಬರುವ ವೆಚ್ಚಗಳಲ್ಲದೆ ಅಲ್ಲಿ ಉಳಿದುಕೊಳ್ಳುವ ವೆಚ್ಚ ಭರಿಸಲು ಸಾಧಾರಣದವರಿಗೆ ಅಸಾಧ್ಯ.
ನಮ್ಮ ಹಳ್ಳಿಗಳಲ್ಲಿ ಇದಕ್ಕಿಂತಲೂ ಹೆಚ್ಚಿನ ಮುದ ತರುವ, ಖುಷಿ ಕೊಡುವ ಎಷ್ಟೋ ಧಾಮಗಳು ಇವೆ. ನಮ್ಮೂರಿನ ಹತ್ತಿರದಲ್ಲೇ ಇಂತಹ ಹಲವು ಪ್ರಕೃತಿಸೌಂದರ್ಯದ ತಾಣಗಳಿರುವುದು ಅನೇಕರಿಗೆ ಗೊತ್ತಿಲ್ಲ. ಯಾಕೆಂದರೆ ಅದನ್ನು ನೋಡುವ ಕಣ್ಣುಗಳು ನಮಗಿಲ್ಲ. ಯಾವಾಗಲೂ ದೂರದ ಬೆಟ್ಟ ನುಣ್ಣಗೆ!
ನನ್ನ ಮನೆಯ ಹತ್ತಿರ ಒಂದು ಕಲ್ಲುಗುಡ್ಡವಿದೆ. ನಮ್ಮ ಹಿರಿಯರು ಇದೇ ಗುಡ್ಡದ ತುದಿಯಲ್ಲಿ ನಿಂತು ಪ್ರಕೃತಿಯನ್ನು ಸವಿದ ದಿವಸಗಳೀಗ ನೆನಪು ಮಾತ್ರ.
ದೂರದಿಂದ ನೋಡುವಾಗ ಈ ಗುಡ್ಡ ಕಲ್ಲಪಾದೆಯನ್ನು ರಾಶಿ ಹಾಕಿದಂತೆ ಕಾಣುತ್ತದೆ. ಸಂಜೆ ಹೊತ್ತು ಅಲ್ಲಿಂದ ಕಾಣುವ ಸೂರ್ಯ ಮುಳುಗುವ ದೃಶ್ಯ ಅವರ್ಣನೀಯ. ಗುಡ್ಡದ ಇಳಿಜಾರಿನ ಎದುರಿಗಿರುವ ಬಯಲು ಹೊಸಲೋಕವೊಂದನ್ನು ತೆರೆದಿಡುತ್ತದೆ. ಅಲ್ಲಲ್ಲಿ ಕಾಣುವ ಮರಗಳು, ಒಂದೆರಡು ಮನೆಗಳು, ಸಂಜೆಯ ತಂಪಾದ ಗಾಳಿ, ಹಕ್ಕಿಗಳ ಮನೆಸೇರುವ ಗಲಾಟೆ – ಇವು ಯಾವ ರಿಸಾರ್ಟ್ಗಳಲ್ಲಿಯೂ ನಮಗೆ ಸಿಗದು. ಈ ರಮಣೀಯ ದೃಶ್ಯವನ್ನು ನೋಡಿದಾಗ ಓಂ ಶಾಂತಿ ಓಂ ಶಾಂತಿ.. ಎಂಬ ತೃಪ್ತಿ ದೊರೆಯುತ್ತದೆ. ಹೊಳೆಯಾಚೆಯ ಗುಡ್ಡದ ಹಿಂದೆ ಪಶ್ಚಿಮದಲ್ಲಿ ಮುಳುಗುವ ಸೂರ್ಯನನ್ನು ಕಾಣುತ್ತ ನಾವು ಮೈಮರೆಯಬಹುದು.
ಅಲ್ಲಿ ಕಾಣುವ ಪೂರ್ವದಿಂದ ಪಶ್ಚಿಮಕ್ಕೆ ಸಾಲುಸಾಲಾಗಿ ಹಾರುತ್ತಾ ಹೊಳೆಯ ನಡುವಿನ ಕೆಲವು ಎತ್ತರವಾದ ಮರಗಳ ಮೇಲೆ ಎರಗಿ ರಾತ್ರಿಯ ವಾಸಕ್ಕೆ ಅಣಿಯಾಗುವ ಹಕ್ಕಿಗಳು. ಅಲ್ಲಿ ಕೇಳುವ ಪಕ್ಷಿಗಳ ಪಕ್ಷಿ ಭಾಷೆ ಮಾನವನಿಗೊಂದು ಪಾಠ. ನಮಗೆ ನಮ್ಮ ಭಾಷೆಯೇ ಪೂರ್ಣ ಅರ್ಥವಾಗುವುದಿಲ್ಲ! ಹಾಗಿದ್ದ ಮೇಲೆ ಪಕ್ಷಿಗಳ ಭಾಷೆ ಅರ್ಥವಾಗುವುದೆಂತು?
ಚಂದ್ರ ಮೂಡುವ ದಿನಗಳಲ್ಲಿ ಅಲ್ಲಿ ಕುಳಿತರೆ ಚಂದ್ರನ ಬೆಳಕಿನಲ್ಲಿ ಸಮಯ ಹೋಗುವುದೇ ಗೊತ್ತಾಗುವುದಿಲ್ಲ. ಇಂತಹ ಪ್ರಕೃತಿ ಸಮಾಧಿಯಿಂದ ನಮ್ಮನ್ನು ವಾಸ್ತವಕ್ಕೆ ಕರೆತರಲು ಮನೆಯಿಂದ ಯಾರಾದರೂ ಬರಬೇಕಾಗುತ್ತಿತ್ತು. ಅವರು ಕರೆದಾಗ ಮಾತ್ರ ಧ್ಯಾನದಿಂದ ಎದ್ದವರಂತೆ ಅಲ್ಲಿಂದ ಕೆಳಗಿಳಿದು ಮನೆ ಸೇರುವ ಯೋಚನೆ ಮೂಡುತ್ತದೆ.
ಇಂತಹ ವಾತಾವರಣವಿರುವ ಅನೇಕ ಸ್ಥಳಗಳು ಈಗ ಬರಡಾಗುತ್ತಿವೆ. ಅಭಿವೃದ್ಢಿಯ ಹೆಸರಿನಲ್ಲಿ ಹೇಳಹೆಸರಿಲ್ಲದಂತಾಗುತ್ತಿವೆ. ಒಂದು ವೇಳೆ ಉಳಿದಿದ್ದರೂ ಅಲ್ಲೆಲ್ಲ ವಾಸದ ಮನೆಗಳು ತುಂಬುತ್ತಿವೆ. ಮಾನವನ ವಿಪರೀತಗಳಿಂದಾಗಿ ಪ್ರಕೃತಿ ವಿಕಾರವಾಗುತ್ತಿದೆ.
ಹಳ್ಳಿಗಳಲ್ಲಿ ವಾಸಿಸುವ ರೈತ ಬಂಧುಗಳು ತಮ್ಮ ತಮ್ಮ ಹಳ್ಳಿಗಳಲ್ಲಿರುವ ಪ್ರಕೃತಿ ಸೌ೦ದರ್ಯದ ತಾಣಗಳನ್ನು ರಿಸಾರ್ಟ್ಗಳ ರೀತಿಯಲ್ಲಿ ಅಭಿವೃದ್ಢಿಪಡಿಸಿದರೆ, ಇವು ತಕ್ಕಮಟ್ಟಿನ ಆದಾಯವನ್ನು ಒದಗಿಸಬಲ್ಲವು. ನಮ್ಮ ಹಳ್ಳಿಗಳ ಆರ್ಥಿಕ ಸ್ಥಿತಿಯ ಚೇತರಿಕೆಗೆ ಇದೂ ಒಂದು ದಾರಿಯಾದೀತು.
ಸಾಂದರ್ಭಿಕ ಫೋಟೋ: ಹಳ್ಳಿಯಲ್ಲಿ ಕಾಣುವ ಗುಡ್ಡದಾಚೆಯ ಸೂರ್ಯಾಸ್ತಮಾನ …ಕೃಪೆ: ಐಸ್ಟೋಕ್ ವೆಬ್-ಸೈಟ್
ಆಕರ ಪುಸ್ತಕ: ಅಡ್ಡೂರು ಶಿವಶಂಕರರಾಯರ ಎಂಬತ್ತರ ಕೊಯ್ಲಿನ ಕಾಳುಗಳು
ಲೇಖಕರು: ಅಡ್ಡೂರು ಕೃಷ್ಣರಾವ್, ನಾ. ಕಾರಂತ ಪೆರಾಜೆ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!