ರಾಜಕೀಯದ ಅಲೆಗಳಲ್ಲಿ

ಇತ್ತ ಮಂಗಳೂರಿನಲ್ಲಿ ಬೀಸುತ್ತಿದ್ದ ರಾಜಕೀಯದ ಅಲೆಯಿಂದಾಗಿ ನಾನು ಇರುತ್ತಿದ್ದ ಹಾಸ್ಟೆಲ್‌ನಲ್ಲಿ ರಾಜಕೀಯ ಚಟುವಟಿಕೆ ಜೋರಾಯಿತು. ನಾನು ಇದನ್ನು ಸೇರಿಕೊಂಡೆ. ಕಮ್ಯೂನಿಸ್ಟ್ ಸಿದ್ಧಾಂತಗಳು ಮತ್ತು ಅದರಿಂದ ಪ್ರೇರಿತವಾದ ಕಾರ್ಯಗಳಲ್ಲಿ ನಾನು ಕಟ್ಟುಬಿದ್ದೆ. ಒಮ್ಮೆ ಸಣ್ಣಣ್ಣ ಮಂಗಳೂರಿಗೆ ಬಂದಿದ್ದಾಗ ನನ್ನ ಹಾಸ್ಟೆಲ್ ರೂಂನಲ್ಲಿ ತಂಗಿದ್ದ. ರಾತ್ರಿಯಿಡೀ ನನ್ನ ರಾಜಕೀಯ ಜೀವನದ ಬಗ್ಗೆ ಚರ್ಚಿಸಿದ್ದ. ಬೆಳಿಗ್ಗೆ ಅವನೊಂದಿಗೆ ರೈಲ್ವೇ ನಿಲ್ದಾಣಕ್ಕೆ ನಾನೂ ಹೊರಟೆ. ಹೋಗುತ್ತಿದ್ದಾಗ ಕಮ್ಯೂನಿಸ್ಟ್ ಪತ್ರಿಕೆಯೊಂದನ್ನು ಕೊಂಡು ಕೊಳ್ಳಲು ವಿನಂತಿಸಿದೆ. ರಾಜಕೀಯದ ಅರಿವಿಲ್ಲದ ಅವನು ನಿರಾಕರಿಸಿದ. ಇದರಿಂದಾಗಿ ನನಗೆ ಬೇಸರವಾಗಿತ್ತು. ರೈಲ್ವೇನಿಲ್ದಾಣ ಸಮೀಪಿಸುತ್ತಿದ್ದಂತೆ ಆತನ ಚಪ್ಪಲಿಯ ಬಾರ್ ಕಡಿಯಿತು. ಚಪ್ಪಲಿ ಹಾಕಿಕೊಂಡು ಹೋಗುವ ಸ್ಥಿತಿಯಲ್ಲಿರಲಿಲ್ಲ. ಕೈಯಲ್ಲಿ ಹಿಡಿದುಕೊಂಡು ಹೋಗಬೇಕಾಗಿತ್ತು. ಆಗ ಅವನಿಗೆ ನನ್ನ ಪತ್ರಿಕೆ ನೆನಪಾಗಿ ‘ಒಂದು ಪೇಪರ್ ಕೊಡು’ ಎಂದು ಕೇಳಿದ. ನಾನು ಕೊಡುವುದಿಲ್ಲವೆಂದು ಹೇಳಿದೆ. ‘ಹಣ ಕೊಡುತ್ತೇನೆ, ಕೊಡು’ ಎಂದು ಒತ್ತಾಯಿಸಿದ. ನೀನು ಎಷ್ಟೇ ಹಣ ಕೊಟ್ಟರೂ ನಿನಗೆ ಕೊಡುವುದಿಲ್ಲ ಎಂದು ನಾನು ಪಟ್ಟು ಹಿಡಿದೆ. ಇದರಿಂದಾಗಿ ನನ್ನ ಪಕ್ಷನಿಷ್ಠೆಯ ಕುರಿತು ಆತನಿಗೆ ತಿಳಿದಿರಬೇಕು. ಮತ್ತೆ ಆತ ಒತ್ತಾಯಿಸಲಿಲ್ಲ. ಅದಾದ ಬಳಿಕ ತಾಯಿಯ ಬಳಿ ಹೇಳಿ ನನ್ನನ್ನು ತಿದ್ದಲು ಅವನು ಪ್ರಯತ್ನಿಸುತ್ತಿದ್ದ. ಪಕ್ಷದ ಮೇಲಿನ ನಿರ್ಬಂಧ ತೆಗೆಯಲಾಯಿತು. ಕಮ್ಯೂನಿಸ್ಟ್ ಪಕ್ಷದ ಕೆಲಸ ಚುರುಕಿನಿಂದ ಆರಂಭವಾಯಿತು. ಪಕ್ಷಕ್ಕೆ ಬೇಕಾದ ಅರ್ಥಿಕ ಮೂಲಕ್ಕಾಗಿ ಪಕ್ಷದ ನಿಧಿಯೊಂದನ್ನು ರೂಪಿಸಲಾಯಿತು. ಹಲವು ಅಭಿಮಾನಿಗಳು, ಪ್ರೋತ್ಸಾಹಕರು, ಪಕ್ಷ ಕಾರ್ಯಕರ್ತರು ಸಾಧ್ಯವಾದಷ್ಟು ನೆರವಾದರು. ರಾಜೇಶ್ವರ ರಾಯರು ಅವರ ಪೂರ್ಣ ಆಸ್ತಿ ಮಾರಿ, ಅವರ ಹೆಂಡತಿಗೆ ಜೀವನಕ್ಕಾಗಿ ಆರು ಎಮ್ಮೆ ತೆಗೆದುಕೊಟ್ಟು ಉಳಿದೆಲ್ಲಾ ಸಂಪತ್ತನ್ನು ಪಕ್ಷಕ್ಕೆ ಧಾರೆಯೆರೆದರು. ಈ ವಿಚಾರ ನನಗೆ ಸ್ಫೂರ್ತಿ ನೀಡಿತು. ನನ್ನಲ್ಲಿ ಹಣ ಎಲ್ಲಿಂದ? ನಮ್ಮ ಕುಟುಂಬದ ಆಸ್ತಿ ಇದೆ. ಹಾಗಾಗಿ ಅಮ್ಮನ ಹತ್ತಿರ ನನ್ನ ಪಾಲಿನ ಬಾಬ್ತು ಕೇವಲ ಮೂರು ಸಾವಿರ ಕೇಳಿದೆ. ಅಮ್ಮ ‘ಆಗುವುದಿಲ್ಲ’ ಎಂದರು.

ರಾಜಕೀಯಕ್ಕೆ ಧುಮುಕಿದ ಸಣ್ಣಣ್ಣ

ರಾಜಕೀಯದ ಗಂಧಗಾಳಿಯೂ ಇಲ್ಲದ, ಅದರ ಮೇಲೆ ಆಸ್ಥೆಯೂ ಇಲ್ಲದ ಸುಬ್ಬರಾವ್ ಏಕಾಏಕಿ ರಾಜಕೀಯ ರಂಗಕ್ಕೆ ಧುಮುಕಿದ. ೧೯೪೨ರ ಚಳುವಳಿ ಅವನ ಮೇಲೆ ಯಾವುದೇ ಪ್ರಭಾವ ಬೀರಿರಲಿಲ್ಲ. ೧೯೪೩ರಲ್ಲಿ ಗಾಂಧೀಜಿ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದಾಗ ಅವನ ಕಾಲೇಜಿನ ಹಾಗೂ ಮದ್ರಾಸಿನ ಕಾಲೇಜುಗಳ ವಿದ್ಯಾರ್ಥಿ ಸಮುದಾಯ ಸತ್ಯಾಗ್ರಹಕ್ಕೆ ಇಳಿಯಿತು. ಗಾಂಧೀಜಿಯವರ ಬಿಡುಗಡೆಗೆ ಒತ್ತಾಯಿಸಿ ತಂಡ ತಂಡವಾಗಿ ಸತ್ಯಾಗ್ರಹ ಮಾಡಬೇಕೆಂದು ಅವರು ನಿರ್ಣಯಿಸಿದ್ದರು. ಒಂದೆರಡು ತಂಡಗಳವರು ಬಂಧಿತರಾಗಿ ಸತ್ಯಾಗ್ರಹ ಮುಂದುವರಿಸಲು ಸ್ವಯಂಸೇವಕರ ಕೊರತೆ ಕಂಡಾಗ ಸಣ್ಣಣ್ಣನಿಗೆ ಸಿಟ್ಟು ಬಂತು. ಅವನೂ ಸತ್ಯಾಗ್ರಹಕ್ಕೆ ಧುಮುಕಿದ. ಹಲವರೊಂದಿಗೆ ಅಣ್ಣನೂ ಬಂಧನಕ್ಕೊಳಗಾದನು. ಅವನನ್ನು ಅಲಿಪುರಂ ಜೈಲಿಗೆ ಒಯ್ಯಲಾಯಿತು.

ಅವನು ಅಲ್ಲಿದ್ದಾಗ ಒಂದು ಸ್ವಾರಸ್ಯ ನಡೆಯಿತು. ಅಲಿಪುರಂ ಜೈಲಿನಲ್ಲಿ ಸಾವಿರಾರು ರಾಜಕೀಯ ಕೈದಿಗಳಿಗೆ ಬೆಳಿಗ್ಗೆ ಸುಮಾರು ಒಂಬತ್ತು ಗಂಟೆಗೆ ಜೈಲಿನ ಆವರಣದೊಳಗಿನ ಕಂಪೌಂಡ್‌ನಲ್ಲಿ ಅಡ್ಡಾಡಲು ಅವರವರ ಕೋಣೆಗಳಿಂದ ಹೊರಬಿಡುತ್ತಿದ್ದರು. ಆ ಸಮಯದಲ್ಲೇ ಸ್ನಾನ ಮಾಡಬೇಕಿತ್ತು. ಎಲ್ಲರೂ ನಳ್ಳಿಯ ಹತ್ತಿರ ಜಮಾಯಿಸಿದ್ದರು. ಕೆಲವರಿಗೆ ಸ್ನಾನ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಹೀಗಿರುವಾಗ ಒಂದು ದಿನ ಎಲ್ಲರನ್ನೂ ಹೊರಗೆ ಬಿಟ್ಟಾಗ ಯಾರೂ ನಳ್ಳಿಯ ಹತ್ತಿರ ಜಮಾಯಿಸದಿದ್ದುದನ್ನು ಕಂಡು ಅಣ್ಣನಿಗೆ ಕುತೂಹಲ ವಾಯಿತು. ಕೂಡಲೇ ಬೈರಾಸ್ ಹಿಡಿದುಕೊಂಡು ನಳ್ಳಿಯ ಹತ್ತಿರ ಹೋಗಿ ಸ್ನಾನ ಮಾಡುವಾಗ ಶುರುವಾಯಿತು – ಧೂಳಿನ ಸುಂಟರಗಾಳಿ. (ಅದು ಬಳ್ಳಾರಿ ಜಿಲ್ಲೆಯ ವಾತಾವರಣದಲ್ಲಿ ಉಂಟಾಗುವ ವೈಪರೀತ್ಯ). ಆಗ ಆಗಸದಲ್ಲಿ ಮೋಡ ಕವಿದಿತ್ತು. ಅವನ ಮೈಯೆಲ್ಲಾ ಧೂಳು ಮೆತ್ತಿಕೊಂಡಿತು. ಇತರರು ಯಾಕೆ ಸ್ನಾನಕ್ಕೆ ಹೋಗಲಿಲ್ಲವೆಂಬುದು ಆಗ ಆತನಿಗೆ ತಿಳಿಯಿತು.

ಮೂರು ತಿಂಗಳುಗಳ ಕಠಿಣ ಶಿಕ್ಷೆಯ ನಂತರ ಅವನ ಬಿಡುಗಡೆಯಾಯಿತು. ಕೂಡಲೇ ಅವನು ಅಡ್ಡೂರಿಗೆ ಬಂದ. ಅದನ್ನು ತಿಳಿದು ನಾನೂ ಅಡ್ಡೂರಿಗೆ ಧಾವಿಸಿದೆ. ನನಗೂ ಅವನಿಗೂ ಬಿಸಿಬಿಸಿ ವಾದ ನಡೆಯಿತು. ಅವನು ನಮ್ಮ ಕಮ್ಯೂನಿಸ್ಟ್ ಪಕ್ಷವನ್ನು ಜರೆದ. ನೀವು ದ್ರೋಹಿಗಳೆಂದು ಹೀಗಳೆದ. ನಾನೂ ಸುಮ್ಮನಿರಲಿಲ್ಲ. ಹೊರಗಿನಿಂದ ನೋಡುವವರಿಗೆ ನಾವು ಬಡಿದಾಡಿಕೊಂಡಂತೆ ಭಾಸವಾಗುತ್ತಿತ್ತು. ಹೀಗೆ ಮಾತನಾಡುವಾಗ ನನ್ನ ಅಮ್ಮ ‘ನೀನು ಇವನಿಗೆ ಸ್ವಲ್ಪ ಬುದ್ಧಿ ಹೇಳು ಸುಬ್ಬರಾವ್. ಅವನಿನ್ನೂ ಸಂಪಾದನೆಯ ದಾರಿಯಲ್ಲಿ ಹೋಗುವಂತೆ ಕಾಣುವುದಿಲ್ಲ. ಅವನಿಗೆ ಹಣ ಕೊಡಲು ನನ್ನಿಂದ ಸಾಧ್ಯವಿಲ್ಲ. ಗೇಣಿಯೂ ಸರಿಯಾಗಿ ಬರುತ್ತಿಲ್ಲ’ ಎಂದು ಒಗ್ಗರಣೆ ಹಾಕುತ್ತಿದ್ದಳು. ‘ಗೇಣಿ ಯಾಕೆ ಬರುವುದಿಲ್ಲ?’ ಎಂದು ಅಣ್ಣ ಕೇಳಿದ. ‘ಅವರಿಗೆ ಹೊಟ್ಟೆತುಂಬ ಊಟ ಮಾಡಬೇಕು’ ಎಂದರು ಅಮ್ಮ. ಅದನ್ನು ಕೇಳಿ ನನಗೂ ಆಶ್ಚರ್ಯವಾಯಿತು. ‘ಹೊಟ್ಟೆತುಂಬ ತಿಂದರೆ ಗೇಣಿ ಕೊಡುವುದು ಕಷ್ಟವೇ?’ ಎಂದು ಕೇಳಿದೆ. ಅಮ್ಮ ಸತ್ಯವಾದುದನ್ನೇ ಹೇಳಿದ್ದಳು, ‘ಸಮಾ ಊಟ ಮಾಡಿದರೆ ಗೇಣಿ ಹೇಗೆ ಕೊಡಲಿಕ್ಕಾಗುತ್ತದೆ?’ ಎಂದು. ನಾನು ಕಮ್ಯೂನಿಸ್ಟ್ ಸಿದ್ಧಾಂತವನ್ನು ಒಪ್ಪಿದವನಾದ್ದರಿಂದ ಅದನ್ನು ಕೇಳಿ ಸುಮ್ಮನಾದೆ. ನನ್ನ ಮುಖ ನೋಡಿ ಅಣ್ಣನೂ ಚಿಂತಿಸತೊಡಗಿದ. ಆಗಿನ ಸಮಾಜದ ಆಗುಹೋಗುಗಳು ಮತ್ತು ಕಷ್ಟಸುಖಗಳು ಅದೇ ಮೊದಲ ಬಾರಿಗೆ ಅವನಿಗೆ ಮನವರಿಕೆಯಾದಂತಿತ್ತು.

ಮಂಜೇಶ್ವರದಲ್ಲಿ ವೃತ್ತಿ ಆರಂಭ

ಮುಂದೆ ಅಣ್ಣ ಮಂಜೇಶ್ವರದಲ್ಲಿ ಡಿಸೆಂಬರ್ ೧೯೪೩ರಲ್ಲಿ ಕ್ಲಿನಿಕ್ ತೆರೆದು ವೈದ್ಯಕೀಯ ಸೇವೆ ಮುಂದುವರಿಸಿದ. ನಾವು ಒಟ್ಟು ಸೇರಿದಾಗ ಮೊದಲಿನಂತೆ ಚರ್ಚೆ ಆಗುತ್ತಿತ್ತು. ಆಗ ಮಂಗಳೂರಿನ ನೆಹರೂ ಮೈದಾನದ ಅಂಚಿನಲ್ಲಿದ್ದ ಪಕ್ಷದ ಕಚೇರಿಯಲ್ಲಿ ಹೆಚ್ಚು ಸಮಯವಿರುತ್ತಿದ್ದೆ. ಮುಖ್ಯವಾಗಿ ಅಲ್ಲಿ ಶಾಂತಾರಾಂ ಪೈ, ಬಿ.ವಿ. ಕಕ್ಕಿಲ್ಲಾಯರು ಇರುತ್ತಿದ್ದರು. ಅಣ್ಣನಿಗೆ ಅವರೊಂದಿಗೂ ಸಂಪರ್ಕವಾಯಿತು. ಅಣ್ಣನು ಆಗಾಗ್ಗೆ ಬಂದಾಗ ರಾಜಕೀಯ ಕುರಿತು ಬಿಸಿಬಿಸಿ ವಿಚಾರ ವಿನಿಮಯವಾಗುತ್ತಿತ್ತು. ಮಂಜೇಶ್ವರದಲ್ಲಿ ಸಣ್ಣಣ್ಣ ಕ್ರಿಕೆಟ್ ಮುಂತಾದ ಕ್ರೀಡೆಗಳಲ್ಲಿ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಯುವಕರಿಗೆಲ್ಲಾ ಮುಂದಾಳಾಗಿದ್ದನು. ಕಾಂಗ್ರೆಸ್ಸಿನ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದನು.

ಮಂಗಳೂರಿನಲ್ಲಿ ಸನ್ಯಾಸಿಗುಡ್ಡೆಯಲ್ಲಿ ನಮ್ಮ ಬಿಡಾರ ಇತ್ತು. ೧೯೪೬ರ ನಂತರ ಅಮ್ಮ ಅಡ್ಡೂರಿಗೆ ಹೋಗಿ ನೆಲೆಸಿದಳು. ಹಾಗಾಗಿ ನಾವು (ನಾನು ಮತ್ತು ಪಕ್ಷದ ಸದಸ್ಯರು) ಅಲ್ಲೇ ಸಣ್ಣ ಮನೆಯೊಂದಕ್ಕೆ ಬಿಡಾರ ಬದಲಿಸಿದ್ದೆವು. ಹೊಳ್ಳರು, ಕಕ್ಕಿಲ್ಲಾಯರು, ಶಾಂತಾರಾಂ ಅಲ್ಲದೆ ಹಲವು ಪಕ್ಷದ ಮುಖಂಡರು ಆಗಾಗ್ಗೆ ಅಲ್ಲಿಗೆ ಬರುತ್ತಿದ್ದರು. ಅಣ್ಣನೂ ಬರುತ್ತಿದ್ದ. ಹಾಗಾಗಿ ಅಣ್ಣನಿಗೆ ಅವರೆಲ್ಲರ ಪರಿಚಯವಾಗಿತ್ತು. ಆಗ ಕಮ್ಯೂನಿಸ್ಟ್ ಪಕ್ಷದ ಧೋರಣೆ ಗಡುಸಾಗಿತ್ತು. ಎರಡನೇ ಮಹಾಯುದ್ಧ ಮುಗಿದಾಗ ಸೋವಿಯತ್ ರಷ್ಯಾ ಅಜೇಯವಾಗಿ ಉಳಿದು, ಅದು ನಾಶವಾಗುವುದೆಂದು ನಂಬಿದ್ದ ಸಾಮ್ರಾಜ್ಯಶಾಹಿ ಜಗತ್ತಿಗೆ ನಿರಾಶೆಯಾಯಿತು. ಸೋವಿಯತ್ ರಷ್ಯದ ಸ್ಫೂರ್ತಿಯಿಂದ ಜಗತ್ತಿನಾದ್ಯಂತ ಕಾರ್ಮಿಕರ ಮತ್ತು ವಸಾಹತು ಜನರ ಹೋರಾಟ ಹುರುಪುಗೊಂಡಿತು. ಭಾರತದಲ್ಲಿ ಹೋರಾಟ ಚುರುಕಾಯಿತು. ಇದರಲ್ಲಿ ಕಮ್ಯೂನಿಸ್ಟ್ ಪಕ್ಷವು ಮುಂಚೂಣಿಯಲ್ಲಿತ್ತು. ಹಲವರು ಹೋರಾಟಗಳಲ್ಲಿ ನೇತೃತ್ವ ವಹಿಸಿದರು. ನಾವಿಕರ ಬಂಡಾಯ, ಅಂಚೆ ಮುಷ್ಕರ, ಐ.ಎನ್.ಐ. ಕೈದಿಗಳ ಬಿಡುಗಡೆ ಮುಂತಾದ ಹೋರಾಟಗಳು ಸಾಮ್ರಾಜ್ಯಶಾಹಿ, ಬಂಡವಾಳಶಾಹಿ ನಾಯಕರಿಗೂ ಚಳಿ ಹುಟ್ಟಿಸಿತು. ಕಾಂಗ್ರೆಸ್ ಸರಕಾರವು ಕಮ್ಯೂನಿಸ್ಟರ ಹುಟ್ಟಡಗಿಸುವ ಛಲ ಕೈಗೊಂಡಿತ್ತು. ಕೆಲವರನ್ನು ಜೈಲಿಗೆ ಹಾಕುವ ಕಾರ್ಯ ಭರದಿಂದ ಸಾಗುತ್ತಿತ್ತು. ಕೆಲವರು ಭೂಗತರಾದರು. ಈ ದಬ್ಬಾಳಿಕೆಯನ್ನು ಸಣ್ಣಣ್ಣ ಸುಬ್ಬರಾವ್ ಸಹಿಸುತ್ತಿರಲಿಲ್ಲ. ಇದನ್ನು ಖಂಡಿಸುತ್ತಿದ್ದ. ಸರಕಾರದ ಈ ಧೋರಣೆಗಳಿಂದ ಆತನಿಗೆ ಕಾಂಗ್ರೆಸ್ ಮೇಲಿನ ವ್ಯಾಮೋಹ ಕಡಿಮೆಯಾಗತೊಡಗಿತು.

ಕಮ್ಯುನಿಸ್ಟ್ ಚಳವಳಿಗೆ ರಂಗ ಪ್ರವೇಶ

ಡಾ. ಸುಬ್ಬರಾವ್ ವೈದ್ಯವೃತ್ತಿ ಆರಂಬಿಸಿದ ಮಂಜೇಶ್ವರ ಪಟ್ಟಣ ಕಾಸರಗೋಡು ಪ್ರದೇಶದಲ್ಲಿದೆ. ಅಲ್ಲಿ ರೈಲುನಿಲ್ದಾಣವಿದ್ದರೂ ಅದು ಹಿಂದುಳಿದ ಪ್ರದೇಶವಾಗಿತ್ತು. ಬಹುಪಾಲು ಜನರು ಅನಕ್ಷಸ್ಥರು ಹಾಗೂ ಸಾಮಾಜಿಕವಾಗಿ ಹಿಂದುಳಿದವರು. ಅಲ್ಲಿನ ರೈತರು ಹಾಗೂ ಕೃಷಿ ಕಾರ್ಮಿಕರು ಭೂಮಾಲೀಕರ ಗುಲಾಮರಂತೆ ಜೀವಿಸುತ್ತಿದ್ದರು. ಕಯ್ಯೂರಿನಲ್ಲಿ ಭೂಮಾಲಿಕರ ವಿರುದ್ಧ ಸ್ವಾತಂತ್ರ್ಯ ಸಮರ ಸೇನಾನಿಗಳು ನಡೆಸಿದ ಹೋರಾಟ ದಕ್ಷಿಣಭಾರತದಲ್ಲೇ ಸುದ್ದಿಯಾಗಿದ್ದರೂ ಮಂಜೇಶ್ವರಕ್ಕೆ ಅದರ ಬಿಸಿ ತಟ್ಟಿರಲಿಲ್ಲ. ಆದ್ದರಿಂದಲೇ ಭೂಮಾಲೀಕರಿಂದ ರೈತರ ಶೋಷಣೆ ರಾಜಾರೋಷವಾಗಿ ನಡೆಯುತ್ತಿತ್ತು. ಒಕ್ಕಲುಗಳು ಸಲ್ಲಿಸಿದ ಗೇಣಿಗೆ ಭೂಮಾಲೀಕರು ರಶೀದಿ ನೀಡುತ್ತಿರಲಿಲ್ಲ. ಬೆಳೆ ನಾಶವಾಗಿ ಗೇಣಿ ಕೊಡದಿದ್ದರೂ ಒಕ್ಕಲೆಬ್ಬಿಸುತ್ತಿದ್ದರು. ಪ್ರತಿಭಟಿಸಿದವರ ಮೇಲೆ ದೈಹಿಕ ಹಲ್ಲೆ ನಡೆಸುತ್ತಿದ್ದರು. ಕೂಲಿಕಾರ್ಮಿಕರ ಸ್ಥಿತಿಯೂ ಶೋಚನೀಯವಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ರೈತರನ್ನೂ ಕೂಲಿಕಾರ್ಮಿಕರನ್ನೂ ಸಂಘಟಿಸಲು ಧೀರ ನೇತಾರನೊಬ್ಬನ ಅಗತ್ಯವಿತ್ತು. ಈ ಹೊತ್ತಿನಲ್ಲಿ, ೧೯೫೨ರಲ್ಲಿ ಮಂಜೇಶ್ವರದ ಎಸ್.ಎ.ಟಿ. ಹೈಸ್ಕೂಲಿಗೆ ಅಧ್ಯಾಪಕರಾಗಿ ರಾಮಪ್ಪ ಮಾಸ್ಟರರ ಆಗಮನ. ಊರಿನವರನ್ನು ಬೇಗನೇ ಪರಿಚಯ ಮಾಡಿಕೊಂಡ ರಾಮಪ್ಪ ಮಾಸ್ಟರ್ ಕಮ್ಯುನಿಸ್ಟ್ ಪಾರ್ಟಿಯ ಕಾರ್ಯಕರ್ತರು. ಅವರು ಡಾ. ಸುಬ್ಬರಾಯರ ನಾಯಕತ್ವ ಗುಣಗಳನ್ನು ಗುರುತಿಸಿದರು. ರೈತರ ಹಾಗೂ ಕೂಲಿಕಾರ್ಮಿಕರ ಸಂಘಟನೆಗೆ ಡಾ. ಸುಬ್ಬರಾಯರೇ ಮುಂದಾಳುತನ ವಹಿಸಬೇಕೆಂದು ನಿಧಾನವಾಗಿ ಮನವೊಲಿಸಿದರು.

ರೈತರನ್ನು ಆಗಿನ ಕಾಲದಲ್ಲಿ ಸಂಘಟಿಸುವುದು ಸುಲಭವಾಗಿರಲಿಲ್ಲ. ರೈತ ಸಂಘಟನೆಗೆ ಸೇರಿದರೆ ಧನಿಗಳು ಒಕ್ಕಲೆಬ್ಬಿಸುತ್ತಾರೆಂದು ಹೆದರುತ್ತಿದ್ದ ರೈತರಲ್ಲಿ ಆತ್ಮವಿಶ್ವಾಸ ತುಂಬಬೇಕಿತ್ತು. ಡಾ. ಸುಬ್ಬರಾವ್ ಈ ಸವಾಲನ್ನು ಸ್ವೀಕರಿಸಿದರು. ರೈತ ಸಂಘಟನೆ ಕಟ್ಟುವ ಮೂಲಕ ಕಮ್ಯುನಿಸ್ಟ್ ಚಳವಳಕ್ಕೆ ರಂಗಪ್ರವೇಶ ಮಾಡಿದರು. ಅವರಿಗೆ ರಾಮಪ್ಪ ಮಾಸ್ಟರರ ಸಮರ್ಥ ಬೆಂಬಲ. ಇವರಿಬ್ಬರ ನಾಯಕತ್ವದಲ್ಲಿ ಸಂಘಟನೆ ಬೆಳೆಯಿತು. ಹೆಚ್ಚು ಹೆಚ್ಚು ರೈತರು ರೈತಸಂಘ ಸೇರತೊಡಗಿದರು. ಇದರಿಂದ ಆತಂಕಗೊಂಡ ಭೂಮಾಲೀಕರು ಒಕ್ಕಲು ರೈತರನ್ನೂ ಕೂಲಿ ಕಾರ್ಮಿಕರನ್ನೂ ಪೀಡಿಸ ತೊಡಗಿದರು. ಗೂಂಡಾಗಳ ಸಹಾಯದಿಂದ ಬೆದರಿಸತೊಡಗಿದರು. ಗೇಣಿ ಬಾಕಿಯಿದೆ ಎಂಬ ನೆಪ ಹೇಳಿ, ರೈತರು ಬೆಳೆದ ಪೈರನ್ನು ಧನಿಗಳ ಗೂಂಡಾಗಳು ಕಟಾವು ಮಾಡತೊಡಗಿದರು. ಇದನ್ನು ವಿರೋದಿಸಿ ವರ್ಕಾಡಿ ಪಂಚಾಯತಿ ಮತ್ತು ಪುತ್ತಿಗೆ ಪಂಚಾಯಿತಿಗಳಲ್ಲಿ ಡಾ. ಸುಬ್ಬರಾವ್ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು. ಕೊನೆಗೂ ಧನಿಯ ಗೂಂಡಾಗಳು ಕಟಾವು ಮಾಡಿದ್ದ ಪೈರನ್ನು ಅವನ್ನು ಬೆಳೆಸಿದ್ದ ರೈತರಿಗೇ ಹಿಂತಿರುಗಿಸುವಲ್ಲಿ ಡಾ. ಸುಬ್ಬರಾವ್ ಯಶಸ್ವಿಯಾದರು. ಇದುವೇ ಅವರ ಮುಂದಿನ ಹೋರಾಟಗಳಿಗೆ ಭದ್ರ ಬುನಾದಿಯಾಯಿತು. ಈ ಹೋರಾಟಗಳಲ್ಲಿ ಡಾ. ಸುಬ್ಬರಾಯರಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತವರು ಹಲವರು. ನಾರಾಯಣ ತಾಳಿತ್ತಾಯ, ಅನಂತರಾಮ ತಾಳಿತ್ತಾಯ, ನಾರಾಯಣ ಮಡಿವಾಳ, ನಾರಾಯಣ ಹೆಗ್ಗಡೆ, ಧೂಮ ಮೂಲ್ಯ, ಐತಪ್ಪ ಪೂಜಾರಿ, ಮಾಂಕು ಸಾಲಿಯಾನ್ ಇತರರು. ಸಾವಿರಾರು ಮುಡಿ ಅಕ್ಕಿ ಗೇಣಿ ಪಡೆಯುತ್ತಿದ್ದ ಒಬ್ಬ ಧನಿ, ಒಕ್ಕಲು ತಂದೊಪ್ಪಿಸಿದ ಒಂದು ಅಕ್ಕಿ ಮುಡಿ ಸಡಿಲವಾಗಿತ್ತು ಎಂಬ ಕಾರಣಕ್ಕೆ ಆ ಒಕ್ಕಲಿಗೆ ಹೊಡೆದುರುಳಿಸಿದ್ದ ಕಾಲಘಟ್ಟದಲ್ಲಿ ಡಾ. ಸುಬ್ಬರಾಯರ ರೈತಪರ ಹೋರಾಟವು ಒಂದು ಚಾರಿತ್ರಿಕ ಘಟನೆ.

ಪ್ರತಿಭಟನೆಗಳ ಮುಂಚೂಣಿಯಲ್ಲಿ

ಮಂಜೇಶ್ವರದಲ್ಲಿ ಪ್ರತಿಭಟನೆಗಳ ಮುಂಚೂಣಿಯಲ್ಲಿ ಇರುತ್ತಿದ್ದವರು ಡಾ. ಸುಬ್ಬರಾವ್. ಮೈನವಿರೇಳಿಸುವ ಪ್ರತಿಭಟನೆಯನ್ನು ನೆನಪು ಮಾಡಿಕೊಳ್ಳುತ್ತಾರೆ ಸಿ.ಪಿ.ಐ. ಜಿಲ್ಲಾ ಸಮಿತಿ ಸದಸ್ಯರಾದ ಪಿ. ರಾಘವನ್. ೧೯೮೪-೮೫ರಲ್ಲಿ ಕೇಂದ್ರ ಸರಕಾರದ ಜನವಿರೋದಿ ನೀತಿಯನ್ನು ಪ್ರತಿಭಟಿಸಲು ‘ರೈಲುತಡೆ ಚಳವಳ’ಕ್ಕೆ ಕಮ್ಯುನಿಸ್ಟ್ ಪಾರ್ಟಿ ಕರೆ ನೀಡಿತ್ತು. ಮಂಜೇಶ್ವರದ ಕಮ್ಯುನಿಸ್ಟ್ ಕಾರ್ಯಕರ್ತರು ಕಣ್ವತೀರ್ಥದಲ್ಲಿ ರೈಲು ತಡೆ ಹಮ್ಮಿಕೊಂಡಿದ್ದರು. ರೈಲುಹಳಿಗಳಲ್ಲಿ ನೂರಾರು ಕಮ್ಯುನಿಸ್ಟ್ ಕಾರ್ಯಕರ್ತರು ನಿಂತಿದ್ದರು. ಆ ದಿನ ಬೆಳಗ್ಗೆಯೇ ರೈಲು ಅತೀ ವೇಗದಿಂದ ಕಾರ್ಯಕರ್ತರತ್ತ ನುಗ್ಗಿ ಬರತೊಡಗಿತು. ಇದನ್ನು ಕಂಡ ಒಬ್ಬಿಬ್ಬರು ಅಂಜಿ ನಿಂತಲ್ಲಿಂದ ಪಕ್ಕಕ್ಕೆ ಓಡಿಹೋದರು. ಪಿ. ರಾಘವನ್, ಬಿ.ವಿ. ರಾಜನ್, ಆದಂ ಕುಂಞಿ, ಪಟ್ಣ ರಾಘವ, ಹೊನ್ನೆ ನಾರಾಯಣ, ಪಿಂಟು ಮೂಲ್ಯ, ಟೈಲರ್ ನಾರಾಯಣ ಮುಂತಾದವರ ಮುಂದೆ ರೈಲಿಗೆದುರಾಗಿ ಡಾ. ಸುಬ್ಬರಾವ್ ನಿಂತಿದ್ದರು. ರೈಲು ಕ್ಷಣಕ್ಷಣಕ್ಕೂ ಹತ್ತಿರ ಬರುತ್ತಿದ್ದರೂ ಅವರು ಒಂದಿನಿತೂ ಅಂಜಲಿಲ್ಲ, ಅಳುಕಲಿಲ್ಲ. ಧೈರ್ಯದ ಹೆಬ್ಬಂಡೆಯಾಗಿ ಡಾ. ಸುಬ್ಬರಾವ್ ನಿಂತಿದ್ದರೆ, ಅಂತಿಮವಾಗಿ ರೈಲ್ವೇ ಕೆಲಸಗಾರನೊಬ್ಬ ಸಿಗ್ನಲ್ ನೀಡಿದ್ದರಿಂದಾಗಿ ರೈಲು ನಿಂತಿತು – ಕೆಲವೇ ಮೀಟರ್ ಅಂತರದಲ್ಲಿ. ಅಲ್ಲೇ ಕಾದು ನಿಂತಿದ್ದ ಮೀಸಲು ಪೊಲೀಸರು ಇವರನ್ನೆಲ್ಲ ದಸ್ತಗಿರಿ ಮಾಡಿದರು. ಆ ದಿನ ಹೊಸಂಗಡಿಯಲ್ಲೂ ಪೈವಳಿಕೆಯ ಗೋಡಣ್ಣ ಪೂಜಾರಿ ಮತ್ತು ಚೂಡಪ್ಪ ಪೂಜಾರಿಯವರ ನೇತೃತ್ವದಲ್ಲಿ ರೈಲುತಡೆ ನಡೆಯಿತು. ಕಣ್ವತೀರ್ಥದಲ್ಲಿ ಡಾ. ಸುಬ್ಬರಾಯರು ತೋರಿದ ಧೈರ್ಯವನ್ನು ಕಣ್ಣಾರೆ ಕಂಡ ಕಮ್ಯುನಿಸ್ಟ್ ಕಾರ್ಯಕರ್ತರೆಲ್ಲರೂ ಪುಳಕಿತರಾಗಿದ್ದರು ಎನ್ನುತ್ತಾರೆ ಪಿ. ರಾಘವನ್.

(ಫೋಟೋ: ಅಡ್ಡೂರು ಕೃಷ್ಣ ರಾವ್ ಬರೆದ “ರಾಜನೀತಿಯ ಅಪರಂಜಿ ಡಾ. ಎ. ಸುಬ್ಬರಾವ್” ಪುಸ್ತಕದ ಮುಖಪುಟ)

ಆಕರ ಪುಸ್ತಕ: ಅಡ್ಡೂರು ಶಿವಶಂಕರರಾಯರ ಎಂಬತ್ತರ ಕೊಯ್ಲಿನ ಕಾಳುಗಳು

ಲೇಖಕರು: ಅಡ್ಡೂರು ಕೃಷ್ಣರಾವ್

(ಭಾಗ 3ರಲ್ಲಿ ಮುಂದುವರಿಯುತ್ತದೆ.)