'ಆಟ ಊಟ ಪಾಠ

ನಲಿಯುತ ಕಲಿ ನೀ ಮಗುವೇ

ಅ ಆ ಇ ಈ ಓದುತಲಿ

ಬರೆಯುತ ಕಲಿ ನೀ ಮಗುವೇ’

ಶಿಶುಗೀತೆ, ಅಭಿನಯ ಗೀತೆ ಪುಟಾಣಿಗಳಿಗೆ ನೆನಪಿನಲ್ಲಿ ಉಳಿಯುವ ಸಾಧ್ಯತೆ ಹೆಚ್ಚು. ಹಾಡಿ ಹಾಡಿ ಬಾಯಿ ಪಾಠವೇ ಆಗಬಹುದು. ಅರ್ಥ ಗೊತ್ತಿಲ್ಲದಿದ್ದರೂ ಕುಣಿಯುತ್ತಾ, ನಗುತ್ತಾ ಹರ್ಷಿಸುವರು. ದೊಡ್ಡವರ ಆಂಘಿಕ ಅಭಿನಯಗಳು ಚಿಕ್ಕ ಮಕ್ಕಳನ್ನು ಕಲ್ಪನಾಲೋಕಕ್ಕೆ ಕೊಂಡೊಯ್ದು, ಮೆದುಳಿನ ಬೆಳವಣಿಗೆಗೆ ಸಹಕರಿಸುವುದು. ಆಲೋಚನೆಗೆ ಹಚ್ಚುವುದು. ಮಕ್ಕಳ ಮಾನಸಿಕ ದೃಢತೆ ಗಟ್ಟಿಯಾಗಲು ಸಹಕಾರಿ. ಮನೆಯಲ್ಲಿ ತಾಯಿ ಜೋಗುಳ ಹಾಡುವಾಗ ಅದನ್ನು ಕೇಳುತ್ತಾ ನಿದ್ದೆಗೆ ಜಾರುವರು.

ಆನೆ ಆನೆ  ಆನೆ ಆನೆ

ಆನೆ ಆಡಿ ಬಪ್ಪಾಗ

ಕಾಳು ನಾಯಿ ಕಚ್ಚಿತ್ತು

ಬೊಳ್ಳು ನಾಯಿ ಕೊರಪ್ಪಿತ್ತು

ಮದ್ದು ತಾರೋ ಮಾವಯ್ಯ

ಮದ್ದಿನ ಕುಪ್ಪಿ ಒಡದತ್ತು

ಆನೆ ಆನೆ ಆನೆ ಆನೆ

(ಹವ್ಯಕ ಭಾಷೆ)

ಸಣ್ಣ ಮಗುವನ್ನು ಕೊಂಡಾಟ ಮಾಡಿಕೊಂಡು ನಮ್ಮ ಹಿರಿಯರು ಈ ಮೇಲಿನ ಹಾಡನ್ನು ಹೇಳುತ್ತಿದ್ದರು.

ಸೌದೆ ತಾರೋ ಮಲ್ಲ

ಕತ್ತಿ ತಾಗಿತಲ್ಲ

*

ಒಂದು ದಿನ ರಂಗನು ಚೆಂಡು ಆಡುತ್ತಿದ್ದನು

ಬಾವಿಯಿಂದ ಸೀತೆಯು ನೀರು ತರುತ್ತಿದ್ದಳು

*

ಕಾಗೆ ಕಾಗೆ ಕಾಗೆ

ಕಪ್ಪು ಬಣ್ಣದ ಕಾಗೆ

ಸ್ವಚ್ಛ ಮಾಡುವ ಕಾಗೆ

ಕಾ ಕಾ ಕೂಗುವ ಕಾಗೆ

 

ದನ ದನ ದನ

ಹಾಲು ಕೊಡುವ ದನ

ಹುಲ್ಲು ತಿನ್ನುವ ದನ

 

ಮಳೆ ಬಂತು ಮಳೆ

ಜಗದ ಕೊಳೆ ತೊಳೆ

ಪಚ್ಚೆ ಪೈರು ಬೆಳೆ

ಹೀಗೆ ನೂರಾರು ಶಿಶುಗೀತೆಗಳನ್ನು ಕೇಳುತ್ತಾ, ಹಾಡುತ್ತಾ ಬೆಳೆದವರು ನಾವು. ಎಷ್ಟೊಂದು ಸರಳವಾಗಿದೆ, ಸುಲಭವಾಗಿದೆ. ಪಂಚತಂತ್ರದ ಕಥೆಗಳು, ಚಂದಮಾಮ, ಬಾಲಮಿತ್ರ, ಬಾಲಭಾರತಿ ಪುಸ್ತಕಗಳೆಲ್ಲ ಹಿಂದೆ ಮಕ್ಕಳ ಮನಸ್ಸಿಗೆ ಹಿತವಾದದ್ದಾಗಿತ್ತು.

-ರತ್ನಾ ಕೆ ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ