ವೃತ್ತಿಯಲ್ಲಿ ಆಯುರ್ವೇದ ವೈದ್ಯರಾಗಿರುವ ಡಾ. ಶಶಿಕಿರಣ್ ಶೆಟ್ಟಿಯವರದ್ದು ಸಮಾಜ ಸೇವಾ ಮುಖಿ ವ್ಯಕ್ತಿತ್ವ. ಅವರು ನಿರಂತರವಾಗಿ ಬರೆಯುವ ‘ಬದುಕ ಬದಲಿಸುವ ಕತೆಗಳು’ ನಿಜಕ್ಕೂ ಬಹಳಷ್ಟು ಜನರ ಬದುಕು ಬದಲಿಸಿದೆ. ಇದರಲ್ಲಿ ಎರಡು ಮಾತಿಲ್ಲ. ಅಸಹಾಯಕರಿಗಾಗಿಯೇ ‘ಸ್ವರ್ಗ’ ಎಂಬ ಆಶ್ರಮವನ್ನು ಮುನ್ನಡೆಸುತ್ತಿದ್ದು, ಹಲವಾರು ಮಂದಿಗಳ ನೆಮ್ಮದಿಯ ಜೀವನಕ್ಕೆ ನಾಂದಿ ಹಾಡಿದ್ದಾರೆ.
ಇವರು ಬರೆದ ‘ಬದುಕು ಬದಲಿಸುವ ಕತೆಗಳು..’ ಈ ಸರಣಿಯಲ್ಲಿ ಈಗಾಗಲೇ ಮೂರು ಪುಸ್ತಕಗಳು ಪ್ರಕಟವಾಗಿದ್ದು, ಈಗ ನಾಲ್ಕನೇ ಭಾಗ ಹೊರಬಂದಿದೆ. ಈ ಕಥಾ ಸಂಕಲನದ ಬಹಳಷ್ಟು ಕಥೆಗಳು ಶಶಿಕಿರಣ್ ಶೆಟ್ಟಿಯವರ ಅನುಭವದ ನೆಲೆಯಲ್ಲೇ ಮೂಡಿಬಂದವುಗಳು. ಈ ಕಥಾ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಬುಕರ್ ಪ್ರಶಸ್ತಿ ವಿಜೇತೆ ಅನುವಾದಕಿ, ಲೇಖಕಿ ಶ್ರೀಮತಿ ದೀಪಾ ಭಾಸ್ಥಿ. ಅವರು ತಮ್ಮ ಮುನ್ನುಡಿಯಲ್ಲಿ ಬರೆದ ಕೆಲವು ಸಾಲುಗಳು…
“ಬದುಕ ಬದಲಿಸುವ ಕತೆಗಳು... ಡಾ|| ಶಶಿಕಿರಣ್ ಶೆಟ್ಟಿಯವರ ಕಥಾ ಸಂಕಲನ ಕಥಾಸಂಕಲನಕ್ಕೆ ಮುನ್ನುಡಿ ಬರೆದು ಕೊಡಿ ಎಂದು ನನಗೆ ಕಳಿಸಿಕೊಟ್ಟಾಗ ನಾನು ಒಲ್ಲದ ಮನಸ್ಸಿನಿಂದ ಕಥೆಯನ್ನು ಓದಲು ಪ್ರಾರಂಭಿಸಿದಾಗ ನನ್ನನ್ನು ಒಂದು ಭಾವನಲೋಕಕ್ಕೆ ಕರೆದುಕೊಂಡು ಹೋಯಿತು. ಇದರಲ್ಲಿರುವ ೭೫ ಕಥೆಗಳು ನಮ್ಮ ಬದುಕಿನಲ್ಲಿ ನಮ್ಮ ಸುತ್ತಮುತ್ತಲಿನಲ್ಲಿರುವ ಜನರೇ ನಮ್ಮ ಕಣ್ಣ ಮುಂದೆ ತೇಲಿಹೋಗಿದ್ದು ನಿಜ.
ಅನುಭವ ಮತ್ತು ಅನುಭಾವಗಳ ಮಹಾಮಿಲನ ಮಂಥನದ ಋಜುಮಾರ್ಗದಿಂದೊಗೆದು ಬರುವ ನವನೀತವೇ ನಿಜವಾದ ಕಾವ್ಯ ಅಥವಾ ಕವಿತೆಯೆನ್ನಬಹುದು. ಅದು ಸಾಹಿತ್ಯ ಸಾಗರದ ಪ್ರಧಾನ ಪ್ರೋತ. ಜೀವನಾನುಭವವೇ ಅದರ ಸಾರಸರ್ವಸ್ವ, ಜೀವನವೆಂಬ ಚಿಪ್ಪಿನೊಳಗೆ ಅನುಭವವೆಂಬ ಸಲಿಲಬಿಂದುಗಳು ಸೇಚನಗೊಂಡಾಗ ಅಲ್ಲಿ ನಿಜವಾದ ಕವನಗಳೆಂಬ ಆಣಿಮುತ್ತುಗಳು ಜನಿಸುತ್ತವೆ. ಅಂತಹ ಕವಿತೆಗಳು ಜಗಿದಷ್ಟೂ ರಸ ಒಸರುವ ರಸದಾಳೀ ಕಬ್ಬಿನ ಜಲ್ಲೆಗಳು! ಅವು ಸ್ವಾಭಾವಿಕವಾಗಿಯೇ ಜನಿಸಿ ಬರಬೇಕು; ಅಲ್ಲಿ ಕೃತ್ರಿಮತೆಗೆ ಅವಕಾಶವಿಲ್ಲ, ಕಾವ್ಯಕನ್ನಿಕೆ ಒಲಿದು ಬರಬೇಕು. ಎನ್ನುವಂತೆ ಇಲ್ಲಿನ ಕಥೆಗಳು ನಮ್ಮ ಮನಸ್ಸನನ್ನು ಕಾಡದೆ ಇರಲಿಲ್ಲ. ಈ ಎಲ್ಲಾ ಕಥೆಗಳನ್ನು ಓದಿ ನಾನು ಭಾವುಕಳಾದೆ.. ನಿಜಕ್ಕೂ ಒಂದೊಳ್ಳೆಯ ಅವಕಾಶವನ್ನು ಲೇಖಕ ಡಾ.ಶಶಿಕಿರಣ್ ಶೆಟ್ಟಿಯವರು ನನಗೆ ವಹಿಸಿದ್ದಾರೆ.
ಈ ಕತೆಗಳನ್ನು ಓದಿ ನಮ್ಮ ಸಮಾಜ ಬದಲಾದರೆ ಈ ಕಥಾಸಂಕಲನಕ್ಕೆ ಬದುಕಬದಲಿಸುವ ಕತೆಗಳು ಎನ್ನುವ ಶೀರ್ಷಿಕೆ ಇಟ್ಟಿದಕ್ಕೂ ಸಾರ್ಥಕ ಎಂದು ಭಾವಿಸುತ್ತೇನೆ. ಡಾ. ಶಶಿಕಿರಣ್ ಶೆಟ್ಟಿ ಅವರು ‘ಸ್ವರ್ಗಾಶ್ರಮ’ ನಡೆಸುತ್ತಿದ್ದಾರೆ ಎನ್ನುವ ಮಾಹಿತಿಯನ್ನು ತಿಳಿಯಿತು. ಸುಮಾರು ದಶಕಗಳಿಗೂ ಮೀರಿದ ಪಕ್ವತೆಯಿಂದ. ನಡೆಸುತ್ತಿದ್ದಾರೆ. ಅವರಿಗೆ ಆ ಹಿರಿಯರ ಆಶೀರ್ವಾದ ಇರುತ್ತದೆ. ಮುಂದುವರಿಯಲಿ…”
ಲೇಖಕರಾದ ಡಾ. ಶಶಿಕಿರಣ್ ಶೆಟ್ಟಿಯವರು ‘ಬದುಕ ಬದಲಿಸುವ.. ಮುನ್ನ ನನ್ನೆರಡು ಮಾತುಗಳು’ ಬರಹದಲ್ಲಿ “ನಾನು ಬರೆದ ಸಣ್ಣ ಕತೆಗಳ ಪುಸ್ತಕ ಬದುಕ ಬದಲಿಸುವ ಕತೆಗಳು ಇದರ ಮೊದಲ 3 ಭಾಗ ಮುಗಿಸಿದಾಗ ಹಾಗೆ ಸಾಮಾಜಿಕ ಜಾಲ ತಾಣಗಳಲ್ಲಿ ನನ್ನ ಸಣ್ಣಕತೆಗಳನ್ನು ಕದ್ದು ನನ್ನ ಹೆಸರು ತೆಗೆದು ಹಾಕಿ ಪೋಸ್ಟ್ ಮಾಡುತ್ತಿರುವ ವಿಕೃತ ಮನಸ್ಥಿತಿಯ ಜನರಿಂದ ಬೇಸರಗೊಂಡು ಒಂದಷ್ಟು ದಿನ ಕತೆ ಬರೆಯುವುದನ್ನೇ ನಿಲ್ಲಿಸಿ ಬಿಟ್ಟಿದ್ದೆ... ಆದರೆ ಅಂದು ನಡೆದ ಆ ಘಟನೆ ಮಾತ್ರ ಮತ್ತೆ ನನ್ನನ್ನು ಕತೆ ಬರೆಯುವಂತೆ ಪ್ರೇರೇಪಿಸಿದವು ಜೊತೆಗೆ ಬದುಕು ಬದಲಿಸುವ ಕತೆಗಳ 4ನೆಯ ಸರಣಿ ಬಿಡುಗಡೆಗೊಳಿಸಲು ಸಹಕರಿಸಿದವು.” ಎಂದು ಆ ನೈಜ ಘಟನೆಯನ್ನು ಹೇಳಿದ್ದಾರೆ.
ಡಾ. ಶಶಿಕಿರಣ್ ಶೆಟ್ಟಿಯವರ ಮನಸ್ಸು ಬದಲಿಸಿದ ಕಥೆಯನ್ನು ಓದಿದಾಗ ಓದುಗರ ಮನಸ್ಸೂ ಬದಲಾಗುತ್ತದೆ. ಅವರು “ಅಂದು ಮತ್ತೆ ನಿರ್ಧರಿಸಿ ಬಿಟ್ಟೆ, 2 ತಿಂಗಳು ಮೂಲೆಗೆ ಹಾಕಿದ್ದ ಪೆನ್ನು ಪುಸ್ತಕ ಮತ್ತೆ ಹಿಡಿದೆ, ಕತೆ ಬರೆಯುವ ಹವ್ಯಾಸ ನಿಲ್ಲಿಸಲಾರೆ. ಯಾರೇನೇ ಮಾಡಿದರೂ "ಬದುಕ ಬದಲಿಸುವ ಕತೆಗಳು" ವರ್ಷಕ್ಕೊಂದು ಹೊಸ ಕಥಾ ಸಂಕಲನವನ್ನು ಹೀಗೆ ಬದುಕು ಬದಲಾಯಿಸಿ ಕೊಂಡ ವ್ಯಕ್ತಿಗಳ ಕೈ ಇಂದಲೇ ಬಿಡಿಗಡೆ ಮಾಡಿಯೇ ಮಾಡುತ್ತೇನೆ ಎನ್ನುವ ದೃಢ ಸಂಕಲ್ಪ ತೊಟ್ಟೆ. ಪುಸ್ತಕವೊಂದು ವ್ಯಕ್ತಿಯ ಬದುಕು ಬದಲಾಯಿಸಬಹುದು ಎಂದಾದರೆ, ಲೇಖಕನಿಗೆ ಅದರಿಂದ ದೊಡ್ಡ ಪುರಸ್ಕಾರ, ಸನ್ಮಾನ ಬೇರೆ ಬೇಕಿಲ್ಲ ಅಲ್ಲವೇ?” ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಪುಸ್ತಕದ ಬೆನ್ನುಡಿಯಲ್ಲಿ ‘ಬಂಗಾರದ ತಟ್ಟೆ ಹಾಗೂ ನಾಯಿ’ ಎಂಬ ಪುಟ್ಟ ಕಥೆಯನ್ನು ಒಳಗಿನ ಕಥಾ ಸಂಕಲನಕ್ಕೆ ಸ್ಯಾಂಪಲ್ ರೀತಿಯಲ್ಲಿ ಕೊಟ್ಟಿದ್ದಾರೆ. ಚಲನ ಚಿತ್ರಗಳಿಗೆ ‘ಟ್ರೈಲರ್’ ಇರುತ್ತದೆ ಅಲ್ವಾ ಹಾಗೆ? ಅದನ್ನು ನೋಡಿದ, ಇಲ್ಲಿ ಅದನ್ನು ಓದಿದ ಯಾರಿಗಾದರೂ ಇಡೀ ಪುಸ್ತಕವನ್ನು ಓದ ಬೇಕು ಎನ್ನುವ ಆಸೆ ಮೂಡುವುದು ಸಹಜ. ಕಥೆ ಹೀಗಿದೆ…
“ಬಡ ಕಾರ್ಮಿಕರಿಗೆ ಸರಿಯಾಗಿ ವೇತನವೂ ಕೊಡದೆ ದುಡಿಸಿ ಕೊಂಡು ಕೋಟಿ ಗಟ್ಟಲೆ ಲಾಭಾಂಶವನ್ನ ಅದರ ನಾಲ್ವರು ಪಾಲುದಾರರು ಒಂದು ವಿಶೇಷ ಪಾರ್ಟಿ ಆಯೋಜಿಸಿ ಎಂಜಾಯ್ ಮಾಡುತ್ತಿದ್ದರು. ಅಲ್ಲಿ ಊಟಕ್ಕೆ ಬಂಗಾರದ ಪ್ಲೇಟ್ ಅಲ್ಲಿ ಹತ್ತಾರು ವಿವಿಧ ಭಕ್ಷ ಭೋಜನಗಳಿದ್ದವು. ಅವರ ಮನೆಯ ನಾಯಿಗೂ ಬಂಗಾರದ ಪ್ಲೇಟ್ ಅಲ್ಲೇ ಊಟ ಕೊಡಲಾಯಿತು.
ಮೋಜು ಮಸ್ತಿಯೊಂದಿಗೆ ಊಟ ಆರಂಭವಾಯಿತು. ನಾಯಿ ಅಷ್ಟೂ ಊಟವನ್ನು ಬಂಗಾರದ ಪ್ಲೇಟ್ ನಿಂದ ನೆಲಕ್ಕೆ ಬೀಳಿಸಿ ಕೊಂಡು ಬಂಗಾರದ ಪ್ಲೇಟ್ ಅನ್ನು ಕಾಲಲ್ಲಿ ಓದ್ದು ನೆಲದಲ್ಲಿ ಬಿದ್ದಿದ್ದನ್ನು ನಕ್ಕುತಿತ್ತು. ಬಳಿಯಲ್ಲಿ ಮೃಸ್ವಾನ್ನವಿದ್ದರೂ ಆ ನಾಯಿಗೆ ಬಂಗಾರದ ಪ್ಲೇಟ್ನನ ಮೌಲ್ಯ ತಿಳಿದಿರಲಿಲ್ಲ.. ಅಲ್ಲಿ ಟೇಬಲ್ ಮೇಲಿದ್ದ ನಾಯಿಗಳಿಗೂ ಬಡವರ ಬೆವರಿನ ಬೆಲೆ ತಿಳಿದಿರಲಿಲ್ಲ.”
೧೬೦ ಪುಟಗಳ ಈ ಕಥಾ ಸಂಕಲನ ಓದಿದವರು ಖಂಡಿತಾ ಇದರ ಮುಂದಿನ ಭಾಗಕ್ಕೆ ಕಾಯುತ್ತಾರೆ ಎನ್ನುವುದು ಸತ್ಯವಾದ ಮಾತು.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!