ಕೃಷ್ಣಾ ಫಾರ್ಮಿನಲ್ಲಿ ನೀರಿನ ಸಮಸ್ಯೆ
1995ರಲ್ಲಿ ನನ್ನ ತೆಂಗಿನ ತೋಟದಲ್ಲಿ ನೀರಿನ ಸಮಸ್ಯೆ ಆರಂಭವಾಯಿತು. ಆ ಹೊತ್ತಿಗೆ ಸುತ್ತಮುತ್ತಲು ಅನೇಕ ಹೊಸ ಮನೆಗಳೂ, ಹೊಸ ಬಾವಿಗಳೂ ನಿರ್ಮಾಣವಾಗಿದ್ದವು. ಅದರ ಪರಿಣಾಮವಾಗಿ ನಮ್ಮ ಬಾವಿಯಲ್ಲಿ ಎಪ್ರಿಲ್ ತಿಂಗಳಿನ ಆರಂಭದಲ್ಲೇ ನೀರು ತಳಕಂಡಿತು. ಅದಕ್ಕಾಗಿ ಹತ್ತು ಸಾವಿರ ರೂಪಾಯಿ ವೆಚ್ಚ ಮಾಡಿ ಬಾವಿಯನ್ನು ಇನ್ನೂ ಐದಡಿ ಆಳ ಮಾಡಿಸಿದೆ. ಮುಂದಿನ ವರುಷದ ಬೇಸಿಗೆಯಲ್ಲಿ ಪುನ: ನೀರಿನ ಸಮಸ್ಯೆ ಎದುರಾದಾಗ ಎಂಟುಸಾವಿರ ರೂಪಾಯಿ ವೆಚ್ಚದಲ್ಲಿ ತೆಂಗಿನ ಮರಗಳಿಗೆ ನೀರುಣಿಸಲು ಪಿವಿಸಿ ಪೈಪ್ಗಳ ಜಾಲ ಮಾಡಿಸಿದೆ.
ಅನಂತರದ ಬೇಸಗೆಯಲ್ಲೂ ತೆಂಗಿನ ತೋಟದಲ್ಲಿ ನೀರಿನ ಸಮಸ್ಯೆ ಗಂಭೀರವಾಯಿತು. ಬ್ಯಾಂಕಿನಿಂದ 22,000 ರೂಪಾಯಿ ಸಾಲ ಪಡೆದು ಹನಿನೀರಾವರಿ ಜಾಲ ಅಳವಡಿಸಿದೆ. ಅನಂತರ ಹೊಸ ಸಮಸ್ಯೆಗಳು ಎದುರಾದುವು. ಕೆಂಪಿರುವೆಗಳು ಡ್ರಿಪ್ ಜಾಲದ ಮೈಕ್ರೋಟ್ಯೂಬ್ ಗಳನ್ನು ತೂತುಮಾಡತೊಡಗಿದವು. ಲಾಟರಲ್ (ಬೆರಳು ಗಾತ್ರದ) ಟ್ಯೂಬ್ಗಳನ್ನು ಇಲಿಗಳು ಕೊರೆಯತೊಡಗಿದವು.
ಒಂದಿನ ನಾನು ಮಂಗಳೂರಿಗೆ ಹೋಗಿದ್ದೆ. ಮರಳುವಾಗ ಅನಾಹುತವಾಗಿತ್ತು. ಡ್ರಿಪ್ ಜಾಲದಲ್ಲಿ ಪಂಪ್ ಮೂಲಕ ನೀರು ಹಾಯಿಸುತ್ತಿದ್ದ ಆಳು, ಬಾವಿಯಲ್ಲಿ ನೀರು ತಳಮಟ್ಟ ತಲಪಿದ್ದನ್ನು ಗಮನಿಸಲೇ ಇಲ್ಲ. ಬಾವಿಯ ತಳದಿಂದ ನೀರಿನೊಂದಿಗೆ ಕೆಸರನ್ನೂ ಪಂಪು ಸೆಳೆದುಕೊಂಡಿತು. ಅದು ಮೈಕ್ರೋಟ್ಯೂಬ್ಗಳಲ್ಲಿ ತುಂಬಿ, ಉರಿಬಿಸಿಲಿಗೆ ಒಣಗಿದಾಗ, ಅವುಗಳೊಳಗೆ ಕಾಂಕ್ರಿಟ್ ಜಡಿದಂತಾಯಿತು. ಇನ್ನೆಲ್ಲಿಯ ಹನಿ ನೀರಾವರಿ?
ಆ ವರುಷ ಹಾಯಿಸಿದ ನೀರು ಕಡಿಮೆಯಾಗಿ ತೆಂಗಿನ ಮರಗಳು ಒಣಗತೊಡಗಿದವು. ಮುಂದಿನ ವರ್ಷ ಪುನ: ನೀರಿಗೆ ತತ್ವಾರ. ಡ್ರಿಪ್ ವ್ಯವಸ್ಥೆ ಸರಿಪಡಿಸಲು ಡ್ರಿಪ್ ಅಳವಡಿಸುವವರನ್ನು ಪುನ: ನನ್ನ ಮಗ ಕರೆತಂದ. ಅವರು ಅರೆವಾಸಿ ಮೈಕ್ರೋಟ್ಯೂಬ್ ಬದಲಾಯಿಸಿದರು. ಹಳೆಯ ಡ್ರಿಪ್ ವ್ಯವಸ್ಥೆಯ ಮುಖ್ಯ ಪೈಪ್ಗಳ ಜಾಲಕ್ಕೆ ಇನ್ನಷ್ಟು ಪಿವಿಸಿ ಪೈಪ್ಗಳನ್ನು ಜೋಡಿಸಿದರು.“ಹಳೆಯ 2500 ರೂಪಾಯಿಯ ಫಿಲ್ಟರ್ ಸರಿಯಾಗಿಲ್ಲ. ಜರ್ಮನಿಯ ಈ ಹೊಸ ಫಿಲ್ಟರ್ ಚೆನ್ನಾಗಿದೆ. ಬೆಲೆ 5000 ರೂಪಾಯಿ ಮಾತ್ರ” ಎಂದೆಲ್ಲಾ ಹೇಳಿ ಹೊಸತನ್ನು ಜೋಡಿಸಿದರು.
ಇವೆಲ್ಲಾ ಬದಲಾವಣೆಗಳಿಂದ ಹಣ ಕೈಬಿಟ್ಟಿತೇ ವಿನಾ ಡ್ರಿಪ್ ಜಾಲದಲ್ಲಿ ನೀರು ಹರಿಯಲಿಲ್ಲ. ಯಾಕೆಂದರೆ ಎಪ್ರಿಲ್ ಮೊದಲ ವಾರದಲ್ಲೇ ಬಾವಿ ಒಣಗಿ ತಳ ಕಾಣುತ್ತಿತ್ತು. ಕೊನೆಗೆ ಬಾವಿಯೊಳಗೆ ಕಾಂಕ್ರಿಟ್ ರಿಂಗ್ಗಳನ್ನು ಇಳಿಸಲು ನಿರ್ಧರಿಸಿದೆ. ಆ ವರುಷ ತೋಟದಲ್ಲೇ ರಿಂಗ್ಗಳನ್ನು ಮಾಡಿಸಿದರೂ ಅವನ್ನು ಬಾವಿಗೆ ಇಳಿಸಲಾಗಲಿಲ್ಲ. ಯಾಕೆಂದರೆ ಜೂನ್ ಮೊದಲ ವಾರದ ಬದಲಾಗಿ ಮೇ ತಿಂಗಳ ಮೂರನೇ ವಾರದಲ್ಲೇ ಮಳೆ ಶುರುವಾಯಿತು. ಅಂತೂ 2000ನೇ ವರುಷದ ಬೇಸಗೆಯ ಕೊನೆಯಲ್ಲಿ ಹತ್ತು ರಿಂಗ್ಗಳನ್ನು ಬಾವಿಯೊಳಗೆ ಇಳಿಸಿದ್ದಾಯಿತು. ಇದಕ್ಕಾದ ವೆಚ್ಚ 15,000 ರೂಪಾಯಿಗಳು. ಈಗ ರಿಂಗ್ಗಳೊಳಗೆ ನೀರು ತುಂಬಿಕೊಂಡಿದೆ. ಆದರೆ ತೋಟದ ಎಲ್ಲ ತೆಂಗಿನ ಮರಗಳಿಗೆ ನೀರುಣಿಸಲು ಆ ನೀರು ಸಾಕಾಗುತ್ತಿಲ್ಲ.
ಆಕರ ಪುಸ್ತಕ: ಅಡ್ಡೂರು ಶಿವಶಂಕರರಾಯರ ಎಂಬತ್ತರ ಕೊಯ್ಲಿನ ಕಾಳುಗಳು
ಟಿಪ್ಪಣಿ: ಶಿವಶಂಕರ ರಾಯರ ನಿಧನಾ ನಂತರ “ಕೃಷ್ಣಾ ಫಾರ್ಮ್”ನ ಬಾವಿಯ ನೀರಿನ ಪರಿಸ್ಥಿತಿ ಮತ್ತು ನಿರ್ವಹಣಾ ವೆಚ್ಚ:
ತಂದೆ ಶಿವಶಂಕರ ರಾಯರು 19 ಫೆಬ್ರವರಿ 2013ರಂದು ತೀರಿಕೊಂಡ ನಂತರ ಅಡ್ಡೂರಿನ ಕೃಷ್ಣಾ ಫಾರ್ಮಿನಲ್ಲಿ ವರುಷದಿಂದ ವರುಷಕ್ಕೆ ನೀರಿನ ಸಮಸ್ಯೆ ಬಿಗಡಾಯಿಸುತ್ತಲೇ ಇದೆ.
ತಂದೆಯವರು ಬಾವಿಯಿಂದ ನೀರೆತ್ತಲು ಹಾಕಿಸಿದ್ದ ಕಿರ್ಲೋಸ್ಕರ್ ಕಂಪೆನಿಯ “ಬೆಲ್ಟ್” ಪಂಪ್-ಸೆಟ್ ಆಗಲೇ ಹಳೆಯದಾಗಿತ್ತು. ಚಾಲೂ ಮಾಡಿದರೆ ಆಗಾಗ ಪಂಪ್ ನಿಲ್ಲುತ್ತಿತ್ತು. ಹಾಗಾಗಿ 3 ಎಚ್.ಪಿ.ಯ ಹೊಸ ಸಬ್-ಮರ್ಸಿಬಲ್ ಪಂಪ್-ಸೆಟ್ ಖರೀದಿಸಿದೆ. ಅದನ್ನು ಬಾವಿಯ ಕಾಂಕ್ರೀಟ್ ರಿಂಗುಗಳ ಒಳಗೆ ಇಳಿಸಿ, ಮಾರ್ಚ್ 2014ರಲ್ಲಿ ಚಾಲೂ ಮಾಡಿಸಿದೆ. ಇದಕ್ಕೆ ಒಟ್ಟು ಸುಮಾರು 40,000 ರೂಪಾಯಿ ವೆಚ್ಚವಾಯಿತು.
ಆದರೆ ಬಾವಿಯ ನೀರು ಯಥಾಪ್ರಕಾರ ಏಪ್ರಿಲ್ ತಿಂಗಳ ಆರಂಭದಲ್ಲಿ ತಳ ಕಾಣುತ್ತಿತ್ತು. ಏಪ್ರಿಲ್ - ಮೇ ಎರಡು ತಿಂಗಳು ತೋಟದ ತೆಂಗಿನ ಮರಗಳಿಗೆ ನೀರು ಹಾಯಿಸದಿದ್ದರೆ, ಅವನ್ನು ಉಳಿಸಿಕೊಳ್ಳುವುದು ಕಷ್ಟ. ಆದ್ದರಿಂದ, ಮುಂದಿನ ಐದು ವರುಷ ಒಬ್ಬನಿಂದ ತೋಟಕ್ಕಾಗಿ ನೀರು ಖರೀದಿಸುತ್ತಿದ್ದೆ. ವಾರಕ್ಕೊಮ್ಮೆ 5 ಗಂಟೆ ಅವಧಿ (4 ಇಂಚಿನ) ಪಿವಿಸಿ ಪೈಸಿನಲ್ಲಿ ನಮ್ಮ ತೋಟಕ್ಕೆ ನೀರು ಹಾಯಿಸುತ್ತಿದ್ದ. ಆದರೆ, ಐದನೇ ವರುಷ ನೀರಿಗೆ ಅವನ ದರ ವಿಪರೀತ ಜಾಸ್ತಿಯಾಯಿತು. ನಾನು “ಇಮ್ಮಡಿ ದರ” ಪಾವತಿಸಬೇಕೆಂದ. ಅವನಿಗೆ ಫಲ್ಗುಣಿ ನದಿಯ ನೀರು ಪುಕ್ಕಟೆ! ಅವನ ತಲಾ 10 ಎಚ್.ಪಿ.ಯ ಎರಡು ಪಂಪ್-ಸೆಟ್ ಚಾಲೂ ಮಾಡಲು ವಿದ್ಯುತ್ ಕೂಡ ಪುಕ್ಕಟೆ! ಆದರೂ, ತೋಟ ಉಳಿಸಲಿಕ್ಕಾಗಿ ನೀರು ಖರೀದಿಸುವ ರೈತರಿಗೆ ನೀರಿನ ದರ ಎರಡು ಪಟ್ಟು ಏರಿಸಿದ.
ಆದದ್ದಾಗಲಿ ಎಂದು ಅವನಿಂದ ತೋಟಕ್ಕಾಗಿ ನೀರು ಖರೀದಿಸುವುದನ್ನು ನಿಲ್ಲಿಸಿದೆ. ಅನಂತರ, ಮಾರ್ಚ್ 2023ರಲ್ಲಿ 1,000 ಲೀಟರಿನ ಓವರ್-ಹೆಡ್ ಟ್ಯಾಂಕಿನಿಂದ ತೆಂಗಿನ ಮರಗಳಿಗೆ ನೀರು ಹಾಯಿಸಲಿಕ್ಕಾಗಿ (ಒಂದು ಇಂಚು ವ್ಯಾಸದ) ಹಸುರು-ಪೈಪುಗಳ ಜಾಲದ ವ್ಯವಸ್ಥೆ ಮಾಡಿದೆ. ಅದಕ್ಕೆ ತಗಲಿದ ವೆಚ್ಚ 30,000 ರೂಪಾಯಿ.
ಮಂಗಳೂರಿನಿಂದ 20 ಕಿಮೀ ದೂರದ ಅಡ್ಡೂರಿನ ತೋಟಕ್ಕೆ ನಾನು ಪತ್ನಿ ರಾಜಲಕ್ಷ್ಮಿಯ ಜೊತೆ ವಾರಕ್ಕೊಮ್ಮೆಯಾದರೂ ಹೋಗುತ್ತಿದ್ದೇನೆ. ಅಲ್ಲಲ್ಲಿ ಹಸುರು-ಪೈಪ್ ಜೋಡಿಸಿ, ತೆಂಗಿನ ಮರಗಳಿಗೆ ನಾನೇ ನೀರು ಹಾಯಿಸುತ್ತಿದ್ದೇನೆ. ಪ್ರತಿ ಬಾರಿ, ನೀರು ಹಾಯಿಸಲು ನನಗೆ 7 ಗಂಟೆ ತಗಲುತ್ತದೆ. ಹೋಗಿ-ಬರುವ ಪ್ರಯಾಣದ ಅವಧಿ ಸೇರಿಸಿದರೆ ನಮಗೆ ಒಟ್ಟು ತಲಾ 9 ಗಂಟೆಗಳ ಕೆಲಸ. ಮೇ 2026ರ ವರೆಗೆ ಇದೇ ವ್ಯವಸ್ಥೆಯಲ್ಲಿ ನೀರು ಹಾಯಿಸಿದ್ದೇನೆ.
ಈ ನಡುವೆ, ತೋಟದ ಬಾವಿಯ ನೀರು ಎಪ್ರಿಲ್ ತಿಂಗಳ ಆರಂಭದಲ್ಲೇ ತಳ ಕಾಣುವ ಸಮಸ್ಯೆ ಮುಂದುವರಿದಿತ್ತು. ಅದು ಸಾಲದೆಂಬಂತೆ, 2024ರ ಮಳೆಗಾಲದಲ್ಲಿ ಚೌಕ ಬಾವಿಯ ಪಶ್ಚಿಮದ ಬದಿಯ ಮಣ್ಣು ಕುಸಿಯಿತು. ಕುಸಿದ ಮಣ್ಣು ಬಾಮಿಯ 10 ಕಾಂಕ್ರೀಟ್ ರಿಂಗುಗಳ ಒಳಗೆ ಕೂಡ ಬಿತ್ತು. ಆ ಮಣ್ಣಿನಲ್ಲಿ ಹೂತುಹೋದ ಸಬ್-ಮರ್ಸಿಬಲ್ ಪಂಪ್-ಸೆಟ್ ಚಾಲೂ ಆಗಲಿಲ್ಲ. ಅದನ್ನು ಬಾವಿಯಿಂದ ಹೊರ ತೆಗೆಯಲು ಹರ ಸಾಹಸ ಪಡಬೇಕಾಯಿತು. ಆ ಕೆಲಸಕ್ಕೆ ಮತ್ತು ಅದರ ರಿಪೇರಿಗೆ ಸುಮಾರು 12,000 ರೂಪಾಯಿ ವೆಚ್ಚವಾಯಿತು.
ತೋಟದ ಬಾವಿಯ ಮಣ್ಣು ಕುಸಿತದ ದೊಡ್ಡ ಸವಾಲು ಎದುರಾಗಿತ್ತು. ಬಾವಿಯ ಪಶ್ಚಿಮ ಬದಿಯ ಮಣ್ಣು ಇನ್ನಷ್ಟು ಕುಸಿಯದಂತೆ ತಡೆಯಲು ನಾನು ಕ್ರಮ ಕೈಗೊಳ್ಳಲೇ ಬೇಕಾಗಿತ್ತು. ಹಲವರ ಸಲಹೆ “ಬೋರ್-ವೆಲ್ ಕೊರೆಯಿಸಿ”. ಅದು ರಿಸ್ಕಿನ ಕೆಲಸ. ಯಾಕೆಂದರೆ (1) ನೀರು ಸಿಗುತ್ತದೆಯಾ? (2) ಎಷ್ಟು ಅಡಿ ಆಳದಲ್ಲಿ ನೀರು ಸಿಗುತ್ತದೆ? (3) ಎಷ್ಟು ನೀರು ಸಿಗುತ್ತದೆ? (4) ಎಷ್ಟು ವರುಷ ನೀರು ಸಿಗುತ್ತದೆ? ಈ ನಾಲ್ಕು ಪ್ರಶ್ನೆಗಳಿಗೆ ಖಡಾಖಂಡಿತ (ಅಂದರೆ ಗ್ಯಾರಂಟಿ) ಉತ್ತರಗಳಿಲ್ಲ. ಆದ್ದರಿಂದ ಆ ಯೋಚನೆ ಕೈಬಿಟ್ಟೆ.
ನಾನು ಬಾವಿಯೊಳಗೆ ಇನ್ನೂ 10 ಕಾಂಕ್ರೀಟ್ ರಿಂಗ್-ಗಳನ್ನು (10 ಅಡಿ ವ್ಯಾಸದ) ಇಳಿಸಲು ನಿರ್ಧರಿಸಿದೆ. (ಈಗಾಗಲೇ ಅಲ್ಲಿದ್ದ 10 ಕಾಂಕ್ರೀಟ್ ರಿಂಗುಗಳ ಪಕ್ಕದಲ್ಲಿ.) ಏಪ್ರಿಲ್ 2025ರಲ್ಲಿ ಮಂಗಳೂರಿನ “ಶರತ್ ವೆಲ್ ರಿಂಗ್ ವರ್ಕ್ಸ್”ನವರು ಅಡ್ಡೂರಿನ ಕೃಷ್ಣಾ ಫಾರ್ಮಿನ ಅಂಗಳದಲ್ಲಿ ಹೊಸ ರಿಂಗುಗಳನ್ನು ತಯಾರಿಸಿದರು. ನಂತರ, ಜೆಸಿಬಿ ಮೂಲಕ ಬಾವಿಯ ಮಣ್ಣು ತೆಗೆದು, ಹೊಸ ರಿಂಗುಗಳನ್ನು ಬಾವಿಯೊಳಗೆ ಇಳಿಸಿದರು. ಅದಲ್ಲದೆ, ಹಳೆಯ ರಿಂಗುಗಳ ಮೇಲೆ ಇನ್ನೂ ನಾಲ್ಕು ರಿಂಗುಗಳನ್ನು ಇರಿಸಿದರು. ಜೊತೆಗೆ, ಹೊಸ ಮತ್ತು ಹಳೆಯ ರಿಂಗುಗಳು ಮತ್ತು ಬಾವಿಯ ಪಶ್ಚಿಮ ಬದಿ ನಡುವಣ 4 - 5 ಅಡಿ ಅಗಲದ ಜಾಗದಲ್ಲಿ (ಮಣ್ಣು ಕುಸಿಯದಂತೆ) ಎರಡು ಲಾರಿ ಲೋಡ್ “ಚರ್ಲಿ” ತುಂಬಿದರು. (ಹೊಯಿಗೆಯಲ್ಲಿ ಸಿಗುವ ಗೋಲಾಕಾರದ ಕಲ್ಲುಗಳನ್ನು ಚರ್ಲಿ ಎಂದು ಕರೆಯುತ್ತಾರೆ.) 2025ರ ಮೇ ತಿಂಗಳ ಕೊನೆಯಲ್ಲಿ ಈ ಎಲ್ಲ ಕೆಲಸಗಳು ಮುಕ್ತಾಯ. ಇವೆಲ್ಲದಕ್ಕೆ ನಾನು ಪಾವತಿಸಿದ ವೆಚ್ಚ ಮೂರು ಲಕ್ಷ ರೂಪಾಯಿಗಳು.
ಫೋಟೋ: ಏಪ್ರಿಲ್ 2026ರ ಮೊದಲ ವಾರದಲ್ಲಿ ಅಡ್ಡೂರಿನ ಕೃಷ್ಣ ಫಾರ್ಮಿನ 30 ಅಡಿ ಆಳದ ಬಾವಿಯ ನೋಟ. ಅದರ ಒಳಗಿನ 20 ಕಾಂಕ್ರೀಟ್ ರಿಂಗುಗಳಲ್ಲಿ ಮಾತ್ರ ಅರೆವಾಸಿ ನೀರಿದೆ. ರಿಂಗುಗಳು ಮತ್ತು ಮಣ್ಣು ಕುಸಿದ ಪಶ್ಚಿಮದ ಬದಿಯ ನಡುವೆ ಚರ್ಲಿ ಹಾಕಿರುವುದನ್ನು ಕಾಣಬಹುದು. (ಫೋಟೋ - ಅ. ಕೃಷ್ಣ ರಾವ್)
-ಅಡ್ಡೂರು ಕೃಷ್ಣ ರಾವ್
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!