ಕುಸಿದ ತೆಂಗಿನ ಕಾಯಿ ಬೆಲೆ : ಐದು ವರುಷಗಳಿಂದ ನೀರಿನ ಸಮಸ್ಯೆಯೇ ತಲೆ ತಿನ್ನುತ್ತಿತ್ತು. ಅದೇ ಹೊತ್ತಿಗೆ (ಇಸವಿ 2000) ತೆಂಗಿನ ಕಾಯಿಯ ಬೆಲೆ ಕುಸಿಯತೊಡಗಿತು. ಆ ಮುಂಚೆ ತಲಾ ಐದು ರೂಪಾಯಿಯಿಂದ ಆರು ರೂಪಾಯಿಯ ತನಕ ಮಾರಾಟವಾಗುತ್ತಿದ್ದ ತೆಂಗಿನಕಾಯಿ ಮೂರು ರೂಪಾಯಿ ಬೆಲೆಗೂ ಯಾರಿಗೂ ಬೇಡ.

ತೆಂಗಿನ ಕಾಯಿ ಬೆಲೆ ಏರಬಹುದೆಂದು ಅಕ್ಟೋಬರ್ ತನಕ ಕಾದೆ. ಅದೊಂದು ದಿನ ಕೃಷಿ ಉತ್ಪನ್ನ ಮಾರಾಟ ಸಹಕಾರಿ ಸೊಸೈಟಿಗೆ ದೂರವಾಣಿ ಮಾಡಿ ಕೇಳಿದೆ. “ಹೇಗಿದೆ ತೆಂಗಿನಕಾಯಿ ದರ?” ಅಲ್ಲಿದ್ದವರು ಮಾರಾಟಕ್ಕೆ ತೆಂಗಿನಕಾಯಿ ಎಷ್ಟಿದೆಯೆಂದು ಕೇಳಿದರು. ‘2000 ಕಾಯಿ ಇದೆ’ ಎಂದಾಗ, “ನಿಮಗೆ ಒಳ್ಳೆಯ ದರ ಕೊಡುತ್ತೇವೆ. ಇವತ್ತೇ ತನ್ನಿ” ಎಂದರು. ಮಾರಾಟಕ್ಕೆ ತೆಂಗಿನಕಾಯಿ ತಂದರೆ ಯಾವ ಕೃಷಿಕನೂ ವಾಪಾಸು ಒಯ್ಯುವಂತಿಲ್ಲ ಎಂಬುದು ಸೊಸೈಟಿಯವರಿಗೆ ಚೆನ್ನಾಗಿ ಗೊತ್ತಿತ್ತು.

ಅವರ ಮಾತನ್ನು ನಂಬಿ, ಸುಲಿದ 2000 ತೆಂಗಿನಕಾಯಿಗಳನ್ನು ಲಾರಿಯಲ್ಲಿ ಮಂಗಳೂರಿಗೆ ಸಾಗಿಸಿದೆ. ಅಲ್ಲಿನ ದರ ಕೇಳಿ ದಂಗಾದೆ. ತಲಾ ಮೂರು ರೂಪಾಯಿ ಬೆಲೆಯೂ ಸಿಗುವಂತೆ ತೋರಲಿಲ್ಲ. ಬೇರೆ ದಾರಿಯಿಲ್ಲದೆ ಸೊಸೈಟಿಗೆ ತೆಂಗಿನಕಾಯಿ ಕೊಟ್ಟು, ಮಾರಾಟ ಮಾಡಲು ಹೇಳಿ ಹಿಂತಿರುಗಿದೆ.

ಮರುದಿನ ತೆಂಗಿನಕಾಯಿಗೆ ಸಿಕ್ಕಿದ ದರ ಕೇಳಿ ಆಘಾತವಾಯಿತು. 2000 ತೆಂಗಿನಕಾಯಿಗಳಿಗೆ ಲಾರಿ ಬಾಡಿಗೆ ಕಳೆದು ನನಗೆ ಸಿಕ್ಕಿದ್ದು ಕೇವಲ 3000 ರೂಪಾಯಿ ಮಾತ್ರ! ಅಂದರೆ ಒಂದು ತೆಂಗಿನಕಾಯಿಗೆ ಕೇವಲ ರೂಪಾಯಿ 1.50 ಸಿಕ್ಕಿದಂತಾಯಿತು. ಈ ದರದಲ್ಲಿ ತೆಂಗಿನ ತೋಟದ ನಿರ್ವಹಣೆ ಅಸಾಧ್ಯ. ಯಾಕೆಂದರೆ ಒಂದು ತೆಂಗಿನಕಾಯಿಯ ಉತ್ಪಾದನಾ ವೆಚ್ಚವೇ (ಇಸವಿ 2000ದಲ್ಲಿ) ರೂಪಾಯಿ ಎಂಟನ್ನು ಮೀರುತ್ತದೆ. ಲಾಭ ತರುತ್ತಿದ್ದ ತೆಂಗಿನ ಕೃಷಿ ಒಂದೇಟಿಗೆ ನಷ್ಟಕ್ಕೆ ಕುಸಿದಿತ್ತು.

ಮಗ ಕೃಷ್ಣನಿಗೆ ವಿಚಾರ ತಿಳಿಸಿದೆ. ನನ್ನ ಅಸಹಾಯಕತೆಯನ್ನು ಗಮನಿಸಿದ ಆತ “ತೆಂಗಿನ ಮರಗಳು ಹಾಗೇ ಇವೆಯಲ್ಲ. ತೆಂಗಿನಕಾಯಿ ಬಿಡುತ್ತಿವೆ. ಇನ್ನು ಮುಂದೆಯೂ ಕಾಯಿ ಬಿಡುತ್ತವೆ. ತೆಂಗಿನಕಾಯಿಗೆ ಒಂದು ವರುಷ ಸರಿಯಾದ ಬೆಲೆ ಸಿಗಲಿಲ್ಲ ಎಂದು ಮರಗಳನ್ನು ಕಡಿದುಹಾಕುವಂತಿಲ್ಲ. ಈ ವರುಷ ತೆಂಗಿನಿಂದ ಲಾಭ ಸಿಗದಿದ್ದರೆ ಏನಾಯಿತು? ಕಳೆದ ಮೂವತ್ತು ವರುಷಗಳಲ್ಲಿ ತೆಂಗಿನ ಮರಗಳು ನಮಗೆ ಲಾಭ ತಂದು ಕೊಟ್ಟಿವೆ. ಹಾಗಾಗಿ ಈ ವರುಷದ ನಷ್ಟವನ್ನು ನಾವು ಸಹಿಸಿಕೊಳ್ಳಲೇಬೇಕು” ಎಂದು ಹೇಳಿದ. ಅದು ಸತ್ಯವೆಂದು ತೋರಿತು.

ನನ್ನ ಇಡೀ ಕೃಷಿ ಬದುಕನ್ನು ಹಿಂತಿರುಗಿ ನೋಡಿದಾಗ, ನನ್ನ ಪಾಲಿಗೆ ಬಂದ ಜಮೀನಿನಲ್ಲಿ ಮಾದರಿಯಾಗಬಲ್ಲ ಕೃಷಿ ಕ್ಷೇತ್ರವೊಂದನ್ನು ನಿರ್ಮಿಸಿದ್ದೇನೆ, ಇದರಿಂದ ನೆರೆಹೊರೆಯ ಮತ್ತು ಇತರ ಕೃಷಿಕರಿಗೆ ಸಹಾಯವಾಗಿದೆ. ಅಲ್ಲದೆ ನನ್ನ ಅನುಭವಗಳನ್ನು ಇವರೊಂದಿಗೆ ಹಂಚಿಕೊಂಡಿದ್ದೇನೆ, ಮಾರ್ಗದರ್ಶನ ಮಾಡಿದ್ದೇನೆ ಎಂಬ ಸಮಾಧಾನ ನನಗಿದೆ.

ಕೃಷಿ ಬದುಕಿನಿಂದ ಸುಖ: ಕಾರು, ಫ್ರಿಜ್…ಇವೆಲ್ಲವನ್ನು ಕೃಷಿಯ ಆದಾಯದಿಂದ ಖರೀದಿಸುವುದು ಸಣ್ಣ ಕೃಷಿಕರಿಗೆ ಸಾಧ್ಯವಿಲ್ಲ. ಸಾಲ ಮಾಡಿ ಖರೀದಿಸಬಹುದು. ಆದರೆ ಅದೆಲ್ಲಾ ಷೋಕಿ. ನನಗೆ ಅದರಲ್ಲಿ ಆಸಕ್ತಿಯಿಲ್ಲ.

ಹಾಗಂತ ಕೃಷಿಗೆ ಅಗತ್ಯವಾದ ಪಂಪು, ನೀರಿನ ಟ್ಯಾಂಕ್, ಪೈಪ್, ಡ್ರಿಪ್, ಬೇಲಿ, ಮನೆ, ಲೈಬ್ರರಿ… ಇವುಗಳನ್ನು ಮಕ್ಕಳ ಸಹಕಾರದಿಂದ ಮಾಡಿದೆ. ಇದರಲ್ಲಿ ಬಹುಪಾಲು ಕೃಷ್ಣನ ಕೊಡುಗೆ. ಅವನು ಅಡ್ಡೂರಿನಲ್ಲಿಯೇ ಇದ್ದು ಮಂಗಳೂರಿಗೆ ಬ್ಯಾಂಕಿನ ಉದ್ಯೋಗಕ್ಕಾಗಿ ಹೋಗಿ ಬರುತ್ತಿದ್ದ. 1983ರಲ್ಲಿ ಅವನಿಗೆ ರಾಜಲಕ್ಷ್ಮಿ ಜೊತೆ ಮದುವೆಯಾಯಿತು. ನನ್ನ ಹೆಂಡತಿ 1988ರಲ್ಲಿ ಅಧ್ಯಾಪಿಕೆ ವೃತ್ತಿಯಿಂದ ನಿವೃತ್ತಿಯಾದಳು. ಅಲ್ಲಿಯವರೆಗೆ ಸೊಸೆ ರಾಜಲಕ್ಷ್ಮಿಯೇ ಅಡ್ಡೂರಿನ ಮನೆವಾರ್ತೆ ನೋಡಿಕೊಂಡಿದ್ದಳು.

ಕೃಷಿಯ ಬಗ್ಗೆ ಜನರಿಗೆ ಮಾಹಿತಿ ಪ್ರಚಾರ ಮಾಡುವ ಕೆಲಸದಿಂದಾಗಿ ಕೃಷಿಗೆ ಹೆಚ್ಚು ಗಮನ ಕೊಡಲಿಲ್ಲ. ಕೃಷಿ ಮಾಡಿ ನನ್ನ ಕಿಸೆ (ಜೇಬು) ದಪ್ಪವಾಗಲಿಲ್ಲ. ಕೈಯಲ್ಲಿ ಸ್ವಲ್ಪ ಹಣವಿದ್ದರೆ ಪುಸ್ತಕ ಖರೀದಿಸುತ್ತಿದ್ದೆ. “ಸಾಗುವಳಿ ಮಾಡಿ ಸೋತ” ಎಂಬ ಅಪವಾದವೂ ಇತ್ತು. ಅದನ್ನು ನಾನು ಒಪ್ಪುವುದಿಲ್ಲ. ಹೆಚ್ಚು ಹಣ ಮಾಡಲಿಲ್ಲ ಎಂಬುದು ನಿಜ.

ಜೀವನದಲ್ಲಿ ಸರಳತೆಯನ್ನು ಬಯಸುವವನು ನಾನು. ಆಡಂಬರದ ಜೀವನದಿಂದ ದೂರ. ಬೇರೆಯವರಿಗೆ ಹೋಲಿಕೆ ಮಾಡಿ, ತಮ್ಮನ್ನು ವೈಭವೀಕರಿಸಿಕೊಳ್ಳುವುದನ್ನು ನಾವು ಸುತ್ತೆಲ್ಲಾ ನೋಡುತ್ತೇವೆ. ಇದರಿಂದೇನು ಪ್ರಯೋಜನ?

ನಾನು ಮನೆ-ಕೃಷಿ ವೆಚ್ಚದ ಲೆಕ್ಕ ಇಡುವವನಲ್ಲ. ಒಮ್ಮೆ ಮಣಿಪಾಲದ ಸಿಂಡಿಕೇಟ್ ಕೃಷಿ ಪ್ರತಿಷ್ಠಾನದವರು ಕೃಷಿ ಲೆಕ್ಕ ಬರೆದಿಡಲೋಸುಗ ಪುಸ್ತಕವೊಂದನ್ನು ಕೊಟ್ಟಿದ್ದರು. ಅದು ಈಗಲೂ ಖಾಲಿಯಾಗಿಯೇ ಇದೆ! ಲೆಕ್ಕವಿಡುವ ಕ್ರಮ ಅಳವಡಿಸಿಕೊಂಡರೆ ಮಿತವ್ಯಯ ಸಾಧಿಸಬಹುದು.

ಈಗೀಗ ನನಗ್ಯಾಕೋ ಜಾಡ್ಯತೆ ಆವರಿಸಿದೆ. ಮನಸ್ಸು ಎಲ್ಲದಕ್ಕೂ ಹಿಂಜರಿಯುತ್ತಿದೆ. ಕೊನೆ ದಿವಸ ಸಮೀಪಿಸುತ್ತಿದೆ ಎಂದು ಭಾಸವಾಗುತ್ತಿದೆ. ಹಾಗೆಂತ ಸಾವಿಗೆ ನಾನು ಹೆದರುವುದಿಲ್ಲ.

“ಇನ್ನು ಎಷ್ಟು ದಿವಸ ನೀವಿದ್ದೀರಿ? ತಲೆಯಲ್ಲಿದ್ದ ವಿಚಾರಗಳನ್ನು ಕಾಗದಕ್ಕಿಳಿಸಿ. ಹತ್ತು ಜನರಿಗೆ ಉಪಯೋಗವಾಗಲಿ” ಎಂದು ಮಗ ಕೃಷ್ಣ ಆಗಾಗ ಹೇಳುತ್ತಿರುತ್ತಾನೆ. “ಇದು ಹೌದೋ” ಎಂದು ನನ್ನಲ್ಲೇ ಪ್ರಶ್ನಿಸಿಕೊಂಡರೆ, ‘ಯಾಕಲ್ಲ’ ಎಂಬ ಉತ್ತರ ಗೋಚರವಾಗುತ್ತದೆ.

ಫೋಟೋ: ಅಡ್ಡೂರಿನ ಕೃಷ್ಣಾ ಫಾರ್ಮಿನ ತೆಂಗಿನಕಾಯಿ ಇಳುವರಿ (ಸಿಪ್ಪೆ ಸುಲಿದದ್ದು)

ಆಕರ ಪುಸ್ತಕ: ಅಡ್ಡೂರು ಶಿವಶ೦ಕರರಾಯರ ಎಂಬತ್ತರ ಕೊಯ್ಲಿನ ಕಾಳುಗಳು

ಲೇಖಕರು: ಅಡ್ಡೂರು ಕೃಷ್ಣರಾವ್, ನಾ. ಕಾರಂತ ಪೆರಾಜೆ