ಪ್ರಥಮಾದ್ಯತೆಯಲ್ಲಿ ಆಗಬೇಕಾದ ಕೃಷಿ ಸಂಶೋಧನೆ
(‘ಯುಗಪುರುಷ’ ಮಾಸಿಕದ 1981ರ ಸ್ವಾತಂತ್ರ್ಯೋತ್ಸವ ವಿಶೇಷಾಂಕದಲ್ಲಿ ಪ್ರಕಟವಾದ ಶಿವಶಂಕರ ರಾಯರ ಲೇಖನವಿದು. ಇದರಲ್ಲಿ ಅವರು ಎತ್ತಿದ ಪ್ರಶ್ನೆಗಳು ಇಂದಿಗೂ ಪ್ರಸ್ತುತ)
ಪಶ್ಚಿಮ ಕರಾವಳಿಯು ಭೌಗೋಳಿಕವಾಗಿ ಒಂದು ವಿಶಿಷ್ಟ ಪ್ರದೇಶ. ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕೃಷಿ ಅಭಿವೃದ್ಧಿಗಿರುವ ಸಮಸ್ಯೆಯು ರಾಜ್ಯದ ಇತರ ಜಿಲ್ಲೆಗಳ ಸಮಸ್ಯೆಗಳಂತಲ್ಲ. ಇಲ್ಲಿಯ ವಾಯುಗುಣ ಇತರ ಜಿಲ್ಲೆಗಳಿಗಿಂತ ಭಿನ್ನ. ಮಳೆಯ ಕ್ರಮವೂ ಭಿನ್ನ. ಇಲ್ಲಿಯ ಗ್ರಾಮೀಣ ಸಮಸ್ಯೆಗಳೂ ಭಿನ್ನ. ಇಲ್ಲಿಯ ಹಳ್ಳಿಗಳಲ್ಲಿ ಬೇರೂರಿರುವ ಬೀಡಿ ಕೈಗಾರಿಕೆಯಿಂದಾಗಿ ಕೃಷಿ ಕೆಲಸಗಳ ಸಮಸ್ಯೆಗಳು ಬೇರೆಡೆಗಳಿಗಿಂತ ಪೂರ್ಣ ವಿಭಿನ್ನ. ದಕ್ಷಿಣ ಕನ್ನಡ ಜಿಲ್ಲೆಯ ಕೃಷಿ ಅಭಿವೃದ್ಧಿ ಬಗ್ಗೆ ಚರ್ಚಿಸುವಾಗ ಈ ವಿಶಿಷ್ಟ ಸಮಸ್ಯೆಗಳನ್ನೆಲ್ಲ ನಾವು ಪರಿಶೀಲಿಸಬೇಕಾಗುತ್ತದೆ.
ದಕ್ಷಿಣ ಕನ್ನಡ ಜಿಲ್ಲೆಯ ಮುಖ್ಯ ಬೆಳೆ ಭತ್ತ. ಹೆಚ್ಚಿನ ರೈತರಿಗೆ ಭತ್ತದ ಬೆಳೆಯಿಂದಲೇ ಜೀವನ ಸಾಗಬೇಕು. ಆದರೆ ಜಿಲ್ಲೆಯಲ್ಲಿ ಭತ್ತದ ಕೃಷಿಯ ಸಮಸ್ಯೆಗಳು ವಿಶಿಷ್ಟ. ಮಲೆನಾಡು ಬಯಲು ಸೀಮೆಗಳಲ್ಲಿ ಭತ್ತದ ಬೆಳೆಯಿಂದ ಸರಾಸರಿ ಎಕ್ರೆಯೊಂದರಲ್ಲಿ ಬರುವ ಉತ್ಪತ್ತಿ ಸ್ಥಳೀಯ ತಳಿಗಳಾದರೆ ಹದಿನಾಲ್ಕು ಕ್ವಿಂಟಾಲ್, ಅಧಿಕ ಇಳುವರಿ ತಳಿಯಾದರೆ ಎಕ್ರೆಗೆ ಇಪ್ಪತ್ತೆರಡು ಕ್ವಿಂಟಾಲ್. ಈಗ ದಕ್ಷಿಣ ಕನ್ನಡ ಜಿಲ್ಲೆಯ ತತ್ಸಮ ಸರಾಸರಿ 8 ಮತ್ತು 16 ಕ್ವಿಂಟಾಲ್, ಪ್ರಗತಿಪರ ರೈತರು ಮಾತ್ರ 10 ರಿ೦ದ 18 ಕ್ವಿಂಟಾಲ್ ಭತ್ತದ ಇಳುವರಿ ಪಡೆಯುತ್ತಾರೆ.
ಇಲ್ಲಿಯ ಮಳೆ ಆಧಾರಿತ ಕೃಷಿಯಿಂದಾಗಿ ಯಾವ ರೈತನೂ ನಿರ್ದಿಷ್ಟ ಪ್ರತಿಫಲವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಹಲವು ಬಾರಿ ಮುಂಗಾರು ಮಳೆ ತಡವಾಗುತ್ತದೆ. ಆಗ ನೇಜಿ ಹಾಕುವುದೂ ತಡವಾಗಿ ಸರಿಯಾದ ಸಮಯದಲ್ಲಿ ನಾಟಿ ಮಾಡಲು ಆಗುವುದಿಲ್ಲ. ಕೆಲವೊಮ್ಮೆ ನೇಜಿ ನಾಟಿಗೆ ತಯಾರಾದಾಗ ಮಳೆಯ ಅಭಾವ ಉಂಟಾಗಿ ನಾಟಿ ಮಾಡಲು ಗದ್ದೆ ಸಿದ್ಧಪಡಿಸಲು ಸಾಧ್ಯವಾಗುವುದಿಲ್ಲ. ಸಸಿ ಮಡಿಯಲ್ಲಿ ನೇಜಿ ಜಾಸ್ತಿ ಬೆಳೆದರೆ ನೇಜಿ ತೆಗೆಯುವ ಖರ್ಚು ವಿಪರೀತವಾಗಿ ಉತ್ಪನ್ನವೂ ಕಡಿಮೆಯಾಗುತ್ತದೆ. ಮಳೆಗಾಲದ ಬೆಳೆಗಳಲ್ಲಿ ಕೆಲವು ಸಾರಿ ಅತಿ ಮಳೆಯಿಂದಾಗಿ ಕೃತಕ ಗೊಬ್ಬರಗಳನ್ನು ಸಮರ್ಪಕವಾಗಿ ಬಳಸಲು ಸಾಧ್ಯವಾಗುತ್ತಿಲ್ಲ. ಬೀಡಿ ಉದ್ಯಮದಿಂದಾಗಿ ಕೃಷಿ ಕಾರ್ಮಿಕರ ಸಂಖ್ಯೆ ಕಡಿಮೆಯಾಗಿ, ನಾಟಿ ಮತ್ತು ಕೊಯ್ಲಿನ ಕೆಲಸಗಳು ಸಕಾಲಕ್ಕೆ ಆಗದೆ ನಷ್ಟವಾಗುತ್ತದೆ. ಇದನ್ನು ತಪ್ಪಿಸಲು ಪ್ರತಿಯೊಬ್ಬ ಕೃಷಿಕನೂ ತನ್ನ ಕೃಷಿ ಕೆಲಸಗಳನ್ನು ಮುಂಚಿತವಾಗಿ ಅಥವಾ ತಡವಾಗಿ ಮಾಡಿ ಹೊ೦ದಿಸಿಕೊಳ್ಳಬೇಕಾಗಬಹುದು.
ಅ೦ತಹ ಸಂದರ್ಭದಲ್ಲಿ ಅವನಿಗೆ ಬೇರೆ ಬೇರೆ ಅವಧಿಯ ತಳಿಗಳ ಅಗತ್ಯ ಉಂಟಾಗುತ್ತದೆ. ಆ ತಳಿಗಳು ಅವನ ಅಭಿರುಚಿಗೆ ತಕ್ಕದ್ದಾಗಿಯೂ ಇರಬೇಕು. ಇಲ್ಲಿಯ ಜನರಿಗೆ ಕೆಂಪು (ಕಜೆ, ಕುಚ್ಚಲು) ಅಕ್ಕಿಇಷ್ಟ. ಅದಕ್ಕೆ ಬೇಡಿಕೆ ಹೆಚ್ಚು. ಕುಚ್ಚಲಕ್ಕಿಗೆ ಮುಡಿಯೊಂದರ ಐದು ಅಥವಾ ಹತ್ತು ರೂಪಾಯಿ ಹೆಚ್ಚಿಗೆ ದರ ಸಿಗುತ್ತದೆ.
ಇಲ್ಲಿ ಭತ್ತದ ಬೆಳೆಗೆ ಧಾಳಿಯಿಡುವ ರೋಗಗಳು, ಕೀಟಗಳು ವಿಪರೀತ. ಕರ್ನಾಟಕದ ಬೇರೆ ಯಾವ ಪ್ರದೇಶದಲ್ಲೂ ಭತ್ತದ ಬೆಳೆಗೆ ರೋಗ ಹಾಗೂ ಕೀಟಗಳ ಬಾಧೆ ಇಲ್ಲಿರುವಷ್ಟಿಲ್ಲ. ಇಲ್ಲಿ ಸಾಗುವಳಿ ಖರ್ಚು-ವೆಚ್ಚ ಅಧಿಕ. ಕೃಷಿ ಕಾರ್ಮಿಕರ ಮಜೂರಿ ಹೆಚ್ಚು. ಬೀಡಿ ಉದ್ಯಮದ ಪರಿಣಾಮವಾಗಿ ಕೃಷಿ ಮಜೂರಿ ಇನ್ನೂ ಹೆಚ್ಚಾಗಿದೆ. ಭತ್ತದ ಎರಡನೆಯ ಮತ್ತು ಮೂರನೇ (ಕೊಳಕೆ) ಬೆಳೆಗಳಲ್ಲಿ ಒಂದನೇ ಬೆಳೆಗಿಂತ ಹೆಚ್ಚಿನ ಇಳುವರಿ ಪಡೆಯಬಹುದಾದರೂ, ಎರಡನೇ ಮತ್ತು ಮೂರನೇ ಬೆಳೆಗಳಲ್ಲಿ ಭತ್ತದ ಕೃಷಿಗೊಳಪಡುವ ಪ್ರದೇಶವು ಜಿಲ್ಲೆಯಲ್ಲಿ ಕಡಿಮೆ ಮತ್ತು ಈ ಎರಡೂ ಬೆಳೆಗಳಿಗೆ ನೀರು ಹಾಯಿಸುವ ಖರ್ಚು ಹೆಚ್ಚು.
ಫೋಟೋ: ಭತ್ತದ ಗದ್ದೆಗೆ ಗೊಬ್ಬರ ಹಾಕುತ್ತಿರುವ ಮಹಿಳೆ…. ಕೃಪೆ: ಟಿಎನ್ ಎಯು ವೆಬ್-ಸೈಟ್
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!