ದಕ್ಷಿಣ ಕನ್ನಡ ಜಿಲ್ಲೆಗೆ ಈ ಸಂಶೋಧನೆಗಳು ಬೇಕು

(‘ಯುಗಪುರುಷ’ ಮಾಸಿಕದ 1981ರ ಸ್ವಾತಂತ್ರ್ಯೋತ್ಸವ ವಿಶೇಷಾಂಕದಲ್ಲಿ ಪ್ರಕಟವಾದ ಶಿವಶಂಕರ ರಾಯರ ಲೇಖನದ ಮುಂದುವರಿದ ಭಾಗ. ಇದರಲ್ಲಿ ಅವರು ಎತ್ತಿದ ಪ್ರಶ್ನೆಗಳು ಇಂದಿಗೂ ಪ್ರಸ್ತುತ)

ದಕ್ಷಿಣ ಕನ್ನಡ ಜಿಲ್ಲೆಯ ಭತ್ತದ ಬೆಳೆಯ ಅಭಿವೃದ್ಧಿಯ ದೃಷ್ಟಿಯಿಂದ ಈ ಕೆಳಗಿನ ಕೆಲವು ಮುಖ್ಯ ಸಂಶೋಧನೆಗಳು ನಡೆಯಬೇಕಾಗಿದೆ:

* ಭತ್ತಕ್ಕೆ ಧಾಳಿಯಿಡುವ ಹಾನಿಕಾರಕ ಕೀಟಗಳು (ಬಂಬುಚ್ಚಿ) ಮತ್ತು ರೋಗಗಳನ್ನು (ಕಣೆ ಮತ್ತು ಚುಕ್ಕೆರೋಗ) ನಿರೋಧಿಸುವ ತಳಿಗಳ ಅಭಿವೃದ್ಢಿ. ಇವುಗಳು ಕೆಂಪು ಅಕ್ಕಿಯ ರುಚಿ ಹೊಂದಿದ್ದು ಅಲ್ಪಾವಧಿ ಮತ್ತು ಮಧ್ಯಮಾವಧಿ ತಳಿಗಳಾಗಿರಬೇಕು. ಈಗ ಬಳಕೆಯಲ್ಲಿರುವ ತಳಿಗಳಲ್ಲಿ ಚುಕ್ಕೆ ರೋಗದ ಹಾವಳಿ ವಿಪರೀತ. ಅದರ ಬಗ್ಗೆ ಸಂಶೋಧನೆ ನಡೆಸಿ, ನಿವಾರಣೆಗೆ ನಿರ್ದಿಷ್ಟ ಸಲಹೆಗಳನ್ನು ಒದಗಿಸಬೇಕು.

* ಇತ್ತೀಚೆಗಿನ ಕೆಲವು ವರುಷಗಳಲ್ಲಿ ಕೀಟಗಳು ಹೆಚ್ಚು ಹಾನಿಕರವಾಗಿ ಪರಿಣಮಿಸುತ್ತಿವೆ. ದುಂಡಾಣು ರೋಗವೂ ಕಾಣಿಸಿಕೊಂಡಿದೆ. ಇವುಗಳ ನಿವಾರಣೆ ಬಗ್ಗೆ ಸಂಶೋಧನೆ ಅಗತ್ಯ.

* ವರುಷವಿಡೀ ಕಾಡುವ ಬಂಬುಚ್ಚಿಯ ನಿವಾರಣೆಗೆ ಔಷಧಿ ಸಿಂಪಡಿಸಿದರೂ ವ್ಯರ್ಥವಾಗುತ್ತದೆ. ಬಂಬುಚ್ಚಿ ಹತೋಟಿಗೆ ಪರೋಪಜೀವಿ ವೈರಿಗಳನ್ನು ಬಳಸುವಂತಾಗಬೇಕು.

* ಎಲೆಯ ತುದಿ ಒಣಗುವ ಹಲವು ರೋಗಗಳಿವೆ. ನಿಮಾಟೋಡ್‌ಗಳ ಹಾವಳಿಯಿದೆಯೇ ಎಂದು ಪರೀಕ್ಷಿಸಬೇಕಾಗಿದೆ. ಕೃಷಿ ವಿಶ್ವವಿದ್ಯಾಲಯದವರು ಜಪ್ಪಿನಮೊಗರಿನಲ್ಲಿ ಅಂತಹ ಒಂದು ನಿಮಟೋಡನ್ನು (ಹಿರ್‌ಶ್ಚುಮಾನಿಯೆಲ್ಲಾ ಮ್ಯಾಂಗ್ಲೋರಿಯೆನ್ಸಿಸ್) ಪತ್ತೆ ಹಚ್ಚಿದ್ದಾರೆಂದು ವರದಿಯಾಗಿತ್ತು.

* ಇಲ್ಲಿ ಒಂದು ದಶಕಕ್ಕಿಂತಲೂ ಹೆಚ್ಚಿನ ಅವಧಿಯಲ್ಲಿ ಭತ್ತದ ಅಧಿಕ ಇಳುವರಿ ತಳಿಗಳ ಕೃಷಿ ಸತತವಾಗಿ ಸಾಗಿ ಬಂದಿದೆ. ಇದರಿಂದ ಯಾವುದೇ ಸೂಕ್ಷ್ಮ ಪೋಷಕಗಳ ಕೊರತೆ ಉಂಟಾಗಿದೆಯೇ ಎಂಬ ಬಗ್ಗೆ ಸಂಶೋಧನೆ ಆಗಿಲ್ಲ. ಪ್ರಚಾರಕ್ಕೆ ಬಂದಿರುವ ಸೂಕ್ಷ್ಮ ಪೋಷಕಯುಕ್ತವಾದ ಕೆಲವು ರಾಸಾಯನಿಕ ಗೊಬ್ಬರಗಳ ಪ್ರಾಯೋಗಿಕ ಉಪಯುಕ್ತತೆಯ ಬಗ್ಗೆ ಜಿಲ್ಲೆಯ ರೈತರಿಗಿರುವ ಸಂಶಯವು ಸಂಶೋಧನೆಯ ಮೂಲಕ ಪರಿಹಾರವಾಗಬೇಕಾಗಿದೆ.

* ಸುಣ್ಣ ಬಳಕೆ ಬಗ್ಗೆ ಕೃಷಿ ವಿಶ್ವವಿದ್ಯಾಲಯ ಮತ್ತು ಇಲಾಖೆಯ ತಜ್ಞರ ಅಭಿಪ್ರಾಯಗಳಲ್ಲಿ ವ್ಯತ್ಯಾಸವಿದೆ. ಈ ಕುರಿತು ಒಮ್ಮತದ ಸಲಹೆಗಳು ಬೇಕಾಗಿವೆ.

* ಕೆಲವು ವರುಷಗಳ ಹಿಂದೆ ಕೃತಕ ಗೊಬ್ಬರಗಳ ಬಳಕೆಯನ್ನು ಅಧಿಕ ಪ್ರಮಾಣದಲ್ಲಿ ಶಿಫಾರಸು ಮಾಡಲಾಗುತ್ತಿತ್ತು. ಇತ್ತೀಚೆಗಿನ ವರುಷಗಳಲ್ಲಿ ಕಡಿಮೆ ಪ್ರಮಾಣದ ಬಳಕೆಯ ಶಿಫಾರಸು. ಅಧಿಕಾರಿಗಳು ಸೂಚಿಸುವ ಗೊಬ್ಬರದ ಪ್ರಮಾಣಗಳು ಇಲ್ಲೊಂದಾದರೆ, ಕೇರಳದಲ್ಲಿ ಮತ್ತೊಂದು. ಇದರ ಬಗ್ಗೆ ವಿವರಣೆ ಬೇಕು.

* ಕಳೆ (ಮುಖ್ಯವಾಗಿ ನಳ್ಳಿಗೆ) ನಿರ್ಮೂಲನ ಬಗ್ಗೆ ಸಂಶೋಧನೆಯಾಗಬೇಕು.

* ಪರಿವರ್ತನೆ ಬೆಳೆಗಳ, ಮಿಶ್ರ ಬೆಳೆಗಳ ಮತ್ತು ತೋಟಗಾರಿಕೆ ಬೆಳೆಗಳ ಕೃಷಿ ಬಗ್ಗೆ ಸೂಕ್ತ ಸಂಶೋಧನೆ ನಡೆಸಿ, ಜಿಲ್ಲೆಯ ಸಂಶೋಧನಾ ಕೇಂದ್ರಗಳಲ್ಲಿ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸುವುದು ಅತೀ ಅಗತ್ಯ.

* ಜಿಲ್ಲೆಯಲ್ಲಿ ಹೊಸ ಬೆಳೆಗಳನ್ನು ಬಳಕೆಗೆ ತರುವಾಗ ವ್ಯವಸ್ಥಿತ ರೀತಿಯಲ್ಲಿ ಪ್ರಯತ್ನ ಸಾಗಿಲ್ಲ. ಸೀ‌ಐಲ್ಯಾಂಡ್ ಹತ್ತಿ, ಮೆಕ್ಕೆಜೋಳ, ಸೂರ್ಯಕಾಂತಿ, ನೆಲಗಡಲೆ, ಸೋಯಾ ಅವರೆ, ರಾಗಿ, ಹಿಪ್ಪೆನೇರಳೆ ಜೊತೆ ರೇಷ್ಮೆ ವ್ಯವಸಾಯ ನಮ್ಮ ಜಿಲ್ಲೆಗೆ ಶಿಫಾರಸು ಮಾಡಲಾದ ಹಾಗೂ ಇಲ್ಲಿ ಪ್ರಯತ್ನಿಸಲಾದ ಬೆಳೆಗಳು. ಅವುಗಳು ರೈತನ ವಿಶ್ವಾಸವನ್ನು ಉಳಿಸಿಕೊಳ್ಳಲಿಲ್ಲ. ಕೆಲವು ಬೆಳೆಗಳ ಕೃಷಿಯನ್ನು ಕೈ ಬಿಡಲಾಗಿದೆ. ಕೆಲವು ಜನಪ್ರಿಯವಾಗಿವೆ. ಇಲ್ಲಿಯ ಸಮಸ್ಯೆಗಳಿಂದಾಗಿ ಮತ್ತು ಬೇರೆ ಬೇರೆ ಕಾರಣಗಳಿಂದಾಗಿ ಬೆಳೆಗಳು ವಿಫಲವಾದಲ್ಲಿ ಅದಕ್ಕೆ ತಕ್ಕ ಪರಿಹಾರವನ್ನು ಪತ್ತೆ ಮಾಡಲು ಪ್ರಾಮಾಣಿಕ ಪ್ರಯತ್ನ ನಡೆಸದ ಕಾರಣ ಆ ಬೆಳೆಗಳ ಕೃಷಿಯನ್ನೇ ಕೈಬಿಡಲಾಗಿದೆ. ರೈತರು ನೋಡಿ ಸ್ಪೂರ್ತಿ ಪಡೆಯಬಹುದಾದಂತಹ ಪ್ರಾತ್ಯಕ್ಷಿಕೆ ಕೃಷಿಕ್ಷೇತ್ರಗಳ ಆವಶ್ಯಕತೆ ಇದೆ.

* ನಮ್ಮ ಜಿಲ್ಲೆಯಲ್ಲಿ ಆಹಾರ ಧಾನ್ಯ ಮಾತ್ರ ಬೆಳೆದಲ್ಲಿ ಕೃಷಿಕನು ಉದ್ಢಾರವಾಗಲಾರನು. ಆ ಬೆಳೆಗಳೊಂದಿಗೆ ವ್ಯಾಪಾರಿ ಬೆಳೆಗಳು ಮತ್ತು ದೀರ್ಘಾವಧಿ ತೋಟಗಾರಿಕೆ ಬೆಳೆಗಳನ್ನು ಸಂಯೋಜಿಸಿದರೆ ಮಾತ್ರ ಕೃಷಿಕನಿಗೆ ಭವಿಷ್ಯವಿದೆ. ಈ ದೃಷ್ಟಿಯಿ೦ದ ಚಿಕ್ಕ ಮತ್ತು ಅತಿ ಚಿಕ್ಕ ರೈತರ ಹಿಡುವಳಿಗಳ ಬಗ್ಗೆ ಪರಿವೀಕ್ಷಣೆ ಮತ್ತು ಸ೦ಶೋಧನೆ ನಡೆಸಬೇಕು. ಮುಖ್ಯ ಬೆಳೆಗಳ ಕೃಷಿ ವೆಚ್ಚ, ಆದಾಯ ಮತ್ತು ಲಾಭದ ಲೆಕ್ಕಾಚಾರ ಒದಗಿಸಬೇಕು. ಕೃಷಿಕಾರ್ಮಿಕರ ಮಜೂರಿ ಇತರೆಡೆಗಿಂತ ಇಲ್ಲಿ ಅಧಿಕವಾಗಿದೆ ಎಂಬುದನ್ನು ಗಮನದಲ್ಲಿಡಬೇಕು.

* ನಮ್ಮ ದೇಶದಲ್ಲಿ ಹಲವು ಬಗೆಯ ಕಳೆಗಿಡಗಳು ದೊಡ್ಡ ಸಮಸ್ಯೆಯಾಗಿವೆ. ಲಂಟಾನ (ನಾಥ ಹೂ), ಪಾರ್ಥೇನಿಯಂ (ಕಾಂಗ್ರೆಸ್ ಕಳೆ), ಯುಪಟೋರಿಯಂ (ಕಮ್ಯೂನಿಸ್ಟ್ ಕಳೆ) ಮೊದಲಾದ ಕಳೆಗಳ ಬಗ್ಗೆ ಸರಕಾರವೇ ಕಳವಳಗೊಂಡಿದೆ. ನಮ್ಮ ಜಿಲ್ಲೆಯಲ್ಲಿ ಯುಪಟೋರಿಯಂ ವಿಸ್ತೃತವಾಗಿ ಪಸರಿಸಿದೆ. ಈ ಕಳೆಯು ಅಸ್ಸಾಂ, ನಾಗಾಲ್ಯಾಂಡ್, ಮತ್ತು ಮೇಘಾಲಯಗಳಲ್ಲಿ ತೀವ್ರವಾಗಿ ಮೇವು ಕ್ಷಾಮ ತಂದೊಡ್ಡಿದೆಯೆಂದು ಹೇಳಲಾಗಿದೆ. ಇವುಗಳನ್ನು ಹೀಗೇ ಬಿಟ್ಟಲ್ಲಿ ಜಿಲ್ಲೆಯ ಕೃಷಿಯ ಮೇಲೆ ಮತ್ತು ಸಸ್ಯ ಸಂಪತ್ತಿನ ಮೇಲೆ ದುಷ್ಪರಿಣಾಮವಾದೀತು.

* ದ.ಕ.ಜಿಲ್ಲೆಯ ಇನ್ನೊಂದು ಮುಖ್ಯ ಬೆಳೆ ತೆಂಗು. ತೆಂಗು ಬೆಳೆಗೆ ಕಪ್ಪು ತಲೆಯ ಕಂಬಳಿ ಹುಳದ (ನೆಫಾಂಟಿಸ್ ಸೆರೆನೋಪಾ) ಹಾವಳಿ. ಇದನ್ನು ಹತೋಟಿಯಲ್ಲಿರಿಸಲು ಮಂಗಳೂರಿನ ಕದ್ರಿಯಲ್ಲಿ ಒಂದು ಪರೋಪಜೀವಿ ಉತ್ಪತ್ತಿ ಕೇಂದ್ರವು ಕಾರ್ಯವೆಸಗುತ್ತಿತ್ತು. ಅನಂತರ ಆ ಕೇಂದ್ರವನ್ನು ಉಳ್ಳಾಲದ ಗೇರು ಸಂಶೋಧನಾ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು. ಅಂತಹ ದೂರದ ಸ್ಥಳಕ್ಕೆ ವರ್ಗಾಯಿಸಿದ ಕಾರಣ ಕೃಷಿಕರು ಅಲ್ಲಿಗೆ ಭೇಟಿ ನೀಡುವುದು ಕಡಿಮೆಯಾಯಿತು. ಬಳಿಕ ಪರೋಪಜೀವಿ ಉತ್ಪತ್ತಿ ಯೋಜನೆಯು ಲಾಭದಾಯಕವಾಗಿ ನಡೆಯುತ್ತಿಲ್ಲವೆಂಬ ಕಾರಣ ಮುಂದೊಡ್ಡಿ ಆ ಕೇಂದ್ರವನ್ನು ಮುಚ್ಚಲಾಯಿತು.

* ಮತ್ತೊಂದು ತೋಟದ ಬೆಳೆ ಅಡಿಕೆ. ಅತಿ ಮಳೆಯಿಂದಾಗಿ ಇದಕ್ಕೆ ಕೊಳೆರೋಗದ ಭೀತಿ ಹೆಚ್ಚು. ಅಡಿಕೆ ಬೆಳೆಗಾರರು ಪ್ರತೀ ವರುಷ ತೀವ್ರ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ರೋಗದ ಹತೋಟಿಗಾಗಿ ಮರಗಳ ಎಲೆಭಾಗಗಳಿಗೆ ಬೋರ್ಡೋ ದ್ರಾವಣ ಸಿಂಪಡಿಸುವುದು ಹಾಗೂ ಎಡೆಬಿಡದೆ ಮಳೆ ಸುರಿದಾಗ ಸಿಂಪಡಿಸಿದ ದ್ರಾವಣ ತೊಳೆದು ಹೋಗುವುದು – ಇವು ಅಡಿಕೆ ಬೆಳೆಗಾರರ ತಲೆತಿನ್ನುವ ಸಮಸ್ಯೆಗಳು. ಈ ದಿಕ್ಕಿನಲ್ಲಿ ಹೊಸ ಹೊಸ ಪರಿಷ್ಕಾರಗಳು ಅಗತ್ಯ.

* ಭತ್ತದ ಕೃಷಿ ಮಾತ್ರ ಮಾಡಿಕೊಂಡಿರುವವರ ಸ್ಥಿತಿ ಶೋಚನೀಯ. ಒಂದು ಪ್ರಮುಖ ಬ್ಯಾಂಕು ನಡೆಸಿದ ಸಮೀಕ್ಷೆ (1981ರ ಮೊದಲು) ಪ್ರಕಾರ ಇಲ್ಲಿ ಒಂದು ಎಕ್ರೆ ಭತ್ತ ಕೃಷಿ ಮಾಡಿದರೆ ರೂ.370 ಲಾಭವಿದೆ. ಮೂರರಿಂದ ಐದು ಎಕ್ರೆಯಿದ್ದ ರೈತ ವರುಷಕ್ಕೆ ರೂ.1110 ರಿಂದ 1850 ಪಡೆಯುತ್ತಾನೆ. ಅಂದರೆ ತಿಂಗಳಿಗೆ ರೂ.90 ರಿಂದ 150 ಎಂದಾಯಿತು. ಇಷ್ಟು ಸಾಕೇ? ಇತರ ಕಡೆಗಳಲ್ಲಿ ಸ್ಥಳೀಯ ತಳಿಗಳಿಂದ 14 ಕ್ವಿಂಟಾಲ್ ಮತ್ತು ಅಧಿಕ ಇಳುವರಿ ತಳಿಯಿಂದ 22 ಕ್ವಿಂಟಾಲ್ ಪಡೆದರೆ, ಇಲ್ಲಿನ ರೈತ 8 ಮತ್ತು 16 ಕ್ವಿಂಟಾಲ್ ಮಾತ್ರ ಪಡೆಯುತ್ತಾನೆ. ಹೀಗಾದಲ್ಲಿ ಇನ್ನೂ ಕೆಲವು ವರುಷಗಳಲ್ಲಿ ಜಿಲ್ಲೆಯಲ್ಲಿ ಭತ್ತದ ಕೃಷಿ ತೀವ್ರ ನಷ್ಟದಾಯಕವಾಗುವ ಸಂಭವವಿದೆ. ಹಾಗಾದರೆ ಜಿಲ್ಲೆಯ ರೈತರು ಭತ್ತದ ಕೃಷಿ ತೊರೆಯಬೇಕೇ?

* ಈ ಪ್ರಶ್ನೆಗೆ ಸೂಕ್ತ ಉತ್ತರ ಕಂಡುಹಿಡಿಯುವ ಅಗತ್ಯವಿದೆ. ಕೃಷಿ ಇಲಾಖೆ ಮತ್ತು ಕೃಷಿ ವಿಶ್ವವಿದ್ಯಾಲಯ ಇದಕ್ಕೆ ಉತ್ತರಿಸಬೇಕು. ಭತ್ತದೊಂದಿಗೆ ಯಾವ ಮಿಶ್ರ ಬೆಳೆ ನಮ್ಮ ಜಿಲ್ಲೆಗೆ ಸೂಕ್ತ ಎಂಬುದನ್ನು ನಿರ್ಧರಿಸಬೇಕು. ಈ ಸಮಸ್ಯೆಯ ಬಗ್ಗೆ ಅವರನ್ನು ಕೇಳಿದರೆ ‘ಕೋಳಿ ಸಾಕಿರಿ, ಹಂದಿ ಸಾಕಿರಿ, ದನ ಸಾಕಿರಿ…’ ಎಂಬ ಸಿದ್ಧ ಉತ್ತರಗಳು ಮತ್ತು ಮಾಮೂಲಿ ಶಿಫಾರಸುಗಳು ಬೇಕಾದಷ್ಟಿವೆ. ಹಲವಾರು ಜನ ಇದರಲ್ಲಿ ತೊಡಗಿಸಿಕೊಂಡು ಕೈಸುಟ್ಟುಕೊಂಡಿದ್ದಾರೆ. ಯಾಕೆ ಹೀಗಾಯಿತು?

* ಅಮೇರಿಕಾದ ತಜ್ಞರೊಬ್ಬರ ಅಭಿಪ್ರಾಯದಂತೆ – ಅಮೇರಿಕಾದಲ್ಲಿ 150 ಎಕ್ರೆಯೊಳಗಿನ ಕೃಷಿ ಲಾಭದಾಯಕವಲ್ಲ. ಅಂತಹ ಕೃಷಿಕರು ದಿವಾಳಿಯಾಗುವುದು ಅನಿವಾರ್ಯ. ಹಾಗೆಯೇ ಇಲ್ಲಿಯೂ 3 ರಿಂದ 5 ಎಕ್ರೆಯೊಳಗಿನ ಹಿಡುವಳಿದಾರರಿಗೂ ಕೃಷಿ ನಷ್ಟದಾಯಕ ಉದ್ದಿಮೆಯೇ? ಅವರಿಗೆ ಒಳ್ಳೆಯ ಭವಿಷ್ಯವಿಲ್ಲವೇ? ಎಂಬುದನ್ನು ಪರಿಶೀಲಿಸಬೇಕಾಗಿದೆ.

(ಟಿಪ್ಪಣಿ: ಈಗ 45 ವರುಷಗಳ ನಂತರ (ಜೂನ್ 2026ರಲ್ಲಿ) ಹಿಂತಿರುಗಿ ನೋಡಿದಾಗ, ಶಿವಶಂಕರ ರಾಯರು ಆಗ ಎತ್ತಿದ್ದ ಬಹುಪಾಲು ಪ್ರಶ್ನೆಗಳಿಗೆ ಇನ್ನೂ ಉತ್ತರಗಳಿಲ್ಲ ಎಂದು ವಿಷಾದದಿಂದ ಹೇಳಬೇಕಾಗಿದೆ. ಇದು ಕೃಷಿ ಸಂಶೋಧನೆಗೆ ನಮ್ಮ ದೇಶದಲ್ಲಿ ನೀಡುವ ಪ್ರಾಮುಖ್ಯತೆ ಮತ್ತು ಕೃಷಿಕರ ಸಮಸ್ಯೆಗಳಿಗೆ ಸರಕಾರ ಹಾಗೂ ವಿಶ್ವವಿದ್ಯಾಲಯಗಳ/ ಸಂಶೋಧನಾ ಕೇಂದ್ರಗಳ ಸ್ಪಂದನೆಯ ಬಗ್ಗೆ ಬಹಳಷ್ಟು ಸಂಗತಿಗಳನ್ನು ಬೆರಳೆತ್ತಿ ತೋರಿಸುತ್ತದೆ, ಅಲ್ಲವೇ? ಈ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೃಷಿರಂಗದ ಎರಡು ಪ್ರಮುಖ ಬದಲಾವಣೆಗಳು: (1) ಜಿಲ್ಲೆಯಲ್ಲಿ ವರುಷದಿಂದ ವರುಷಕ್ಕೆ ಭತ್ತದ ಕೃಷಿಯ ಸಮಸ್ಯೆಗಳು ಬಿಗಡಾಯಿಸಿದ ಕಾರಣ ಈಗ ಭತ್ತದ ಕೃಷಿ ಪ್ರದೇಶದ ವಿಸ್ತೀರ್ಣ ಆಗಿನ ವಿಸ್ತೀರ್ಣದ ಅರ್ಧಕ್ಕಿಂತ ಕಡಿಮೆ. ಭತ್ತದ ಗದ್ದೆಗಳ ಉಳುಮೆಯ, ನೇಜಿ ನೆಡುವ ಮತ್ತು ಭತ್ತದ ಕೊಯ್ಲಿನ ಕಾರ್ಮಿಕರ ಕೊರತೆಯ ಸಮಸ್ಯೆಗಳಿಗೆ ಯಂತ್ರಗಳನ್ನು ಬಳಸುವ ಮೂಲಕ ಕೆಲವು ಪ್ರದೇಶಗಳಲ್ಲಿ ಪರಿಹಾರ ಕಂಡುಕೊಳ್ಳಲಾಗಿದೆ.

(2) ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆ ಕೃಷಿ ವ್ಯಾಪಕವಾಗಿ ಹಬ್ಬಿದೆ. ಯಾಕೆಂದರೆ ಕೆಲವು ವರುಷಗಳ ಬೆಲೆ ಕುಸಿತದ ಹೊರತಾಗಿ ಅಡಿಕೆ ಕೃಷಿ ಲಾಭದಾಯಕವಾಗಿ ಮುಂದುವರಿದಿದೆ. ಅದಲ್ಲದೆ, ಅಡಿಕೆ ಕೊಯ್ಲು ಮತ್ತು ಅಡಿಕೆ ಮರಗಳ ಕೊಳೆರೋಗ ನಿಯಂತ್ರಣಕ್ಕಾಗಿ ರಾಸಾಯನಿಕ ದ್ರಾವಣಗಳ ಸಿಂಪಡಣೆಯ ಸಮಸ್ಯೆಗೆ ಕಾರ್ಬನ್ ಫೈಬರ್ ದೋಟಿಗಳ ಬಳಕೆ ಪರಿಹಾರ ಒದಗಿಸಿದೆ. ಇದು ಕೃಷಿಕರೇ ಆವಿಷ್ಕರಿಸಿದ ಪರಿಹಾರ ಎಂಬುದು ಗಮನಾರ್ಹ.)

ಫೋಟೋ: ಮಹಿಳೆಯರಿಂದ ಭತ್ತದ ಕೊಯ್ಲು …. ಕೃಪೆ: ಪೆಕ್ಸೆಲ್ಸ್ ವೆಬ್-ಸೈಟ್

ಆಕರ ಪುಸ್ತಕ: ಅಡ್ಡೂರು ಶಿವಶಂಕರರಾಯರ ಎಂಬತ್ತರ ಕೊಯ್ಲಿನ ಕಾಳುಗಳು

ಲೇಖಕರು: ಅಡ್ಡೂರು ಕೃಷ್ಣರಾವ್, ನಾ. ಕಾರಂತ ಪೆರಾಜೆ