ಕೃಷಿ ವಿಜ್ಞಾನಿ ಮತ್ತು ಅಧಿಕಾರಿಗಳೊ೦ದಿಗೆ ಮುಖಾಮುಖಿ

ಸರಕಾರೀ ಇಲಾಖೆಗಳು ಪ್ರಚಾರ ಮಾಡುವ ಹಲವಾರು ವಿಚಾರಗಳಲ್ಲಿ ಗೊಂದಲವಿದೆ. ರೈತರಿಗದು ಅರ್ಥವಾಗುತ್ತಿಲ್ಲ. ಅಧಿಕಾರಿಗಳೊಡನೆ ಪ್ರಶ್ನಿಸಿದರೆ ಸರಿಯಾದ ಉತ್ತರವಿಲ್ಲ. ಉದಾಹರಣೆಗೆ, ‘ಬದಲಾದ ಪರಿಸ್ಥಿತಿಗೆ ತಕ್ಕಂತೆ ಲಾಭದಾಯಕವಾದ ಬೆಳೆಗಳನ್ನು ಬೆಳೆಸಿ, ಖರ್ಚು ಕಡಿಮೆ ಮಾಡಿ, ಇದಕ್ಕೆ ಯಾಂತ್ರೀಕರಣ ಒಂದೇ ಪರಿಹಾರ’ ಎನ್ನಲಾಗುತ್ತಿದೆ. ಯಾಂತ್ರೀಕರಣ ಮಾಡಬೇಕಾದರೆ ಬಂಡವಾಳ ಬೇಕು. ಸಣ್ಣ ರೈತರಿಗೆ ಸಾಧ್ಯವಾದೀತೇ? ಐದು ಎಕ್ರೆಯೊಳಗಿನ ರೈತನಿಗೆ ಇದು ಕನಸಿನ ಗಂಟು.

ನನ್ನ ಕೃಷಿ ಜೀವನದಲ್ಲಿ ನಾನು ಹಲವಾರು ಅಧಿಕಾರಿಗಳನ್ನು, ವಿಜ್ಞಾನಿಗಳನ್ನು ಸಂಪರ್ಕಿಸಿದ್ದೇನೆ. ಒಮ್ಮೆ ‘ಇಂತಹ ತಳಿಗಳನ್ನು ಬೆಳೆಸಿ’ ಎಂದು ಶಿಫಾರಸು ಮಾಡಿದ ಅಧಿಕಾರಿಗಳೇ ಮುಂದೆ ‘ಅದು ಒಳ್ಳೆಯದಲ್ಲ’ ಎಂದ ಅನೇಕ ಪ್ರಸಂಗಗಳಿವೆ. ಹಾಗಾಗಿ ಆಮೂಲಾಗ್ರ ಚಿಂತನೆ ಮಾಡದೆ ಇಲಾಖೆಗಳ ಯಾವ ಶಿಫಾರಸನ್ನೂ ಒಪ್ಪಿಕೊಳ್ಳಬಾರದು.

ಒಮ್ಮೆ GMR-2 ಭತ್ತದ ತಳಿಯನ್ನು ವಿಕ್ರಂ ಎಂಬ ಹೆಸರಿನಲ್ಲಿ ಇಲಾಖೆ ವಿತರಿಸಿತು. ಇದನ್ನು ಬೆಳೆದು ಫಸಲು ಕೈಗೆ ಬಂದಾಗ ಅದರ ಭತ್ತದಲ್ಲಿ ಕೆಂಪು ಕಲೆಯಿತ್ತು. ಹಾಗಾಗಿ ಮಾರಾಟಕ್ಕೆ ತೊಂದರೆಯಾಯಿತು. ಗಿರಾಕಿಯೇ ಇಲ್ಲ. ತಿನ್ನಲೂ ಭಯವಾಗುತ್ತಿತ್ತು. ಒಂದು ಸಮಾವೇಶದಲ್ಲಿ ಈ ಕುರಿತು ಕೇಳಿದೆ. ಅಲ್ಲಿಗೆ ಬಂದ ತಜ್ಞರು ಅದು ಆ ತಳಿಯ ಗುಣವೆ೦ದು ಹೇಳಿ ಜಾರಿಕೊಂಡರು. ಮುಂದಿನ ವರುಷ ಇಲಾಖೆ ಅದರ ಸೊಲ್ಲು ಎತ್ತದೆ ಅದು ಸದ್ದಿಲ್ಲದೆ ಮಾಯವಾಯಿತು!

ಅನಂತರ GMR 25, GMR 26, ‘ಫಲ್ಗುಣ’ ಮತ್ತು ‘ಶಕ್ತಿ’ ಎಂಬ ಕಣೆನಿರೋಧಕ ತಳಿಗಳ ಬಿಡುಗಡೆ ಮಾಡಲಾಯಿತು. ಆದರೆ ಕೃಷಿ ಇಲಾಖೆಯವರು ನನಗೆ GMR-32 ತಳಿಯ ಬೀಜವೆಂದು ಕೊಟ್ಟು ಅದನ್ನು ‘ಶಕ್ತಿ’ ಎಂದು ಹೇಳಿದ್ದರು. ಇನ್ನೊಬ್ಬರಿಗೆ ನಿಜವಾದ ‘ಶಕ್ತಿ’ ತಳಿಯ ಬೀಜ ನೀಡಿದ್ದರು. ಇವೆರಡನ್ನೂ ಕೊಂಡುಹೋಗಿ ಅಧಿಕಾರಿಗಳಲ್ಲಿ ತೋರಿಸಿದಾಗ ನನಗೆ ಕೊಟ್ಟಿದ್ದ ತಳಿ ‘ಶಕ್ತಿ’ ಅಲ್ಲ ಎಂದರು. ಆದರೆ ನಾನು ಸ್ಥಳೀಯವಾಗಿ ಕೆಲವರಿಗೆ ಆ ಭತ್ತದ ಬೀಜವನ್ನು ಆಗಲೇ ಕೊಟ್ಟಾಗಿತ್ತು. ಇದಕ್ಕೆ ಯಾರು ಜವಾಬ್ದಾರರು?

ಕೃಷಿ ಇಲಾಖೆ ಹಿಂದಿನ ತಳಿಗಳಿಗಿಂತ ಉತ್ತಮವಾದ ರುಚಿಯ ಯಾವ ಹೊಸ ತಳಿಯನ್ನೂ ಬಿಡುಗಡೆ ಮಾಡಲಿಲ್ಲ. PTB-20 ಕೂಡಾ ನಮ್ಮ ಹಿಂದಿನ ಅತಿಕ್ರಾಯ (MGL-6)ದ ಬದಲಿ ತಳಿ. ಅತಿಕ್ರಾಯದ ರುಚಿಯು ಉಳಿದ ಯಾವ ತಳಿಯ ಅಕ್ಕಿಗೂ ಬರಲಿಲ್ಲ. ಆದರೆ ಅದರ ಉತ್ಪತ್ತಿ ಕಡಿಮೆ. PTB-20 ಅದಕ್ಕಿಂತ ಹೆಚ್ಚಿಗೆ ಉತ್ಪತ್ತಿ ಕೊಡುತ್ತಿತ್ತು. ಇದನ್ನು ‘ಎಲ್ಯ ಅತಿಕಾರೆ’ (ಸಣ್ಣ ಅತಿಕ್ರಾಯ) ಎಂದು ಜನರು ಕರೆಯುತ್ತಿದ್ದರು.

ಕಂಕನಾಡಿ ಸಂಶೋಧನಾ ಕೇಂದ್ರದಿಂದ ಕಣೆ ನಿರೋಧಕ ‘ಮಹಾವೀರ’ ಎಂಬ ಕೆಂಪು ತಳಿಯ ಭತ್ತ ಬಿಡುಗಡೆಯಾಯಿತು. ಅದು ಒಂದನೇ ಬೆಳೆಗೆ ಮಾತ್ರ ಸೂಕ್ತ. ಎರಡನೇ ಮತ್ತು ಮೂರನೇ ಬೆಳೆಗೆ ಅದನ್ನು ಬೆಳೆಸಿದರೆ ರೋಗ ಬರುತ್ತಿತ್ತು. ಆದರೆ ತಳಿ ಬಿಡುಗಡೆ ಮಾಡಿದಾಗ ಈ ಬಗ್ಗೆ ಮಾಹಿತಿ ನೀಡಿರಲಿಲ್ಲ.

ಒಮ್ಮೆ IR-20 ರ ಬಿಡುಗಡೆ ಸಮಾರಂಭದಲ್ಲಿ ‘ಅದರ ಅಕ್ಕಿ ಸಪೂರ ಉದ್ದ. ಅದಕ್ಕೆ ಬೆಲೆ ಹೆಚ್ಚು, ಲಾಭದಾಯಕ’ ಎಂದೆಲ್ಲಾ ಪ್ರಚಾರ ಮಾಡಲಾಯಿತು. ನಾನು ಬೆಳೆಸಿದೆ. ಭತ್ತದಲ್ಲಿ ಸ್ವಲ್ಪ ಕಂದು ಚುಕ್ಕಿ ಹೆಚ್ಚಾಗಿಯೇ ಇತ್ತು. ಮೂರನೇ (ಬೇಸಿಗೆ) ಬೆಳೆಗೆ ಅದು ಇನ್ನಷ್ಟು ಹೆಚ್ಚಾಗಿತ್ತು. ಇಲಾಖೆಯಲ್ಲಿ ಕೇಳಿದರೆ ‘ನಾವು ಬೇಸಗೆ ಬೆಳೆಗೆ ಅದನ್ನು ಶಿಫಾರಸು ಮಾಡಿಲ್ಲ’ ವೆಂಬ ಉತ್ತರ.

ಕಂಕನಾಡಿ ಭತ್ತ ಸಂಶೋಧನಾ ಕ್ಷೇತ್ರದಲ್ಲಿ ಹನುಮಂತರಾವ್ ಎಂಬ ಅಧಿಕಾರಿಯಿದ್ದರು. ಆಗ ನಾನು ನನ್ನ ಗದ್ದೆಯಲ್ಲಿ ಜಪಾನ್ ಕೃಷಿ ಪದ್ದತಿ ಅಳವಡಿಸಿ PTB- 10 ಎ೦ಬ ಭತ್ತದ ತಳಿ ಬೆಳೆಸಿದ್ದೆ. ಅದು ಅಲ್ಪಾವಧಿ ತಳಿ. ಗದ್ದೆಯಲ್ಲಿ ಬೆಳೆ ಚೆನ್ನಾಗಿ ಬರಲಿಲ್ಲ. ರಾಯರನ್ನು ಪ್ರಶ್ನಿಸಿದೆ. ಅವರು ‘ಭತ್ತದ ನೇಜಿಯನ್ನು ಹತ್ತಿರ ಹತ್ತಿರ ನೆಡಬೇಕಿತ್ತು’ ಎಂಬ ಪುಕ್ಕಟೆ ಸಲಹೆ ನೀಡಿ ಜಾಗ ಖಾಲಿ ಮಾಡಿದರು!

ತೋಟಗಾರಿಕಾ ಬೆಳೆಗಳ ಬಗ್ಗೆ ಪ್ರಶ್ನೆಗಳು, ಗೊಂದಲಗಳು

ವಿಟ್ಲ ಸಿಪಿಸಿ‌ಆರ್‌ಐ ಯಲ್ಲಿ ಒಂದು ಸಮಾವೇಶ ನಡೆದಿತ್ತು. ಬೆ೦ಗಳೂರಿನಿಂದ ಎಂ.ವಿ. ರಾಜಶೇಖರ್ ಮತ್ತು ನಿವೃತ್ತ ಉಪಕುಲಪತಿಗಳಾದ ಡಾ.ಕೆ.ಸಿ.ನಾಯಕ್ ಬ೦ದಿದ್ದರು. ದಕ್ಷಿಣ ಕನ್ನಡದಲ್ಲಿ ತರಕಾರಿ ಮತ್ತು ತೋಟಗಾರಿಕಾ ಬೆಳೆಗಳ ಕೃಷಿ ಮತ್ತು ಮಾರುಕಟ್ಟೆ ವ್ಯವಸ್ಥೆ ಬಗ್ಗೆ ಅಂದು ಚರ್ಚಿಸಲಾಯಿತು. ಒಂದು ಲಾರಿ ಗೊತ್ತು ಮಾಡಿ ಮಂಗಳೂರಿಗೆ ಹೋಗುವ ಮಾರ್ಗಗಳಲ್ಲಿ ದಾರಿಯುದ್ದಕ್ಕೂ ಬೆಳೆಗಾರರಿಂದ ತರಕಾರಿ ಖರೀದಿಸಿ ಒಳ್ಳೆಯ ಮಾರಾಟ ವ್ಯವಸ್ಥೆಯನ್ನು ರೂಪಿಸುವ ಯೋಜನೆಯನ್ನು ಅಲ್ಲಿ ಮಾಡಲಾಯಿತು. ಆದರೆ ನಾವು ಅದಕ್ಕೆ ಕಾದದ್ದೇ ಬಂತು. ಆ ಯೋಜನೆ ಕಡತದಿಂದ ಮೇಲೇಳಲೇ ಇಲ್ಲ!

ಇದೇ ರೀತಿ ಕಾಸರಗೋಡಿನ ಸಿಪಿಸಿ‌ಆರ್‌ಐಯಲ್ಲಿಯೂ ಒಂದು ಸಮಾವೇಶ ನಡೆದಿತ್ತು. ಅದಕ್ಕಿಂತ ಮುಂಚೆ ಪ್ರಕಟವಾಗಿದ್ದ ತೆಂಗು ಬೆಳೆ ತಜ್ಞ ತಂಪನ್ ಎಂಬವರ ಪುಸ್ತಕದಲ್ಲಿ ಹೀಗೆ ಬರೆದಿದ್ದರು – “T.X.D ಹೈಬ್ರಿಡ್ ತಳಿಯ ಸಸಿ ಪಡೆಯಲು ಕಷ್ಟವಾದರೆ, ಆ ತಳಿಯ ಮರದ ಕಾಯಿಗಳಿಂದಲೇ ಸಸಿ ಮಾಡಬಹುದು. ಇದನ್ನು ಬೆಳೆಯುವುದು ಸುಲಭ.” ಅಷ್ಟರ ವರೆಗೆ ಹೈಬ್ರಿಡ್ ಸಸಿ ಮಾಡಬೇಕೆಂದರೆ ಹೆಚ್ಚು ಶ್ರಮ ಪಡಬೇಕು ಎಂಬ ಕಲ್ಪನೆ ನನ್ನಲ್ಲಿತ್ತು. ನಾನು ಈ ವಿಚಾರವನ್ನು ಸಮಾವೇಶದಲ್ಲಿ ನೆರೆದ ವಿಜ್ಞಾನಿಗಳ ಮುಂದೆ ಎತ್ತಿದಾಗ ಕೂಡಲೇ ಅದಕ್ಕೆ ವಿರೋಧ ಬಂತು. ಹಾಗೆ ಮಾಡಿದರೆ ಸಾಚಾ ಸಸಿ ಸಿಕ್ಕುವುದಿಲ್ಲವೆಂಬ ಅಭಿಪ್ರಾಯ ಅವರದು.

ಕಾಸರಗೋಡು ಸಿಪ್‌ಪಿಸಿ‌ಆರ್‌ಐ ಕ್ಷೇತ್ರದಲ್ಲಿ ಸ್ಥಳೀಯ ತಳಿಗಳನ್ನು ನೆಟ್ಟಿದ್ದರು. ಇದರಲ್ಲಿ ಅಂಡಮಾನ್ ಜೊಯಂಟ್, ಲಕ್ಷದ್ವೀಪ, ಫಿಲಿಪೈನ್ಸ್, ಜಾವಾ, ಕಪ್ಪಡಂ, ಕೈತ್ತತಾಳಿ, ಗಂಗಬೊಂಡಂ ಮುಂತಾದ ತಳಿಗಳು ಇದ್ದುವು. ಇದರಿಂದಾಗಿ ನನಗೆ ಬೇಕಾದ ತಳಿಗಳನ್ನು ಅಲ್ಲಿಂದ ಆರಿಸಿ ತಂದು ನನ್ನ ತೋಟದಲ್ಲಿ ಬೆಳೆಸಲು ಅನುಕೂಲವಾಯಿತು. ಅಲ್ಲಿ ಬೇರೆ ಬೇರೆ ಕಡೆಗಳಲ್ಲಿ ತೆಂಗಿನ ಮರಗಳ ಮಧ್ಯೆ ಹಲವು ಹಣ್ಣಿನ ಗಿಡಗಳನ್ನು ಎಡೆಸಸಿಗಳಾಗಿ ಬೆಳೆಸಲಾಗಿತ್ತು. ಆದರೆ ಅವೆಲ್ಲವೂ ಸೊರಗಿದ್ದವು. ತೆ೦ಗಿನ ಎಡೆಸಸಿಗಳಾಗಿ ಕೊಕ್ಕೊ, ಅನಾನಸು, ಕರಿಮೆಣಸು ಸೂಕ್ತವೆ೦ದು ಅವರ ಶಿಫಾರಸು. ನನ್ನ ತೋಟದಲ್ಲಿ ನಾನು ಅವನ್ನು ಬೆಳೆಸಿದೆ.

ಪುತ್ತೂರಿನ ಕೆಮ್ಮಿಂಜೆಯಲ್ಲಿ ಗೇರು ಸಂಶೋಧನಾ ಕೇಂದ್ರ ಸ್ಥಾಪನೆಯಾಯಿತು. ಉಳ್ಳಾಲದಲ್ಲಿದ್ದ ಗೇರು ಸಂಶೋಧನಾ ಕೇಂದ್ರದ ಹಾಗೆ ಅಲ್ಲಿಯೂ ಗೇರು ಸಸಿಗಳನ್ನು ಅಭಿವೃದ್ಢಿ ಮಾಡಲಾಯಿತು. ಉಳ್ಳಾಲದಲ್ಲಿ ಉಳ್ಳಾಲ ತಳಿಗಳು ಮಾತ್ರ ಸಿಗುತ್ತಿದ್ದರೆ, ಕೆಮ್ಮಿಂಜೆಯಲ್ಲಿ ವೆಂಗುರ್ಲ ಮುಂತಾದ ವಿಶಿಷ್ಟ ತಳಿಗಳನ್ನು ಆಸಕ್ತರಿಗೆ ವಿತರಿಸುತ್ತಿದ್ದರು. ಉಳ್ಳಾಲ ಕೇಂದ್ರದ ಒಂದು ಮರ ‘ಉಳ್ಳಾಲ 1’ ತಳಿಯ ಮೂಲವಾಗಿತ್ತು. ಅದು ವರುಷಕ್ಕೆ ಸುಮಾರು ತೊಂಭತ್ತು ಕಿಲೋ ಗೇರುಬೀಜ ನೀಡುತ್ತಿತ್ತಂತೆ. ಕೆಮ್ಮಿಂಜೆ ಮತ್ತು ಉಳ್ಳಾಲ ಕೇಂದ್ರಗಳ ಸಂಪರ್ಕ ನನಗೆ ಜಾಸ್ತಿ. ಕೆಮ್ಮಿಂಜೆಯ ವಾರ್ಷಿಕ ಸಮಾವೇಶಗಳಿಗೆ ನನ್ನನ್ನು ಅಹ್ವಾನಿಸಿದಾಗ, ಭಾಗವಹಿಸಿ ನನ್ನ ಸಂಶಯಗಳನ್ನು ಪರಿಹರಿಸಿಕೊಳ್ಳುತ್ತಿದ್ದೆ. ಬಹ್ಮಾವರ, ಕಂಕನಾಡಿ, ಉಳ್ಳಾಲ ಕೃಷಿ ಸಂಶೋಧನಾ ಕೇಂದ್ರಗಳಲ್ಲಿ ಆಗಾಗ್ಗೆ ಕ್ಷೇತ್ರೋತ್ಸವ ನಡೆಯುತ್ತಿತ್ತು. ಅವುಗಳಿಗೆ ನಾನು ಹಾಜರಾಗುವುದಲ್ಲದೆ ಇತರರನ್ನೂ ಪ್ರೋತ್ಸಾಹಿಸಿ ಕರೆದು ತರುತಿದ್ದೆ.

ಕೋಟೇಶ್ವರ, ಸಾಣೂರು, ಬೆಳ್ತಂಗಡಿಯಲ್ಲಿರುವ ಕೃಷಿ ಬೀಜೋತ್ಪಾದನಾ ಫಾರ್ಮ್‌ಗಳಿಗೂ ಹೋಗುತ್ತಿದ್ದೆ. ಸಾಣೂರಿನಿಂದ ಸಿ.ಓ. 29 ಎಂಬ ತಳಿಯನ್ನು ತಂದು ಊರಿನಲ್ಲಿ ಬೆಳೆಸಿದೆ. ಕಂಕನಾಡಿ ಫಾರ್ಮ್‌ನಲ್ಲಿ ಮೊದಲ ಬಾರಿಗೆ ಪವರ್ ಟಿಲ್ಲರ್ ಪ್ರಯೋಗ ನಡೆಸಿದಾಗ ಅದನ್ನು ಕಾಣಲು ನನಗೆ ಪರಿಚಯವಿದ್ದ ರೈತರನ್ನೆಲ್ಲಾ ಕರೆದುಕೊ೦ಡು ಹೋಗಿದ್ದೆ.

ಬ್ರಹ್ಮಾವರದಲ್ಲಿ ಕೃಷಿ ಸಂಶೋಧನಾ ಕೇಂದ್ರ ಸ್ಥಾಪಿಸುವ ಮೊದಲು, ಆ ಬಗ್ಗೆ ಒಂದು ವಿಚಾರಗೋಷ್ಠಿ ಏರ್ಪಡಿಸಿದ್ದರು. ಅದಕ್ಕೆ ಕೃಷಿ ವಿಜ್ಞಾನಿಗಳು, ಅಧಿಕಾರಿಗಳು ಮತ್ತು ಕೆಲವು ಕೃಷಿಕರನ್ನು ಆಹ್ವಾನಿಸಿದ್ದರು. ಗೋಷ್ಠಿಯಲ್ಲಿ ಚರ್ಚೆಗಾಗಿ ‘ಯುಗಪುರುಷ’ ಮಾಸಿಕದ 1981ರ ಸ್ವಾತಂತ್ರ್ಯೋತ್ಸವ ವಿಶೇಷಾಂಕದಲ್ಲಿ ಪ್ರಕಟವಾದ ನನ್ನ ಲೇಖನವನ್ನೂ ಬಳಸಿಕೊಳ್ಳಲಾಗಿತ್ತು ಎಂದು ಹೇಳಿದರು. (ಭಾಗ 2ರಲ್ಲಿ ಓದಿ.)

ನಾನು ಕೃಷಿಗಿಳಿದಾಗಿನಿಂದ ಕೃಷಿ ವಿಚಾರ ವಿನಿಮಯಕ್ಕಾಗಿ ಕೃಷಿ ಇಲಾಖೆಯ ಖಾಯಂ ಸಂದರ್ಶಕನಾಗಿದ್ದೆ. ಕೃಷಿ ಇಲಾಖೆಯ ಅಧಿಕಾರಿಗಳೊಡನೆ, ಕೃಷಿ ಸಂಶೋಧನಾ ಕ್ಷೇತ್ರದ ವಿಜ್ಞಾನಿಗಳೊಡನೆ ನನ್ನ ಸಂಬಂಧ ಚೆನ್ನಾಗಿತ್ತು. ನಾನು ಓದಿದ ಪುಸ್ತಕಗಳಲ್ಲಿ ಮತ್ತು ಕೃಷಿ ಪತ್ರಿಕೆಗಳಲ್ಲಿ ಬಂದ ವಿಚಾರಗಳ ಬಗ್ಗೆ ಅವರೊಂದಿಗೆ ಚರ್ಚಿಸುತ್ತಿದ್ದೆ.

ಕೃಷಿ ವಿಚಾರಗೋಷ್ಠಿಗಳಿಗೆ ಬೆಂಗಳೂರಿನ ಕೃಷಿ ವಿಜ್ಞಾನಿಗಳು ಬಂದಾಗ ನಾನು ಹಾಜರ್. ಅವರೊಂದಿಗೆ ಮುಕ್ತವಾಗಿ ಮಾತನಾಡುವುದರಿಂದ ನನ್ನ ಕೃಷಿ ಜ್ಞಾನವನ್ನು ಹೆಚ್ಚಿಸಿಕೊ೦ಡಿದ್ದೇನೆ.

ಈ ರೀತಿಯಲ್ಲಿ ಜಿಲ್ಲೆಯ ಕೃಷಿ ಸಂಶೋಧನಾ ಕೇಂದ್ರಗಳು ಮತ್ತು ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ಸಂಪರ್ಕ ಬೆಳೆಸಿ ಅವರ ಕೃಷಿಕಪರ ಸಲಹೆಗಳನ್ನು ಜನಪ್ರಿಯಗೊಳಿಸಲು ನಾನು ಮಾಡಿದ ಪ್ರಯತ್ನಗಳು ನನಗೆ ಆತ್ಮತೃಪ್ತಿ ತಂದಿವೆ.

ಪ್ರಾತಿನಿಧಿಕ ಫೋಟೋ: ಸರಕಾರಿ ಅಧಿಕಾರಿಗಳೊಂದಿಗೆ ರೈತರ ಸಭೆ…. ಕೃಪೆ: ಗೆಟ್ಟಿ ಇಮೇಜಸ್ ವೆಬ್-ಸೈಟ್

ಆಕರ ಪುಸ್ತಕ: ಅಡ್ಡೂರು ಶಿವಶಂಕರರಾಯರ ಎಂಬತ್ತರ ಕೊಯ್ಲಿನ ಕಾಳುಗಳು

ಲೇಖಕರು: ಅಡ್ಡೂರು ಕೃಷ್ಣರಾವ್, ನಾ. ಕಾರಂತ ಪೆರಾಜೆ