ಭತ್ತದ ಬೇಸಾಯಕ್ಕೆ ಸುಣ್ಣದ ಶಿಫಾರಸಿನ ಬಣ್ಣ ಬಯಲು
ನಾನು ನನ್ನ ಗದ್ದೆಯ ಮಣ್ಣು ಪರೀಕ್ಷೆಗಾಗಿ ಮಣ್ಣಿನ ಮಾದರಿಯನ್ನು ತೆಗೆದು ಬೆಂಗಳೂರಿನ ಹೆಬ್ಬಾಳದ ಪರೀಕ್ಷಾ ಕೇ೦ದ್ರಕ್ಕೆ ಕಳುಹಿಸಿದ್ದೆ. ಕೆಲವು ವಾರಗಳ ನ೦ತರ ವರದಿ ಬಂತು. ಒಂದು ಎಕ್ರೆಗೆ ಎರಡು ಟನ್ನಂತೆ ಸುಣ್ಣ ಹಾಕಬೇಕೆಂದು ಶಿಫಾರಸು ಮಾಡಲಾಗಿತ್ತು. ಕೃಷಿ ಅಧಿಕಾರಿ ಮುದ್ದಣ್ಣ ಶೆಟ್ಟರಿಗೆ ವರದಿ ತೋರಿಸಿದೆ. ಆಗ ನಯಂಪಳ್ಳೀ ರಾಮರಾಯರೂ ಜೊತೆಗಿದ್ದರು. ಅವರಿಬ್ಬರಿಗೂ ಈ ವರದಿ ವಿಚಿತ್ರವಾಗಿ ತೋರಿತು.
ಮುಂದೊಮ್ಮೆ ಮಂಗಳೂರಿನಲ್ಲಿ ಮಣ್ಣು ಪರೀಕ್ಷಾ ಕೇಂದ್ರ ಸ್ಥಾಪನೆಯಾಯಿತು. ನಾನು ಆಗಾಗ ಮಣ್ಣಿನ ಮಾದರಿಗಳನ್ನು ಕೊಂಡೊಯ್ದು ಪರೀಕ್ಷೆ ಮಾಡಿದಾಗ, ಪ್ರತೀ ಸಲವೂ ಮಣ್ಣಿನಲ್ಲಿ ಸುಣ್ಣದ ಅಂಶ ಕಡಿಮೆ ಇದೆಯೆಂದೂ, ಸುಣ್ಣ ಹಾಕಬೇಕೆಂದೂ ವರದಿಯಲ್ಲಿ ಹೇಳಲಾಗುತ್ತಿತ್ತು. ಆ ವರದಿಗಳೇನಿದ್ದರೂ ನಾನು ನನ್ನ ತೋಟಕ್ಕೆ ಸುಣ್ಣ ಹಾಕಿದ್ದು ಕಡಿಮೆ. ಆದರೆ ಎಷ್ಟೊ ಕೃಷಿಕರು ಮಣ್ಣನ್ನು ಪರೀಕ್ಷೆ ಮಾಡಲು ಮಾದರಿ ಕಳುಹಿಸುವುದೇ ಇಲ್ಲ. ಅವರ ತೋಟ ನನ್ನ ತೋಟಕ್ಕಿಂತ ಚೆನ್ನಾಗಿ ಇದೆ. ಇದೇನು?
ಮಣ್ಣಿನ ಫಲವತ್ತತೆ ಹಾಳಾಗುತ್ತಿರುವುದು ಸುಣ್ಣದ ಅಂಶ ಕಡಿಮೆಯಾದ್ದರಿಂದ ಎಂಬ ಬೊಬ್ಬೆಯ ಪರಿಣಾಮವಾಗಿ ಹಲವು ಸುಣ್ಣ ವ್ಯಾಪಾರಿಗಳು ದಿಢೀರನೇ ತಲೆಯೆತ್ತಿದರು.! ಅವರಲ್ಲೊಬ್ಬ ಸುಣ್ಣಕ್ಕೆ ಮರಳು ಸೇರಿಸಿ ಮಾರಾಟ ಮಾಡಿ ಕಿಸೆ ತುಂಬಿಸಿಕೊಂಡ!
ಅಂತೂ ಅರ್ಧ ಎಕ್ರೆಗೆ ವರದಿಯಲ್ಲಿ ತಿಳಿಸಿದಷ್ಟು ಸುಣ್ಣ ಹಾಕಿದೆ. “ಸುಣ್ಣ ಹಾಕಿದ್ದರಿಂದ ಎಷ್ಟು ಬೆಳೆ ಜಾಸ್ತಿಯಾಯಿತು” ಎಂಬ ಪರಿಶೀಲನೆಗೆ ಬೆಳೆ ಕೊಯಿಲು ಆದ ಬಳಿಕ ಗ್ರಾಮ ಸೇವಕರು ಬಂದರು. ನಾನು ಬರೆದಿಟ್ಟ ಲೆಕ್ಕವನ್ನು ನೋಡುವಾಗ ಹೆಚ್ಚಾದುದು ಬಿಡಿ, ಕಳೆದ ವರುಷಕ್ಕಿಂತ ಕಡಿಮೆ! ಇದು ಸುಣ್ಣದ ದೋಷವೋ? ಅಥವಾ ಹಾಕಿದ ಸುಣ್ಣ ಮಳೆಯಲ್ಲಿ ಕೊಚ್ಚಿ ಹೋಯಿತೇ? ತಿಳಿಯದು. ನಂತರ ನಾನು ಗದ್ದೆಗೆ ಸುಣ್ಣ ಹಾಕಲಿಲ್ಲ.
ಡಿಸಿಸಿ ಬ್ಯಾಂಕ್ನಲ್ಲಿ ಜರಗಿದ ಸಭೆಯೊಂದರಲ್ಲಿ, ‘ಸುಣ್ಣ ಹಾಕದಿದ್ದರೆ ಸರಿಯಾಗಿ ಬೆಳೆ ಬರುವುದಿಲ್ಲ, ಎಕರೆಗೆ 2-3 ಟನ್ ಸುಣ್ಣ ಹಾಕಲೇಬೇಕು’ ಎಂದು ವಿಜ್ಞಾನಿಯೊಬ್ಬರು ಘೋಷಿಸಿದರು! ನನ್ನ ಸುಣ್ಣದ ಪ್ರಯೋಗದ ಅನುಭವದ ಅಧಾರದಲ್ಲಿ ಅವರ ಮಾತನ್ನು ಖಂಡಿಸಿದೆ. ಆಗ ಅಲ್ಲೇ ಉಪಸ್ಥಿತರಿದ್ದ ರಾಜ್ಯದ ತೋಟಗಾರಿಕಾ ಜಂಟಿ ನಿರ್ದೇಶಕರು, ‘ಪ್ರತೀ ಬೆಳೆಗೆ ಸುಮಾರು 220 ಕಿಲೋ ಹಾಕಿದರೆ ಸಾಕು’ ಎಂದು ಅಭಿಪ್ರಾಯ ಪಟ್ಟರು. ಅವರ ಮಾತನ್ನು ವಿಜ್ಞಾನಿಗಳು ಪುರಸ್ಕರಿಸಲಿಲ್ಲ. ಏನೋ ಹೇಳಿ ಅವರ ಬಾಯಿ ಮುಚ್ಚಿಸಿದರು!
ಕೆಲವು ವರುಷಗಳ ನಂತರ ಕೃಷಿ ವಿಶ್ವವಿದ್ಯಾಲಯದ ಸುಧಾರಿತ ಬೇಸಾಯ ಕ್ರಮಗಳು ಎಂಬ ವಾರ್ಷಿಕ ಪ್ರಕಟಣೆಯಲ್ಲಿ ಪ್ರತೀ ಬೆಳೆಗೆ ಎಕ್ರೆಗೆ 200 ಕಿಲೋ ಸುಣ್ಣ ಹಾಕಬೇಕೆಂದು ಸೂಚಿಸಲಾಯಿತು!. ಜವಾಬ್ದಾರಿ ಸ್ಥಾನಗಳಲ್ಲಿರುವ ಅಧಿಕಾರಿಗಳು ಹೀಗೆಲ್ಲಾ ತಮ್ಮ ಶಿಫಾರಸುಗಳನ್ನು ಬದಲಾಯಿಸುತ್ತಿದ್ದರೆ, ಕೃಷಿಕರು ಅದನ್ನು ನಂಬಲು ಸಾಧ್ಯವೇ?
ನಮ್ಮಲ್ಲಿ ಮೊದಲು ಅಮೋನಿಯಂ ಸಲ್ಫೇಟ್, ನಂತರ ಯೂರಿಯಾವನ್ನು ಮಾತ್ರ ಸಾರಜನಕ ಗೊಬ್ಬರವಾಗಿ ಸೂಚಿಸಲಾಗಿತ್ತು. ಹೆಚ್ಚಿನವರು ಸೂಪರ್ ಪಾಸ್ಫೆಟ್ ಹಾಕುತ್ತಿರಲಿಲ್ಲ. ಪೊಟಾಷ್ ಏನೆಂದು ಆಗ ಗೊತ್ತಿರಲೇ ಇಲ್ಲ. ಅನಂತರ ಅವೆಲ್ಲಾ ಒಟ್ಟಾಗಿರುವ ಎನ್.ಪಿ.ಕೆ. ಎಂಬ ಸಂಯುಕ್ತ ರಾಸಾಯನಿಕ ಗೊಬ್ಬರಗಳು ಮಾರಾಟಕ್ಕೆ ಬಂದಾಗ ಇಲಾಖೆಯ ಶಿಫಾರಸುಗಳಿಗೆ ಕೃಷಿಕರು ಕಿವಿಗೊಡತೊಡಗಿದರು.
ಅಧಿಕಾರಿ/ವಿಜ್ಞಾನಿಗಳ ಬಹುಮುಖ ದರ್ಶನ
ಒಂದು ವರುಷ ಏಣಿಲು ಬೆಳೆ (ಮಳೆಗಾಲದ ಬೆಳೆ)ಗಾಗಿ ಹಾಕಿದ್ದ ನೇಜಿಗೆ ಸೈನ್ಯ ಹುಳ ಮುತ್ತಿಕೊಂಡಿತು. ಇಲಾಖಾ ಅಧಿಕಾರಿಯೊಬ್ಬರು ಜೀಪಿನಲ್ಲಿ ತಿರುಗಾಡಿ ಪರಿಶೀಲಿಸಿ, ಕೀಟನಾಶಕ ಹಾಕಲು ಹೇಳಿದರು. ತಮ್ಮ ಸೂಚನೆಗೆ ರೈತರು ಕಿವಿ ಕೊಡದೇ ಇದ್ದಾಗ ‘ದಡ್ಡರು’ ಎಂದು ಅವರನ್ನು ಟೀಕಿಸಿದರು. ನಾನು ಆಗ ಕೇಳಿದೆ – ‘ನೀವು ಸಭೆಗಳಲ್ಲಿ ಅವರನ್ನು ಬಹಳ ಬುದ್ಡಿವಂತರೆಂದಿದ್ದೀರಿ.’ ಆಗ ಅವರು ‘ಹಾಗೆ ಹೇಳಬೇಕಾಗುತ್ತದೆ. ಇಲ್ಲದಿದ್ದರೆ ಕೆಲಸ ನಡೆಯುವುದಿಲ್ಲ’ ಎಂದರು!
ಒಂದು ಸಮಾವೇಶದಲ್ಲಿ ಶಕ್ತಿ ತಳಿ ಬಗ್ಗೆ ವಿಚಾರಸಂಕಿರಣ ಏರ್ಪಡಿಸಿದ್ದರು. ‘ಶಕ್ತಿ ತಳಿ ಕಣೆನಿರೋಧಕವೇನೋ ಸರಿ, ಆದರೆ ಅನ್ನ ರುಚಿಯಿಲ್ಲ. ಬರೇ ಸಪ್ಪೆ’ ಎಂದಾಗ ಜವಾಬ್ದಾರಿ ಸ್ಥಾನದಲ್ಲಿದ್ದ ಅಧಿಕಾರಿ ‘ದಯವಿಟ್ಟು ಅದೆಲ್ಲ ಹೇಳಬೇಡಿ’ ಎಂದು ವಿನಂತಿಸಿದರು! ಈಗಲೂ ಹೆಚ್ಚಿನ ಕೃಷಿಕರು ಬೆಳೆಸುತ್ತಿರುವುದು ಶಕ್ತಿ ತಳಿ.
ಸೆಮಿನಾರ್ ಒಂದರಲ್ಲಿ ನಾನು ವಿಜ್ಞಾನಿಗಳೊ೦ದಿಗೆ “ನೀವು ಕೊಡುವ ತಳಿಗಳಾವುದೂ ಹಿಂದಿನ ಭತ್ತದ ತಳಿಗಳಷ್ಟು ಉತ್ಕೃಷ್ಟವಾಗಿಲ್ಲ, ರುಚಿಯೂ ಇಲ್ಲ. ಕಣೆನಿರೋಧಕವಾದ ಒಂದು ಕೆಂಪು ತಳಿ ನಮಗೆ ಕೊಡಿ” ಎಂದು ಕೇಳಿಕೊಂಡಾಗ ಯಾರೋ ಒಬ್ಬರು ಅಧಿಕಾರಿ ‘ಇವರಿಗೆ ಅಕ್ಕಿ ಕೂಡ ಕೆಂಪಾಗಬೇಕಾ’ ಎಂದು ವ್ಯಂಗ್ಯವಾಡಿದ್ದರು.
ಕೃಷಿ ವಿಜ್ಞಾನಿಗಳು ಭಾಗವಹಿಸಿದ ಕೆಲವು ಸೆಮಿನಾರುಗಳಿಂದ ಪ್ರಯೋಜನವೂ ಆಗಿದೆ. ಸಿಂಡಿಕೇಟ್ ಕೃಷಿ ಪ್ರತಿಷ್ಠಾನವು ಮಣಿಪಾಲದಲ್ಲಿ ಒಂದು ಸಮಾವೇಶ ಏರ್ಪಡಿಸಿತು. ಡಾ.ಪುಟ್ಟರುದ್ರಯ್ಯನವರು ಅಧ್ಯಕ್ಷ ಸ್ಥಾನ ವಹಿಸಿದ್ದರು. ಅಗ್ರಮೋರ್ ಕಂಪನಿಯ ಶ್ರೀ ಬಿ.ಎಸ್.ಶೆಟ್ಟಿ, ಕಾಮನ್ ವೆಲ್ತ್ ಇನ್ಸ್ಟ್ಯೂಟ್ ಆಫ್ ಬಯಾಲಾಜಿಕಲ್ ಕ೦ಟ್ರೋಲ್ನ ಡಾ. ಸುಧಾ ನಾಗರಕಟ್ಟಿ, ಡಾ.ಕೃಷ್ಣಮೂರ್ತಿ, ಡಾ.ಆರ್.ಕೆ.ಹೆಗಡೆ ಮತ್ತು ಇತರರು ಬಂದಿದ್ದರು. ಆ ಸಭೆಯಲ್ಲಿ ತಿಳಿಸಿದ ವಿಷಯಗಳು ನಿಜಕ್ಕೂ ಬಹಳ ಪ್ರಯೋಜನಕಾರಿಯಾಗಿತ್ತು.
ಕೃಷಿ ಇಲಾಖೆಯ ವತಿಯಿಂದ ಅಧಿಕ ಇಳುವರಿ ತಳಿಯೊಂದು ಬಿಡುಗಡೆಯಾದಾಗ ಒಂದು ಸೆಮಿನಾರ್ ನಡೆದ ನೆನಪು. TN-1 ತಳಿಯನ್ನು ಕಟಪಾಡಿಯಲ್ಲಿ ಗೋಪಾಲಕೃಷ್ಣ ನಾಯಕರು ಬೆಳೆದಿದ್ದರು. ಇಲಾಖೆಯು ನಮ್ಮನ್ನು ಅಲ್ಲಿಗೆ ಕರೆದೊಯ್ದಿತು. ಆರು ಎಕ್ರೆ ಗದ್ದೆಯಲ್ಲಿ ಬೆಳೆ ಹುಲುಸಾಗಿ ಬೆಳೆದಿತ್ತು. ಯಾವುದೇ ರೋಗ ಇರಲಿಲ್ಲ. ರೈತರೆಲ್ಲರಿಗೂ ಆಶ್ಚರ್ಯ. ‘ತಿಮೆಟ್’ ಎಂಬ ಕೀಟನಾಶಕವನ್ನು ಅವರು ಸಿಂಪಡಿಸಿದ್ದರು. ಈ ಕೀಟನಾಶಕದ ಬಗ್ಗೆ ರೈತರಿಗೆ ಕುತೂಹಲ ಹುಟ್ಟಿತು. ‘ನಮಗೂ ತಿಮೆಟ್ ಕೊಡಿಸಿ’ ಎಂದು ಆಗ್ರಹಿಸಿದರು. ಆಗ ಕೃಷಿ ನಿರ್ದೇಶಕರಾಗಿದ್ದ ಡಾ.ಅರಕೇರಿಯವರು ‘ದಯವಿಟ್ಟು ಕೇಳಬೇಡಿ. ಅದು ಮಾಹಾವಿಷ. ನಾವು ಜೋಳಕ್ಕೆ ಮಾತ್ರ ಹಾಕಿದ್ದೇವೆ. ಭತ್ತಕ್ಕೆ ಹಾಕಲಿಲ್ಲ. ನಾಯಕರು ಯಾಕೆ ಹಾಕಿದ್ದಾರೆಂದು ತಿಳಿದಿಲ್ಲ’ ಎಂದು ಪ್ರಾಮಾಣಿಕವಾಗಿಯೇ ಉತ್ತರಿಸಿದರು. ಮಾರನೇ ವರುಷ ತಿಮೆಟ್ ತಯಾರಿಕಾ ಕಂಪನಿಯವರೇ ಕೆಲವು ರೈತರನ್ನು ನೇರವಾಗಿ ಸಂಪರ್ಕಿಸಿ ಕೀಟನಾಶಕವನ್ನು ಕೊಟ್ಟಿದ್ದರು.
ಈ ವಿಚಾರದಲ್ಲಿ ವಿಟ್ಲದ ಅಡಕೆ ಸಂಶೋಧನಾ ಕೇಂದ್ರದ ಡಾ.ಶ್ಯಾಂ ಭಟ್ಟರನ್ನು ಭೇಟಿಯಾಗಿ, ‘ಆಡಿಕೆಗೆ ಬೀಳುವ ಕೀಟ ಹತೋಟಿಗೆ ತಿಮೆಟ್ ಬಳಸಿದರೆ ಹೇಗೆ?’ ಎಂದು ಕೇಳಿದಾಗ ‘ತಿನ್ನುವ ವಸ್ತುವಿಗೆ ಇದು ಬೇಡ’ ಎಂದರು. ಇಂತಹ ಪ್ರಬಲ ವಿಷವನ್ನು ಬೆಳೆಗಳಿಗೆ ಪ್ರಯೋಗಿಸಿದಾಗ ಅದರ ಶೇಷಾಂಶ ನಮ್ಮ ಹೊಟ್ಟೆಗೆ ಹೋದರೆ ಏನಾದೀತು? ಎಂದು ತಿಳಿಯಲು ಪ್ರಯೋಗಗಳು ಅಗತ್ಯವಿಲ್ಲ.
ಪ್ರಮುಖ ಕೃಷಿ ವಿಜ್ಞಾನಿಗಳು ಹಾಗೂ ಅಧಿಕಾರಿಗಳು ತಿಮೆಟ್ ಪ್ರಯೋಗ ಬೇಡ ಅಂದಿದ್ದರೂ, ಅನಂತರ ಅದರ ಬಳಕೆಯನ್ನು ಯಾಕೆ ಶಿಫಾರಸು ಮಾಡಲಾಯಿತು? ಎಂಬ ಬಗ್ಗೆ ಕೃಷಿಕರು ಮಾತ್ರವಲ್ಲ, ಎಲ್ಲರೂ ಚಿಂತಿಸಬೇಕಾಗಿದೆ.
ಗದ್ದೆಗಿಳಿಯುತ್ತಿದ್ದ ಕೃಷಿ ಅಧಿಕಾರಿ
1952ರ ನಂತರ ಸರಕಾರವು ಕೃಷಿ ಅಭಿವೃದ್ಢಿಗಾಗಿ ಹಲವು ಯೋಜನೆಗಳನ್ನು ರೂಪಿಸಲು ಆರಂಭಿಸಿತ್ತು. ಆಗ ಪ್ರತೀ ಬ್ಲಾಕ್ (ಹೋಬಳಿ)ಗೆ ಆರು ಜನರ ಅಭಿವೃದ್ಢಿ ಸಮಿತಿಯನ್ನು ಸರಕಾರ ಸಂಘಟಿಸಿತ್ತು. ಪ್ರತೀ ಬ್ಲಾಕ್ಗೂ ಒಬ್ಬರು ಅಧಿಕಾರಿಯ ನೇಮಕವಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹದಿನಾರು ಬ್ಲಾಕ್ಗಳಿದ್ದುವು.
ಹೆಜಮಾಡಿ ಮುದ್ದಣ್ಣ ಶೆಟ್ಟರು ಆಗ ಮಂಗಳೂರಿನ ಬಿಡಿಒ (ಬ್ಲಾಕ್ ಡೆವಲಪ್-ಮೆಂಟ್ ಆಫೀಸರ್) ಆಗಿದ್ದರು. ಅವರು ಮೊದಲು ವಿಜ್ಞಾನ ಅಧ್ಯಾಪಕರಾಗಿ, ಅನಂತರ ವಿಸ್ತರಣಾ ಇಲಾಖೆಗೆ ಸೇರಿ, ಅಧಿಕಾರಿಯಾದವರು. ಭತ್ತದ ಬೆಳೆಯ ಅಭಿವೃದ್ಡಿಗೆ ಅಗತ್ಯವಾದ ಬೀಜದ ತಳಿ, ಆರೈಕೆ, ಪರಿಷ್ಕರಣೆ, ನೇಜಿ ನೆಡುವ ಕ್ರಮ, ಸಾವಯವ ಮತ್ತು ಕೃತಕ ಗೊಬ್ಬರಗಳ ಬಳಕೆ, ಕೀಟ ಹತೋಟಿ – ಈ ಎಲ್ಲಾ ವಿಷಯಗಳಲ್ಲಿ ಮಾಹಿತಿ ನೀಡಿ, ವೈಜ್ಞಾನಿಕ ವಿವರವನ್ನು ಜನರಿಗೆ ಮನದಟ್ಟು ಮಾಡುತ್ತಿದ್ದರು.
ಜಪಾನ್ ಕ್ರಮದ ಭತ್ತದ ಸಾಗುವಳಿಗೆ ಅವರು ಪ್ರಾಧಾನ್ಯತೆ ನೀಡಿದರು. ಹೆಚ್ಚಿನ ಅಧಿಕಾರಿಗಳು ಈ ಕೃಷಿ ಪದ್ದತಿಯ ಬಗ್ಗೆ ಕಾಳಜಿ ವಹಿಸುತ್ತಿರಲಿಲ್ಲ. ‘ಸರಕಾರ ಹೇಳಿದೆ’ ಎಂಬ ಕಾರಣದಿಂದ ಮಾತ್ರ ಕೃಷಿ ವಿವರಗಳನ್ನು ಹೇಳುತ್ತಿದ್ದರೇ ವಿನಾ, ಅವರೇ ಅದನ್ನು ನಂಬುತ್ತಿರಲಿಲ್ಲ. ಮುದ್ದಣ್ಣ ಶೆಟ್ಟರು ಹಾಗಲ್ಲ. ಅವರು ಸ್ವತ: ಹಲವು ಕೃಷಿಕರ ಗದ್ದೆಗಳಿಗೆ ಹೋಗಿ, ತನ್ನ ಪ್ಯಾಂಟನ್ನು ಮೊಣಕಾಲಿನವರೆಗೆ ಮಡಚಿ, ಗದ್ದೆಗೆ ಇಳಿದು ಸ್ವತ: ನಾಟಿ ಮಾಡುತ್ತಿದ್ದರು. ಇದರಿಂದಾಗಿ ರೈತರಿಗೆ ಉತ್ಸಾಹ ಇಮ್ಮಡಿಯಾಗುತ್ತಿತ್ತು. ಮಾತ್ರವಲ್ಲ ಅವರ ಕೈಕೆಳಗಿನ ಅಧಿಕಾರಿಗಳು ತಮ್ಮ ಕೆಲಸದಲ್ಲಿ ಆಸಕ್ತಿ ವಹಿಸುತ್ತಿದ್ದರು.
ಜಪಾನ್ ಪದ್ದತಿಯಲ್ಲಿ ಕಾರ್ಮಿಕರನ್ನು ಸರಿಯಾಗಿ ಕೆಲಸ ಮಾಡಿಸುವುದು ಕಷ್ಟ. ಆದರೂ ಮುದ್ದಣ್ಣ ಶೆಟ್ಟರ ಮುತುವರ್ಜಿಯಿಂದಾಗಿ ಅನೇಕ ಕೃಷಿಕರು ಜಪಾನ್ ಪದ್ಡತಿಯಲ್ಲಿಯೇ ನಾಟಿ ಮಾಡತೊಡಗಿದರು. ಅನಂತರ ಶೆಟ್ಟರು ಜಿಲ್ಲಾ ಕೃಷಿ ಅಧಿಕಾರಿಯಾಗಿ ಭಡ್ತಿ ಹೊಂದಿದರು. ನಿವೃತ್ತಿಯ ಬಳಿಕ ಸಿಂಡಿಕೇಟ್ ಕೃಷಿ ಪ್ರತಿಷ್ಠಾನದ ಸಲಹೆಗಾರರಾಗಿ ದುಡಿದರು.
ಅವರು ಪ್ರತಿಪಾದಿಸಿದ ಸಾಲುನಾಟಿ ಯಾ ಜಪಾನ್ ಕೃಷಿ ಪದ್ಡತಿ, ಸಮಯಕ್ಕೆ ಸರಿಯಾಗಿ ಕಳೆ ತೆಗೆದು ಗಿಡಗಳ ಬೇರಿಗೆ ಗಾಳಿ ಮತ್ತು ಪೋಷಣಾಂಶಗಳನ್ನು ಕೊಡುವ ಕ್ರಮ ಈಗ ಮರೆಯಾಗಿದೆ. ಅದರಿಂದ ಬೆಳೆಯೂ ಕಡಿಮೆಯಾಗಿದೆ ಎಂಬುದು ಬೇರೆ ಮಾತು.
ಅವರ ನಂತರ ಎಷ್ಟೋ ಕೃಷಿ ಅಧಿಕಾರಿಗಳು ಜಿಲ್ಲೆಗೆ ಬಂದು ಹೋದರು. ಆದರೆ ಅವರು ಯಾರೂ ತಿಲಾಂಶದಷ್ಟಾದರೂ ಮುದ್ದಣ್ಣ ಶೆಟ್ಟರಾಗಲಿಲ್ಲ!
ಪ್ರಾತಿನಿಧಿಕ ಫೋಟೋ: ಸರಕಾರಿ ಅಧಿಕಾರಿಗಳ ಜೊತೆ ರೈತರ ಸಭೆ…. ಕೃಪೆ: ಗೆಟ್ಟಿ ಇಮೇಜಸ್ ವೆಬ್-ಸೈಟ್
ಆಕರ ಪುಸ್ತಕ: ಅಡ್ಡೂರು ಶಿವಶ೦ಕರರಾಯರ ಎಂಬತ್ತರ ಕೊಯ್ಲಿನ ಕಾಳುಗಳು
ಲೇಖಕರು: ಅಡ್ಡೂರು ಕೃಷ್ಣರಾವ್, ನಾ. ಕಾರಂತ ಪೆರಾಜೆ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!